ನಿಮ್ಮ ಮಕ್ಕಳನ್ನು ಅಪಘಾತಗಳಿಂದ ರಕ್ಷಿಸಿರಿ
ಸ್ವೀಡನಿನ ಎಚ್ಚರ! ಪತ್ರಿಕೆಯ ಸುದ್ದಿಗಾರರಿಂದ
ಹಾನಾ ಸುಮಾರು ಮೂರು ವರ್ಷಪ್ರಾಯದವಳಾಗಿದ್ದು, ಆಕೆಯ ಹೆತ್ತವರಾದ ಕಾರ್ಲ್ಏರಿಕ್ ಮತ್ತು ಬಿರ್ಗಿಟಾ, ಸಾವನ್ನಪ್ಪಿದ ತಮ್ಮ ನೆರೆಯವನ ಮನೆಯನ್ನು ಸ್ವಚ್ಛಮಾಡುತ್ತಿದ್ದಾಗ ಅವಳು ಅವರೊಂದಿಗಿದ್ದಳು. ಸ್ವಲ್ಪ ಸಮಯದ ನಂತರ, ಹಾನಾ ಮಾತ್ರೆಗಳಿದ್ದ ಸೀಸೆಯನ್ನು ಕೈಯಲ್ಲಿ ಹಿಡಿದುಕೊಂಡು ಕೋಣೆಯಿಂದ ಹೊರಬಂದಳು. ಅವಳು, ಮಾತ್ರೆಗಳಲ್ಲಿ ಕೆಲವನ್ನು ತಿಂದಿದ್ದಳು. ಸೀಸೆಯನ್ನು ಪರೀಕ್ಷಿಸಿದಾಗ ಬಿರ್ಗಿಟಾ ಬೆಚ್ಚಿಬಿದ್ದಳು. ಅದು ಆ ಪಕ್ಕದ ಮನೆಯ ವ್ಯಕ್ತಿಯ ಹೃದ್ರೋಗದ ಔಷಧಿಯಾಗಿತ್ತು.
ಕೂಡಲೇ ಹಾನಾಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ, ಅವಳನ್ನು ಇಂಟೆನ್ಸಿವ್ ಕೇರ್ ವಿಭಾಗದಲ್ಲಿ ಒಂದು ರಾತ್ರಿ ಇರಿಸಲಾಯಿತು. ಅವಳು ತೆಗೆದುಕೊಂಡಿದ್ದ ಔಷಧಿಯ ಪ್ರಮಾಣವು ಆಕೆಯ ಆರೋಗ್ಯವನ್ನು ಶಾಶ್ವತವಾಗಿ ಹಾನಿಗೊಳಿಸಬಹುದಾಗಿದ್ದರೂ, ಮುಂದೆ ಅವಳು ಯಾವ ತೊಂದರೆಯನ್ನೂ ಅನುಭವಿಸಲಿಲ್ಲ. ಏಕೆ? ಏಕೆಂದರೆ, ಮಾತ್ರೆಗಳನ್ನು ತಿನ್ನುವುದಕ್ಕೆ ಸ್ವಲ್ಪ ಸಮಯದ ಮುಂಚೆ ಅವಳು ಧಾನ್ಯದಿಂದ ತಯಾರಿಸಲ್ಪಟ್ಟ ಬೇಯಿಸಿದ್ದ ಸ್ವಲ್ಪ ಸಿರಿಯಲ್ನ್ನು ತಿಂದಿದ್ದಳು. ಆ ಮಾತ್ರೆಗಳಲ್ಲಿದ್ದ ಕೆಲವು ವಿಷವಸ್ತುಗಳನ್ನು ಸಿರಿಯಲ್ ಹೀರಿಕೊಂಡಿತ್ತು ಮತ್ತು ಆಕೆಯನ್ನು ವಾಂತಿಮಾಡಿಸಿದಾಗ ಅವು ಹೊರಬಂದವು.
ಹಾನಾಳ ಅನುಭವವು ಅಸಾಮಾನ್ಯವಾದದ್ದೇನೂ ಅಲ್ಲ. ಪ್ರತಿದಿನ ಜಗತ್ತಿನಾದ್ಯಂತ ಸಾವಿರಾರು ಮಕ್ಕಳು ವೈದ್ಯರನ್ನು ಕಾಣಬೇಕಾಗುವ ಇಲ್ಲವೆ ಆಸ್ಪತ್ರೆಗೆ ಹೋಗಬೇಕಾಗುವ ಅಪಘಾತಗಳಿಗೆ ಈಡಾಗುತ್ತಾರೆ. ಪ್ರತಿವರ್ಷ ಸ್ವೀಡನಿನಲ್ಲಿ ಎಂಟು ಮಕ್ಕಳಲ್ಲಿ ಒಂದು ಮಗುವು, ಅಪಘಾತದ ನಂತರ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತದೆ. ಆದುದರಿಂದ, ಒಂದುವೇಳೆ ನೀವು ಹೆತ್ತವರಾಗಿರುವುದಾದರೆ, ನಿಮ್ಮ ಮಕ್ಕಳಿಗೂ ಕೂಡ ತದ್ರೀತಿಯಲ್ಲಿ ಅಪಘಾತಗಳು ಸಂಭವಿಸಬಹುದಾದ ಅನೇಕ ಸಂದರ್ಭಗಳಿವೆ.
ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತಲಿನ ಪರಿಚಿತ ಪರಿಸರದಲ್ಲಿ ಆಗಾಗ್ಗೆ ಮಕ್ಕಳಿಗೆ ಗಾಯಗಳಾಗುವುದು ಆಶ್ಚರ್ಯಕರ ಸಂಗತಿಯೇನಲ್ಲ. ಮಕ್ಕಳು ಬೆಳೆಯುತ್ತಿರುವಂತೆ ಅವರಿಗಾಗುವ ಗಾಯಗಳ ವಿಧಗಳು ಬದಲಾಗುತ್ತವೆ. ಡೈಅಪರ್ನ್ನು ಬದಲಾಯಿಸಲು ಉಪಯೋಗಿಸುವ ಟೇಬಲಿನಿಂದ ಮಗು ಸುಲಭವಾಗಿ ಬೀಳಬಹುದು ಅಥವಾ ಆಹಾರಪದಾರ್ಥಗಳ ಸಣ್ಣ ತುಂಡುಗಳು ಉಸಿರುಕಟ್ಟಿಸಬಹುದು ಇಲ್ಲವೇ ಒಂದು ಸಣ್ಣ ವಸ್ತು ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಅನೇಕವೇಳೆ ಸ್ವಲ್ಪ ಬೆಳೆದಿರುವ ಮಕ್ಕಳು ಯಾವುದನ್ನಾದರೂ ಹತ್ತುವಾಗ ಕೆಳಗೆ ಬೀಳುತ್ತಾರೆ ಇಲ್ಲವೇ ತಮ್ಮ ಕೈಗೆ ಎಟುಕುವ ವಸ್ತುಗಳನ್ನು ಮುಟ್ಟುತ್ತ ಸುಟ್ಟುಕೊಳ್ಳುತ್ತಾರೆ ಇಲ್ಲವೆ ಬಾಯಲ್ಲಿಟ್ಟುಕೊಳ್ಳುವ ಮೂಲಕ ವಿಷವನ್ನು ಸೇವಿಸುತ್ತಾರೆ. ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಅನೇಕವೇಳೆ ರಸ್ತೆ ಅಪಘಾತಗಳಲ್ಲಿ ಇಲ್ಲವೇ ಮನೆಯ ಹೊರಗೆ ಆಟವಾಡುತ್ತಿರುವಾಗ ಗಾಯಮಾಡಿಕೊಳ್ಳುತ್ತಾರೆ.
ಈ ರೀತಿಯ ಅನೇಕ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಸ್ವಲ್ಪ ಮುಂದಾಲೋಚನೆ ಮತ್ತು ವಿವೇಕದೊಂದಿಗೆ ನಿಮ್ಮ ಮಕ್ಕಳ ಬೆಳವಣಿಗೆಯ ಮಟ್ಟವನ್ನು ತಿಳಿದುಕೊಳ್ಳುವ ಮೂಲಕ ಗಾಯಗಳಾಗುವುದನ್ನು ಇಲ್ಲವೇ ಅಪಾಯಕರ ಅಪಘಾತಗಳನ್ನು ತಡೆಗಟ್ಟಬಹುದು. ಸ್ವೀಡನಿನಲ್ಲಿ 1954ರಿಂದ ಸಂಘಟಿತ ಮಕ್ಕಳ-ಸುರಕ್ಷತೆಯ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಮೂಲಕ ಇದನ್ನು ರುಜುಪಡಿಸಲಾಗಿದೆ. ಇದಕ್ಕೆ ಮೊದಲು ಅಲ್ಲಿ, ಪ್ರತಿವರ್ಷ 450ಕ್ಕಿಂತಲೂ ಹೆಚ್ಚಿನ ಮಕ್ಕಳು ಅಪಘಾತಗಳಲ್ಲಿ ಮೃತರಾಗುತ್ತಿದ್ದರು. ಇಂದು, ವಾರ್ಷಿಕವಾಗಿ ಮರಣದ ಸಂಖ್ಯೆಯು 70ಕ್ಕಿಂತಲೂ ಕಡಿಮೆಯಾಗಿದೆ.
ಮನೆಯೊಳಗೆ
“ಒಂದು, ಎರಡು ಇಲ್ಲವೆ ಮೂರುವರ್ಷದ ಮಗುವಿಗೆ ಅಪಾಯಗಳಿಂದ ದೂರವಿರುವಂತೆ ನೀವು ಕಲಿಸಸಾಧ್ಯವಿಲ್ಲ ಮತ್ತು ಅದನ್ನು ಮಗು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ನೀವು ನಿರೀಕ್ಷಿಸಸಾಧ್ಯವಿಲ್ಲ,” ಎಂದು ಮನೋಶಾಸ್ತ್ರಜ್ಞ ಕೆಷ್ಟಿನ್ ಬ್ಯಾಕ್ಸ್ಟ್ರಾಮ್ ಹೇಳುತ್ತಾರೆ. ಆದುದರಿಂದ, ನಿಮ್ಮ ಮಕ್ಕಳಿಗಾಗುವ ಅಪಘಾತಗಳನ್ನು ತಪ್ಪಿಸಲು ಅವರಿಗೆ ಸಹಾಯಮಾಡುವ ಜವಾಬ್ದಾರಿಯು ಹೆತ್ತವರಾದ ನಿಮ್ಮ ಹೆಗಲ ಮೇಲಿದೆ ಇಲ್ಲವೆ ಆಗಿಂದಾಗ್ಗೆ ಮಕ್ಕಳು ಯಾರೊಂದಿಗೆ ಇರುತ್ತಾರೋ ಆ ವ್ಯಕ್ತಿಯ ಜವಾಬ್ದಾರಿಯಾಗಿರುತ್ತದೆ.
ಪ್ರಾರಂಭದ ಹೆಜ್ಜೆಯಾಗಿ, ನಿಮ್ಮ ಮನೆಯ ಸುತ್ತಲೂ ಕಣ್ಣೋಡಿಸಿ. ಪಕ್ಕದ ಚೌಕಟ್ಟಿನಲ್ಲಿ ಕೊಡಲ್ಪಟ್ಟಿರುವ ತಾಳೆಪಟ್ಟಿಯನ್ನು ಉಪಯೋಗಿಸಿ. ಬಹುಶಃ ಎಲ್ಲಾ ದೇಶಗಳಲ್ಲಿ ಕೆಲವು ಸುರಕ್ಷಾ ಸಾಮಗ್ರಿಗಳು ಲಭ್ಯವಿರುವುದಿಲ್ಲ, ಇಲ್ಲವೆ, ಇದ್ದರೂ ನ್ಯಾಯವಾದ ಬೆಲೆಗೆ ಸಿಗುವುದಿಲ್ಲ. ಆದರೂ, ಸ್ವಲ್ಪ ಜಾಣತನ ಹಾಗೂ ಪ್ರತಿಭಾ ಶಕ್ತಿಯೊಂದಿಗೆ ನಿಮ್ಮ ನಿರ್ದಿಷ್ಟ ಸನ್ನಿವೇಶಗಳಿಗೆ ಒಗ್ಗುವ ಪರಿಹಾರಗಳು ಪ್ರಾಯಶಃ ನಿಮ್ಮ ನೆನಪಿಗೆ ಬರಬಹುದು.
ಉದಾಹರಣೆಗೆ, ನಿಮ್ಮ ಅಡುಗೆಮನೆಯ ಡ್ರಾಯರುಗಳಿಗೆ ಕೊಂಡಿಯಾಕಾರದ ಹಿಡಿಗಳಿರುವುದಾದರೆ, ಅವುಗಳ ಮಧ್ಯೆ ಕಡ್ಡಿಯನ್ನು ಒಳಸೇರಿಸುವ ಮೂಲಕ ಬೀಗಹಾಕಿಡಬಹುದು. ಇದೇ ರೀತಿಯ ಏರ್ಪಾಡನ್ನು ಅವೆನ್ ಒಲೆಯ ಬಾಗಿಲುಗಳಿಗೂ ಸಹ ಬೀಗವಾಗಿ ಉಪಯೋಗಿಸಬಹುದು. ಪ್ಲಾಸ್ಟಿಕ್ ಕವರುಗಳನ್ನು ಶೇಖರಿಸಿಡುವಾಗ, ಅವುಗಳನ್ನು ಗಂಟಾಕಿಡುವುದಾದರೆ ಅವು ಕಡಿಮೆ ಅಪಾಯಕಾರಿಯಾಗಿರುವುದು.
ಬಹುಶಃ, ನಿಮ್ಮ ಮನೆಯ ಒಳಗೆ ಹಾಗೂ ಸುತ್ತಮುತ್ತಲು ಆಗುವ ಅಪಘಾತಗಳನ್ನು ತಡೆಗಟ್ಟಬಹುದಾದ ಇನ್ನಿತರ ಸರಳ ವಿಧಾನಗಳು ನಿಮ್ಮ ನೆನಪಿಗೆ ಬರಬಹುದು ಮತ್ತು ಅವುಗಳನ್ನು ಚಿಕ್ಕ ಮಕ್ಕಳಿರುವ ಪರಿಚಯಸ್ಥರೊಂದಿಗೂ ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದು.
ಮನೆಯ ಹೊರಗೆ
ನಿಮ್ಮ ಮಕ್ಕಳು ಆಟವಾಡುವ ಸ್ಥಳವನ್ನು ಪರೀಕ್ಷಿಸಿ. ನಾಲ್ಕು ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮನೆಯ ಹೊರಗೆ ಆಟವಾಡುವಾಗ ಹೆಚ್ಚಿನ ಗಾಯಗಳಾಗುವುವು. ಅವರು ಕೆಳಗೆ ಬಿದ್ದು ಗಾಯಮಾಡಿಕೊಳ್ಳುತ್ತಾರೆ ಇಲ್ಲವೆ ಬಹುಶಃ ಸೈಕಲಿನಿಂದ ಬಿದ್ದುಬಿಡುತ್ತಾರೆ. ಮೂರರಿಂದ ಏಳು ವಯಸ್ಸಿನ ಮಕ್ಕಳಿಗೆ ಮನೆಯ ಹೊರಗೆ ಸಂಭವಿಸುವ ಅಪಾಯಕರ ಅಪಘಾತಗಳಲ್ಲಿ ಅತಿ ಸಾಮಾನ್ಯವಾದವುಗಳು, ರಸ್ತೆ ಅಪಘಾತಗಳು ಮತ್ತು ನೀರಿನಲ್ಲಿ ಮುಳುಗಿ ಸಾಯುವುದು ಆಗಿವೆ.
ನೀವು ಆಟದ ಮೈದಾನಗಳನ್ನು ಪರೀಕ್ಷಿಸುವಾಗ, ಮಕ್ಕಳು ಆಟವಾಡಲು ಉಪಯೋಗಿಸುವ ಸಾಧನಗಳು ಅವರಿಗೆ ಹಾನಿಯನ್ನುಂಟುಮಾಡದಿರುವಂತೆ ಅವು ಒಳ್ಳೇ ಸ್ಥಿತಿಯಲ್ಲಿವೆಯೇ ಎಂದು ನೋಡಿ. ಉಯ್ಯಾಲೆಗಳು, ಚೌಕಟ್ಟಾಕಾರದ ಏಣಿಗಳು ಮತ್ತು ತದ್ರೀತಿಯಲ್ಲಿರುವ ಸಾಧನಗಳ ಕೆಳಗಿರುವ ನೆಲವು, ಮಗು ಬೀಳುವಲ್ಲಿ ಪೆಟ್ಟಾಗದ ಹಾಗೇ ಮರಳಿನಂತಹ ಮೃದುವಾದ ವಸ್ತುಗಳಿಂದ ಮಾಡಲ್ಪಟ್ಟಿವೆಯೋ?
ನಿಮ್ಮ ಮನೆಯ ಬಳಿ ನಿಂತಿರುವ ನೀರಾಗಲಿ ಅಥವಾ ತೊರೆಗಳಾಗಲಿ ಇವೆಯೋ? ಒಂದು ಇಲ್ಲವೆ ಎರಡು ವರ್ಷದ ಮಗು ಮುಳುಗಿ ಸಾಯಲು ಕೆಲವೇ ಸೆಂಟಿಮೀಟರುಗಳ ಎತ್ತರದ ನೀರಿದ್ದರೂ ಸಾಕು. “ಪುಟ್ಟ ಕಂದನು ನಿಂತಿರುವ ನೀರಿನಲ್ಲಿ ತಲೆಕೆಳಗಾಗಿ ಬೀಳುವಾಗ, ಯಾವುದು ಮೇಲೆ, ಯಾವುದು ಕೆಳಗೆ ಎಂಬ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ,” ಮತ್ತು “ಮಗು ತಾನೇ ಮತ್ತೆ ಮೇಲಕ್ಕೇಳದು,” ಎಂದು ಮಕ್ಕಳ ಮನೋವೈಜ್ಞಾನಿಕರಾದ ಬ್ಯಾಕ್ಸ್ಟ್ರೋಮ್ ಹೇಳುತ್ತಾರೆ.
