ನಾವು ಧರಿಸುವಂತಹ ಬಟ್ಟೆ ಅದರ ಬಗ್ಗೆ ಚಿಂತಿಸಬೇಕೋ?
“ಅಯ್ಯೋ, ಯಾವ ಬಟ್ಟೆ ಹಾಕಲಿ!” ಸಹಾಯದ ಈ ಮೊರೆಯು ನಿಮಗೆ ಚಿರಪರಿಚಿತವೆನಿಸುತ್ತದೋ? ಇಂದಿನ ಫ್ಯಾಶನ್ ಮಳಿಗೆಗಳು ತಮ್ಮ ಇತ್ತೀಚಿನ ಫ್ಯಾಶನ್ನಿನಿಂದ ನಿಮಗೆ ಸಹಾಯಮಾಡಲು ಇಲ್ಲವೇ ನಿಮ್ಮನ್ನು ಇನ್ನೂ ಹೆಚ್ಚು ಗೊಂದಲಗೊಳಿಸಲು ಯಾವಾಗಲೂ ಸಿದ್ಧವಾಗಿರುತ್ತವೆ.
ಇನ್ನೂ ಹೆಚ್ಚು ಗೊಂದಲಗೊಳಿಸುವಂತೆ, ಈಗಿನ ದಿನಗಳಲ್ಲಿ ನಿಮಗೆ ಒಳ್ಳೆಯ ರೀತಿಯ ವಸ್ತ್ರಾಲಂಕಾರಕ್ಕೆ ಬದಲಿಗೆ ಮನಸ್ಸಿಗೆ ಬಂದಂತೆ ಬಟ್ಟೆ ಧರಿಸಲು ಪ್ರೋತ್ಸಾಹಿಸಲಾಗುತ್ತದೆ. ತಿರುಗುಮುರುಗಿನ ಈ 90ರ ದಶಕದ ಬಗ್ಗೆ ಒಂದು ಫ್ಯಾಶನ್ ಸಂಪಾದಕೀಯವು ಹೇಳುವುದು: “ಬಟ್ಟೆಗಳು ಹಳತಾಗಿ, ಉಪಯೋಗವಳಿದು, ಜೀರ್ಣವಾಗಿ ಮತ್ತು ಸಾಮಾನ್ಯವಾಗಿ ತೊಟ್ಟು ಛಿದ್ರವಾಗಿರುವಂತೆ ಕಾಣುವುದು ಅಂಗೀಕೃತವಾಗಿರುವುದು ಮಾತ್ರವಲ್ಲ, ಅಪೇಕ್ಷಿತವೂ ಆಗಿದೆಯೆಂದು ತಿಳಿಯುವುದು ಭರವಸಾದಾಯಕವಾಗಿದೆ.”
ಹೌದು, ಇತ್ತೀಚಿನ ವರ್ಷಗಳಲ್ಲಿ ಶಕ್ತಿಯುತ ಜಾಹೀರಾತುಗಳು, ಟಿವಿಯ ನಾಯಕ ನಟರು, ಸಮಾನಸ್ಥರು, ಸ್ವಬಡತಿಗಾಗಿ, ಮತ್ತು ಸ್ವವ್ಯಕ್ತಿತ್ವಕ್ಕಾಗಿರುವ ಅತ್ಯಾಸೆಯು ವಿಶೇಷವಾಗಿ ಯುವ ಜನರ ಮೇಲೆ ಫ್ಯಾಶನ್ನಿನ ಪ್ರಭಾವವನ್ನು ಬೀರಿದೆ. ಅವರಲ್ಲಿ ಕೆಲವರು ಸ್ಟೈಲಾಗಿ ಕಾಣಿಸಿಕೊಳ್ಳಲಿಕ್ಕಾಗಿ ಕದಿಯಲಿಕ್ಕೂ ಹೇಸುವುದಿಲ್ಲ.
90ರ ದಶಕಗಳಲ್ಲಿ ಕಂಡುಬರುವ ಅನೇಕ ಜನಪ್ರಿಯ ಸ್ಟೈಲುಗಳು, 60ಗಳ ಪಾಶ್ಚಿಮಾತ್ಯ ಸಮಾಜದ ಹಿಪ್ಪಿ ಸಂಸ್ಕೃತಿಯಂತಹ, ಹಿಂದಿನ ದಶಕದ ಅಲ್ಪಸಂಖ್ಯಾತರ ಸಂಸ್ಕೃತಿಗಳಿಂದ ಬೆಳೆದು ಬಂದಿವೆ. ಗಡ್ಡ, ಕೆದರಿರುವ ಉದ್ದ ಕೂದಲು, ಮತ್ತು ಸುಕ್ಕುಸುಕ್ಕಾದ ಬಟ್ಟೆಗಳು ಸಾಂಪ್ರದಾಯಿಕ ಮೌಲ್ಯಗಳ ತಿರಸ್ಕಾರವನ್ನು ಸೂಚಿಸಿದವು. ಆದರೆ ಈ ದಂಗೆಕೋರ ಉಡುಪು ಒಂದು ನವೀನ ಮಾದರಿಯ ಅನುಸರಣೆಯನ್ನು ಮತ್ತು ಒಂದು ಹೊಸ ಸಮಾನಸ್ಥ ಒತ್ತಡವನ್ನು ಸಹ ಕೆರಳಿಸಿತು.
