ನೈಸರ್ಗಿಕ ವಿಪತ್ತುಗಳು ಮತ್ತು ಮಾನವ ಅಂಶ
ಒಂದು ಕಾರನ್ನು ಸುಸ್ಥಿತಿಯಲ್ಲಿಟ್ಟಿರುವಾಗ, ಅದು ಸುರಕ್ಷಿತವಾದ ಸಂಚರಣ ಸೌಕರ್ಯವನ್ನು ಒದಗಿಸಬಲ್ಲದು. ಆದರೆ ಆ ವಾಹನವನ್ನು ದುರುಪಯೋಗಿಸುವುದಾದರೆ ಮತ್ತು ಅಲಕ್ಷಿಸುವುದಾದರೆ ಅದು ಗಂಡಾಂತರವನ್ನು ತಂದೊಡ್ಡಸಾಧ್ಯವಿದೆ. ಕೆಲವು ವಿಧಗಳಲ್ಲಿ ಭೂಗ್ರಹದ ಕುರಿತಾಗಿಯೂ ಇದನ್ನೇ ಹೇಳಬಹುದು.
ಅನೇಕ ವಿಜ್ಞಾನಿಗಳ ಅಭಿಪ್ರಾಯದಲ್ಲಿ, ಭೂಮಿಯ ವಾಯುಮಂಡಲ ಮತ್ತು ಸಾಗರಗಳಲ್ಲಿ ಮಾನವನು ಉಂಟುಮಾಡಿರುವ ಬದಲಾವಣೆಗಳ ಪರಿಣಾಮವಾಗಿ ಪದೇಪದೇ ಮತ್ತು ಹೆಚ್ಚು ತೀವ್ರತೆಯಿಂದ ಸಂಭವಿಸುವ ನೈಸರ್ಗಿಕ ವಿಪತ್ತುಗಳು, ನಮ್ಮ ಗ್ರಹವನ್ನು ಅತಿ ಅಪಾಯಕಾರಿ ಸ್ಥಳವನ್ನಾಗಿ ಮಾಡಿವೆ. ಮಾತ್ರವಲ್ಲದೆ, ಭವಿಷ್ಯತ್ತು ಅನಿಶ್ಚಿತವಾಗಿ ತೋರುತ್ತದೆ. “ಮಾನವರಾದ ನಮಗಿರುವ ಏಕಮಾತ್ರ ಗ್ರಹದ ಮೇಲೆ ನಮ್ಮ ಕೃತ್ಯಗಳು ಯಾವ ಪರಿಣಾಮವನ್ನು ಉಂಟುಮಾಡುವುದು ಎಂಬುದನ್ನು ತಿಳಿದಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ” ಎಂದು ವಿಜ್ಞಾನ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿ ವಾತಾವರಣದ ಬದಲಾವಣೆಯ ಕುರಿತಾದ ಚರ್ಚೆಯಲ್ಲಿ ಒಂದು ಸಂಪಾದಕೀಯವು ತಿಳಿಸಿತು.
ನೈಸರ್ಗಿಕ ವಿಪತ್ತುಗಳು ಸಂಭವಿಸುವ ಪ್ರಮಾಣ ಮತ್ತು ಅವುಗಳ ತೀವ್ರತೆಯನ್ನು ಮಾನವ ಚಟುವಟಿಕೆಯು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಉತ್ತಮವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುವಂತೆ, ಪ್ರಕೃತಿಯಲ್ಲಿ ಏನು ನಡೆಯುತ್ತದೆ ಎಂಬುದನ್ನು ನಾವು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಚಂಡಮಾರುತದಂಥ ಪ್ರಚಂಡವಾದ ಬಿರುಗಾಳಿಗಳು ಉಂಟಾಗಲು ಯಾವುದು ಕಾರಣವಾಗಿದೆ?
ಗ್ರಹದ ಉಷ್ಣ ವಿನಿಮಯಕಗಳು
ಭೂಮಿಯ ವಾತಾವರಣ ವ್ಯವಸ್ಥೆಯನ್ನು, ಸೂರ್ಯನ ಶಾಖವನ್ನು ಪರಿವರ್ತಿಸಿ ವಿತರಿಸುವ ಒಂದು ಯಂತ್ರಕ್ಕೆ ಹೋಲಿಸಲಾಗಿದೆ. ಸೂರ್ಯನ ಹೆಚ್ಚಿನ ಶಾಖವು ಉಷ್ಣವಲಯಕ್ಕೆ ದೊರಕುವ ಕಾರಣದಿಂದಾಗಿ ಉಂಟಾಗುವ ತಾಪಮಾನದಲ್ಲಿನ ಅಸಮತೋಲನವು, ಗಾಳಿಯನ್ನು ಚಲಿಸುವಂತೆ ಮಾಡುತ್ತದೆ.a ಈ ಚಲಿಸುತ್ತಿರುವ, ತೇವವಾದ ಗಾಳಿಯ ರಾಶಿಯು, ಭೂಮಿಯ ದೈನಂದಿನ ಆವರ್ತನದಿಂದಾಗಿ ಸುಳಿಗಳಾಗುತ್ತವೆ. ಈ ಸುಳಿಗಳಲ್ಲಿ ಕೆಲವಕ್ಕೆ ವಾಯುಭಾರವು ಕಡಿಮೆಯಿರುತ್ತದೆ. ಇಂಥ ಸುಳಿಗಳು ತರುವಾಯ ಬಿರುಗಾಳಿಗಳಾಗಿ ಮಾರ್ಪಡಬಹುದು.
ಉಷ್ಣವಲಯದಲ್ಲಿ ಸಂಭವಿಸುವ ಬಿರುಗಾಳಿಗಳ ಸಾಮಾನ್ಯ ಮಾರ್ಗವನ್ನು ನೀವು ಗಮನಿಸುವುದಾದರೆ, ಅವು ಸಮಭಾಜಕವೃತ್ತದಿಂದ ಒಂದೇ ಉತ್ತರಾಭಿಮುಖವಾಗಿ ಇಲ್ಲವೆ ದಕ್ಷಿಣಾಭಿಮುಖವಾಗಿ ಶೀತಲ ಪ್ರದೇಶಗಳತ್ತ ಚಲಿಸುವುದನ್ನು ಕಾಣುವಿರಿ. ಈ ರೀತಿಯಾಗಿ ಚಲಿಸುವಾಗ, ವಾತಾವರಣವನ್ನು ಸೌಮ್ಯವಾಗಿಡಲು ಸಹಾಯಮಾಡುತ್ತಾ ಬಿರುಗಾಳಿಗಳು ಅತಿ ದೊಡ್ಡ ಉಷ್ಣ ವಿನಿಮಯಕಗಳಾಗಿಯೂ ಕಾರ್ಯವೆಸಗುತ್ತವೆ. ಆದರೆ ಸಾಗರದ ಮೇಲ್ಭಾಗದಲ್ಲಿನ—ವಾತಾವರಣವೆಂಬ ಯಂತ್ರದ “ಬಾಯ್ಲರ್ ಕೋಣೆಯ”ಲ್ಲಿನ—ತಾಪಮಾನವು 27 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾದಾಗ, ಉಷ್ಣವಲಯದ ಬಿರುಗಾಳಿಗಳಿಗೆ ಸಾಕಷ್ಟು ಶಕ್ತಿ ದೊರಕಿ ಅವು ಸುಂಟರಗಾಳಿ, ಚಂಡಮಾರುತ ಇಲ್ಲವೆ ತೂಫಾನುಗಳಾಗಿ ಪರಿಣಮಿಸಬಹುದು. ಈ ಎಲ್ಲ ಹೆಸರುಗಳು ಒಂದೇ ಘಟನೆಗೆ ವಿವಿಧ ಸ್ಥಳಗಳಲ್ಲಿ ಉಪಯೋಗಿಸಲ್ಪಡುವ ವಿವಿಧ ಹೆಸರುಗಳಾಗಿವೆ.
ಟೆಕ್ಸಸ್ನ ದ್ವೀಪ ನಗರವಾದ ಗ್ಯಾಲ್ವಸ್ಟನ್ನನ್ನು, 1900ರ ಸೆಪ್ಟೆಂಬರ್ 8ರಂದು ಒಂದು ಚಂಡಮಾರುತವು ಥಟ್ಟನೆ ಮತ್ತು ಅತಿ ರಭಸವಾಗಿ ಬಡಿಯಿತು. ಮೃತಪಟ್ಟವರ ಸಂಖ್ಯೆಯನ್ನು ಪರಿಗಣಿಸುವಲ್ಲಿ ಇದು, ಯುನೈಟೆಡ್ ಸ್ಟೇಟ್ಸ್ನ ಇತಿಹಾಸದಲ್ಲಿ ಸಂಭವಿಸಿದ ಅತಿ ಮಾರಕವಾದ ನೈಸರ್ಗಿಕ ವಿಪತ್ತಾಗಿದೆ. ಈ ಚಂಡಮಾರುತದಿಂದಾಗಿ ಎಬ್ಬಿಸಲ್ಪಟ್ಟ ಸಾಗರದ ಅಲೆಗಳು ಆ ನಗರದಲ್ಲಿನ 6,000ದಿಂದ 8,000 ಮಂದಿಯ ಜೀವವನ್ನು ಕಸಿದುಕೊಂಡಿತು ಮತ್ತು ಹತ್ತಿರದ ಕ್ಷೇತ್ರದಲ್ಲಿನ 4,000 ಜನರು ಮೃತಪಟ್ಟರು. ಮಾತ್ರವಲ್ಲದೆ, 3,600 ಮನೆಗಳು ಧ್ವಂಸಗೊಂಡವು. ಗ್ಯಾಲ್ವಸ್ಟನ್ನಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡವು ಹಾನಿಯಾಗದೆ ಉಳಿಯಲಿಲ್ಲ.
ಹಿಂದಿನ ಲೇಖನದಲ್ಲಿ ತಿಳಿಸಿದಂತೆ, ಇತ್ತೀಚಿನ ವರುಷಗಳಲ್ಲಿ ಅನೇಕ ಪ್ರಚಂಡ ಬಿರುಗಾಳಿಗಳು ಸಂಭವಿಸಿವೆ. ಇದಕ್ಕೆ, ಬಿರುಗಾಳಿ ವ್ಯವಸ್ಥೆಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತಿರಬಹುದಾದ ಭೌಗೋಳಿಕ ಕಾವೇರುವಿಕೆಯೊಂದಿಗೆ ಯಾವುದಾದರೂ ಸಂಬಂಧವಿದೆಯೆ ಎಂದು ವಿಜ್ಞಾನಿಗಳು ಅಧ್ಯಯನಮಾಡುತ್ತಿದ್ದಾರೆ. ಅದು ಸತ್ಯವಾಗಿರುವುದಾದರೂ, ಹವಾಮಾನದಲ್ಲಿನ ಬದಲಾವಣೆಗಳು ಭೌಗೋಳಿಕ ಕಾವೇರುವಿಕೆಯ ಪರಿಣಾಮಗಳಲ್ಲಿ ಕೇವಲ ಒಂದಾಗಿರಬಹುದು. ಇನ್ನೊಂದು ಹಾನಿಕಾರಕ ಪರಿಣಾಮವು ಈಗಾಗಲೇ ತೋರಿಬರುತ್ತಿದೆ.
ಏರುತ್ತಿರುವ ಸಮುದ್ರ ಮಟ್ಟಗಳು ಮತ್ತು ಅರಣ್ಯನಾಶ
ವಿಜ್ಞಾನ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿನ ಸಂಪಾದಕೀಯಕ್ಕನುಸಾರ, “ಕಳೆದ ಶತಮಾನದಲ್ಲಿ ಸಮುದ್ರ ಮಟ್ಟಗಳು 10ರಿಂದ 20 ಸೆಂಟಿಮೀಟರ್ಗಳಷ್ಟು [ನಾಲ್ಕರಿಂದ ಎಂಟು ಅಂಗುಲಗಳು] ಏರಿವೆ ಮತ್ತು ಭವಿಷ್ಯತ್ತಿನಲ್ಲಿ ಇನ್ನಷ್ಟು ಏರುವ ಸಾಧ್ಯತೆಯಿದೆ.” ಇದು ಭೌಗೋಳಿಕ ಕಾವೇರುವಿಕೆಯೊಂದಿಗೆ ಹೇಗೆ ಸಂಬಂಧಿಸಿರಬಹುದು? ಇದು ಸಂಭವಿಸಬಹುದಾದ ಎರಡು ವಿಧಗಳನ್ನು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಒಂದು, ಧ್ರುವಪ್ರದೇಶದಲ್ಲಿ ವರ್ಷವಿಡೀ ಆವರಿಸಿರುವ ಮಂಜಿನ ಕರಗುವಿಕೆ ಮತ್ತು ಹಿಮನದಿಗಳ ಕರಗುವಿಕೆ ಸಾಗರದ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇನ್ನೊಂದು ಅಂಶವು ಉಷ್ಣ ವಿಸ್ತರಣೆ, ಅಂದರೆ ಸಾಗರದ ನೀರು ಕಾವೇರಿದಂತೆ ಅದರ ಗಾತ್ರವು ಹೆಚ್ಚಾಗುತ್ತದೆ.
ಟುವಾಲುವಿನ ಚಿಕ್ಕ ಪೆಸಿಫಿಕ್ ದ್ವೀಪಗಳು ಈಗಾಗಲೇ ಏರುತ್ತಿರುವ ಸಮುದ್ರ ಮಟ್ಟಗಳ ಪರಿಣಾಮಗಳನ್ನು ಅನುಭವಿಸುತ್ತಿರಬಹುದು. ಅಲ್ಲಿನ ಸಮುದ್ರ ಮಟ್ಟವು “ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಸಮಯಾವಧಿಯಿಂದ ಪ್ರತಿ ವರ್ಷಕ್ಕೆ ಸರಾಸರಿ 5.6 ಮಿಲಿಮೀಟರ್” ಏರುತ್ತಿದೆ ಎಂದು ಫ್ಯೂನಫ್ಯೂಟೀಯ ಹವಳದ ದಿಬ್ಬದಲ್ಲಿ ಸಂಗ್ರಹಿಸಿದ ದತ್ತಾಂಶವು ತೋರಿಸುತ್ತದೆ ಎಂಬುದಾಗಿ ಸ್ಮಿತ್ಸೋನಿಯನ್ ಎಂಬ ಪತ್ರಿಕೆಯು ತಿಳಿಸುತ್ತದೆ.
