ಮೂಢನಂಬಿಕೆಗಳು—ಇಂದು ಎಷ್ಟು ವ್ಯಾಪಕವಾಗಿ ಹಬ್ಬಿವೆ?
ಇದು ಕೆಲವು ದೇಶಗಳಲ್ಲಿ ಎಲ್ಲೆಡೆಯೂ ಸಂಭವಿಸುತ್ತದೆ—ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಸಾರ್ವಜನಿಕ ವಾಹನಗಳಲ್ಲಿ, ಮತ್ತು ಬೀದಿಯಲ್ಲಿ. ಯಾರಾದರೂ ಸೀನಿದರೆ, ಪರಿಚಯವಿಲ್ಲದ ಜನರು ಸಹ, “ದೇವರು ನಿನ್ನನ್ನು ಕಾಪಾಡಲಿ” ಅಥವಾ “ದೇವರು ನಿನಗೆ ಒಳ್ಳೇದನ್ನು ಮಾಡಲಿ” ಎಂದು ಹೇಳುತ್ತಾರೆ. ನಮ್ಮ ಕಡೆಗಳಲ್ಲಿ, ಏನಾದರೂ ಮಾತಾಡುತ್ತಿರುವಾಗ ಒಬ್ಬ ವ್ಯಕ್ತಿ ಸೀನಿದರೆ, “ಹೇಳಿದ ಮಾತು ನಿಜವಾಗುತ್ತದೆ” ಎಂದು ಹೇಳುತ್ತಾರೆ. ಅನೇಕ ಭಾಷೆಗಳಲ್ಲಿ ತದ್ರೀತಿಯ ಅಭಿವ್ಯಕ್ತಿಗಳಿವೆ. ಜರ್ಮನರು “ಗೆಸುಂಟ್ಹೈಟ್” ಎಂದು ಹೇಳುತ್ತಾರೆ. ಅರಬ್ಬರು “ಯೆರ್ಹಾಮಾಕ್ ಆಲಾ” ಎಂದೂ, ದಕ್ಷಿಣ ಮಹಾಸಾಗರದ ಪೊಲಿನೇಷಿಯದವರಲ್ಲಿ ಕೆಲವರು, “ಟೀಹೇ ಮಾವ್ರೀ ಆರಾಕ್” ಎಂದೂ ಹೇಳುತ್ತಾರೆ.
ಅದು ಸಾಮಾಜಿಕ ಶಿಷ್ಟಾಚಾರದಿಂದ ಬಂದಿರುವ ಸೌಜನ್ಯದ ಮಾತಾಗಿದೆಯೆಂದು ನೆನಸುತ್ತಾ, ಆ ಮಾತುಗಳ ಕುರಿತು ನೀವು ಹೆಚ್ಚು ಯೋಚಿಸಿರಲಿಕ್ಕಿಲ್ಲ. ಆದರೆ ಆ ವಾಕ್ಸರಣಿಯು ಮೂಢನಂಬಿಕೆಯಲ್ಲಿ ಬೇರೂರಿದೆ. ಅಮೆರಿಕದ ಇಂಡಿಯಾನದಲ್ಲಿರುವ ಬ್ಲೂಮಿಂಗ್ಟನ್ನಲ್ಲಿನ ಇಂಡಿಯಾನಾ ಯೂನಿವರ್ಸಿಟಿಯ ಜಾನಪದ ಇನ್ಸ್ಟಿಟ್ಯೂಟ್ನ ಗ್ರಂಥಪಾಲಕಿಯಾಗಿರುವ ಮೊಯಿರ ಸ್ಮಿತ್ ಆ ವಾಕ್ಸರಣಿಯ ಕುರಿತಾಗಿ ಹೇಳುವುದು: “ನೀವು ಸೀನುವಾಗ ನಿಮ್ಮ ಪ್ರಾಣವು ಹಾರಿಹೋಗುತ್ತದೆಂಬ ಅಭಿಪ್ರಾಯದಿಂದ ಇದು ಶುರುವಾಯಿತು.” ಆದುದರಿಂದ, “ದೇವರು ಕಾಪಾಡಲಿ” ಎಂದು ಹೇಳುವಾಗ, ಕಾರ್ಯತಃ ಪ್ರಾಣವನ್ನು ದೇಹಕ್ಕೆ ಹಿಂದಿರುಗಿಸುವಂತೆ ಆತನನ್ನು ಕೇಳಿಕೊಂಡಂತಾಗುತ್ತದೆ.