ಬಟ್ಟೆಗಳು ಸ್ವವ್ಯಕ್ತಿತ್ವದ ವ್ಯಾಪಕವೂ ಹೆಚ್ಚು ಅಭಿವ್ಯಂಜಕವೂ ಆದ ಸಾಧನಗಳಾಗಿವೆ. ಬಟ್ಟೆಗಳು, ವಿಶೇಷವಾಗಿ ಟಿ-ಶರ್ಟುಗಳು ಜನಪ್ರಿಯ ಕ್ರೀಡೆಗಳ ಮತ್ತು ಕ್ರೀಡಾಪಟುಗಳ ಬಗ್ಗೆ, ಹಾಸ್ಯ, ಭ್ರಾಂತಿಹರಣ, ಆಕ್ರಮಣಕಾರಿ, ನೈತಿಕತೆ ಇಲ್ಲವೇ ಅನೈತಿಕತೆಯನ್ನು ಮತ್ತು ಮಾರುಕಟ್ಟೆಗೆ ಬಂದಿರುವಂತಹ ಉತ್ಪಾದನೆಗಳನ್ನು ಮೌನವಾಗಿ ತೋರಿಸುವ ಜಾಹೀರಾತುಗಳಾಗಿ ಹೋಗಿವೆ. ಇಲ್ಲವೇ ಅವು ನಿಮ್ಮನ್ನು ತಬ್ಬಿಬ್ಬುಗೊಳಿಸಸಾಧ್ಯವಿದೆ. ಇತ್ತೀಚಿನ ನ್ಯೂಸ್ವೀಕ್ ಪತ್ರಿಕೆಯ ಶೀರ್ಷಿಕೆಯನ್ನು ನೋಡಿರಿ: “ಕ್ರೂರವರ್ತನೆ ಹದಿವಯಸ್ಕರ ಫ್ಯಾಶನ್ನಿನ ಪ್ರತೀಕ.” ಒಬ್ಬ 21 ವರ್ಷ ಪ್ರಾಯದವನು ತನ್ನ ಟಿ-ಶರ್ಟ್ ಬಗ್ಗೆ ಕೊಡುವ ಅಭಿಪ್ರಾಯವನ್ನು ಆ ಲೇಖನವು ಹೀಗೆ ಹೇಳುತ್ತದೆ: “ನಾನು ಇದನ್ನು ಧರಿಸುವುದು ಏಕೆಂದರೆ, ಇದು ಜನರಿಗೆ ನಾನು ಯಾವ ಮನೋಸ್ಥಿತಿಯಲ್ಲಿದ್ದೇನೆಂಬುದನ್ನು ತಿಳಿಸುತ್ತದೆ. ನಾನು ಏನು ಮಾಡಬೇಕು ಎಂಬುದನ್ನು ಇತರರು ಹೇಳುವಂತೆ ನಾನು ಅನುಮತಿಸುವುದಿಲ್ಲ ಮತ್ತು ನಾನು ನನ್ನಷ್ಟಕ್ಕೇ ಇರುವಂತೆ ಬಿಡಬೇಕು.”
ಟಿ-ಶರ್ಟಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಏನು ಪ್ರದರ್ಶಿಸಲ್ಪಟ್ಟಿದೆಯೋ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಆದರೂ, ಒಂದು ಗುಂಪಿನ ಗುರುತಿಗೆ ಅಥವಾ ದಂಗೆಕೋರ ಆತ್ಮಕ್ಕೆ, ನಾನೆಂಬ ಅಹಂಭಾವಕ್ಕೆ, ಸ್ವೇಚ್ಛಾಚಾರಕ್ಕೆ, ಅಥವಾ ಹಿಂಸೆಗೆ ಹೊಂದಿಕೊಳ್ಳುವಂತಹ ಬಟ್ಟೆಯ ಅನುಸರಣೆಯು ಸುವ್ಯಕ್ತ. ಒಬ್ಬ ಡಿಸೈನರ್ ತನ್ನ ಗ್ರಾಹಕರ ಇಷ್ಟಕ್ಕನುಸಾರ ಬಟ್ಟೆಗಳಲ್ಲಿ ರಂಧ್ರಗಳನ್ನು ಮಾಡುತ್ತಾನೆ. “ಅವರು ಹ್ಯಾಂಡ್ಗನ್ ರಂಧ್ರಗಳು, ರೈಫಲ್ ರಂಧ್ರಗಳು, ಅಥವಾ ಮಶೀನ್-ಗನ್ ರಂಧ್ರಗಳನ್ನು ಆರಿಸಿಕೊಳ್ಳಸಾಧ್ಯವಿದೆ” ಎಂದು ಅವನು ಹೇಳುತ್ತಾನೆ. “ಅದು ಕೇವಲ ಒಂದು ಫ್ಯಾಶನ್ ಹೇಳಿಕೆ.”
ಫ್ಯಾಶನ್ ಏನನ್ನು ಹೇಳುತ್ತದೆ?
“ಸಾಮಾನ್ಯವಾಗಿ ಬಟ್ಟೆಗಳು ಸಮಾಜದಲ್ಲಿ ನೀವು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಹೊರಗೆಡಹುತ್ತದೆ” ಎಂದು ಆಸ್ಟ್ರೇಲಿಯದ ಸಿಡ್ನಿಯ ಪವರ್ಹೌಸ್ ಮ್ಯುಸಿಯಮ್ನಲ್ಲಿರುವ ಫ್ಯಾಶನ್ ಸೂಪರಿಂಡೆಂಟ್ ಆದ, ಜೇನ್ ಡೆ ಟೆಲೀಗಾ ಹೇಳುತ್ತಾರೆ. ಅವರು ಕೂಡಿಸುವುದು: “ನೀವು ಯಾವ ಗುಂಪಿನವರಾಗಿ ಗುರುತಿಸಲ್ಪಡಬೇಕೆಂದು ಇಚ್ಛಿಸುತ್ತೀರೋ ಅದನ್ನು ಆರಿಸಿಕೊಂಡು, ಅದಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸುತ್ತೀರಿ.” ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಮನೋರೋಗ ಉಪನ್ಯಾಸಕಿಯಾದ ಡಾ ಡಯನಾ ಕೆನೀ ಹೇಳುವುದೇನೆಂದರೆ, ಬಟ್ಟೆಗಳು, ಜನರನ್ನು ವರ್ಗೀಕರಿಸಲಿಕ್ಕಾಗಿ ಧರ್ಮ, ಐಶ್ವರ್ಯ, ಉದ್ಯೋಗ, ಕುಲ, ಶಿಕ್ಷಣ ಮತ್ತು ಮನೆಯ ವಿಳಾಸದಷ್ಟೇ ಮಹತ್ವಪೂರ್ಣವಾಗಿವೆ. ಜೆಟ್ ಪತ್ರಿಕೆಗನುಸಾರ, ಹೆಚ್ಚುಕಡಿಮೆ ಬಿಳಿವರ್ಣದವರಿರುವ ಅಮೆರಿಕದ ಒಂದು ಶಾಲೆಯಲ್ಲಿ ಕುಲಶ್ರೇಷ್ಠತಾ ಸಂಬಂಧದಲ್ಲಿ ಉದ್ರಿಕ್ತ ಪರಿಸ್ಥಿತಿಯು ಉಂಟಾಯಿತು. ಏಕೆಂದರೆ “ಬಿಳಿಯ ಶಾಲಾ ಹುಡುಗಿಯರು ಜಡೆಹಾಕಿಕೊಳ್ಳಲು, ಸಡಿಲವಾದ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು, ಮತ್ತು ಇತರ ‘ಹಿಪ್-ಹಾಪ್’ ಫ್ಯಾಶನನ್ನು ಮಾಡಲು ಪ್ರಾರಂಭಿಸಿದರು ಮತ್ತು ಅವು ಕಪ್ಪುಜನರ ಫ್ಯಾಶನ್ ಆಗಿದ್ದವು.”
