ಯುವ ಜನರು ಪ್ರಶ್ನಿಸುವುದು . . .
ನಾನು ಅನ್ಯಾಯವನ್ನು ಹೇಗೆ ಸಹಿಸಬಲ್ಲೆ?
“ಹಣವಿದ್ದವರಿಗೆ ಮಾತ್ರ ಗೌರವ ಸಿಗುತ್ತದೆ. ತಿನ್ನಲು ಏನೂ ಇಲ್ಲದ ಅಥವಾ ತಲೆಯಿಡಲು ಸಹ ಸೂರಿಲ್ಲದ ನಮ್ಮಂತಹವರನ್ನು ಪ್ರಾಣಿಗಳಂತೆ ನೋಡಲಾಗುತ್ತದೆ. ಭವಿಷ್ಯತ್ತಿನ ಕುರಿತಾಗಿ ನಾನು ಇಷ್ಟನ್ನೇ ನಿರೀಕ್ಷಿಸಬಲ್ಲೆ: ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಾಯುವುದನ್ನೇ.”—ಆರ್ನೂಲ್ಫೊ ಎಂಬ 15 ವರ್ಷ ಪ್ರಾಯದ, ನಿರ್ಗತಿಕ ಹುಡುಗ.
ಲೋಕದಲ್ಲಿ ಅನ್ಯಾಯವು ತುಂಬಿತುಳುಕುತ್ತಿದೆ. ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯೂನಿಸೆಫ್)ಯ ಒಂದು ವರದಿಯು ತಿಳಿಸಿದ್ದು: “ಕಳೆದ ದಶಕದಲ್ಲಿ, 20 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಯುದ್ಧಗಳ ಸಮಯದಲ್ಲಿ ಕೊಲ್ಲಲ್ಪಟ್ಟರು. 40 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಶಾರೀರಿಕವಾಗಿ ಅಂಗಹೀನರಾಗಿದ್ದಾರೆ, ಮತ್ತು 10 ಲಕ್ಷಕ್ಕಿಂತಲೂ ಹೆಚ್ಚಿನವರು ಅನಾಥರಾಗಿದ್ದಾರೆ, ಅಥವಾ ಯುದ್ಧದಿಂದಾಗಿ ತಮ್ಮ ಕುಟುಂಬಗಳಿಂದ ಬೇರ್ಪಡಿಸಲ್ಪಟ್ಟಿದ್ದಾರೆ.” ಲೋಕದಲ್ಲಿ ಸಿರಿಸಂಪತ್ತು ಇರುವುದಾದರೂ, ಅದೇ ಸಮಯದಲ್ಲಿ ಹೆಚ್ಚಿನ ಜನರು ಹಸಿವೆ ಮತ್ತು ಬಡತನದಿಂದ ಬಳಲುತ್ತಿದ್ದಾರೆ. ಅಭಿವೃದ್ದಿಶೀಲ ದೇಶಗಳಲ್ಲಿ, ಆರ್ನೂಲ್ಫೊನಂತಹ ಅನೇಕ ಯುವ ಜನರಿಗೆ ಶಿಕ್ಷಣವನ್ನೂ ಪಡೆದುಕೊಳ್ಳುವ ಅವಕಾಶವಿರುವುದಿಲ್ಲ.
ನಿಮ್ಮನ್ನು ಪ್ರೀತಿಸಿ, ಸಂರಕ್ಷಿಸಬೇಕಾದ ವ್ಯಕ್ತಿಗಳೇ ನಿಮಗೆ ಅನ್ಯಾಯವನ್ನು ಮಾಡುವಾಗ, ಅದು ಮನಸ್ಸಿಗೆ ಬಹಳ ನೋವನ್ನುಂಟುಮಾಡುತ್ತದೆ. ಸೂಸಾನಾ ಎಂಬ ಹೆಸರಿನ 17 ವರ್ಷ ಪ್ರಾಯದ ಹುಡುಗಿಯನ್ನು ತೆಗೆದುಕೊಳ್ಳಿ. ಅವಳ ತಾಯಿಯು, ಅವಳನ್ನು ಮತ್ತು ಅವಳ ಇಬ್ಬರು ತಮ್ಮಂದಿರನ್ನು ತೊರೆದುಬಿಟ್ಟಿದ್ದರು. “ಎಷ್ಟೊ ವರ್ಷಗಳು ಸಂದುಹೋಗಿವೆ, ಆದರೆ ನನ್ನ ತಾಯಿ ನಾನಿರುವ ಪಟ್ಟಣದಲ್ಲೇ ವಾಸಿಸುತ್ತಿರುವುದಾದರೂ, ತಮ್ಮೊಂದಿಗೆ ಬಂದು ವಾಸಿಸುವಂತೆ ನನ್ನನ್ನು ಒಮ್ಮೆಯೂ ಕೇಳಿಕೊಂಡಿಲ್ಲ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಸಹ ಅವರು ಒಮ್ಮೆಯೂ ಹೇಳಿಲ್ಲ. ಇದರಿಂದಲೇ ನಾನು ಯಾವಾಗಲೂ ಸಿಡಿಮಿಡಿಗೊಳ್ಳುತ್ತೇನೆ ಮತ್ತು ಈಗಲೂ ನೆನಸಿಕೊಳ್ಳುವಾಗ ಸಿಟ್ಟುಬರುತ್ತದೆ.” ಇಂತಹ ದುರುಪಚಾರಕ್ಕೆ ನೀವು ಗುರಿಯಾಗಿರುವಾಗ, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡುವುದು ತುಂಬ ಕಷ್ಟಕರವಾಗಿರಬಹುದು. ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವಳೊಬ್ಬಳು ಹೇಳುವುದು: “ಇದರಿಂದಾಗಿ ನನಗೆ ದೇವರ ಕುರಿತೂ ಕೆಟ್ಟ ಭಾವನಗೆಳು ಮೂಡಿವೆ.”
ನೀವು ದುರುಪಚಾರಕ್ಕೊಳಗಾಗುವಾಗ ಮನನೊಂದವರಾಗಿ, ಕುಪಿತರಾಗುವುದು ಸಹಜವೇ. ಬೈಬಲ್ ಹೇಳುವುದು: “ಕೇವಲ ದಬ್ಬಾಳಿಕೆಯು, ಒಬ್ಬ ವಿವೇಕಿಯು ಹುಚ್ಚನ ಹಾಗೆ ವರ್ತಿಸುವಂತೆ ಮಾಡಬಹುದು.” (ಪ್ರಸಂಗಿ 7:7, NW) ಜೀವಿತದಲ್ಲಿ ಪ್ರತಿ ದಿನವೂ ಅನ್ಯಾಯವನ್ನು ಸಹಿಸುತ್ತಾ ಇರುವುದು ಕೂಡ ನಿಮ್ಮನ್ನು ಖಿನ್ನರನ್ನಾಗಿಸಬಹುದು. (ಕೀರ್ತನೆ 43:2ನ್ನು ಹೋಲಿಸಿ.) ಆದುದರಿಂದ ಅನ್ಯಾಯದ ಅಂತ್ಯಕ್ಕಾಗಿ ನೀವು ಹಾತೊರೆಯುತ್ತಿರಬಹುದು. ಮಧ್ಯ ಅಮೆರಿಕದಲ್ಲಿ ಒಬ್ಬ ಯುವತಿಯು ಜ್ಞಾಪಿಸಿಕೊಳ್ಳುವುದು: “13ನೆಯ ವಯಸ್ಸಿನಲ್ಲಿ, ನಾನು ವಿದ್ಯಾರ್ಥಿ ಚಳವಳಿಯನ್ನು ಸೇರಿಕೊಂಡೆ. ಮಕ್ಕಳು ಹಸಿವಿನಿಂದ ಇರದಂತೆ ಸುಧಾರಣೆಗಳನ್ನು ಮಾಡಲು ನಾನೂ ನನ್ನ ಕೈಲಾದ ಸಹಾಯಮಾಡಬೇಕೆಂಬ ಕನಸು ನನಗಿತ್ತು. . . . ತದನಂತರ ನಾನು ಶಸ್ತ್ರಸಜ್ಜಿತ ಹೋರಾಟದಲ್ಲಿ ಸೇರಿಕೊಂಡೆ.” ಆದರೆ ನ್ಯಾಯವನ್ನು ಕಂಡುಕೊಳ್ಳುವ ಬದಲಿಗೆ, ತನ್ನ ಜೊತೆ ಸೈನಿಕರಿಂದಲೇ ಅವಳು ಹೇಳಲಸಾಧ್ಯವಾದಷ್ಟು ಕೀಳಾದ ದೌರ್ಜನ್ಯವನ್ನು ಅನುಭವಿಸಿದಳು.
ಹೆಚ್ಚಿನ ಜನರು ತಮ್ಮ ಸ್ಥಿತಿಗತಿಯನ್ನು ಸುಧಾರಿಸಲು ನಿಸ್ಸಹಾಯಕರಾಗಿದ್ದಾರೆಂಬುದನ್ನು ಇಂತಹ ಸನ್ನಿವೇಶಗಳು ನಮಗೆ ಮನದಟ್ಟುಮಾಡುತ್ತವೆ. ಹೀಗಿರುವಾಗ, ಅನ್ಯಾಯಕ್ಕೆ ಗುರಿಯಾದವರು ಅದನ್ನು ಹೇಗೆ ಸಹಿಸಬಲ್ಲರು?a ನಿಮಗಾಗುವ ಕಹಿಭಾವನೆ ಮತ್ತು ಕೋಪವನ್ನು ನೀವು ಹೇಗೆ ನಿಯಂತ್ರಿಸಬಲ್ಲಿರಿ?
ಕಹಿಭಾವನೆ ಮತ್ತು ಕೋಪವನ್ನು ತೆಗೆದುಹಾಕುವುದು
ನಾವು ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ನೀವು ಆಗಿಂದಾಗ್ಗೆ ಜ್ಞಾಪಿಸಿಕೊಳ್ಳಬೇಕಾಗಬಹುದು. ಇಂದು ಜನರು, “ದೂಷಕರು, . . . ಪ್ರೀತಿಯಿಲ್ಲದವರು, ಕ್ಷಮಿಸದವರು, ನಿಂದಿಸುವವರು, ಸ್ವ-ನಿಯಂತ್ರಣವಿಲ್ಲದವರು, ಕ್ರೂರರು, ಒಳ್ಳೆಯದನ್ನು ಪ್ರೀತಿಸದವರು, ವಂಚಕರು” ಆಗಿರುವರೆಂದು ಬೈಬಲ್ ಮುಂತಿಳಿಸಿತು. (2 ತಿಮೊಥೆಯ 3:1-4, ನ್ಯೂ ಇಂಟರ್ನ್ಯಾಷನಲ್ ವರ್ಷನ್) ಅನೇಕರು “ಸಕಲ ನೈತಿಕ ಪ್ರಜ್ಞೆಯ ಮೇರೆಯನ್ನು ದಾಟಿ”ದ್ದಾರೆ. (ಎಫೆಸ 4:19, NW) ಈ ಕಾರಣದಿಂದ, ಅನ್ಯಾಯವು ಜೀವಿತದ ತಪ್ಪಿಸಿಕೊಳ್ಳಲಾರದ ಒಂದು ವಾಸ್ತವಾಂಶವಾಗಿ ಬಿಟ್ಟಿದೆ. ಆದುದರಿಂದ “ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ.”—ಪ್ರಸಂಗಿ 5:8.
ಸಕಾರಣದಿಂದಲೇ, ಕಹಿಭಾವನೆಯು ನಿಮ್ಮನ್ನು ಆವರಿಸಲು ಬಿಡದಂತೆ ಬೈಬಲು ಎಚ್ಚರಿಸುತ್ತದೆ. ಉದಾಹರಣೆಗಾಗಿ ಅದು ಹೇಳುವುದು: “ನಿಮ್ಮಿಂದ ಎಲ್ಲ ದ್ವೇಷಭರಿತ ಕಟುಭಾವ ಮತ್ತು ಕೋಪ ಮತ್ತು ಕ್ರೋಧ . . . ತೆಗೆದುಹಾಕಲ್ಪಡಲಿ.” (ಎಫೆಸ 4:31, NW) ಏಕೆ? ಏಕೆಂದರೆ ದೀರ್ಘ ಕಾಲಾವಧಿಯ ವರೆಗೆ ಕಹಿಭಾವದೊಂದಿಗೆ ಕುಪಿತರಾಗಿರುವುದು, ಹಾನಿಕರವೂ ಸ್ವ-ವಿನಾಶಕಾರಿಯೂ ಆಗಿದೆ. (ಹೋಲಿಸಿ ಜ್ಞಾನೋಕ್ತಿ 14:30; ಎಫೆಸ 4:26, 27.) ನೀವು “ಯೆಹೋವನ ವಿರುದ್ಧ ಕೋಪ”ಗೊಂಡಿರುವಲ್ಲಿ, ಇದು ವಿಶೇಷವಾಗಿ ಸತ್ಯವಾಗಿದೆ. (ಜ್ಞಾನೋಕ್ತಿ 19:3, NW) ದೇವರ ಮೇಲೆ ಕೋಪಿಸಿಕೊಳ್ಳುವ ಮೂಲಕ, ನಿಮಗೆ ಅತಿ ಹೆಚ್ಚಿನ ಸಹಾಯವನ್ನು ಕೊಡಬಲ್ಲ ವ್ಯಕ್ತಿಯೊಂದಿಗಿನ ಸಂಬಂಧವನ್ನೇ ನೀವು ಹಾಳುಮಾಡಿಕೊಳ್ಳುತ್ತಿದ್ದೀರಿ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂದು ಬೈಬಲ್ ಹೇಳುತ್ತದೆ.—2 ಪೂರ್ವಕಾಲವೃತ್ತಾಂತ 16:9.
ಯೆಹೋವನ ಕುರಿತಾಗಿ ಬೈಬಲ್ ಹೀಗೂ ಹೇಳುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಆದಾಮಹವ್ವರ ದಂಗೆಯಿಂದಾಗಿ ಅನ್ಯಾಯವು ಆರಂಭವಾಯಿತು. (ಪ್ರಸಂಗಿ 7:29) ದೇವರಲ್ಲ, ಮನುಷ್ಯನೇ “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.” (ಪ್ರಸಂಗಿ 8:9) “ಲೋಕವೆಲ್ಲವು ಕೆಡುಕನ,” ಅಂದರೆ ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ” ಎಂಬುದನ್ನೂ ನೆನಪಿನಲ್ಲಿಡಿ. (1 ಯೋಹಾನ 5:19) ಯೆಹೋವನಲ್ಲ, ಸೈತಾನನೇ ಈ ಲೋಕದ ಅನ್ಯಾಯಗಳಿಗೆ ಕಾರಣನಾಗಿದ್ದಾನೆ.
ಅನ್ಯಾಯಕ್ಕೆ ಅಂತ್ಯ
ಸಂತೋಷಕರವಾದ ಸಂಗತಿಯೇನೆಂದರೆ, ಅನ್ಯಾಯವು ಸದಾಕಾಲ ಮುಂದುವರಿಯದು. ಈ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅದನ್ನು ಸಹಿಸಿಕೊಳ್ಳಲು ಸಹಾಯವಾಗುವುದು. ಬೈಬಲ್ ಸಮಯಗಳಲ್ಲಿ ಜೀವಿಸುತ್ತಿದ್ದ ಆಸಾಫನೆಂಬ ವ್ಯಕ್ತಿಯ ಅನುಭವವನ್ನು ಪರಿಗಣಿಸಿರಿ. ಯೆಹೋವನನ್ನು ಸೇವಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಜನರ ನಡುವೆ ಅವನು ವಾಸಿಸುತ್ತಿದ್ದರೂ, ಅವನ ಸುತ್ತಲೂ ಅನ್ಯಾಯವು ನಡೆಯುತ್ತಾ ಇತ್ತು. ಇತರರನ್ನು ದುರುಪಚರಿಸಿದಕ್ಕಾಗಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ, ಈ ಕ್ರೂರ ಜನರು ಯಾವುದೇ ತೊಂದರೆ ಇಲ್ಲದೆ ಐಷಾರಾಮದ ಜೀವಿತಗಳನ್ನು ನಡಿಸುತ್ತಿರುವಂತೆ ತೋರುತ್ತಿತ್ತು! ಆಸಾಫನು ಒಪ್ಪಿಕೊಂಡದ್ದು: “ನಾನು ದುಷ್ಟರ ಸೌಭಾಗ್ಯವನ್ನು ಕಂಡು . . . ಉರಿಗೊಂಡೆನು.” ಇಂತಹ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವ ಮೂಲಕ ಆಸಾಫನು ಸ್ವಲ್ಪ ಸಮಯಕ್ಕಾಗಿ ತನ್ನ ಸಮತೋಲನವನ್ನು ಕಳೆದುಕೊಂಡನು.—ಕೀರ್ತನೆ 73:1-12.
ಸಮಯಾನಂತರ, ಒಂದು ಗಮನಾರ್ಹವಾದ ವಿಷಯವು ಆಸಾಫನ ಅರಿವಿಗೆ ಬಂತು. ದುಷ್ಟರ ಕುರಿತಾಗಿ ಅವನು ಹೀಗಂದನು: “ನೀನು [ದೇವರು] ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು ಬೀಳಿಸಿ ನಾಶಮಾಡಿಬಿಡುತ್ತೀ.” (ಕೀರ್ತನೆ 73:16-19) ಹೌದು, ಜನರು ದುಷ್ಟತನವನ್ನು ಮಾಡಿ ಕಟ್ಟಕಡೆಗೆ ತಪ್ಪಿಸಿಕೊಳ್ಳಲಾರರೆಂಬುದನ್ನು ಆಸಾಫನು ಅರಿತುಕೊಂಡನು. ಅನೇಕವೇಳೆ ಅವರು ಮಾಡಿದ ದುಷ್ಕೃತ್ಯಗಳೇ ಅವರನ್ನು ಬೆಂಬತ್ತಿ ಬರುತ್ತವೆ ಮತ್ತು ಅವರನ್ನು ಸೆರೆಮನೆಗೆ ಹಾಕಲಾಗುತ್ತದೆ, ಅವರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ, ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಅಥವಾ ಅಧಿಕಾರದ ಸ್ಥಾನಗಳಿಂದ ಉಚ್ಚಾಟಿಸಲ್ಪಡುತ್ತಾರೆ. ಕೊನೆಯಲ್ಲಿ, ದೇವರು ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ದುಷ್ಟರು ‘ನಾಶವಾಗುವರು.’—ಕೀರ್ತನೆ 10:15, 17, 18; 37:9-11.
ನಿಕಟ ಭವಿಷ್ಯತ್ತಿನಲ್ಲಿ ದೇವರು ವಿಷಯಗಳನ್ನು ಸರಿಪಡಿಸುವನು ಎಂಬುದನ್ನು ತಿಳಿದುಕೊಳ್ಳುವುದು, ನಿಮ್ಮ ಕೋಪ ಮತ್ತು ಹತಾಶೆಯನ್ನು ನಿಯಂತ್ರಿಸಲು ಸಹಾಯಮಾಡಬಲ್ಲದು. “ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆಂಬದಾಗಿ ಬರೆದದೆ.”—ರೋಮಾಪುರ 12:17-19; ಹೋಲಿಸಿ 1 ಪೇತ್ರ 2:23.
ಸಹಾಯ ಮತ್ತು ಬೆಂಬಲವನ್ನು ಪಡೆದುಕೊಳ್ಳುವುದು
ಆದರೆ ಕಹಿನೆನಪುಗಳಂತಹ ಆಳವಾದ ಭಾವನಾತ್ಮಕ ಗಾಯದ ಕಲೆಗಳು ನಿಮ್ಮಲ್ಲಿರಬಹುದು. ಯೂನಿಸೆಫ್ನ ಒಂದು ವರದಿಗನುಸಾರ, “ನಿರಂತರವಾಗಿ ಹಿಂಸಾಚಾರಕ್ಕೆ ಒಡ್ಡಲ್ಪಟ್ಟಿರುವ ಮಕ್ಕಳಲ್ಲಿ ನಂಬಿಕೆಗಳು ಮತ್ತು ಮನೋಭಾವಗಳು ಬಹುಮಟ್ಟಿಗೆ ಯಾವಾಗಲೂ ಗಮನಾರ್ಹವಾಗಿ ಬದಲಾಗುತ್ತಿರುತ್ತವೆ. ಇದರಲ್ಲಿ, ಇತರರಲ್ಲಿ ಮೂಲಭೂತವಾದ ಭರವಸೆಯ ನಷ್ಟವು ಒಳಗೂಡಿದೆ. ನೆರೆಹೊರೆಯವರು ಅಥವಾ ಸ್ನೇಹಿತರೆಂದು ಪರಿಗಣಿಸಲ್ಪಟ್ಟವರಿಂದಲೇ ಆಕ್ರಮಣಕ್ಕೊಳಗಾಗಿರುವ ಅಥವಾ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿರುತ್ತದೆ.”
ಇಂತಹ ಸಮಸ್ಯೆಗಳಿಗೆ ಯಾವುದೇ ಸುಲಭ ಪರಿಹಾರವಿಲ್ಲ. ಆದರೆ ನಕಾರಾತ್ಮಕ ಭಾವನೆಗಳು ಅಥವಾ ವೇದನಾಭರಿತ ನೆನಪುಗಳು ನಿಮ್ಮನ್ನು ಯಾವಾಗಲೂ ಕಿತ್ತುತಿನ್ನುತ್ತಿರುವಲ್ಲಿ, ನಿಮಗೆ ಸಹಾಯದ ಅಗತ್ಯವಿರಬಹುದು. (ಕೀರ್ತನೆ 119:133ನ್ನು ಹೋಲಿಸಿ.) ಪ್ರಥಮವಾಗಿ, ನೀವು ಅನುಭವಿಸಿರುವ ಸಮಸ್ಯೆಗಳನ್ನೇ ನಿರ್ದಿಷ್ಟವಾಗಿ ಚರ್ಚಿಸುವ ವಿಷಯವನ್ನು ನೀವು ಓದಬಹುದು. ಉದಾಹರಣೆಗಾಗಿ ಎಚ್ಚರ! ಪತ್ರಿಕೆಯು, ಬಲತ್ಕಾರಸಂಭೋಗ, ಕಳ್ಳತನ, ಮತ್ತು ಮಕ್ಕಳ ದೌರ್ಜನ್ಯಕ್ಕೊಳಗಾಗಿರುವವರಿಗೆ ಪ್ರಾಯೋಗಿಕ ಸಲಹೆಯನ್ನು ಕೊಡುವ ಅನೇಕಾನೇಕ ಲೇಖನಗಳನ್ನು ಪ್ರಕಾಶಿಸಿದೆ. ಒಬ್ಬ ಪ್ರೌಢ, ಸಹಾನುಭೂತಿಯಿಂದ ಕಿವಿಗೊಡುವ ವ್ಯಕ್ತಿಗೆ ನಿಮ್ಮ ಚಿಂತೆಗಳನ್ನು ಮತ್ತು ಅನಿಸಿಕೆಗಳ ಬಗ್ಗೆ ಮನಬಿಚ್ಚಿ ಮಾತನಾಡುವುದರಿಂದ ನಿಮಗೆ ಬಹಳ ಸಹಾಯವಾಗಬಹುದು. (ಜ್ಞಾನೋಕ್ತಿ 12:25) ನೀವು ನಿಮ್ಮ ಹೆತ್ತವರಲ್ಲೇ ಅಂತರಂಗವನ್ನು ತೋಡಿಕೊಳ್ಳಬಹುದು.
ಆದರೆ ಹೆತ್ತವರ ಬೆಂಬಲವು ದೊರೆಯಲು ಸಾಧ್ಯವಿರದಿರುವಲ್ಲಿ ಆಗೇನು? ಕ್ರೈಸ್ತ ಸಭೆಯಿಂದ ಬೆಂಬಲವನ್ನು ಪಡೆದುಕೊಳ್ಳಿ. ಯೆಹೋವನ ಸಾಕ್ಷಿಗಳ ನಡುವೆ, ಸಭಾ ಹಿರಿಯರು, ಕಷ್ಟಾನುಭವಿಸುವವರಿಗಾಗಿ ಒಂದು ಆಶ್ರಯದಂತಿದ್ದಾರೆ. (ಯೆಶಾಯ 32:1, 2) ಅವರು ನಿಮಗೆ ಕಿವಿಗೊಡುವರು ಮಾತ್ರವಲ್ಲ, ಪ್ರಾಯೋಗಿಕ ಬುದ್ಧಿವಾದವನ್ನೂ ಕೊಡಬಹುದು. ಮತ್ತು ಇತರ ಪ್ರೌಢ ಕ್ರೈಸ್ತರು, ನಿಮಗೆ ‘ಅಣ್ಣ, ತಂಗಿ, ತಾಯಿ’ಯಾಗಬಲ್ಲರೆಂಬುದನ್ನೂ ಮರೆಯಬೇಡಿರಿ. (ಮಾರ್ಕ 10:29, 30) ತಾಯಿಯಿಂದ ತೊರೆಯಲ್ಪಟ್ಟಿದ್ದ ಸೂಸಾನಾಳನ್ನು ನೀವು ಜ್ಞಾಪಕ ಮಾಡಿಕೊಳ್ಳಬಲ್ಲಿರೊ? ಅವಳಿಗೆ ಮತ್ತು ಅವಳ ತಮ್ಮಂದಿರಿಗೆ ಕ್ರೈಸ್ತ ಸಭೆಯಿಂದ ಬೆಂಬಲವು ಸಿಕ್ಕಿತು. ಒಬ್ಬ ಕ್ರೈಸ್ತ ಶುಶ್ರೂಷಕನು ಸೂಸಾನಾಳ ಕುಟುಂಬದಲ್ಲಿ ಎಷ್ಟೊಂದು ಆಸಕ್ತಿ ವಹಿಸಿದನೆಂದರೆ, ಅವಳು ಅವನನ್ನು ತನ್ನ ದತ್ತು ತಂದೆಯೆಂದು ಕರೆಯುತ್ತಾಳೆ. ಅಂತಹ ಬೆಂಬಲವೇ, “ತಮಗೆ ಪ್ರೌಢರಾಗಲು ಮತ್ತು ಸತ್ಯದಲ್ಲಿ ದೃಢವಾಗಿ ನಿಲ್ಲಲು ಸಹಾಯಮಾಡಿದೆ” ಎಂದು ಸೂಸಾನಾಳು ಹೇಳುತ್ತಾಳೆ.
ಅರ್ಥಪೂರ್ಣ ಚಟುವಟಿಕೆಗಳ ಒಂದು ದಿನಚರಿಯನ್ನು ಕಾಪಾಡಿಕೊಂಡುಹೋಗುವುದು ತುಂಬ ಸಹಾಯಕಾರಿಯಾಗಿರಬಲ್ಲದು. ಶಾಲೆಗೆ ಹೋಗುವುದು ಮತ್ತು ಮನೆಗೆಲಸಗಳನ್ನು ಮಾಡುವುದು, ಇವು ನಿಮ್ಮ ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ತುಂಬ ಸಹಾಯಮಾಡಬಲ್ಲವು. ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಸುವಾರ್ತೆಯನ್ನು ಸಾರುವುದರಂತಹ ಆತ್ಮಿಕ ಚಟುವಟಿಕೆಗಳ ದಿನಚರಿಯನ್ನು ಅನುಸರಿಸುವುದರಿಂದ ನೀವು ವಿಶೇಷವಾಗಿ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ.—ಫಿಲಿಪ್ಪಿ 3:16.
ದೇವರ ರಾಜ್ಯವು ಭೂವ್ಯಾಪಕವಾಗಿ ದೇವರ ಚಿತ್ತವನ್ನು ನೆರವೇರಿಸುವ ವರೆಗೂ, ಈ ಭೂಮಿಯಿಂದ ಅನ್ಯಾಯವು ತೊಲಗಿಹೋಗದು. (ದಾನಿಯೇಲ 2:44; ಮತ್ತಾಯ 6:9, 10) ಅಷ್ಟರ ವರೆಗೆ, ಅದನ್ನು ಸಹಿಸಲು ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಿರಿ. ದೇವರ ರಾಜ್ಯದ ಅಧಿಪತಿಯೋಪಾದಿ ಯೇಸು ಕ್ರಿಸ್ತನು, “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು” ಎಂಬ ವಾಗ್ದಾನದಿಂದ ನಿಮ್ಮನ್ನು ಪೋಷಿಸಿಕೊಳ್ಳಿರಿ.—ಕೀರ್ತನೆ 72:12, 13.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನವು, ಯುವ ಜನರು ಬಡ ದೇಶಗಳಲ್ಲಿ ಅನುಭವಿಸಬಹುದಾದಂತಹ ಅನ್ಯಾಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದಾದರೂ, ಇದರಲ್ಲಿ ಚರ್ಚಿಸಲ್ಪಟ್ಟಿರುವ ಮೂಲತತ್ವಗಳು, ಒಬ್ಬ ವ್ಯಕ್ತಿಯು ಅನುಭವಿಸಬಹುದಾದ ಯಾವುದೇ ರೀತಿಯ ಅನ್ಯಾಯಕ್ಕೆ ಅನ್ವಯಿಸುತ್ತವೆ.
[ಪುಟ 16 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಇದರಿಂದಾಗಿ ನನಗೆ ದೇವರ ಕುರಿತೂ ಕೆಟ್ಟ ಭಾವನಗೆಳು ಮೂಡಿವೆ”
[ಪುಟ 17 ರಲ್ಲಿರುವ ಚಿತ್ರ]
ಜೊತೆ ಕ್ರೈಸ್ತರ ಬೆಂಬಲವು ನಿಮಗೆ ಅನ್ಯಾಯವನ್ನು ಸಹಿಸಲು ಸಹಾಯಮಾಡಬಲ್ಲದು