ಯುವ ಜನರು ಪ್ರಶ್ನಿಸುವುದು . . .
ಇತರರೊಂದಿಗೆ ನಾನು ಸುಲಭವಾಗಿ ಏಕೆ ಬೆರೆಯಲಾರೆ?
“ನಾಚಿಕೆಯು ನಿಮ್ಮನ್ನು ನಿಶ್ಚೇಷ್ಟಗೊಳಿಸುತ್ತದೆ. ಅದು ನೀವು ನಿಭಾಯಿಸಲೇ ಬೇಕಾದ ಬಂಧಿಸುವ ಭೀತಿಯಾಗಿದೆ. ಅದು ತೀರ ವಾಸ್ತವವಾದದ್ದು.”—ರಿಚರ್ಡ್.a
“ನಾನು ಬೆಳೆಯುತ್ತಿದ್ದಾಗ ನಾಚಿಕೆಯು ನಿಜವಾಗಿಯೂ ಒಂದು ಸಮಸ್ಯೆಯಾಗಿತ್ತು. ನಾನು ನನ್ನದೇ ಆದ ಒಂದು ಪುಟ್ಟ ಪ್ರಪಂಚದಲ್ಲಿದ್ದಂತಿತ್ತು.”—18 ವರ್ಷ ಪ್ರಾಯದ ಎಲಿಸಬೆತ್.
‘ನನ್ನಲ್ಲೇನಾದರೂ ದೋಷವಿದೆಯೊ? ಇತರರೊಂದಿಗೆ ನಾನು ಸುಲಭವಾಗಿ ಏಕೆ ಬೆರೆಯಲಾರೆ?’ ನೀವು ಎಂದಾದರೂ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರೊ? ಮೇಲೆ ಉಲ್ಲೇಖಿಸಲ್ಪಟ್ಟಿರುವ ರಿಚರ್ಡ್ನಂತೆ, ಒಬ್ಬ ಹೊಸ ವ್ಯಕ್ತಿಯನ್ನು ಭೇಟಿಯಾಗುವಾಗ ನಿಮಗೆ ಗಾಬರಿಯಾಗಬಹುದು ಅಥವಾ ನೀವು ಆತಂಕಪಡಬಹುದು. ಅಧಿಕಾರದ ಸ್ಥಾನದಲ್ಲಿರುವವರು ನಿಮ್ಮ ಸುತ್ತಮುತ್ತಲಿರುವಾಗ ನೀವು ಭಯದಿಂದ ಮುದುಡಿಕೊಳ್ಳುತ್ತಿರಬಹುದು. ಅಥವಾ ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆಂಬುದರ ಕುರಿತಾಗಿ ನೀವು ಎಷ್ಟು ಚಿಂತಿಸುತ್ತಿರಬಹುದೆಂದರೆ, ನಿಮ್ಮ ಅನಿಸಿಕೆಗಳು ಅಥವಾ ಅಭಿಪ್ರಾಯಗಳನ್ನು ತಿಳಿಸಲು ನಿಮಗೆ ಒಂದು ಅವಕಾಶವು ಕೊಡಲ್ಪಡುವಾಗಲೂ ನೀವು ಮೌನತಾಳುತ್ತೀರಿ. ಟ್ರೇಸಿ ಎಂಬ ಯುವತಿಯೊಬ್ಬಳು ಒಪ್ಪಿಕೊಳ್ಳುವುದು: “ನನಗೆ ಪರಿಚಯವಿಲ್ಲದ ವ್ಯಕ್ತಿಗಳ ಬಳಿ ಹೋಗಿ ಮಾತಾಡಲು ನನಗೆ ತುಂಬ ಕಷ್ಟವಾಗುತ್ತದೆ.”
ಇಂತಹ ಭಾವನೆಗಳಿಗೆ ಕಾರಣಗಳೇನು? ಆ ಸಮಸ್ಯೆಯನ್ನು ಬಗೆಹರಿಸಲು ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆಯು, ಸಮಸ್ಯೆಯು ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. (ಜ್ಞಾನೋಕ್ತಿ 1:5) ಒಬ್ಬ ಮಹಿಳೆಯು ಹೇಳಿದ್ದು: “ಜನರ ಗುಂಪಿನಲ್ಲಿರುವಾಗ ನನಗೇಕೆ ಮುಜುಗರವಾಗುತ್ತಿತ್ತೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ನನ್ನ ಸಮಸ್ಯೆ ಏನೆಂಬುದನ್ನು ನಾನು ಈಗ ಗುರುತಿಸಿಕೊಂಡಿರುವುದರಿಂದ, ಅದನ್ನು ಹೋಗಲಾಡಿಸಬಲ್ಲೆ.” ಆದುದರಿಂದ, ಕೆಲವು ಯುವ ಜನರಿಗೆ ಇತರರೊಂದಿಗೆ ಬೆರೆಯಲು ಏಕೆ ಕಷ್ಟವಾಗುತ್ತದೆಂಬುದಕ್ಕೆ ಕೆಲವೊಂದು ಕಾರಣಗಳನ್ನು ನಾವು ಈಗ ನೋಡೋಣ.