ಸಂಗೀತ ಕ್ಷೇತ್ರದಂತಹ ಕೆಲವು ಉಪಸಂಸ್ಕೃತಿಗಳಲ್ಲಿ ಕುಲಾಭಿಮಾನವು ತುಂಬ ಇದೆ. ಮೆಕ್ಲೀನ್ಸ್ ಪತ್ರಿಕೆಯು ಹೇಳುವುದು: “ಅನೇಕ ವೇಳೆ, ಬಟ್ಟೆ ಸಂಗೀತದ ಅಭಿರುಚಿಗಳಿಗೆ ಹೋಲುತ್ತದೆ: ರೆಗೇ ಸಂಗೀತ ಅಭಿಮಾನಿಗಳು ಜಮೇಕದ ಕಣ್ಣಿಗೆ ರಾಚುವ ಬಣ್ಣಗಳ ಬಟ್ಟೆಯನ್ನು ಮತ್ತು ಟೋಪಿಗಳನ್ನು ಹಾಕಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಗ್ರಂಜ್ ರಾಕ್ ಅಭಿಮಾನಿಗಳು ಉಣ್ಣೆಯ ಟೂಕ್ ಟೋಪಿಗಳನ್ನು ಮತ್ತು ಚೌಕುಳಿಯಾಕಾರದ ಶರ್ಟ್ಗಳನ್ನು ಹಾಕಿಕೊಂಡು ಮೆರೆಯುತ್ತಾರೆ.” ಆದರೆ ಯಾವುದೇ ಬಟ್ಟೆಯಾಗಲಿ, ತಾತ್ಸಾರದ, ಹರಿದುಹೋದ, ಗ್ರಂಜ್ ಎಂದು ಕರೆಯಲ್ಪಡುವ ಭಿಕಾರಿ ತೋರಿಕೆಗೆ ಭಾರಿ ಹಣವು ತಗಲುತ್ತದೆ.
ಬಟ್ಟೆಯ ರೀತಿನೀತಿಗಳಿಗೆ ಏನಾಗುತ್ತಿದೆ?
“ಪ್ರತಿಯೊಂದು ವಿಷಯವು ನೀವು ನೆನಸುವುದಕ್ಕೆ ತದ್ವಿರುದ್ಧವಾಗಿದೆ” ಎಂದು ಅಂಕಣಕಾರ ವುಡೀ ಹಾಕ್ಸ್ವೆಂಡರ್ ಹೇಳುತ್ತಾರೆ. “ಒಮ್ಮೆ ತುಂಬ ಕಟ್ಟುನಿಟ್ಟಾಗಿದ್ದ ಪುರುಷರ ಫ್ಯಾಶನ್ ಈಗ ಹದ್ದುಮೀರಿಹೋಗಿದೆ. . . . ಈಗ ಏನಿದ್ದರೂ ಅಸ್ತವ್ಯಸ್ತವಾದ ಬಟ್ಟೆಯನ್ನು ಧರಿಸುವುದೇ ಫ್ಯಾಶನ್ ಆಗಿಬಿಟ್ಟಿದೆ.” ಆದರೆ, ಈ ರೀತಿಯ ಬಟ್ಟೆ ಉಡಾಫೆಯ ಮನೋಭಾವವನ್ನು ಪ್ರದರ್ಶಿಸಬಹುದು. ಅಥವಾ ಆತ್ಮಗೌರವದ ಇಲ್ಲವೇ ಇತರರ ಬಗ್ಗೆ ಅಗೌರವದ ಭಾವವನ್ನು ಹೊರಗೆಡಹಬಹುದು.
ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯದ ಕುರಿತ ಒಂದು ಲೇಖನದಲ್ಲಿ, ಪರ್ಸೆಪ್ಚ್ಯುಲ್ ಆ್ಯಂಡ್ ಮೋಟರ್ ಸ್ಕಿಲ್ಸ್ ಪತ್ರಿಕೆಯು ವಿವರಿಸುವುದೇನೆಂದರೆ, “ಜೀನ್ಸ್ ಅನ್ನು ಧರಿಸಿದ ಶಿಕ್ಷಕನನ್ನು ತರಗತಿಯಲ್ಲಿ ತಮಾಷೆಯನ್ನು ಮಾಡುವವನೋಪಾದಿ ಪರಿಗಣಿಸಲಾಗುತ್ತಿತ್ತಾದರೂ ಅವನ ಅಭಿಪ್ರಾಯಗಳಿಗೆ ಕಿಂಚಿತ್ತೂ ಗೌರವ ಕೊಡಲಾಗುತ್ತಿರಲಿಲ್ಲ. ಪದೇ ಪದೇ ಏನೊಂದೂ ಅರಿಯದ ಶಿಕ್ಷಕನನ್ನಾಗಿ ಅವನನ್ನು ವೀಕ್ಷಿಸಲಾಗುತ್ತಿತ್ತು.” ಅದೇ ಪತ್ರಿಕೆಯು ಹೇಳವುದು, “ಜೀನ್ಸ್ ಧರಿಸಿರುವ ಶಿಕ್ಷಕಿಯು ವಿನೋದಗಾರ್ತಿ, ಸುಲಭಗಮ್ಯಳು, ಅಷ್ಟೇನೂ ಜ್ಞಾನವಂತೆಯಲ್ಲ, ಅಷ್ಟೇನೂ ಗೌರವಾರ್ಹಳಲ್ಲ, ಅವಳು ಶಿಕ್ಷಕಿಯ ಹಾಗೆ ಕಾಣಿಸುವುದಿಲ್ಲವಾದರೂ ಸಾಮಾನ್ಯವಾಗಿ ಹೆಚ್ಚು ಅಪೇಕ್ಷಿತಳಂತೆ ವೀಕ್ಷಿಸಲಾಯಿತು.”
