ಯುವ ಜನರು ಪ್ರಶ್ನಿಸುವುದು . . .
ನಾನು ಸ್ಕೂಲ್ನಲ್ಲಿ ಸೆಕ್ಸ್ನಿಂದ ಹೇಗೆ ದೂರವಿರಬಲ್ಲೆ?
“ಮಕ್ಕಳು ಪ್ರತಿ ದಿನವೂ ಸೆಕ್ಸ್ ಬಗ್ಗೆ ಮಾತಾಡುತ್ತಿರುತ್ತಾರೆ. ಹುಡುಗಿಯರು ಹುಡುಗರ ಬಳಿ ಅದನ್ನು ಪ್ರಸ್ತಾಪಿಸಿ, ಸ್ಕೂಲ್ನಲ್ಲೇ ಸೆಕ್ಸ್ನಲ್ಲಿ ತೊಡಗುತ್ತಾರೆ.”— ಐಲೀನ್, 16.
“ನನ್ನ ಸ್ಕೂಲ್ನಲ್ಲಿ, ಸಲಿಂಗಕಾಮಿಗಳು ಎಲ್ಲ ಮಕ್ಕಳ ಕಣ್ಣೆದುರಿಗೇ ಅನೈತಿಕ ಕೃತ್ಯಗಳನ್ನು ನಡೆಸುತ್ತಾರೆ. ಅವರಿಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ.”— ಮೈಕಲ್, 15.a
ನಿಮ್ಮ ಸಹಪಾಠಿಗಳು ಯಾವಾಗಲೂ ಸೆಕ್ಸ್ ಬಗ್ಗೆಯೇ ಮಾತಾಡುತ್ತಿರುತ್ತಾರೊ? ಅವರಲ್ಲಿ ಕೆಲವರು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗುತ್ತಾರೊ? ಹಾಗಿರುವುದಾದರೆ, ಸ್ಕೂಲ್ನಲ್ಲಿರುವುದನ್ನು “X-ರೇಟಡ್ [ವಯಸ್ಕರಿಗಾಗಿ ಮಾತ್ರ ಎಂದು ಹೇಳಲಾಗುವ] ಚಲನಚಿತ್ರದ ಶೂಟಿಂಗ್ ನಡೆಯುತ್ತಿರುವ ಸೆಟ್ನಲ್ಲಿ ಕೆಲಸಮಾಡುತ್ತಿರುವುದಕ್ಕೆ” ಹೋಲಿಸಿದ ಒಬ್ಬ ಹದಿವಯಸ್ಕ ಹುಡುಗಿಯ ಹಾಗೆಯೇ ನಿಮಗೂ ಅನಿಸುತ್ತಿರಬಹುದು. ವಾಸ್ತವಾಂಶವೇನೆಂದರೆ ಸ್ಕೂಲ್ನಲ್ಲಿ ಅನೇಕ ಯುವ ಜನರು, ಸೆಕ್ಸ್ ಬಗ್ಗೆ ಚರ್ಚೆಮಾಡುವ ಮತ್ತು ಸೆಕ್ಸ್ನಲ್ಲಿ ಒಳಗೂಡುವ ಅವಕಾಶಗಳು ನಿರಂತರವಾಗಿ ಅವರ ಮುಂದೆ ಬರುತ್ತವೆ.
ನಿಮ್ಮ ಸಹಪಾಠಿಗಳು “ಹುಕಿಂಗ್ ಅಪ್” ಬಗ್ಗೆ, ಅಂದರೆ ಯಾವುದೇ ಭಾವನಾತ್ಮಕ ಬಂಧವಿಲ್ಲದೆ ಒಬ್ಬರೊಂದಿಗೆ ಒಂದೇ ಸಲ ಸೆಕ್ಸ್ನಲ್ಲಿ ತೊಡಗುವುದರ ಕುರಿತು ಮಾತಾಡುತ್ತಿರುವುದನ್ನು ನೀವು ಕೇಳಿರಬಹುದು. ಕೆಲವು ಸಂದರ್ಭಗಳಲ್ಲಿ ಮಕ್ಕಳು ತಮಗೆ ಅಷ್ಟೇನೂ ಪರಿಚಯವಿಲ್ಲದವರೊಂದಿಗೂ ಮತ್ತು ಇನ್ನೂ ಕೆಲವರು, ತಾವು ಇಂಟರ್ನೆಟ್ನಲ್ಲಿ ಸಂಪರ್ಕಿಸಿದ ಸಂಪೂರ್ಣ ಅಪರಿಚಿತರೊಂದಿಗೆ ಸೆಕ್ಸ್ನಲ್ಲಿ ತೊಡಗಲು ಅವರನ್ನು ಭೇಟಿಯಾಗುತ್ತಾರೆ. ಈ ಎರಡೂ ಸನ್ನಿವೇಶಗಳಲ್ಲಿ ಈ ರೀತಿಯ ಸೆಕ್ಸ್ನಲ್ಲಿ ತೊಡಗುವ ಗುರಿಯು, ಅದರಲ್ಲಿ ಪ್ರೀತಿಯನ್ನು ಒಳಗೂಡಿಸದಿರುವುದೇ ಆಗಿದೆ. “ಇಬ್ಬರು ವ್ಯಕ್ತಿಗಳು ತಮ್ಮ ದೈಹಿಕ ಆಸೆಗಳನ್ನು ತೀರಿಸಿಕೊಳ್ಳುವುದಲ್ಲದೆ ಇದರಲ್ಲಿ ಬೇರೇನೂ ಇರುವುದಿಲ್ಲ” ಎಂದು 19 ವರ್ಷದವಳಾದ ಡಾನ್ಯೆಲ್ ಹೇಳುತ್ತಾಳೆ.
ಈ ರೀತಿಯ “ಹುಕಿಂಗ್ ಅಪ್” ಪ್ರಕರಣಗಳು ಅನೇಕ ಸ್ಕೂಲ್ಗಳಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿರುವುದು ಅಚ್ಚರಿಹುಟ್ಟಿಸುವುದಿಲ್ಲ. “ಪ್ರತಿ ವಾರಾಂತ್ಯದ ಬಳಿಕ, ಹಾಲ್ಗಳಲ್ಲಿ ಇತ್ತೀಚಿನ ಹುಕ್ಅಪ್ ಬಗ್ಗೆ ಗುಸುಗುಸು ಮಾತುಕತೆ ನಡೆಯುತ್ತಿರುವಂತೆ ತೋರುತ್ತದೆ ಮತ್ತು ಸ್ನೇಹಿತರ ನಡುವೆಯಂತೂ ಅಂಥ ಸಂಬಂಧಗಳ ಬಗ್ಗೆ ಪ್ರತಿಯೊಂದು ವಿವರವನ್ನು ಬಿಡಿಸಿ ಹೇಳಲಾಗುತ್ತದೆ” ಎಂದು 17 ವರ್ಷದ ಹುಡುಗಿಯೊಬ್ಬಳು ತನ್ನ ಸ್ಕೂಲಿನ ವಾರ್ತಾಪತ್ರಿಕೆಗಾಗಿ ಒಂದು ಲೇಖನದಲ್ಲಿ ಬರೆದಳು.
ಒಂದುವೇಳೆ ನೀವು ಬೈಬಲ್ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಿರುವಲ್ಲಿ, ಬರೀ ಸೆಕ್ಸ್ ಬಗ್ಗೆಯೇ ಮಾತಾಡುತ್ತಿರುವಂತೆ ತೋರುವ ಜನರು ನಿಮ್ಮ ಸುತ್ತಲಿರುವಾಗ, ಎಲ್ಲರಿಂದ ಪ್ರತ್ಯೇಕಿಸಲ್ಪಟ್ಟಿರುವ ಅನಿಸಿಕೆ ನಿಮಗಾಗಬಹುದು. ಮತ್ತು ನೀವು ಅವರೊಂದಿಗೆ ಸೇರದಿರುವಲ್ಲಿ ಸುಲಭವಾಗಿ ಅವರ ಕುಚೋದ್ಯಕ್ಕೆ ಗುರಿಯಾಗಬಹುದು. ಸ್ವಲ್ಪಮಟ್ಟಿಗೆ ಇದು ನಿರೀಕ್ಷಿಸಬಹುದಾದ ಸಂಗತಿಯೇ. ಏಕೆಂದರೆ ಇತರರಿಗೆ ನಿಮ್ಮ ಮಾರ್ಗಕ್ರಮವು ಅರ್ಥವಾಗದೇ ಇರುವಾಗ ಅವರು ‘ನಿಮ್ಮನ್ನು ದೂಷಿಸುವ’ ಮೂಲಕ ಪ್ರತಿಕ್ರಿಯಿಸಬಹುದೆಂದು ಬೈಬಲ್ ಹೇಳುತ್ತದೆ. (1 ಪೇತ್ರ 4:3, 4) ಹೀಗಿದ್ದರೂ ತಮ್ಮ ಬಗ್ಗೆ ಯಾರಾದರೂ ತಮಾಷೆಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ. ಆದುದರಿಂದ, ನೀವು ಸ್ಕೂಲ್ನಲ್ಲಿ ಸೆಕ್ಸ್ ಬಗ್ಗೆ ಚರ್ಚಿಸುವುದರಿಂದ ಇಲ್ಲವೆ ಅದರಲ್ಲಿ ತೊಡಗುವುದರಿಂದ ಹೇಗೆ ದೂರವಿದ್ದು ನಿಮ್ಮ ನಿಲುವಿನ ಬಗ್ಗೆ ಯೋಗ್ಯವಾದ ಹೆಮ್ಮೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಬಲ್ಲಿರಿ? ಮೊತ್ತಮೊದಲಾಗಿ, ಲೈಂಗಿಕ ಶೋಧನೆಯು ಏಕೆ ತುಂಬ ಬಲವಾದದ್ದಾಗಿರುತ್ತದೆಂದು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯ.
ನಿಮ್ಮನ್ನೇ ತಿಳಿದುಕೊಳ್ಳಿರಿ
ತರುಣಾವಸ್ಥೆಯಲ್ಲಿ, ನಿಮ್ಮಲ್ಲಿ ಶಾರೀರಿಕ ಹಾಗೂ ಭಾವನಾತ್ಮಕವಾದ ಬದಲಾವಣೆಗಳು ಶೀಘ್ರಗತಿಯಲ್ಲಿ ನಡೆಯುತ್ತವೆ. ಈ ಅವಧಿಯನ್ನು ದಾಟುತ್ತಿರುವಾಗ, ತೀವ್ರವಾದ ಲೈಂಗಿಕ ಆಸೆಗಳು ನಿಮ್ಮಲ್ಲಿ ಹುಟ್ಟಬಹುದು. ಚಿಂತೆಮಾಡಬೇಡಿ, ಇದು ಸ್ವಾಭಾವಿಕ. ಆದುದರಿಂದ ಸ್ಕೂಲ್ನಲ್ಲಿ ವಿರುದ್ಧ ಲಿಂಗದವರ ಕಡೆಗೆ ನಿಮಗೆ ಬಲವಾದ ಆಕರ್ಷಣೆಯ ಅನಿಸಿಕೆ ಆಗುತ್ತಿರುವಲ್ಲಿ, ನೀವು ಹುಟ್ಟಿನಿಂದಲೇ ಕೆಟ್ಟವರು ಇಲ್ಲವೆ ನೈತಿಕವಾಗಿ ಶುದ್ಧರಾಗಿ ಉಳಿಯುವುದು ನಿಮ್ಮಿಂದ ಸಾಧ್ಯವಾಗದ ಸಂಗತಿಯೆಂದು ನೆನಸಬೇಡಿ. ಏಕೆಂದರೆ ಒಂದುವೇಳೆ ನೀವು ನೈತಿಕವಾಗಿ ಶುದ್ಧರಾಗಿರುವ ಆಯ್ಕೆಮಾಡಿದರೆ ನೀವು ನಿಶ್ಚಯವಾಗಿಯೂ ಶುದ್ಧರಾಗಿ ಉಳಿಯಬಲ್ಲಿರಿ!
ತರುಣಾವಸ್ಥೆಯ ಭಾಗವಾಗಿರುವ ಈ ಆಂತರಿಕ ಹೋರಾಟವಲ್ಲದೆ ನಿಮಗೆ ತಿಳಿದಿರಬೇಕಾದ ಇನ್ನೊಂದು ವಿಷಯವೂ ಇದೆ. ಅಪರಿಪೂರ್ಣರಾಗಿರಲಾಗಿ ಎಲ್ಲ ಮಾನವರ ಮನಸ್ಸು ಕೆಟ್ಟತನದ ಕಡೆಗೆ ಓಲಿಕೊಂಡಿರುತ್ತದೆ. ಅಪೊಸ್ತಲ ಪೌಲನು ಸಹ ಒಪ್ಪಿಕೊಂಡದ್ದು: “ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.” ತನ್ನ ಅಪರಿಪೂರ್ಣತೆಗಳಿಂದಾಗಿ ತಾನು “ದುರವಸ್ಥೆಯಲ್ಲಿ” ಇರುವಂತೆ ಅನಿಸುತ್ತದೆಂದು ಪೌಲನು ಹೇಳಿದನು. (ರೋಮಾಪುರ 7:22-24) ಆದರೆ ಅವನು ಆ ಹೋರಾಟವನ್ನು ಜಯಿಸಿದನು ಮತ್ತು ನೀವು ಸಹ ಜಯಿಸಸಾಧ್ಯವಿದೆ!
ನಿಮ್ಮ ಸಹಪಾಠಿಗಳನ್ನು ಅರ್ಥಮಾಡಿಕೊಳ್ಳಿರಿ
ಈ ಹಿಂದೆ ತಿಳಿಸಲ್ಪಟ್ಟಿರುವಂತೆ, ನಿಮ್ಮ ಸಹಪಾಠಿಗಳು ಯಾವಾಗಲೂ ಸೆಕ್ಸ್ ಬಗ್ಗೆ ಮಾತಾಡುತ್ತಾ ಇರಬಹುದು ಅಥವಾ ತಮ್ಮ ಲೈಂಗಿಕ ‘ಶೂರಕೃತ್ಯಗಳ’ ಬಗ್ಗೆ ಜಂಬಕೊಚ್ಚಿಕೊಳ್ಳುತ್ತಿರಬಹುದು. ಅವರು ಬೀರುವ ಅಹಿತಕರವಾದ ಪ್ರಭಾವದ ಬಗ್ಗೆ ನೀವು ಎಚ್ಚರಿಕೆಯಿಂದಿರಬೇಕು. (1 ಕೊರಿಂಥ 15:33) ಹೀಗಿದ್ದರೂ ನೀವು ನಿಮ್ಮ ಸಹಪಾಠಿಗಳನ್ನು ನಿಮ್ಮ ಶತ್ರುಗಳಾಗಿ ನೋಡಬೇಕಾಗಿಲ್ಲ. ಏಕೆ?
ನಿಮಗಿರುವಂಥದ್ದೇ ರೀತಿಯ ಆಸೆಗಳು ನಿಮ್ಮ ಸಹಪಾಠಿಗಳಿಗೂ ಇವೆ. ಅವರಲ್ಲೂ ಕೆಟ್ಟದ್ದನ್ನು ಮಾಡುವ ಪ್ರವೃತ್ತಿಯಿದೆ. ಆದರೆ ನಿಮಗಿಂತ ಭಿನ್ನರಾಗಿ, ಅವರಲ್ಲಿ ಕೆಲವರು ‘ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರು’ ಆಗಿರಬಹುದು. ಇಲ್ಲವೆ ಅವರು, ಕುಟುಂಬದ ಸದಸ್ಯರ ನಡುವೆ ‘ಮಮತೆಯಿಲ್ಲದ’ ಮನೆತನಗಳಿಂದ ಬಂದವರಾಗಿರಬಹುದು. (2 ತಿಮೊಥೆಯ 3:1-4) ನಿಮ್ಮ ಸಹಪಾಠಿಗಳಲ್ಲಿ ಕೆಲವರಿಗೆ, ಒಳ್ಳೇ ಹೆತ್ತವರು ಕೊಡುವಂಥ ಪ್ರೀತಿಪರ ಶಿಸ್ತು ಮತ್ತು ನೈತಿಕ ತರಬೇತಿ ಸಿಕ್ಕಿರಲಿಕ್ಕಿಲ್ಲ.—ಎಫೆಸ 6:4.
ನಿಮಗಂತೂ ಕೈಗೆಟುಕಿನಲ್ಲೇ ಇರುವಂಥ ವಿವೇಕದ ಉನ್ನತ ಮೂಲವಾದ ದೇವರ ವಾಕ್ಯವಾದ ಬೈಬಲು ನಿಮ್ಮ ಸಹಪಾಠಿಗಳ ಬಳಿ ಇಲ್ಲದಿರುವುದರಿಂದ, ಆಸೆಗಳಿಗೆ ಕಡಿವಾಣ ಹಾಕದಿದ್ದರೆ ಉಂಟಾಗುವ ಹಾನಿಯೇನೆಂಬುದು ಅವರಿಗೆ ತಿಳಿದಿರಲಿಕ್ಕಿಲ್ಲ. (ರೋಮಾಪುರ 1:26, 27) ಅವರ ಸನ್ನಿವೇಶವು, ಅವರ ಹೆತ್ತವರು ಅವರಿಗೆ ವಾಹನ ಚಲಾಯಿಸುವುದು ಹೇಗೆಂಬುದನ್ನು ಕಲಿಸದೇ ಅವರಿಗೊಂದು ಒಳ್ಳೇ ಕಾರನ್ನು ಕೊಟ್ಟು ವಾಹನಸಂಚಾರದಿಂದ ಕಿಕ್ಕಿರಿದಿರುವ ಹೆದ್ದಾರಿಯಲ್ಲಿ ಅವರದನ್ನು ಓಡಿಸುವಂತೆ ಕಳುಹಿಸಿದ ಹಾಗಿರುತ್ತದೆ. ಅದರಿಂದ ಅವರು ಕ್ಷಣಿಕವಾಗಿ ರೋಮಾಂಚನಗೊಳ್ಳಬಹುದು, ಆದರೆ ಆಪತ್ತು ಸಂಭವಿಸುವುದಂತೂ ಖಂಡಿತ. ಹೀಗಿರುವುದರಿಂದ ನಿಮ್ಮ ಎದುರಿಗೆ ನಿಮ್ಮ ಸಹಪಾಠಿಗಳು ಸೆಕ್ಸ್ ಬಗ್ಗೆ ಮಾತಾಡಲಾರಂಭಿಸಿದರೆ ಇಲ್ಲವೆ ಅವರ ಅನೈತಿಕ ನಡತೆಯಲ್ಲಿ ಅವರನ್ನು ಜೊತೆಗೂಡುವಂತೆ ಒತ್ತಾಯಿಸಲು ಪ್ರಯತ್ನಿಸಿದರೆ ನೀವೇನು ಮಾಡಬಲ್ಲಿರಿ?
ಅನೈತಿಕ ಮಾತುಕತೆಯಿಂದ ದೂರವಿರಿ
ನಿಮ್ಮ ಸಹಪಾಠಿಗಳು ಅನೈತಿಕ ಸೆಕ್ಸ್ ಬಗ್ಗೆ ಮಾತಾಡಲಾರಂಭಿಸಿದರೆ ನಿಮಗೆ, ಅವರೇನು ಮಾತಾಡಿಕೊಳ್ಳುತ್ತಿದ್ದಾರೆಂದು ಕೇಳಿಸಿಕೊಳ್ಳುವ ಮತ್ತು ಬಹುಶಃ ಆ ಮಾತುಕತೆಯಲ್ಲಿ ಸೇರುವ ಮನಸ್ಸೂ ಆಗಬಹುದು. ನೀವು ಸಹ ಎಲ್ಲರಂತೆ ಇದ್ದೀರಿ, ಭಿನ್ನರಲ್ಲವೆಂದು ತೋರಿಸಲಿಕ್ಕಾಗಿ ಮಾತ್ರ ನೀವು ಹಾಗೆ ಮಾಡುತ್ತಿರಬಹುದು. ಆದರೆ ಇದರಿಂದಾಗಿ ನಿಮ್ಮ ಬಗ್ಗೆ ಅವರಲ್ಲಿ ಮೂಡುವ ಅಭಿಪ್ರಾಯದ ಕುರಿತು ಯೋಚಿಸಿರಿ. ಅವರ ಮಾತುಕತೆಯಲ್ಲಿ ನೀವು ತೋರಿಸುವ ಆಸಕ್ತಿಯು, ನೀವು ನಿಜವಾಗಿ ಎಂಥ ರೀತಿಯ ವ್ಯಕ್ತಿಯಾಗಿದ್ದೀರಿ ಇಲ್ಲವೆ ಎಂಥ ವ್ಯಕ್ತಿಯಾಗಿರಲು ಇಷ್ಟಪಡುತ್ತೀರೆಂದು ತೋರಿಸುತ್ತಿರಬಹುದೊ?
ಹಾಗಾದರೆ ಒಂದುವೇಳೆ ನೀವು ಒಂದು ಮಾತುಕತೆಯಲ್ಲಿ ಒಳಗೂಡಿರುವಾಗ ಅದು ಥಟ್ಟನೆ ಅನೈತಿಕ ಸೆಕ್ಸ್ ವಿಷಯಕ್ಕೆ ಬದಲಾಗುವಲ್ಲಿ ನೀವೇನು ಮಾಡತಕ್ಕದ್ದು? ಅಲ್ಲಿಂದೆದ್ದು ಹೊರಟುಹೋಗಬೇಕೊ? ಖಂಡಿತವಾಗಿಯೂ ಹೌದು! (ಎಫೆಸ 5:3, 4) ಬೈಬಲ್ ತಿಳಿಸುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.” (ಜ್ಞಾನೋಕ್ತಿ 22:3) ಹೀಗೆ ಆ ಸಂಭಾಷಣೆಯ ಸ್ಥಳದಿಂದ ಹೊರಟುಹೋಗುವ ಮೂಲಕ, ನೀವು ಒರಟಾಗಿದ್ದೀರೆಂದಲ್ಲ ಬದಲಾಗಿ ಜಾಣರಾಗಿದ್ದೀರೆಂದು ತೋರಿಸುತ್ತಿದ್ದೀರಿ.
ಅನೈತಿಕ ವಿಷಯಗಳ ಚರ್ಚೆ ಆರಂಭವಾಗುವಾಗ ಅಲ್ಲಿಂದ ಎದ್ದುಹೋಗುವುದರ ಬಗ್ಗೆ ನೀವು ನಾಚಿಕೆಪಡಬೇಕಾಗಿಲ್ಲ. ನೀವು ಸ್ವಲ್ಪವೂ ನಾಚಿಕೆಪಡದೆ ಎದ್ದುಹೋಗುವಂಥ ಬೇರೆ ರೀತಿಯ ಸಂಭಾಷಣೆಗಳು ಸಹ ಖಂಡಿತವಾಗಿಯೂ ಇವೆ. ಏಕೆಂದರೆ ಚರ್ಚಿಸಲಾಗುತ್ತಿರುವ ವಿಷಯದಲ್ಲಿ ಬಹುಶಃ ನಿಮಗೆ ಆಸಕ್ತಿಯಿಲ್ಲದಿರಬಹುದು ಇಲ್ಲವೆ ಅದರಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳಲು ನಿಮಗೆ ಮನಸ್ಸಿಲ್ಲದಿರಬಹುದು. ಉದಾಹರಣೆಗಾಗಿ, ನಿಮ್ಮ ಸಹಪಾಠಿಗಳ ಒಂದು ಗುಂಪು, ಸಶಸ್ತ್ರ ದರೋಡೆಯನ್ನು ಮಾಡುವುದರ ಬಗ್ಗೆ ಮಾತಾಡಲಾರಂಭಿಸಿದರೆಂದು ನೆನಸಿರಿ. ನೀವು ಅಲ್ಲೇ ಇದ್ದು ಅವರ ಯೋಜನೆಗೆ ಕಿವಿಗೊಡುತ್ತಾ ಇರುವಿರೊ? ಹಾಗೆ ಮಾಡುವಲ್ಲಿ, ನೀವು ಸಹ ಅವರೊಂದಿಗೆ ಜೊತೆಗೂಡಿರುವವರೆಂದು ಪರಿಗಣಿಸಲ್ಪಡುವಿರಿ. ಆದುದರಿಂದ ನೀವು ಬುದ್ಧಿವಂತರಾಗಿ ಅಲ್ಲಿಂದ ಹೊರಡುವ ಆಯ್ಕೆಮಾಡುವಿರಿ. ಒಂದು ಸಂಭಾಷಣೆಯು ಒಮ್ಮಿಂದೊಮ್ಮೆಲೆ ಅನೈತಿಕ ಸೆಕ್ಸ್ ವಿಷಯಕ್ಕೆ ತಿರುಗುವಾಗ ಸಹ ಅದನ್ನೇ ಮಾಡಿರಿ. ನೀವು ತುಂಬ ನೀತಿವಂತರು ಎಂಬ ತೋರಿಕೆಯನ್ನು ಕೊಡದೆ ಮತ್ತು ಅಪಹಾಸ್ಯವನ್ನು ಬರಮಾಡದಂಥ ರೀತಿಯಲ್ಲಿ ಅಲ್ಲಿಂದ ಹೊರಡುವ ಮಾರ್ಗವನ್ನು ಹೆಚ್ಚಾಗಿ ಕಂಡುಹಿಡಿಯಬಲ್ಲಿರಿ.
ಇಂಥ ಸನ್ನಿವೇಶಗಳಲ್ಲಿ ಎದ್ದುಹೊರಡುವುದು ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ. ಉದಾಹರಣೆಗೆ, ಕ್ಲಾಸ್ನಲ್ಲಿ ನಿಮ್ಮ ಹತ್ತಿರ ಕುಳಿತುಕೊಳ್ಳಲು ನೇಮಿಸಲ್ಪಟ್ಟಿರುವ ಯುವ ಜನರು, ನಿಮ್ಮನ್ನು ಸೆಕ್ಸ್ ಕುರಿತಾದ ಸಂಭಾಷಣೆಗೆಳೆಯಲು ಪ್ರಯತ್ನಿಸಬಹುದು. ಅಂಥ ಸಂದರ್ಭದಲ್ಲಿ ನಿಮ್ಮನ್ನು ಅಪಕರ್ಷಿಸುವುದನ್ನು ನಿಲ್ಲಿಸಬೇಕೆಂದು ನೀವು ದೃಢವಾದ ಆದರೆ ಸೌಮ್ಯಸ್ವರದಲ್ಲಿ ಅವರಿಗೆ ಹೇಳಬಹುದು. ಇದರಿಂದ ಪ್ರಯೋಜನವಾಗದಿದ್ದರೆ ಬ್ರೆಂಡ ಮಾಡಿದಂತೆ ಮಾಡಿ. “ನನ್ನನ್ನು ಬೇರೊಂದು ಸ್ಥಳದಲ್ಲಿ ಕೂರಿಸುವಂತೆ ಶಿಕ್ಷಕರಿಗೆ ಜಾಣ್ಮೆಯಿಂದ ಕೇಳಿದೆ” ಎಂದವಳು ಹೇಳುತ್ತಾಳೆ.
ವಿವೇಚನೆಯುಳ್ಳವರಾಗಿರಿ
ಇಂದಲ್ಲ ನಾಳೆ, ನಿಮ್ಮ ಸಹಪಾಠಿಗಳಲ್ಲಿ ಕೆಲವರು, ನೀವು ಅವರ ಹೊಲಸು ಸಂಭಾಷಣೆಗಳಲ್ಲಿ ಏಕೆ ಜೊತೆಗೂಡುವುದಿಲ್ಲವೆಂಬ ವಿಷಯದಲ್ಲಿ ಕುತೂಹಲವನ್ನು ತೋರಿಸಬಹುದು. ನಿಮ್ಮ ನೈತಿಕತೆಯ ಬಗ್ಗೆ ಅವರು ಕೇಳಿದರೆ, ನೀವು ಹೇಗೆ ಉತ್ತರಕೊಡುವಿರೆಂಬುದರ ಕುರಿತು ವಿವೇಚಿಸುವವರಾಗಿರಿ. ಕೆಲವರು ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳುವುದರ ಬದಲು ಸುಮ್ಮನೆ ನಿಮ್ಮನ್ನು ಹೀಯಾಳಿಸಲಿಕ್ಕಾಗಿ ಕೇಳಬಹುದು. ಆದರೆ ನಿಮಗೆ ಪ್ರಶ್ನೆಕೇಳುವವನ/ಳ ಹೇತು ನಿರ್ಮಲವಾದುದೆಂದು ತೋರುವಲ್ಲಿ, ನಿಮ್ಮ ನಂಬಿಕೆಗಳ ಬಗ್ಗೆ ಹೆಮ್ಮೆಯಿಂದ ಮಾತಾಡಿರಿ. ಅನೇಕ ಯುವ ಜನರು, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳುb ಎಂಬ ಪುಸ್ತಕವನ್ನು ಉಪಯೋಗಿಸಿ, ಬೈಬಲ್ ಮಟ್ಟಗಳಿಗನುಸಾರ ಜೀವಿಸುವುದರ ಪ್ರಯೋಜನಗಳನ್ನು ತಮ್ಮ ಸಹಪಾಠಿಗಳು ಗಣ್ಯಮಾಡುವಂತೆ ಸಹಾಯಮಾಡಿದ್ದಾರೆ.
ದೃಢನಿರ್ಧಾರದಿಂದಿರಿ
ಒಬ್ಬ ಜೊತೆ ವಿದ್ಯಾರ್ಥಿಯು ನಿಮ್ಮನ್ನು ಮುಟ್ಟಲು ಅಥವಾ ನಿಮಗೆ ಮುದ್ದಿಡಲು ಪ್ರಯತ್ನಿಸುವಷ್ಟು ಭಂಡತನ ತೋರಿಸುವಲ್ಲಿ ನೀವೇನು ಮಾಡತಕ್ಕದು? ಆ ವ್ಯಕ್ತಿ ಅದನ್ನು ಮಾಡುವಂತೆ ನೀವು ಬಿಡುವಲ್ಲಿ, ಅವನಿಗೆ ಅಥವಾ ಅವಳಿಗೆ ತನ್ನ ಆ ತಪ್ಪು ಮಾರ್ಗದಲ್ಲಿ ಮುಂದುವರಿಯಲು ಹೆಚ್ಚು ಧೈರ್ಯ ಸಿಗಬಹುದು. ಒಬ್ಬ ಅನೈತಿಕ ಸ್ತ್ರೀಯು ತನ್ನನ್ನು ಹಿಡಿದು ಮುದ್ದಿಸುವಂತೆ ಅನುಮತಿಸಿದ ಒಬ್ಬ ಯುವಕನ ಬಗ್ಗೆ ಬೈಬಲ್ ವರ್ಣಿಸುತ್ತದೆ. ಅವಳು ತನ್ನೊಂದಿಗೆ, ಲೈಂಗಿಕವಾಗಿ ಉದ್ರೇಕಿಸುವಂಥ ರೀತಿಯಲ್ಲಿ ಮಾತಾಡುವಂತೆ ಅವನು ಅನುಮತಿಸಿದ್ದನು. ಫಲಿತಾಂಶವೇನಾಗಿತ್ತು? ‘ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋದನು.’—ಜ್ಞಾನೋಕ್ತಿ 7:13-23.
ಯೋಸೇಫನು ಅದೇ ರೀತಿಯ ಸನ್ನಿವೇಶವನ್ನು ತದ್ವಿರುದ್ಧವಾದ ರೀತಿಯಲ್ಲಿ ಹೇಗೆ ಎದುರಿಸಿದನೆಂಬುದನ್ನು ಪರಿಗಣಿಸಿರಿ. ಅವನ ಯಜಮಾನನ ಹೆಂಡತಿಯು ಅವನನ್ನು ಪುಸಲಾಯಿಸಲು ಬೆಂಬಿಡದೆ ಪ್ರಯತ್ನಿಸಿದಳು, ಆದರೆ ಅವನು ದೃಢವಾಗಿ ಅವಳ ಪ್ರಸ್ತಾಪಗಳನ್ನು ತಳ್ಳಿಹಾಕಿದನು. ಕೊನೆಗೆ ಅವಳು ಅವನನ್ನು ಹಿಡಿಯಲು ಪ್ರಯತ್ನಿಸಿದಾಗ, ಅವನು ನಿರ್ಣಯಾತ್ಮಕ ಕ್ರಮಗೈಯುತ್ತಾ ಅಲ್ಲಿಂದ ಓಡಿಹೋದನು.—ಆದಿಕಾಂಡ 39:7-12.
ಸಹಪಾಠಿಯೊಬ್ಬನು/ಳು ಇಲ್ಲವೆ ಇತರ ಪರಿಚಯಸ್ಥರು ಅಯೋಗ್ಯವಾದ ರೀತಿಯಲ್ಲಿ ನಿಮ್ಮನ್ನು ಮುಟ್ಟಲು ಪ್ರಯತ್ನಿಸುವಾಗ ನೀವು ಬಲವಾದ ಕ್ರಮಕೈಗೊಳ್ಳಬೇಕಾದೀತು. “ಒಬ್ಬ ಹುಡುಗನು ನನ್ನನ್ನು ಮುಟ್ಟಲು ಪ್ರಯತ್ನಿಸುವಲ್ಲಿ, ಅದನ್ನು ನಿಲ್ಲಿಸುವಂತೆ ಹೇಳುತ್ತೇನೆ,” ಅನ್ನುತ್ತಾಳೆ ಐಲೀನ್. “ಆದರೂ ಅವನು ಮುಂದುವರಿಯುವಲ್ಲಿ, ನನ್ನ ಮೈ ಮೇಲಿಂದ ತನ್ನ ಕೈಯನ್ನು ತೆಗೆಯುವಂತೆ ಕಿರುಚಿ ಹೇಳುತ್ತೇನೆ.” ತನ್ನ ಸ್ಕೂಲ್ನಲ್ಲಿರುವ ಯುವಕರ ಕುರಿತಾಗಿ ಐಲೀನ್ ಕೂಡಿಸಿ ಹೇಳಿದ್ದು: “ಅವರು ನಿಮಗೆ ಗೌರವ ಕೊಡುವಂತೆ ಮಾಡಬೇಕು, ಇಲ್ಲದಿದ್ದಲ್ಲಿ ಅವರು ಗೌರವ ಕೊಡುವುದಿಲ್ಲ.”
ಅನೈತಿಕ ಮಾತುಕತೆಗೆ ಕಿವಿಗೊಡಲು ನೀವು ನಿರಾಕರಿಸುವಲ್ಲಿ, ಸೂಕ್ತವಾಗಿರುವಾಗೆಲ್ಲ ನಿಮ್ಮ ನೈತಿಕ ನಿಲುವನ್ನು ಗೌರವಪೂರ್ವಕವಾಗಿ ವಿವರಿಸುವಲ್ಲಿ ಮತ್ತು ಅನೈತಿಕ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸುವಲ್ಲಿ ಆಗ ನೀವು ಸಹ ನಿಮ್ಮ ಸಹಪಾಠಿಗಳ ಗೌರವವನ್ನು ಸಂಪಾದಿಸುವಿರಿ. ಇದಕ್ಕೆ ಕೂಡಿಸಿ ಇನ್ನೊಂದು ಪ್ರಯೋಜನವೇನೆಂದರೆ, ನಿಮಗೆ ನಿಮ್ಮ ನಡತೆಯ ಬಗ್ಗೆ ತೃಪ್ತಿ ಇರುವುದು. ಎಲ್ಲದಕ್ಕಿಂತಲೂ ಮಿಗಿಲಾಗಿ, ಯೆಹೋವನು ನಿಮ್ಮನ್ನು ಮೆಚ್ಚುವನು!—ಜ್ಞಾನೋಕ್ತಿ 27:11. (g 3/06)
ಇದರ ಬಗ್ಗೆ ಯೋಚಿಸಿರಿ:
◼ ನೈತಿಕ ವಿಷಯಗಳ ಕುರಿತಾದ ಸಂಭಾಷಣೆಯು ನಡೆಯುತ್ತಿರುವ ಸ್ಥಳದಿಂದ ಎದ್ದುಹೋಗಲು ನೀವೇನು ಹೇಳಬಹುದು?
◼ ಬ್ಬ ಸಹಪಾಠಿಯು ಅನೈತಿಕ ಪ್ರಯತ್ನಗಳನ್ನು ಮಾಡುವಲ್ಲಿ ನೀವೇನು ಹೇಳುವಿರಿ ಮತ್ತು ಮಾಡುವಿರಿ?
[ಪಾದಟಿಪ್ಪಣಿಗಳು]
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
b ಯೆಹೋವನ ಸಾಕ್ಷಿಗಳ ಪ್ರಕಾಶನ.
[ಪುಟ 17ರಲ್ಲಿರುವ ಚಿತ್ರ]
ಸಂಭಾಷಣೆಯು ಅನೈತಿಕ ಸೆಕ್ಸ್ ವಿಷಯಕ್ಕೆ ತಿರುಗುವಲ್ಲಿ, ಅಲ್ಲಿಂದ ಹೊರಡಿರಿ
[ಪುಟ 18ರಲ್ಲಿರುವ ಚಿತ್ರ]
ಅನೈತಿಕ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸಿರಿ