ನೂರು ಕೋಟಿ ಜನರಿಗೆ ಆಹಾರವನ್ನು ಒದಗಿಸಲು ಪ್ರಯತ್ನಿಸುವುದು
ಪ್ರತಿ ದಿನ ನೂರು ಕೋಟಿ ಜನರಿಗೆ ತಮ್ಮ ಹಸಿವೆಯನ್ನು ನೀಗಿಸಿಕೊಳ್ಳುವಷ್ಟು ಆಹಾರ ದೊರಕುತ್ತಿಲ್ಲ. ಹಾಗಿದ್ದರೂ, ವಿಶ್ವ ಸಂಸ್ಥೆಗನುಸಾರ ಈ ಘೋರ ಪರಿಸ್ಥಿತಿಯು ಅಸ್ತಿತ್ವದಲ್ಲಿರಬಾರದು.
“ಬಡತನವನ್ನು ತೆಗೆದುಹಾಕುವುದೇ ನಿಮ್ಮ ಆದ್ಯತೆ ಎಂಬುದಾಗಿ ನೀವು ಹೇಳಿದ್ದೀರಿ.” ಇದು, ಇಸವಿ 2000ದ ಸೆಪ್ಟೆಂಬರ್ 8ರಂದು ಲೋಕದ ಅತಿ ಪ್ರಬಲ ಸ್ತ್ರೀಪುರುಷರ ಒಕ್ಕೂಟದಲ್ಲಿ ವಿಶ್ವ ಸಂಸ್ಥೆಯ ಸೆಕ್ರಿಟರಿ ಜನರಲ್ ಕೋಫೀ ಅನಾನ್ ಮಾಡಿದ ಹೇಳಿಕೆಯಾಗಿದೆ. ಅವರೆಲ್ಲರು ವಿಶ್ವ ಸಂಸ್ಥೆಯ ಸಹಸ್ರಮಾನ ಶೃಂಗಸಭೆಗಾಗಿ ಒಟ್ಟುಗೂಡಿದ್ದರು. ಆ ಸಮಯದಲ್ಲಿ ಒಟ್ಟುಗೂಡಿದ ಆ ಮುಖಂಡರಲ್ಲಿ ಅನೇಕರು, ಲೋಕದ ಬಡಜನರ ಸಮಸ್ಯೆಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೆಗಳನ್ನು ಮಾಡಿದರು. “ವಿಪರೀತ ಬಡತನವು ಮಾನವಕುಲಕ್ಕೆ ಒಂದು ಅಪಮಾನವಾಗಿದೆ” ಎಂಬುದಾಗಿ ಬ್ರಸಿಲ್ನ ಉಪಾಧ್ಯಕ್ಷರು ಹೇಳಿದರು. ಗ್ರೇಟ್ ಬ್ರಿಟನ್ನ ಪ್ರಧಾನ ಮಂತ್ರಿಯವರು ಇದಕ್ಕೆ ಇನ್ನೂ ಕೂಡಿಸುತ್ತಾ ಹೇಳಿದ್ದು: “ಪ್ರಗತಿಪರ ದೇಶಗಳ ಸೋಲಿನ ಭೀಕರ ದಾಖಲೆಯು ಆಫ್ರಿಕದಲ್ಲಿದೆ. ಇದು ನಮ್ಮ ನಾಗರಿಕತೆಗೆ ಅಚ್ಚರಿ ಮತ್ತು ನಾಚಿಕೆಯನ್ನು ಉಂಟುಮಾಡುವಂಥದ್ದಾಗಿದೆ.”
