ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 8/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಭಾಷೆ ಕಣ್ಮರೆಯಾಗುತ್ತಿರುವುದು
  • ರಸ್ತೆಯ ಆವೇಶವನ್ನು ತಪ್ಪಿಸುವುದು
  • ನಗುವಿಗೆ ಬರಗಾಲ
  • ಅನಕ್ಷರತೆಯ ಸಂಖ್ಯೆ ಹೆಚ್ಚುತ್ತಿದೆ
  • ಸಹಸ್ರವರ್ಷದ ಹುಚ್ಚುತನ
  • ಯಾಂಗ್ಸೀ ನದಿಯನ್ನು ಪಳಗಿಸುವುದು
  • ಉಬ್ಬಸ (ಆಸ್ತಮಾ) ಹೆಚ್ಚುತ್ತಿದೆ
  • ಹವಾಮಾನದಿಂದಾದ ವಿಪರೀತ ನಷ್ಟ
  • ಒತ್ತಡಕ್ಕೊಳಗಾಗಿರುವ ಕುಟುಂಬಗಳು
  • ನಿಮಗೆ ಆರಿಸಿ ಕೊಳ್ಳುವ ಹಕ್ಕಿದೆ
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ನಂಬಿಕೆ-ಪಂಥಾಹ್ವಾನಿಸುವ ಒಂದು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ಧರೋ?
    1990 ನಮ್ಮ ರಾಜ್ಯದ ಸೇವೆ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1998
  • ಆರೋಗ್ಯವಂತ ತಾಯಿ ಆರೋಗ್ಯವಂತ ಮಗು
    ಎಚ್ಚರ!—2010
ಇನ್ನಷ್ಟು
ಎಚ್ಚರ!—1999
g99 8/8 ಪು. 28-29

ಜಗತ್ತನ್ನು ಗಮನಿಸುವುದು

ಭಾಷೆ ಕಣ್ಮರೆಯಾಗುತ್ತಿರುವುದು

“ಕೆಲವೊಮ್ಮೆ ನನ್ನ ಮಕ್ಕಳಿಗೆ ಭಾಷೆಯನ್ನು ಕಲಿಸಲಾಗದೇ ಇರುವುದಕ್ಕಾಗಿ ನನ್ನ ಮೇಲೆ ನನಗೇ ಬೇಸರವಾಗುತ್ತಿತ್ತು,” ಎಂದು ಅಲಾಸ್ಕದ ಐಯಾಕ್‌ ಸಂಸ್ಕೃತಿಯವರ ಭಾಷೆಯನ್ನು ಮಾತಾಡುವವರಲ್ಲಿ ಕೊನೆಯವರಾದ ಮರೀ ಸ್ಮಿತ್‌ ಜೋನ್ಸ್‌ ಎಂಬ ಮುಖ್ಯಸ್ಥೆ ಹೇಳುತ್ತಾರೆ. ಭಾಷೆಯ ಶೈಲಿಯಲ್ಲಾಗುತ್ತಿರುವ ಬದಲಾವಣೆಗಳು ಸೂಚಿಸುವುದೇನೆಂದರೆ, ಅಂದಾಜು ಮಾಡಲ್ಪಟ್ಟಿರುವ ಪ್ರಕಾರ ಲೋಕವ್ಯಾಪಕವಾಗಿ ಮಾತಾಡಲ್ಪಡುವ 6,000 ಭಾಷೆಗಳಲ್ಲಿ, ಶೇಕಡ 40ರಿಂದ 50ರಷ್ಟು ಭಾಷೆಗಳು ಮುಂದಿನ ಶತಮಾನದೊಳಗಾಗಿ ಕಣ್ಮರೆಯಾಗಬಹುದು. ಒಂದು ಸಮಯದಲ್ಲಿ ಆಸ್ಟ್ರೇಲಿಯದಲ್ಲಿ 250 ಭಾಷೆಗಳಿದ್ದವು, ಆದರೆ ಈಗಾಗಲೇ ಅವುಗಳ ಸಂಖ್ಯೆಯು 20ಕ್ಕೆ ಇಳಿಮುಖವಾಗಿವೆ. ಹೀಗಾಗಲು ಕಾರಣವೇನು? “ಇಂಗ್ಲಿಷ್‌ ಮತ್ತು ಇತರ ಹೆಸರುವಾಸಿ ಭಾಷೆಗಳ ಹರಡುವಿಕೆಯು” ಬೇರೆ ಭಾಷೆಗಳನ್ನು “ಮೂಲೆಗೆ ತಳ್ಳಿವೆ” ಎಂದು ನ್ಯೂಸ್‌ವೀಕ್‌ ಮ್ಯಾಗಸೀನ್‌ ಸೂಚಿಸುತ್ತದೆ. ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಕಾಶಿಸಲ್ಪಟ್ಟಿರುವ ಕಣ್ಮರೆಯಾಗುವ ಅಪಾಯದಲ್ಲಿರುವ ಲೋಕದ ಭಾಷೆಗಳ ಭೂಪಟದ (ಇಂಗ್ಲಿಷ್‌) ಸಂಪಾದಕರಾದ ಪ್ರೊಫೆಸರ್‌ ಸ್ಟೀಫನ್‌ ವುರ್ಮ್‌ ಕೂಡಿಸಿ ಹೇಳುವುದು: “‘ಕಡಿಮೆ ಬಳಕೆಯಲ್ಲಿರುವ’ ಭಾಷೆಗಳನ್ನು ಅಂದರೆ, ಅಲ್ಪಸಂಖ್ಯಾತರ ಭಾಷೆಗಳನ್ನು ನೀವು ಮರೆತುಬಿಡಬೇಕು, ಏಕೆಂದರೆ ಅವುಗಳಿಗೆ ಯಾವುದೇ ಬೆಲೆಯಿಲ್ಲ ಎಂಬ ಅಭಿಪ್ರಾಯವು ಅನೇಕ ವೇಳೆ ಇದೆ.”

