ನೀವು ಆ ಹಾಡನ್ನು ಕೇಳಿಸಿಕೊಂಡಿದ್ದೀರೋ?
ಯಾವ ಹಾಡು? ಜನಪ್ರಿಯವಾಗಿರುವ ಯಾವುದಾದರೂ ಹಳೇ ಹಾಡೇ? ಹೌದು, ಅದು ಬಹಳ ಹಿಂದಿನ ಕಾಲದ ಹಾಡು. ಅದು ಭೂಮಿಯಲ್ಲಿ ಇಂದಿನವರೆಗೂ ಕೇಳಿರುವ ಹಾಡುಗಳಲ್ಲಿಯೇ ಅತ್ಯಂತ ಹಳೆಯ ಹಾಡಾಗಿರಲೂಬಹುದು. ಅದು ಯಾವುದು? ಹಕ್ಕಿಗಳ ಹಾಡು.
ಅನೇಕರು ಪಕ್ಷಿಗಳನ್ನು ಅವುಗಳ ಬಣ್ಣ, ವಿನ್ಯಾಸ, ಮತ್ತು ಅವುಗಳು ಹಾರುವ ರೀತಿ ಮತ್ತು ಗೂಡು ಕಟ್ಟುವ ಶೈಲಿಯ ಮೂಲಕ ಗುರುತಿಸುತ್ತಾರೆ. ಆದರೆ ಹಕ್ಕಿಗಳ ಹಾಡನ್ನು ಗಮನವಿಟ್ಟು ಆಲಿಸುವುದರ ಮೂಲಕ ಅವುಗಳನ್ನು ಗುರುತಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರೋ?
ಕೆಲವು ಪಕ್ಷಿಗಳ ಕೂಗುವ ಸ್ವರದಲ್ಲಿ ಅಷ್ಟೇನು ವೈವಿಧ್ಯತೆ ಇಲ್ಲದಿರುವುದರಿಂದ ಅವುಗಳನ್ನು ಗುರುತಿಸುವುದು ತುಂಬ ಸುಲಭ. ಉದಾಹರಣೆಗೆ ತುಂಟ ಕಾಗೆಯನ್ನೇ ತೆಗೆದುಕೊಳ್ಳಿ. ಅದು ಅತ್ಯಂತ ಬುದ್ಧಿವಂತ ಪಕ್ಷಿಗಳಲ್ಲಿ ಒಂದಾಗಿದ್ದರೂ ಅದರ ಕರ್ಕಶವಾದ “ಕಾವ್, ಕಾವ್” ಎಂಬ ಶಬ್ದವು ಅದನ್ನು ಕೂಡಲೇ ಗುರುತಿಸುವಂತೆ ಮಾಡುತ್ತದೆ. ರೂಕ್ ಎಂದು ಕರೆಯಲ್ಪಡುವ ಕಾಗೆ ಜಾತಿಯ ಹಕ್ಕಿಗಳು ಸಹ ಕಾವ್ ಶಬ್ದದ ಮೂಲಕ ತಮ್ಮ ಹಾಜರಿಯನ್ನು ಸೂಚಿಸುವುದಕ್ಕೆ ವಿಶಿಷ್ಟವಾಗಿವೆ. ಯಾವುದರ ಗೋಳುಕರೆಯು ರಾತ್ರಿಯಲ್ಲಿ ನಿಮಗೆ ಹುಚ್ಚುಹಿಡಿಸಬಹುದೋ ಅಂತಹ ಸ್ವರವನ್ನು ಹೊಂದಿರುವ ಇನ್ನೊಂದು ಪಕ್ಷಿಯು ಹ್ವಿಪರ್ವಿಲ್ ಆಗಿದೆ. ವಿಶೇಷವಾಗಿ ನೀವು ನಿದ್ರೆಮಾಡಲು ಬಯಸುವಾಗ, ಅದರ ಕೂಗುವ ಸ್ವರವೇ ಅದರ ಹೆಸರನ್ನು ಪ್ರತಿಧ್ವನಿಸುವಂತೆ ಒಂದೇ ಸಮನೇ ಕೂಗುತ್ತಿರುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, “ಮಾರ್ಷ್ ರೆನ್ ಎಂಬ ಹೆಸರಿನ ಪಕ್ಷಿಯು ಅನೇಕವೇಳೆ 100ಕ್ಕಿಂತಲೂ ಹೆಚ್ಚು ಮತ್ತು ಮಾಕಿಂಗ್ಬರ್ಡ್ ಎಂಬ ಹಾಡುಹಕ್ಕಿಯು 100ರಿಂದ 200ರಷ್ಟು ಸಂಗೀತ ಧಾಟಿಗಳನ್ನು ಹೊಂದಿದೆ. ಒಂದು ಬ್ರೌನ್ ತ್ರ್ಯಾಷರ್ ಪಕ್ಷಿಯು 2,000ಕ್ಕಿಂತಲೂ ಹೆಚ್ಚು ಹಾಡುಗಳನ್ನು ಪ್ರದರ್ಶಿಸಿತು”!—ಆಡುಬಾನ್, ಮಾರ್ಚ್-ಏಪ್ರಿಲ್ 1999.
ಸಾಮಾನ್ಯವಾಗಿ ಗಂಡು ಹಕ್ಕಿಗಳು ತಮ್ಮ ಕ್ಷೇತ್ರವನ್ನು ಗುರುತಿಸುವುದಕ್ಕಾಗಿ ಮತ್ತು ಹೆಣ್ಣು ಹಕ್ಕಿಗಳನ್ನು ಆಕರ್ಷಿಸುವುದಕ್ಕಾಗಿ ಹಾಡುತ್ತವೆ. ಹಾಗಿದ್ದರೂ, ಕೆಲವೊಮ್ಮೆ ಹೆಣ್ಣು ಹಕ್ಕಿಗಳೂ ಪಕ್ಷಿಸಂಬಂಧವಾದ ಗೀತಮೇಳದಲ್ಲಿ (ಕೋರಸ್) ಹಾಡಲು ಜೊತೆಗೂಡುತ್ತವೆ. ಬಾಲ್ಟಿಮೋರ್ ಅಥವಾ ನಾರ್ದರ್ನ್, ಓರೀಯೋಲ್, ಉತ್ತರ ಅಮೆರಿಕದಲ್ಲಿರುವ ಕಾರ್ಡಿನಲ್, ಮತ್ತು ಗುಲಾಬಿ ಬಣ್ಣದ ಎದೆಯುಳ್ಳ ಗ್ರೋಸ್ಬೀಕ್ ಪಕ್ಷಿಗಳ ವಿಷಯದಲ್ಲಿ ಇದು ಸತ್ಯ.
ನೀವು ವಾಸಿಸುವ ಸ್ಥಳದಲ್ಲಿರುವ ಪಕ್ಷಿಗಳ ಪರಿಚಯ ನಿಮಗಿದೆಯೆ? ಅನೇಕ ದೇಶಗಳಲ್ಲಿ ಹಕ್ಕಿಹಾಡುಗಳ ರೆಕಾರ್ಡಿಂಗ್ಗಳು ಲಭ್ಯವಿವೆ. ಪಕ್ಷಿಗಳ ಕಂಠನಾದವನ್ನು ಕೇಳಿಸಿಕೊಳ್ಳುವ ಮೂಲಕ ಯಾವ ಪಕ್ಷಿಯೆಂದು ಗುರುತಿಸಲು ಅವು ನಿಮಗೆ ಸಹಾಯಮಾಡಬಲ್ಲವು. ಅಲ್ಲದೆ ಪ್ರತಿ ಗಂಟೆಗೆ ನಿರ್ದಿಷ್ಟ ಹಕ್ಕಿಯ ಹಾಡಿನಿಂದ ಸಮಯವನ್ನು ಗುರುತಿಸುವ ಗಡಿಯಾರವನ್ನು ಸಹ ನೀವು ಖರೀದಿಸಬಹುದು. ಕಡಿಮೆಪಕ್ಷ 12 ಪಕ್ಷಿಗಳ ಗಾನವನ್ನಾದರೂ ನೀವು ಸುಲಭವಾಗಿ ಕಲಿತುಕೊಳ್ಳಬಹುದು!
[ಪುಟ 31 ರಲ್ಲಿರುವ ಚಿತ್ರ]
ಮಾರ್ಷ್ ರೆನ್
[ಪುಟ 31 ರಲ್ಲಿರುವ ಚಿತ್ರ]
ಗುಲಾಬಿ ಬಣ್ಣದ ಎದೆಯುಳ್ಳ ಗ್ರೋಸ್ಬೀಕ್
[ಪುಟ 31 ರಲ್ಲಿರುವ ಚಿತ್ರ]
ಕಾರ್ಡಿನಲ್