ವಾಹನಸಂಚಾರದ ವಿಷಯದಲ್ಲಿ ನೀವೇನು ಮಾಡಸಾಧ್ಯವಿದೆ?
ಫಿಲಿಪ್ಪೀನ್ಸ್ನ ಎಚ್ಚರ! ಲೇಖಕರಿಂದ
ಎ ಚ್ಚರಿಕೆ: ಅನೇಕ ದೊಡ್ಡ ದೊಡ್ಡ ನಗರಗಳು ಒಂದು ರೋಗದಿಂದ ನರಳುತ್ತಿವೆ. ಇದು ಒಂದು ಸೋಂಕು ರೋಗವಲ್ಲ, ಇಲ್ಲವೆ ಹೊಟ್ಟೆಬಾಕ ಕೀಟಗಳ ಹಿಂಡಿನ ನಾಶಕಾರಕ ದಾಳಿಯೂ ಅಲ್ಲ. ಹಾಗಿದ್ದರೂ, ಇದು ಕೋಟ್ಯಂತರ ಜನರ ಸುಕ್ಷೇಮಕ್ಕೆ ಬೆದರಿಕೆಯನ್ನೊಡ್ಡುತ್ತಿದೆ. ಏನಿದು? ಇದು, ಮೋಟಾರು ವಾಹನಸಂಚಾರದ ಕಿಕ್ಕಿರಿತವೇ (ಟ್ರ್ಯಾಫಿಕ್ ಕಂಜೆಷನ್) ಆಗಿದೆ.
ಸಂಶೋಧಕರಿಗನುಸಾರ, ವಾಹನಸಂಚಾರದ ಕಿಕ್ಕಿರಿತಕ್ಕೆ ಆಗಾಗ ಒಡ್ಡಲ್ಪಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿ ರುಜುವಾಗಬಲ್ಲದು. ಒಬ್ಬ ವ್ಯಕ್ತಿಯು ಕಡಿಮೆಪಕ್ಷ ಒಂದು ತಾಸು ಟ್ರ್ಯಾಫಿಕ್ ಜ್ಯಾಮ್ನಲ್ಲಿ ಸಿಕ್ಕಿಬೀಳುವುದಾದರೆ, ಅವನಿಗೆ ಹೃದಯಾಘಾತವಾಗುವ ಸಾಧ್ಯತೆಯು ಹೆಚ್ಚಾಗುತ್ತದೆ ಎಂಬುದನ್ನು ಇತ್ತೀಚಿನ ಒಂದು ಅಧ್ಯಯನವು ತೋರಿಸಿತು. ಈ ರೀತಿಯಾಗಿ “ಅಪಾಯವು ತಕ್ಷಣ ಹೆಚ್ಚಾಗಲು, ಕಾರುಗಳ ಎಗ್ಸಾಸ್ಟ್ನಿಂದ ಹೊರಬರುವ ಹೊಗೆ, ವಾಹನಗಳ ಶಬ್ದ ಮತ್ತು ಒತ್ತಡವೇ ಮುಖ್ಯ ಕಾರಣಗಳಾಗಿರಬಹುದು” ಎಂಬುದಾಗಿ ದ ನ್ಯೂ ಸೀಲೆಂಡ್ ಹೆರಲ್ಡ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ.
ಗಾಳಿಯಲ್ಲಿನ ವಿಷ
ಹೆಚ್ಚಿನ ಮೋಟಾರು ವಾಹನಗಳು ನೈಟ್ರೊಜನ್ ಆಕ್ಸೈಡ್ ಮತ್ತು ಕೆಲವು ಕ್ಯಾನ್ಸರ್ ಜನಕ ಪದಾರ್ಥಗಳನ್ನು ಹೊರಸೂಸುತ್ತವೆ. ಮುಖ್ಯವಾಗಿ ಡೀಸಲ್ ಇಂಜಿನ್ಗಳಿರುವಂಥ ವಾಹನಗಳನ್ನು ಒಳಗೂಡಿ, ಅನೇಕ ವಾಹನಗಳು ದೊಡ್ಡ ಮೊತ್ತದಲ್ಲಿ ಅತಿಸೂಕ್ಷ್ಮ ಕಣಗಳನ್ನು ಹೊರಸೂಸುತ್ತವೆ. ಇವು ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರವಾದ ಅಪಾಯಗಳನ್ನು ಒಡ್ಡುತ್ತವೆ. ಪ್ರತಿ ವರುಷ ಸುಮಾರು 30 ಲಕ್ಷ ಜನರು ವಾಯುಮಾಲಿನ್ಯದಿಂದಾಗಿ ಸಾಯುತ್ತಾರೆ ಎಂದು ಅಂದಾಜುಮಾಡಲಾಗಿದೆ ಮತ್ತು ಈ ವಾಯುಮಾಲಿನ್ಯಕ್ಕೆ ಮೋಟಾರು ವಾಹನಗಳು ಮುಖ್ಯ ಕಾರಣಗಳಾಗಿವೆ. ಯೂರೋಪಿಯನ್ ಮಕ್ಕಳಲ್ಲಿ ಕಂಡುಬರುವ ಉಸಿರಾಟದ ಸೋಂಕುಗಳಲ್ಲಿ 10 ಪ್ರತಿಶತ ಸೋಂಕಿಗೆ, ಅತಿಸೂಕ್ಷ್ಮ ಕಣಗಳಿಂದ ಗಾಳಿಯು ಮಲಿನಗೊಂಡಿರುವುದೇ ಕಾರಣ ಎಂಬುದಾಗಿ ಒಂದು ವರದಿಯು ತಿಳಿಸುತ್ತದೆ. ಅದರಲ್ಲಿಯೂ, ವಾಹನಸಂಚಾರದ ಕಿಕ್ಕಿರಿತವಿರುವ ನಗರಗಳಲ್ಲಿ ಇದರ ಪ್ರಮಾಣವು ಇನ್ನಷ್ಟು ಹೆಚ್ಚಾಗಿದೆ.
