ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/06 ಪು. 4-8
  • ಪ್ರಕೃತಿ ಏನನ್ನು ಕಲಿಸುತ್ತದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕೃತಿ ಏನನ್ನು ಕಲಿಸುತ್ತದೆ?
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತಿಮಿಂಗಿಲದ ಈಜು ಅಂಗಗಳು ಕಲಿಸುವ ಸಂಗತಿಗಳು
  • ಕಡಲಕಾಗೆಯ ರೆಕ್ಕೆಗಳ ಅನುಕರಣೆ
  • ಹಲ್ಲಿಯ ಪಾದದ ನಕಲು
  • ಕೀರ್ತಿ ಯಾರಿಗೆ ಸಲ್ಲಬೇಕು?
  • ಒಂದು ತರ್ಕಬದ್ಧ ತೀರ್ಮಾನ
  • ಹಂಪ್‌ಬ್ಯಾಕ್‌ ತಿಮಿಂಗಿಲದ ಈಜುಗೈ
    ಎಚ್ಚರ!—2013
  • ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ರಚಕನು ಇಲ್ಲದ ರಚನೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಎಚ್ಚರ!—2006
g 10/06 ಪು. 4-8

ಪ್ರಕೃತಿ ಏನನ್ನು ಕಲಿಸುತ್ತದೆ?

“ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; ಭೂಮಿಯನ್ನು ಮಾತಾಡಿಸು, ನಿನಗೆ ಬೋಧಿಸುವದು; ಸಮುದ್ರದ ಮೀನುಗಳು ನಿನಗೆ ಹೇಳುವವು.”​—⁠ಯೋಬ 12:7, 8.

ವಿಜ್ಞಾನಿಗಳು ಮತ್ತು ಇಂಜಿನಿಯರರು ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಸಸ್ಯಗಳನ್ನು ಅಕ್ಷರಶಃವಾಗಿ ತಮ್ಮ ಶಿಕ್ಷಕರನ್ನಾಗಿ ಮಾಡಿಕೊಂಡಿದ್ದಾರೆ. ನವನವೀನ ಉತ್ಪನ್ನಗಳ ರಚನೆಗಾಗಿ ಮತ್ತು ಈಗಾಗಲೇ ಇರುವಂಥ ಯಂತ್ರಗಳ ಕೆಲಸಮಾಡುವ ರೀತಿಯನ್ನು ಉತ್ತಮಗೊಳಿಸಲಿಕ್ಕಾಗಿ ಅವರು ವಿಭಿನ್ನ ಜೀವಿಗಳ ವಿನ್ಯಾಸಗಳನ್ನು ಅಧ್ಯಯನಮಾಡಿ ನಕಲುಮಾಡುತ್ತಿದ್ದಾರೆ. ಇದನ್ನು “ಬಯೊಮಿಮೆಟಿಕ್ಸ್‌” (ಜೀವಾನುಕರಣ ವಿಜ್ಞಾನ) ಎಂದು ಕರೆಯಲಾಗಿದೆ. ಇದರ ಕುರಿತು ನೀವು ಮುಂದಿನ ಉದಾಹರಣೆಗಳನ್ನು ಪರಿಗಣಿಸುವಾಗ, ‘ಈ ಎಲ್ಲ ವಿನ್ಯಾಸಗಳಿಗಾಗಿ ಕೀರ್ತಿ ಯಾರಿಗೆ ಸಲ್ಲಬೇಕು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ.

ತಿಮಿಂಗಿಲದ ಈಜು ಅಂಗಗಳು ಕಲಿಸುವ ಸಂಗತಿಗಳು

ವಿಮಾನ ವಿನ್ಯಾಸಕರು ಗೂನುಬೆನ್ನಿನ ತಿಮಿಂಗಿಲದಿಂದ (ಹಂಪ್‌ಬ್ಯಾಕ್‌ ವೇಲ್‌) ಏನನ್ನು ಕಲಿಯಬಲ್ಲರು? ಬಹಳಷ್ಟನ್ನು! ಪೂರ್ತಿಯಾಗಿ ಬೆಳೆದಿರುವ ಒಂದು ಗೂನುಬೆನ್ನಿನ ತಿಮಿಂಗಿಲದ ತೂಕ ಸುಮಾರು 30 ಟನ್ನುಗಳಷ್ಟಾಗಿರುತ್ತದೆ. ಇದು, ಸರಕು ತುಂಬಿರುವ ಒಂದು ಟ್ರಕ್ಕಿನ ಭಾರಕ್ಕೆ ಸಮಾನ. ಈ ತಿಮಿಂಗಿಲಕ್ಕೆ ಬಹುಮಟ್ಟಿಗೆ ಬಾಗಿಸಲಾಗದ ದೇಹವಿದೆ ಮತ್ತು ದೊಡ್ಡ ರೆಕ್ಕೆಗಳಂಥ ಈಜು ಅಂಗಗಳಿವೆ. 40 ಅಡಿ ಉದ್ದದ ಈ ಪ್ರಾಣಿಯು ನೀರಿನಲ್ಲಿ ತುಂಬ ಸಲೀಸಾಗಿ ಚಲಿಸುತ್ತದೆ. ಉದಾಹರಣೆಗಾಗಿ, ಆಹಾರಕ್ಕಾಗಿ ಬೇಟೆಯಾಡುವಾಗ ಈ ತಿಮಿಂಗಿಲವು ತನ್ನ ಭೋಜನವಾಗಲಿಕ್ಕಿರುವ ಚಿಪ್ಪುಜೀವಿಗಳು ಇಲ್ಲವೆ ಮೀನಿನ ರಾಶಿಯಡಿಯಿಂದ ತನ್ನ ತಲೆ ಮೇಲಿರುವ ಮೂಗಿನ ಹೊಳ್ಳೆಯ ಮೂಲಕ ನಿರಂತರವಾಗಿ ಗುಳ್ಳೆಗಳ ಪ್ರವಾಹವನ್ನು ಊದುತ್ತಾ, 5 ಅಡಿಗಳಷ್ಟು ಉದ್ದಳತೆಯ ವೃತ್ತಾಕಾರದಲ್ಲಿ ಸುರುಳಿಸುರುಳಿಯಾಗಿ ಈಜಿಕೊಂಡು ಸಮುದ್ರದ ಮೇಲ್ಭಾಗಕ್ಕೆ ಬರುತ್ತದೆ. ಗುಳ್ಳೆಗಳ ಆ ಚಿಕ್ಕ ‘ಬಲೆಯು’ ಆ ಜೀವಿಗಳನ್ನು ನೀರಿನ ಮೇಲ್ಮೈಯಲ್ಲಿ ಒಟ್ಟುಗೂಡಿಸುವಾಗ ತಿಮಿಂಗಿಲವು ಬಂದು, ಗವಿಯಂಥ ಬಾಯ್ತೆರೆದು ಚೆನ್ನಾಗಿ ಅಣಿಮಾಡಲ್ಪಟ್ಟಿರುವ ತನ್ನ ಈ ಭೋಜನವನ್ನು ಕಬಳಿಸಿಬಿಡುತ್ತದೆ.

ವಿಶೇಷವಾಗಿ ಸಂಶೋಧಕರ ಕುತೂಹಲವನ್ನು ಕೆರಳಿಸಿದಂಥ ವಿಷಯ ಯಾವುದೆಂದರೆ, ಬಾಗಿಸಲಾಗದ ದೇಹವುಳ್ಳ ಈ ಜೀವಿಯು ಉಹಿಸಲಾಗದಂಥ ರೀತಿಯಲ್ಲಿ 5 ಅಡಿಯಷ್ಟು ಚಿಕ್ಕ ಉದ್ದಳತೆಯ ವೃತ್ತಾಕಾರದಲ್ಲಿ ಹೇಗೆ ಸುತ್ತುತ್ತದೆಂಬುದೇ. ಇದರ ರಹಸ್ಯವು ತಿಮಿಂಗಿಲದ ಈಜು ಅಂಗಗಳಲ್ಲಿದೆಯೆಂದು ಅವರು ಪತ್ತೆಮಾಡಿದರು. ಆ ಅಂಗಗಳ ಮುಂದಿನ ಅಂಚು ವಿಮಾನದ ರೆಕ್ಕೆಯಂತೆ ನುಣುಪಾಗಿಲ್ಲ. ಅವಕ್ಕೆ ಗರಗಸದ ಹಲ್ಲುಸಾಲಿನಂತೆ ಹೊರಚಾಚಿರುವ ಉಬ್ಬುಗಳಿವೆ. ಇವುಗಳಿಗೆ ಗಂತಿಗಳು (ಟ್ಯೂಬರ್ಕಲ್ಸ್‌) ಎಂದು ಹೆಸರು.

ತಿಮಿಂಗಿಲವು ನೀರಿನಲ್ಲಿ ವೇಗವಾಗಿ ಚಲಿಸುತ್ತಿರುವಾಗ ಈ ಗಂತಿಗಳು ಮೇಲ್ಮುಖ ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ನೀರಿನ ಎಳೆತವನ್ನು ಕಡಿಮೆಗೊಳಿಸುತ್ತವೆ. ಹೇಗೆ? ಪ್ರಕೃತಿ ಚರಿತ್ರೆ (ಇಂಗ್ಲಿಷ್‌) ಎಂಬ ಪತ್ರಿಕೆಯು ವಿವರಿಸುವುದೇನೆಂದರೆ, ತಿಮಿಂಗಿಲವು ತುಂಬ ಕಡಿದಾದ ಕೋನಗಳಲ್ಲಿ ಮೇಲೇರುತ್ತಿರುವಾಗಲೂ ಈ ಗಂತಿಗಳು ನೀರು ಸುಗಮವಾಗಿ ವೃತ್ತಾಕಾರವಾಗಿ ಹರಿಯುತ್ತಾ ಈಜು ಅಂಗಗಳ ಮೇಲಿಂದ ವೇಗವಾಗಿ ಚಲಿಸುವಂತೆ ಮಾಡುತ್ತವೆ. ಒಂದುವೇಳೆ ಆ ಈಜು ಅಂಗಗಳ ಮುಂಭಾಗದ ಅಂಚು ನುಣುಪಾಗಿರುತ್ತಿದ್ದಲ್ಲಿ, ನೀರು ಆ ಅಂಗಗಳ ಹಿಂದೆ ಕುಲುಕಾಡುತ್ತಾ ಸುತ್ತುತ್ತಿರುತ್ತಿತ್ತು ಮತ್ತು ಮೇಲೆತ್ತುವ ಒತ್ತಡವು ಇಲ್ಲದಿರುತ್ತಿತ್ತು ಮತ್ತು ಇದರಿಂದಾಗಿ ತಿಮಿಂಗಿಲಕ್ಕೆ ಅಷ್ಟು ಚಿಕ್ಕದಾದ ಆವರ್ತನಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಈ ಆವಿಷ್ಕಾರವನ್ನು ಯಾವ ವಿಧದಲ್ಲಿ ಪ್ರಾಯೋಗಿಕವಾಗಿ ಬಳಸುವ ಸಾಧ್ಯತೆಗಳಿವೆ? ಒಂದುವೇಳೆ ವಿಮಾನಗಳ ರೆಕ್ಕೆಗಳನ್ನು ಈ ತಿಮಿಂಗಿಲಗಳ ಈಜು ಅಂಗಗಳಂತೆ ವಿನ್ಯಾಸಿಸಿದರೆ, ವಾಯುಹರಿತವನ್ನು ಬದಲಾಯಿಸಲಿಕ್ಕಾಗಿ ಹೆಚ್ಚಿನ ಮಡಿರೆಕ್ಕೆಗಳು ಇಲ್ಲವೆ ಬೇರೆ ಯಾಂತ್ರಿಕ ಸಾಧನಗಳ ಅಗತ್ಯವಿರಲಿಕ್ಕಿಲ್ಲ. ಅಲ್ಲದೆ ಅಂಥ ರೆಕ್ಕೆಗಳು ಹೆಚ್ಚು ಸುರಕ್ಷಿತವೂ ದುರಸ್ತಾಗಿಡಲು ಹೆಚ್ಚು ಸುಲಭವೂ ಆಗಿರುವವು. ಬಯೊಮೆಕ್ಯಾನಿಕ್ಸ್‌ ತಜ್ಞರಾದ ಜಾನ್‌ ಲಾಂಗ್‌ರವರ ಅಭಿಪ್ರಾಯವೇನೆಂದರೆ ಬೇಗನೆ ಒಂದು ದಿನ “ಪ್ರತಿಯೊಂದು ಜೆಟ್‌ಲೈನರ್‌ಗೆ, ಗೂನುಬೆನ್ನಿನ ತಿಮಿಂಗಿಲಗಳ ಈಜು ಅಂಗಗಳಲ್ಲಿರುವಂಥ ರೀತಿಯ ಉಬ್ಬುಗಳಿರುವುದನ್ನು ನಾವು ನೋಡುವ ಸಾಧ್ಯತೆ ಹೆಚ್ಚು.”

ಕಡಲಕಾಗೆಯ ರೆಕ್ಕೆಗಳ ಅನುಕರಣೆ

ಈಗಾಗಲೇ ಇರುವ ವಿಮಾನಗಳ ರೆಕ್ಕೆಗಳು ಹಕ್ಕಿಗಳ ರೆಕ್ಕೆಗಳ ನಕಲು ಎಂಬುದು ನಿಜ. ಆದರೆ ಇತ್ತೀಚೆಗೆ ಇಂಜಿನಿಯರರು ಈ ನಕಲುಮಾಡುವಿಕೆಯಲ್ಲಿ ದಾಪುಗಾಲನ್ನಿಟ್ಟಿದ್ದಾರೆ. ನ್ಯೂ ಸೈಅಂಟಿಸ್ಟ್‌ ಎಂಬ ಪತ್ರಿಕೆಯು ವರದಿಸುವುದು: “ವೇಗವಾಗಿ ಕೆಳಕ್ಕಿಳಿಯುವ, ಮೇಲಕ್ಕೇರುವ ಮತ್ತು ಒಂದೇ ಸ್ಥಳದಲ್ಲಿ ಗಾಳಿಯಲ್ಲಿ ತೂಗಾಡಲು ಕಡಲಕಾಗೆಗಿರುವ ಸಾಮರ್ಥ್ಯವುಳ್ಳ ಒಂದು ದೂರನಿಯಂತ್ರಿತ (ರಿಮೋಟ್‌-ಕಂಟ್ರೋಲ್‌) ವಾಯುನೌಕೆಯನ್ನು ಫ್ಲಾರಿಡ ವಿಶ್ವವಿದ್ಯಾನಿಲಯದ ಸಂಶೋಧಕರು ರಚಿಸಿದ್ದಾರೆ.”

ಕಡಲಕಾಗೆಗಳು ಅವುಗಳ ರೆಕ್ಕೆಗಳ ಬಾಗಿನಲ್ಲಿ ಇಲ್ಲವೆ ಹೆಗಲಿನ ಸಂದಿಗಳಲ್ಲಿ ರೆಕ್ಕೆಗಳನ್ನು ಮಡಚುತ್ತಾ ಗಾಳಿಯಲ್ಲಿ ಚಾಕಚಕ್ಯತೆಯಿಂದ ಮನಸೆಳೆಯುವಂಥ ರೀತಿಯಲ್ಲಿ ಹಾರಾಡುತ್ತವೆ. ರೆಕ್ಕೆಯನ್ನು ಬಾಗಿಸುವಂಥ ಈ ವಿನ್ಯಾಸವನ್ನು ನಕಲುಮಾಡುವ “60 ಸೆಂಟಿಮೀಟರಿನ ಆ ವಾಯುನೌಕೆಯು, ಅದರ ರೆಕ್ಕೆಗಳನ್ನು ಚಲಿಸುವಂತೆ ಮಾಡುವ ಲೋಹ ಕಂಬಗಳ ಸಾಲನ್ನು ನಿಯಂತ್ರಿಸಲು ಒಂದು ಚಿಕ್ಕ ಮೋಟಾರನ್ನು ಬಳಸುತ್ತದೆ” ಎಂದು ಆ ಪತ್ರಿಕೆಯು ಹೇಳುತ್ತದೆ. ಚಾಣಾಕ್ಷತನದಿಂದ ವಿನ್ಯಾಸಿಸಲ್ಪಟ್ಟಿರುವ ಈ ರೆಕ್ಕೆಗಳಿಂದಾಗಿ ಆ ಚಿಕ್ಕ ವಾಯುನೌಕೆಗೆ ತೂಗಾಡಲು ಮತ್ತು ಎತ್ತರವಾದ ಕಟ್ಟಡಗಳ ಮಧ್ಯೆ ತಟ್ಟನೆ ಕೆಳಕ್ಕಿಳಿಯಲು ಸಾಧ್ಯವಾಗುತ್ತದೆ. ತುಂಬ ಕುಶಲ ಚಲನೆಯ ಇಂಥ ವಾಯುನೌಕೆಯನ್ನು, ದೊಡ್ಡ ದೊಡ್ಡ ನಗರಗಳಲ್ಲಿ ರಾಸಾಯನಿಕ ಇಲ್ಲವೆ ಜೈವಿಕ ಶಸ್ತ್ರಗಳನ್ನು ಪತ್ತೆಹಚ್ಚಲಿಕ್ಕಾಗಿ ಇನ್ನಷ್ಟು ವಿಕಸಿಸಲು ಒಂದು ರಾಷ್ಟ್ರದ ಮಿಲಿಟರಿ ಸಂಘಟನೆಯು ಆಸಕ್ತಿತೋರಿಸಿದೆ.

ಹಲ್ಲಿಯ ಪಾದದ ನಕಲು

ನೆಲದ ಮೇಲಿರುವ ಜೀವಿಗಳಿಂದಲೂ ನಮಗೆ ಬಹಳಷ್ಟು ಕಲಿಯಲಿಕ್ಕಿದೆ. ಉದಾಹರಣೆಗಾಗಿ, ಗೆಕೊ ಎಂದು ಕರೆಯಲಾಗುವ ಮನೆಹಲ್ಲಿಗೆ, ಗೋಡೆಗಳ ಮೇಲೇರುವ ಮತ್ತು ಛಾವಣಿಗಳಿಗೆ ಮೇಲೆಕೆಳಗಾಗಿ ಅಂಟಿಕೊಳ್ಳುವ ಸಾಮರ್ಥ್ಯವಿದೆ. ಈ ಜೀವಿಯು ಅದರ ಆಶ್ಚರ್ಯಕರ ಸಾಮರ್ಥ್ಯಕ್ಕಾಗಿ ಬೈಬಲ್‌ ಸಮಯಗಳಲ್ಲೂ ಪ್ರಸಿದ್ಧವಾಗಿತ್ತು. (ಜ್ಞಾನೋಕ್ತಿ 30:28) ಗುರುತ್ವಾಕರ್ಷಣವನ್ನು ನಿರೋಧಿಸಲು ಈ ಹಲ್ಲಿಗಿರುವ ಸಾಮರ್ಥ್ಯದ ಗುಟ್ಟೇನು?

ಗಾಜಿನಷ್ಟು ನುಣುಪಾದ ಮೇಲ್ಮೈಗಳಿಗೂ ಅಂಟಿಕೊಳ್ಳಲು ಈ ಹಲ್ಲಿಗಿರುವ ಸಾಮರ್ಥ್ಯವು, ಅದರ ಪಾದಗಳ ಮೇಲೆಲ್ಲಾ ಇರುವ ಸೂಕ್ಷ್ಮ ಬಿರುಗೂದಲುಗಳಲ್ಲಿ (ಸೀಟೀ) ಇದೆ. ಆ ಪಾದಗಳಿಂದ ಯಾವುದೇ ಅಂಟು ಬರುವುದಿಲ್ಲ ಬದಲಿಗೆ, ಅವು ಅತಿ ಸೂಕ್ಷ್ಮವಾದ ಆಣ್ವಿಕ ಶಕ್ತಿಯನ್ನು ಬಳಸುತ್ತವೆ. ಎರಡೂ ಮೇಲ್ಮೈಗಳಲ್ಲಿರುವ ಅಣುಗಳು ಒಂದಕ್ಕೊಂದು ಅಂಟಿಕೊಳ್ಳಲು ಕಾರಣ, ವಾನ್‌ಡರ್‌ ವಾಲ್ಸ್‌ ಶಕ್ತಿಗಳು ಎಂದು ಕರೆಯಲಾಗುವ ಅತಿ ದುರ್ಬಲವಾದ ಆಕರ್ಷಕ ಶಕ್ತಿಗಳಾಗಿವೆ. ಸಾಮಾನ್ಯವಾಗಿ, ಗುರುತ್ವಾಕರ್ಷಣಾ ಶಕ್ತಿಯು ಈ ವಾನ್‌ಡರ್‌ ವಾಲ್ಸ್‌ ಶಕ್ತಿಗಳನ್ನು ಸುಲಭವಾಗಿ ಅಡಗಿಸುತ್ತದೆ. ಈ ಕಾರಣದಿಂದಲೇ ನೀವು ನಿಮ್ಮ ಕೈಗಳನ್ನು ಗೋಡೆಗೆ ಒತ್ತಿಕೊಂಡು ಹತ್ತಲಾರಿರಿ. ಆದರೆ ಹಲ್ಲಿಗಿರುವ ಆ ಸೂಕ್ಷ್ಮ ಬಿರುಗೂದಲುಗಳು, ಗೋಡೆಯೊಂದಿಗೆ ಅದಕ್ಕಿರುವ ಸಂಪರ್ಕದ ಕ್ಷೇತ್ರವನ್ನು ಹೆಚ್ಚಿಸುತ್ತದೆ. ಈ ವಾನ್‌ಡರ್‌ ವಾಲ್ಸ್‌ ಶಕ್ತಿಗಳು ಹಲ್ಲಿಯ ಪಾದದಲ್ಲೆಲ್ಲ ಇರುವ ಸಾವಿರಾರು ಬಿರುಗೂದಲಿಗೆ ತಗಲುವುದರಿಂದ ಉಲ್ಬಣಿಸುವಾಗ, ಆ ಪುಟ್ಟ ಹಲ್ಲಿಯ ಭಾರವನ್ನು ಹಿಡಿದಿಡುವಷ್ಟು ಆಕರ್ಷಕ ಶಕ್ತಿಯನ್ನು ಉತ್ಪಾದಿಸುತ್ತವೆ.

ಈ ಆವಿಷ್ಕಾರವನ್ನು ಯಾವುದಕ್ಕಾಗಿ ಬಳಸಬಹುದು? ಹಲ್ಲಿಯ ಪಾದಗಳ ಅನುಕರಣೆಮಾಡುತ್ತಾ ತಯಾರಿಸಲಾಗುವಂಥ ಸಿಂಥೆಟಿಕ್‌ ಉತ್ಪನ್ನಗಳನ್ನು, ಪ್ರಕೃತಿಯಿಂದಲೇ ನಕಲುಮಾಡಲಾಗಿರುವ ಇನ್ನೊಂದು ಉತ್ಪನ್ನವಾದ ವೆಲ್‌ಕ್ರೋಗೆ ಬದಲಿಯಾಗಿ ಉಪಯೋಗಿಸಸಾಧ್ಯವಿದೆ.a ಈ ಉತ್ಪನ್ನದಿಂದ ತಯಾರಿಸಲ್ಪಡುವ “ಗೆಕೊ ಪಟ್ಟೆಯು,” “ಎಲ್ಲಿ ರಾಸಾಯನಿಕ ಅಂಟುಸಾಮಗ್ರಿಗಳನ್ನು ಬಳಸಲು ಸಾಧ್ಯವಿಲ್ಲವೊ ಅಂಥ ವೈದ್ಯಕೀಯ ಉದ್ದೇಶಗಳಿಗಾಗಿ” ವಿಶೇಷವಾಗಿ ಉಪಯುಕ್ತವಾಗಿರುವುದು ಎಂದು ಒಬ್ಬ ಸಂಶೋಧಕನು ಹೇಳಿರುವುದನ್ನು ದಿ ಎಕಾನಮಿಸ್ಟ್‌ ಎಂಬ ಪತ್ರಿಕೆಯು ಉಲ್ಲೇಖಿಸುತ್ತದೆ.

ಕೀರ್ತಿ ಯಾರಿಗೆ ಸಲ್ಲಬೇಕು?

ಚೇಳಿನಂತೆ ನಡೆಯುವ, ಹಲವಾರು ಕಾಲುಗಳುಳ್ಳ ರೊಬಾಟ್‌ ಯಂತ್ರವನ್ನು ನ್ಯಾಷನಲ್‌ ಏರೋನೋಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಆ್ಯಡ್‌ಮಿನಿಸ್ಟ್ರೇಷನ್‌ ಈಗ ತಯಾರಿಸುತ್ತಾ ಇದೆ. ಮತ್ತು ಫಿನ್ಲೆಂಡ್‌ನ ಇಂಜಿನಿಯರರು ಈಗಾಗಲೇ, ಆರು ಕಾಲುಗಳುಳ್ಳ ಒಂದು ಟ್ರ್ಯಾಕ್ಟರನ್ನು ತಯಾರಿಸಿದ್ದಾರೆ. ಇದು, ದಾರಿಯಲ್ಲಿ ಎದುರಾಗುವ ಯಾವುದೇ ತಡೆಗಳನ್ನು ಒಂದು ದೈತ್ಯಾಕಾರದ ಕೀಟದಂತೆ ಹತ್ತಿ ದಾಟಿಕೊಂಡು ಹೋಗಬಲ್ಲದು. ಇನ್ನೂ ಕೆಲವು ಸಂಶೋಧಕರು, ಪೈನ್‌ ಮರದ ಕಾಯಿಯು ಹವಾಮಾನಕ್ಕನುಸಾರ ತೆರೆದುಕೊಳ್ಳುವ ಮತ್ತು ಮುಚ್ಚಿಕೊಳ್ಳುವ ವಿಧವನ್ನು ನಕಲುಮಾಡುತ್ತಾ ಚಿಕ್ಕ ಬೀಳುಮುಚ್ಚಳಗಳಿರುವಂಥ ಬಟ್ಟೆಯನ್ನು ರಚಿಸಿದ್ದಾರೆ. ಬಾಕ್ಸ್‌ಫಿಷ್‌ ಮೀನಿಗೆ, ಚಲನೆಯ ದಿಕ್ಕಿನಲ್ಲಿ ಕಡಿಮೆ ಪ್ರತಿರೋಧವಿರುವ ಆಶ್ಚರ್ಯಕರವಾದ ವಿನ್ಯಾಸವಿದೆ ಮತ್ತು ಇದನ್ನು ನಕಲುಮಾಡುವ ಒಂದು ವಾಹನವನ್ನು ಕಾರ್‌ ಉತ್ಪಾದಕ ಕಂಪನಿಯೊಂದು ತಯಾರಿಸುತ್ತಿದೆ. ಮತ್ತಿತರ ಸಂಶೋಧಕರು, ಆಬಲೋನಿ ಚಿಪ್ಪುಗಳಲ್ಲಿರುವ ಆಘಾತ ಚೋಷಕ ಅಂಶಗಳ ಬಗ್ಗೆ ಶೋಧ ನಡೆಸುತ್ತಿದ್ದಾರೆ. ಅವರ ಉದ್ದೇಶ, ದೇಹಕ್ಕಾಗಿ ಹೆಚ್ಚು ಹಗುರವಾದ ಆದರೆ ಹೆಚ್ಚು ಗಡುಸಾದ ರಕ್ಷಾಕವಚವನ್ನು ತಯಾರಿಸುವುದಾಗಿದೆ.

ಪ್ರಕೃತಿ ಎಷ್ಟೊಂದು ಒಳ್ಳೊಳ್ಳೆ ಉಪಾಯಗಳ ಭಂಡಾರವಾಗಿದೆಯೆಂದರೆ, ಸಂಶೋಧಕರು ಸಾವಿರಾರು ವಿಭಿನ್ನ ಜೀವಶಾಸ್ತ್ರೀಯ ವ್ಯೂಹಗಳನ್ನು ಪಟ್ಟಿಮಾಡುವ ದತ್ತಾಂಶದ ಸಂಗ್ರಹವನ್ನು ಇಟ್ಟಿದ್ದಾರೆ. “ವಿನ್ಯಾಸದಲ್ಲಿ ಇರುವ ಯಾವುದೇ ಸಮಸ್ಯೆಗಳಿಗೆ ಪ್ರಾಕೃತಿಕ ಪರಿಹಾರಗಳನ್ನು” ಈ ದತ್ತಾಂಶ ಸಂಗ್ರಹದಲ್ಲಿ ವಿಜ್ಞಾನಿಗಳು ಹುಡುಕಬಹುದು ಎಂದು ದಿ ಎಕಾನಮಿಸ್ಟ್‌ ಪತ್ರಿಕೆಯು ಹೇಳುತ್ತದೆ. ಈ ದತ್ತಾಂಶ ಸಂಗ್ರಹದಲ್ಲಿರುವ ಪ್ರಾಕೃತಿಕ ವ್ಯೂಹಗಳನ್ನು “ಜೈವಿಕ ಹಕ್ಕುಪತ್ರಗಳು” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಹಕ್ಕುಪತ್ರವುಳ್ಳವರು ಎಂದು ಹೇಳುವಾಗ ಅದು, ಒಂದು ಹೊಸ ಉಪಾಯ ಇಲ್ಲವೆ ಯಂತ್ರವನ್ನು ಕಾನೂನುಬದ್ಧವಾಗಿ ನೋಂದಾಯಿಸಿರುವ ಒಬ್ಬ ವ್ಯಕ್ತಿ ಇಲ್ಲವೆ ಕಂಪೆನಿಗೆ ಸೂಚಿಸುತ್ತದೆ. ಆದುದರಿಂದ, ಜೈವಿಕ ಹಕ್ಕುಪತ್ರ ದತ್ತಾಂಶಸಂಗ್ರಹದ ಬಗ್ಗೆ ಚರ್ಚಿಸುತ್ತಾ ದಿ ಎಕಾನಮಿಸ್ಟ್‌ ಪತ್ರಿಕೆಯು ಹೇಳುವುದು: “ಜೀವಾನುಕರಣ ವಿನ್ಯಾಸಗಳನ್ನು ‘ಜೈವಿಕ ಹಕ್ಕುಪತ್ರಗಳು’ ಎಂದು ಕರೆಯುವ ಮೂಲಕ, ವಾಸ್ತವದಲ್ಲಿ ಪ್ರಕೃತಿಯು ಹಕ್ಕುಪತ್ರವುಳ್ಳದ್ದೆಂಬ ಸಂಗತಿಯನ್ನು ಸಂಶೋಧಕರು ಒತ್ತಿಹೇಳುತ್ತಿದ್ದಾರೆ ಅಷ್ಟೇ.”

ಆದರೆ ಈ ಎಲ್ಲ ಒಳ್ಳೊಳ್ಳೆ ಉಪಾಯಗಳು ಪ್ರಕೃತಿಗೆ ಹೇಗೆ ಸಿಕ್ಕಿದವು? ಅನೇಕ ಸಂಶೋಧಕರು ಪ್ರಕೃತಿಯಲ್ಲಿ ಚಮತ್ಕಾರದಿಂದ ಬಂದಿರುವಂತೆ ತೋರುವ ವಿನ್ಯಾಸಗಳು, ಕೋಟಿಗಟ್ಟಲೆ ವರ್ಷಗಳ ಜೀವವಿಕಾಸದ ಪರೀಕ್ಷಾಪ್ರಯೋಗಗಳಿಂದಾಗಿ ಉಂಟಾಯಿತೆಂದು ಹೇಳುವರು. ಆದರೆ ಇತರ ಸಂಶೋಧಕರಿಗಿರುವ ಅಭಿಪ್ರಾಯವೇ ಬೇರೆ. ಸೂಕ್ಷ್ಮಜೀವಿವಿಜ್ಞಾನಿ ಮೈಕಲ್‌ ಬೀಹೀ, 2005ರಲ್ಲಿ ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆಯಲ್ಲಿ ಹೀಗೆ ಬರೆದರು: “[ಪ್ರಕೃತಿಯಲ್ಲಿ] ಸ್ಪಷ್ಟವಾಗಿ ಕಂಡುಬರುವ ವಿನ್ಯಾಸವು ಮನವರಿಕೆಮಾಡುವಂಥ ರೀತಿಯಲ್ಲಿ ಈ ಸರಳ ತರ್ಕವನ್ನು ಪ್ರಸ್ತುತಪಡಿಸುತ್ತದೆ: ನಡೆಯುವ, ತೋರುವ, ಹರಟುವ ರೀತಿ ಬಾತುಕೋಳಿಯಂತಿದ್ದು, ಅದಲ್ಲವೆಂದು ಹೇಳಲು ಬೇರಾವುದೇ ಪುರಾವೆಯಿಲ್ಲದಿರುವಾಗ, ಅದು ಬಾತುಕೋಳಿಯೇ ಎಂದು ಹೇಳಲು ನಮಗೆ ದೃಢವಾದ ಆಧಾರವಿದೆ.” ಅವರ ತೀರ್ಮಾನವೇನು? “ಯಾವುದನ್ನಾದರೂ ಜಾಗರೂಕತೆಯಿಂದ ರಚಿಸಲಾಗಿದೆಯೆಂಬುದು ತುಂಬ ಸ್ಪಷ್ಟವಾಗಿ ತೋರಿಬರುವಾಗ, ಆ ವಾಸ್ತವಾಂಶವನ್ನು ಅಲ್ಲಗಳೆಯಬಾರದು.”

ವಾಯುನೌಕೆಗಾಗಿ ಹೆಚ್ಚು ಸುರಕ್ಷಿತವಾದ, ಹೆಚ್ಚು ಕಾರ್ಯದಕ್ಷ ರೆಕ್ಕೆಗಳನ್ನು ವಿನ್ಯಾಸಿಸುವ ಒಬ್ಬ ಇಂಜಿನಿಯರ್‌ ತನ್ನ ವಿನ್ಯಾಸಕ್ಕಾಗಿ ಕೀರ್ತಿ ಪಡೆಯಲರ್ಹನು. ಅದೇ ರೀತಿಯಲ್ಲಿ, ಬಹುಕಾರ್ಯೋಪಯೋಗಿ ಬ್ಯಾಂಡೇಜನ್ನು, ಹೆಚ್ಚು ಹಿತವಾದ ಬಟ್ಟೆಯನ್ನು ಅಥವಾ ಹೆಚ್ಚು ಉತ್ತಮವಾಗಿ ಕೆಲಸಮಾಡುವ ಮೋಟಾರು ವಾಹನವನ್ನು ಕಂಡುಹಿಡಿದ ಹೆಗ್ಗಳಿಕೆ ಅದರ ಅನ್ವೇಷಕರಿಗೆ ಸಲ್ಲುವುದು ಉಚಿತ. ಆದರೆ, ಇನ್ನೊಬ್ಬ ವ್ಯಕ್ತಿಯ ರಚನೆಯನ್ನು ನಕಲುಮಾಡಿ, ಅದಕ್ಕೊಬ್ಬ ಮೂಲ ವಿನ್ಯಾಸಕನಿದ್ದಾನೆಂಬುದನ್ನು ಅಂಗೀಕರಿಸಲು ಒಪ್ಪದವನು ಇಲ್ಲವೆ ಅವನಿಗೆ ಕೀರ್ತಿ ಸಲ್ಲಿಸದಿರುವ ತಯಾರಕನನ್ನು ಪಾತಕಿಯೆಂದು ದೃಷ್ಟಿಸಲ್ಪಡುವ ಸಾಧ್ಯತೆಯಿದೆ.

ಹಾಗೆಯೇ ಉಚ್ಚ ತರಬೇತಿಯುಳ್ಳ ಸಂಶೋಧಕರು ತುಂಬ ಕ್ಲಿಷ್ಟಕರವಾದ ಇಂಜಿನಿಯರಿಂಗ್‌ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಪ್ರಕೃತಿಯಲ್ಲಿನ ವ್ಯೂಹಗಳನ್ನು ಸಾಧಾರಣಮಟ್ಟಿಗೆ ನಕಲುಮಾಡಿ ಅವುಗಳ ಮೂಲ ಉಪಾಯವನ್ನು ರಚಿಸುವ ಬುದ್ಧಿವಂತಿಕೆಗಾಗಿ, ಯಾರ ಬುದ್ಧಿವಂತಿಕೆಯೂ ಇಲ್ಲದೆ ನಡೆದಂಥ ಜೀವವಿಕಾಸಕ್ಕೆ ಕೀರ್ತಿಸಲ್ಲಿಸುವುದು ನಿಮಗೆ ತರ್ಕಬದ್ಧವೆಂದು ಅನಿಸುತ್ತದೊ? ನಕಲು ಮಾಡಿರುವ ಉತ್ಪನ್ನಕ್ಕೇ ಒಬ್ಬ ಬುದ್ಧಿಶಾಲಿ ವಿನ್ಯಾಸಕನ ಅಗತ್ಯವಿರುವಲ್ಲಿ, ಅಸಲಿ ಉತ್ಪನ್ನದ ಕುರಿತೇನು? ವಾಸ್ತವದಲ್ಲಿ ಯಾರಿಗೆ ಹೆಚ್ಚಿನ ಕೀರ್ತಿ ಸಲ್ಲಬೇಕು? ಅತಿ ಕುಶಲ ಕಲಾವಿದನಿಗೊ, ಅವನ ವಿಧಾನಗಳನ್ನು ನಕಲುಮಾಡುತ್ತಿರುವ ವಿದ್ಯಾರ್ಥಿಗೊ?

ಒಂದು ತರ್ಕಬದ್ಧ ತೀರ್ಮಾನ

ಪ್ರಕೃತಿಯಲ್ಲಿನ ವಿನ್ಯಾಸದ ಸಾಕ್ಷ್ಯವನ್ನು ವಿಮರ್ಶಿಸಿದ ಬಳಿಕ, ಚಿಂತನಾಶೀಲರಾದ ಅನೇಕ ಜನರು ಕೀರ್ತನೆಗಾರನ ಈ ಭಾವನೆಗಳನ್ನು ಪ್ರತಿಧ್ವನಿಸುತ್ತಾರೆ. ಅವನು ಬರೆದುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” (ಕೀರ್ತನೆ 104:24) ಬೈಬಲ್‌ ಲೇಖಕನಾದ ಪೌಲನು ಇದೇ ತೀರ್ಮಾನಕ್ಕೆ ಬಂದನು. ಅವನು ಬರೆದದ್ದು: “ಕಣ್ಣಿಗೆ ಕಾಣದಿರುವ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”​—⁠ರೋಮಾಪುರ 1:19, 20.

ಬೈಬಲನ್ನು ಗೌರವಿಸುವ ಮತ್ತು ದೇವರನ್ನು ನಂಬುವ ಅನೇಕ ಪ್ರಾಮಾಣಿಕ ಜನರ ವಾದವೇನೆಂದರೆ, ಪ್ರಕೃತಿಯಲ್ಲಿನ ಅದ್ಭುತಗಳನ್ನು ಸೃಷ್ಟಿಸಲಿಕ್ಕಾಗಿ ದೇವರು ಜೀವವಿಕಾಸವನ್ನು ಬಳಸಿದ್ದಿರಬಹುದೆಂದೇ. ಆದರೆ ಬೈಬಲ್‌ ಏನು ಬೋಧಿಸುತ್ತದೆ? (g 9/06)

[ಪಾದಟಿಪ್ಪಣಿ]

a ವೆಲ್‌ಕ್ರೋ, ಬರ್ಡಾಕ್‌ ಗಿಡದ ಬೀಜಗಳಲ್ಲಿ ಕಂಡುಬರುವ ವಿನ್ಯಾಸದ ಮೇಲೆ ಆಧರಿತವಾಗಿರುವ ಉತ್ಪನ್ನವಾಗಿದ್ದು, ಎರಡು ಪಟ್ಟಿಗಳನ್ನು ಒಂದರ ಮೇಲೊಂದು ಇಟ್ಟು ಅಮುಕಿದಾಗ ಹಿಡಿದುಕೊಳ್ಳುವ ಬಂಧನಿಯಾಗಿದೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಷ್ಟೊಂದು ಒಳ್ಳೊಳ್ಳೆ ಉಪಾಯಗಳು ಪ್ರಕೃತಿಗೆ ಹೇಗೆ ಸಿಕ್ಕಿದವು?

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರಕೃತಿಯ ಸ್ವಾಮ್ಯದ ಹಕ್ಕುಳ್ಳವನು ಯಾರು?

[ಪುಟ 7ರಲ್ಲಿರುವ ಚೌಕ/ಚಿತ್ರಗಳು]

ನಕಲು ಮಾಡಿರುವ ಉತ್ಪನ್ನಕ್ಕೇ ಒಬ್ಬ ಬುದ್ಧಿಶಾಲಿ ವಿನ್ಯಾಸಕನ ಅಗತ್ಯವಿರುವಲ್ಲಿ, ಅಸಲಿ ಉತ್ಪನ್ನದ ಕುರಿತೇನು?

ತುಂಬ ಕುಶಲ ಚಲನೆಯ ಈ ವಾಯುನೌಕೆಯ ರೆಕ್ಕೆಗಳು, ಕಡಲಕಾಗೆಯ ರೆಕ್ಕೆಯ ನಕಲಾಗಿವೆ

ಹಲ್ಲಿಯ ಪಾದಗಳು ಎಂದೂ ಕೊಳೆಯಾಗುವುದಿಲ್ಲ, ಅವು ಹೆಜ್ಜೆಗುರುತನ್ನು ಬಿಟ್ಟುಹೋಗುವುದಿಲ್ಲ, ಟೆಫ್ಲಾನ್‌ ಅನ್ನು ಬಿಟ್ಟು ಬೇರಾವುದೇ ಮೇಲ್ಮೈಗೆ ಹತ್ತಿಕೊಳ್ಳುತ್ತವೆ ಮತ್ತು ಸುಲಭವಾಗಿ ಅಂಟಿಕೊಳ್ಳುತ್ತವೆ ಹಾಗೂ ಬಿಡಿಸಿಕೊಳ್ಳುತ್ತವೆ. ಸಂಶೋಧಕರು ಅವುಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ

ಬಾಕ್ಸ್‌ಫಿಷ್‌ ಮೀನಿಗೆ, ಚಲನೆಯ ದಿಕ್ಕಿನಲ್ಲಿ ಕಡಿಮೆ ಪ್ರತಿರೋಧವಿರುವ ವಿಸ್ಮಯಕಾರಿ ವಿನ್ಯಾಸವಿದೆ. ಅಂಥದ್ದೇ ವಾಹನವೊಂದನ್ನು ರಚಿಸುವ ಉಪಾಯಕ್ಕೆ ಇದು ಸ್ಫೂರ್ತಿಯಾಗಿದೆ

[ಕೃಪೆ]

ವಿಮಾನ: Kristen Bartlett/ University of Florida; ಹಲ್ಲಿಯ ಪಾದ: Breck P. Kent; ಬಾಕ್ಸ್‌ಫಿಷ್‌ ಮತ್ತು ಕಾರು: Mercedes-Benz USA

[ಪುಟ 8ರಲ್ಲಿರುವ ಚೌಕ/ಚಿತ್ರಗಳು]

ಹುಟ್ಟರಿವಿನಿಂದಲೇ ವಿವೇಕಿಗಳಾಗಿರುವ ಸಂಚಾರ ನಿರ್ದೇಶಕರು

ಅನೇಕ ಜೀವಿಗಳು ಭೂಗ್ರಹದಲ್ಲಿ ಸಂಚರಿಸುವ ವಿಧದಿಂದ ಹುಟ್ಟರಿವಿನಿಂದಲೇ ಅವುಗಳಿಗಿರುವ ವಿವೇಕ ತೋರಿಬರುತ್ತದೆ. ಎರಡು ಉದಾಹರಣೆಗಳನ್ನು ಪರಿಗಣಿಸಿರಿ.

◼ ಇರುವೆ ಸಂಚಾರ ನಿಯಂತ್ರಣ ಆಹಾರವನ್ನು ಹುಡುಕಿಕೊಂಡು ಹೋಗುವ ಇರುವೆಗಳು ತಮ್ಮ ಗೂಡುಗಳಿಗೆ ಹಿಂದಿರುಗುವುದು ಹೇಗೆ? ಇರುವೆಗಳು ವಾಸನೆಯ ಗುರುತುಗಳನ್ನು ಬಿಟ್ಟುಹೋಗುವುದಲ್ಲದೆ, ಕೆಲವು ಇರುವೆಗಳು ಮನೆಗೆ ಸುಲಭವಾಗಿ ಹಿಂದಿರುಗುವಂತೆ ಸಹಾಯಮಾಡುವ ಹಾದಿಗಳನ್ನು ತಯಾರಿಸಲು ರೇಖಾಜ್ಯಾಮಿತಿಯನ್ನು ಉಪಯೋಗಿಸುತ್ತವೆ. ಉದಾಹರಣೆಗಾಗಿ, ಫೇರೋ ಆ್ಯಂಟ್ಸ್‌ ಎಂಬ ಹೆಸರಿನ ಇರುವೆಗಳು, “ಗೂಡಿನಿಂದ ಸೂರ್ಯನ ಕಿರಣಗಳಂತೆ ಹರಡಿರುವಂಥ ಹಾದಿಗಳನ್ನು ರಚಿಸುತ್ತವೆ. ಮುಂದೆ ಈ ಹಾದಿಗಳು 50ರಿಂದ 60 ಡಿಗ್ರಿ ಕೋನದಲ್ಲಿ ಕವಲೊಡೆಯುತ್ತವೆ” ಎಂದು ನ್ಯೂ ಸೈಯಂಟಿಸ್ಟ್‌ ಪತ್ರಿಕೆಯು ಹೇಳುತ್ತದೆ. ಈ ವಿನ್ಯಾಸದ ವಿಶೇಷತೆ ಏನು? ಒಂದು ಇರುವೆಯು ಗೂಡಿಗೆ ಹಿಂದಿರುಗುತ್ತಿರುವಾಗ ಆ ಹಾದಿಯು ಕವಲೊಡೆದಿರುವ ಬಿಂದುವಿಗೆ ಬಂದಾಗ ಅದು ಹುಟ್ಟರಿವಿನಿಂದ ಹೆಚ್ಚು ಓರೆಯಾಗಿರದ ಹಾದಿಯನ್ನು ಹಿಡಿದು ನೇರವಾಗಿ ಮುಂದಕ್ಕೆ ಹೋಗುತ್ತದೆ ಮತ್ತು ಹೀಗೆ ಖಂಡಿತವಾಗಿ ಗೂಡನ್ನು ತಲಪುತ್ತದೆ. ಆ ಲೇಖನವು ಹೇಳುವುದು: “ಕವಲೊಡೆಯುವ ಹಾದಿಗಳ ಈ ರೇಖಾಜ್ಯಾಮಿತಿಯು, ಆ ಹಾದಿಗಳ ಜಾಲದಲ್ಲಿ ಇರುವೆಗಳು ಸರಿಯಾದ ದಿಕ್ಕಿನಲ್ಲಿ ಓಡಾಡುವುದಕ್ಕೆ ಮತ್ತು ವಿಶೇಷವಾಗಿ ಅವು ಒಂದೇ ಹಾದಿಯಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುವಾಗ ಲಾಭದಾಯಕವಾಗಿದೆ. ಇದರಿಂದಾಗಿ, ಇರುವೆಗಳು ದಿಕ್ಕುತಪ್ಪಿ ತಮ್ಮ ಶಕ್ತಿ ಕಳಕೊಳ್ಳುವುದು ತಪ್ಪುತ್ತದೆ.”

◼ ಪಕ್ಷಿ ದಿಕ್ಸೂಚಿಗಳು ಅನೇಕ ಪಕ್ಷಿಗಳು ಚಾಚೂತಪ್ಪದಷ್ಟು ನಿಖರವಾಗಿ ದೀರ್ಘ ಅಂತರಗಳನ್ನು ದಾಟುತ್ತವೆ ಮತ್ತು ಎಲ್ಲ ವಿಧದ ಹವಾಮಾನದಲ್ಲೂ ಪ್ರಯಾಣಿಸುತ್ತವೆ. ಹೇಗೆ? ಪಕ್ಷಿಗಳು ಭೂಮಿಯ ಕಾಂತಕ್ಷೇತ್ರವನ್ನು ಗುರುತಿಸಬಲ್ಲವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆದರೆ ಭೂಮಿಯ “ಕಾಂತಕ್ಷೇತ್ರದ ರೇಖೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತವೆ ಮತ್ತು ಯಾವಾಗಲೂ ನಿಜವಾದ ಉತ್ತರದಿಕ್ಕಿಗೆ ಸೂಚಿಸುವುದಿಲ್ಲ” ಎಂದು ಸೈಯನ್ಸ್‌ ಪತ್ರಿಕೆಯು ಹೇಳುತ್ತದೆ. ವಲಸೆಹೋಗುತ್ತಿರುವ ಪಕ್ಷಿಗಳು ತಪ್ಪಾದ ದಿಕ್ಕಿನಲ್ಲಿ ಹಾರಿಹೋಗದಂತೆ ಯಾವುದು ತಡೆಯುತ್ತದೆ? ಪಕ್ಷಿಗಳು ತಮ್ಮ ಆಂತರಿಕ ದಿಕ್ಸೂಚಿಯನ್ನು, ಮುಳುಗುವ ಸೂರ್ಯನಿಗೆ ತಕ್ಕಂತೆ ಪ್ರತಿ ಸಾಯಂಕಾಲ ಸರಿಹೊಂದಿಸುತ್ತವೆಂಬುದು ವ್ಯಕ್ತ. ಆದರೆ ಸೂರ್ಯ ಅಸ್ತಮಿಸುವ ಸ್ಥಾನವು ಭೂಮಿಯ ಅಕ್ಷಾಂಶ ಮತ್ತು ಋತುಗಳಿಗನುಸಾರ ಬದಲಾಗುತ್ತಾ ಇರುತ್ತದೆ. ಆದುದರಿಂದ ಈ ಪಕ್ಷಿಗಳು, “ವರ್ಷದ ಸಮಯ ಯಾವುದೆಂದು ಹೇಳುವ [ಅವುಗಳಲ್ಲಿನ] ಒಂದು ಜೈವಿಕ ಗಡಿಯಾರ”ದಿಂದಾಗಿ ಆ ಬದಲಾವಣೆಗಳಿಗೆ ಸರಿದೂಗಲು ಶಕ್ತವಾಗುತ್ತವೆಂಬುದನ್ನು ಸಂಶೋಧಕರು ನೆನಸುತ್ತಾರೆಂದು ಸೈಯನ್ಸ್‌ ಪತ್ರಿಕೆ ಹೇಳುತ್ತದೆ.

ಇರುವೆಗೆ ರೇಖಾಜ್ಯಾಮಿತಿಯ ತಿಳಿವಳಿಕೆಯನ್ನು ಪ್ರೋಗ್ರ್ಯಾಮ್‌ ಮಾಡಿಕೊಟ್ಟವರು ಯಾರು? ಪಕ್ಷಿಗಳಿಗೆ ಒಂದು ದಿಕ್ಸೂಚಿ, ಒಂದು ಜೈವಿಕ ಗಡಿಯಾರ ಮತ್ತು ಇವುಗಳು ರವಾನಿಸುವ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಸಮರ್ಥ ಮಿದುಳನ್ನು ಕೊಟ್ಟವರು ಯಾರು? ಬುದ್ಧಿವಂತಿಕೆಯಿಲ್ಲದ ಜೀವವಿಕಾಸವೊ? ಇಲ್ಲವೆ ಬುದ್ಧಿವಂತಿಕೆಯುಳ್ಳ ಒಬ್ಬ ಸೃಷ್ಟಿಕರ್ತನೊ?

[ಕೃಪೆ]

© E.J.H. Robinson 2004

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