ಆದುದರಿಂದ, ಅತ್ಯಂತ ಮೂಲಭೂತವಾದ ನಿಯಮವು ಇದಾಗಿದೆ: ಒಂದರಿಂದ ಮೂರು ವರ್ಷದ ಮಕ್ಕಳನ್ನು ಯಾರಾದರೂ ದೊಡ್ಡವರು ನೋಡಿಕೊಳ್ಳುವವರಿಲ್ಲದೆ ಒಂಟಿಯಾಗಿ ಎಂದೂ ಮನೆಯ ಹೊರಗೆ ಆಟವಾಡಲು ಬಿಡಬೇಡಿ. ಅಕ್ಕಪಕ್ಕದಲ್ಲಿ ಸ್ವಲ್ಪಮಟ್ಟಿಗೆ ನೀರಿರುವ ಸ್ಥಳವಿರುವುದಾದರೆ, ಮಕ್ಕಳು ಸಾಕಷ್ಟು ದೊಡ್ಡವರಾಗುವ ವರೆಗೂ, ಅವರನ್ನು ಯಾರು ನೋಡಿಕೊಳ್ಳುವವರಿಲ್ಲದೆ ಮನೆಯ ಹೊರಗೆ ಆಟವಾಡಲು ಬಿಡಬೇಡಿ.
ವಾಹನ ಸಂಚಾರದ ರಸ್ತೆಗಳಲ್ಲಿ
ನಿಮ್ಮ ಮನೆಯ ಸುತ್ತಮುತ್ತಲಲ್ಲಿ ವಾಹನ ಸಂಚಾರವಿರುವುದಾದರೂ ಇದನ್ನೇ ಗಮನದಲ್ಲಿಡಬೇಕಾಗುತ್ತದೆ. “ಶಾಲೆಯ ವಯಸ್ಸನ್ನು ತಲುಪದ ಹುಡುಗನು ಸ್ಪಷ್ಟ ಮತ್ತು ನಿರ್ದಿಷ್ಟ ಸೂಚನೆಗಳನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಒಮ್ಮೆ ಒಂದು ವಿಷಯಕ್ಕೆ ಮಾತ್ರ ಗಮನಕೊಡಲು ಶಕ್ತನಾಗಿರುತ್ತಾನೆ,” ಎಂದು ಬ್ಯಾಕ್ಸ್ಟ್ರೋಮ್ ಗಮನಿಸುತ್ತಾರೆ. “ಆದರೆ ಟ್ರಾಫಿಕ್ ಸೂಚನೆಗಳು ಕ್ಲಿಷ್ಟವಾದ ಕಲ್ಪನೆಯಿಂದ ಮತ್ತು ದ್ವಂದ್ವ ಅರ್ಥಕೊಡುವ ಸಂದೇಶಗಳಿಂದ ತುಂಬಿರುತ್ತವೆ.” ನಿಮ್ಮ ಮಕ್ಕಳು ಶಾಲೆಗೆ ಹೋಗುವ ವಯಸ್ಸಿನವರಾಗುವ ಮೊದಲು ಸ್ವತಃ ಅವರೇ ರಸ್ತೆಯನ್ನು ದಾಟಲು ಬಿಡಬೇಡಿ. ನಿಪುಣರಿಗನುಸಾರ, ಮಕ್ಕಳು ಕನಿಷ್ಟ ಪಕ್ಷ 12 ವರ್ಷದವರಾಗುವ ವರೆಗೆ ಹೆಚ್ಚು ವಾಹನ ಓಡಾಟವಿರುವ ರಸ್ತೆಗಳಲ್ಲಿ ಸೈಕಲನ್ನು ಒಂಟಿಯಾಗಿ ಓಡಿಸುವಷ್ಟು ಪ್ರೌಢರಾಗಿರುವುದಿಲ್ಲ.
ಸೈಕಲ್ ಓಡಿಸುವಾಗ, ರೋಲರ್ ಸ್ಕೇಟಿಂಗ್ ಅಥವಾ ಟಬಾಗನ್ ಜಾರುಬಂಡಿಯನ್ನು ಓಡಿಸುವಾಗ ಸುರಕ್ಷತೆಗಾಗಿರುವ ಹೆಲ್ಮೆಟನ್ನು ಧರಿಸುವಂತೆ ಕಲಿಸಿ. ತಲೆಗಾಗುವ ಗಾಯಗಳನ್ನು ಗುಣಪಡಿಸುವುದು ಬಹಳ ಕಷ್ಟ ಮತ್ತು ಅವು ಶಾಶ್ವತವಾದ ಹಾನಿಯನ್ನು ಉಂಟುಮಾಡಬಲ್ಲವು, ಅಲ್ಲದೆ ಅವು ಮಾರಕವೂ ಆಗಿರಬಲ್ಲದು! ಮಕ್ಕಳ ಒಂದು ಆಸ್ಪತ್ರೆಯಲ್ಲಿ ಸೈಕಲ್ ಅಪಘಾತಗಳಿಗಾಗಿ ಚಿಕಿತ್ಸೆ ನೀಡಿದ ಮಕ್ಕಳಲ್ಲಿ 60 ಪ್ರತಿಶತ ಮಕ್ಕಳು ಮುಖ ಮತ್ತು ತಲೆಯಲ್ಲಿ ಗಾಯಗಳನ್ನು ಅನುಭವಿಸಿದ್ದರು. ಆದರೆ ಹೆಲ್ಮೆಟನ್ನು ಉಪಯೋಗಿಸಿದವರಲ್ಲಿ ಯಾರಿಗೂ ತೀವ್ರ ತಲೆಗಾಯಗಳಾಗಿರಲಿಲ್ಲ.