ನಾಚಿಕೆಯ ಸಮಸ್ಯೆ
ನಾಚಿಕೆಯು ಬಹುಶಃ ಅತಿಸಾಮಾನ್ಯವಾದ ಕಾರಣವಾಗಿದೆ. ಬಹಿರ್ಮುಖಿಯಾದ ಒಬ್ಬ ಯುವ ವ್ಯಕ್ತಿಗೆ ಅನೇಕ ರೀತಿಯ ಮಿತ್ರರಿರುವಾಗ, ನಾಚಿಕೆ ಸ್ವಭಾವದ ಅಂತರ್ಮುಖಿಯಾದ ಯುವ ವ್ಯಕ್ತಿಗೆ ಒಂಟಿಭಾವನೆ ಮತ್ತು ಎಲ್ಲರಿಂದ ಬೇರ್ಪಡಿಸಲ್ಪಟ್ಟಿದ್ದೇನೆಂಬ ಅನಿಸಿಕೆ ಆಗಬಲ್ಲದು. 18 ವರ್ಷ ಪ್ರಾಯದ ಎಲಿಸಬೆತ್ ಹೇಳುವುದು: “ನಾನು ಬೆಳೆಯುತ್ತಿದ್ದಾಗ ನಾಚಿಕೆಯು ಒಂದು ನಿಜವಾದ ಸಮಸ್ಯೆಯಾಗಿತ್ತು. ನಾನು ನನ್ನದೇ ಆದ ಒಂದು ಪುಟ್ಟ ಪ್ರಪಂಚದಲ್ಲಿದ್ದಂತಿತ್ತು.” ಪ್ರೌಢಶಾಲೆಯ ಪ್ರಥಮ ವರ್ಷದಲ್ಲಿ ಡಯಾನ್ ಎದುರಿಸಿದ ಒತ್ತಡಗಳನ್ನು ಅವಳು ನೆನಪಿಸಿಕೊಳ್ಳುತ್ತಾಳೆ. “ಯಾರೂ ನನ್ನನ್ನು ಗಮನಿಸುವುದು ನನಗೆ ಇಷ್ಟವಿರಲಿಲ್ಲ. ಜನಪ್ರಿಯರಾಗಿರುವುದು ನಮಗೆ ಎಷ್ಟು ಪ್ರಾಮುಖ್ಯವಾಗಿತ್ತು ಎಂಬುದನ್ನು ಸೂಚಿಸುವಂತೆ ನಮ್ಮ ಒಬ್ಬ ಶಿಕ್ಷಕರು ನಮ್ಮನ್ನು ಕೇಳಿಕೊಂಡರು. ಸೊನ್ನೆಯಿಂದ ಐದರ ವರೆಗಿನ ಮಾಪಕದಲ್ಲಿ ಸೊನ್ನೆಯು ಪ್ರಾಮುಖ್ಯವಾಗಿರಲಿಲ್ಲ, ಆದರೆ ಅಂಕೆ ಐದು ಪ್ರಾಮುಖ್ಯವಾಗಿತ್ತು. ಶಾಲೆಯಲ್ಲಿ ಜನಪ್ರಿಯರಾಗಿದ್ದ ಹುಡುಗಿಯರೆಲ್ಲರೂ ಅಂಕೆ ಐದನ್ನು ಹಾಕಿದರು. ಆದರೆ ನಾನು ಸೊನ್ನೆಯನ್ನು ಹಾಕಿದೆ. ಜನಪ್ರಿಯಳಾಗುವುದರ ಭಯವೇ ನನ್ನನ್ನು ನಾಚಿಕೆಸ್ವಭಾವದವಳನ್ನಾಗಿ ಮಾಡಿತ್ತೆಂದು ಹೇಳಬಹುದು. ಯಾರೂ ನಿಮ್ಮನ್ನು ಗಮನಿಸುವುದು ನಿಮಗೆ ಇಷ್ಟವಿರುವುದಿಲ್ಲ ಅಥವಾ ನೀವು ಗಮನದ ಕೇಂದ್ರಬಿಂದುವಾಗಿರಲು ಬಯಸುವುದಿಲ್ಲ, ಯಾಕಂದರೆ ಇತರರು ನಿಮ್ಮನ್ನು ಇಷ್ಟಪಡಲಿಕ್ಕಿಲ್ಲವೆಂಬ ಹೆದರಿಕೆ ನಿಮಗಿರುತ್ತದೆ.”
