ಬೈಬಲಿನ ದೃಷ್ಟಿಕೋನ
ವಿವಾಹ ಸಂಗಾತಿಯನ್ನು ಆಯ್ಕೆಮಾಡುವಾಗ
“ನಿನ್ನ ಮದುವೆಯ ಕುರಿತು ನೀನು ಎಂದಾದರೂ ಯೋಚಿಸುವುದುಂಟೋ?” ಎಂದು ಒಬ್ಬ ಅವಿವಾಹಿತ ಯುವತಿಯನ್ನು ಕೇಳಿದಾಗ, “ಯೋಚಿಸುವುದೇ? ನಾನು ಅದರ ಕುರಿತು ತುಂಬ ಚಿಂತಿತಳಾಗಿದ್ದೇನೆ” ಎಂದು ಆಕೆ ತಕ್ಷಣವೇ ಉತ್ತರಿಸಿಬಿಟ್ಟಳು.
ಈ ಯುವತಿಯ ಚುಟುಕಾದ ಹೇಳಿಕೆಯಲ್ಲಿ, ಪ್ರೀತಿ ಮತ್ತು ಸಂಗಾತಿಗಾಗಿರುವ ತವಕವು ಕೆಲವರಲ್ಲಿ ಎಷ್ಟೊಂದು ತೀವ್ರವಾಗಿದೆ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅನೇಕರು, ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದು, ಜೀವನದ ಅತ್ಯಂತ ಪ್ರಾಮುಖ್ಯ ವಿಷಯಗಳಲ್ಲಿ ಒಂದಾಗಿ ಪರಿಗಣಿಸುತ್ತಾರೆ. ಆದ್ದರಿಂದ, ಯೋಗ್ಯ ವಿವಾಹ ಸಂಗಾತಿಯನ್ನು ಅನ್ವೇಷಿಸಲು ಲೋಕದಾದ್ಯಂತ ಜನರಿಗೆ ಸಹಾಯಮಾಡುವುದಕ್ಕಾಗಿ ರಚಿಸಲ್ಪಟ್ಟಿರುವ ಸೇವಾಸಂಸ್ಥೆಗಳು ದಿನಬೆಳಗಾದರೆ ಹುಟ್ಟಿಕೊಳ್ಳುತ್ತಿವೆ. ಹೀಗಿದ್ದರೂ, ಲೋಕದ ಅನೇಕ ಸ್ಥಳಗಳಲ್ಲಿ ಯಶಸ್ವಿಕರವಾದ ವಿವಾಹಗಳಿಗಿಂತ ವಿಫಲಗೊಳ್ಳುವ ವಿವಾಹಗಳ ಸಂಖ್ಯೆಯೇ ಹೆಚ್ಚಾಗಿದೆ.
ಪಾಶ್ಚಾತ್ಯ ದೇಶಗಳಲ್ಲಿ ಜನರು ತಮ್ಮ ವಿವಾಹ ಸಂಗಾತಿಗಳನ್ನು ತಾವೇ ಆಯ್ಕೆಮಾಡಿಕೊಳ್ಳುವುದು ಸರ್ವಸಾಮಾನ್ಯವಾದ ವಿಷಯ. ಆದರೆ ಇನ್ನೊಂದು ಕಡೆಯಲ್ಲಿ, ಏಷ್ಯಾ ಮತ್ತು ಆಫ್ರಿಕ ದೇಶಗಳಲ್ಲಿ ಹೆತ್ತವರೇ ನೋಡಿ ಮಾಡುವ ಮದುವೆಗಳ ಪದ್ಧತಿಯು ಇಂದಿಗೂ ಜಾರಿಯಲ್ಲಿದೆ. ಪದ್ಧತಿ ಯಾವುದೇ ಇರಲಿ, ವಿವಾಹದ ಕಾರ್ಯಗತಿಯು ಹಗುರವಾಗಿ ಎಣಿಸಲ್ಪಡುವ ಒಂದು ವಿಷಯವಾಗಿರಬಾರದು. ಇದು ಒಂದು ಗಂಭೀರ ವಿಷಯವಾಗಿದೆ. ಏಕೆಂದರೆ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಮಾಡುವ ಇತರ ಕೆಲವೇ ನಿರ್ಧಾರಗಳಿಗೆ, ಸಂತೋಷ ಇಲ್ಲವೇ ದುಃಖವನ್ನು ಬರಮಾಡುವ ಸಾಮರ್ಥ್ಯವಿದೆ. ಪ್ರೀತಿಯು ತುಂಬಿರುವ ಒಂದು ವಿವಾಹವು ಹೆಚ್ಚು ಪುಷ್ಟಿಗೊಳಿಸುವಂಥದ್ದೂ ಮತ್ತು ಸಾರ್ಥಕವೂ ಆಗಿರಬಲ್ಲದು. ಇದಕ್ಕೆ ವ್ಯತಿರಿಕ್ತವಾಗಿ, ಯಾವಾಗಲೂ ಜಗಳವಾಡುವ ವಿವಾಹ ಜೋಡಿಯ ಜೀವನವು ಸತತವಾದ ಮಾನಸಿಕ ವೇದನೆಗೂ ಒತ್ತಡಕ್ಕೂ ಕಾರಣವಾಗಿರಬಲ್ಲದು.—ಜ್ಞಾನೋಕ್ತಿ 21:19; 26:21.