ಲೋಕದ ಅನೇಕ ಭಾಗಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರಗಳ ವಿಸ್ತರಣೆ, ಹೆಚ್ಚಿನ ಜೋಪಡಿಪಟ್ಟಣಗಳ ತೋರಿಕೊಳ್ಳುವಿಕೆ ಮತ್ತು ಪರಿಸರಸಂಬಂಧವಾದ ಅವನತಿಯು ಸಂಭವಿಸುತ್ತಿದೆ. ಈ ಎಲ್ಲ ವಿಷಯಗಳು ನೈಸರ್ಗಿಕ ವಿಪತ್ತುಗಳ ತೀವ್ರತೆಯನ್ನು ಹೆಚ್ಚಿಸುತ್ತವೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಹೇಟೀ, ಅತ್ಯಧಿಕ ಜನಸಂಖ್ಯೆ ಮತ್ತು ಅರಣ್ಯನಾಶದ ಒಂದು ಇತಿಹಾಸವನ್ನು ಹೊಂದಿರುವ ದ್ವೀಪ ರಾಷ್ಟ್ರವಾಗಿದೆ. ಇತ್ತೀಚಿನ ವಾರ್ತಾ ವರದಿಯು ತಿಳಿಸುವುದೇನೆಂದರೆ ಹೇಟೀಯ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ತೀರ ಕೆಟ್ಟದ್ದಾಗಿರುವುದಾದರೂ ಅರಣ್ಯನಾಶವು ಆ ದೇಶದ ಅಸ್ತಿತ್ವಕ್ಕೆ ಅತಿ ಹೆಚ್ಚು ಬೆದರಿಕೆಯನ್ನೊಡ್ಡುವ ಸಂಗತಿಯಾಗಿದೆ. 2004ರಲ್ಲಿ ಭಾರೀ ಮಳೆಯಿಂದ ಭೂಕುಸಿತಗಳುಂಟಾಗಿ ಅವು ಸಾವಿರಾರು ಜನರನ್ನು ಬಲಿತೆಗೆದುಕೊಂಡಾಗ ಈ ಬೆದರಿಕೆಯು ದುರಂತಮಯ ರೀತಿಯಲ್ಲಿ ರುಜುವಾಯಿತು.
ದಕ್ಷಿಣ ಏಷ್ಯಾವನ್ನು ಬಾಧಿಸಿರುವ ನೈಸರ್ಗಿಕ ವಿಪತ್ತುಗಳ ತೀವ್ರತೆಗೆ “ಭೌಗೋಳಿಕ ಕಾವೇರುವಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯನಾಶ ಮತ್ತು ಕಡಿದು-ಸುಡುವ ವ್ಯವಸಾಯ ವಿಧಾನ (ಮರಗಳನ್ನು ಮತ್ತು ಸಸ್ಯಗಳನ್ನು ಕಡಿದು ಸುಟ್ಟುಹಾಕಿ ಅನಂತರ ಆ ಸ್ಥಳದಲ್ಲಿ ಬೀಜಬಿತ್ತುವ ವ್ಯವಸಾಯ ವಿಧಾನ)” ಇವುಗಳೇ ಕಾರಣವಾಗಿವೆ ಎಂದು ಏಷ್ಯಾದ ಟೈಮ್ ಪತ್ರಿಕೆಯು ತಿಳಿಸುತ್ತದೆ. ಇನ್ನೊಂದು ಬದಿಯಲ್ಲಿ, ಅರಣ್ಯನಾಶದಿಂದಾಗಿ ಭೂಮಿಯ ಮಣ್ಣು ಅತಿ ಬೇಗನೆ ಒಣಗಿಹೋಗುತ್ತದೆ ಮತ್ತು ಈ ಮೂಲಕ ಬರಗಾಲದ ಪ್ರಭಾವವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಇತ್ತೀಚಿನ ವರುಷಗಳಲ್ಲಿ, ಇಂಡೊನೇಷಿಯಾ ಮತ್ತು ಬ್ರಸಿಲ್ನಲ್ಲಿನ ಬರಗಾಲಗಳಿಂದಾಗಿ ಹಿಂದೆಂದೂ ಸಂಭವಿಸದ ಒಂದು ಸಂಗತಿಯು ನಡೆಯಿತು. ಅದೇನೆಂದರೆ, ಸಾಮಾನ್ಯವಾಗಿ ಉರಿಯಲು ಅಸಾಧ್ಯವಾದಷ್ಟು ಅತಿ ತೇವವಾಗಿರುತ್ತಿದ್ದ ಅರಣ್ಯಗಳು ಬೆಂಕಿಹತ್ತಿ ಉರಿದುಬಿಟ್ಟವು. ಆದರೆ ಈ ಎಲ್ಲ ನೈಸರ್ಗಿಕ ವಿಪತ್ತುಗಳಿಗೆ ಅತಿರೇಕ ಹವಾಮಾನವು ಏಕಮಾತ್ರ ಕಾರಣವಾಗಿಲ್ಲ. ಅನೇಕ ದೇಶಗಳು, ಭೂಮಿಯ ಆಳದಲ್ಲಿ ಆರಂಭವಾಗುವ ವಿಪತ್ತುಗಳಿಗೆ ಗುರಿಯಾಗಿವೆ.
ಭೂಮಿಯು ಕಂಪಿಸುವಾಗ
ಭೂಮಿಯ ಹೊರಚಿಪ್ಪು, ಪರಸ್ಪರ ಸಂಬಂಧದಲ್ಲಿ ಚಲಿಸುವ ವಿವಿಧ ಗಾತ್ರದ ಶಿಲಾಫಲಕಗಳಿಂದ ರೂಪಿಸಲ್ಪಟ್ಟಿದೆ. ಭೂಮಿಯ ಹೊರಚಿಪ್ಪಿನಲ್ಲಿ ಎಷ್ಟೊಂದು ಚಲನೆ ಇರುತ್ತದೆಂದರೆ ಪ್ರತಿ ವರ್ಷ ಹಲವಾರು ಲಕ್ಷ ಭೂಕಂಪಗಳು ಸಂಭವಿಸಬಹುದು. ಆದರೆ ಅವುಗಳಲ್ಲಿ ಹೆಚ್ಚಿನವು ಯಾರಿಗೂ ತಿಳಿಯದ ರೀತಿಯಲ್ಲಿ ಸಂಭವಿಸುತ್ತವೆ.
ಸಂಭವಿಸುವ ಎಲ್ಲ ಭೂಕಂಪಗಳಲ್ಲಿ 90 ಪ್ರತಿಶತ ಭೂಕಂಪಗಳು, ಒಂದು ಶಿಲಾಫಲಕದಿಂದ ಇನ್ನೊಂದು ಶಿಲಾಫಲಕದ ಮಧ್ಯೆಯಿರುವ ಬಿರುಕುಗಳಲ್ಲಿಯೇ ಸಂಭವಿಸುತ್ತವೆ ಎಂದು ಹೇಳಲಾಗಿದೆ. ಬಹಳ ಅಪರೂಪವಾಗಿದ್ದರೂ, ಕೆಲವೊಮ್ಮೆ ಅತಿ ನಾಶಕಾರಕ ಕಂಪನಗಳು ಈ ಶಿಲಾಫಲಕಗಳ ಮಧ್ಯೆ ಸಹ ಸಂಭವಿಸುತ್ತವೆ. ಅಂದಾಜುಗಳಿಗನುಸಾರ, 1556ರಲ್ಲಿ ಚೀನಾದ ಮೂರು ಪ್ರಾಂತಗಳನ್ನು ಬಡಿದ ಕಂಪನವು ಇತಿಹಾಸದಲ್ಲಿಯೇ ದಾಖಲಾದ ಅತಿ ಮಾರಕವಾದ ಕಂಪನವಾಗಿದೆ. ಅದು 8,30,000ದಷ್ಟು ಜೀವಗಳನ್ನು ಬಲಿತೆಗೆದುಕೊಂಡಿರಬಹುದು!
ಭೂಕಂಪಗಳ ನಂತರವೂ ಮಾರಕವಾದ ಪರಿಣಾಮಗಳು ಸಂಭವಿಸಸಾಧ್ಯವಿದೆ. ಉದಾಹರಣೆಗೆ, 1755ರ ನವೆಂಬರ್ 1ರಂದು ಸಂಭವಿಸಿದ ಒಂದು ಕಂಪನವು, 2,75,000 ಜನಸಂಖ್ಯೆಯಿದ್ದ ಪೋರ್ಚುಗಲ್ನ ಲಿಸ್ಬನ್ ನಗರವನ್ನು ನೆಲಸಮಮಾಡಿತು. ಆದರೆ ಅದು ಆ ಭೀಕರ ಘಟನೆಯ ಕೊನೆಯಾಗಿರಲಿಲ್ಲ. ಆ ಕಂಪನವು ಬೆಂಕಿಗಳನ್ನು ಉಂಟುಮಾಡಿತು. ಮಾತ್ರವಲ್ಲದೆ, ಹತ್ತಿರದಲ್ಲಿದ್ದ ದಕ್ಷಿಣ ಅಟ್ಲಾಂಟಿಕ್ ಸಾಗರದಿಂದ ಅತ್ಯಂತ ವೇಗವಾಗಿ ಚಲಿಸುತ್ತಾ ಬಂದ 15 ಮೀಟರ್ಗಳಷ್ಟು ಎತ್ತರವೆಂದು ಅಂದಾಜುಮಾಡಲಾದ ಸುನಾಮಿ ಅಲೆಗಳನ್ನು ಸಹ ಉಂಟುಮಾಡಿತು. ಒಟ್ಟುಮೊತ್ತವಾಗಿ, ಆ ನಗರದಲ್ಲಿ ಮೃತಪಟ್ಟವರ ಸಂಖ್ಯೆಯು 60,000ಕ್ಕಿಂತಲೂ ಹೆಚ್ಚಾಗಿತ್ತು.
ಆದರೆ, ಇಂಥ ವಿಪತ್ತುಗಳ ಪರಿಮಾಣವು ಸ್ವಲ್ಪ ಮಟ್ಟಿಗೆ ಮಾನವ ಕೃತ್ಯಗಳ ಮೇಲೆ ಅವಲಂಬಿಸುತ್ತದೆ. ಒಂದು ಅಂಶವು, ಅತಿ ಅಪಾಯಕಾರಿ ಕ್ಷೇತ್ರಗಳಲ್ಲಿನ ಜನ ನಿಬಿಡತೆಯೇ ಆಗಿದೆ. “ಈಗ ಲೋಕದ ದೊಡ್ಡ ನಗರಗಳಲ್ಲಿ ಅರ್ಧದಷ್ಟು ನಗರಗಳು, ಭೂಕಂಪಗಳ ಅಪಾಯವಿರುವ ಪ್ರದೇಶಗಳಲ್ಲಿ ನೆಲೆಸಿವೆ” ಎಂಬುದಾಗಿ ಲೇಖಕರಾದ ಆ್ಯನ್ಡ್ರ್ಯೂ ರಾಬಿನ್ಸನ್ ತಿಳಿಸುತ್ತಾರೆ. ಇನ್ನೊಂದು ಅಂಶವು ಕಟ್ಟಡಗಳಾಗಿವೆ—ಕಟ್ಟಡಗಳಿಗೆ ಬಳಸಲಾಗುವ ಸಾಮಗ್ರಿಗಳು ಮತ್ತು ರಚನಾ ಗುಣಮಟ್ಟವಾಗಿದೆ. “ಭೂಕಂಪಗಳು ಜನರನ್ನು ಕೊಲ್ಲುವುದಿಲ್ಲ; ಕಟ್ಟಡಗಳು ಕೊಲ್ಲುತ್ತವೆ” ಎಂಬ ನಾಣ್ಣುಡಿ ಅನೇಕವೇಳೆ ಸತ್ಯವಾಗಿ ರುಜುವಾಗಿದೆ. ಆದರೆ ಭೂಕಂಪ ನಿರೋಧಕ ಕಟ್ಟಡಗಳನ್ನು ಕಟ್ಟಲು ಅಶಕ್ತರಾಗಿರುವ ತೀರ ಬಡಜನರಿಗೆ ಬೇರೆ ಯಾವುದೇ ಆಯ್ಕೆ ಇದೆಯೊ?
ಜ್ವಾಲಾಮುಖಿಗಳು—ವರ್ಧಕಗಳು ಮತ್ತು ವಿಧ್ವಂಸಕಗಳು
“ನೀವು ಈ ಪದಗಳನ್ನು ಓದುತ್ತಿರುವ ಸಮಯದಲ್ಲಿಯೇ ಕಡಿಮೆಪಕ್ಷ 20 ಜ್ವಾಲಾಮುಖಿಗಳು ಹೊರಚಿಮ್ಮುತ್ತಿರಬಹುದು” ಎಂಬುದಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿರುವ ಸ್ಮಿತ್ಸೋನಿಯನ್ ಸಂಘದಿಂದ ಬಂದ ಒಂದು ವರದಿಯು ತಿಳಿಸುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಒಂದೇ ಪ್ರದೇಶಗಳಲ್ಲಿ ಸಂಭವಿಸುತ್ತವೆ ಎಂಬುದಾಗಿ ಶಿಲಾಫಲಕ ಸಂಚಲನ ತತ್ತ್ವವು ತಿಳಿಸುತ್ತದೆ. ಇವು ಬಿರುಕುಗಳಿರುವ ಪ್ರದೇಶಗಳಲ್ಲಿ ಸಂಭವಿಸುತ್ತವೆ. ಸಾಮಾನ್ಯವಾಗಿ ಸಾಗರದಲ್ಲಿನ ಬಿರುಕುಗಳಲ್ಲಿ, ಭೂಮಿಯ ಬಿರುಕುಗಳಲ್ಲಿ—ಅಂದರೆ ಭೂಚಿಪ್ಪಿನ ಅಡಿಯಲ್ಲಿರುವ ಶಿಲಾರಸವು ಮೇಲೇರಿ ಎಲ್ಲಿಂದ ಹೊರಚಿಮ್ಮುತ್ತದೊ ಆ ಭೂಚಿಪ್ಪಿನ ಬಿರುಕುಗಳಲ್ಲಿ, ಮತ್ತು ಎರಡು ಶಿಲಾಫಲಕಗಳು ಒಂದಕ್ಕೊಂದು ಘರ್ಷಿಸಿ ಒಂದರ ಅಂಚು ಇನ್ನೊಂದರಡಿಗೆ ಹೋಗಿರುವ ಪ್ರದೇಶಗಳಲ್ಲಿ ಸಂಭವಿಸುತ್ತವೆ.
ಎರಡು ಶಿಲಾಫಲಕಗಳು ಒಂದಕ್ಕೊಂದು ಘರ್ಷಿಸಿ ಒಂದರ ಅಂಚು ಇನ್ನೊಂದರಡಿಗೆ ಹೋಗಿರುವ ಪ್ರದೇಶಗಳಲ್ಲಿ ಹೊರಚಿಮ್ಮುವ ಜ್ವಾಲಾಮುಖಿಯು ಜನರಿಗೆ ಅತಿ ಹೆಚ್ಚು ಬೆದರಿಕೆಯನ್ನು ಒಡ್ಡುವಂಥದ್ದಾಗಿದೆ. ಏಕೆಂದರೆ, ಇಂಥ ಜ್ವಾಲಾಮುಖಿಯು ಅನೇಕ ಬಾರಿ ಹೊರಚಿಮ್ಮುತ್ತದೆ ಮತ್ತು ಅದು ಜನನಿಬಿಡ ಪ್ರದೇಶಗಳಲ್ಲಿ ಸಂಭವಿಸುತ್ತದೆ. ರಿಂಗ್ ಆಫ್ ಫೈಯರ್ (ಬೆಂಕಿಯ ವರ್ತುಲ) ಎಂಬ ಹೆಸರುಳ್ಳ ಶಾಂತಸಾಗರದ ಅಂಚಿನಲ್ಲಿ ಇಂಥ ನೂರಾರು ಜ್ವಾಲಾಮುಖಿಗಳಿವೆ. ಶಿಲಾಫಲಕ ಮೇರೆಗಳಿಂದ ದೂರದಲ್ಲಿರುವ ಶಾಖಪ್ರದೇಶಗಳಲ್ಲಿಯೂ ಚಿಕ್ಕ ಸಂಖ್ಯೆಯಲ್ಲಿ ಇಂಥ ಜ್ವಾಲಾಮುಖಿಗಳು ಕಂಡುಬರುತ್ತವೆ. ಹವಾಯೀ ದ್ವೀಪಗಳು, ಏಸೋರ್ಸ್, ಗಲಾಪಾಗೊಸ್ ದ್ವೀಪಗಳು ಮತ್ತು ಸೊಸೈಟಿ ದ್ವೀಪಗಳು ಇವೆಲ್ಲವೂ ಶಾಖಪ್ರದೇಶಗಳಲ್ಲಿನ ಜ್ವಾಲಾಮುಖಿಗಳ ಉತ್ಪನ್ನಗಳಾಗಿರುವಂತೆ ತೋರುತ್ತವೆ.
ವಾಸ್ತವದಲ್ಲಿ, ಭೂಮಿಯ ಇತಿಹಾಸದಲ್ಲಿ ಜ್ವಾಲಾಮುಖಿಗಳು ದೀರ್ಘವಾದ ಮತ್ತು ವರ್ಧಕ ಇಲ್ಲವೆ ರಚನಾತ್ಮಕ ಪಾತ್ರವನ್ನು ವಹಿಸಿವೆ. ಒಂದು ವಿಶ್ವವಿದ್ಯಾನಿಲಯದ ವೆಬ್ ಸೈಟ್ಗನುಸಾರ, “ಒಟ್ಟು ಭೂಖಂಡಗಳಲ್ಲಿ ಮತ್ತು ಜಲಾನಯನ ಭೂಮಿಗಳಲ್ಲಿ 90 ಪ್ರತಿಶತ ಪ್ರದೇಶಗಳು ಜ್ವಾಲಾಮುಖಿಗಳ ಉತ್ಪನ್ನಗಳಾಗಿವೆ.” ಆದರೆ ಕೆಲವು ಜ್ವಾಲಾಮುಖಿ ಸ್ಫೋಟನಗಳು ವಿಪರೀತ ಹಾನಿಕಾರಕವಾಗುವಂತೆ ಯಾವುದು ಮಾಡುತ್ತದೆ?
ಭೂಗರ್ಭದ ಉಷ್ಣತೆಯಿಂದ ಶಿಲಾರಸವು ಮೇಲೇರುವಾಗ ಹೊರಚಿಮ್ಮುವಿಕೆಯು ಆರಂಭವಾಗುತ್ತದೆ. ಕೆಲವು ಜ್ವಾಲಾಮುಖಿಗಳು ಕೇವಲ ಲಾವಾರಸವನ್ನು ಕಾರುತ್ತವೆ. ಈ ಲಾವಾರಸವು ಬಹಳ ನಿಧಾನವಾಗಿ ಹರಿಯುವ ಕಾರಣ ಇದು ಜನರನ್ನು ಅಕಸ್ಮಾತ್ತಾಗಿ ಆವರಿಸಲು ಸಾಧ್ಯವಿಲ್ಲ. ಆದರೆ ಇನ್ನಿತರ ಜ್ವಾಲಾಮುಖಿಗಳು ಅಣು ಬಾಂಬಿಗಿಂತಲೂ ಹೆಚ್ಚು ಶಕ್ತಿಯುತವಾಗಿ ಸ್ಫೋಟಿಸುತ್ತವೆ! ಯಾವ ಜ್ವಾಲಾಮುಖಿ ಎಷ್ಟು ಶಕ್ತಿಯುತವಾಗಿ ಸ್ಫೋಟಿಸುತ್ತದೆ ಎಂಬುದು, ಜ್ವಾಲಾಮುಖಿಯು ಹೊರಚಿಮ್ಮುವಂತೆ ಮಾಡುವ ಶಿಲಾರಸವು ಎಷ್ಟು ಶೇಖರವಾಗಿದೆ, ಎಷ್ಟರಮಟ್ಟಿಗೆ ಅಂಟುಗುಣವನ್ನು (ಸ್ನಿಗ್ಧತೆಯನ್ನು) ಹೊಂದಿದೆ ಮತ್ತು ಆ ಶಿಲಾರಸದೊಂದಿಗೆ ಎಷ್ಟು ಮೊತ್ತದ ಅನಿಲಗಳು ಹಾಗೂ ಅಧಿತಪ್ತ (ಕುದಿಬಿಂದುವಿಗಿಂತ ಹೆಚ್ಚಿನ ಉಷ್ಣತೆಯಿರುವ) ನೀರುಮಿಶ್ರವಾಗಿದೆ ಎಂಬುದರ ಮೇಲೆ ಹೊಂದಿಕೊಂಡಿದೆ. ಈ ಶಿಲಾರಸವು ಭೂಮಿಯ ಹೊರಮೈಯನ್ನು ಸಮೀಪಿಸುತ್ತಿದ್ದಂತೆ, ಅದರಲ್ಲಿರುವ ನೀರು ಮತ್ತು ಅನಿಲವು ವೇಗವಾಗಿ ಉಬ್ಬುತ್ತದೆ. ಸರಿಯಾದ ಸ್ನಿಗ್ಧತೆಯನ್ನು ಹೊಂದಿರುವ ಶಿಲಾರಸವು ಹೊರಚಿಮ್ಮುವಾಗ ಆಗುವ ಪ್ರಭಾವವು ಸೋಡಾ ಬಾಟಲಿಯನ್ನು ತೆರೆದಾಗ ಹಠಾತ್ತನೆ ಹೊರಚಿಮ್ಮುವ ಸೋಡಾದಂತಿರುತ್ತದೆ.
