ನಮ್ಮ ವಾಚಕರಿಂದ
ದೇವರ ಅಸ್ತಿತ್ವ “ದೇವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾನೋ?” (ಮಾರ್ಚ್ 8, 1999) ಎಂಬ ಸಂಚಿಕೆಯು ಎಷ್ಟು ಸಹಾಯಕಾರಿ ಆಗಿತ್ತೆಂದರೆ, ಅದನ್ನು ನನಗೆ ಬಣ್ಣಿಸಸಾಧ್ಯವಿಲ್ಲ. ಬಹಳಷ್ಟು ಬಾರಿ ಕೇಳಿಸಿಕೊಂಡಿದ್ದರೂ, ಕಂಡುಕೊಳ್ಳಲು ಅಸಾಧ್ಯವಾಗಿದ್ದ ದೇವರನ್ನು ಅದು ನನಗೆ ತೋರಿಸಿಕೊಟ್ಟಿತು. ನನ್ನಂತಹ ಜನರಿಗಾಗಿ ಸತ್ಯದ ಮಾರ್ಗವನ್ನು ಉಜ್ವಲಪಡಿಸುತ್ತಿರುವುದಕ್ಕಾಗಿ ನಾನು ನನ್ನ ಹೃದಯದಾಳದಿಂದ ಧನ್ಯವಾದವನ್ನು ಅರ್ಪಿಸುತ್ತೇನೆ.
ಸಿ. ಪಿ., ಬ್ರೆಸಿಲ್
ಕುರುಡಿಯಾಗಿದ್ದರೂ ಉಪಯುಕ್ತಳು ಮಾರ್ಚ್ 8, 1999ರ “ಕುರುಡಿಯಾಗಿದ್ದರೂ ಉಪಯುಕ್ತಳು ಹಾಗೂ ಸಂತೋಷಿತಳು” ಎಂಬ ಸಂಚಿಕೆಯಲ್ಲಿ ಕಂಡುಬಂದ ಪೊಲಿಟೀಮೀ ವೆನೆಟ್‌ಸ್ಯಾನೋಸ್‌ರವರ ಆತ್ಮಕಥೆಗಾಗಿ ಬಹಳ ಉಪಕಾರ. ಅವರ ಧೈರ್ಯ ಹಾಗೂ ದೇವರಲ್ಲಿನ ಅಚಲ ನಂಬಿಕೆಯು ನಿಜವಾಗಿಯೂ ನನ್ನ ಹೃದಯವನ್ನು ಸ್ಪರ್ಶಿಸಿತು. ಒಂದು ಕಡೆಯಲ್ಲಿ, ಈ ಅಸಾಧಾರಣವಾದ ಮಹಿಳೆಯ ಜೀವಿತವು ಕಷ್ಟನಷ್ಟಗಳಿಂದ ತುಂಬಿದೆ. ಆದರೆ ಅದೇ ಸಮಯದಲ್ಲಿ, ಇದು ಬೆಲೆಕಟ್ಟಲಾಗದಷ್ಟು ಹೇರಳವಾದ ಪ್ರಯೋಜನಗಳನ್ನು ಹೊಂದಿದೆ. ಜೀವಿತಕ್ಕಾಗಿರುವ ಈ ಕಠಿನ ಓಟದಲ್ಲಿ ಬಳಲಿಬೆಂಡಾಗಿರುವವರಿಗೆ, ಅವರ ಕಥೆಯು ನಿಜವಾಗಿಯೂ ಸಹಾಯ ಹಾಗೂ ಉತ್ಸಾಹದ ಚಿಲುಮೆಯಾಗಿರುವುದು ಎಂದು ನಾನು ನೆನಸುತ್ತೇನೆ.
ಕೆ. ಆರ್., ರಷ್ಯಾ
ಬಟ್ಟೆ ನಾನು 11 ವರ್ಷ ಪ್ರಾಯದವಳಾಗಿದ್ದೇನೆ. “ನಾವು ಧರಿಸುವಂತಹ ಬಟ್ಟೆ—ಅದರ ಬಗ್ಗೆ ಚಿಂತಿಸಬೇಕೋ?” (ಮಾರ್ಚ್ 8, 1999) ಎಂಬ ಲೇಖನದಲ್ಲಿ ನೀಡಲ್ಪಟ್ಟ ಅತ್ಯುತ್ಕೃಷ್ಟ ಉಪದೇಶಕ್ಕೆ ಉಪಕಾರವನ್ನು ಹೇಳಲು ಅಭಿವ್ಯಕ್ತಿಗಳೇ ಸಾಲದು. ಈ ಹಿಂದೆ ನಾನು ನನ್ನ ಶಾಲಾಸಹಪಾಠಿಗಳಂತೆ ಬಟ್ಟೆಯನ್ನು ಧರಿಸಲು ಇಷ್ಟಪಡುತ್ತಿದ್ದೆ. ಆದರೆ ನಾನು ತೊಡುವಂತಹ ಬಟ್ಟೆಯು ನೀಟಾಗಿಯೂ ಶಿಷ್ಟಾಚಾರವನ್ನು ಮೀರುವಂತಹದ್ದು ಅಥವಾ ತೀರ ವೈಪರೀತ್ಯದ್ದೂ ಆಗಿರಬಾರದು ಎಂಬುದನ್ನು ನೋಡುವಂತೆ ಈ ಲೇಖನವು ನನಗೆ ಸಹಾಯಮಾಡಿತು.
ಎ. ಎಸ್., ಎಸ್ಟೋನಿಯ
ನಾನು ತೊಡುವಂತಹ ಬಟ್ಟೆಗಳು ಹಳೇಕಾಲದ್ದು ಅಥವಾ ಔಪಚಾರಿಕವಾದದ್ದಾಗಿದೆ ಎಂದು ಇತರರು ಹೇಳುವಾಗ, ನನಗೆ ಕೆಲವೊಮ್ಮೆ ತುಂಬ ದುಃಖವಾಗುತ್ತದೆ. ಬೈಬಲ್ ತತ್ತ್ವಗಳನ್ನು ಅನುಸರಿಸುವುದು ನಿಜವಾಗಿಯೂ ಸಾರ್ಥಕವಾಗಿದೆ ಎಂಬುದನ್ನು ನಿಮ್ಮ ಲೇಖನವು ದೃಢೀಕರಿಸಿದ ಕಾರಣ, ಅದು ನನಗೆ ಉತ್ತೇಜನವನ್ನು ನೀಡುವಂತಹದ್ದಾಗಿತ್ತು.
ಆರ್. ಎಲ್., ಬ್ರೆಸಿಲ್
ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಗಳ ಕುರಿತಾಗಿ ನನಗೆ ಮರುಕ ಭಾವನೆಯೂ ವಿನೋದಕರವಾದ ಅನಿಸಿಕೆಗಳೂ ಇದ್ದವು. ನನಗೆ ನನ್ನ ಸ್ನೇಹಿತೆಯು ಎಚ್ಚರ! ಪತ್ರಿಕೆಯ ಮಾರ್ಚ್ 8, 1999ರ ಸಂಚಿಕೆಯನ್ನು ಕೊಟ್ಟಳು. ಆ ಪತ್ರಿಕೆಯನ್ನು ಓದುವುದು ತುಂಬ ಆನಂದದಾಯಕವಾಗಿತ್ತು ಮತ್ತು ಇದು ಸಾಕ್ಷಿಗಳ ಕುರಿತಾಗಿ ನನಗಿದ್ದ ಅಭಿಪ್ರಾಯವನ್ನೇ ಬದಲಾಯಿಸಿತು. ಬಟ್ಟೆಗಳ ಕುರಿತಾದ ಈ ಲೇಖನದಲ್ಲಿ ನನ್ನನ್ನು ವಿಶೇಷವಾಗಿ ಪ್ರಭಾವಿಸಿದ್ದು, ಬಟ್ಟೆಗಳನ್ನು ಖರೀದಿಸುವ ಸಂಬಂಧದಲ್ಲಿ ಅದು ನನ್ನ ಸ್ವಂತ ನಡವಳಿಕೆಯನ್ನು ವರ್ಣಿಸಿದಂತಹ ವಿಷಯವೇ ಆಗಿದೆ. ಇನ್ನು ಮುಂದೆ ಭವಿಷ್ಯತ್ತಿನಲ್ಲಿ, ಡಿಸೈನರ್ ಬಟ್ಟೆಗಳನ್ನು ನೋಡಿ ನಾನು ಹುಚ್ಚಳಾಗುವುದಿಲ್ಲ. ಮತ್ತು ನನಗೆ ಓದಲು ಇನ್ನಷ್ಟು ಪತ್ರಿಕೆಗಳನ್ನು ತಂದುಕೊಡುವಂತೆ ನಾನು ನನ್ನ ಸ್ನೇಹಿತಳಿಗೆ ಹೇಳುತ್ತೇನೆ!
ಯು. ಬಿ., ಜರ್ಮನಿ
ಹರಟೆ “ಯುವ ಜನರು ಪ್ರಶ್ನಿಸುವದು . . . ಹರಟೆಯಲ್ಲಿ ಅಷ್ಟೊಂದು ಹಾನಿಕರವಾದುದೇನಿದೆ?” (ಮಾರ್ಚ್ 8, 1999) ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರಗಳು. ಸ್ವಲ್ಪ ಸಮಯದ ಹಿಂದೆ, ಯಾರೋ ಒಬ್ಬರು ನಾನು ಸಭೆಯಿಂದ ಬಹಿಷ್ಕೃತಳಾಗಲಿದ್ದೇನೆ ಎಂಬ ಸುಳ್ಳುವದಂತಿಯನ್ನು ಹಬ್ಬಿಸಿದಾಗ, ಹರಟೆಯು ಎಷ್ಟು ನೋವನ್ನುಂಟುಮಾಡುತ್ತದೆ ಎಂಬುದನ್ನು ಸ್ವತಃ ನಾನೇ ಕಂಡುಕೊಂಡೆ. ಆ ಸುಳ್ಳುವದಂತಿಯು ನಿಜವಾಗಿಯೂ ನನಗೆ ಅತೀವ ದುಃಖವನ್ನು ಉಂಟುಮಾಡಿತು! ಸುಳ್ಳುವದಂತಿಯನ್ನು ಹಬ್ಬಿಸಿದ ವ್ಯಕ್ತಿ ನನ್ನ ಬಳಿ ಬಂದು ಕ್ಷಮಾಪಣೆಯನ್ನು ಕೇಳಿದನಾದರೂ ಅವನಲ್ಲಿಟ್ಟಿದ್ದ ನಂಬಿಕೆಯು ಹೊರಟುಹೋಯಿತು.
ಆರ್. ಎಮ್., ಸ್ವಿಟ್ಸರ್ಲೆಂಡ್
ನನ್ನ ಶಾಲೆಯಲ್ಲಿ ಹರಟೆಯು ವ್ಯಾಪಕವಾಗಿದೆ, ಆದರೆ ಈ ಲೇಖನವು ನನಗೆ ಬಹಳ ಉತ್ತೇಜನವನ್ನೂ ಬಲವನ್ನೂ ನೀಡುವಂತಹದ್ದಾಗಿತ್ತು. ಇತರರ ಬಗ್ಗೆ ತೀರ ಕೆಟ್ಟದಾದ ಅಭಿಪ್ರಾಯವನ್ನು ಮೂಡಿಸುವ ಹಾಗೆ ನಾನು ಹರಟೆ ಹೊಡೆದಿದ್ದೇನೆ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. ಅಷ್ಟುಮಾತ್ರವಲ್ಲದೆ, ನನ್ನ ಸ್ನೇಹಿತರು ಇತರರ ಬಗ್ಗೆ ಹರಟೆಯನ್ನು ಹೊಡೆಯುತ್ತಿದ್ದಾಗ, ನಾನು ಅದನ್ನು ಕೇಳಿಸಿಕೊಂಡಿದ್ದೇನೆ ಮತ್ತು ಆ ಸಂಭಾಷಣೆಯಲ್ಲಿ ನಾನು ಸಹ ಒಳಗೂಡಿದ್ದೇನೆ. ಆದುದರಿಂದ ನಾನು ಈ ಲೇಖನವನ್ನು ಓದುತ್ತಿದ್ದಾಗ, ನನಗೆ ಒಂದು ರೀತಿಯಲ್ಲಿ ಆಘಾತವಾಯಿತು ಮತ್ತು ಅಲ್ಲಿರುವ ಒಂದೊಂದು ವಾಕ್ಯವೂ ನಾನು ಮಾಡುತ್ತಿರುವ ಕಾರ್ಯಗಳಿಗೆ ಕೈತೋರಿಸುತ್ತಿದ್ದಂತ್ತಿತ್ತು. ನಾನು ಸಹ ಹರಟೆ ಹೊಡೆದಿರುವುದರಿಂದ ನನಗೆ ನಾಚಿಕೆಯಾಗುತ್ತದೆ. ನನ್ನ ಶಾಲೆಯಲ್ಲಿ ಹರಟೆ ಹೊಡೆಯುವುದು ಮುಂದುವರಿಯುತ್ತಾ ಹೋಗುತ್ತದೆ ಎಂಬುದರಲ್ಲೇನೂ ಸಂಶಯವಿಲ್ಲ, ಆದರೆ ನಾನು ಮಾತ್ರ ಅದರಲ್ಲಿ ಖಂಡಿತವಾಗಿಯೂ ಒಳಗೂಡುವುದಿಲ್ಲವೆಂಬ ದೃಢನಿಶ್ಚಯವನ್ನು ಮಾಡಿದ್ದೇನೆ.
ಎಮ್. ಡಬ್ಲ್ಯೂ., ಜಪಾನ್