ಇತರರಂತೆ, ತಮ್ಮ ವಿವಾಹ ಬಂಧವು ಹರ್ಷವನ್ನು ಮತ್ತು ತೃಪ್ತಿಯನ್ನು ತರುವಂತೆ ನಿಜ ಕ್ರೈಸ್ತರು ಆಶಿಸುತ್ತಾರೆ. ಆದರೆ, ಅವರು ತಮ್ಮ ದೇವರನ್ನು ಮೆಚ್ಚಿಸಲು ಮತ್ತು ಗೌರವಿಸಲು ಸಹ ಬಯಸುತ್ತಾರೆ. (ಕೊಲೊಸ್ಸೆ 3:23) ಸೃಷ್ಟಿಕರ್ತನೂ, ವಿವಾಹದ ಮೂಲಕರ್ತನೂ ಆಗಿರುವ ದೇವರಿಗೆ ನಮ್ಮ ನಿಜ ಅಗತ್ಯಗಳೇನು ಹಾಗೂ ನಮಗೆ ಉತ್ತಮವಾದುದು ಯಾವುದೆಂದು ಸಂಪೂರ್ಣವಾಗಿ ತಿಳಿದಿದೆ. (ಆದಿಕಾಂಡ 2:22-24; ಯೆಶಾಯ 48:17-19) ಅದಲ್ಲದೆ, ಮಾನವನ ಅಸ್ತಿತ್ವದ ಸಹಸ್ರಾರು ವರ್ಷಗಳಲ್ಲಿ ಉತ್ತಮ ಹಾಗೂ ಕಳಪೆಯಾದಂತಹ ಕೋಟ್ಯನುಕೋಟಿ ವಿವಾಹಗಳಿಗೆ ಆತನು ಸಾಕ್ಷಿಯಾಗಿದ್ದಾನೆ. ಯಾವ ವಿವಾಹವು ಯಶಸ್ವಿಯಾಗುವುದು ಮತ್ತು ಯಾವುದು ಆಗದೆಂದು ಆತನು ಚೆನ್ನಾಗಿ ಬಲ್ಲವನಾಗಿದ್ದಾನೆ. (ಕೀರ್ತನೆ 32:8) ತನ್ನ ವಾಕ್ಯವಾದ ಬೈಬಲಿನ ಮೂಲಕ, ಯಾವ ಕ್ರೈಸ್ತನೂ ಮಾಡಬಹುದಾದ ಬುದ್ಧಿವಂತಿಕೆಯ ಆಯ್ಕೆಗಳನ್ನು, ಸ್ಪಷ್ಟವಾದ ಹಾಗೂ ನಿರ್ದಿಷ್ಟವಾದ ಮೂಲತತ್ವಗಳನ್ನು ಆತನು ನೀಡುತ್ತಾನೆ. ಆ ಮೂಲತತ್ವಗಳಲ್ಲಿ ಕೆಲವು ಯಾವುವು?