ಸಂತೋಷಕರವಾದ ಸಂಗತಿಯೇನೆಂದರೆ ಜ್ವಾಲಾಮುಖಿಗಳು ಹೆಚ್ಚಾಗಿ ಸ್ಫೋಟಿಸುವ ಮುನ್ನ ಎಚ್ಚರಿಕೆಯನ್ನು ಒದಗಿಸುತ್ತವೆ. 1902ರಲ್ಲಿ ಮಾರ್ಟಿನಿಕ್ ಎಂಬ ಕ್ಯಾರಿಬೀಯನ್ ದ್ವೀಪದಲ್ಲಿನ ಮೌಂಟ್ ಪೆಲೆಯಲ್ಲಿ ಇದೇ ಸಂಭವಿಸಿತು. ಆದರೆ, ಹತ್ತಿರದ ಸೆಂಟ್ ಪಿಯರೇ ನಗರದಲ್ಲಿ ಚುನಾವಣೆಯು ಸಮೀಪಿಸುತ್ತಿತ್ತು ಮತ್ತು ಮೌಂಟ್ ಪೆಲೆಯಿಂದ ಬೂದಿಯು ಹೊರಚಿಮ್ಮುತ್ತಿದ್ದು, ನಗರವನ್ನು ಕಾಯಿಲೆ ಹಾಗೂ ಭಯವು ಆವರಿಸಿಕೊಂಡಿತ್ತಾದರೂ ಅಲ್ಲೇ ಇರುವಂತೆ ರಾಜಕಾರಣಿಗಳು ಜನರನ್ನು ಉತ್ತೇಜಿಸಿದರು. ವಾಸ್ತವದಲ್ಲಿ, ಎಷ್ಟೋ ದಿನಗಳಿಂದ ಹೆಚ್ಚಿನ ಅಂಗಡಿಗಳು ಮುಚ್ಚಲ್ಪಟ್ಟಿದ್ದವು!
ಮೇ 8 ಯೇಸುವಿನ ಸ್ವರ್ಗಾರೋಹಣ ದಿನದ ಹಬ್ಬವಾಗಿತ್ತು, ಮತ್ತು ಅನೇಕ ಜನರು ಕ್ಯಾಥೊಲಿಕ್ ಕತೀಡ್ರಲ್ಗೆ ಹೋಗಿ ಜ್ವಾಲಾಮುಖಿಯಿಂದ ತಮ್ಮನ್ನು ಪಾರುಗೊಳಿಸುವಂತೆ ಪ್ರಾರ್ಥಿಸಿದರು. ಅದೇ ಮುಂಜಾನೆ 8 ಗಂಟೆಗಿಂತ ಮುಂಚೆ ಮೌಂಟ್ ಪೆಲೆಯು ಸ್ಫೋಟಿಸಿ ಬೂದಿ, ಮಸಿಗೆಂಡ, ಲಾವಾರಸ, ಜ್ವಾಲಾಮುಖಿನೊರೆ ಮತ್ತು ಅಧಿತಪ್ತ ಅನಿಲದ ದೊಡ್ಡ ರಾಶಿಯನ್ನು ಹೊರಚಿಮ್ಮಿತು. ಇದರ ಶಾಖವು 200ರಿಂದ 500 ಡಿಗ್ರಿ ಸೆಲ್ಸಿಯಸ್ ವರೆಗಿತ್ತು. ಈ ಮಾರಕ ಜ್ವಾಲೆಯು, ಗುಡ್ಡದಿಂದ ಕೆಳಕ್ಕೆ ಹರಿಯುತ್ತಾ ನಗರವನ್ನು ಆವರಿಸಿತು. ಇದು ಹೆಚ್ಚುಕಡಿಮೆ 30,000 ಜನರನ್ನು ಬಲಿತೆಗೆದುಕೊಂಡಿತು, ಚರ್ಚಿನ ಗಂಟೆಯನ್ನು ಕರಗಿಸಿತು ಮತ್ತು ಬಂದರಿನಲ್ಲಿದ್ದ ಹಡಗುಗಳನ್ನು ಸುಟ್ಟು ಭಸ್ಮಮಾಡಿತು. ಇದು 20ನೆಯ ಶತಮಾನದ ಅತ್ಯಂತ ಮಾರಕ ಸ್ಫೋಟವಾಗಿತ್ತು. ಆದರೆ, ಒಂದುವೇಳೆ ಜನರು ಎಚ್ಚರಿಕೆಯ ಸೂಚನೆಗಳಿಗೆ ಗಮನಕೊಟ್ಟು ಕ್ರಿಯೆಗೈಯುತ್ತಿದ್ದಲ್ಲಿ ಅದು ಅಷ್ಟೊಂದು ಮಾರಕವಾಗಿರುತ್ತಿರಲಿಲ್ಲ.
ನೈಸರ್ಗಿಕ ವಿಪತ್ತುಗಳು ಹೆಚ್ಚಾಗಲಿವೆಯೊ?
ಕಳೆದ ದಶಕದಲ್ಲಿ ಭೂಭೌತ ಮತ್ತು ಹವಾಮಾನಕ್ಕೆ ಸಂಬಂಧಿಸಿದ ವಿಪತ್ತುಗಳು 60ಕ್ಕಿಂತಲೂ ಅಧಿಕ ಪ್ರತಿಶತ ಹೆಚ್ಚಾಗಿದೆ ಎಂದು ರೆಡ್ ಕ್ರಾಸ್ ಮತ್ತು ರೆಡ್ ಕ್ರಿಸ್ಸೆಂಟ್ ಸಂಸ್ಥೆಗಳ ಅಂತಾರಾಷ್ಟ್ರೀಯ ಫೆಡರೇಷನ್ ತನ್ನ 2004ರ ಲೋಕ ವಿಪತ್ತುಗಳ ವರದಿ (ಇಂಗ್ಲಿಷ್)ಯಲ್ಲಿ ತಿಳಿಸಿದೆ. “ಇದು ಮುಂದೆ ದೀರ್ಘಕಾಲದ ವರೆಗೆ ನಡೆಯಲಿರುವ ವಿಕಸನಗಳನ್ನು ಪ್ರತಿಬಿಂಬಿಸುತ್ತದೆ” ಎಂಬುದಾಗಿ ಆ ವರದಿಯು ತಿಳಿಸಿತು. ಆ ವರದಿಯು, ಹಿಂದೂ ಮಹಾಸಾಗರದಲ್ಲಿ ಡಿಸೆಂಬರ್ 26ರಂದು ಸಂಭವಿಸಿದ ಸುನಾಮಿ ದುರಂತದ ಮುಂಚೆ ಪ್ರಕಟಿಸಲ್ಪಟ್ಟಿತ್ತು. ಒಂದುವೇಳೆ ಅತಿ ಅಪಾಯಕಾರಿ ಕ್ಷೇತ್ರಗಳಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತಾ ಹೋದರೆ ಮತ್ತು ಅರಣ್ಯವು ಕಡಿಮೆಯಾಗುತ್ತಾ ಹೋದರೆ, ಆಶಾವಾದಿಗಳಾಗಿರಲು ಯಾವುದೇ ಕಾರಣವಿರುವುದಿಲ್ಲ.