ಹಸಿದ ಜನರಿಗೆ ಆಹಾರವನ್ನು ಒದಗಿಸಲು ತಪ್ಪಿಬೀಳುವ ಮೂಲಕ ರಾಷ್ಟ್ರಗಳು ಸ್ವತಃ ಅಪಮಾನವನ್ನು ತಂದುಕೊಂಡಿವೆ ಎಂಬುದನ್ನು ಆ ಇಬ್ಬರು ಭಾಷಣಕಾರರು ಸ್ಪಷ್ಟಪಡಿಸಿದರು. ಭೂಮಿಯ ಮೇಲಿರುವ ಎಲ್ಲರ ಜೀವನ ಪರಿಸ್ಥಿತಿಗಳನ್ನು ಉತ್ತಮಗೊಳಿಸುವ ಅವರ ಇಚ್ಛೆಗೆ ರುಜುವಾತಾಗಿ, ಶೃಂಗಸಭೆಗೆ ಹಾಜರಾದ ಪ್ರತಿಯೊಬ್ಬರು ತಾವು ಬಡತನವನ್ನು ತೆಗೆದುಹಾಕಲು ಕ್ರಿಯೆಗೈಯುವುದಾಗಿ ಎಂಟು ಭಾಗವುಳ್ಳ ಒಂದು ಠರಾವಿಗೆ ಒಪ್ಪಿಗೆ ಕೊಡುವ ಮೂಲಕವಾಗಿ ಮಾತುಕೊಟ್ಟರು. ಆ ಠರಾವಿನಲ್ಲಿ ಈ ವಿಷಯವು ಸೇರಿಕೊಂಡಿತ್ತು: “ಸದ್ಯಕ್ಕೆ 100 ಕೋಟಿಗಿಂತಲೂ ಹೆಚ್ಚಿನ ಜನರು ವಿಪರೀತ ಬಡತನಕ್ಕೆ ಒಳಪಟ್ಟಿದ್ದಾರೆ. ಆ ನಮ್ಮ ಜೊತೆ ಸ್ತ್ರೀಪುರುಷರು ಮತ್ತು ಮಕ್ಕಳನ್ನು ಕಡು ಬಡತನದ ಸಂಕಟಮಯ ಹಾಗೂ ಅಮಾನವೀಯ ಸ್ಥಿತಿಗಳಿಂದ ಬಿಡುಗಡೆಮಾಡಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವೆವು. . . . ಮಾತ್ರವಲ್ಲದೆ, ದಿನಕ್ಕೆ ಒಂದು ಡಾಲರ್ಗಿಂತಲೂ ಕಡಿಮೆ ಆದಾಯವಿರುವಂಥ ಲೋಕದ ಜನರ ಮತ್ತು ಹಸಿವೆಯಿಂದ ಬಳಲುತ್ತಿರುವ ಜನರ ಸಂಖ್ಯೆಯನ್ನು 2015ರೊಳಗಾಗಿ ಅರ್ಧದಷ್ಟು ಕಡಿಮೆಮಾಡುತ್ತೇವೆ ಎಂದು ಸಹ ನಾವು ನಿರ್ಧರಿಸುತ್ತೇವೆ.”
ಇಸವಿ 2000ದ ಸೆಪ್ಟೆಂಬರ್ ತಿಂಗಳಿನಿಂದೀಚೆಗೆ ಈ ಉನ್ನತ ಗುರಿಯನ್ನು ಸಾಧಿಸುವುದರಲ್ಲಿ ಯಾವ ಪ್ರಗತಿಯನ್ನು ಮಾಡಲಾಗಿದೆ?