ಸೀನುವಾಗ ಪ್ರಾಣವು ಹಾರಿಹೋಗುತ್ತದೆಂಬ ನಂಬಿಕೆಯು, ತರ್ಕವಿರುದ್ಧವಾದ ಸಂಗತಿಯೆಂದು ಹೆಚ್ಚಿನವರು ಖಂಡಿತವಾಗಿಯೂ ಒಪ್ಪಿಕೊಳ್ಳಬಹುದು. ಆದುದರಿಂದ, ವೆಬ್ಸ್ಟರ್ಸ್ ನೈನ್ತ್ ನ್ಯೂ ಕಾಲೇಜಿಯೆಟ್ ಡಿಕ್ಷನೆರಿಯು ಮೂಢನಂಬಿಕೆ ಎಂಬ ಪದವನ್ನು, “ಅಜ್ಞಾನದಿಂದ ಉಂಟಾಗುವ ಒಂದು ನಂಬಿಕೆ ಅಥವಾ ಆಚರಣೆ, ಅಜ್ಞಾತ ಶಕ್ತಿಯ ಭಯ, ಇಂದ್ರಜಾಲ ಅಥವಾ ಅದೃಷ್ಟದಲ್ಲಿನ ಭರವಸೆ ಇಲ್ಲವೆ ನಿರ್ದಿಷ್ಟ ಘಟನೆಗಳು ಏಕೆ ನಡೆಯುತ್ತವೆಂಬುದರ ತಪ್ಪಭಿಪ್ರಾಯ” ಎಂದು ಅರ್ಥನಿರೂಪಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಆದುದರಿಂದ, 17ನೆಯ ಶತಮಾನದ ವೈದ್ಯನೊಬ್ಬನು ಮೂಢನಂಬಿಕೆಗಳನ್ನು, ತನ್ನ ದಿನದಲ್ಲಿದ್ದ ಅಶಿಕ್ಷಿತ “ಜನಸಾಮಾನ್ಯರ ದೋಷಗಳು” ಎಂದು ಕರೆದುದರಲ್ಲಿ ಆಶ್ಚರ್ಯವೇನೂ ಇಲ್ಲ. ಹೀಗಿರುವುದರಿಂದ, ಮನುಷ್ಯನು ತನ್ನ ವೈಜ್ಞಾನಿಕ ಸಾಧನೆಗಳೊಂದಿಗೆ 20ನೆಯ ಶತಮಾನವನ್ನು ಪ್ರವೇಶಿಸುತ್ತಿದ್ದ ಸಮಯದಲ್ಲಿ, 1910ರ ದ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಸಂಪುಟವು, “ಮೂಢನಂಬಿಕೆಯ ಕೊನೆಯ ಅವಶೇಷದಿಂದ ನಾಗರಿಕತೆಯು ಮುಕ್ತವಾಗುವ” ಒಂದು ಸಮಯವನ್ನು ಆಶಾವಾದದಿಂದ ಮುನ್ನೋಡಿತು.
ಹಿಂದಿನಂತೆ ಈಗಲೂ ವ್ಯಾಪಕ
ಎಂಟು ದಶಕಗಳ ಹಿಂದೆ ಇದ್ದ ಆ ಆಶಾವಾದವು ನಿರಾಧಾರವಾದದ್ದಾಗಿತ್ತು. ಯಾಕೆಂದರೆ ಮೂಢನಂಬಿಕೆಯು ಎಂದಿನಂತೆ ಈಗಲೂ ದೃಢವಾಗಿ ತಳವೂರಿರುವಂತೆ ತೋರುತ್ತದೆ. ಇಂತಹ ಬಾಳಿಕೆಯು ಮೂಢನಂಬಿಕೆಗಳ ಒಂದು ವಿಶೇಷತೆಯಾಗಿದೆ. ಮೂಢನಂಬಿಕೆಗಳು ಈಗಲೂ ಅಸ್ತಿತ್ವದಲ್ಲಿವೆಯೆಂಬುದಕ್ಕೆ ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
◻ ಏಷಿಯದಲ್ಲಿರುವ ಒಂದು ಮಹಾನಗರದ ಆಡಳಿತಗಾರರೊಬ್ಬರ ಹಠಾತ್ತಾದ ಮರಣದ ಬಳಿಕ, ಅವರ ಅಧಿಕೃತ ನಿವಾಸದಲ್ಲಿದ್ದ ಸಿಬ್ಬಂದಿಯು ಸ್ಥೈರ್ಯಗೆಟ್ಟು, ಹೊಸ ಆಡಳಿತಗಾರರು ನಿವಾಸಕ್ಕೆ ಬರುವ ಮೊದಲು ಒಬ್ಬ ವಿಶೇಷ ಪ್ರೇತವಾಹಕನನ್ನು ವಿಚಾರಿಸಿ ನೋಡುವಂತೆ ಸಲಹೆ ನೀಡಿತು. ಪ್ರೇತವಾಹಕನು ಆ ಅಧಿಕೃತ ನಿವಾಸದೊಳಗೆ ಮತ್ತು ಸುತ್ತಲೂ ಹಲವಾರು ಬದಲಾವಣೆಗಳನ್ನು ಮಾಡುವಂತೆ ಹೇಳಿದನು. ಈ ಬದಲಾವಣೆಗಳನ್ನು ಮಾಡುವುದರಿಂದ ಅಪಶಕುನವನ್ನು ದೂರಮಾಡಸಾಧ್ಯವಿದೆ ಎಂಬುದು ಆ ಸಿಬ್ಬಂದಿಯ ಅನಿಸಿಕೆಯಾಗಿತ್ತು.
◻ ಅಮೆರಿಕದಲ್ಲಿ, ಹಲವಾರು ಕೋಟಿ ಡಾಲರುಗಳ ಲಾಭವನ್ನು ಗಳಿಸುವ ಒಂದು ಕಂಪೆನಿಯ ಅಧ್ಯಕ್ಷೆಯ ಬಳಿ ಯಾವಾಗಲೂ ಒಂದು ವಿಶೇಷ ರೀತಿಯ ಕಲ್ಲು ಇರುತ್ತದೆ. ಆಕೆಯ ಪ್ರಥಮ ಯಶಸ್ವಿ ವ್ಯಾಪಾರ ಪ್ರದರ್ಶನದ ನಂತರ, ತಾನು ಹೋದಲ್ಲೆಲ್ಲಾ ಅವಳು ಅದನ್ನು ಕೊಂಡೊಯ್ಯುತ್ತಾಳೆ.
◻ ದೊಡ್ಡ ದೊಡ್ಡ ವ್ಯಾಪಾರ ವಹಿವಾಟುಗಳನ್ನು ಮುಕ್ತಾಯಗೊಳಿಸುವ ಮುಂಚೆ, ಏಷಿಯದ ವ್ಯಾಪಾರಿ ಕಾರ್ಯನಿರ್ವಾಹಕರು, ಭವಿಷ್ಯ ನುಡಿಯುವವರ ಸಲಹೆಯನ್ನು ಪಡೆದುಕೊಳ್ಳುತ್ತಾರೆ.
◻ ಒಬ್ಬ ಕ್ರೀಡಾಪಟುವು ತನ್ನನ್ನು ತುಂಬ ತರಬೇತುಗೊಳಿಸಿಕೊಳ್ಳುತ್ತಾನಾದರೂ, ತಾನು ಧರಿಸುವ ಒಂದು ಜೊತೆ ಬಟ್ಟೆಯಿಂದಲೇ ತನಗೆ ಜಯ ದೊರಕುತ್ತದೆ ಎಂದು ಆ ಬಟ್ಟೆಗೆ ಕೀರ್ತಿ ಸಲ್ಲಿಸುತ್ತಾನೆ. ಆದುದರಿಂದ, ಅವನು ಅಂದಿನಿಂದ ನಡೆಯುವ ಎಲ್ಲ ಸ್ಪರ್ಧೆಗಳಲ್ಲಿ ಆ ಬಟ್ಟೆಯನ್ನು ತೊಳೆಯದೇ ಧರಿಸುತ್ತಾನೆ.
◻ ಒಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಬರೆಯಲಿಕ್ಕಾಗಿ ಒಂದು ನಿರ್ದಿಷ್ಟ ಪೆನ್ನನ್ನು ಉಪಯೋಗಿಸಿ, ಉಚ್ಚಾಂಕಗಳನ್ನು ಗಳಿಸುತ್ತಾನೆ. ಅಂದಿನಿಂದ, ಅವನು ಆ ಪೆನ್ನನ್ನು “ಅದೃಷ್ಟಕರ”ವೆಂದು ಪರಿಗಣಿಸುತ್ತಾನೆ.
◻ ಒಬ್ಬ ಹೊಸ ಮದುಮಗಳು, ತನ್ನ ಗಂಡನ ಮನೆಯನ್ನು ಪ್ರವೇಶಿಸುವಾಗ, ಹೊಸ್ತಿಲ ಮೇಲೆ ಇಟ್ಟಿರುವ ಅಕ್ಕಿ ಸೇರನ್ನು ಒದ್ದು, ತನ್ನ ಬಲಪಾದವನ್ನು ಮುಂದಿಟ್ಟು ಮನೆಯನ್ನು ಪ್ರವೇಶಿಸುತ್ತಾಳೆ. ಇದರಿಂದ ಆ ಮನೆಗೆ ಶುಭವಾಗುವುದೆಂದು ನೆನಸಲಾಗುತ್ತದೆ.
◻ ಒಬ್ಬ ವ್ಯಕ್ತಿಯು ಬೈಬಲನ್ನು ಯದ್ವಾತದ್ವಾ ತೆರೆಯುತ್ತಾನೆ, ಮತ್ತು ತನ್ನ ಕಣ್ಣಿಗೆ ಬೀಳುವ ಪ್ರಥಮ ವಚನವನ್ನು ಓದುತ್ತಾನೆ. ಅಲ್ಲಿರುವ ಮಾತುಗಳು ತನಗೆ ಆ ಕ್ಷಣದಲ್ಲಿ ಬೇಕಾಗಿರುವ ಮಾರ್ಗದರ್ಶನವನ್ನು ಕೊಡುತ್ತವೆಂದು ಅವನು ನಂಬುತ್ತಾನೆ.
◻ ಪ್ರಯಾಣಿಸುತ್ತಿರುವಾಗ ಜನರು ನದಿಗಳಲ್ಲಿ ನಾಣ್ಯಗಳನ್ನು ಎಸೆಯುತ್ತಾರೆ. ಇದರಿಂದ ತಮ್ಮ ಪ್ರಯಾಣವು ಸುರಕ್ಷಿತವಾಗುವುದೆಂದು ಅವರು ನಂಬುತ್ತಾರೆ.
ಇಂದು ಕೂಡ ಮೂಢನಂಬಿಕೆಯು ತುಂಬ ವ್ಯಾಪಕವಾಗಿದೆಯೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಾಸ್ತವದಲ್ಲಿ, ಕನೆಟಿಕಟ್ ಕಾಲೇಜ್ನಲ್ಲಿ ಮನಶ್ಶಾಸ್ತ್ರದ ಜೊತೆ ಪ್ರೊಫೆಸರರಾದ ಸ್ಟೂಅರ್ಟ್ ಎ. ವೈಸ್, ಇಂದ್ರಜಾಲವನ್ನು ನಂಬುವುದು—ಮೂಢನಂಬಿಕೆಯ ಮನೋವಿಜ್ಞಾನ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ತಿಳಿಸುವುದು: “ತಾಂತ್ರಿಕವಾಗಿ ತುಂಬ ಪ್ರಗತಿಯನ್ನು ಮಾಡಿರುವ ಒಂದು ಸಮಾಜದಲ್ಲಿ ನಾವು ಜೀವಿಸುತ್ತಿರುವುದಾದರೂ, ಮೂಢನಂಬಿಕೆಯು ಹಿಂದಿನಂತೆ ಈಗಲೂ ವ್ಯಾಪಕವಾಗಿದೆ.”
ಮೂಢನಂಬಿಕೆಯು ಇಂದು ಎಷ್ಟು ಆಳವಾಗಿ ತಳವೂರಿದೆಯೆಂದರೆ, ಅದನ್ನು ಅಳಿಸಿಹಾಕಲು ಮಾಡಲಾಗಿರುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹೀಗೇಕೆ?