ಮಕ್ಕಳಿಗೆ ಅಗತ್ಯವಿರುವುದನ್ನು ಒದಗಿಸುವುದು
ಎಳೆಯ ಮಕ್ಕಳಿಗೆ ಬಹಳಷ್ಟು ಗಮನದ ಅಗತ್ಯವಿದೆಯೆಂಬುದು ಸ್ಪಷ್ಟ, ಆದರೆ ಅನೇಕರಿಗೆ ಅಗತ್ಯವಿರುವಂಥ ಗಮನವು ದೊರಕುತ್ತಿಲ್ಲವೆಂದು ವ್ಯಕ್ತವಾಗುತ್ತದೆ. ಇಂದಿನ ಯುವಜನರ ಸ್ಥಿತಿಯು ಇದನ್ನೇ ಸೂಚಿಸುತ್ತದೆ. “ಹಿಂದೆಂದೂ ನಮ್ಮ ಯುವಜನರು ತಮ್ಮ ಕುಟುಂಬಗಳಿಂದ ಇಷ್ಟೊಂದು ಅಗಲಿರಲಿಲ್ಲ, ವ್ಯಾವಹಾರಿಕ ಅನುಭವ ಮತ್ತು ವ್ಯಾವಹಾರಿಕ ಬುದ್ಧಿಯ ಕೊರತೆಯುಳ್ಳವರಾಗಿರಲಿಲ್ಲ” ಎಂದು ಪ್ರಲಾಪಿಸಿದ ಒಬ್ಬ ಸಂಶೋಧಕಿಯ ಮಾತುಗಳನ್ನು ಕೆನಡದ ಟೊರಾಂಟೊವಿನ ದ ಗ್ಲೋಬ್ ಆ್ಯಂಡ್ ಮೇಲ್ ವಾರ್ತಾಪತ್ರಿಕೆಯಲ್ಲಿ ಉಲ್ಲೇಖಿಸಲಾಯಿತು.
ತಪ್ಪಾಗಿರುವುದೆಲ್ಲಿ? ಈ ಸಮಸ್ಯೆಗೆ ಕಾರಣ—ಕಡಿಮೆಪಕ್ಷ ಭಾಗಶಃ—ತೀರ ಎಳೆಯ ಮಕ್ಕಳಿಗೆ ಕೊಡಬೇಕಾದ ಗಮನದ ಮಹತ್ವವನ್ನು ಗ್ರಹಿಸಲು ತಪ್ಪಿಹೋಗಿರುವುದು ಆಗಿರಬಲ್ಲದೊ? ಕಡಿಮೆ ಆದಾಯವನ್ನು ಪಡೆಯುತ್ತಿರುವ ಮಹಿಳೆಯರು ತಮ್ಮ ನವಜಾತ ಶಿಶುಗಳ ಆರೈಕೆಯನ್ನು ಹೇಗೆ ಮಾಡಬೇಕೆಂಬುದನ್ನು ಕಲಿತುಕೊಳ್ಳಲು ಸಹಾಯಮಾಡುವ ಒಬ್ಬ ಮನಶ್ಶಾಸ್ತ್ರಜ್ಞೆ ವಿವರಿಸುವುದು: “ಹೆತ್ತವರಾಗಿರಲು ಅಗತ್ಯವಿರುವ ಕೌಶಲಗಳನ್ನು ನಾವೆಲ್ಲರೂ ಕಲಿಯುವ ಅಗತ್ಯವಿದೆ. ಮತ್ತು ನಾವು ಈಗ ನಮ್ಮ ಮಕ್ಕಳೊಂದಿಗೆ ಕಳೆಯುವಂಥ ಸಮಯವು, ನಮಗೆ ಬಹಳಷ್ಟು ಪ್ರತಿಫಲಗಳೊಂದಿಗೆ ಹಿಂದೆ ಸಿಗುವುದೆಂಬುದನ್ನು ನಾವು ಗ್ರಹಿಸುವ ಅಗತ್ಯವಿದೆ.”
ಪುಟ್ಟ ಮಕ್ಕಳಿಗೂ ಕ್ರಮವಾದ ಉಪದೇಶದ ಅಗತ್ಯವಿದೆ. ಎಲ್ಲೊ ಒಮ್ಮೆ ಕೆಲವೊಂದು ನಿಮಿಷಗಳಿಗಲ್ಲ ಬದಲಾಗಿ ಕ್ರಮವಾಗಿ, ಹೌದು ದಿನವೆಲ್ಲ ಉಪದೇಶದ ಅಗತ್ಯವಿದೆ. ಶೈಶವದಿಂದಲೂ ಎಳೆಯರೊಂದಿಗೆ ಕಳೆಯಲಾಗುವ ಸಮಯವು, ಅವುಗಳ ಹಿತಕರವಾದ ಬೆಳವಣಿಗೆಗಾಗಿ ಅತ್ಯಾವಶ್ಯಕವಾಗಿದೆ.
ತಯಾರಿಯ ಅಗತ್ಯ
ಅವರ ಭಾರವಾದ ಜವಾಬ್ದಾರಿಯನ್ನು ಪೂರೈಸಲಿಕ್ಕಾಗಿ, ಹೆತ್ತವರು ತಮ್ಮ ಮಗುವಿನ ಆಗಮನಕ್ಕಾಗಿ ಸಿದ್ಧತೆಗಳನ್ನು ಮಾಡಬೇಕು. ಮುಂಚಿತವಾಗಿ ಯೋಜನೆ ಮಾಡುವುದರ ಪ್ರಾಮುಖ್ಯತೆಯನ್ನು ಅವರು, ಯೇಸು ಕ್ರಿಸ್ತನು ತಿಳಿಸಿದಂಥ ಒಂದು ಮೂಲತತ್ತ್ವದಿಂದ ಕಲಿಯಬಹುದು. ಅವನಂದದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು. . . ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಮಕ್ಕಳನ್ನು ಸಾಕಿಸಲಹುವುದು ಒಂದು ಬುರುಜನ್ನು ಕಟ್ಟುವುದಕ್ಕಿಂತ ಹೆಚ್ಚು ಜಟಿಲವಾಗಿರುತ್ತದೆ. ಇದನ್ನು ಹೆಚ್ಚಾಗಿ, 20 ವರ್ಷಗಳ ಕಾರ್ಯಯೋಜನೆ ಎಂದು ಕರೆಯಲಾಗುತ್ತದೆ. ಆದುದರಿಂದ ಒಂದು ಮಗುವನ್ನು ಸಾಕಿಸಲಹುವುದರಲ್ಲಿ ಯಶಸ್ಸನ್ನು ಪಡೆಯಲು, ಆ ಕೆಲಸಕ್ಕಾಗಿ ಒಂದು ನೀಲಿನಕ್ಷೆಯು ಅಗತ್ಯ.
ಮೊದಲಾಗಿ, ಹೆತ್ತವರಾಗಿರುವುದರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮಾನಸಿಕ ಮತ್ತು ಆಧ್ಯಾತ್ಮಿಕ ತಯಾರಿಯು ಪ್ರಾಮುಖ್ಯ. ಒಂದು ಕುಟುಂಬವನ್ನು ಹೊಂದಲು ಎದುರುನೋಡುತ್ತಿದ್ದ ತಾಯಂದಿರ ಮಕ್ಕಳು, ಮಕ್ಕಳನ್ನು ಪಡೆಯಲು ಬಯಸದಿದ್ದ ತಾಯಂದಿರ ಮಕ್ಕಳಿಗಿಂತ, ಭಾವನಾತ್ಮಕವಾಗಿಯೂ ಶಾರೀರಿಕವಾಗಿಯೂ ಆರೋಗ್ಯವಂತರಾಗಿದ್ದರೆಂದು ಜರ್ಮನಿಯಲ್ಲಿನ 2,000 ಗರ್ಭವತಿ ತಾಯಂದಿರ ಒಂದು ಸಮೀಕ್ಷೆಯು ಪ್ರಕಟಪಡಿಸಿತು. ಇನ್ನೊಂದು ಕಡೆಯಲ್ಲಿ, ಒಂದು ಕಲಹಪೂರ್ಣ ವಿವಾಹದಲ್ಲಿ ಸಿಕ್ಕಿಬಿದ್ದಿರುವ ಒಬ್ಬ ಸ್ತ್ರೀಯು ಭಾವನಾತ್ಮಕವಾಗಿ ಇಲ್ಲವೆ ಶಾರೀರಿಕವಾಗಿ ಹಾನಿಗೊಳಗಾಗಿರುವ ಮಗುವನ್ನು ಹೆರುವಂಥ ಅಪಾಯವು, ಒಂದು ಸುರಕ್ಷಿತ ಬಂಧದಲ್ಲಿರುವಂಥ ಒಬ್ಬ ಸ್ತ್ರೀಗಿಂತ 237 ಪ್ರತಿಶತ ಹೆಚ್ಚಾಗಿರುತ್ತದೆಂದು ಒಬ್ಬ ಸಂಶೋಧಕರು ಅಂದಾಜುಮಾಡಿದರು.
ಹಾಗಾದರೆ, ಒಂದು ಮಗುವನ್ನು ಯಶಸ್ವಿಯಾಗಿ ಬೆಳೆಸುವುದರಲ್ಲಿ ತಂದೆಯಂದಿರ ಪಾತ್ರವು ಮಹತ್ವಪೂರ್ಣ ಎಂಬುದು ಸ್ಪಷ್ಟ. ಡಾಕ್ಟರ್ ಥಾಮಸ್ ವರ್ನಿ ಗಮನಿಸಿದ್ದು: “ತನ್ನ ಗರ್ಭಿಣಿ ಹೆಂಡತಿಯನ್ನು ದೌರ್ಜನ್ಯಕ್ಕೊಳಪಡಿಸುವ ಇಲ್ಲವೆ ಅಲಕ್ಷಿಸುವ ತಂದೆಯಿಂದ ಒಂದು ಮಗುವಿಗೆ ಭಾವನಾತ್ಮಕವಾಗಿಯೂ ಶಾರೀರಿಕವಾಗಿಯೂ ತುಂಬ ಅಪಾಯವಿದೆ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿರುವಂಥ ವಿಷಯಗಳು ತೀರ ಕಡಿಮೆ.” ಹೌದು, ಒಂದು ಮಗುವಿಗೆ ಸಿಗಬಲ್ಲ ಅತ್ಯುತ್ತಮವಾದ ಉಡುಗೊರೆಯು, ಅದರ ತಾಯಿಯನ್ನು ಪ್ರೀತಿಸುವ ಒಬ್ಬ ತಂದೆಯೆಂದು ಅನೇಕವೇಳೆ ಹೇಳಲಾಗುತ್ತದೆ.