ಇದಕ್ಕೆ ಕೂಡಿಕೆಯಾಗಿ, ಅನೇಕ ಕೈಗಾರಿಕಾ ದೇಶಗಳು ಹಸಿರುಮನೆ ಅನಿಲಗಳನ್ನು ವಾಯುಮಂಡಲದೊಳಕ್ಕೆ ವಿಸರ್ಜಿಸುವುದನ್ನು ಮುಂದುವರಿಸುತ್ತಿವೆ. ವಿಜ್ಞಾನ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿನ ಸಂಪಾದಕೀಯಕ್ಕನುಸಾರ, ಈ ಅನಿಲಗಳ ವಿಸರ್ಜನೆಯನ್ನು ತಡೆಗಟ್ಟುವುದರಲ್ಲಿ ಮಾಡುವ ವಿಳಂಬವು, “ಹೆಚ್ಚಾಗುತ್ತಿರುವ ಸೋಂಕಿಗೆ ಔಷಧವನ್ನು ತೆಗೆದುಕೊಳ್ಳಲು ನಿರಾಕರಿಸುವುದಕ್ಕೆ ಸಮಾನವಾಗಿದೆ: ಇದರಿಂದಾಗಿ ಅನಂತರ ಹೆಚ್ಚಿನ ಬೆಲೆತೆರಬೇಕಾಗಿ ಬರುವುದು ಖಂಡಿತ.” ಆ ಬೆಲೆಯೇನಾಗಿರುವುದೆಂದು ಸೂಚಿಸುತ್ತಾ, ವಿಪತ್ತನ್ನು ಮಿತವಾಗಿಸುವುದರ ಕುರಿತಾದ ಕೆನಡದ ಒಂದು ವರದಿಯು ತಿಳಿಸುವುದು: “ಅಂತಾರಾಷ್ಟ್ರೀಯ ಸಮುದಾಯವು ನಿಭಾಯಿಸಿರುವ ಸಮಸ್ಯೆಗಳಲ್ಲಿ, ವಾತಾವರಣದಲ್ಲಿನ ಬದಲಾವಣೆಯೇ ಅತ್ಯಂತ ವ್ಯಾಪಕವಾದ ಮತ್ತು ಅತಿ ಹೆಚ್ಚಿನ ಪ್ರಭಾವಬೀರುವ ಪರಿಸರಸಂಬಂಧಿತ ಸಮಸ್ಯೆಯಾಗಿದೆ ಎಂದು ವಾದಿಸಸಾಧ್ಯವಿದೆ.”
ಆದರೆ ಸದ್ಯಕ್ಕೆ, ಭೌಗೋಳಿಕ ಕಾವೇರುವಿಕೆಗೆ ಮಾನವ ಚಟುವಟಿಕೆಗಳು ಕಾರಣವಾಗಿವೆ ಎಂಬುದನ್ನು ಒಪ್ಪಲು ಸಹ ಅಂತಾರಾಷ್ಟ್ರೀಯ ಸಮುದಾಯವು ಸಿದ್ಧವಿಲ್ಲ. ಹಾಗಿರುವಾಗ, ಅದನ್ನು ಹತೋಟಿಗೆ ತರುವುದಂತೂ ದೂರದ ಮಾತಾಗಿದೆ. ಈ ಪರಿಸ್ಥಿತಿಯು ಬೈಬಲಿನ ಈ ಮಾತುಗಳ ಸತ್ಯತೆಯನ್ನು ಮನಸ್ಸಿಗೆ ತರುತ್ತದೆ: “ಮನುಷ್ಯನು . . . ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಹಾಗಿದ್ದರೂ, ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ ಪರಿಸ್ಥಿತಿಯು ನಿರೀಕ್ಷಾಹೀನವಾಗಿಲ್ಲ. ವಾಸ್ತವದಲ್ಲಿ, ಮಾನವ ಸಮಾಜದಲ್ಲಿನ ಬಿರುಗಾಳಿಯಂಥ ಪರಿಸ್ಥಿತಿಗಳನ್ನು ಸೇರಿಸಿ ಇಂದು ಸಂಭವಿಸುತ್ತಿರುವ ವಿಪತ್ತುಗಳು, ಬಿಡುಗಡೆಯು ಸಮೀಪವಿದೆ ಎಂಬ ಪುರಾವೆಯನ್ನು ಮತ್ತಷ್ಟು ದೃಢಪಡಿಸುತ್ತವೆ. (g05 7/22)
[ಪಾದಟಿಪ್ಪಣಿ]
a ಸೂರ್ಯನ ಶಾಖದ ವಿತರಣೆಯಲ್ಲಿನ ವ್ಯತ್ಯಾಸಗಳಿಂದಾಗಿ ಸಾಗರ ಪ್ರವಾಹಗಳು ಸಹ ಉಂಟಾಗುತ್ತವೆ ಮತ್ತು ಅವು, ಶಕ್ತಿಯನ್ನು ಶೀತಲ ಪ್ರದೇಶಗಳಿಗೆ ಸ್ಥಳಾಂತರಿಸುತ್ತವೆ.