ಅದೇ ಸಮಯದಲ್ಲಿ, ವ್ಯಾಪಾರದ ಕ್ಷೇತ್ರದಲ್ಲಿ, ಮತ್ತೊಂದು ಫ್ಯಾಶನ್ ಹೇಳಿಕೆಯಿದೆ: ಪ್ರಭಾವಿಸುವ ಉಡುಪು ಧಾರಣೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಮಹಿಳೆಯರು ಕಂಪೆನಿಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಆಶಿಸಿದ್ದಾರೆ. “ನಾನು ಉಡುಪು ಧರಿಸುವುದು ಆಕ್ರಮಣಕ್ಕಾಗಿ” ಎಂದು ಪ್ರಕಾಶನ ಸಂಸ್ಥೆಗಾಗಿ ಕಾರ್ಯನಿರ್ವಾಹಕಿಯಾಗಿ ಕೆಲಸಮಾಡುವ ಮರೀ ಹೇಳುತ್ತಾರೆ. “ನಾನು ಎಲ್ಲರ ಮಧ್ಯೆ ಎದ್ದುಕಾಣಲು ಇಷ್ಟಪಡುತ್ತೇನೆ. ನಾನು ತುಂಬ ಸುಂದರಿ ಎಂಬುದನ್ನು ತೋರಿಸಿಕೊಳ್ಳಲು ಇಷ್ಟಪಡುತ್ತೇನೆ” ಎಂದು ಅವರು ಹೇಳುತ್ತಾರೆ. ಮರೀ ಇತರರ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಇಷ್ಟಪಡುತ್ತಾರೆಂಬುದನ್ನು ಇದು ತೋರಿಸುತ್ತದೆ.
ಜನಪ್ರಿಯ ಫ್ಯಾಶನ್ಗಳು ಚರ್ಚಿನೊಳಗೂ ನುಸುಳಿರುವುದು ಅನಿವಾರ್ಯ. ಹೆಚ್ಚು ಫ್ಯಾಶನ್ ಪ್ರಜ್ಞೆಯುಳ್ಳ ಕೆಲವರು ತಮ್ಮ ಇತ್ತೀಚಿನ ಬಟ್ಟೆಗಳನ್ನು ತೋರಿಸಲು ತಮ್ಮ ಚರ್ಚನ್ನೂ ಉಪಯೋಗಿಸಿದ್ದಾರೆ. ಇಂದು, ಉದ್ದವಾದ ನಿಲುವಂಗಿಗಳನ್ನು ತೊಟ್ಟಿರುವ ಪಾದ್ರಿಗಳು ತಮ್ಮ ಉಪದೇಶ ಪೀಠದಿಂದ ಜೀನ್ಸ್, ಸ್ಪೋರ್ಟ್ಸ್ ಷೂ, ಅಥವಾ ವಿಚಿತ್ರ ಬಟ್ಟೆಗಳನ್ನು ತೊಟ್ಟ ಸಭಿಕರನ್ನು ನೋಡುತ್ತಾರೆ.
ಸ್ವವಿಚಾರ ಮತ್ತು ಸ್ವವ್ಯಕ್ತಿತ್ವದ ಮೇಲೆ ಇಷ್ಟು ವ್ಯಾಮೋಹವೇಕೆ?
ವಿಶೇಷವಾಗಿ ಯುವ ಜನರ ಮಧ್ಯೆ, ವಿಚಿತ್ರ ರೀತಿಯ ಬಟ್ಟೆ, ಆಕರ್ಷಣೆಗೆ ಅವರಿಗಿರುವ ಬಯಕೆಯನ್ನು ವ್ಯಕ್ತಪಡಿಸುವುದರಿಂದ ಅದೊಂದು ಸ್ವೇಂದ್ರಿತತೆಯ ಅಂಶವಾಗಿದೆ ಎಂದು ಮನೋವೈದ್ಯರು ಹೇಳುತ್ತಾರೆ. “ತಮ್ಮನ್ನು ಇತರರ ಗಮನಪಾತ್ರರಾಗಿ ನೋಡುವ, ತರುಣರಲ್ಲಿ ಬೇರೂರಿರುವ ಪ್ರವೃತ್ತಿಯೆಂದು” ಅವರು ಇದನ್ನು ವರ್ಣಿಸುತ್ತಾರೆ. ಕಾರ್ಯತಃ ಅವನು ಅಥವಾ ಅವಳು ಹೀಗೆ ಹೇಳುವುದು: “ನಾನು ನನ್ನ ಬಗ್ಗೆ ಎಷ್ಟು ವ್ಯಾಮೋಹಗೊಂಡಿದ್ದೇನೋ ಅಷ್ಟೇ ನನ್ನ ಮೇಲೆ ನೀವು ವ್ಯಾಮೋಹಿತರಾಗಿದ್ದೀರಿ.”—ಅಮೆರಿಕನ್ ಜರ್ನಲ್ ಆಫ್ ಆರ್ತೊಸೈಕಿಯಾಟ್ರಿ.
ಮನುಷ್ಯನಿಗೆ ಪ್ರಥಮ ಸ್ಥಾನವನ್ನು ಕೊಟ್ಟು ದೇವರನ್ನು ಅಪ್ರಸ್ತುತವಾಗಿ ಮಾಡಿರುವ ಮಾನವ ತತ್ವಜ್ಞಾನಗಳು, ನೀವು ವಿಶ್ವದಲ್ಲಿಯೇ ಅತ್ಯಂತ ಗಣ್ಯ ವ್ಯಕ್ತಿಯೆಂಬ (ಅನೇಕ ವೇಳೆ ವಾಣಿಜ್ಯದಿಂದ ಹಬ್ಬುವ) ಆಲೋಚನೆಗೆ ಇನ್ನೂ ಒಂದಿಷ್ಟು ಮಸಾಲೆಯನ್ನು ಸೇರಿಸಿವೆ. ಆದರೆ ಸಮಸ್ಯೆಯೇನೆಂದರೆ, ಸುಮಾರು ಆರುನೂರು ಕೋಟಿಯಷ್ಟು ಇಂತಹ ‘ಅತ್ಯಂತ ಗಣ್ಯ’ ವ್ಯಕ್ತಿಗಳು ಈಗ ಇದ್ದಾರೆ. “ಇಂದು ಮಜಾಮಾಡು, ನಾಳೆಯ ಬಗ್ಗೆ ಚಿಂತಿಸಬೇಡ” ಎನ್ನುವ ಈ ಪ್ರಾಪಂಚಿಕತೆಯ ಆಕ್ರಮಣದ ವಿಷಯದಲ್ಲಿ ಕ್ರೈಸ್ತಪ್ರಪಂಚದ ಧರ್ಮಗಳ ಲಕ್ಷಗಟ್ಟಲೆ ಜನರು ಕುಸಿದುಬಿದ್ದಿದ್ದಾರೆ. (2 ತಿಮೊಥೆಯ 3:1-5ನ್ನು ಹೋಲಿಸಿರಿ.) ಇದಕ್ಕೆ ಕೂಡಿಸಿ, ಕುಟುಂಬದ ಮತ್ತು ನಿಜವಾದ ಪ್ರೀತಿಯ ಕುಸಿತವು, ಅನೇಕರು ವಿಶೇಷವಾಗಿ ಯುವ ಜನರು, ತಮ್ಮನ್ನು ಗುರುತಿಸಿಕೊಳ್ಳುವುದಕ್ಕಾಗಿ ಮತ್ತು ಭದ್ರತೆಗಾಗಿ ಅತ್ಯಾಸೆಯಿಂದ ಯಾವುದೇ ವಿಷಯವನ್ನಾಗಲಿ ಬಿಗಿಯಾಗಿ ಹಿಡಿದುಕೊಳ್ಳುವುದು ಆಶ್ಚರ್ಯವನ್ನು ಉಂಟುಮಾಡುವುದಿಲ್ಲ.
ಆದರೂ, ತಮ್ಮ ಬಟ್ಟೆಯ ಕುರಿತಾಗಿ ಮತ್ತು ದೇವರ ಮುಂದೆ ತಮಗಿರುವ ನಿಲುವಿನ ಕುರಿತಾಗಿ ಚಿಂತಿತರಾಗಿರುವವರು ಹೀಗೆ ಕೇಳಿಕೊಳ್ಳುವುದು ಸ್ವಾಭಾವಿಕ: ಬದಲಾಗುತ್ತಿರುವ ಫ್ಯಾಶನನ್ನು ನಾನು ಎಷ್ಟರ ಮಟ್ಟಿಗೆ ಅನುಸರಿಸಬೇಕು? ನಾನು ಧರಿಸುವಂತಹ ಬಟ್ಟೆ ಸಭ್ಯವಾಗಿದೆ ಎಂಬುದನ್ನು ನಾನು ಹೇಗೆ ಕಂಡುಕೊಳ್ಳಬಲ್ಲೆ? ಅದು ನನ್ನ ಬಗ್ಗೆ ಗೊಂದಲಗೊಳಿಸುವ ಅಥವಾ ತಪ್ಪಾದ ಅಭಿಪ್ರಾಯಗಳನ್ನು ಕೊಡುತ್ತದೋ?
ನಾನು ಸಭ್ಯವಾದ ಬಟ್ಟೆಯನ್ನು ಧರಿಸಿದ್ದೇನೋ?
ನಾವು ಏನನ್ನು ಧರಿಸುತ್ತೇವೆಂಬುದು ನಮ್ಮ ವೈಯಕ್ತಿಕ ನಿರ್ಣಯವಾಗಿದೆ. ನಮ್ಮ ವೈಯಕ್ತಿಕ ರುಚಿಗಳು ನಮ್ಮ ಆರ್ಥಿಕ ಸ್ಥಿತಿಗಳಂತೆ ಭಿನ್ನವಾಗಿರುತ್ತವೆ. ಮತ್ತು ಸ್ಥಳದಿಂದ ಸ್ಥಳಕ್ಕೆ, ದೇಶದಿಂದ ದೇಶಕ್ಕೆ ಮತ್ತು ಒಂದು ಹವಾಮಾನದ ಪ್ರದೇಶದಿಂದ ಇನ್ನೊಂದಕ್ಕೆ ಸಂಪ್ರದಾಯಗಳು ಭಿನ್ನವಾಗಿರುತ್ತವೆ. ಆದರೆ ನಿಮ್ಮ ಪರಿಸ್ಥಿತಿಯು ಏನೇ ಆಗಿರಲಿ, ಈ ತತ್ತ್ವವನ್ನು ಜ್ಞಾಪಕದಲ್ಲಿಡಿರಿ: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:1) ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂದರ್ಭಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸಿರಿ. ಮತ್ತು ಎರಡನೆಯದಾಗಿ, “ನಿಮ್ಮ ದೇವರೊಂದಿಗೆ ನಡೆಯುವುದರಲ್ಲಿ ಸಭ್ಯರಾಗಿರಿ.”—ಮೀಕ 6:8, NW.