ಭೂಮಿಯ ಪರಿಸರಕ್ಕೆ ಸಹ ಇದರಿಂದಾಗುವ ಹಾನಿಯನ್ನು ಪರಿಗಣಿಸಿರಿ. ಆಮ್ಲ ಮಳೆಯ ಸುರಿಯುವಿಕೆಗೆ, ವಾಹನದಿಂದ ಹೊರಬಿಡಲ್ಪಡುವ ನೈಟ್ರೊಜನ್ ಆಕ್ಸೈಡ್ ಮತ್ತು ಗಂಧಕದ ಡೈಆಕ್ಸೈಡ್ಗಳೇ ಕಾರಣಗಳಾಗಿವೆ. ಈ ಆಮ್ಲ ಮಳೆಯು ಜಲಾಶಯಗಳನ್ನು ಮಲಿನಗೊಳಿಸಿ, ನೀರಿನಲ್ಲಿ ಜೀವಿಸುವ ಜೀವಿಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಮತ್ತು ವಿವಿಧ ಸಸ್ಯಗಳನ್ನು ಹಾನಿಗೆ ಒಳಪಡಿಸುತ್ತದೆ. ಅಷ್ಟುಮಾತ್ರವಲ್ಲದೆ, ವಾಹನಗಳು ದೊಡ್ಡ ಮೊತ್ತದಲ್ಲಿ ಹೊರಸೂಸುವ ಇಂಗಾಲವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಭೌಗೋಳಿಕ ಕಾವೇರುವಿಕೆಗೆ ಈ ಅನಿಲವು ಮುಖ್ಯ ಕಾರಣವಾಗಿದೆ ಮತ್ತು ಇದು ಭೂಗ್ರಹಕ್ಕೆ ಇತರ ಹಾನಿಗಳನ್ನೂ ಉಂಟುಮಾಡುತ್ತದೆ ಎಂಬುದಾಗಿ ಹೇಳಲಾಗಿದೆ.
ಹೆಚ್ಚಿನ ಅಪಘಾತಗಳು
ವಾಹನಗಳು ಹೆಚ್ಚಾದಂತೆ ಮನುಷ್ಯನ ಜೀವಕ್ಕೆ ಅಪಾಯವೂ ಹೆಚ್ಚಾಗುತ್ತದೆ. ಪ್ರತಿ ವರುಷ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ವಾಹನ ಅಪಘಾತಗಳಿಂದ ಸಾವನ್ನಪ್ಪುತ್ತಾರೆ ಮತ್ತು ಈ ಸಂಖ್ಯೆಯು ಏಕಪ್ರಕಾರವಾಗಿ ಹೆಚ್ಚಾಗುತ್ತಾ ಇದೆ. ಕೆಲವು ಕ್ಷೇತ್ರಗಳಲ್ಲಿ ಅಪಾಯವು ಬಹಳ ಹೆಚ್ಚಾಗಿದೆ. ಉದಾಹರಣೆಗೆ, “ರಸ್ತೆ ಅಪಘಾತಗಳಿಂದಾಗಿ ಸ್ವೀಡನ್ನ ಪ್ರತಿ ಹತ್ತು ಲಕ್ಷ ನಿವಾಸಿಗಳಲ್ಲಿ 120 ಮಂದಿ ಕೊಲ್ಲಲ್ಪಡುವಾಗ ಗ್ರೀಸ್ನಲ್ಲಿ 690 ಮಂದಿ ಕೊಲ್ಲಲ್ಪಡುತ್ತಾರೆ” ಎಂಬುದಾಗಿ ಯೂರೋಪಿಯನ್ ಕಮಿಷನ್ ಸಂಶೋಧಕರು ಕಂಡುಕೊಂಡರು.
ಇತ್ತೀಚಿನ ವರುಷಗಳಲ್ಲಿ ಗಮನಿಸಲಾಗಿರುವ ಅಹಿತಕರವಾದ ಅಂಶವು ರಸ್ತೆ ಕ್ರೋಧ (ರೋಡ್ ರೇಜ್)ವಾಗಿದೆ. ಚಾಲಕರು ಇತರ ಚಾಲಕರ ಮೇಲೆ ತಮ್ಮ ಕೋಪವನ್ನು ಯಾವುದೇ ಹತೋಟಿಯಿಲ್ಲದೆ ವ್ಯಕ್ತಪಡಿಸುವ ವರದಿಗಳು ಈಗ ಸರ್ವಸಾಧಾರಣವಾಗಿವೆ. ಯುನೈಟೆಡ್ ಸ್ಟೇಟ್ಸ್ನ ರಾಷ್ಟ್ರೀಯ ಹೆದ್ದಾರಿ ವಾಹನಸಂಚಾರ ಸುರಕ್ಷೆ ಕೇಂದ್ರದಿಂದ ನಡೆಸಲಾದ ಒಂದು ಸಮೀಕ್ಷೆಗನುಸಾರ, ಚಾಲಕರ ಆಕ್ರಮಣಕಾರಿ ಸ್ವಭಾವಕ್ಕೆ “ಹೆಚ್ಚುತ್ತಿರುವ ವಾಹನಸಂಚಾರ ಅಥವಾ ಕಿಕ್ಕಿರಿತವೇ” ಒಂದು ಕಾರಣ ಎಂಬುದಾಗಿ ಚಾಲಕರು ಭಾವಿಸುತ್ತಾರೆ.
ಆರ್ಥಿಕ ನಷ್ಟ
ವಾಹನಸಂಚಾರದ ಕಿಕ್ಕಿರಿತದಿಂದಾಗಿ ಹಣವು ಸಹ ವ್ಯಯವಾಗುತ್ತದೆ. ಕ್ಯಾಲಿಫೋರ್ನಿಯದ ಲಾಸ್ ಆ್ಯಂಜಲಿಸ್ ಒಂದರಲ್ಲಿಯೇ, ವಾಹನಸಂಚಾರದಿಂದಾದ ವಿಳಂಬಗಳಿಂದಾಗಿ ಒಂದು ವರ್ಷದಲ್ಲಿ 400 ಕೋಟಿ ಲೀಟರ್ಗಿಂತಲೂ ಹೆಚ್ಚು ಇಂಧನವು ನಷ್ಟವಾಗುತ್ತದೆ ಎಂದು ಒಂದು ಅಧ್ಯಯನವು ತೋರಿಸಿತು. ಇದಲ್ಲದೆ ಕಳೆದುಹೋಗುವ ವ್ಯಾಪಾರ ಅವಕಾಶಗಳು, ಮಾಲಿನ್ಯದಿಂದಾಗಿ ಆರೋಗ್ಯಾರೈಕೆಗೆ ಹೆಚ್ಚಿನ ಖರ್ಚು ಮತ್ತು ವಾಹನ ಅಪಘಾತಗಳ ಹೆಚ್ಚಳದಿಂದಾದ ಹಾನಿ ಈ ಮುಂತಾದ ಪರೋಕ್ಷ ನಷ್ಟಗಳೂ ಇವೆ.
ವಾಹನಸಂಚಾರದ ಕಿಕ್ಕಿರಿತದಿಂದ ಉಂಟಾಗುವ ಎಲ್ಲ ವೆಚ್ಚಗಳನ್ನು ಒಟ್ಟುಮಾಡಿದರೆ, ಈ ನಷ್ಟಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಹೀನಗೊಳಿಸುತ್ತವೆ. ಅಮೆರಿಕದಲ್ಲಿ ಟ್ರ್ಯಾಫಿಕ್ ಜ್ಯಾಮ್ನಿಂದಾಗಿ ಉಂಟಾಗುವ ಬರೀ ಸಮಯ ಮತ್ತು ಇಂಧನದ ನಷ್ಟದಿಂದಲೇ ಒಂದು ವರ್ಷಕ್ಕೆ ಸುಮಾರು 68 ಬಿಲಿಯನ್ ಡಾಲರ್ನಷ್ಟು ಹಣ ನಷ್ಟವಾಗುತ್ತದೆ ಎಂದು ಒಂದು ಅಧ್ಯಯನವು ತೋರಿಸಿತು. ದೂರದ ಪ್ರಾಚ್ಯದಲ್ಲಿನ ವಿಷಯವನ್ನು ಫಿಲಿಪ್ಪೀನ್ ಸ್ಟಾರ್ ಎಂಬ ವಾರ್ತಾಪತ್ರಿಕೆಯಲ್ಲಿನ ವರದಿಯು ತಿಳಿಸುವುದು: “ಟ್ಯಾಕ್ಸಿ ಮೀಟರ್ ಓಡುತ್ತಾ ಇರುವಂತೆ, ಪ್ರತಿ ವರುಷ ಟ್ರ್ಯಾಫಿಕ್ ಜ್ಯಾಮ್ಗಳಿಂದಾಗಿ ದೇಶವು ನೂರಾರು ಕೋಟಿ ಪೇಸೋವನ್ನು [ಆ ದೇಶದ ಹಣ] ಕಳೆದುಕೊಳ್ಳುತ್ತಾ ಇದೆ.” ಯೂರೋಪಿನಲ್ಲಿ ಈ ನಷ್ಟವು ಸುಮಾರು ಒಂದು ಟ್ರಿಲ್ಯನ್ ಯೂರೋಸ್ನ ಕಾಲುಭಾಗ ಆಗಿರುತ್ತದೆಂದು ಅಂದಾಜುಮಾಡಲಾಗಿದೆ.
ವಾಹನಸಂಚಾರದ ಮುನ್ಸೂಚನೆ ಏನಾಗಿದೆ?
ವಾಹನಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಪ್ರಯತ್ನಗಳನ್ನು ಮಾಡಿದಾಗ್ಯೂ, ವಿಷಯಗಳು ಇನ್ನೂ ಹದಗೆಡುತ್ತಾ ಇವೆ. ಯುನೈಟೆಡ್ ಸ್ಟೇಟ್ಸ್ನ 75 ನಗರಗಳ ರಾಷ್ಟ್ರೀಯ ಸಮೀಕ್ಷೆಯನ್ನು ಟೆಕ್ಸಸ್ನ ವಾಹನಸಂಚಾರ ಇಲಾಖೆಯು ಮಾಡಿತು. ಆ ಸಮೀಕ್ಷೆಯು ತೋರಿಸುವ ಮೇರೆಗೆ, 1982ರಲ್ಲಿ ಒಬ್ಬ ವ್ಯಕ್ತಿಯು ಸಂಚಾರ ಅಡಚಣೆಯಿಂದಾಗಿ ಒಂದು ವರುಷಕ್ಕೆ ಸರಾಸರಿ 16 ತಾಸುಗಳನ್ನು ನಷ್ಟಮಾಡಿಕೊಳ್ಳುತ್ತಿದ್ದನು, ಆದರೆ 2000ಕ್ಕೆ ಬರುವಾಗ ಆ ಸಂಖ್ಯೆಯು ವರುಷಕ್ಕೆ ಸರಾಸರಿ 62ತಾಸಿಗೆ ಏರಿದೆ. ಪ್ರಯಾಣಿಕರು ದಿನ ಒಂದಕ್ಕೆ ಅನುಭವಿಸಬಹುದಾದ ಸಂಚಾರ ಕಿಕ್ಕಿರಿತದಿಂದಾಗಿ ವ್ಯಯಿಸಬೇಕಾಗಿರುವ ಸಮಯವು 4.5ರಿಂದ 7 ತಾಸುಗಳಿಗೆ ಏರಿದೆ. “ಅಧ್ಯಯನವು ನಡೆಸಲ್ಪಡುತ್ತಿದ್ದ ವರುಷಗಳಾದ್ಯಂತ ಪ್ರತಿಯೊಂದು ಸ್ಥಳಗಳಲ್ಲಿ ವಾಹನಸಂಚಾರದ ಕಿಕ್ಕಿರಿತವು ಹೆಚ್ಚಾಗಿದೆ. ವಾಹನ ಕಿಕ್ಕಿರಿತದ ಅವಧಿಯು ದೀರ್ಘವಾಗಿದೆ ಮತ್ತು ಹಿಂದಿಗಿಂತ ಇಂದು ಹೆಚ್ಚೆಚ್ಚು ರಸ್ತೆಗಳು ಈ ಸಮಸ್ಯೆಯಿಂದ ಬಾಧಿತವಾಗಿವೆ ಹಾಗೂ ಸಂಚಾರವು ಹೆಚ್ಚಾಗಿರುವ ಕಾರಣ ಹೆಚ್ಚು ವಾಹನಗಳಿವೆ” ಎಂದು ಆ ವರದಿಯು ತಿಳಿಸುತ್ತದೆ.
ಇದೇ ರೀತಿಯ ವರದಿಗಳು ಇತರ ದೇಶಗಳಿಂದಲೂ ಬಂದಿವೆ. ಯೂರೋಪಿಯನ್ ನಿಯೋಗದ ಕೆಳಗೆ ಕೆಲಸಮಾಡುವ ಸಂಶೋಧಕರು ತಿಳಿಸಿದ್ದು: “ನಾವು ಸಂಚರಿಸುವ ವಿಧಾನದಲ್ಲಿ ಯಾವುದಾದರೊಂದು ಬೃಹತ್ ಬದಲಾವಣೆಯನ್ನು ಮಾಡದಿದ್ದರೆ, ಮುಂದಿನ ದಶಕದಲ್ಲಿ ಟ್ರ್ಯಾಫಿಕ್ ಜ್ಯಾಮ್ಗಳು ಇಡೀ ನಗರಗಳನ್ನೇ ಸ್ಥಗಿತಗೊಳಿಸಬಹುದು.”
ಏಷ್ಯನ್ ದೇಶಗಳಲ್ಲಿಯೂ ಹೆಚ್ಚುಕಡಿಮೆ ಇದೇ ರೀತಿಯ ಸಮಸ್ಯೆಗಳಿವೆ. ಟೋಕಿಯೊ, ಟ್ರ್ಯಾಫಿಕ್ ಜ್ಯಾಮ್ಗಳಿಗೆ ಹೆಸರುವಾಸಿಯಾದ ನಗರವಾಗಿದೆ. ಜಪಾನಿನಾದ್ಯಂತ ಇತರ ನಗರಗಳಲ್ಲಿಯೂ ವಾಹನಸಂಚಾರವು ಹೆಚ್ಚೆಚ್ಚಾಗುತ್ತಾ ಇದೆ. ಫಿಲಿಪ್ಪೀನ್ಸ್ನಲ್ಲಿ, ಮನಿಲಾ ಬುಲೆಟಿನ್ ಎಂಬ ವಾರ್ತಾಪತ್ರಿಕೆಯಲ್ಲಿ ಈ ಮುಂದೆ ತಿಳಿಸಿರುವಂಥ ರೀತಿಯ ವರದಿಗಳು ಸರ್ವಸಾಮಾನ್ಯವಾಗಿವೆ: “ಅತ್ಯಧಿಕ ಸಂಚಾರದ ಅವಧಿಗಳಲ್ಲಿ ಒಂದರ ಹಿಂದೆ ಒಂದು ನಿಂತಿರುವ ವಾಹನಗಳಿಂದ ಮತ್ತು ಪ್ರಯಾಣ ಮಾಡಲು ಕಾಯುತ್ತಿರುವ ಸಾವಿರಾರು ನಿತ್ಯ ಪ್ರಯಾಣಿಕರಿಂದ ರಸ್ತೆಗಳು ಜ್ಯಾಮ್ ಆಗಿವೆ.”
ವಾಹನಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗೆ ಯಾವುದೇ ಸಂಪೂರ್ಣ ಪರಿಹಾರಗಳು ಸದ್ಯಕ್ಕೆ ಲಭ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ವಾಹನಸಂಚಾರದಲ್ಲಿ ಸಿಲುಕಿಕೊಂಡಿರುವುದು—ಅತ್ಯಧಿಕ ಸಂಚಾರ ಅವಧಿಯಲ್ಲಿನ ವಾಹನಸಂಚಾರ ಕಿಕ್ಕಿರಿತದೊಂದಿಗೆ ನಿಭಾಯಿಸುವುದು (ಇಂಗ್ಲಿಷ್) ಎಂಬ ಪುಸ್ತಕದ ಬರಹಗಾರರಾದ ಆ್ಯನ್ಟನಿ ಡವ್ನ್ಸ್ರವರು ಈ ಮುಕ್ತಾಯಕ್ಕೆ ಬಂದರು: “ಮುಂದಿನ ವಾಹನಸಂಚಾರದ ಕಿಕ್ಕಿರಿತವನ್ನು ಸರಿಪಡಿಸಲು ಯಾವುದೇ ಸಾರ್ವಜನಿಕ ಕಾರ್ಯನೀತಿಗಳನ್ನು ಅಳವಡಿಸಿಕೊಂಡರೂ, ಲೋಕದ ಬಹುಮಟ್ಟಿಗೆ ಎಲ್ಲ ಭಾಗಗಳಲ್ಲಿ ಈ ಸಮಸ್ಯೆಯು ಹದಗೆಡುತ್ತಾ ಹೋಗುವ ಸಂಭಾವ್ಯತೆಯಿದೆ. ಆದುದರಿಂದ ನನ್ನ ಅಂತಿಮ ಸಲಹೆಯು: ಅದಕ್ಕೆ ಹೊಂದಿಕೊಂಡು ಹೋಗಲು ಕಲಿಯಿರಿ.”
ನೀವೇನು ಮಾಡಸಾಧ್ಯವಿದೆ?
ಈ ಎಲ್ಲ ವಿಷಯಗಳನ್ನು ನೋಡುವಾಗ, ಈ ಕಿರಿಕಿರಿಗೊಳಿಸುವ ಸಮಸ್ಯೆಯನ್ನು ನಿಭಾಯಿಸಲು ನೀವು ವೈಯಕ್ತಿಕವಾಗಿ ಏನು ಮಾಡಸಾಧ್ಯವಿದೆ? ಟ್ರ್ಯಾಫಿಕ್ ಜ್ಯಾಮ್ನಲ್ಲಿ ಯಾವಾಗಲೂ ಸಿಕ್ಕಿಕೊಳ್ಳುವ ಕೋಟ್ಯಂತರ ಜನರಲ್ಲಿ ನೀವು ಒಬ್ಬರಾಗಿರುವುದಾದರೆ, ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮಾಡಬಲ್ಲ ಕೆಲವು ವಿಷಯಗಳಿವೆ.
◼ ಸಿದ್ಧರಾಗಿರಿ. ಟ್ರ್ಯಾಫಿಕ್ ಜ್ಯಾಮ್ನಲ್ಲಿ ಸಿಕ್ಕಿಕೊಳ್ಳುವ ಮುಂಚೆಯೇ ಅನೇಕರು ಒತ್ತಡಕ್ಕೆ ತುತ್ತಾಗಿರುತ್ತಾರೆ. ಅವರು ಬೆಳಗ್ಗೆ ತಡವಾಗಿ ಏಳುತ್ತಾರೆ, ಅವಸರ ಅವಸರದಿಂದ ಸ್ನಾನಮಾಡುತ್ತಾರೆ, ಬಟ್ಟೆಧರಿಸಿ ತಯಾರಾಗುತ್ತಾರೆ ಮತ್ತು ಬೆಳಗ್ಗಿನ ಉಪಹಾರವನ್ನು ಸಹ ಅವಸರದಿಂದ ತಿನ್ನುತ್ತಾರೆ. ಕೆಲಸಕ್ಕೆ ತಡವಾಗುತ್ತದೆ ಎಂಬ ಯೋಚನೆಯೇ ಅವರನ್ನು ಒತ್ತಡಕ್ಕೊಳಪಡಿಸುತ್ತದೆ. ಈ ಒತ್ತಡದ ಮಟ್ಟವನ್ನು ಟ್ರ್ಯಾಫಿಕ್ ಜ್ಯಾಮ್ ಇನ್ನಷ್ಟು ಹೆಚ್ಚಿಸುತ್ತದೆ. ಆದುದರಿಂದ, ಟ್ರ್ಯಾಫಿಕ್ನಲ್ಲಿ ನೀವು ಸಿಕ್ಕಿಕೊಳ್ಳುವಿರೆಂದು ನಿಮಗನಿಸಿದರೆ, ನಿಮ್ಮ ಪ್ರಯಾಣವನ್ನು ಸ್ವಲ್ಪ ಬೇಗನೆ ಆರಂಭಿಸಿರಿ. ಈ ರೀತಿ, ಸಮಯಕ್ಕಿಂತ ಮುಂಚಿತವಾಗಿ ಹೋಗುವ ಮೂಲಕ ನೀವು ಅತ್ಯಧಿಕ ಸಂಚಾರ ಅವಧಿಯನ್ನು ಸಹ ತಪ್ಪಿಸಬಹುದು. ನಿತ್ಯ ಪ್ರಯಾಣಿಸುವ ಒತ್ತಡ—ಕಾರಣಗಳು, ಪರಿಣಾಮಗಳು ಮತ್ತು ನಿಭಾಯಿಸುವ ವಿಧಾನಗಳು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ “ಕಡಿಮೆ ಒತ್ತಡವುಳ್ಳ ನಿತ್ಯ ಪ್ರಯಾಣವು ಹಿಂದಿನ ದಿನ ಅಥವಾ ರಾತ್ರಿ ಆರಂಭವಾಗುತ್ತದೆ.” ಆ ಪುಸ್ತಕವು ಕೂಡಿಸುವುದು: “ಬೆಳಗ್ಗಿನ ಅವಸರವನ್ನು ತಪ್ಪಿಸುವ ಸಲುವಾಗಿ, ನಿತ್ಯ ಪ್ರಯಾಣಿಕನಿಗೆ ಅಥವಾ ಕುಟುಂಬದಲ್ಲಿರುವ ಮಕ್ಕಳಿಗೆ ಮರುದಿನಕ್ಕೆ ಬೇಕಾದ ಬಟ್ಟೆ, ಬ್ರೀಫ್ಕೇಸ್, ಮಧ್ಯಾಹ್ನದ ಊಟ ಈ ಮುಂತಾದವುಗಳನ್ನು ಮುಂಚಿನ ರಾತ್ರಿಯೇ ತಯಾರಿಸಿಡಲಾಗುತ್ತದೆ.” ರಾತ್ರಿಯಲ್ಲಿ ಸಾಕಷ್ಟು ನಿದ್ದೆ ಸಹ ಅತ್ಯಗತ್ಯವಾಗಿದೆ. ಬೆಳಗ್ಗೆ ಬೇಗ ಹೊರಡಬೇಕಾದರೆ, ರಾತ್ರಿ ಸೂಕ್ತ ಸಮಯಕ್ಕೆ ನೀವು ಮಲಗಬೇಕು.
ಬೆಳಗ್ಗೆ ಬೇಗ ಏಳುವುದರಿಂದ ಇತರ ಪ್ರಯೋಜನಗಳೂ ಇವೆ. ಉದಾಹರಣೆಗೆ, ದೀರ್ಘ ಅವಧಿಯ ವರೆಗೆ ವಾಹನದಲ್ಲಿ ಕುಳಿತುಕೊಳ್ಳುವುದು ನಿಮ್ಮ ಸ್ನಾಯುಗಳ ಮೇಲೆ ಒತ್ತಡವನ್ನು ಹಾಕಿ ಅವುಗಳ ನಮ್ಯತೆಯನ್ನು ಕಡಿಮೆಗೊಳಿಸಸಾಧ್ಯವಿದೆ. ಆದುದರಿಂದ ಒಂದುವೇಳೆ ನಿಮ್ಮ ಪರಿಸ್ಥಿತಿಯು ಅನುಮತಿಸುವುದಾದರೆ, ಬೆಳಗಿನ ಜಾವ ನೀವೇಕೆ ವ್ಯಾಯಾಮವನ್ನು ಮಾಡಬಾರದು? ಕ್ರಮವಾದ ವ್ಯಾಯಾಮ ಕಾರ್ಯಕ್ರಮವು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲದು ಮತ್ತು ವಾಹನಸಂಚಾರದಲ್ಲಿ ಸಿಕ್ಕಿಕೊಳ್ಳುವುದರಿಂದ ಉಂಟಾಗುವ ಶಾರೀರಿಕ ಒತ್ತಡವನ್ನು ನಿಭಾಯಿಸುವಂತೆ ಸಹಾಯಮಾಡಬಲ್ಲದು. ಬೆಳಗ್ಗೆ ಬೇಗ ಏಳುವುದರಿಂದ ನೀವು ಪುಷ್ಟಿಕರವಾದ ಉಪಹಾರವನ್ನು ಸೇವಿಸಲು ಸಹ ಸಾಧ್ಯವಾಗಬಹುದು. ಹೊಟ್ಟೆಯಲ್ಲಿ ಕಚಡ ಆಹಾರವನ್ನು ತುಂಬಿಸಿಕೊಂಡು ಇಲ್ಲವೆ ಖಾಲಿ ಹೊಟ್ಟೆಯಲ್ಲಿ ಇದ್ದು ಟ್ರ್ಯಾಫಿಕ್ ಜ್ಯಾಮ್ನಲ್ಲಿ ಕಾಯುವುದು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ನಿಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವ ಮೂಲಕ ಉಂಟಾಗಬಹುದಾದ ಹೆಚ್ಚಿನ ಒತ್ತಡವನ್ನು ನೀವು ತಡೆಗಟ್ಟಬಹುದು. ಟ್ರ್ಯಾಫಿಕ್ ಜ್ಯಾಮ್ನ ಮಧ್ಯದಲ್ಲಿ ನಿಮ್ಮ ವಾಹನವು ನಿಂತುಹೋದರೆ ಅದಕ್ಕಿಂತ ತಲೆಚಿಟ್ಟು ಹಿಡಿಸುವ ಬೇರೊಂದು ವಿಷಯವಿಲ್ಲ. ಹವಾಮಾನವು ತೀರ ಕೆಟ್ಟದ್ದಾಗಿರುವ ಸಮಯದಲ್ಲಂತೂ ಇದು ಇನ್ನಷ್ಟು ಸತ್ಯವಾಗಿದೆ. ಆದುದರಿಂದ, ನಿಮ್ಮ ವಾಹನದ ಬ್ರೇಕ್ಗಳು, ಟೈರ್ಗಳು, ಏರ್ ಕಂಡಿಷನರ್, ಹೀಟರ್, ವೈಪರ್ಗಳು, ಹಿಮವನ್ನು ಕರಗಿಸುವ ಯಂತ್ರಗಳು ಮತ್ತು ಇತರ ಪ್ರಾಮುಖ್ಯ ವ್ಯವಸ್ಥೆಗಳನ್ನು ಸುಸ್ಥಿತಿಯಲ್ಲಿಡುವುದು ಅತ್ಯಗತ್ಯ. ಕಿಕ್ಕಿರಿದ ವಾಹನಸಂಚಾರದ ಮಧ್ಯೆ ಒಂದು ಸಣ್ಣ ಅಪಘಾತವಾದರೂ ಅದು ತೀವ್ರ ಒತ್ತಡವನ್ನು ಉಂಟುಮಾಡಸಾಧ್ಯವಿದೆ. ಮಾತ್ರವಲ್ಲದೆ, ನಿಮ್ಮ ವಾಹನದ ಟ್ಯಾಂಕಿನಲ್ಲಿ ಸಾಕಷ್ಟು ಇಂಧನವಿದೆಯೊ ಎಂಬುದನ್ನು ಸಹ ಯಾವಾಗಲೂ ಖಚಿತಪಡಿಸಿಕೊಳ್ಳಿರಿ.
◼ ಮಾಹಿತಿವುಳ್ಳವರಾಗಿರಿ. ವಾಹನ ಓಡಿಸಲು ಆರಂಭಿಸುವ ಮುಂಚೆ, ಅಹಿತಕರ ಹವಾಮಾನ, ರಸ್ತೆ ನಿರ್ಮಾಣಕಾರ್ಯ, ತಾತ್ಕಾಲಿಕ ರಸ್ತೆ ತಡೆಗಟ್ಟುಗಳು, ಅಪಘಾತಗಳು ಮತ್ತು ವಾಹನಸಂಚಾರಕ್ಕೆ ಸಂಬಂಧಿಸಿದ ಆ ದಿನದ ಇತರ ಸನ್ನಿವೇಶಗಳು ಮುಂತಾದ ವಿಶೇಷ ಪರಿಸ್ಥಿತಿಗಳ ಮಾಹಿತಿಯುಳ್ಳವರಾಗಿರುವುದು ನಿಮಗೆ ಸಹಾಯಮಾಡಬಹುದು. ಬೆಳಗ್ಗೆ ರೇಡಿಯೊ ವಾರ್ತೆಯನ್ನು ಕೇಳಿಸಿಕೊಳ್ಳುವ ಮೂಲಕ ಇಲ್ಲವೆ ವಾರ್ತಾಪತ್ರಿಕೆಯನ್ನು ಓದುವ ಮೂಲಕ ಈ ಎಲ್ಲ ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದು. ಮಾತ್ರವಲ್ಲದೆ, ಕ್ಷೇತ್ರದ ನಕ್ಷೆಯನ್ನು ಸಹ ಕೊಂಡುಕೊಳ್ಳಿರಿ. ಪರ್ಯಾಯ ಮಾರ್ಗಗಳ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಸಮಸ್ಯೆಯಿರುವ ರಸ್ತೆಗಳನ್ನು ತಪ್ಪಿಸಿ ಬೇರೊಂದು ರಸ್ತೆಯಿಂದ ನೀವು ಹೋಗಶಕ್ತರಾಗುತ್ತೀರಿ.
◼ ಹಾಯಾಗಿರಿ. ನೀವು ಸಾಧ್ಯವಿರುವಷ್ಟು ಹಾಯಾಗಿರುವಂತೆ ವಾಯುಸಂಚಾರಕ್ಕಾಗಿ ನಿಮ್ಮ ವಾಹನದ ವಾಯುಸಂಚಾರ ವ್ಯವಸ್ಥೆಯನ್ನು ಮತ್ತು ಸೀಟಿನ ಭಂಗಿಯನ್ನು ಸರಿಹೊಂದಿಸಿರಿ. ಒಂದುವೇಳೆ ರೇಡಿಯೊ, ಕ್ಯಾಸೆಟ್ ಇಲ್ಲವೆ ಸಿಡಿ ಪ್ಲೇಯರ್ ಇರುವುದಾದರೆ ನಿಮ್ಮ ಅಚ್ಚುಮೆಚ್ಚಿನ ಸಂಗೀತವನ್ನು ನೀವು ಆಲಿಸಬಲ್ಲಿರಿ. ಕೆಲವು ರೀತಿಯ ಸಂಗೀತವು ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದೆಲ್ಲವು, ವಾಹನಸಂಚಾರದ ಕಿಕ್ಕಿರಿತದ ಕಿರಿಕಿರಿಗೊಳಿಸುವ ಶಬ್ದದಿಂದಲೂ ನಿಮ್ಮನ್ನು ರಕ್ಷಿಸಬಹುದು.a
◼ ಸಮಯವನ್ನು ಉಪಯುಕ್ತವಾಗಿ ಬಳಸಿರಿ. ವಾಹನಸಂಚಾರ ಸ್ಥಗಿತಗೊಂಡಿರುವ ಸಮಯದಲ್ಲಿ ನೀವು ಮಾಡಬಹುದಾದ ಒಂದು ಅತಿ ಉಪಯುಕ್ತವಾದ ಕೆಲಸವು, ಸಕಾರಾತ್ಮಕ ಆಲೋಚನೆಯೇ ಆಗಿದೆ. ವಾಹನಸಂಚಾರದ ಕಷ್ಟಕರ ಪರಿಸ್ಥಿತಿಗಳ ಬಗ್ಗೆ ಆಲೋಚಿಸುತ್ತಾ ಇರುವ ಬದಲು, ಆ ದಿನದ ಚಟುವಟಿಕೆಗಳ ಬಗ್ಗೆ ಆಲೋಚಿಸಲು ಪ್ರಯತ್ನಿಸಿರಿ. ನಿಮ್ಮ ವಾಹನದಲ್ಲಿ ನೀವು ಒಂಟಿಗರಾಗಿರುವಲ್ಲಿ, ಟ್ರ್ಯಾಫಿಕ್ ಜ್ಯಾಮ್ನಲ್ಲಿ ನೀವು ಕಳೆಯುವ ಸಮಯವು, ಪ್ರಾಮುಖ್ಯ ವಿಷಯಗಳ ಕುರಿತು ಆಲೋಚಿಸಲು ಮತ್ತು ಯಾವುದೇ ಅಡ್ಡಿ ಅಡಚಣೆಗಳಿಲ್ಲದೆ ನಿರ್ಣಯಗಳನ್ನು ಮಾಡಲು ಸಹ ಒಂದು ಅಪೂರ್ವ ಅವಕಾಶವನ್ನು ಕೊಡುತ್ತದೆ.
ಒಂದುವೇಳೆ ನೀವು ಪ್ರಯಾಣಿಕರಾಗಿರುವಲ್ಲಿ, ಉದ್ದನೆಯ ಸಾಲಿನಲ್ಲಿ ನಿಂತಿರುವ ವಾಹನಗಳನ್ನು ದುರುಗುಟ್ಟಿ ನೋಡುತ್ತಾ ಇದ್ದರೆ ನಿಮ್ಮ ಒತ್ತಡವು ಇನ್ನಷ್ಟು ಹೆಚ್ಚಾಗಬಹುದು. ಆದುದರಿಂದ ನಿಮ್ಮ ಪ್ರಯಾಣದ ಸಮಯವನ್ನು ಉಪಯುಕ್ತಕರವಾಗಿ ಉಪಯೋಗಿಸಲು ಯೋಜಿಸಿರಿ. ನಿಮ್ಮ ಅಚ್ಚುಮೆಚ್ಚಿನ ಪುಸ್ತಕ ಇಲ್ಲವೆ ವಾರ್ತಾಪತ್ರಿಕೆಯನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು. ಇಲ್ಲವೆ ಹಿಂದಿನ ದಿನದ ನಿಮ್ಮ ಮೇಲ್ ಅನ್ನು ಓದಬಹುದು. ಕೆಲವರು ಈ ಸಮಯದಲ್ಲಿ ಪತ್ರಗಳನ್ನು ಬರೆಯಲು ಇಲ್ಲವೆ ಚಿಕ್ಕ ಕಂಪ್ಯೂಟರ್ನಲ್ಲಿ ಏನಾದರೂ ಕೆಲಸಮಾಡಲು ಇಷ್ಟಪಡಬಹುದು.
◼ ವಾಸ್ತವಿಕ ನೋಟವುಳ್ಳವರಾಗಿರಿ. ವಾಹನಸಂಚಾರದ ಕಿಕ್ಕಿರಿತವು ದಿನನಿತ್ಯದ ಸಮಸ್ಯೆಯಾಗಿರುವ ಸ್ಥಳದಲ್ಲಿ ನೀವು ವಾಸಿಸುತ್ತಿರುವುದಾದರೆ, ವಾಹನಸಂಚಾರದಲ್ಲಿ ಸಿಕ್ಕಿಬೀಳುವುದನ್ನು ಸಂಭಾವ್ಯವೆಂದು ತಿಳಿದು ಅದಕ್ಕನುಗುಣವಾಗಿ ಯೋಜಿಸಿರಿ. ಹೆಚ್ಚಿನ ನಗರಗಳಲ್ಲಿ ವಾಹನಸಂಚಾರದ ಕಿಕ್ಕಿರಿತವು ಮುಂದುವರಿಯುವ ಸಮಸ್ಯೆಯಾಗಿದೆ. ವಾಹನಸಂಚಾರದಲ್ಲಿ ಸಿಲುಕಿಕೊಂಡಿರುವುದು—ಅತ್ಯಧಿಕ ಸಂಚಾರ ಅವಧಿಯಲ್ಲಿನ ವಾಹನಸಂಚಾರ ಕಿಕ್ಕಿರಿತದೊಂದಿಗೆ ನಿಭಾಯಿಸುವುದು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಎಲ್ಲ ದೊಡ್ಡ ದೊಡ್ಡ ನಗರಗಳು ಈಗಾಗಲೇ ಅನುಭವಿಸುತ್ತಿರುವಂಥ ಅತ್ಯಧಿಕ ಸಂಚಾರ ಅವಧಿಯಲ್ಲಿನ ವಾಹನಸಂಚಾರದ ಕಿಕ್ಕಿರಿತವು ಮುಂಗಾಣಬಹುದಾದ ಭವಿಷ್ಯತ್ತಿನಾದ್ಯಂತವೂ ಇದ್ದೇ ಇರುವುದು ಎಂಬುದು ಬಹುಮಟ್ಟಿಗೆ ಖಂಡಿತ.” ಆದುದರಿಂದ, ವಾಹನಸಂಚಾರವನ್ನು ನಿಮ್ಮ ಜೀವನದ ತಪ್ಪಿಸಿಕೊಳ್ಳಲಾರದ ವಿಷಯವಾಗಿ ಸ್ವೀಕರಿಸಲು ಕಲಿತುಕೊಳ್ಳಿರಿ. ಮತ್ತು ಅಂಥ ಸಂದರ್ಭವನ್ನು ಫಲಪ್ರದವಾಗಿ ಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿರಿ. (g05 11/22)
[ಪಾದಟಿಪ್ಪಣಿ]
a ಎಚ್ಚರ! ಪತ್ರಿಕೆಯ ಅನೇಕ ಓದುಗರು ಈ ಪತ್ರಿಕೆಯ ಮತ್ತು ಅದರ ಜೊತೆ ಪತ್ರಿಕೆಯಾಗಿರುವ ಕಾವಲಿನಬುರುಜುವಿನ ಆಡಿಯೋ ರೆಕಾರ್ಡಿಂಗ್ ಅನ್ನು ಆಲಿಸಲು ಆನಂದಿಸುತ್ತಾರೆ. ಕೆಲವು ಭಾಷೆಗಳಲ್ಲಿ ಇದು ಆಡಿಯೋ ಕ್ಯಾಸೆಟ್, ಕಾಂಪ್ಯಾಕ್ಟ್ ಡಿಸ್ಕ್ ಮತ್ತು MP3ಯಲ್ಲಿ ಲಭ್ಯವಿದೆ.
[ಪುಟ 16ರಲ್ಲಿರುವ ಚಿತ್ರ]
ಮುಂಚಿತವಾಗಿಯೇ ಯೋಜಿಸುವ ಮೂಲಕ ವಾಹನಸಂಚಾರದ ಕಿಕ್ಕಿರಿತವನ್ನು ತಡೆಗಟ್ಟಿರಿ
[ಪುಟ 16ರಲ್ಲಿರುವ ಚಿತ್ರ]
ವಾಹನ ಓಡಿಸಲು ಆರಂಭಿಸುವ ಮುಂಚೆ, ಸೂಕ್ತವಾದ ಕ್ಯಾಸೆಟ್ ಇಲ್ಲವೆ ಸಿಡಿಯನ್ನು ಆಯ್ಕೆಮಾಡಿರಿ
[ಪುಟ 16ರಲ್ಲಿರುವ ಚಿತ್ರ]
ಪ್ರಯಾಣಿಕರಾಗಿರುವಲ್ಲಿ, ಉಪಯುಕ್ತಕರವಾಗಿರಲು ಮಾರ್ಗವನ್ನು ಕಂಡುಕೊಳ್ಳಿರಿ
[ಪುಟ 16ರಲ್ಲಿರುವ ಚಿತ್ರ]
ನಿಮ್ಮಿಂದ ಬದಲಾಯಿಸಲು ಅಸಾಧ್ಯವಾಗಿರುವ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