ತಾಯಿಯ ರಕ್ತಪ್ರವಾಹದೊಳಕ್ಕೆ ಬಿಡುಗಡೆಯಾಗುವ, ವ್ಯಾಕುಲತೆ ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿರುವ ಹಾರ್ಮೋನುಗಳು ಭ್ರೂಣದ ಮೇಲೆ ಪರಿಣಾಮಬೀರಬಲ್ಲವು. ಹಾಗಿದ್ದರೂ, ತೀಕ್ಷ್ಣವಾದ ಇಲ್ಲವೆ ದೀರ್ಘಾವಧಿಯ ವರೆಗೆ ಮುಂದುವರಿಯುವ ತಾಯಿಯ ವ್ಯಾಕುಲತೆಯು ಮಾತ್ರ ಅಪಾಯಕಾರಿಯಾಗಿದೆಯೇ ಹೊರತು ಕೆಲವೊಮ್ಮೆ ಉಂಟಾಗುವ ನಕಾರಾತ್ಮಕ ಭಾವನೆಗಳಾಗಲಿ ಒತ್ತಡಭರಿತ ಘಟನೆಗಳಾಗಲಿ ಅಲ್ಲ ಎಂದು ನೆನಸಲಾಗಿದೆ. ಅತೀ ಪ್ರಾಮುಖ್ಯ ಅಂಶವು, ಗರ್ಭವತಿ ತಾಯಿಗೆ ತನ್ನ ಹುಟ್ಟಲಿರುವ ಮಗುವಿನ ಕುರಿತಾದ ಭಾವನೆಯೇ ಎಂದು ತೋರುತ್ತದೆ.a
ನೀವು ಗರ್ಭವತಿಯಾಗಿದ್ದು, ನಿಮ್ಮ ಗಂಡನಿಗೆ ಅದು ಇಷ್ಟವಿಲ್ಲದಿರುವಲ್ಲಿ ಇಲ್ಲವೆ ಸ್ವತಃ ನಿಮಗೆ ತಾಯಿಯಾಗುವ ಬಗ್ಗೆ ಅಸಮಾಧಾನವಿರುವಲ್ಲಿ ಏನು? ಬಹುಶಃ ಪರಿಸ್ಥಿತಿಗಳಿಂದಾಗಿ ಒಬ್ಬ ಸ್ತ್ರೀಯು ತನ್ನ ಗರ್ಭಾವಸ್ಥೆಯ ಕುರಿತಾಗಿ ಖಿನ್ನಳಾಗುವುದು ಸಹಜ. ಆದರೂ, ನಿಮ್ಮ ಮಗು ಯಾವುದೇ ತಪ್ಪನ್ನು ಮಾಡಿಲ್ಲವೆಂಬುದನ್ನು ಯಾವಾಗಲೂ ನೆನಪಿನಲ್ಲಿಡಿರಿ. ಹಾಗಾದರೆ ಕಷ್ಟಕರ ಪರಿಸ್ಥಿತಿಗಳಲ್ಲಿಯೂ ನೀವು ಪ್ರಶಾಂತ ಭಾವವನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ?
ದೇವರ ವಾಕ್ಯವಾದ ಬೈಬಲಿನಲ್ಲಿ ಒದಗಿಸಲ್ಪಟ್ಟಿರುವ ವಿವೇಕಯುತವಾದ ನಿರ್ದೇಶನವು, ಲಕ್ಷಗಟ್ಟಲೆ ಜನರಿಗೆ ಸಹಾಯಮಾಡಿದೆ. ಅದು ಹೇಳುವುದು: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” ಈ ಮಾತುಗಳನ್ನು ಅನ್ವಯಿಸಿಕೊಳ್ಳುವುದು, ‘ಯಾವ ಸಂಬಂಧವಾಗಿಯೂ ಚಿಂತೆಮಾಡದಿರಿ’ ಎಂಬ ಸಲಹೆಯನ್ನು ಅನುಸರಿಸುವಂತೆ ಹೇಗೆ ಸಹಾಯಮಾಡುವುದು ಎಂಬದನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು. (ಫಿಲಿಪ್ಪಿ 4:6, 7) ನಿಮ್ಮನ್ನು ನೋಡಿಕೊಳ್ಳಬಲ್ಲ ಸೃಷ್ಟಿಕರ್ತನ ಕಾಳಜಿಭರಿತ ಹಸ್ತವನ್ನು ನೀವು ಅನುಭವಿಸುವಿರಿ.—1 ಪೇತ್ರ 5:7.
ಅಸಾಮಾನ್ಯವಾದ ಅನುಭವವಲ್ಲ
ಮಗುವಿಗೆ ಜನ್ಮನೀಡಿದ ನಂತರದ ಮೊದಲ ಕೆಲವೊಂದು ವಾರಗಳಲ್ಲಿ, ಕೆಲವು ಯುವ ತಾಯಂದಿರಿಗೆ, ವಿವರಿಸಲಾಗದಂಥ ದುಃಖ ಮತ್ತು ಜಡತೆಯ ಅನುಭವವಾಗುತ್ತದೆ. ಮಗುವನ್ನು ಪಡೆಯಲು ಸಂತೋಷಪಟ್ಟವರು ಸಹ ದುಗುಡದಿಂದ ತುಂಬಿದವರಾಗಬಹುದು. ಇಂಥ ಚಿತ್ತಸ್ಥಿತಿಯ (ಮೂಡ್ಗಳ) ಬದಲಾವಣೆಗಳು ಅಸಾಮಾನ್ಯವಲ್ಲ. ಏಕೆಂದರೆ, ಸ್ತ್ರೀಯರು ಹೆರಿಗೆಯ ನಂತರ ಹಾರ್ಮೋನುಗಳ ಮಟ್ಟಗಳಲ್ಲಿ ದೊಡ್ಡ ಬದಲಾವಣೆಗಳನ್ನು ಅನುಭವಿಸಬಹುದು. ತಾಯ್ತನವು ಹೇರುವ ಬೇಡಿಕೆಗಳ—ಹೊತ್ತಿನ ಪ್ರಜ್ಞೆಯಿಲ್ಲದಿರುವ ಹಸುಳೆಗೆ ಹಾಲುಣಿಸುವುದು, ಡೈಅಪರ್ ಬದಲಾಯಿಸುವುದು, ಮತ್ತು ಆರೈಕೆಮಾಡುವುದು—ಭಾರದಡಿ ಒಬ್ಬ ಹೊಸ ತಾಯಿ ಹೂತುಹೋಗುವುದು ಸಹ ಸರ್ವಸಾಮಾನ್ಯ.
ತನ್ನ ಮಗು, ಕೇವಲ ತನ್ನನ್ನು ಪೀಡಿಸಲಿಕ್ಕೋಸ್ಕರ ಅಳುತ್ತಿದೆ ಎಂದು ಒಬ್ಬ ತಾಯಿಗೆ ಅನಿಸಿತು. ಮಗುವನ್ನು ಸಾಕಿಸಲಹುವುದರ ಬಗ್ಗೆ ಜಪಾನಿನಲ್ಲಿರುವ ಒಬ್ಬ ವಿಶೇಷಜ್ಞನು, “ಮಗುವನ್ನು ಸಾಕಿಸಲಹುವುದರೊಂದಿಗೆ ಬರುವ ಒತ್ತಡದಿಂದ ಯಾರೂ ಮುಕ್ತರಲ್ಲ” ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ವಿಶೇಷಜ್ಞನಿಗನುಸಾರ, “ಅತ್ಯಂತ ಪ್ರಾಮುಖ್ಯವಾದ ಸಂಗತಿಯೇನೆಂದರೆ ಒಬ್ಬ ತಾಯಿಯು ತನ್ನನ್ನು ಎಂದಿಗೂ ಇತರರಿಂದ ಪ್ರತ್ಯೇಕಿಸಿಕೊಂಡು ದೂರವಿರಬಾರದು.”
ಒಬ್ಬ ತಾಯಿ ಕೆಲವೊಮ್ಮೆ ಖಿನ್ನಳಾಗುವುದಾದರೂ, ತನ್ನ ಚಿತ್ತಸ್ಥಿತಿಯ ಬದಲಾವಣೆಗಳು ಮಗುವಿನ ಮೇಲೆ ಪರಿಣಾಮಬೀರದಂತೆ ಆಕೆ ತಡೆಯಬಲ್ಲಳು. ಟೈಮ್ ಪತ್ರಿಕೆಯು ವರದಿಸಿದ್ದು: “ತಮ್ಮ ವಿಷಣ್ಣತೆಯಿಂದ ಹೇಗಾದರೂ ಹೊರಬಂದು, ತಮ್ಮ ಕೂಸುಗಳ ಮೇಲೆ ಗಮನದ ಸುರಿಮಳೆಗೈದು, ವಿನೋದಭರಿತ ಆಟಗಳಲ್ಲಿ ಪಾಲ್ಗೊಂಡ ಖಿನ್ನ ತಾಯಂದಿರ ಮಕ್ಕಳ ಮಿದುಳಿನ ಚಟುವಟಿಕೆಯು ಗಣನೀಯವಾಗಿ ಹೆಚ್ಚು ಉಲ್ಲಾಸಭರಿತವಾದ ಸ್ವರೂಪವುಳ್ಳದ್ದಾಗಿತ್ತು.”b
ತಂದೆ ಸಹಾಯಮಾಡಬಲ್ಲ ವಿಧ
ಮಗುವಿನ ತಂದೆಯು ಅನೇಕವೇಳೆ ಬೇಕಾಗಿರುವ ಸಹಾಯ ಮತ್ತು ಬೆಂಬಲವನ್ನು ನೀಡಲು ಅತ್ಯುತ್ತಮ ಸ್ಥಾನದಲ್ಲಿದ್ದಾನೆ. ಮಗು ಮಧ್ಯರಾತ್ರಿ ಎದ್ದು ಅಳುವಾಗ, ಹೆಚ್ಚಿನ ಸಂದರ್ಭಗಳಲ್ಲಿ ತಂದೆಯು ಮಗುವಿನ ಅಗತ್ಯಗಳನ್ನು ಪೂರೈಸಬಹುದು. ಇದು, ಅವನ ಹೆಂಡತಿಯು ನಿದ್ರಿಸುವಂತೆ ಸಹಾಯಮಾಡುವುದು. ಬೈಬಲ್ ಹೇಳುವುದು: “ಪುರುಷರೇ, . . . ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ.”—1 ಪೇತ್ರ 3:7.
ಗಂಡಂದಿರಿಗೆ ಅನುಕರಿಸಲಿಕ್ಕಾಗಿ ಯೇಸು ಕ್ರಿಸ್ತನು ಪರಿಪೂರ್ಣವಾದ ಮಾದರಿಯನ್ನು ಇಟ್ಟನು. ಅವನು ತನ್ನ ಹಿಂಬಾಲಕರಿಗೆ ತನ್ನ ಜೀವವನ್ನೂ ಕೊಟ್ಟನು. (ಎಫೆಸ 5:28-30; 1 ಪೇತ್ರ 2:21-24) ಹೀಗೆ, ಮಗುವನ್ನು ಸಾಕಿಸಲಹುವುದರಲ್ಲಿ ಆರಂಭದ ಹೆಜ್ಜೆಗಳನ್ನು ತೆಗೆದುಕೊಳ್ಳಲು ತಮ್ಮ ಸ್ವಂತ ಸುಖವನ್ನು ತ್ಯಾಗಮಾಡುವ ಗಂಡಂದಿರು ಕ್ರಿಸ್ತನನ್ನು ಅನುಕರಿಸುತ್ತಾರೆ. ಹೌದು, ಮಕ್ಕಳನ್ನು ಬೆಳೆಸುವುದು, ಇಬ್ಬರೂ ಪಾಲ್ಗೊಳ್ಳಬೇಕಾಗಿರುವ ಒಂದು ಸಹಕಾರಪೂರ್ಣ ಪ್ರಯತ್ನವಾಗಿದೆ.
ಒಂದು ಜಂಟಿ, ಸಹಕಾರಿ ಪ್ರಯತ್ನ
“ಗಂಡ ಹೆಂಡತಿಯೋಪಾದಿ, ನಾವು ನಮ್ಮ ಮಗಳನ್ನು ಹೇಗೆ ಬೆಳೆಸಬೇಕೆಂಬುದರ ಕುರಿತಾಗಿ ವಿವರವಾಗಿ ಚರ್ಚಿಸಿದ್ದೇವೆ,” ಎಂದು ಎರಡು ವರ್ಷ ಪ್ರಾಯದ ಹುಡುಗಿಯ ತಂದೆಯಾಗಿರುವ ಯೋಈಚೀರೊ ಹೇಳುತ್ತಾನೆ. “ಯಾವದಾದರೂ ವಾದಾಂಶವು ಎದ್ದಾಗಲೆಲ್ಲ, ನಾವೇನು ಮಾಡಬೇಕೆಂಬದರ ಕುರಿತಾಗಿ ಇಬ್ಬರೂ ಸೇರಿ ಚರ್ಚಿಸುತ್ತೇವೆ.” ತನ್ನ ಪತ್ನಿಗೆ ಸಾಕಷ್ಟು ವಿಶ್ರಾಂತಿ ಅಗತ್ಯವೆಂಬುದನ್ನು ಯೋಈಚೀರೊ ಮನಗಂಡದ್ದರಿಂದ ಯಾವುದಾದರೂ ಚಿಕ್ಕ ಕೆಲಸಕ್ಕಾಗಿ ಹೊರಗೆ ಹೋಗುವಾಗ ಅವನು ಮಗಳನ್ನೂ ಜೊತೆಗೆ ಕರಕೊಂಡು ಹೋಗುತ್ತಾನೆ.
ಹಿಂದಿನ ಕಾಲಗಳಲ್ಲಿ, ದೊಡ್ಡ ಮತ್ತು ಅನ್ಯೋನ್ಯ ಕುಟುಂಬಗಳು ಸರ್ವಸಾಮಾನ್ಯವಾಗಿದ್ದಾಗ, ಹೆತ್ತವರಿಗೆ ಮಗುವಿನ ಆರೈಕೆಯಲ್ಲಿ ಹಿರಿಯ ಮಕ್ಕಳ ಮತ್ತು ಸಂಬಂಧಿಕರ ನೆರವು ಸಿಗುತ್ತಿತ್ತು. ಆದುದರಿಂದ, ಜಪಾನಿನ ಕಾವಾಸಾಕಿಯಲ್ಲಿರುವ ಮಕ್ಕಳ ಸಾಕುಸಲಹುವಿಕೆಯ ಸಹಕಾರ ಕೇಂದ್ರದಲ್ಲಿ ಕೆಲಸಮಾಡುವ ಒಬ್ಬ ಸ್ತ್ರೀ ಹೀಗನ್ನುವುದು ಆಶ್ಚರ್ಯಕರವಲ್ಲ: “ಹೆಚ್ಚಿನ ವಿದ್ಯಮಾನಗಳಲ್ಲಿ, ತಾಯಂದಿರು ಈ ವಿಷಯದ ಬಗ್ಗೆ ಇತರರೊಂದಿಗೆ ಮಾತಾಡುವಾಗ ಸ್ವಲ್ಪ ಉಪಶಮನವನ್ನು ಪಡೆಯುವರು. ಕೇವಲ ಸ್ವಲ್ಪ ಸಹಾಯದೊಂದಿಗೆ, ಅನೇಕ ತಾಯಂದಿರು ಅಡಚಣೆಗಳ ಎದುರಿನಲ್ಲೂ ಅವುಗಳನ್ನು ನಿಭಾಯಿಸಲು ಶಕ್ತರಾಗಿದ್ದಾರೆ.”
ಹೆತ್ತವರು (ಇಂಗ್ಲಿಷ್) ಎಂಬ ಪತ್ರಿಕೆಯು ಹೇಳುವುದೇನೆಂದರೆ, ಹೆತ್ತವರಿಗೆ “ತಮ್ಮ ಚಿಂತೆಗಳನ್ನು ಹಂಚಿಕೊಳ್ಳಬಲ್ಲ ಒತ್ತಾಸೆ ನೀಡುವ ಜನರ ಜಾಲಬಂಧವು ಅಗತ್ಯ.” ಇಂಥ ಜನರ ಜಾಲಬಂಧವನ್ನು ಅವರೆಲ್ಲಿ ಕಂಡುಕೊಳ್ಳಬಲ್ಲರು? ಮುಕ್ತಮನಸ್ಸಿನವರಾಗಿದ್ದು, ತಮ್ಮ ಸ್ವಂತ ತಂದೆತಾಯಂದಿರು ಇಲ್ಲವೆ ಅತ್ತೆಮಾವಂದಿರಿಗೆ ಕಿವಿಗೊಡುವ ಮೂಲಕ ಹೊಸ ತಂದೆತಾಯಂದಿರು ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಅಂತಿಮ ನಿರ್ಣಯವು ಯುವ ದಂಪತಿಯದ್ದಾಗಿರಬೇಕೆಂಬದನ್ನು ಅಜ್ಜಅಜ್ಜಿಯಂದಿರು ಅಂಗೀಕರಿಸಬೇಕು.c
ಯುವ ಹೆತ್ತವರು ಅನೇಕವೇಳೆ ಅವಲಂಬಿಸಬಹುದಾದ ಇನ್ನೊಂದು ಮೂಲವು, ಧಾರ್ಮಿಕ ಜೊತೆ ವಿಶ್ವಾಸಿಗಳಾಗಿದ್ದಾರೆ. ಮಕ್ಕಳನ್ನು ಸಾಕಿಸಲಹುವುದರಲ್ಲಿ ಅನೇಕ ವರ್ಷಗಳ ಅನುಭವವುಳ್ಳ, ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆ ಕಿವಿಗೊಡಲು ಸಿದ್ಧರಾಗಿರುವ ಜನರನ್ನು ನೀವು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಕಂಡುಕೊಳ್ಳಬಹುದು. ಅವರು ನಿಮಗೆ ಕೆಲವೊಂದು ಸಹಾಯಕಾರಿ ಕಿವಿಮಾತುಗಳನ್ನು ಕೊಡಬಲ್ಲರು. ಅನೇಕವೇಳೆ ನೀವು, ಯಾರು ಯುವ ಸ್ತ್ರೀಯರಿಗೆ ಸಹಾಯಮಾಡಲು ಸಿದ್ಧರಾಗಿದ್ದಾರೋ ಅಂಥ ‘ವೃದ್ಧಸ್ತ್ರೀಯರ’—ಕ್ರೈಸ್ತ ಜೀವನದಲ್ಲಿ ಹೆಚ್ಚಿನ ಅನುಭವವುಳ್ಳವರನ್ನು ಬೈಬಲ್ ಹೀಗೆ ಕರೆಯುತ್ತದೆ—ಸಹಾಯವನ್ನು ಕೋರಬಹುದು.—ತೀತ 2:2-5.
ಇತರರ ಅಭಿಪ್ರಾಯಗಳಿಗೆ ಕಿವಿಗೊಡುವಾಗಲಂತೂ ಹೆತ್ತವರು ಆಯ್ಕೆಮಾಡುವವರಾಗಿರಬೇಕು ನಿಜ. “ಒಮ್ಮೆಲೆ ನಮ್ಮ ಸುತ್ತಲಿದ್ದ ಎಲ್ಲರೂ ಮಗು-ಶಿಕ್ಷಣದ ತಜ್ಞರಾಗಿಬಿಟ್ಟರು,” ಎಂದು ಯೋಈಚೀರೊ ಹೇಳುತ್ತಾರೆ. ಅವನ ಪತ್ನಿ ಟಾಕಾಕೊ ಒಪ್ಪಿಕೊಳ್ಳುವುದು: “ಮೊದಮೊದಲು, ಇತರರು ಕೊಡುತ್ತಿದ್ದ ಸಲಹೆಗಳಿಂದ ನನ್ನ ತಲೆಕೆಟ್ಟುಹೋಗುತ್ತಿತ್ತು. ಏಕೆಂದರೆ ತಾಯಿಯೋಪಾದಿ ನನಗಿರುವ ಅನುಭವದ ಕೊರತೆಯನ್ನು ಅವರು ಟೀಕಿಸುತ್ತಿದ್ದಾರೆಂದು ನನಗನಿಸಿತು.” ಆದರೆ ಇತರರಿಂದ ಕಲಿಯುವ ಮೂಲಕ ಅನೇಕ ಮಂದಿ ಗಂಡಹೆಂಡತಿಯರಿಗೆ, ತಮ್ಮ ಮಕ್ಕಳಿಗೆ ಏನು ಅಗತ್ಯವಿದೆಯೊ ಅದನ್ನು ಒದಗಿಸುವುದರ ಕುರಿತಾಗಿ ಸಮತೂಕದ ನೋಟವನ್ನು ಹೊಂದಲು ಸಹಾಯವು ದೊರಕಿದೆ.
ಅತ್ಯುತ್ತಮವಾದ ಸಹಾಯ ಲಭ್ಯ
ನಿಮಗೆ ಸಹಾಯಮಾಡಲು ಯಾರೂ ಲಭ್ಯವಿಲ್ಲವೆಂದು ನಿಮಗೆ ತೋರುವಾಗಲೂ, ಬಲದ ಒಂದು ವಿಶ್ವಸನೀಯ ಮೂಲವಿದೆ. ಆ ಮೂಲವು, ಯಾರು ನಮ್ಮನ್ನು ಸೃಷ್ಟಿಸಿದ್ದಾನೋ ಮತ್ತು ಯಾರ ಕಣ್ಣುಗಳು ಭೂಮಿಯ ಮೇಲೆ ಜನಿಸುವವರ “ಭ್ರೂಣವನ್ನೂ” ನೋಡಸಾಧ್ಯವೋ ಆ ಯೆಹೋವ ದೇವರೇ ಆಗಿದ್ದಾನೆ. (ಕೀರ್ತನೆ 139:16, NW) ಆತನ ವಾಕ್ಯವಾದ ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವಂತೆ ಪ್ರಾಚೀನ ಕಾಲದ ತನ್ನ ಜನರಿಗೆ ಯೆಹೋವನು ಒಮ್ಮೆ ಹೇಳಿದ್ದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.”—ಯೆಶಾಯ 49:15; ಕೀರ್ತನೆ 27:10.
ಇಲ್ಲ, ಯೆಹೋವನು ಹೆತ್ತವರನ್ನು ಮರೆಯುವುದಿಲ್ಲ. ಬೈಬಲಿನಲ್ಲಿ ಆತನು ಅವರಿಗೆ, ಮಕ್ಕಳನ್ನು ಸಾಕಿಸಲಹುವುದರ ಬಗ್ಗೆ ಅತ್ಯುತ್ಕೃಷ್ಟವಾದ ನಿರ್ದೇಶನಗಳನ್ನು ಕೊಟ್ಟಿದ್ದಾನೆ. ಉದಾಹರಣೆಗೆ, ಸುಮಾರು 3,500 ವರ್ಷಗಳ ಹಿಂದೆ, ದೇವರ ಪ್ರವಾದಿಯಾದ ಮೋಶೆಯು ಬರೆದುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” ನಂತರ ಮೋಶೆಯು ಹೇಳಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು [ಯೆಹೋವನನ್ನು ಪ್ರೀತಿಸಲು ಮತ್ತು ಸೇವಿಸಲು ಕೊಡಲ್ಪಟ್ಟ ಉತ್ತೇಜನವು ಸೇರಿ] ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:4-7.
ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಈ ನಿರ್ದೇಶನದ ಮುಖ್ಯ ಅಂಶವೇನೆಂದು ನೀವು ನೆನಸುತ್ತೀರಿ? ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದು, ಪ್ರತಿದಿನವೂ ನಡೆಸಲ್ಪಡಬೇಕಾದ ಕ್ರಮವಾದ ಮತ್ತು ಸತತವಾದ ಕಾರ್ಯವಿಧಾನವಾಗಿದೆ ಎಂದಲ್ಲವೊ? ವಾಸ್ತವದಲ್ಲಿ ನಿಮ್ಮ ಮಕ್ಕಳಿಗೆ, ಒಮ್ಮೊಮ್ಮೆ ಬರೇ ನಾಮಮಾತ್ರದ ಗುಣಮಟ್ಟದ ಸಮಯವನ್ನು ಶೆಡ್ಯೂಲ್ ಮಾಡುವುದು ಸಾಲದು. ಸಂವಾದದ ಪ್ರಮುಖ ಕ್ಷಣಗಳು ಥಟ್ಟನೆ ಎದ್ದುಬರುತ್ತವಾದ್ದರಿಂದ, ನೀವು ನಿತ್ಯವೂ ನಿಮ್ಮ ಮಕ್ಕಳಿಗಾಗಿ ಲಭ್ಯವಿರುವ ಅಗತ್ಯವಿದೆ. ಹಾಗೆ ಮಾಡುವುದು, ನಿಮಗೆ ಬೈಬಲಿನ ಈ ಆಜ್ಞೆಯನ್ನು ಪೂರೈಸುವಂತೆ ಸಾಧ್ಯಮಾಡುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು.”—ಜ್ಞಾನೋಕ್ತಿ 22:6.
ಪುಟ್ಟ ಮಕ್ಕಳ ಸರಿಯಾದ ತರಬೇತಿಯಲ್ಲಿ, ಅವರಿಗೆ ಗಟ್ಟಿಯಾಗಿ ಓದಿಹೇಳುವುದೂ ಸೇರಿದೆ. ಪ್ರಥಮ ಶತಮಾನದ ಶಿಷ್ಯನಾದ ತಿಮೊಥೆಯನಿಗೆ ‘ಚಿಕ್ಕಂದಿನಿಂದಲೂ ಪರಿಶುದ್ಧಗ್ರಂಥಗಳ ಪರಿಚಯ’ ಇತ್ತೆಂದು ಬೈಬಲ್ ನಮಗೆ ಹೇಳುತ್ತದೆ. ಆದುದರಿಂದ, ಅವನ ತಾಯಿ ಯೂನೀಕೆ ಮತ್ತು ಅಜ್ಜಿ ಲೋವಿಯು ಅವನಿನ್ನೂ ಒಬ್ಬ ಚಿಕ್ಕ ಮಗುವಾಗಿದ್ದಾಗಲೇ ಅವನಿಗೆ ಗಟ್ಟಿಯಾಗಿ ಓದಿಹೇಳುತ್ತಿದ್ದರೆಂಬುದು ಸುವ್ಯಕ್ತ. (2 ತಿಮೊಥೆಯ 1:5; 3:14, 15) ನಿಮ್ಮ ಮಗುವಿನೊಂದಿಗೆ ನೀವು ಮಾತಾಡಲಾರಂಭಿಸಿದ ಕೂಡಲೇ ನೀವಿದನ್ನು ಮಾಡಲಾರಂಭಿಸುವುದು ಒಳ್ಳೇದು. ಆದರೆ ನೀವೇನು ಓದಬಲ್ಲಿರಿ, ಮತ್ತು ಒಬ್ಬ ಶಿಶುವಿಗೂ ನೀವು ಹೇಗೆ ಅತ್ಯುತ್ತಮವಾಗಿ ಕಲಿಸಬಲ್ಲಿರಿ?
ನಿಮ್ಮ ಮಗು ನೀವು ಬೈಬಲ್ ಓದುವುದನ್ನು ಕೇಳಿಸಿಕೊಳ್ಳಲಿ. ಬಹುಶಃ ತಿಮೊಥೆಯನಿಗೂ ಇದನ್ನೇ ಓದಿಹೇಳಲಾಗಿತ್ತು. ವರ್ಣಭರಿತ ಚಿತ್ರಗಳ ಮೂಲಕ ಮಕ್ಕಳಿಗೆ ಬೈಬಲನ್ನು ಪರಿಚಯಪಡಿಸುವಂಥ ಪುಸ್ತಕಗಳೂ ಇವೆ. ಬೈಬಲು ಕಲಿಸುವಂಥ ವಿಷಯಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವಂತೆ ಇವು ಮಗುವಿಗೆ ಸಹಾಯಮಾಡುತ್ತವೆ. ಉದಾಹರಣೆಗೆ, ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕಗಳಿವೆ. ಇಂಥ ಪುಸ್ತಕಗಳ ಮೂಲಕ, ಲಕ್ಷಗಟ್ಟಲೆ ಪುಟಾಣಿಗಳ ಹೃದಮನಗಳಲ್ಲಿ ಬೈಬಲ್ ಬೋಧನೆಗಳು ಅಚ್ಚೊತ್ತಲ್ಪಟ್ಟಿವೆ.
ಬೈಬಲ್ ಹೇಳುವಂತೆ, “ಪುತ್ರ [ಮತ್ತು ಪುತ್ರಿ] ಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.” (ಕೀರ್ತನೆ 127:3) ನಿಮ್ಮ ಸೃಷ್ಟಿಕರ್ತನು ನಿಮಗೊಂದು “ಸ್ವಾಸ್ತ್ಯ”ವನ್ನು, ಮುದ್ದಾದ ಮಗುವನ್ನು ಕೊಟ್ಟಿದ್ದಾನೆ. ಅದು ಹೆಮ್ಮೆ ಮತ್ತು ಆನಂದದ ಮೂಲವಾಗಿರಬಲ್ಲದು. ಮಕ್ಕಳನ್ನು, ವಿಶೇಷವಾಗಿ ಅವರ ಸೃಷ್ಟಿಕರ್ತನ ಸ್ತುತಿಗಾರರಾಗಿ ಬೆಳೆಸುವುದು ನಿಜವಾಗಿಯೂ ಒಂದು ಪ್ರತಿಫಲದಾಯಕ ಜೀವನವೃತ್ತಿಯಾಗಿದೆ! (g03 12/22)
[ಪಾದಟಿಪ್ಪಣಿಗಳು]
a ಒತ್ತಡದ ಹಾರ್ಮೋನುಗಳು ಮಾತ್ರವಲ್ಲದೆ, ನಿಕೋಟೀನ್, ಮದ್ಯಸಾರ, ಮತ್ತು ಇತರ ಅಮಲೌಷಧಗಳು ಸಹ ಭ್ರೂಣದ ಮೇಲೆ ವಿಪತ್ಕಾರಕ ಪರಿಣಾಮಗಳನ್ನು ಬೀರಬಲ್ಲವು. ಗರ್ಭವತಿಯರು ಯಾವುದೇ ಅಪಾಯಕಾರಿ ಪದಾರ್ಥಗಳಿಂದ ದೂರವಿರುವುದು ಒಳ್ಳೇದು. ಅಷ್ಟುಮಾತ್ರವಲ್ಲದೆ, ತಾಯಿಯು ಸೇವಿಸುವ ಔಷಧವು ಭ್ರೂಣದ ಮೇಲೆ ಯಾವ ಪರಿಣಾಮಗಳನ್ನು ಬೀರುವುದು ಎಂಬುದರ ಬಗ್ಗೆ ಒಬ್ಬ ವೈದ್ಯನೊಂದಿಗೆ ವಿಚಾರಿಸುವುದು ಅತ್ಯಾವಶ್ಯಕ.
b ಒಬ್ಬ ತಾಯಿಯು ಗಾಢವಾದ ದುಃಖ ಮತ್ತು ನಿರೀಕ್ಷಾಹೀನತೆ ಹಾಗೂ ಮಗು ಮತ್ತು ಜಗತ್ತಿನ ವಿಷಯದಲ್ಲಿ ನಿರಾಸಕ್ತಿಯನ್ನು ಅನುಭವಿಸುತ್ತಿರುವುದಾದರೆ, ಅವಳು ಪ್ರಸವಾನಂತರದ ಖಿನ್ನತೆಯಿಂದ ಬಾಧಿತಳಾಗಿರಬಹುದು. ಹೀಗಿರುವಲ್ಲಿ, ಅವಳು ತನ್ನ ಹೆರಿಗೆ ವೈದ್ಯರನ್ನು ಭೇಟಿಯಾಗಬೇಕು. ದಯವಿಟ್ಟು, ಎಚ್ಚರ! (ಇಂಗ್ಲಿಷ್) 2002ರ ಜುಲೈ 22, ಪುಟ 19-23 ಮತ್ತು 2003ರ ಜೂನ್ 8 ಪುಟ 21-3ನ್ನು ನೋಡಿರಿ.
c ಮಾರ್ಚ್ 22, 1999ರ ಎಚ್ಚರ! (ಇಂಗ್ಲಿಷ್) ಸಂಚಿಕೆಯಲ್ಲಿರುವ “ಅಜ್ಜಅಜ್ಜಿಯಂದಿರು—ಅವರ ಆನಂದಗಳು ಮತ್ತು ಪಂಥಾಹ್ವಾನಗಳು” ಎಂಬ ಲೇಖನವನ್ನು ದಯವಿಟ್ಟು ಓದಿರಿ.
[ಪುಟ 8ರಲ್ಲಿರುವ ಚಿತ್ರ]
ಹುಟ್ಟಲಿರುವ ಮಗುವಿನ ಕುರಿತಾಗಿ ತಾಯಿಗಿರುವ ಭಾವನೆಗಳು ಅತಿ ಪ್ರಾಮುಖ್ಯವಾಗಿವೆ
[ಪುಟ 9ರಲ್ಲಿರುವ ಚಿತ್ರ]
ಒಬ್ಬ ಹೊಸ ತಾಯಿ ಹೆರಿಗೆಯ ನಂತರ ಚಿತ್ತಸ್ಥಿತಿಯಲ್ಲಿ ಬದಲಾವಣೆಗಳನ್ನು ಅನುಭವಿಸುವುದಾದರೂ, ತನ್ನ ಮಗುವಿಗೆ ಪ್ರೀತಿಸಲ್ಪಟ್ಟಿರುವ ಮತ್ತು ಸುರಕ್ಷೆಯ ಭಾವನೆಯನ್ನು ಮೂಡಿಸಲು ಬಹಳಷ್ಟನ್ನು ಮಾಡಬಲ್ಲಳು
[ಪುಟ 10ರಲ್ಲಿರುವ ಚಿತ್ರ]
ತಂದೆಯಂದಿರಿಗೆ ಮಗುವಿನ ಆರೈಕೆಯಲ್ಲಿ ಪಾಲ್ಗೊಳ್ಳುವ ಜವಾಬ್ದಾರಿಯಿದೆ
[ಪುಟ 10ರಲ್ಲಿರುವ ಚಿತ್ರ]
ಮಗುವಿಗೆ ಓದಿಹೇಳುವುದು ಶೈಶವದಲ್ಲೇ ಆರಂಭವಾಗಬೇಕು