ಅಲ್ಲದೆ, ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮ್ಮ ಮಕ್ಕಳು ಸುರಕ್ಷಿತರಾಗಿರುವುದನ್ನು ಖಾತರಿ ಮಾಡಿಕೊಳ್ಳಿ. ಅನೇಕ ದೇಶಗಳಲ್ಲಿ, ಚಿಕ್ಕ ಮಕ್ಕಳನ್ನು ವಿಶೇಷವಾಗಿ ತಯಾರಿಸಲ್ಪಟ್ಟಿರುವ ಸುರಕ್ಷಾ ಆಸನಗಳಿಗೆ ಬಿಗಿಪಟ್ಟಿಯಲ್ಲಿ ಕಟ್ಟಿ ಬಿಗಿಯಬೇಕೆಂದು ನಿಯಮಗಳು ಕೇಳಿಕೊಳ್ಳುತ್ತವೆ. ಇದು ರಸ್ತೆ ಅಪಘಾತಗಳಲ್ಲಿ ಮಕ್ಕಳಿಗಾಗುವ ಗಾಯಗಳು ಮತ್ತು ಮರಣದ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ. ನೀವು ಜೀವಿಸುವ ಸ್ಥಳದಲ್ಲಿ ಸುರಕ್ಷಾ ಆಸನಗಳು ಲಭ್ಯವಿರುವುದಾದರೆ ಅದನ್ನು ಉಪಯೋಗಿಸುವುದು, ನಿಮ್ಮ ಜೀವರಕ್ಷಣೆಗೆ ಭದ್ರತೆಯಾಗಿರುವುದು. ಆದರೆ ಅದು ಅಂಗೀಕರಿಸಲ್ಪಟ್ಟ ಮಾಡೆಲ್ ಆಗಿರುವಂತೆ ಖಾತ್ರಿಮಾಡಿಕೊಳ್ಳಿ. ಎಳೆ ಕೂಸುಗಳಿಗಿರುವ ಆಸನವು ಮೂರು ವರ್ಷದಷ್ಟು ವಯಸ್ಸಿನ ಮಕ್ಕಳ ಆಸನಕ್ಕಿಂತ ಬೇರೆಯಾಗಿರುತ್ತದೆ ಎಂಬುದನ್ನು ಗಮನಿಸಿ.
ನಮ್ಮ ಮಕ್ಕಳು ಯೆಹೋವನ ಅಮೂಲ್ಯ ಉಡುಗೊರೆಗಳಾಗಿದ್ದಾರೆ. ಆದ್ದರಿಂದ ಎಲ್ಲಾ ರೀತಿಯಲ್ಲೂ ಅವರ ಆರೈಕೆಯನ್ನು ಮಾಡಲು ನಾವು ಬಯಸುತ್ತೇವೆ. (ಕೀರ್ತನೆ 127:3, 4) ಉತ್ತಮ ಹೆತ್ತವರೋಪಾದಿ ಕಾರ್ಲ್ಏರಿಕ್ ಮತ್ತು ಬಿರ್ಗಿಟಾ, ಹಾನಾಳಿಗಾದ ಪ್ರಸಂಗಕ್ಕೆ ಮೊದಲು ಹಾಗೂ ಅನಂತರವು ತಮ್ಮ ಮಕ್ಕಳ ಸುರಕ್ಷತೆಯ ಕುರಿತು ಯಾವಾಗಲೂ ಕಾಳಜಿವಹಿಸುವವರಾಗಿದ್ದರು. “ಆದರೆ, ಆ ಘಟನೆಯ ನಂತರ ನಾವು ಇನ್ನೂ ಹೆಚ್ಚು ಜಾಗರೂಕರಾದೆವು,” ಎಂದು ಕಾರ್ಲ್ಏರಿಕ್ ಒಪ್ಪಿಕೊಳ್ಳುತ್ತಾರೆ. “ಈಗ ನಮಗೆ ಮೊಮ್ಮಕ್ಕಳಿದ್ದಾರೆ, ನಮ್ಮ ಔಷಧಿಗಳು ಯಾವಾಗಲೂ ಬೀಗಹಾಕಿ ಇಡಲ್ಪಟ್ಟಿರುವುದನ್ನು ನಾವು ಖಾತ್ರಿಮಾಡಿಕೊಳ್ಳುತ್ತೇವೆ,” ಎಂದು ಹೇಳಿ ಬಿರ್ಗಿಟಾ ಸಮಾಪ್ತಿಗೊಳಿಸುತ್ತಾರೆ.
[ಪುಟ 22 ರಲ್ಲಿರುವ ಚೌಕ]
ನಿಮ್ಮ ಮನೆಯಲ್ಲಿ ಸುರಕ್ಷತೆ
• ಔಷಧಗಳು: ಮಕ್ಕಳ ಕೈಗೆ ಸಿಗದಂತೆ ಅವುಗಳನ್ನು ಕಪಾಟಿನಲ್ಲಿ ಬೀಗಹಾಕಿ ಇಡಿ. ವೈದ್ಯರ ಚೀಟಿಯಿಲ್ಲದೆ ದೊರೆಯುವ ಮತ್ತು ವಿಟಮಿನ್ ಇಲ್ಲವೇ ಗಿಡಮೂಲಿಕೆಗಳಿಂದ ಮಾಡಲ್ಪಟ್ಟ ಔಷಧಗಳಿಗೂ ಇದು ಅನ್ವಯಿಸುತ್ತದೆ. ಅದರೊಂದಿಗೆ, ರಾತ್ರಿ ತಂಗಲು ಬರುವ ಅತಿಥಿಗಳು ತಮ್ಮ ಔಷಧಗಳನ್ನು ಮಕ್ಕಳ ಕೈಗೆ ಸಿಗದಂಥ ಸುರಕ್ಷಿತ ಸ್ಥಳದಲ್ಲಿ ಇಡುವಂತೆ ಕೇಳಿಕೊಳ್ಳಿ.
• ಮನೆಯಲ್ಲಿ ಉಪಯೋಗಿಸುವ ರಾಸಾಯನಿಕಗಳು: ಮಕ್ಕಳ ಕೈಗೆ ಸಿಗದಂತಹ ಸ್ಥಳದಲ್ಲಿ ಅವುಗಳನ್ನು ಬೀಗವಿರುವ ಕಪಾಟಿನಲ್ಲಿ ಇಡಿ. ಅವುಗಳ ಡಬ್ಬಗಳಲ್ಲೇ ಅವುಗಳನ್ನು ಇಡಿ. ಹೀಗೆ ಅವು ಸ್ಪಷ್ಟವಾಗಿ ಗುರುತಿಸಲ್ಪಡುವುವು. ನೀವು ಅಂತಹ ವಸ್ತುಗಳನ್ನು ಉಪಯೋಗಿಸುವಾಗ ಅವುಗಳ ಮೇಲೆ ಹೆಚ್ಚು ಗಮನಕೊಟ್ಟು, ಒಂದು ಕ್ಷಣ ನೀವು ಕೋಣೆಯಿಂದ ಹೊರಗೆ ಹೋಗಬೇಕಾಗಿದ್ದರು ಕೂಡ, ಉಪಯೋಗಿಸಿದ ವಸ್ತುಗಳನ್ನು ಕೂಡಲೇ ತೆಗೆದು ಜೋಪಾನವಾಗಿಡಲು ಮರೆಯದಿರಿ. ಪಾತ್ರೆ ತೊಳೆಯಲು ಉಪಯೋಗಿಸುವ ಡಿಟರ್ಜೆಂಟ್ ಸಾಬೂನಿನ ಶೇಷವನ್ನು ಎಂದೂ ಡಿಷ್ವಾಷರ್ನಲ್ಲೇ ಬಿಡಬೇಡಿ.
• ಸ್ಟೋವ್: ಪಾತ್ರೆಗಳ ಹಿಡಿಗಳನ್ನು ಯಾವಾಗಲೂ ಸ್ಟೋವಿನ ಮೇಲೆ ಒಳಮುಖವಾಗಿ ತಿರುಗಿಸಿಡಿ. ಎಣ್ಣೆ ಮೇಲಕ್ಕೆ ಹಾರದಂತೆ ಮಾಡುವ ಸಾಸ್ಪ್ಯಾನ್ ಗಾರ್ಡ್ ಸುರಕ್ಷಾ ಸಲಕರಣೆ ಲಭ್ಯವಿರುವುದಾದರೆ ಅದನ್ನು ಜೋಡಿಸಿ. ಮಕ್ಕಳು ಅವೆನಿನ ತೆರೆದ ಬಾಗಿಲಿನ ಮೇಲೆ ಹತ್ತುವಲ್ಲಿ ಸ್ಟೋವ್ ಓಲದಂತೆ ತಡೆಯುವ ಟಿಲ್ಟ್ ಗಾರ್ಡ್ ಅನ್ನು ಸ್ಟೋವಿಗೆ ಜೋಡಿಸಿ. ಅವೆನಿನ ಬಾಗಿಲಿಗೂ ಬೀಗ ಹಾಕುವ ಏರ್ಪಾಡಿರಬೇಕು. ಪುಟಾಣಿಯು ಅವೆನಿನ ಬಾಗಿಲನ್ನು ಮುಟ್ಟಿ ಸುಟ್ಟುಕೊಳ್ಳುವ ಸಾಧ್ಯತೆ ಇದೆಯೋ? ಹಾಗಿದ್ದರೆ, ಬಿಸಿಯಾದ ಬಾಗಿಲನ್ನು ಮಗು ಮುಟ್ಟದಂತೆ ರಕ್ಷಣಾ ಸಲಕರಣೆ ಇಲ್ಲವೆ ಸರಳು ಚೌಕಟ್ಟನ್ನು ಜೋಡಿಸಿ.
• ಮನೆಯಲ್ಲಿರುವ ಅಪಾಯಕರ ಉಪಕರಣಗಳು: ಚಾಕುಗಳು, ಕತ್ತರಿಗಳು ಮತ್ತು ಅಪಾಯಕರ ಸಾಮಗ್ರಿಗಳನ್ನು ಕಪಾಟುಗಳಲ್ಲಿ ಅಥವಾ ಬೀಗ ಇಲ್ಲವೆ ತನ್ನಷ್ಟಕ್ಕೆ ಮುಚ್ಚಿಕೊಳ್ಳುವ ಸಾಧನ (ಕ್ಯಾಚ್) ಇರುವ ಡ್ರಾಯರುಗಳಲ್ಲಿಡಬೇಕು, ಇಲ್ಲವೆ ಮಕ್ಕಳಿಗೆ ಎಟುಕದ ಸ್ಥಳಗಳಲ್ಲಿ ಇಡಬೇಕು. ಅಂಥ ಉಪಕರಣಗಳನ್ನು ಉಪಯೋಗಿಸುತ್ತಿರುವಾಗ, ಸ್ವಲ್ಪ ಸಮಯಕ್ಕಾಗಿ ಬೇರೆ ಕೆಲಸದ ಕಾರಣ ಅವನ್ನು ತೆಗೆದು ದೂರ ಇಡುವುದಾದರೆ ಟೇಬಲಿನ ಅಥವಾ ಅಡುಗೆ ಸ್ಥಳದ ಅಂಚಿನಲ್ಲಿ ಇಡದೆ ಮಕ್ಕಳಿಂದ ದೂರ ಇಡಿ. ಬೆಂಕಿ ಪೊಟ್ಟಣ ಮತ್ತು ಪ್ಲ್ಯಾಸ್ಟಿಕ್ ಚೀಲಗಳೂ ಚಿಕ್ಕಮಕ್ಕಳಿಗೆ ಅಪಾಯಕಾರಿ ವಸ್ತುಗಳಾಗಿವೆ.
• ಮೆಟ್ಟಲು ಸಾಲುಗಳು: ಕಡಿಮೆ ಪಕ್ಷ 70-75 ಸೆಂಟಿಮೀಟರುಗಳಷ್ಟು ಎತ್ತರವಿರುವ ಗೇಟುಗಳನ್ನು ಮೆಟ್ಟಲು ಸಾಲುಗಳ ಎರಡೂ ಕೊನೆಗಳಲ್ಲಿ ಜೋಡಿಸಿರಿ.
• ಕಿಟಕಿಗಳು ಮತ್ತು ಬಾಲ್ಕನಿಯ ಬಾಗಿಲುಗಳು: ಇವುಗಳಿಗೆ ಬಾಲಾಭೇದ್ಯ ಸುರಕ್ಷೆಯಿರುವ ತನ್ನಷ್ಟಕ್ಕೆ ಮುಚ್ಚಿಕೊಳ್ಳುವವು (ಸೇಫ್ಟಿ ಕ್ಯಾಚ್)ಗಳನ್ನು ಇಲ್ಲವೆ ಮೇಲ್ಭಾಗದಲ್ಲಿ ಸರಪಣಿಗಳನ್ನು ಅಥವಾ ಇನ್ಯಾವುದಾದರೂ ಸುರಕ್ಷಾ ಸಲಕರಣೆಗಳನ್ನು ಜೋಡಿಸಿ. ಇದು ಮಕ್ಕಳು ಅವನ್ನು ತೆರೆಯುವುದರಿಂದ ಅಥವಾ ಕೋಣೆಯಲ್ಲಿ ಗಾಳಿಯಾಡುವುದಕ್ಕಾಗಿ ಬಾಗಿಲನ್ನು ತೆರೆದಿಟ್ಟಿರುವ ಸಮಯಗಳಲ್ಲಿ ಅವುಗಳ ಮೂಲಕ ನುಸುಳಿ ಹೋಗುವುದನ್ನು ತಡೆಯುತ್ತದೆ.
• ಪುಸ್ತಕದ ಷೆಲ್ಫ್ಗಳು: ಮಕ್ಕಳು ಪೀಠೋಪಕರಣಗಳ ಮೇಲೆ ಹತ್ತಿ ನೇತಾಡಲು ಇಷ್ಟಪಡುವುದಾದರೆ, ಪುಸ್ತಕದ ಷೆಲ್ಫ್ಗಳನ್ನು ಅಥವಾ ಎತ್ತರದ ಪೀಠೋಪಕರಣಗಳನ್ನು, ಮೇಲೆ ಬೀಳದಂತೆ ಅವುಗಳನ್ನು ಗೋಡೆಗಳಿಗೆ ಜೋಡಿಸಿ ಭದ್ರಪಡಿಸಿರಿ.
• ಪವರ್ ಪ್ಲಗ್ಗುಗಳು ಮತ್ತು ವಿದ್ಯುತ್ ತಂತಿಗಳು: ಉಪಯೋಗಿಸದಿರುವ ಪ್ಲಗ್ಗುಗಳಿಗೆ ಯಾವುದಾದರೂ ಒಂದು ರೀತಿಯ ಬೀಗದ ವ್ಯವಸ್ಥೆಯಿರಬೇಕು. ಟೇಬಲ್ ಲ್ಯಾಂಪ್ ತಂತಿಗಳು ಮತ್ತು ತದ್ರೀತಿಯಲ್ಲಿರುವವುಗಳನ್ನು ಗೋಡೆಗೆ ಇಲ್ಲವೇ ಪೀಠೋಪಕರಣಕ್ಕೆ ಜೋಡಿಸಿಟ್ಟಿರಬೇಕು. ಹೀಗಿರುವಲ್ಲಿ, ಮಕ್ಕಳು ಲ್ಯಾಂಪನ್ನು ಕೆಳಗೆ ಎಳೆಯಲಾರರು ಮತ್ತು ಅದರಿಂದ ಅವರಿಗೆ ಪೆಟ್ಟಾಗಲಾರದು. ಇಲ್ಲದಿದ್ದರೆ, ಅಂತಹ ಲ್ಯಾಂಪುಗಳನ್ನು ತೆಗೆದುಬಿಡಿ. ಇಸ್ತ್ರಿಪೆಟ್ಟಿಗೆಯನ್ನು ಇಸ್ತ್ರಿ ಮಾಡುವ ಬೋರ್ಡಿನ ಮೇಲೆ ಬಿಡಬೇಡಿ ಮತ್ತು ಅದರ ವಯರನ್ನು ನೇತಾಡಲು ಬಿಡಬೇಡಿ.
• ಬಿಸಿ ನೀರು: ಬಿಸಿ ನೀರಿನ ತಾಪಮಾನವನ್ನು ನೀವು ಹೆಚ್ಚುಕಡಿಮೆ ಮಾಡುವ ಸೌಲಭ್ಯವಿರುವುದಾದರೆ, ಅದನ್ನು ಸುಮಾರು 50 ಡಿಗ್ರಿ ಸೆಲ್ಷಿಯಸ್ನಷ್ಟು ಕಡಿಮೆ ಇಟ್ಟಿರಬೇಕು. ಹೀಗೆ ಅವನೋ ಅಥವಾ ಅವಳೋ ಕೊಳಾಯಿಯನ್ನು ತಿರುಗಿಸುವಲ್ಲಿ ಅವರ ಚರ್ಮದಲ್ಲಿ ಬೊಬ್ಬೆಗಳೇಳವು.
• ಆಟಿಕೆಗಳು: ಮೊನಚಾದ ತುದಿಗಳಿರುವ ಇಲ್ಲವೆ ಮೂಲೆಗಳಿರುವ ಆಟಿಕೆಗಳನ್ನು ತೆಗೆದು ಹೊರಗೆ ಹಾಕಿ. ಯಾವುದೇ ಸಣ್ಣ ಆಟಿಕೆಗಳು ಇಲ್ಲವೇ ಸಣ್ಣ ಸಣ್ಣ ಭಾಗಗಳಾಗಿ ಬೇರ್ಪಡಿಸಬಹುದಾದ ವಿನೋದ ವಸ್ತುಗಳನ್ನು ಒಂದುವೇಳೆ ಮಕ್ಕಳು ಬಾಯಿಗೆ ಹಾಕಿಕೊಳ್ಳುವುದಾದರೆ, ಅದು ಅವರನ್ನು ಉಸಿರುಕಟ್ಟುವಂತೆ ಮಾಡುವುದರಿಂದ ಬಿಸಾಡಿ ಬಿಡಿ. ಮಕ್ಕಳ ಟೆಡಿ ಬೇರ್ನ ಕಣ್ಣು ಮತ್ತು ಮೂಗುಗಳನ್ನು ಭದ್ರವಾಗಿ ಜೋಡಿಸಿಡಬೇಕು. ಮಗುವು ನೆಲದ ಮೇಲೆ ಆಟವಾಡುತ್ತಿರುವಾಗ ಅದರ ಅಣ್ಣಂದಿರು ಮತ್ತು ಅಕ್ಕಂದಿರಿಗೆ ತಮ್ಮ ಸಣ್ಣ ಆಟಿಕೆಗಳನ್ನು ನೆಲದ ಮೇಲಿಂದ ತೆಗೆದಿಡುವಂತೆ ಕಲಿಸಿರಿ.
• ಮಿಠಾಯಿಗಳು ಮತ್ತು ತಿಂಡಿಗಳು: ಕಡಲೆಬೀಜ ಇಲ್ಲವೆ ಗಟ್ಟಿಯಾದ ಸಿಹಿಮಿಠಾಯಿಗಳಂಥ ಮಿಠಾಯಿ ಮತ್ತು ತಿಂಡಿಗಳನ್ನು ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ. ಅವು ಮಕ್ಕಳ ಗಂಟಲಲ್ಲಿ ಸಿಕ್ಕಿಕೊಳ್ಳಸಾಧ್ಯವಿದೆ.
[ಕೃಪೆ]
ಮೂಲ: ದಿ ಆಫಿಸ್ ಆಫ್ ದ ಚಿಲ್ಡ್ರನ್ಸ್ ಆಮ್ಬಡ್ಸ್ಮನ್
[ಪುಟ 22 ರಲ್ಲಿರುವ ಚೌಕ]
ಒಂದುವೇಳೆ ಅಪಘಾತವಾಗುವುದಾದರೆ
• ವಿಷ ಸೇವನೆ: ಪುಟಾಣಿಯು ವಿಷದ್ರವವನ್ನು ಕುಡಿದಿರುವುದಾದರೆ, ಅದರ ಬಾಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಒಂದು ಇಲ್ಲವೆ ಎರಡು ಲೋಟದಷ್ಟು ನೀರನ್ನೋ ಹಾಲನ್ನೋ ಕುಡಿಯಲು ಕೊಡಿ. ಅನಂತರ, ಡಾಕ್ಟರಿಗೆ ಇಲ್ಲವೇ ನಂಜು ಮಾಹಿತಿಯ ಕೇಂದ್ರಕ್ಕೆ ಸಹಾಯಕ್ಕಾಗಿ ಕರೆ ನೀಡಿ. ಒಂದು ವೇಳೆ ಮಗುವಿನ ಕಣ್ಣಲ್ಲಿ ಯಾವುದಾದರೂ ಸವೆಯಿಸುವ ವಸ್ತು ಹೋಗಿರುವುದಾದರೆ, ಕೂಡಲೇ ನೀರಿನಿಂದ ಕಡಿಮೆ ಪಕ್ಷ ಹತ್ತು ನಿಮಿಷಗಳ ವರೆಗಾದರೂ ಕಣ್ಣನ್ನು ತೊಳೆಯಿರಿ.
• ಸುಟ್ಟಗಾಯಗಳು: ಚಿಕ್ಕದಾದ ಸುಟ್ಟಗಾಯಗಳಿಗೆ, ತಣ್ಣಗಿರುವ ನೀರನ್ನು (ತೀರ ತಣ್ಣಗಿರುವುದನ್ನಲ್ಲ) ಗಾಯದ ಮೇಲೆ ಕನಿಷ್ಠ ಪಕ್ಷ 20 ನಿಮಿಷಗಳ ವರೆಗಾದರೂ ಸುರಿಯಿರಿ. ಗಾಯವು ಮಗುವಿನ ಅಂಗೈ ಅಗಲಕ್ಕಿಂತ ದೊಡ್ಡದಾಗಿರುವುದಾದರೆ ಅಥವಾ ಮುಖ, ಕೀಲು, ಕಿಬ್ಬೊಟ್ಟೆ ಇಲ್ಲವೆ ಜನನೇಂದ್ರಿಯಗಳಲ್ಲಿ ಆಗಿರುವುದಾದರೆ, ಮಗುವನ್ನು ಕೂಡಲೇ ತುರ್ತುಚಿಕಿತ್ಸಾ ಕೋಣೆಗೆ ಕರೆದೊಯ್ಯಬೇಕು. ಚರ್ಮದ ಆಳವಾದ ಗಾಯಗಳಿಗೆ ಯಾವಾಗಲೂ ವೈದ್ಯನಿಂದಲೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು.
• ಉಸಿರುಕಟ್ಟುವುದು: ಮಕ್ಕಳ ಶ್ವಾಸನಾಳದಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದ್ದರೆ, ಅದನ್ನು ಆದಷ್ಟು ಬೇಗ ಹೊರತೆಗೆಯುವುದು ತುಂಬ ಆವಶ್ಯಕ. ನೀವು ಕೂಡಲೇ ಕೈಗೊಳ್ಳಬಹುದಾದ ಒಂದು ಪರಿಣಾಮಕಾರಿಯಾದ ವಿಧಾನವು, ಹೊಟ್ಟೆಯ ಮೇಲ್ಭಾಗಕ್ಕೆ ಥಟ್ಟನೆ ಒತ್ತಡಹಾಕಿ ಅದುಮುವ ಹೈಮಲಿಕ್ ಮನ್ಯೂವರ್ ಆಗಿದೆ. ಅದು ನಿಮಗೆ ಮಾಡಲು ಗೊತ್ತಿರದಿದ್ದಲ್ಲಿ, ಈ ವಿಧಾನದ ಕುರಿತು ವೈದ್ಯನಿಂದ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಿ ಇಲ್ಲವೆ ಈ ವಿಧಾನವನ್ನು ಕಲಿಸುವ ಮಕ್ಕಳ ಅಪಘಾತ ಇಲ್ಲವೇ ಪ್ರಥಮ ಚಿಕಿತ್ಸೆಯ ಕೋರ್ಸುಗಳಿಗೆ ಹಾಜರಾಗಿ.
[ಕೃಪೆ]
ಮೂಲ: ಸ್ವೀಡನಿನ ರೆಡ್ ಕ್ರಾಸ್
[ಪುಟ 23 ರಲ್ಲಿರುವ ಚಿತ್ರ]
ಸುರಕ್ಷಾ ಬೈಸಿಕಲ್ ಹೆಲ್ಮೆಟ್ಗಳನ್ನು ಧರಿಸಿಕೊಂಡಿರುವುದು
[ಪುಟ 23 ರಲ್ಲಿರುವ ಚಿತ್ರ]
ಕಾರಿನ ಆಸನದಲ್ಲಿ ಸುರಕ್ಷಿತವಾಗಿರುವುದು