ವಿಪರೀತ ಸಂಪ್ರದಾಯಸ್ಥರಂತೆ ಬಟ್ಟೆಯನ್ನು ಧರಿಸುವುದನ್ನು ಇದು ಅರ್ಥೈಸುವುದಿಲ್ಲವಾದರೂ, “ಮರ್ಯಾದೆಗೆ ತಕ್ಕ” ಹಾಗೆ ಮತ್ತು ‘ಸ್ವಸ್ಥ ಮನಸ್ಸ’ನ್ನು ಪ್ರತಿಬಿಂಬಿಸುವಂತಹ ರೀತಿಯಲ್ಲಿ ಬಟ್ಟೆಯನ್ನು ತೊಡಬೇಕು. (1 ತಿಮೊಥೆಯ 2:9, 10) ಅನೇಕ ವೇಳೆ, ಇದು ನಿಯಂತ್ರಣ ತೋರಿಸುವುದನ್ನು ಅರ್ಥೈಸುತ್ತದೆ. ಈ ಗುಣವನ್ನು ವರ್ಕಿಂಗ್ ವುಮನ್ ಪತ್ರಿಕೆಯು, ಸದಭಿರುಚಿ ಮತ್ತು ನಯನಾಜೂಕಿಗೆ ಸಂಬಂಧಿಸುತ್ತದೆ. ಒಟ್ಟಿನಲ್ಲಿ, ನೀವು ಕೋಣೆಯೊಳಗೆ ಪ್ರವೇಶಿಸುವಾಗ ಎಲ್ಲರ ಕಣ್ಣು ನಿಮ್ಮ ಬಟ್ಟೆಯ ಮೇಲೆ ಹೋಗಿ ಅವರನ್ನು ಪರವಶಗೊಳಿಸದಂತೆ ನೋಡಿಕೊಳ್ಳಿರಿ. ವರ್ಕಿಂಗ್ ವುಮನ್ ಹೇಳುವುದು: “ಜನರ ಕಣ್ಣು ನಿಮ್ಮ ಬಟ್ಟೆಯ ಮೇಲಲ್ಲದೆ ನಿಮ್ಮ ಗುಣಗಳ ಮೇಲಿರುವಂತಹ ರೀತಿಯಲ್ಲಿ . . . ಬಟ್ಟೆಯನ್ನು ಧರಿಸಿರಿ.”
ಪರ್ಸೆಪ್ಚ್ಯುಲ್ ಆ್ಯಂಡ್ ಮೋಟರ್ ಸ್ಕಿಲ್ಸ್ ಪತ್ರಿಕೆಯು ಹೇಳುವುದು: “ಇತರರ ಮೇಲೆ ಪ್ರಭಾವವನ್ನು ಬೀರುವುದರಲ್ಲಿ ಮತ್ತು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುವುದರಲ್ಲಿ, ಬಟ್ಟೆಯ ಪಾತ್ರವನ್ನು ಪರೀಕ್ಷಿಸುತ್ತಿರುವ ಅನೇಕ ಸಾಹಿತ್ಯಗಳು, ಇತರರ ಕುರಿತು ಆರಂಭದಲ್ಲಿಯೇ ನಿರ್ಣಯಿಸುವುದರಲ್ಲಿ ಬಟ್ಟೆಬರೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.” ಈ ಸಂಬಂಧದಲ್ಲಿ, ತನ್ನ ಬಟ್ಟೆಯಿಂದ ಜನರನ್ನು ಆಕರ್ಷಿಸುವುದರಲ್ಲಿ ಹಿಂದೆ ಒಂದು ರೀತಿಯ ಸುಖವನ್ನು ಅನುಭವಿಸುತ್ತಿದ್ದ, 40ರ ವಯಸ್ಸಿನ ಮಹಿಳೆಯು ಹೇಳುವುದು: “ಇದು ನನಗೆ ತುಂಬ ಸಮಸ್ಯೆಗಳನ್ನು ತಂದೊಡ್ಡಿತು. ಏಕೆಂದರೆ, ಅದು ನನ್ನ ಉದ್ಯೋಗ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸವನ್ನು ಮಬ್ಬುಗೊಳಿಸಿತು. ವ್ಯಾಪಾರದಲ್ಲಿ ಯಾವಾಗಲೂ ಪುರುಷರು ನನ್ನನ್ನು ಸಂಜೆಯ ಹೊತ್ತಿಗೆ ಹೊರಗೆ ಊಟಕ್ಕೆ ಕರೆದುಕೊಂಡುಹೋಗಲು ಬಯಸುತ್ತಿದ್ದರು.” ಭಿನ್ನ ರೀತಿಯ ಸ್ಟೈಲನ್ನು ವರ್ಣಿಸುತ್ತಾ ಒಬ್ಬ ಅಕೌಂಟೆಂಟ್ ಮಹಿಳೆಯು ಹೇಳುವುದು: “ಮನಸ್ಸಿಗೆ ತೋಚಿದಂತೆ ಬಟ್ಟೆಯನ್ನು ಧರಿಸಿರುವ ಅಥವಾ ಗಂಡಸಿನ ರೀತಿಯಲ್ಲಿ ಬಟ್ಟೆಯನ್ನು ಧರಿಸಿರುವ ಮಹಿಳೆಯರ ಕಡೆಗೆ ಪುರುಷರು ವರ್ತಿಸುವ ರೀತಿಯನ್ನು ನಾನು ನೋಡಿದ್ದೇನೆ. ಆ ರೀತಿಯ ಮಹಿಳೆಯರನ್ನು ಆಕ್ರಮಣಶೀಲರೆಂದು ಭಾವಿಸಲಾಗುತ್ತದೆ. ಮತ್ತು ಪುರುಷರು ಇಂಥವರಿಗೆ ಅಷ್ಟಾಗಿ ಪರಿಗಣನೆಯನ್ನು ತೋರಿಸುವುದಿಲ್ಲ.”
ಒಬ್ಬ ಯುವ ಹುಡುಗಿಯಾದ ಜೆಫೀ ತನ್ನ ವಿಚಿತ್ರವಾದ ಹೇರ್ಕಟ್ನಿಂದ ಗಲಿಬಿಲಿಗೊಳಿಸುವಂತಹ ಸೂಚನೆಗಳನ್ನು ಕೊಟ್ಟಳು. “ನಾನು ‘ಬೇರೆ ರೀತಿಯಲ್ಲಿ’ ಕಾಣಿಸುತ್ತಿದ್ದೇನೆಂದು ನೆನಸಿದೆ. ಆದರೆ ಜನರು ನನ್ನನ್ನು ಹೀಗೆ ಕೇಳಲು ಶುರುಮಾಡಿದರು, ‘ನೀನು ನಿಜವಾಗಿಯೂ ಒಬ್ಬ ಯೆಹೋವನ ಸಾಕ್ಷಿಯಾಗಿದ್ದೀಯೋ?’ ಮತ್ತು ಅದನ್ನು ಕೇಳಿ ನನಗೆ ನಾಚಿಕೆಯಾಗುತ್ತಿತ್ತು” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಜೆಫೀ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕಿತ್ತು. “ಹೃದಯದಲ್ಲಿ ತುಂಬಿರುವದೇ” ನಮ್ಮ ಬಾಯಿಂದ ಹೊರಡುವುದು ಮಾತ್ರವಲ್ಲ, ನಾವು ಧರಿಸುವ ಬಟ್ಟೆ ಮತ್ತು ನಮ್ಮ ಕೇಶಶೈಲಿಯಲ್ಲಿ ತೋರಿಬರುವುದು ಎಂಬುದು ಸತ್ಯವಾಗಿಲ್ಲವೋ? (ಮತ್ತಾಯ 12:34) ನಿಮ್ಮ ಬಟ್ಟೆ ಏನನ್ನು ಹೊರಗೆಡಹುತ್ತದೆ—ಸೃಷ್ಟಿಕರ್ತನ ಕಡೆಗೆ ಗಮನವನ್ನು ಸೆಳೆಯುವ ಹೃದಯವನ್ನೋ ಇಲ್ಲವೇ ನಿಮ್ಮ ಕಡೆಗೋ?
“ಸ್ವಸ್ಥ ಮನಸ್ಸಿನಿಂದ” ಬಟ್ಟೆಯನ್ನು ಧರಿಸಿರಿ
ಬಟ್ಟೆಗಳು ನಿಮ್ಮ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಲ್ಲವು ಎಂಬುದನ್ನು ಸ್ವಲ್ಪ ಪರಿಗಣಿಸಿರಿ. ಒತ್ತಡ ಹಾಕುವ ಉಡುಪು ಧಾರಣೆ ಮತ್ತು ಅತಿರೇಕ ಉಡುಪು ಧಾರಣೆ ನಿಮ್ಮ ಸ್ವಾಭಿಮಾನವನ್ನು ಇನ್ನೂ ಹೆಚ್ಚಿಸಬಹುದು. ಕೊಳಕಾಗಿ ಮನಸ್ಸಿಗೆ ತೋಚಿದಂತೆ ಬಟ್ಟೆಯನ್ನು ಧರಿಸುವುದು ನಿಮ್ಮ ಬಗ್ಗೆ ನಿಮಗಿರುವ ಕೀಳು ಭಾವನೆಯನ್ನು ಹೆಚ್ಚಿಸಬಹುದು. ಮತ್ತು ನಿಮ್ಮ ಅಚ್ಚುಮೆಚ್ಚಿನ ಚಲನಚಿತ್ರ ನಾಯಕನಟಿಯ ಅಥವಾ ಕ್ರೀಡಾ ಪಟುವಿನ ಚಿತ್ರವುಳ್ಳ ಟಿ-ಶರ್ಟುಗಳು ನಿಮ್ಮನ್ನು ನಾಯಕ ಆರಾಧನೆಗೆ, ಅಂದರೆ ವಿಗ್ರಹಾರಾಧನೆಗೆ ತಳ್ಳಬಹುದು. ಹೌದು, ನಿಮ್ಮ ಬಟ್ಟೆಗಳು ಇತರರೊಟ್ಟಿಗೆ ಮಾತಾಡುತ್ತವೆ ಮತ್ತು ನೀವು ಯಾವ ರೀತಿಯ ವ್ಯಕ್ತಿಯೆಂದು ಅವರಿಗೆ ಹೇಳುತ್ತವೆ.
ಗ್ಲಾಮರಸ್ ಅಥವಾ ಮೋಹಕವಾದ ರೀತಿಯಲ್ಲಿ ನೀವು ಬಟ್ಟೆಯನ್ನು ಧರಿಸುವಲ್ಲಿ, ಅದು ನಿಮ್ಮ ಬಗ್ಗೆ ಏನ್ನನ್ನು ಹೇಳುತ್ತದೆ? ವಾಸ್ತವದಲ್ಲಿ, ನೀವು ಜಯಿಸಲು ಹೋರಾಡಬೇಕಾಗಿರುವ ವ್ಯಕ್ತಿತ್ವ ಗುಣಗಳನ್ನು ನೀವು ಇನ್ನೂ ಹೆಚ್ಚು ಬಲಪಡಿಸುತ್ತಿದ್ದೀರೋ? ಅಷ್ಟುಮಾತ್ರವಲ್ಲದೆ, ನೀವು ಯಾವ ರೀತಿಯ ವ್ಯಕ್ತಿಯನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದೀರಿ? ರೋಮಾಪುರ 12:3ರಲ್ಲಿ ದಾಖಲಿಸಲ್ಪಟ್ಟಿರುವ ಸಲಹೆಯು ಅಹಂಭಾವ, ಜಂಬ, ಮತ್ತು ನಕಾರಾತ್ಮಕದ ಭಾವನೆಯನ್ನು ಆಲೋಚನೆಯನ್ನು ಜಯಿಸಲು ನಮಗೆ ಸಹಾಯಮಾಡಸಾಧ್ಯವಿದೆ. ಅಲ್ಲಿ ಅಪೊಸ್ತಲ ಪೌಲನು ನಮಗೆ ಹೀಗೆ ಬುದ್ಧಿವಾದವನ್ನು ನೀಡುತ್ತಾನೆ: “ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ . . . ನ್ಯಾಯವಾದ ಅಭಿಪ್ರಾಯದಿಂದ [“ಸ್ವಸ್ಥ ಮನಸ್ಸು,” NW] ತನ್ನನ್ನು ಭಾವಿಸಿಕೊಳ್ಳಬೇಕು.” “ಸ್ವಸ್ಥ ಮನಸ್ಸು” ಹೊಂದಿರುವುದು, ತಿಳುವಳಿಕೆಯುಳ್ಳವರಾಗಿ ಇರುವುದನ್ನು ಅರ್ಥೈಸುತ್ತದೆ.
ಜವಾಬ್ದಾರಿಯುತ ಮತ್ತು ಭರವಸಾರ್ಹ ಸ್ಥಾನಗಳಲ್ಲಿರುವವರಿಗೆ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಏಕೆಂದರೆ ಅವರ ಮಾದರಿಯು ಇತರರ ಮೇಲೆ ಶಕ್ತಿಯುತವಾದ ಪ್ರಭಾವವನ್ನು ಬೀರಸಾಧ್ಯವಿದೆ. ಕ್ರೈಸ್ತ ಸಭೆಯಲ್ಲಿ ಸೇವೆಸಲ್ಲಿಸುವ ಸುಯೋಗಗಳನ್ನು ಹೊಂದಿರುವವರು ಮತ್ತು ಅವರ ಕ್ರೈಸ್ತ ಪತ್ನಿಯರು, ತಮ್ಮ ಬಟ್ಟೆ, ಕೇಶ ಶೃಂಗಾರದಲ್ಲಿ ಸಭ್ಯವೂ ಆದರಣೀಯವೂ ಆದ ಮನೋಭಾವವನ್ನು ತೋರಿಸುವರು. ವಿವಾಹದ ಔತಣಕೂಟದ ದೃಷ್ಟಾಂತದಲ್ಲಿ ಯೇಸು ಎತ್ತಿತೋರಿಸಿದ ಒಬ್ಬ ವ್ಯಕ್ತಿಯಂತಿರಲು ನಾವೆಂದೂ ಬಯಸುವುದಿಲ್ಲ: ‘ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡನು.’ ಅಂತಹ ಅಗೌರವಸೂಚಕ ಬಟ್ಟೆಯನ್ನು ಧರಿಸಿದ್ದಕ್ಕಾಗಿ ಆ ವ್ಯಕ್ತಿಯಲ್ಲಿ ಯಾವುದೇ ಸಮಂಜಸವಾದ ಕಾರಣವಿಲ್ಲದ್ದನ್ನು ತಿಳಿದುಕೊಂಡು, “ಅರಸನು ಸೇವಕರಿಗೆ—ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲಿಗೆ ನೂಕಿರಿ ಎಂದು ಹೇಳಿದನು.”—ಮತ್ತಾಯ 22:11-13.
ಹೀಗೆ, ಹೆತ್ತವರು ನಡೆನುಡಿಯ ಮೂಲಕ ತಮ್ಮ ಮಕ್ಕಳಿಗೆ ಬಟ್ಟೆಯ ಬಗ್ಗೆ ಮತ್ತು ಅದರ ಕಡೆಗೆ ಹಿತಕರವಾದ ಮನೋಭಾವವನ್ನು ಬೆಳೆಸುವುದು ಅತಿ ಪ್ರಾಮುಖ್ಯ. ಅಂದರೆ ಹೆತ್ತವರು ತಮ್ಮ ಪುತ್ರ ಇಲ್ಲವೇ ಪುತ್ರಿಯೊಂದಿಗೆ ಕೆಲವೊಮ್ಮೆ ಕಟ್ಟುನಿಟ್ಟಾಗಿರುವ ಅಗತ್ಯವಿದೆ. ಆದರೆ ನಾವು ಮತ್ತು ನಮ್ಮ ಮಕ್ಕಳು ಧರಿಸುವಂತಹ ಉಚ್ಚಮಟ್ಟದ ಬಟ್ಟೆ, ನಡೆನುಡಿಗಳಿಗಾಗಿ ಅನಿರೀಕ್ಷಿತವಾಗಿ ಯಾರಾದರೂ ಶ್ಲಾಘಿಸುವಾಗ ಎಷ್ಟೊಂದು ಉಲ್ಲಾಸವಾಗುವುದು!
ಹೌದು, ಯೆಹೋವನ ಸೇವಕರು ಜಂಬ, ಆತ್ಮಾಭಿಮಾನ, ಮತ್ತು ಸ್ವವ್ಯಾಮೋಹದ ಪಾಶದಿಂದ ದೂರವಿದ್ದಾರೆ. ಅವರಿಗೆ ಮಾರ್ಗದರ್ಶನವಾಗಿ ಈ ಲೋಕದ ಆತ್ಮವಲ್ಲ, ಬದಲಿಗೆ ದೈವಿಕ ತತ್ತ್ವಗಳಿವೆ. (1 ಕೊರಿಂಥ 2:12) ಈ ತತ್ತ್ವಗಳಿಗನುಸಾರವಾಗಿ ನೀವು ಜೀವಿಸುವುದಾದರೆ, ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂದು ನಿರ್ಣಯಿಸುವುದು ಕಷ್ಟವಾಗುವುದಿಲ್ಲ. ಅಷ್ಟುಮಾತ್ರವಲ್ಲದೆ, ಚಿತ್ರದ ಒಳ್ಳೆಯ ಫ್ರೇಮಿನಂತೆ, ನಿಮ್ಮ ಬಟ್ಟೆಗಳು ನಿಮ್ಮ ವ್ಯಕ್ತಿತ್ವವನ್ನು ಅದುಮಿಬಿಡಲಾರವು ಇಲ್ಲವೇ ಅದಕ್ಕೆ ಕುಂದನ್ನು ತರಲಾರವು. ಮತ್ತು ನೀವು ದೇವರಂತಿರಲು ಪ್ರಯತ್ನಿಸಿದಷ್ಟು ಹೆಚ್ಚು, ನಿಮ್ಮ ಬಟ್ಟೆಯು ಎಂದಿಗೂ ತರಲಾರದಂತಹ ಆತ್ಮಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಿರಿ.