ನಿಮ್ಮ ಜೀವನಶೈಲಿ—ಅದರಿಂದಾಗುವ ಅಪಾಯಗಳೇನು?
ಅನೇಕ ವಿಧಗಳಲ್ಲಿ ಆರೋಗ್ಯ ಪ್ರವೃತ್ತಿಗಳು ಹಿಂದೆಂದೂ ಈಗಿರುವಷ್ಟು ಆಶಾದಾಯಕವಾಗಿದ್ದದ್ದಿಲ್ಲ. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂ.ಏಚ್.ಓ)ಯ 1998ರ ವರದಿಯೊಂದು ಹೀಗೆ ಹೇಳುತ್ತದೆ: “ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಬಹಳ ಜನರಿಗೆ ಕಡಿಮೆಪಕ್ಷ ಆರೋಗ್ಯಾರೈಕೆ, ಶುದ್ಧ ನೀರಿನ ಸರಬರಾಯಿ ಮತ್ತು ನೈರ್ಮಲ್ಯ ಸೌಕರ್ಯಗಳು ದೊರಕುತ್ತಿವೆ.” ಖಂಡಿತವಾಗಿಯೂ, ಲೋಕದ ಜನಸಂಖ್ಯೆಯಲ್ಲಿ ಅಧಿಕಾಂಶ ಮಂದಿ ಈಗಲೂ ಕೀಳಾದ ಪರಿಸ್ಥಿತಿಗಳ ಕೆಳಗೆ ಜೀವಿಸುತ್ತಿದ್ದಾರೆ. ಆದರೆ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿಸಿದಂತೆ, “ಲೋಕದಾದ್ಯಂತ ಬಡತನವು, ಹಿಂದಿನ 500 ವರ್ಷಗಳಲ್ಲಿ ಇದ್ದುದಕ್ಕಿಂತ ಕಳೆದ 50 ವರ್ಷಗಳಲ್ಲಿ ತುಂಬ ಕಡಿಮೆಯಾಗಿದೆ.”
ಲೋಕದ ಆರೋಗ್ಯಾರೈಕೆಯ ವ್ಯವಸ್ಥೆಗಳಲ್ಲಿನ ಸುಧಾರಣೆಗಳ ಕಾರಣ, ಲೋಕವ್ಯಾಪಕವಾಗಿ ಜನನದ ಸಮಯದಲ್ಲಿ ವ್ಯಕ್ತಿಯೊಬ್ಬನ ಸರಾಸರಿ ಜೀವನಾಯುಷ್ಯವು ಹೆಚ್ಚಿದೆ. 1955ರಲ್ಲಿ ವ್ಯಕ್ತಿಯೊಬ್ಬನು, ಸರಾಸರಿ 48 ವರ್ಷ ಬದುಕುತ್ತಿದ್ದನು. ಆದರೆ, 1995ರಷ್ಟಕ್ಕೆ ಈ ಸಂಖ್ಯೆಯು 65 ವರ್ಷಗಳಿಗೆ ಏರಿತ್ತು. ಇದಕ್ಕೆ ಒಂದು ಕಾರಣವು, ಬಾಲ್ಯಾವಸ್ಥೆಯ ರೋಗಗಳ ವಿರುದ್ಧ ಮಾಡಲ್ಪಟ್ಟ ವೈದ್ಯಕೀಯ ಪ್ರಗತಿಯೇ ಆಗಿದೆ.
ಸುಮಾರು 40 ವರ್ಷಗಳ ಹಿಂದೆ, ಸಂಭವಿಸುತ್ತಿದ್ದ ಸಾವುಗಳಲ್ಲಿ, ಐದು ವರ್ಷಕ್ಕಿಂತಲೂ ಚಿಕ್ಕಪ್ರಾಯದ ಮಕ್ಕಳ ಸಂಖ್ಯೆಯು, 40 ಪ್ರತಿಶತದಷ್ಟಿತ್ತು. ಆದರೆ 1998ರೊಳಗೆ, ಲಸಿಕೆಗಳ ಸಹಾಯದಿಂದ ಲೋಕದ ಅನೇಕ ಮಕ್ಕಳಿಗೆ ಬಾಲ್ಯಾವಸ್ಥೆಯ ರೋಗಗಳ ವಿರುದ್ಧ ಸೋಂಕುರಕ್ಷೆ ನೀಡಲಾಗಿತ್ತು. ಹೀಗೆ, ಐದು ವರ್ಷಕ್ಕಿಂತಲೂ ಚಿಕ್ಕಪ್ರಾಯದ ಮಕ್ಕಳ ಮರಣದ ಸಂಖ್ಯೆಯು, ಸಂಭವಿಸುವ ಎಲ್ಲ ಮರಣಗಳಲ್ಲಿ 21 ಪ್ರತಿಶತಕ್ಕೆ ಇಳಿದಿದೆ. ಡಬ್ಲ್ಯೂ.ಏಚ್.ಓ.ಗನುಸಾರ, “ಖಂಡಿತವಾಗಿಯೂ ನಾವು ಹೆಚ್ಚು ಒಳ್ಳೇ ಆರೋಗ್ಯ ಹಾಗೂ ಹೆಚ್ಚು ದೀರ್ಘಕಾಲದ ಜೀವಿತದ ಕಡೆಗೆ ಪ್ರಗತಿಮಾಡುತ್ತಿದ್ದೇವೆ.”
ಎಷ್ಟೇ ದೀರ್ಘಕಾಲ ಜೀವಿಸಿದರೂ ಅದರ ಗುಣಮಟ್ಟದಲ್ಲಿ ಯಾವುದೇ ಪ್ರಗತಿಯು ಮಾಡಲ್ಪಡದಿದ್ದರೆ, ಅದು ಒಂದು ಅರ್ಥಹೀನ ಸಾಧನೆಯಾಗಿರಸಾಧ್ಯವಿದೆ ಎಂಬುದಂತೂ ನಿಜ. ಹೆಚ್ಚು ಉತ್ತಮವಾಗಿ ಜೀವಿಸಲು ಅಗತ್ಯವಿರುವ ಪರಿಸ್ಥಿತಿಗಳ ಅನ್ವೇಷಣೆಯಲ್ಲಿ, ಅನೇಕ ಜನರು ಭೌತಿಕ ಸುಖಾನುಭೋಗಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಆದರೆ, ಇಂತಹ ಒಂದು ಜೀವನಶೈಲಿಯಿಂದ ಅನೇಕ ಆರೋಗ್ಯ ಅಪಾಯಗಳು ಉಂಟಾಗಸಾಧ್ಯವಿದೆ.
ಹೆಚ್ಚು ಉತ್ತಮವಾದ ಒಂದು ಜೀವನಶೈಲಿಯೊ?
ಇತ್ತೀಚೆಗಿನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಳು, ಜನರ ಜೀವನಶೈಲಿಗಳಲ್ಲಿ ವಿಪರೀತ ಬದಲಾವಣೆಗಳನ್ನು ತಂದಿವೆ. ಈ ಮುಂಚೆ ಹೆಚ್ಚು ಸಂಪದ್ಭರಿತವಾದ ರಾಷ್ಟ್ರಗಳು ಮಾತ್ರವೇ ಖರೀದಿಸಲು ಸಾಧ್ಯವಿದ್ದ ಸಾಮಗ್ರಿಗಳನ್ನು ಹಾಗೂ ಸಹಾಯ ಸೌಲಭ್ಯಗಳನ್ನು, ಉದ್ಯಮಶೀಲ ರಾಷ್ಟ್ರಗಳಲ್ಲಿರುವ ಅನೇಕರು ಇಂದು ಖರೀದಿಸಸಾಧ್ಯವಿದೆ. ಮತ್ತು ಈ ಅಭಿವೃದ್ಧಿಗಳಲ್ಲಿ ಕೆಲವು, ಜನರು ದೀರ್ಘಕಾಲ ಬದುಕುವಂತಹ ಪ್ರತೀಕ್ಷೆಯನ್ನು ಹೆಚ್ಚಿಸಿವೆಯಾದರೂ, ಅನೇಕ ಜನರು ಆತ್ಮಘಾತುಕ ಜೀವನಶೈಲಿಯ ಮೋಹಕ್ಕೆ ಒಳಗಾಗಿದ್ದಾರೆ.
ಉದಾಹರಣೆಗೆ, ಲಕ್ಷಾಂತರ ಜನರು ತಮ್ಮ ಖರೀದಿಸುವ ಸಾಮರ್ಥ್ಯವನ್ನು, ಚಟಹಿಡಿಸುವಂತಹ ಅಮಲೌಷಧಗಳು, ಮದ್ಯಪಾನ, ಹಾಗೂ ಹೊಗೆಸೊಪ್ಪುಗಳಂತಹ ಅನಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಿಕ್ಕಾಗಿ ಉಪಯೋಗಿಸಿದ್ದಾರೆ. ದುಃಖಕರವಾಗಿ, ಫಲಿತಾಂಶಗಳು ಸ್ಪಷ್ಟವಾಗಿ ಮುಂತಿಳಿಸಲು ಸಾಧ್ಯವಿದ್ದವುಗಳಾಗಿದ್ದವು. “ಲೋಕದಲ್ಲಿ ಅತಿ ವೇಗವಾಗಿ ಮುಂದುವರಿಯುತ್ತಿರುವ ಸಾರ್ವಜನಿಕ ಆರೋಗ್ಯದ ಅಪಾಯವು ರೋಗವಾಗಿಲ್ಲ, ಬದಲಾಗಿ ಒಂದು ಉತ್ಪನ್ನವೇ ಆಗಿದೆ” ಎಂದು ವರ್ಲ್ಡ್ ವಾಚ್ ಪತ್ರಿಕೆಯು ಹೇಳುತ್ತದೆ. ಅದೇ ಪತ್ರಿಕೆಯು ಕೂಡಿಸಿ ಹೇಳಿದ್ದು: “25 ವರ್ಷಗಳೊಳಗೆ, ಹೊಗೆಸೊಪ್ಪಿನಿಂದ ಉಂಟಾಗುವ ಅಸ್ವಸ್ಥತೆಯು, ಸೋಂಕುರೋಗಗಳಿಗಿಂತಲೂ ಮೇಲುಗೈ ಪಡೆದು, ಲೋಕವ್ಯಾಪಕವಾಗಿ ಮಾನವ ಆರೋಗ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಪರಿಣಮಿಸಸಾಧ್ಯವಿದೆಯೆಂದು ನಿರೀಕ್ಷಿಸಲಾಗಿದೆ.” ಅಷ್ಟುಮಾತ್ರವಲ್ಲದೇ, ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯು ಹೀಗೆ ಹೇಳುತ್ತದೆ: “ಮಾರಕ ಕ್ಯಾನ್ಸರ್ಗಳಲ್ಲಿ 30 ಪ್ರತಿಶತ ಕ್ಯಾನ್ಸರ್ಗಳು ಮುಖ್ಯವಾಗಿ ಧೂಮಪಾನದ ಕಾರಣದಿಂದ ಉಂಟಾಗುತ್ತವೆ, ಮತ್ತು ಅಷ್ಟೇ ಪ್ರತಿಶತವು ಜೀವನಶೈಲಿಯಿಂದ, ಅಂದರೆ ಆಹಾರಪಥ್ಯದ ರೂಢಿಗಳಿಂದ ಮತ್ತು ವ್ಯಾಯಾಮದ ಕೊರತೆಯಿಂದ ಉಂಟಾಗುತ್ತದೆ ಎಂದು ಹೇಳಸಾಧ್ಯವಿದೆ.”
ನಿಸ್ಸಂದೇಹವಾಗಿಯೂ, ನಮ್ಮ ಜೀವನ ರೀತಿಯಲ್ಲಿ ನಾವು ಮಾಡುವಂತಹ ಆಯ್ಕೆಗಳು, ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಹಾಗಾದರೆ, ನಾವು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ ಅಥವಾ ಸುಧಾರಿಸಸಾಧ್ಯವಿದೆ? ಆಹಾರಪಥ್ಯ ಹಾಗೂ ವ್ಯಾಯಾಮವು ಮಾತ್ರ ಸಾಕೊ? ಇದಕ್ಕೆ ಕೂಡಿಸಿ, ಆರೋಗ್ಯಕರವಾದ ಒಂದು ಜೀವನಶೈಲಿಯಲ್ಲಿ ಮಾನಸಿಕ ಹಾಗೂ ಆತ್ಮಿಕ ಅಂಶಗಳು ಯಾವ ಪಾತ್ರವನ್ನು ವಹಿಸುತ್ತವೆ?