ರಸ್ತೆಯ ಆವೇಶವನ್ನು ತಪ್ಪಿಸುವುದು

“ವಿಪರೀತ ಒರಟಾಗಿ ವಾಹನ ಚಲಾಯಿಸುವ ಚಾಲಕರನ್ನು ಲಘುವಾಗಿ ತೆಗೆದುಕೊಳ್ಳಬಾರದು,” ಎಂದು ಕಾರ್‌ ರೇಸಿನ ಒಬ್ಬ ನುರಿತ ಚಾಲಕನು ಸಲಹೆ ನೀಡುತ್ತಾನೆಂದು ಫ್ಲೀಟ್‌ ಮೇಂಟೆನನ್ಸ್‌ ಆ್ಯಂಡ್‌ ಸೇಫ್ಟಿ ರಿಪೋರ್ಟ್‌ ಎಂಬ ಪತ್ರಿಕೆಯು ಉಲ್ಲೇಖಿಸಿತು. ಪ್ರಶಾಂತ ಮನಸ್ಸನ್ನು ಕಾಪಾಡಿಕೊಂಡು ಅಹಿತಕರ ಸನ್ನಿವೇಶಗಳನ್ನು ತಪ್ಪಿಸುವುದು, ರಸ್ತೆಯ ಆವೇಶದಿಂದಾಗುವ ಅಪಾಯಗಳನ್ನು ಕಡಿಮೆಮಾಡಲು ಸಹಾಯಮಾಡುವುದು. ಸುರಕ್ಷಾ ಸಮರ್ಥಕರು ಈ ಮುಂದಿನ ಸಲಹೆಗಳನ್ನು ಶಿಫಾರಸ್ಸು ಮಾಡುತ್ತಾರೆ:

◼ ಎಲ್ಲಾ ಸಮಯಗಳಲ್ಲೂ ಸೌಜನ್ಯದಿಂದ ವಾಹನವನ್ನು ಚಲಾಯಿಸಿರಿ.

◼ ಒರಟಾಗಿ ನುಗ್ಗಿಬರುವ ಮೋಟಾರ್‌ ಚಾಲಕನ ಹಾದಿಯಿಂದ ನಿಮಗೆ ಸಾಧ್ಯವಾಗುವಲ್ಲಿ ಸುರಕ್ಷಿತವಾಗಿ ದೂರಹೋಗಲು ಪ್ರಯತ್ನಿಸಿ.

◼ ಬೆನ್ನಟ್ಟಿಕೊಂಡು ಬರುವ ಅಥವಾ ವೇಗವನ್ನು ಹೆಚ್ಚಿಸುತ್ತ ವಾಹನ ಚಲಾಯಿಸುವ ಇನ್ನೊಬ್ಬ ಚಾಲಕನೊಂದಿಗೆ ಪೈಪೋಟಿಯನ್ನು ಮಾಡುತ್ತ ಸವಾಲೊಡ್ಡಬೇಡಿ.

◼ ಬೆದರಿಸುವ ಮುಖಭಾವಗಳಿಗೆ ಪ್ರತಿಕ್ರಿಯಿಸದಿರಿ, ಮತ್ತು ಅಪಾರ್ಥವನ್ನು ಕೊಡಸಾಧ್ಯವಿರುವ ಹಾವಭಾವಗಳನ್ನು ಮಾಡಬೇಡಿ.

◼ ಕೋಪಾವೇಶದಿಂದ ಚಲಾಯಿಸುತ್ತಿರುವ ಚಾಲಕನೊಂದಿಗೆ ಕಣ್ಣಿನ ಸಂಪರ್ಕವನ್ನು ಮಾಡುವುದರಿಂದ ದೂರವಿರಿ.

◼ ಮತ್ತೊಬ್ಬ ಚಾಲಕನನ್ನು ಎದುರಿಸುವ ಉದ್ದೇಶದಿಂದ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೊರಗೆ ಬರಬೇಡಿ.

ನಗುವಿಗೆ ಬರಗಾಲ

ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಹಾಸ್ಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ ಪುರಾವೆಗನುಸಾರ, ಆರ್ಥಿಕ ತೊಂದರೆಗಳಿಂದ ಕೂಡಿದ್ದ 1950ರ ದಶಕಗಳಲ್ಲಿ, ಮನುಷ್ಯನು ದಿನಕ್ಕೆ ಸರಾಸರಿ 18 ನಿಮಿಷ ನಗುತ್ತಿದ್ದನು. ಆದರೆ, ಸಮೃದ್ಧವಾದ 1990ರ ದಶಕಗಳಿಗೆ ಅದನ್ನು ಹೋಲಿಸಿದರೆ, ದಿನಕ್ಕೆ ಕೇವಲ 6 ನಿಮಿಷಗಳಾಗಿವೆ. ಈ ಇಳಿತಕ್ಕೆ ಕಾರಣವೇನು? “ಹಣವು ಸಂತೋಷವನ್ನು ಖರೀದಿಸಲಾರದು ಎಂಬ ಹಳೆಯ ನಾಣ್ಣುಡಿಯನ್ನು ದೃಢೀಕರಿಸುವ, ಯಾವಾಗಲೂ ಪ್ರಾಪಂಚಿಕ, ಜೀವನೋಪಾಯದ ಮತ್ತು ವೈಯಕ್ತಿಕ ಯಶಸ್ಸಿಗಾಗಿ ಪ್ರಯಾಸಪಡುವ ಪ್ರವೃತ್ತಿಯನ್ನು ಪರಿಣತರು ದೂರುತ್ತಾರೆ,” ಎಂದು ಲಂಡನ್ನಿನ ಸಂಡೇ ಟೈಮ್ಸ್‌ ವಿವರಿಸುತ್ತದೆ. ಹೀಗೆ, ಗ್ರಂಥಕರ್ತ ಮೈಕಲ್‌ ಆರ್ಗೈಲ್‌ ಮುಕ್ತಾಯಗೊಳಿಸುವುದು: “ಹಣಕ್ಕೆ ಹೆಚ್ಚು ಮಾನ್ಯತೆಯನ್ನು ನೀಡುವ ಹೆಚ್ಚಿನವರು ಅಲ್ಪ ತೃಪ್ತರಾಗಿದ್ದು ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಕೊರತೆಯುಳ್ಳವರಾಗಿರುತ್ತಾರೆ. ಹಣವು ಹೊರತೋರಿಕೆಯ ತೃಪ್ತಿಯನ್ನು ಮಾತ್ರ ನೀಡುವ ಕಾರಣದಿಂದ ಹೀಗಾಗಿರಬಹುದು.”

ಅನಕ್ಷರತೆಯ ಸಂಖ್ಯೆ ಹೆಚ್ಚುತ್ತಿದೆ

“ಲೋಕದ 590 ಕೋಟಿ ಜನರಲ್ಲಿ, ಒಂದನೇ ಆರು ಭಾಗದಷ್ಟು ಜನರಿಗೆ ಓದಲು ಇಲ್ಲವೆ ಬರೆಯಲು ಬರುವುದಿಲ್ಲ,” ಎಂದು ದ ನ್ಯೂಯಾರ್ಕ್‌ ಟೈಮ್ಸ್‌ ವರದಿಸುತ್ತದೆ. ವಿಶ್ವ ಸಂಸ್ಥೆಯ ಮಕ್ಕಳ ನಿಧಿಗನುಸಾರ, (ಯುನಿಸೆಫ್‌) ಅನಕ್ಷರಸ್ಥರ ಸಂಖ್ಯೆಯು ಇನ್ನೂ ಹೆಚ್ಚಾಗಲಿರುವುದೆಂದು ನಿರೀಕ್ಷಿಸಲಾಗಿದೆ. ಏಕೆ? ಏಕೆಂದರೆ ಲೋಕದ ಅತ್ಯಂತ ಬಡರಾಷ್ಟ್ರಗಳಲ್ಲಿ ಸದ್ಯದ ಪರಿಸ್ಥಿತಿಗನುಸಾರ, 4 ಮಕ್ಕಳಲ್ಲಿ 3 ಮಕ್ಕಳು ಶಾಲೆಗೆ ಹೋಗುವುದಿಲ್ಲ. ಇದರೊಂದಿಗೆ, ಕುಲಸಂಬಂಧಿತ ಹೋರಾಟಗಳು ಲೋಕದಾದ್ಯಂತ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿರುವುದು ಮಾತ್ರವಲ್ಲದೆ, ಲಕ್ಷಾಂತರ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿಸಿದೆ. ಯುದ್ಧಗಳು ಶಾಲೆಗಳನ್ನು ಹಾಳುಮಾಡುವುದಲ್ಲದೆ, ವಿದ್ಯಾರ್ಥಿಗಳಾಗಬೇಕಿದ್ದ ಅನೇಕ ಮಕ್ಕಳನ್ನು ಸೈನಿಕರನ್ನಾಗಿ ಮಾರ್ಪಡಿಸಿವೆ. ಇದು ಮಾತ್ರವಲ್ಲದೆ, ಅನಕ್ಷರತೆಯು ಸಾಮಾಜಿಕ ಸಮಸ್ಯೆಗಳನ್ನು ಸಹ ಹೆಚ್ಚಿಸಲು ಸಹಾಯಮಾಡಿದೆ ಎಂಬುದು ನಿಶ್ಚಯ. ಲೋಕದ ಮಕ್ಕಳ ಸ್ಥಿತಿ 1999 ಎಂಬ ಶೀರ್ಷಿಕೆಯ ಯುನಿಸೆಫ್‌ ವರದಿಯು ಹೇಳುವುದೇನೆಂದರೆ, ಅನಕ್ಷರತೆಗೂ ಜನನದ ಸಂಖ್ಯೆಗೂ ನೇರ ಸಂಬಂಧವಿದೆ. ಉದಾಹರಣೆಗೆ, ದಕ್ಷಿಣ ಅಮೆರಿಕದ ಒಂದು ದೇಶದಲ್ಲಿ, “ಅನಕ್ಷರಸ್ಥ ಮಹಿಳೆಯರಿಗೆ ಸರಾಸರಿ 6.5 ಮಕ್ಕಳಿರುವಾಗ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವಿರುವ ತಾಯಂದಿರಿಗೆ ಸರಾಸರಿ 2.5 ಮಕ್ಕಳಿವೆ” ಎಂದು ಟೈಮ್ಸ್‌ ಹೇಳಿತು.

ಸಹಸ್ರವರ್ಷದ ಹುಚ್ಚುತನ

ಸಹಸ್ರವರ್ಷಕ್ಕೆ ಸಂಬಂಧಿಸಿದ ಹಿಂಸಾಚಾರವನ್ನು ತಡೆಯುವ ಸಿದ್ಧತೆಗೆ ಸಜ್ಜಾಗಿರಲು “ಇಸ್ರೇಲಿನ ಸರ್ಕಾರವು ಗುಡ್ಡದ ದೇವಾಲಯದ (ಟೆಂಪಲ್‌ ಮೌಂಟ್‌) ಬಳಿ ಸುರಕ್ಷತಾ ಕ್ರಮವನ್ನು ಸುಧಾರಿಸಲು 120 ಲಕ್ಷ ಡಾಲರುಗಳನ್ನು ಮೀಸಲಾಗಿಟ್ಟಿದೆ” ಎಂದು ನ್ಯಾಂಡೊ ಟೈಮ್ಸ್‌ ವರದಿಸುತ್ತದೆ. ಯೆಹೂದಿ ದೇವಾಲಯವನ್ನು ಕಟ್ಟುವ ಸಲುವಾಗಿ, ಯೆಹೂದಿ ಅಥವಾ “ಕ್ರೈಸ್ತ” ಮತಭ್ರಾಂತರು ಗುಡ್ಡದ ದೇವಾಲಯದ ಸಮೀಪದಲ್ಲಿರುವ ಮಸೀದಿಗಳನ್ನು ನಾಶಮಾಡಬಹುದೆಂದು ಪೋಲೀಸರು ಚಿಂತಿತರಾಗಿದ್ದಾರೆ. ಇದು ಲೋಕಾಂತ್ಯ ಹಾಗೂ ಕ್ರಿಸ್ತನ ಎರಡನೇ ಬರೋಣವನ್ನು ತ್ವರಿತಗೊಳಿಸುವುದೆಂದು ಕೆಲವು “ಕ್ರೈಸ್ತ” ಕುಪಂಥಗಳು ನಂಬುತ್ತವೆ. ಆ ವರದಿಗನುಸಾರ, ಅಲ್‌-ಹರಮ್‌ ಅಲ್‌-ಷರೀಫ್‌ ಎಂದು ಮುಸ್ಲಿಮರಿಗೆ ಪ್ರಸಿದ್ಧವಾಗಿರುವ ಈ ಗುಡ್ಡದ ದೇವಾಲಯವು, “ಮಧ್ಯಪೂರ್ವ ಘರ್ಷಣೆಯಲ್ಲಿ ತೀರ ಸೂಕ್ಷ್ಮವಾದ ಸ್ಥಳವಾಗಿತ್ತೆಂದು ಪರಿಗಣಿಸಲಾಗುತ್ತದೆ.” ಈ ದೇವಾಲಯವು, “1967ರಲ್ಲಿ ನಡೆದ ಮಧ್ಯಪೂರ್ವ ಯುದ್ಧದಲ್ಲಿ ಜೋರ್ಡಾನ್‌ನಿಂದ ಇಸ್ರೇಲ್‌ ವಶಪಡಿಸಿಕೊಂಡ, ಗೋಡೆಗಳಿಂದಾವೃತವಾದ ಪುರಾತನ ನಗರವಾದ ಯೆರೂಸಲೇಮ್‌ನಲ್ಲಿ” ನೆಲೆಸಿದೆ. ಕ್ರಿಸ್ತನ ಹಿಂದಿರುಗುವಿಕೆಯ ನಿರೀಕ್ಷಣೆಯಲ್ಲಿ ಅನೇಕ “ಕ್ರೈಸ್ತರು” ಈಗಾಗಲೇ ಎಣ್ಣೆಯ ಮರಗಳ ಗುಡ್ಡದಲ್ಲಿ ಸ್ಥಳವನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ ಎಂಬುದನ್ನು ಗಮನಿಸಲಾಗಿದೆ.

ಯಾಂಗ್ಸೀ ನದಿಯನ್ನು ಪಳಗಿಸುವುದು

ಒಮ್ಮೆ ಮುಕ್ತಾಯವಾದರೆ, ಚೀನದ ಯಾಂಗ್ಸೀ ನದಿಯ ಮೂರು ಪ್ರಪಾತಗಳ (ತ್ರೀ ಗಾರ್ಜಸ್‌) ಅಣೆಕಟ್ಟು ಲೋಕದಲ್ಲೇ ಅತ್ಯಂತ ದೊಡ್ಡ ಜಲವಿದ್ಯುತ್‌ ಕೇಂದ್ರವಾಗುವುದು. ಈ ಅಣೆಕಟ್ಟಿನ ಎತ್ತರವು 185 ಮೀಟರಾಗಿದ್ದು, ಅದು 2.3 ಕಿಲೋಮೀಟರುಗಳವರೆಗೂ ವ್ಯಾಪಿಸುವುದು ಹಾಗೂ 182 ಲಕ್ಷ ಕಿಲೋವಾಟ್‌ಗಳಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು. ಹೀಗಿದ್ದರೂ, ಈ ಅಣೆಕಟ್ಟನ್ನು ಕಟ್ಟುವ ಮುಖ್ಯ ಉದ್ದೇಶವು ಜಲವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದಕ್ಕಾಗಿ ಅಲ್ಲ, ಬದಲಾಗಿ ಯಾಂಗ್ಸೀ ನದಿಯಿಂದಾಗುವ ಪ್ರವಾಹವನ್ನು ಕಡಿಮೆಗೊಳಿಸಲು ಸಹಾಯವಾಗುವಂತೆ ಕಟ್ಟಲಾಗುತ್ತಿದೆ. ಇದರ ನಿರ್ಮಾಣ ಕಾರ್ಯವು, 1994ರಲ್ಲಿ ಪ್ರಾರಂಭಿಸಲ್ಪಟ್ಟು, 2009ರಲ್ಲಿ ಮುಕ್ತಾಯಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಒಟ್ಟು, ಈ ಬೃಹತ್‌ ನಿರ್ಮಾಣ ಯೋಜನೆಯಲ್ಲಿ, 1 ಕೋಟಿ 47 ಲಕ್ಷ ಘನಮೀಟರುಗಳಷ್ಟು ಭೂಮಿ ಮತ್ತು ಬಂಡೆಯನ್ನು ತೋಡಬೇಕಾಗುವುದು ಮತ್ತು 250 ಲಕ್ಷ ಘನಮೀಟರುಗಳಷ್ಟು ಕಾನ್‌ಕ್ರೀಟನ್ನು ಸುರಿಯಬೇಕಾಗುವುದು, ಮತ್ತು ಸುಮಾರು 20 ಲಕ್ಷ ಟನ್ನುಗಳಷ್ಟು ಉಕ್ಕನ್ನು ಅಳವಡಿಸಬೇಕಾಗಿದೆ. “ಅಣೆಕಟ್ಟಿನ ಸುತ್ತಮುತ್ತಲೂ ವಾಸಿಸುತ್ತಿರುವ 11 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಈ ನಿರ್ಮಾಣ ಯೋಜನೆಯಿಂದ ಬಾಧಿಸಲ್ಪಟ್ಟಿದ್ದಾರೆ. ಆದುದರಿಂದ ಇವರಿಗೆ ಪುನರ್‌ವಸತಿಗಳನ್ನು ಒದಗಿಸುವುದೇ ತೀರ ಕಷ್ಟಕರವಾದ ಕೆಲಸವಾಗಿದೆ” ಎಂದು ಚೈನಾ ಟುಡೇ ಹೇಳುತ್ತದೆ.

ಉಬ್ಬಸ (ಆಸ್ತಮಾ) ಹೆಚ್ಚುತ್ತಿದೆ

ಕಳೆದ ಒಂದು ಶತಮಾನದಲ್ಲಿ, ಲೋಕದಾದ್ಯಂತ ಆಸ್ತಮಾ ರೋಗದ ಹರಡುವಿಕೆಯಲ್ಲಿ ಹಾಗೂ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಶೇಕಡ 40ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಲೋಕಾರೋಗ್ಯ ಸಂಸ್ಥೆಯಿಂದ ಬಂದ ವರದಿಯು ಸೂಚಿಸುತ್ತದೆ. ಈ ಹೆಚ್ಚಳಕ್ಕೆ ಕಾರಣವೇನು? ಇಕ್ಕಟ್ಟಾದ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದ ಮನೆಗಳಲ್ಲಿ ವಾಸಿಸುವ ಸದ್ಯದ ಶೈಲಿಯೊಂದಿಗೆ, ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳುವುದರಲ್ಲಿ ಆಗಿರುವ ತೀರ ಉನ್ನತಿಯೇ ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೆಂರ್ಬಸ್‌ ಆಫ್‌ ದಿ ಅಮೆರಿಕನ್‌ ಕಾಲೇಜ್‌ ಆಫ್‌ ಚೆಸ್ಟ್‌ ಫಿಸಿಷಿಯನ್ಸ್‌ ಸೂಚಿಸಿದರು. ಆಸ್ತಮಾ ಆಘಾತಗಳು, “ಪ್ರಾಣಿಗಳ ಚರ್ಮ, ತುಪ್ಪಟ, ಮತ್ತು ಪುಕ್ಕಗಳು, ಧೂಳಿನಲ್ಲಿರುವ ಸೂಕ್ಷ್ಮಜೀವಿಗಳು, ಬೂಷ್ಟು, ಸಿಗರೇಟಿನ ಹೊಗೆ, ಪರಾಗರೇಣುಗಳು, ಪರಿಸರೀಯ ಮಾಲಿನ್ಯಗಳು ಮತ್ತು ಘಾಟು ವಾಸನೆಗಳು” ಮುಂತಾದವುಗಳಿಂದ ಸುಲಭವಾಗಿ ಸಂಭವಿಸಸಾಧ್ಯವಿದೆ ಎಂದು ಟೊರಾಂಟೊ ಸ್ಟಾರ್‌ ಹೇಳುತ್ತದೆ. ಅತ್ಯಂತ ದೊಡ್ಡ ಅಲರ್ಜಿಕವು ಬೆಕ್ಕಿನ ತುಪ್ಪಟ ಅಥವಾ ಕೂದಲಿನಿಂದಾಗಿದೆ. ಆ ವಾರ್ತಾಪತ್ರಿಕೆಯು ಹೇಳುವುದೇನೆಂದರೆ, ಆಸ್ತಮಾ ರೋಗವು ವಿಶೇಷ ಚಿಂತೆಗೆ ಕಾರಣವಾಗಿದೆ, ಏಕೆಂದರೆ ಅದರಿಂದ ಸಂಭವಿಸುವ ಅಧಿಕಾಂಶ ಮರಣವನ್ನು ತಡೆಗಟ್ಟಬಹುದಾಗಿದೆ. ಈಗ ಕೆನಡದಲ್ಲಿ ಸುಮಾರು 15 ಲಕ್ಷದಷ್ಟು ಆಸ್ತಮಾ ರೋಗಿಗಳಿದ್ದಾರೆ, ಮತ್ತು ಈ ಕಾಯಿಲೆಯಿಂದ ಪ್ರತಿವರ್ಷ ಸುಮಾರು 500 ಮಂದಿ ಸಾಯುತ್ತಾರೆ.

ಹವಾಮಾನದಿಂದಾದ ವಿಪರೀತ ನಷ್ಟ

1998ರ ಮೊದಲ 11 ತಿಂಗಳುಗಳಲ್ಲಾದ ಹವಾಮಾನ-ಸಂಬಂಧಿತ ವಿಪತ್ತುಗಳಲ್ಲಿ ಲೋಕದಾದ್ಯಂತ 8,900 ಕೋಟಿ ಡಾಲರುಗಳ ನಷ್ಟವಾಗಿದೆ. ಇದು ಒಂದು ದಾಖಲೆಯಾಗಿದೆ. ಏಕೆಂದರೆ, “1980ರ ಇಡೀ ದಶಕದಲ್ಲಾದ 5,500 ಕೋಟಿ ಡಾಲರುಗಳ ನಷ್ಟಕ್ಕೆ ಹೋಲಿಸುವಾಗ ಇದು ವಿಪರೀತವಾಗಿದೆ,” ಎಂದು ಅಸೋಸಿಯೇಟೆಡ್‌ ಪ್ರೆಸ್‌ ವರದಿಸುತ್ತದೆ. ಈ ವರದಿಯು ಹೇಳುವುದು: “1980ಗಳಲ್ಲಾದ 8,270 ಕೋಟಿ ಡಾಲರುಗಳ ನಷ್ಟವನ್ನು ಹಣದುಬ್ಬರಕ್ಕೆ ಸರಿಹೊಂದಿಸುವಾಗಲೂ,” 1998ರ “11 ತಿಂಗಳುಗಳಲ್ಲಾದ ನಷ್ಟಕ್ಕಿಂತಲೂ ಬಹಳ ಕಡಿಮೆಯಾಗಿದೆ.” ಭೌತಿಕ ನಷ್ಟಗಳೊಂದಿಗೆ, ಪ್ರಕೃತಿ ವಿಕೋಪಗಳಾದಂತಹ ಚಂಡಮಾರುತ, ನೆರೆ, ಕಾಡ್ಗಿಚ್ಚು, ಮತ್ತು ಅನಾವೃಷ್ಟಿಗಳು 32,000 ಜನರನ್ನು ಕೊಂದಿವೆಯೆಂದು ಅಂದಾಜುಮಾಡಲಾಗಿದೆ. “ನೈಸರ್ಗಿಕ ವಿಪತ್ತುಗಳಲ್ಲಿ ಹೆಚ್ಚು ಮಾನವನ ಕೈವಾಡವಿದೆ” ಎಂದು ವರ್ಲ್ಡ್‌ವಾಚ್‌ ಇನ್‌ಸ್ಟಿಟ್ಯೂಟಿನ ಸೆತ್‌ ಡನ್‌ ಹೇಳುತ್ತಾರೆ. ಡನ್‌ರವರಿಗನುಸಾರ, ‘ಪ್ರಕೃತಿಯ ಸ್ಪಂಜುಗಳಂತೆ’ ಕಾರ್ಯನಡೆಸುವ ಮರ ಮತ್ತು ತರಿಜಮೀನುಗಳನ್ನು ಬರಿದುಮಾಡುವ ಮೂಲಕ ಅರಣ್ಯನಾಶನವಾಗುತ್ತಿರುವುದೇ ಈ ಸಮಸ್ಯೆಗೆ ದಾರಿಮಾಡಿಕೊಟ್ಟಿದೆ.

ಒತ್ತಡಕ್ಕೊಳಗಾಗಿರುವ ಕುಟುಂಬಗಳು

ಕೆನಡದವರ ಇತ್ತೀಚಿನ ಒಂದು ಅಭಿಪ್ರಾಯ ಸಂಗ್ರಹಣೆಯು, ಅರ್ಧಶತಮಾನದ ಹಿಂದಿನ ಅಂದರೆ, ಯುದ್ಧಾನಂತರದ ಕುಟುಂಬಗಳಿಗಿಂತ ಇಂದಿನ ಕುಟುಂಬಗಳಲ್ಲಿರುವ ಸದಸ್ಯರು ಹೆಚ್ಚು ಆರ್ಥಿಕ ಹಾಗೂ ಭಾವನಾತ್ಮಕ ಒತ್ತಡದ ಕೆಳಗಿದ್ದಾರೆಂದು ನೆನಸುತ್ತಾರೆಂದು ತೀರ್ಮಾನಿಸಿತು. ನ್ಯಾಷನಲ್‌ ಪೋಸ್ಟ್‌ ವಾರ್ತಾಪತ್ರಿಕೆಯು, ವಿವಾಹ ವಿಚ್ಛೇದ ಮತ್ತು ಕುಟುಂಬಗಳ ಕುಸಿತವು, ಒತ್ತಡ ಪಟ್ಟಿಯಲ್ಲಿ ಉಚ್ಚ ಸ್ಥಾನದಲ್ಲಿವೆಯೆಂದು ಉಲ್ಲೇಖಿಸುತ್ತದೆ. ಅವರೋಹಣ ಶ್ರೇಣಿಯಲ್ಲಿ, ಕುಟುಂಬ ಒತ್ತಡಕ್ಕೆ ಇನ್ನಿತರ ಪ್ರಧಾನ ಕಾರಣಗಳು ಯಾವುವೆಂದರೆ, “ಹೆತ್ತವರು ಹೆಚ್ಚು ಕಷ್ಟಪಟ್ಟು ಕೆಲಸಮಾಡುತ್ತ ಅನೇಕ ತಾಸುಗಳನ್ನು ವ್ಯಯಿಸುವುದು, ಭದ್ರತೆಯಿಲ್ಲದ ಕೆಲಸದ ಪರಿಸ್ಥಿತಿಗಳು, ವಿಪರೀತ ತೆರಿಗೆ, ಮತ್ತು ಮಕ್ಕಳನ್ನು ಬೆಳೆಸುವುದಕ್ಕಾಗಿ ಹೆತ್ತವರು ಮಾಡುವ ಪ್ರಯತ್ನಗಳಿಗೆ ಗೌರವದ ಕೊರತೆ.” ಈ ಒತ್ತಡಗಳು ಹೆಚ್ಚಿನ ಏಕಹೆತ್ತವರ ಕುಟುಂಬಗಳಲ್ಲಿ ಇನ್ನೂ ಅಧಿಕವಾಗಿವೆ ಎಂದು ಅಭಿಪ್ರಾಯ ನೀಡಿದ ಜನರು ಹೇಳಿದರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