ನುಡಿಗಿಂತ ನಡೆ ಹೆಚ್ಚನ್ನು ಬಯಲುಪಡಿಸುತ್ತದೆ
ಇಸವಿ 2003ರಲ್ಲಿ ಲೋಕದ ಆರ್ಥಿಕ ಕೂಟದ ಗ್ಲೋಬಲ್ ಗವರ್ನನ್ಸ್ ಇನಿಷೆಟಿವ್, ವಿಶ್ವ ಸಂಸ್ಥೆಯ ಸಹಸ್ರಮಾನ ಘೋಷಣೆಯಲ್ಲಿ ಪಟ್ಟಿಮಾಡಲಾದ ಗುರಿಗಳನ್ನು ಸಾಧಿಸಲು ಯಾವ ಕ್ರಿಯೆ ಕೈಗೊಳ್ಳಲಾಗಿದೆ ಎಂಬುದನ್ನು ಪರೀಕ್ಷಿಸಲಾರಂಭಿಸಿತು. 2004, ಜನವರಿ 15ರಂದು ಬಿಡುಗಡೆಯಾದ ಅಧಿಕೃತ ವರದಿಯು ತಿಳಿಸುವುದು: “ಅದರ ಎಲ್ಲ ಅತಿ ಪ್ರಾಮುಖ್ಯ ಗುರಿಗಳನ್ನು ಸಾಧಿಸಲು ಬೇಕಾದ ಪ್ರಯತ್ನಗಳನ್ನು ಮಾಡುವುದರಲ್ಲಿ ಲೋಕವು ಸಂಪೂರ್ಣವಾಗಿ ವಿಫಲವಾಗಿದೆ.” ಆಹಾರದ ಕೊರತೆಯ ವಿಷಯದಲ್ಲಿ ವರದಿಯು ತಿಳಿಸುವುದು: “ಲೋಕದಲ್ಲಿ ಆಹಾರದ ಕೊರತೆಯ ಸಮಸ್ಯೆಯಿಲ್ಲ. ಪ್ರತಿಯೊಬ್ಬರಿಗೂ ಬೇಕಾದಷ್ಟು ಆಹಾರವಿದೆ. ಆದರೆ ಸಮಸ್ಯೆ ಏನೆಂದರೆ, ಹಣದ ಕೊರತೆಯಿರುವವರಿಗೆ ಆಹಾರ ಮತ್ತು ಸಾಕಷ್ಟು ಪೌಷ್ಟಿಕತೆ ದೊರಕುವುದಿಲ್ಲ.”
ಬಡತನವೆಂಬ ಸಾಮಾನ್ಯ ಸಮಸ್ಯೆಯ ಬಗ್ಗೆ ವರದಿಯು ತಿಳಿಸುವುದು: “ನೀರಸ ನಿರ್ವಹಣೆಗಾಗಿ ಈಗ ಮುಖ್ಯವಾಗಿ ಶ್ರೀಮಂತ ಮತ್ತು ಬಡ ಸರಕಾರಗಳು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಆದರೆ ಶ್ರೀಮಂತ ರಾಷ್ಟ್ರಗಳಿಂದ ವಿನ್ಯಾಸಿಸಲ್ಪಟ್ಟಿರುವ ಭೌಗೋಳಿಕ ಆರ್ಥಿಕ ವ್ಯವಸ್ಥೆಯು ಅನೇಕಾನೇಕ ವೇಳೆ ಬಡ ರಾಷ್ಟ್ರಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ದೊಡ್ಡ ದೊಡ್ಡ ಮಾತುಗಳನ್ನಾಡುವುದರ ಹೊರತು, ಶ್ರೀಮಂತ ರಾಷ್ಟ್ರಗಳು ತಮ್ಮ ವ್ಯವಸ್ಥೆಯನ್ನು ಬದಲಾಯಿಸುವುದರಲ್ಲಿ ಇಲ್ಲವೆ ಬಡವರ ನೆರವಿಗಾಗಿ ಅಭಿವೃದ್ಧಿ ಯೋಜನೆಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ.” ಈ ದೂಷಣೆಯ ಹೊರತಾಗಿಯೂ, ರಾಜಕಾರಣಿಗಳು ಕ್ರಿಯೆಗೈಯುವ ಬದಲು ದೊಡ್ಡ ದೊಡ್ಡ ಮಾತುಗಳಿಂದ ವಾಗ್ವಾದಮಾಡುತ್ತಲೇ ಮುಂದುವರಿಯುತ್ತಾರೆ. ಸರಕಾರಗಳು ತಮ್ಮ ಸ್ವಂತ ಪ್ರಯೋಜನಕ್ಕಾಗಿ ವಿಚಾರಗಳನ್ನು ಚಾತುರ್ಯದಿಂದ ನಿರ್ವಹಿಸುತ್ತಾ ಮುಂದುವರಿಯುತ್ತವೆ. ಈತನ್ಮಧ್ಯೆ, ಲೋಕದ ಬಡಜನರು ಹಸಿವೆಯಿಂದ ನರಳುತ್ತಾ ಇದ್ದಾರೆ.
“ಅಂತಾರಾಷ್ಟ್ರೀಯ ವಾಣಿಜ್ಯ ಕಾರ್ಯನೀತಿಗಳು ಬದಲಾಗದಿದ್ದರೆ, ರಾಷ್ಟ್ರೀಯ ಕಾರ್ಯನೀತಿಗಳು ಹಸಿವೆಯನ್ನು ನಿವಾರಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸದಿದ್ದರೆ ಮತ್ತು ಯಶಸ್ವಿಕರವಾಗಿರುವ ಸ್ಥಳಿಕ ಪ್ರಯತ್ನಗಳು ಹೆಚ್ಚಾಗದಿದ್ದರೆ, ಮಾನವಕುಲದ ಹೆಚ್ಚಿನ ಸ್ಥಳಗಳಲ್ಲಿ ಆಹಾರದ ಕೊರತೆಯು ಹೆಚ್ಚಾಗುತ್ತಾ ಹೋಗುವುದು” ಎಂಬುದಾಗಿ “ಅತ್ಯಾಶೆಯಿಂದ ಕ್ರಿಯೆಯ ವರೆಗೆ” ಎಂಬ ಲೋಕದ ಆರ್ಥಿಕ ಕೂಟದ ಒಂದು ಪ್ರಮುಖ ಮಾಹಿತಿ ಹಾಳೆಯು ಎಚ್ಚರಿಸುತ್ತದೆ. ಉತ್ತಮ ಯೋಜನೆಗಳನ್ನು ಮತ್ತು ಹೆಚ್ಚು “ಯಶಸ್ವಿಕರವಾಗಿರುವ ಸ್ಥಳಿಕ ಪ್ರಯತ್ನಗಳನ್ನು” ಯಾರು ಉತ್ತಮಗೊಳಿಸುವ ಅಗತ್ಯವಿದೆ? ಇಡೀ ಮಾನವಕುಲದ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತೇವೆ ಎಂಬುದಾಗಿ 2000ದಲ್ಲಿ ಸಾರ್ವಜನಿಕವಾಗಿ ಘೋಷಿಸಿದ ಅದೇ ಸರಕಾರಗಳು ಮಾಡಬೇಕಾಗಿದೆ.
ಒಂದು ವಾಗ್ದಾನವು ಮುರಿಯಲ್ಪಟ್ಟರೆ ಅದು ನಿರಾಶೆಗೆ ನಡೆಸುತ್ತದೆ; ಅನೇಕ ವಾಗ್ದಾನಗಳು ಮುರಿಯಲ್ಪಟ್ಟರೆ ಅದು ಅಪನಂಬಿಕೆಗೆ ನಡೆಸುತ್ತದೆ. ಬಡವರ ಕಾಳಜಿ ವಹಿಸುತ್ತೇವೆ ಎಂಬ ಅವರ ಮಾತನ್ನು ನೆರವೇರಿಸದೆ ಹೋದ ಕಾರಣ ಲೋಕದ ಸರಕಾರಗಳು ಅಪನಂಬಿಕೆಯನ್ನು ಕೊಯ್ಯುತ್ತಿವೆ. ಬಡ ಕ್ಯಾರಿಬೀಯನ್ ದೇಶವೊಂದರಲ್ಲಿ ವಾಸಿಸುತ್ತಿರುವ ಐದು ಮಕ್ಕಳ ತಾಯಿಯೊಬ್ಬಳು ತನ್ನ ಕುಟುಂಬಕ್ಕೆ ದಿನಕ್ಕೆ ಕೇವಲ ಒಂದು ಊಟವನ್ನು ಒದಗಿಸಲು ಶಕ್ತಳಾಗಿದ್ದಾಳೆ. ಅವಳು ಹೇಳುವುದು: “ನಮಗೆ ಊಟ ಸಿಗುತ್ತದೊ ಇಲ್ಲವೊ ಎಂಬುದು ಮಾತ್ರ ನನ್ನ ಚಿಂತೆ. ಯಾವ ಸರಕಾರ ಆಳುತ್ತಿದೆ ಎಂಬುದು ನನಗೆ ಮುಖ್ಯವಲ್ಲ. ಅಧಿಕಾರದಲ್ಲಿರುವ ಯಾರಿಂದಲೂ ಎಂದಿಗೂ ನಮಗೆ ಪ್ರಯೋಜನವಾಗಿಲ್ಲ.”
ಬೈಬಲ್ ಬರಹಗಾರನಾದ ಯೆರೆಮೀಯನು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಬಡವರ ಸಮಸ್ಯೆಗಳನ್ನು ನಿವಾರಿಸಲು ಮಾನವ ಸರಕಾರವು ವಿಫಲವಾಗಿರುವುದು, ಮೇಲ್ಕಂಡ ಬೈಬಲ್ ಸತ್ಯವನ್ನು ದೃಢಪಡಿಸುತ್ತದೆ.
ಆದರೆ ಮಾನವ ಸಮಸ್ಯೆಗಳನ್ನು ನಿವಾರಿಸಲು ಶಕ್ತಿ ಮತ್ತು ಇಚ್ಛೆ ಇವೆರಡನ್ನೂ ಹೊಂದಿರುವ ಅಧಿಪತಿಯೊಬ್ಬನಿದ್ದಾನೆ. ಅವನು ಯಾರೆಂಬುದನ್ನು ಬೈಬಲ್ ಗುರುತಿಸುತ್ತದೆ. ಆ ಅಧಿಪತಿಯು ಆಳಲಾರಂಭಿಸಿದಾಗ, ಯಾರೊಬ್ಬರೂ ಹಸಿವೆಯಿಂದ ಬಳಲುವುದಿಲ್ಲ.
ನಿರೀಕ್ಷೆಗೆ ಆಧಾರ
“ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ; ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತೀ.” (ಕೀರ್ತನೆ 145:15) ಮನುಷ್ಯನ ಆಹಾರ ಅಗತ್ಯತೆಗಳ ಕಡೆಗೆ ಇಷ್ಟೊಂದು ಗಮನವುಳ್ಳ ಈ ವ್ಯಕ್ತಿ ಯಾರಾಗಿದ್ದಾನೆ? ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರೇ. ಸಾವಿರಾರು ವರುಷಗಳಿಂದ ಮಾನವಕುಲವು ಬರ ಮತ್ತು ಇನ್ನಿತರ ಸಮಸ್ಯೆಗಳಿಂದ ಕಷ್ಟಾನುಭವಿಸಿರುವುದಾದರೂ, ಯೆಹೋವನು ಯಾವಾಗಲೂ ಮಾನವರ ಕಡೆಗೆ ಆಸಕ್ತಿವಹಿಸಿದ್ದಾನೆ. ಆತನು ಮಾನವ ಸರಕಾರಗಳ ಸೋಲನ್ನು ಗಮನಿಸಿದ್ದಾನೆ ಮತ್ತು ತನ್ನ ಸ್ವಂತ ಸರಕಾರದಿಂದ ಈ ಎಲ್ಲ ಸರಕಾರಗಳನ್ನು ಸ್ಥಾನಪಲ್ಲಟಮಾಡಲಿದ್ದಾನೆ ಎಂಬುದನ್ನು ಆತನ ಸುಳ್ಳಾಗಲಾರದ ವಾಕ್ಯವಾದ ಬೈಬಲ್ ತಿಳಿಸುತ್ತದೆ.
ಯೆಹೋವನು ಹೇಳುವುದು: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು.” (ಕೀರ್ತನೆ 2:5) ವಿಶ್ವದಲ್ಲಿಯೇ ಅತ್ಯುನ್ನತ ಅಧಿಕಾರಿಯಿಂದ ಬಂದಿರುವ ಈ ಘೋಷಣೆಯು ನಿರೀಕ್ಷೆಗೆ ಕಾರಣವನ್ನು ಒದಗಿಸುತ್ತದೆ. ಮಾನವ ಅಧಿಪತಿಗಳು ಅನೇಕವೇಳೆ ತಮ್ಮ ಪ್ರಜೆಗಳಿಗೆ ಸಹಾಯನೀಡಲು ತಪ್ಪಿಬಿದ್ದಿರುವುದಾದರೂ, ದೇವರಿಂದ ನೇಮಿಸಲ್ಪಟ್ಟಿರುವ ಅರಸನಾದ ಯೇಸು ಕ್ರಿಸ್ತನು ಭೂಮಿಯ ಬಡಜನರಿಗೆ ಅವರು ಹಿಂದೆಂದೂ ಅನುಭವಿಸಿರದ ಪ್ರಯೋಜನಗಳನ್ನು ತರಲಿದ್ದಾನೆ.
ಈ ಅರಸನ ಮೂಲಕ ಯೆಹೋವನು ಭೂಮಿಯಲ್ಲಿರುವ ಎಲ್ಲ ಹಸಿದ ಜನರಿಗೆ ಆಹಾರವನ್ನು ಒದಗಿಸಲಿದ್ದಾನೆ. ‘ಸರ್ವಶಕ್ತನಾದ ಯೆಹೋವನು ಎಲ್ಲಾ ಜನಗಳಿಗೆ ಸಾರವತ್ತಾದ ಕೊಬ್ಬಿದ ಔತಣವನ್ನು ಸಿದ್ಧಮಾಡುವನು’ ಎಂಬುದಾಗಿ ಯೆಶಾಯ 25:6, ನ್ಯೂ ಇಂಡಿಯಾ ಬೈಬಲ್ ವರ್ಶನ್ನಲ್ಲಿ ತಿಳಿಸುತ್ತದೆ. ಕ್ರಿಸ್ತನ ಕೈಯಲ್ಲಿರುವ ದೇವರ ರಾಜ್ಯದ ಕೆಳಗೆ ಎಲ್ಲ ಕಡೆಯಲ್ಲಿರುವ ಜನರಿಗೆ ಎಂದೂ ಆರೋಗ್ಯಕರ ಆಹಾರದ ಕೊರತೆಯಿರುವುದಿಲ್ಲ. ಯೆಹೋವನ ಕುರಿತು ಬೈಬಲ್ ಹೇಳುವುದು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.”—ಕೀರ್ತನೆ 145:16. (g05 7/22)
[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪ್ರಗತಿಪರ ದೇಶಗಳ ಸೋಲಿನ ಭೀಕರ ದಾಖಲೆಯು ಆಫ್ರಿಕದಲ್ಲಿದೆ. ಇದು ನಮ್ಮ ನಾಗರಿಕತೆಗೆ ಅಚ್ಚರಿ ಮತ್ತು ನಾಚಿಕೆಯನ್ನು ಉಂಟುಮಾಡುವಂಥದ್ದಾಗಿದೆ.”—ಬ್ರಿಟಿಷ್ ಪ್ರಧಾನ ಮಂತ್ರಿ ಟೋನೀ ಬ್ಲೇಅರ್
[ಪುಟ 12ರಲ್ಲಿರುವ ಚಿತ್ರ]
ಇಥಿಯೋಪಿಯ: ಈ ದೇಶದಲ್ಲಿ ಸುಮಾರು 1.3 ಕೋಟಿ ಜನರು ಆಹಾರ ನೆರವಿನ ಮೇಲೆ ಅವಲಂಬಿಸಿದ್ದಾರೆ. ಮೇಲೆ ತೋರಿಸಲ್ಪಟ್ಟಿರುವ ಮಗುವು ಇವರಲ್ಲಿ ಒಂದಾಗಿದೆ
[ಪುಟ 12ರಲ್ಲಿರುವ ಚಿತ್ರ]
ಭಾರತ: ಈ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಊಟ ಸಿಗುತ್ತದೆ
[ಪುಟ 12ರಲ್ಲಿರುವ ಚಿತ್ರ ಕೃಪೆ]
ಮೇಲೆ: © Sven Torfinn/Panos Pictures; ಕೆಳಗೆ: © Sean Sprague/Panos Pictures