[ಪುಟ 6ರಲ್ಲಿರುವ ಚೌಕ/ಚಿತ್ರ]
ಹೊಲದಲ್ಲಿ ಜೋಳವಲ್ಲದೆ ಬೇರೇನೊ ಮೊಳೆತಾಗ
ಇಸವಿ 1943ರಲ್ಲಿ ಮೆಕ್ಸಿಕೊ ನಗರದಲ್ಲಿನ ಒಬ್ಬ ಜೋಳ ವ್ಯವಸಾಯಗಾರನು ತನ್ನ ಗದ್ದೆಯಲ್ಲಿ ಜೋಳವಲ್ಲದೆ ಇನ್ನೇನೊ ಬೆಳೆಯುವುದನ್ನು ಗಮನಿಸಿದನು. ಅವನು ತನ್ನ ಗದ್ದೆಗೆ ಹೋದಾಗ, ನೆಲ ಬಿರುಕುಬಿಟ್ಟಿರುವುದನ್ನು ಗಮನಿಸಿದನು. ಮರುದಿನದಷ್ಟಕ್ಕೆ, ಆ ಬಿರುಕುಗಳು ಒಂದು ಸಣ್ಣ ಜ್ವಾಲಾಮುಖಿಯಾಯಿತು. ಅನಂತರದ ವಾರದಲ್ಲಿ, ಆ ಜ್ವಾಲಾಮುಖಿಯು 150 ಮೀಟರ್ ಎತ್ತರಕ್ಕೆ ಬೆಳೆಯಿತು. ಒಂದು ವರುಷದ ಅನಂತರ ಅದು 360 ಮೀಟರ್ ಎತ್ತರಕ್ಕೆ ಬೆಳೆಯಿತು. ಸಮುದ್ರ ಮಟ್ಟದಿಂದ 2,775 ಮೀಟರ್ಗಳಷ್ಟು ಎತ್ತರದಲ್ಲಿರುವ ಆ ಜ್ವಾಲಾಮುಖಿಯು ಅಂತಿಮವಾಗಿ 430 ಮೀಟರ್ ಎತ್ತರಕ್ಕೆ ಬೆಳೆಯಿತು. ಪಾರೀಕ್ಯೂಟೀನ್ ಎಂಬ ಹೆಸರಿನ ಈ ಜ್ವಾಲಾಮುಖಿಯ ಹೊರಚಿಮ್ಮುವಿಕೆ 1952ರಲ್ಲಿ ತಟ್ಟನೆ ನಿಂತುಹೋಯಿತು ಮತ್ತು ಅಂದಿನಿಂದ ಪುನಃ ಹೊರಚಿಮ್ಮಲೇ ಇಲ್ಲ.
[ಕೃಪೆ]
U. S. Geological Survey/Photo by R. E. Wilcox
[ಪುಟ 8ರಲ್ಲಿರುವ ಚೌಕ/ಚಿತ್ರ]
ದೇವರು ಜನಾಂಗಗಳನ್ನು ವಿಪತ್ತಿನಿಂದ ಪಾರುಗೊಳಿಸಿದಾಗ
ಬರಗಾಲವು ಒಂದು ವಿಧದ ನೈಸರ್ಗಿಕ ವಿಪತ್ತಾಗಿದೆ. ದಾಖಲಿಸಲ್ಪಟ್ಟಿರುವಂಥ ಪೂರ್ವಕಾಲದ ಬರಗಾಲಗಳಲ್ಲಿ ಒಂದು, ಇಸ್ರಾಯೇಲನೆಂದು ಕರೆಯಲ್ಪಟ್ಟ ಯಾಕೋಬನ ಮಗನಾದ ಯೋಸೇಫನ ಸಮಯದಲ್ಲಿ ಪುರಾತನ ಐಗುಪ್ತದಲ್ಲಿ ಸಂಭವಿಸಿದಂಥದ್ದಾಗಿದೆ. ಆ ಬರಗಾಲವು ಏಳು ವರುಷಗಳ ವರೆಗೆ ಮುಂದುವರಿದು, ಐಗುಪ್ತ, ಕಾನಾನ್ ಮತ್ತು ಇತರ ಸ್ಥಳಗಳನ್ನು ಬಾಧಿಸಿತು. ಆದರೆ ಇದರಿಂದಾಗಿ ಗುಂಪು ಗುಂಪಾಗಿ ಜನರು ಆಹಾರವಿಲ್ಲದೆ ಸಾಯುವಂತಾಗಲಿಲ್ಲ, ಏಕೆಂದರೆ ಯೆಹೋವನು ಆ ಬರಗಾಲದ ಕುರಿತು ಏಳು ವರುಷಗಳ ಮುಂಚಿತವಾಗಿಯೇ ತಿಳಿಸಿದ್ದನು. ಅಷ್ಟುಮಾತ್ರವಲ್ಲದೆ, ಬರಗಾಲದ ಮುಂಚಿನ ಆ ಏಳು ವರುಷಗಳಲ್ಲಿ ಐಗುಪ್ತದಲ್ಲಿ ಆಹಾರವು ಹೇರಳವಾಗಿ ಉತ್ಪನ್ನವಾಗುತ್ತದೆ ಎಂಬುದಾಗಿಯೂ ಆತನು ತಿಳಿಸಿದ್ದನು. ದೇವರ ಹಸ್ತಕ್ಷೇಪದಿಂದಾಗಿ ಪ್ರಧಾನ ಮಂತ್ರಿಯಾಗಿಯೂ ಆಹಾರ ಮಂತ್ರಿಯಾಗಿಯೂ ಮಾಡಲ್ಪಟ್ಟಿದ್ದ ದೇವಭಯವುಳ್ಳ ಯೋಸೇಫನ ಮೇಲ್ವಿಚಾರಣೆಯ ಕೆಳಗೆ ಐಗುಪ್ತ್ಯರು ಎಷ್ಟು ದವಸಧಾನ್ಯವನ್ನು ಕೂಡಿಸಿಟ್ಟರೆಂದರೆ ಅವರು ಅದನ್ನು ‘ಲೆಕ್ಕಮಾಡುವದನ್ನು ಬಿಟ್ಟುಬಿಟ್ಟರು.’ ಹೀಗೆ, ಐಗುಪ್ತ ದೇಶವು ತನ್ನ ಜನರಿಗೆ ಮಾತ್ರವಲ್ಲದೆ ಯೋಸೇಫನ ಕುಟುಂಬದವರನ್ನು ಸೇರಿಸಿ ‘ಎಲ್ಲಾ ದೇಶದವರಿಗೆ’ ಆಹಾರವನ್ನು ಒದಗಿಸಲು ಶಕ್ತವಾಯಿತು. —ಆದಿಕಾಂಡ 41:49, 57; 47:11, 12.
[ಪುಟ 7ರಲ್ಲಿರುವ ಚಿತ್ರಗಳು]
ಹೇಟೀ ದ್ವೀಪ2004 ನೆರೆಹಾವಳಿಯಾಗಿರುವ ಬೀದಿಗಳಲ್ಲಿ ಹುಡುಗರು ಕುಡಿಯುವ ನೀರನ್ನು ಹೊತ್ತುಕೊಂಡು ಹೋಗುತ್ತಿರುವುದು. ತೀವ್ರವಾದ ಅರಣ್ಯನಾಶವು ಭಾರೀ ಭೂಕುಸಿತಗಳಿಗೆ ಕಾರಣವಾಯಿತು
[ಕೃಪೆ]
ಹಿನ್ನೆಲೆ: Sophia Pris/EPA/Sipa Press; ಒಳಚಿತ್ರ: Carl Juste/Miami Herald/Sipa Press
[ಪುಟ 9ರಲ್ಲಿರುವ ಚಿತ್ರ]
ಅನೇಕ ರಾಷ್ಟ್ರಗಳು ಹಸಿರುಮನೆ ಅನಿಲಗಳನ್ನು ವಾಯುಮಂಡಲದೊಳಕ್ಕೆ ವಿಸರ್ಜಿಸುವುದನ್ನು ಮುಂದುವರಿಸುತ್ತಿವೆ
[ಕೃಪೆ]
© Mark Henley/Panos Pictures