ಸ್ವಲ್ಪ ನಾಚಿಕೆ ಸ್ವಭಾವದವರಾಗಿರುವುದು ಖಂಡಿತವಾಗಿಯೂ ಕೆಟ್ಟದ್ದಲ್ಲ. ನಾಚಿಕೆಗೂ ಅಭಿಮಾನಮಿತಿ, ಅಂದರೆ ನಮ್ಮ ಇತಿಮಿತಿಗಳ ಪ್ರಜ್ಞೆಗೂ ನಿಕಟವಾದ ಸಂಬಂಧವಿದೆ. ‘ದೇವರಿಗೆ ನಮ್ರವಾಗಿ [“ಅಭಿಮಾನಮಿತಿಯಿಂದ,” NW] ನಡೆದುಕೊಳ್ಳುವಂತೆ’ ಬೈಬಲ್ ನಮಗೆ ಆಜ್ಞಾಪಿಸುತ್ತದೆ. (ಮೀಕ 6:8) ದರ್ಪವುಳ್ಳ, ತನ್ನದೇ ಸರಿಯೆಂದು ವಾದಿಸುವ, ಅಥವಾ ನಿಮ್ಮ ಎಲ್ಲ ಗಮನವನ್ನು ಅಪೇಕ್ಷಿಸುವ ಒಬ್ಬ ವ್ಯಕ್ತಿಗಿಂತಲೂ, ಅಭಿಮಾನಮಿತಿಯುಳ್ಳ ಒಬ್ಬ ವ್ಯಕ್ತಿ ಅಥವಾ ಒಂದಿಷ್ಟು ನಾಚಿಕೆ ಸ್ವಭಾವದ ವ್ಯಕ್ತಿಯೊಂದಿಗೆ ಇರುವುದು ಹೆಚ್ಚು ಹಿತವೆನಿಸುತ್ತದೆ. ‘ಮಾತಾಡುವ ಸಮಯ’ ಇರುವುದಾದರೂ, ‘ಸುಮ್ಮನಿರುವ ಸಮಯವೂ’ ಇದೆ. (ಪ್ರಸಂಗಿ 3:7) ನಾಚಿಕೆ ಸ್ವಭಾವದ ಜನರಿಗೆ ಸುಮ್ಮನಿರುವುದು ಕಷ್ಟಕರವಾಗಿರಲಿಕ್ಕಿಲ್ಲ. ಮತ್ತು ಅವರು “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರುವುದರಿಂದ, ಅವರು ಒಳ್ಳೆಯ ಕೇಳುಗರಾಗಿದ್ದಾರೆಂದು ಇತರರು ಅನೇಕ ವೇಳೆ ಅವರನ್ನು ಗಣ್ಯಮಾಡುತ್ತಾರೆ.—ಯಾಕೋಬ 1:19.
ಆದರೆ ಅನೇಕವೇಳೆ, ಒಬ್ಬ ಯುವ ವ್ಯಕ್ತಿಯು ಎಷ್ಟು ಮೌನಿ, ನಾಚಿಕೆಸ್ವಭಾವದವನು ಅಥವಾ ಸಂಕೋಚಪ್ರವೃತ್ತಿಯುಳ್ಳವನು ಆಗಿರುತ್ತಾನೆಂದರೆ ಅವನಿಗೆ ಅಥವಾ ಅವಳಿಗೆ ಸ್ನೇಹಿತರನ್ನು ಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ. ಮತ್ತು ಕೆಲವೊಂದು ವಿಪರೀತವಾದ ಸಂದರ್ಭಗಳಲ್ಲಿ ನಾಚಿಕೆ ಸ್ವಭಾವವು, ಒಬ್ಬ ಲೇಖಕನು ಹೇಳುವಂತೆ, “ಒಂದು ರೀತಿಯ ಅಸಾಮಾನ್ಯವಾದ ಸ್ವ-ಬಂಧನ,” ಅಂದರೆ ಜನರಿಂದ ಪ್ರತ್ಯೇಕಿಸಿಕೊಳ್ಳುವಿಕೆಯನ್ನು ಉಂಟುಮಾಡುತ್ತದೆ.—ಜ್ಞಾನೋಕ್ತಿ 18:1.
ನಾಚಿಕೆ—ಒಂದು ಸಾಮಾನ್ಯ ಸಮಸ್ಯೆ
ನೀವು ನಾಚಿಕೆ ಸ್ವಭಾವವುಳ್ಳವರಾಗಿರುವಲ್ಲಿ, ಅದು ಸರ್ವಸಾಮಾನ್ಯವಾದ ಒಂದು ಸಮಸ್ಯೆಯಾಗಿದೆ ಎಂಬುದು ನಿಮಗೆ ತಿಳಿದಿರಲಿ. ಪ್ರೌಢಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳ ಒಂದು ಸಮೀಕ್ಷೆಯಲ್ಲಿ, “82 ಪ್ರತಿಶತ ವಿದ್ಯಾರ್ಥಿಗಳು ತಾವು ತಮ್ಮ ಜೀವಿತದಲ್ಲಿ ಒಂದಲ್ಲ ಒಂದು ಹಂತದಲ್ಲಿ ನಾಚಿಕೆ ಸ್ವಭಾದವರಾಗಿದ್ದೆವು ಎಂಬುದನ್ನು ಒಪ್ಪಿಕೊಂಡರು.” (ಈಸ್ಟ್ವುಡ್ ಆ್ಯಟ್ವಾಟರ್ರವರ ಅಡೊಲೆಸೆನ್ಸ್ ಪುಸ್ತಕ) ಬೈಬಲ್ ಸಮಯಗಳಲ್ಲಿಯೂ ಕೆಲವು ವ್ಯಕ್ತಿಗಳಿಗೆ ನಾಚಿಕೆಯ ಸಮಸ್ಯೆಯಿತ್ತು. ಮೋಶೆ ಮತ್ತು ತಿಮೊಥೆಯರಂತಹ ಪ್ರಸಿದ್ಧ ವ್ಯಕ್ತಿಗಳು ಸಹ ಅದರೊಂದಿಗೆ ಹೋರಾಡಿದ್ದಿರಬಹುದು.—ವಿಮೋಚನಕಾಂಡ 3:11, 13; 4:1, 10, 13; 1 ತಿಮೊಥೆಯ 4:12; 2 ತಿಮೊಥೆಯ 1:6-8.
ಇಸ್ರಾಯೇಲ್ ಎಂಬ ಪ್ರಾಚೀನ ಜನಾಂಗದ ಪ್ರಪ್ರಥಮ ರಾಜನಾದ ಸೌಲನನ್ನೇ ತೆಗೆದುಕೊಳ್ಳಿ. ಸಾಮಾನ್ಯತಃ ಸೌಲನು ಒಬ್ಬ ಧೀರ ಪುರುಷನಾಗಿದ್ದನು. ತನ್ನ ತಂದೆಗೆ ಸೇರಿದ ಕತ್ತೆಗಳ ಹಿಂಡು ಕಳೆದುಹೋದಾಗ, ಅವುಗಳನ್ನು ಹುಡುಕಿ ತರಲು ಅವನು ಕೆಚ್ಚೆದೆಯಿಂದ ಮುಂದಡಿಯಿಟ್ಟನು. (1 ಸಮುವೇಲ 9:3, 4) ಆದರೆ ಅವನನ್ನು ಜನಾಂಗದ ರಾಜನಾಗಿ ಅಭಿಷೇಕಿಸಲಾದಾಗ, ಒಮ್ಮಿಂದೊಮ್ಮೆಲೆ ನಾಚಿಕೆಯು ಅವನನ್ನು ಆವರಿಸಿತು. ಜಯಕಾರವನ್ನೆತ್ತುತ್ತಿದ್ದ ಜನಸಮೂಹಗಳ ಮುಂದೆ ಹೋಗಿ ನಿಲ್ಲುವ ಬದಲಿಗೆ, ಸೌಲನು ಸಾಮಾನುಗಳ ಮಧ್ಯದಲ್ಲಿ ಅಡಗಿಕೊಂಡನು!—1 ಸಮುವೇಲ 10:20-24.
ಸೌಲನು ತೋರಿಸಿದಂತಹ ಆತ್ಮವಿಶ್ವಾಸದ ಕೊರತೆಯು ಗಲಿಬಿಲಿಗೊಳಿಸುವಂತಹದ್ದಾಗಿ ತೋರಬಹುದು. ಏಕೆಂದರೆ ಎಷ್ಟೆಂದರೂ, ಅವನೊಬ್ಬ ಆಕರ್ಷಕ, ಸ್ಫುರದ್ರೂಪಿ ಯುವಕನಾಗಿದ್ದನೆಂದು ಬೈಬಲ್ ವರ್ಣಿಸುತ್ತದೆ. ಅಷ್ಟೇಕೆ, ಅವನು ‘ಜನರ ಗುಂಪಿನಲ್ಲಿ ಹೆಗಲೂ ತಲೆಯೂ ಕಾಣುವಷ್ಟು ಉನ್ನತವಾಗಿದ್ದನು.’ (1 ಸಮುವೇಲ 9:2) ಅಷ್ಟುಮಾತ್ರವಲ್ಲದೆ, ಸೌಲನು ರಾಜನಾಗಿ ಆಳುವಾಗ ಯೆಹೋವನು ಅವನನ್ನು ಆಶೀರ್ವದಿಸುವನೆಂದು ದೇವರ ಪ್ರವಾದಿಯು ಆಶ್ವಾಸನೆಯನ್ನೂ ಕೊಟ್ಟಿದ್ದನು. (1 ಸಮುವೇಲ 9:17, 20) ಹಾಗಿದ್ದರೂ, ಸೌಲನಿಗೆ ತನ್ನ ವಿಷಯದಲ್ಲಿ ಭರವಸೆಯಿರಲಿಲ್ಲ. ಅವನು ರಾಜನಾಗುವನೆಂದು ಅವನಿಗೆ ಹೇಳಲ್ಪಟ್ಟಾಗ, ಅವನು ವಿನಮ್ರನಾಗಿ ಉತ್ತರಿಸಿದ್ದು: “ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ.”—1 ಸಮುವೇಲ 9:21.
ಸೌಲನಂತಹ ವ್ಯಕ್ತಿಗೆ ಆತ್ಮವಿಶ್ವಾಸದ ಕೊರತೆ ಇರಸಾಧ್ಯವಿರುವಲ್ಲಿ, ಕೆಲವೊಮ್ಮೆ ನಿಮಗೂ ಭರವಸೆಯ ಕೊರತೆಯಿರುವುದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ. ಒಬ್ಬ ಯುವ ವ್ಯಕ್ತಿಯೋಪಾದಿ, ಜೀವಿತದ ಈ ಹಂತದಲ್ಲಿ ನಿಮ್ಮ ದೇಹದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ವಯಸ್ಕರಿಂದ ತುಂಬಿರುವ ಒಂದು ಜಗತ್ತಿನಲ್ಲಿ ಹೇಗೆ ಜೀವಿಸಬೇಕೆಂಬುದನ್ನು ನೀವು ಕಲಿತುಕೊಳ್ಳಲು ಆರಂಭಿಸುತ್ತಿದ್ದೀರಿ ಅಷ್ಟೇ. ಆದುದರಿಂದ, ನೀವು ಸ್ವಲ್ಪ ಸ್ವಪ್ರಜ್ಞೆಯುಳ್ಳವರೂ, ಆತ್ಮವಿಶ್ವಾಸದ ಕೊರತೆಯುಳ್ಳವರೂ ಆಗಿರುವುದು ಸ್ವಾಭಾವಿಕವೇ. ಹೆತ್ತವರು (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿ ಡಾಕ್ಟರ್ ಡೇವಿಡ್ ಎಲ್ಕೈಂಡ್ ಬರೆದುದು: “ತರುಣಾವಸ್ಥೆಯ ಆರಂಭದ ಹಂತದಲ್ಲಿ, ಹೆಚ್ಚಿನ ಯುವ ಜನರು ನಾಚಿಕೆ ಸ್ವಭಾವದವರಾಗಿರುತ್ತಾರೆ. ಆ ಸಮಯದಲ್ಲಿ ಅವರು, ನಾನು ಏನನ್ನು ಒಂದು ಕಲ್ಪಿತ ಶ್ರೋತೃವೃಂದ ಎಂದು ಕರೆಯುತ್ತೇನೊ ಅದನ್ನು ವಿಕಸಿಸಿಕೊಳ್ಳುತ್ತಾರೆ. ಅಂದರೆ, ಇತರರು ತಮ್ಮನ್ನು ಗಮನಿಸುತ್ತಾ ಇದ್ದಾರೆ ಮತ್ತು ತಮ್ಮ ತೋರಿಕೆ ಹಾಗೂ ಕೃತ್ಯಗಳ ಕುರಿತಾಗಿಯೇ ಯೋಚಿಸುತ್ತಿದ್ದಾರೆ ಎಂದು ಯುವ ಜನರು ನೆನಸುತ್ತಾರೆ.”
ಯುವ ಜನರ ಯೋಗ್ಯತೆಯನ್ನು ಅವರ ಸಮಾನಸ್ಥರು ಹೆಚ್ಚಾಗಿ ಅವರ ತೋರಿಕೆಗಳ ಆಧಾರದ ಮೇಲೆ ನಿರ್ಧರಿಸುವುದರಿಂದ, ಹೆಚ್ಚಿನವರು ತಮ್ಮ ತೋರಿಕೆಯ ಕುರಿತಾಗಿ ಪರಿತಪಿಸುತ್ತಿರುತ್ತಾರೆ. (2 ಕೊರಿಂಥ 5:12ನ್ನು ಹೋಲಿಸಿರಿ.) ಆದರೆ ಸ್ವಂತ ತೋರಿಕೆಗಳ ಕುರಿತಾಗಿ ಅತಿರೇಕವಾದ ಚಿಂತೆಯು ಒಳ್ಳೇದಲ್ಲ. ಫ್ರಾನ್ಸ್ನಲ್ಲಿರುವ ಲೀಲ್ಯ ಎಂಬ ಹೆಸರಿನ ಯುವತಿಯು ಈ ವಿಷಯದಲ್ಲಿ ತನ್ನ ಸ್ವಂತ ಅನುಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ: “ಅನೇಕ ಯುವ ಜನರಿಗಿರುವ ಸಮಸ್ಯೆಯು ನನಗೂ ಇತ್ತು. ನನಗೆ ಮೊಡವೆಗಳಿದ್ದವು! ನಾನು ಹೇಗೆ ತೋರುತ್ತೇನೆ ಎಂಬುದರ ಕುರಿತಾಗಿ ನಾನು ಯಾವಾಗಲೂ ತುಂಬ ಯೋಚಿಸುತ್ತಿದ್ದುದರಿಂದ, ಇತರರ ಮುಂದೆ ಹೋಗಿ ಮಾತಾಡಲು ನನಗೆ ಧೈರ್ಯವೇ ಸಾಲುತ್ತಿರಲಿಲ್ಲ.”
ಒಂದು ವಿಷಚಕ್ರ
ನಾಚಿಕೆ ಸ್ವಭಾವದ ಜನರನ್ನು ಹೆಚ್ಚಾಗಿ ಅಪಾರ್ಥಮಾಡಿಕೊಳ್ಳಲಾಗುತ್ತದೆ. ಆದುದರಿಂದ ಅವರು ಸುಲಭವಾಗಿ ಒಂದು ಏಕಾಂತತೆಯ ಚಕ್ರದಲ್ಲಿ ಸಿಕ್ಕಿಬೀಳಬಹುದು. ಅಡೊಲೆಸೆನ್ಸ್ ಎಂಬ ಪುಸ್ತಕವು ತಿಳಿಸುವುದು: “ನಾಚಿಕೆ ಸ್ವಭಾವದ ಯುವ ಜನರ ಕುರಿತಾಗಿ ಇತರರು ಅನೇಕವೇಳೆ ನಕಾರಾತ್ಮಕವಾಗಿ ತಪ್ಪು ತಿಳಿಯುವುದರಿಂದ, ಅವರಿಗೆ ಸ್ನೇಹಿತರನ್ನು ಮಾಡಿಕೊಳ್ಳುವುದು ಹೆಚ್ಚು ಕಷ್ಟಕರವಾಗಿರುತ್ತದೆ. ನಾಚಿಕೆ ಸ್ವಭಾವದ ವ್ಯಕ್ತಿಗಳು, ಇತರರಿಂದ ದೂರಸರಿಯುವವರು, ಬೇಸರಹಿಡಿಸುವವರು, ನಿರ್ಲಿಪ್ತರು, ದೊಡ್ಡಸ್ತಿಕೆಯನ್ನು ತೋರಿಸುವವರು, ಕಠೋರರು ಮತ್ತು ಪ್ರತಿಕೂಲಸ್ವಭಾವದವರು ಆಗಿದ್ದಾರೆಂದು ಪರಿಗಣಿಸಲಾಗುತ್ತದೆ. ಅದಕ್ಕನುಸಾರವಾಗಿ ಅವರೊಂದಿಗೆ ವ್ಯವಹರಿಸಲಾಗುವಾಗ, ಅವರಿಗೆ ಇನ್ನೂ ಹೆಚ್ಚಾಗಿ ಬೇರ್ಪಡಿಸಲ್ಪಟ್ಟಿರುವ, ಒಂಟಿತನದ, ಮತ್ತು ಖಿನ್ನತೆಯ ಅನಿಸಿಕೆಯಾಗಬಹುದು.” ಇದರಿಂದಾಗಿ ಅವರು ಅನಿವಾರ್ಯವಾಗಿ ಇನ್ನೂ ಹೆಚ್ಚು ನಾಚಿಕೆಯಿಂದ ವರ್ತಿಸಬಹುದು ಮತ್ತು ಇದು, ಅವರು ದೊಡ್ಡಸ್ತಿಕೆಯನ್ನು ತೋರಿಸುತ್ತಾರೆ ಅಥವಾ ಅಹಂಕಾರಿಗಳಾಗಿದ್ದಾರೆಂದು ಇತರರಿಗಿರುವ ಅಭಿಪ್ರಾಯವನ್ನು ದೃಢೀಕರಿಸುತ್ತದೆ.
ಒಬ್ಬ ಕ್ರೈಸ್ತರೋಪಾದಿ ನೀವು ಖಂಡಿತವಾಗಿಯೂ ‘ಜಗತ್ತಿಗೆಲ್ಲಾ ಒಂದು ನೋಟ’ವಾಗಿದ್ದೀರಿ. ಆದುದರಿಂದ, ನೀವು ಇತರರ ಮನಸ್ಸಿನಲ್ಲಿ ಮೂಡಿಸುವ ಅಭಿಪ್ರಾಯದ ಕುರಿತು ಖಂಡಿತವಾಗಿಯೂ ಚಿಂತಿತರಾಗಿರಬೇಕು. (1 ಕೊರಿಂಥ 4:9) ಇತರರೊಂದಿಗೆ ಮಾತಾಡುವಾಗ ನೀವು ಕಣ್ಸಂಪರ್ಕವಿಡುವುದಿಲ್ಲವೊ? ನಿಮ್ಮ ಭಂಗಿ ಮತ್ತು ದೇಹ ಭಾಷೆಯೇ, ಇತರರು ನಿಮ್ಮನ್ನು ನಿಮ್ಮಷ್ಟಕ್ಕೇ ಬಿಟ್ಟುಬಿಡಬೇಕು ಎಂಬ ಸಂದೇಶವನ್ನು ಕೊಡುತ್ತದೊ? ಹಾಗಿರುವಲ್ಲಿ, ಇತರರು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡು, ನಿಮ್ಮಿಂದ ದೂರವಿರಲು ಪ್ರಯತ್ನಿಸುವರೆಂಬುದನ್ನು ಅರಿತುಕೊಳ್ಳಿರಿ. ಇದರಿಂದಾಗಿ, ಸ್ನೇಹಿತರನ್ನು ಮಾಡಿಕೊಳ್ಳುವುದು ನಿಮಗೆ ಇನ್ನೂ ಹೆಚ್ಚು ಕಷ್ಟಕರವಾಗುವುದು.
ಇತರ ಅಂಶಗಳು
ಇನ್ನೊಂದು ಸಾಮಾನ್ಯ ಸಮಸ್ಯೆಯು, ಎಲ್ಲಿ ತಪ್ಪುಮಾಡಿಬಿಡುವೆನೊ ಎಂಬ ಭಯವೇ ಆಗಿದೆ. ನಿಮಗೆ ಅನುಭವವಿಲ್ಲದ ಕ್ಷೇತ್ರದಲ್ಲಿ ಯಾವುದೊ ಹೊಸ ಕೆಲಸವನ್ನು ಮಾಡಲು ಸ್ವಲ್ಪ ಹೆದರಿಕೆ ಅಥವಾ ಹಿಂಜರಿಕೆಯಾಗುವುದು ತೀರ ಸಹಜವೇ. ಆದರೆ ಕೆಲವು ಯುವ ಜನರು ಅತಿರೇಕಕ್ಕೆ ಹೋಗುತ್ತಾರೆ. ಯುವತಿಯಾಗಿದ್ದಾಗ ತಾನು ಸಾಮಾಜಿಕ ಭಯದ ಗೀಳಿದ್ದವಳಾಗಿದ್ದೆನೆಂದು ಗೇಲ್ ಹೇಳುತ್ತಾಳೆ. ಅವಳನ್ನುವುದು: “ನಾನು ನನ್ನ ತರಗತಿಯಲ್ಲಿ ಯಾವುದೇ ವಿಷಯಕ್ಕೂ ಉತ್ತರವನ್ನು ಕೊಡುತ್ತಿರಲಿಲ್ಲ. ‘ಅವಳು ಕೈ ಎತ್ತುವುದಿಲ್ಲ. ಬಾಯಿಯೇ ಬಿಡುವುದಿಲ್ಲ’ ಎಂಬಂತಹ ದೂರುಗಳನ್ನು ನನ್ನ ಹೆತ್ತವರು ಯಾವಾಗಲೂ ಕೇಳಿಸಿಕೊಳ್ಳಬೇಕಾಗಿತ್ತು. ನನಗೆ ಅದನ್ನು ಮಾಡುವುದು ತುಂಬ ಮುಜುಗರದ್ದೂ, ತುಂಬ ಒತ್ತಡ ತರುವಂತಹದ್ದೂ ಆಗಿರುತ್ತಿತ್ತು. ಈಗಲೂ ಹಾಗೆ ಮಾಡುವುದು ನನಗೆ ಕಷ್ಟಕರವಾಗಿದೆ.” ಎಲ್ಲಿ ತಪ್ಪುಮಾಡಿಬಿಡುವೆನೊ ಎಂಬ ಭಯವು ನಿಶ್ಚೇಷ್ಟಗೊಳಿಸುವಂತಹದ್ದು ಆಗಿರಬಲ್ಲದು. ಪೀಟರ್ ಎಂಬ ಯುವಕನು ಹೇಳುವುದು: “ತಪ್ಪು ಮಾಡುವುದರ ಕುರಿತಾಗಿ ನಾನು ಚಿಂತಿಸುತ್ತೇನೆ. ನಾನು ಏನು ಮಾಡಲಿದ್ದೇನೋ ಅದರ ಕುರಿತಾಗಿ ನನಗೇ ಖಾತ್ರಿಯಿರುವುದಿಲ್ಲ.” ಸಮಾನಸ್ಥರಿಂದ ನಿರ್ದಯವಾದ ಕೀಟಲೆ ಮತ್ತು ಟೀಕೆಯು, ಒಬ್ಬ ಯುವ ವ್ಯಕ್ತಿಗಿರುವ ಭಯವನ್ನು ಹೆಚ್ಚಿಸಬಹುದು ಮತ್ತು ಅವನ ಇಲ್ಲವೇ ಅವಳ ಆತ್ಮವಿಶ್ವಾಸಕ್ಕೆ ಶಾಶ್ವತವಾದ ಹಾನಿಯನ್ನು ಉಂಟುಮಾಡಬಲ್ಲದು.
ಇತರರೊಂದಿಗೆ ಬಹಿರಂಗವಾಗಿ ವ್ಯವಹರಿಸಲು ಬೇಕಾದ ಕೌಶಲಗಳ ಕೊರತೆಯು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಏನು ಹೇಳಬೇಕೆಂದು ನಿಮಗೆ ಗೊತ್ತಿಲ್ಲದಿರುವ ಕಾರಣಕ್ಕಾಗಿಯೇ, ನೀವು ಒಬ್ಬ ಹೊಸ ವ್ಯಕ್ತಿಯೊಂದಿಗೆ ಪರಿಚಯಮಾಡಿಕೊಳ್ಳಲು ಹಿಂಜರಿಯುತ್ತಿರಬಹುದು. ನಾಲ್ಕು ಜನರೊಂದಿಗಿರುವಾಗ ಹಿರಿಯ ವ್ಯಕ್ತಿಗಳಿಗೂ ಕೆಲವೊಮ್ಮೆ ಅದೇ ರೀತಿಯ ಮುಜುಗರವಾಗುತ್ತದೆಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಫ್ರೆಡ್ ಎಂಬ ವ್ಯಾಪಾರಸ್ಥನು ಹೇಳುವುದು: “ವ್ಯಾಪಾರ ಜಗತ್ತಿನಲ್ಲಿ, ನಾನು ಏನನ್ನು ಮಾಡುತ್ತೇನೊ ಅದನ್ನು ಚೆನ್ನಾಗಿ ನಿರ್ವಹಿಸುವುದು ನನಗೆ ಕರಗತವಾಗಿದೆ. ಕೇವಲ ವ್ಯಾಪಾರದ ಕುರಿತಾಗಿ ಮಾತಾಡುವಾಗ, ನನ್ನ ಕುರಿತಾಗಿ ಇತರರಲ್ಲಿ ಒಳ್ಳೇ ಅಭಿಪ್ರಾಯವನ್ನು ಮೂಡಿಸುವುದರಲ್ಲಿ ನನಗೆ ಯಾವುದೇ ತೊಂದರೆಗಳಿಲ್ಲ. ಆದರೆ ಆ ವ್ಯಕ್ತಿಗಳೊಂದಿಗೆ ನಾನು ಸ್ನೇಹಪರ ಸಂಭಾಷಣೆಯನ್ನು ಆರಂಭಿಸುವಾಗ, ನಾನು ಹಿಂದೆಮುಂದೆ ನೋಡುತ್ತೇನೆ. ನಾನು ಬೇಸರಹಿಡಿಸುವವನು, ಔಪಚಾರಿಕನು, ತುಂಬ ಜಟಿಲವಾದ ಪದಗಳನ್ನು ಉಪಯೋಗಿಸುವವನು ಅಥವಾ ಅಷ್ಟೊಂದು ಸ್ವಾರಸ್ಯಕರ ವ್ಯಕ್ತಿಯಲ್ಲವೆಂಬ ವರ್ಗಕ್ಕೆ ಅವರು ನನ್ನನ್ನು ಸೇರಿಸಬಹುದು.”
ನೀವು ನಾಚಿಕೆ ಸ್ವಭಾವದವರಾಗಿರಲಿ, ಸ್ವಪ್ರಜ್ಞೆಯುಳ್ಳವರಾಗಿರಲಿ ಅಥವಾ ಜನರೊಂದಿಗಿರುವಾಗ ಮುಜುಗರಪಡುವ ವ್ಯಕ್ತಿಯಾಗಿರಲಿ, ನಾಲ್ಕು ಜನರೊಂದಿಗೆ ಹೆಚ್ಚು ಸಲೀಸಾಗಿ ಬೆರೆಯಲು ಕಲಿತುಕೊಳ್ಳುವುದು ನಿಮಗೇ ಒಳ್ಳೇದು. ಕ್ರೈಸ್ತರು ‘ತಮ್ಮ ಹೃದಯವನ್ನು ವಿಶಾಲಮಾಡಿ,’ ಇತರರನ್ನು ತಿಳಿದುಕೊಳ್ಳುವಂತೆ ಬೈಬಲ್ ಪ್ರೋತ್ಸಾಹಿಸುತ್ತದೆ! (2 ಕೊರಿಂಥ 6:13) ಆದರೆ ನೀವದನ್ನು ಹೇಗೆ ಮಾಡಬಲ್ಲಿರಿ? ಇದನ್ನು ಮುಂದಿನ ಸಂಚಿಕೆಯೊಂದರಲ್ಲಿ ಚರ್ಚಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 16 ರಲ್ಲಿರುವ ಚಿತ್ರ]
ನಾಚಿಕೆ ಸ್ವಭಾವದವರು, ಇತರರಿಂದ ದೂರಸರಿಯುವವರಾಗಿದ್ದಾರೆಂದು ಅನೇಕವೇಳೆ ನೆನಸಲಾಗುತ್ತದೆ
[ಪುಟ 16 ರಲ್ಲಿರುವ ಚಿತ್ರ]
ಎಲ್ಲಿ ತಪ್ಪುಮಾಡಿಬಿಡುವೆವೊ ಎಂಬ ಭಯವು, ಯುವ ಜನರು ಇತರರೊಂದಿಗೆ ಬೆರೆಯದಂತೆ ಮಾಡುತ್ತದೆ