ಕೇವಲ ರೂಪಕ್ಕೆ ಮರುಳಾಗದಿರಿ
ವ್ಯಕ್ತಿಗಳು ತಾವು ಮದುವೆಯಾಗಲು ಇಷ್ಟಪಡುವವರನ್ನು ತಾವೇ ಆಯ್ಕೆಮಾಡಿಕೊಳ್ಳಲು ಸ್ವಾತಂತ್ರವಿರುವ ಸ್ಥಳಗಳಲ್ಲಿ, ಸಂಭಾವ್ಯ ಸಂಗಾತಿಗಳು ಆಕಸ್ಮಿಕವಾಗಿ ಭೇಟಿಯಾಗಬಹುದು, ಇಲ್ಲವೆ ಸ್ನೇಹಿತರಿಂದಲೋ ಅಥವಾ ಕುಟುಂಬದವರಿಂದಲೋ ಪರಿಚಯಿಸಲ್ಪಡಬಹುದು. ಅನೇಕವೇಳೆ, ಪ್ರಣಯಾಸಕ್ತಿಯ ಕಿಡಿಯು ಶಾರೀರಿಕ ಆಕರ್ಷಣೆಯಿಂದ ಹೊತ್ತಿಕೊಳ್ಳಲು ಆರಂಭಿಸುತ್ತದೆ. ನಿಸ್ಸಂದೇಹವಾಗಿಯೂ, ಇದು ಸ್ವಾಭಾವಿಕವೂ ಶಕ್ತಿಶಾಲಿಯೂ ಆದ ಪ್ರೇರಕವಾಗಿದೆಯಾದರೂ, ಮದುವೆಯಾಗಲು ಉದ್ದೇಶಿಸುತ್ತಿರುವವರು ಕೇವಲ ರೂಪಕ್ಕೆ ಮಾತ್ರ ಮರುಳಾಗದೆ ಅದಕ್ಕಿಂತಲೂ ಹೆಚ್ಚಿನದ್ದನ್ನು ನೋಡುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ.
“ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು,” ಎಂದು ಜ್ಞಾನೋಕ್ತಿ 31:30 ಹೇಳುತ್ತದೆ. ಅಪೊಸ್ತಲ ಪೇತ್ರನು ಹೇಳಿದ್ದು, “ಸಾತ್ವಿಕವಾದ ಶಾಂತಮನಸ್ಸು . . . ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.” (1 ಪೇತ್ರ 3:4) ಹೌದು, ಭಾವಿ ಸಂಗಾತಿಯ ಆತ್ಮಿಕ ಗುಣಗಳು ಅಂದರೆ ದೇವರಿಗಾಗಿ ಆ ವ್ಯಕ್ತಿಯಲ್ಲಿರುವ ಭಯ-ಭಕ್ತಿ ಹಾಗೂ ಪ್ರೀತಿಯೊಂದಿಗೆ, ಅವನ ಇಲ್ಲವೇ ಅವಳ ಕ್ರೈಸ್ತ ವ್ಯಕ್ತಿತ್ವಕ್ಕಾಗಿರುವ ಒಲುಮೆಯು ಸೌಂದರ್ಯಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತವವಾದ ಆಯ್ಕೆಯನ್ನು ಮಾಡಲು ಸಮಯವನ್ನು ತೆಗೆದುಕೊಳ್ಳುವುದು ಅತ್ಯಾವಶ್ಯಕ. ಹೀಗೆ, ಒಂದೇ ರೀತಿಯ ಆತ್ಮಿಕ ಗುರಿಗಳನ್ನು ಹೊಂದಿರುವ ಹಾಗೂ ದೇವರಾತ್ಮದ ಫಲಗಳನ್ನು ಪ್ರದರ್ಶಿಸಲು ಸಾಹಸಮಾಡುತ್ತಿರುವ ವ್ಯಕ್ತಿಯನ್ನು ಆಯ್ಕೆಮಾಡುವುದು ಅಗತ್ಯ. ಇದು ವಿವಾಹ ಬಂಧಕ್ಕೊಳಗಾಗುವ ಹೊಸ ಜೋಡಿಗಳ ಸುಖಸಂಸಾರಕ್ಕೆ ಹೆಚ್ಚು ನೆರವಾಗುವುದು.—ಜ್ಞಾನೋಕ್ತಿ 19:2; ಗಲಾತ್ಯ 5:22, 23.
‘ಕರ್ತನಲ್ಲಿ ಮಾತ್ರ ವಿವಾಹವಾಗಬೇಕು’
ನೀವು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಒಂದೇ ರೀತಿಯ ಗುರಿಗಳು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ. ವಿವಾಹವು ವಾಸ್ತವದಲ್ಲಿ ಒಂದು ಪಂಥಾಹ್ವಾನವಾಗಿದೆ. ಏಕೆಂದರೆ ಇದು ಇಬ್ಬರು ವ್ಯಕ್ತಿಗಳಿಂದಲೂ ವರ್ತನೆ ಹಾಗೂ ಪ್ರವೃತ್ತಿಯಲ್ಲಿ ಅನೇಕ ಹೊಂದಾಣಿಕೆಗಳನ್ನು ಮಾಡುವಂತೆ ಅವಶ್ಯಪಡಿಸುತ್ತದೆ. ತರ್ಕಬದ್ಧವಾಗಿಯೇ, ಈಗಾಗಲೇ ನಿಮ್ಮ ಭಾವಿ ಸಂಗಾತಿಯೊಂದಿಗೆ ಹೆಚ್ಚೆಚ್ಚು ಒಮ್ಮತದಲ್ಲಿರುವ ಅಂಶಗಳನ್ನು ನೀವು ಹೊಂದಿರುವಲ್ಲಿ ಮುಂದೆ ಅವುಗಳೊಂದಿಗೆ ಹೊಂದಿಕೊಂಡು ಹೋಗಲು ಸುಲಭವಾಗಿರುತ್ತದೆ.
ಇದು, ‘ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗುವುದರಿಂದ’ ದೂರವಿರಿ ಎಂದು ಅಪೊಸ್ತಲ ಪೌಲನು ಕ್ರೈಸ್ತರನ್ನು ಏಕೆ ಎಚ್ಚರಿಸಿದನು ಎಂಬುದನ್ನು ತಿಳಿದುಕೊಳ್ಳಲು ಸಹಾಯಮಾಡುತ್ತದೆ. (2 ಕೊರಿಂಥ 6:14) ಒಂದೇ ರೀತಿಯ ನಂಬಿಕೆಯನ್ನು ಹಂಚಿಕೊಳ್ಳದ ಹಾಗೂ ಬೈಬಲ್ ತತ್ವಗಳನ್ನು ಅರ್ಥಮಾಡಿಕೊಂಡಿರದ ವ್ಯಕ್ತಿಯನ್ನು ಮದುವೆಯಾಗುವುದು, ಅಸಮ್ಮತಿ ಮತ್ತು ಕಲಹವನ್ನು ಉಂಟುಮಾಡುವುದು ಎಂದು ಪೌಲನಿಗೆ ತಿಳಿದಿತ್ತು. “ಕರ್ತನಲ್ಲಿ ಮಾತ್ರ ವಿವಾಹವಾಗಬೇಕು” ಎಂಬ ಬುದ್ಧಿವಾದವು ಯುಕ್ತವಾಗಿತ್ತು. (1 ಕೊರಿಂಥ 7:39, NW) ಇದು ದೇವರ ಆಲೋಚನೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ವಿವೇಕದಿಂದ ಅನುಸರಿಸುವವರು ಅನೇಕ ಗಂಭೀರವಾದ ತೊಡಕುಗಳಿಂದ ಮತ್ತು ಸಮಸ್ಯೆಗಳಿಂದ ದೂರವಿರುವರು.—ಜ್ಞಾನೋಕ್ತಿ 2:1, 9.
ಹೆತ್ತವರು ನೋಡಿ ಮಾಡುವ ವಿವಾಹಗಳು
ಹೆತ್ತವರು ನೋಡಿ ಮಾಡುವ ಮದುವೆಗಳು ಈಗಲೂ ರೂಢಿಯಲ್ಲಿರುವ ಸ್ಥಳಗಳ ಕುರಿತೇನು? ಉದಾಹರಣೆಗೆ, ದಕ್ಷಿಣ ಭಾರತದಲ್ಲಿ 80 ಪ್ರತಿಶತದಷ್ಟು ವಿವಾಹಗಳಲ್ಲಿ ಹೆಚ್ಚಿನವನ್ನು ಹೆತ್ತವರೇ ನೋಡಿ ಮಾಡುತ್ತಾರೆ ಎಂದು ಕೆಲವರು ಅಂದಾಜುಮಾಡಿದ್ದಾರೆ. ಈ ಪದ್ಧತಿಯನ್ನು ಕ್ರೈಸ್ತ ಹೆತ್ತವರು ಅನುಸರಿಸಬೇಕೋ ಬೇಡವೋ ಎಂಬುದು ವೈಯಕ್ತಿಕ ತೀರ್ಮಾನವಾಗಿದೆ. ಪದ್ಧತಿ ಏನೇ ಆಗಿರಲಿ, ಆತ್ಮಿಕ ವಿಷಯಗಳು ಪ್ರಧಾನವಾಗಿರುವಾಗ, ಈ ರೀತಿ ಏರ್ಪಡಿಸಲ್ಪಡುವ ವಿವಾಹಗಳು ಸಫಲವಾಗುವುದು ಖಂಡಿತ.
ಹೆತ್ತವರು ನೋಡಿ ಮಾಡುವ ವಿವಾಹಗಳನ್ನು ಸಮರ್ಥಿಸುವವರು, ಇದು ತೀರ್ಮಾನಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಅನುಭವಸ್ಥರ ಮತ್ತು ಪ್ರೌಢ ವ್ಯಕ್ತಿಗಳ ಕೈಗಳಲ್ಲಿ ಬಿಡಲಾಗುತ್ತದೆ ಎಂದು ನೆನಸುತ್ತಾರೆ. “ಕೆಲವು ಹೆತ್ತವರು ನೆನಸುವುದೇನೆಂದರೆ, ತಮ್ಮ ಮಕ್ಕಳು ವಯಸ್ಸಿನಲ್ಲೂ ಅನುಭವದಲ್ಲೂ ಕೊರತೆಯುಳ್ಳವರಾಗಿರುವುದರಿಂದ, ಭಾವಿ ಸಂಗಾತಿಯ ಆತ್ಮಿಕ ಪ್ರೌಢತೆಯನ್ನು ಅವರು ಸರಿಯಾಗಿ ತೀರ್ಮಾನಿಸುವರೆಂದು ನಂಬಸಾಧ್ಯವಿಲ್ಲ,” ಎಂದು ಆಫ್ರಿಕಾದ ಒಬ್ಬ ಕ್ರೈಸ್ತ ಹಿರಿಯನು ಗಮನಿಸುತ್ತಾನೆ. “ಯುವಜನರಿಗೆ ಜೀವನದ ಅನುಭವ ಸಾಕಷ್ಟಿಲ್ಲದಿರುವುದರಿಂದ ಅವರು ಭಾವಾವೇಶದಿಂದ ಕೆಲವೊಮ್ಮೆ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು,” ಎಂದು ಭಾರತದ ಒಬ್ಬ ಸಂಚರಣ ಸೇವಕನು ಕೂಡಿಸುತ್ತಾನೆ. ತಮ್ಮ ಮಕ್ಕಳ ನಡವಳಿಕೆಯ ಕುರಿತು ತಮಗೆ ತಿಳಿದಷ್ಟು ಇನ್ಯಾರಿಗೂ ಸರಿಯಾಗಿ ತಿಳಿದಿರುವುದಿಲ್ಲ ಎಂದು ಅರಿತವರಾಗಿರುವುದರಿಂದ, ತಮ್ಮ ಮಕ್ಕಳಿಗಾಗಿ ವಿವೇಕಯುತವಾಗಿ ಆಯ್ಕೆಮಾಡಲು ತಾವು ಅಪೂರ್ವವಾದ ಸ್ಥಾನದಲ್ಲಿದ್ದೇವೆಂದು ಹೆತ್ತವರು ನೆನಸುತ್ತಾರೆ. ಮದುವೆಯಾಗಲಿರುವ ಯುವಕ ಹಾಗೂ ಯುವತಿಯ ಅಭಿಪ್ರಾಯವನ್ನು ಅವರು ಪರಿಗಣಿಸುವಾಗಲೂ ವಿವೇಕವನ್ನು ತೋರಿಸುವರು.
ಆದರೆ, ಹೆತ್ತವರು ಬೈಬಲಿನ ತತ್ವಗಳನ್ನು ಅಲಕ್ಷಿಸುವಾಗ, ವಿವಾಹದ ನಂತರ ಸಮಸ್ಯೆಗಳು ಏಳುವಲ್ಲಿ ಅವರು ಪ್ರತಿಘಾತಗಳನ್ನು ಅನುಭವಿಸಬೇಕಾಗಬಹುದು. ಏಕೆಂದರೆ, ಅನೇಕವೇಳೆ ಭಾವಿ ವಿವಾಹ ಸಂಗಾತಿಗಳು ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಸರಿಯಾಗಿ ತಿಳಿದುಕೊಳ್ಳುವ ಅವಕಾಶ ಬಹಳ ಕಡಿಮೆಯಿರುವುದರಿಂದ ಸಮಸ್ಯೆಗಳು ಉದ್ಭವಿಸಬಹುದು. ಹೀಗೆ ಸಮಸ್ಯೆಗಳು ಏಳುವಾಗ, “ಅಪವಾದವನ್ನು ಹೆತ್ತವರ ಮೇಲೆ ಹಾಕುವುದು ಸಾಮಾನ್ಯ ಪ್ರವೃತ್ತಿಯಾಗಿದೆ,” ಎಂದು ಭಾರತದ ಒಬ್ಬ ಕ್ರೈಸ್ತ ತಂದೆ ಹೇಳುತ್ತಾನೆ.
ಮದುವೆಯನ್ನು ಏರ್ಪಾಡುಮಾಡುವ ಕ್ರೈಸ್ತ ಹೆತ್ತವರು ಯಾವ ಉದ್ದೇಶದಿಂದ ಅದನ್ನು ಮಾಡುತ್ತಿದ್ದೇವೆಂಬುದನ್ನು ಸಹ ಅವರು ಪರಿಗಣಿಸಬೇಕಾಗಿದೆ. ಭೌತಿಕ ಲಾಭದ ಗುರಿ ಅಥವಾ ಪ್ರತಿಷ್ಠೆಯ ಆಕಾಂಕ್ಷೆಯನ್ನು ಪ್ರಧಾನವಾಗಿಟ್ಟುಕೊಂಡು ವಿವಾಹ ಸಂಗಾತಿಯನ್ನು ಆಯ್ಕೆಮಾಡುವಾಗ ಸಮಸ್ಯೆಗಳು ಉದ್ಭವಿಸುತ್ತವೆ. (1 ತಿಮೊಥೆಯ 6:9) ಆದುದರಿಂದ, ಮದುವೆಯನ್ನು ಏರ್ಪಡಿಸುವವರು ತಮ್ಮನ್ನು ತಾವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ‘ಇಬ್ಬರು ವ್ಯಕ್ತಿಗಳ ಸಂತೋಷ ಮತ್ತು ಆತ್ಮಿಕ ಆರೋಗ್ಯವನ್ನು ನಿಶ್ಚಿತಗೊಳಿಸಲು ಈ ಆಯ್ಕೆಯನ್ನು ಮಾಡಲಾಗಿದೆಯೇ? ಅಥವಾ ಕುಟುಂಬದ ಗೌರವ ಇಲ್ಲವೇ ಸಂಪತ್ತನ್ನು ಹೆಚ್ಚಿಸಲು ಇಲ್ಲವೇ ಯಾವುದೇ ರೀತಿಯ ಹಣದ ಲಾಭಕ್ಕಾಗಿ ಮಾಡಲಾಗಿದೆಯೇ?’—ಜ್ಞಾನೋಕ್ತಿ 20:21.
ಬೈಬಲಿನ ಸಲಹೆಯು ಸ್ಪಷ್ಟವೂ ಪ್ರಯೋಜನಕಾರಿಯೂ ಆಗಿದೆ. ಆಯ್ಕೆಯನ್ನು ಹೇಗೆ ಮಾಡಿದರೂ ವಿವಾಹ ಸಂಗಾತಿಯನ್ನು ಪರಿಗಣಿಸುವಾಗ ಭಾವಿ ಸಂಗಾತಿಯ ಸದ್ಗುಣ ಹಾಗೂ ಆತ್ಮಿಕತೆಯೂ ಯಾವಾಗಲೂ ಪ್ರಥಮ ಚಿಂತೆಯಾಗಿರಬೇಕು. ಹೀಗೆ ಮಾಡಲ್ಪಟ್ಟಾಗ, ವಿವಾಹದ ಏರ್ಪಾಡಿನ ಮೂಲಕರ್ತನಾಗಿರುವ ಯೆಹೋವ ದೇವರು ಗೌರವಿಸಲ್ಪಡುತ್ತಾನೆ ಮತ್ತು ಮದುವೆಯಾಗುವವರು ತಮ್ಮ ವಿವಾಹವನ್ನು ಬಲವಾದ ಆತ್ಮಿಕ ಹೆಜ್ಜೆಯೊಂದಿಗೆ ಆರಂಭಿಸಬಹುದು. (ಮತ್ತಾಯ 7:24, 25) ಇದು ಸಂತೋಷಕರವಾದ ಹಾಗೂ ಪುಷ್ಟೀಕರಿಸುವ ವಿವಾಹ ಬಂಧಕ್ಕೆ ಹೆಚ್ಚು ನೆರವಾಗಿರುವುದು.