ತನುಮನಗಳ ಚೇತನಕ್ಕೆ
“ಶಾಂತ ಹೃದಯವು ದೇಹಕ್ಕೆ ಜೀವ.”—ಜ್ಞಾನೋಕ್ತಿ 14:30, ಪವಿತ್ರ ಗ್ರಂಥ.
“ಹರ್ಷಹೃದಯವು ಒಳ್ಳೇ ಔಷಧ.” —ಜ್ಞಾನೋಕ್ತಿ 17:22.
● ಸರಳವಾದರೂ ಗಹನವಾದ ಆ ಮಾತುಗಳು ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನದ್ದು.a ಇದನ್ನು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ನುಡಿದನು. ಆದರೆ ಆ ಮಾತುಗಳು ನಿಜವೇ? ಆಧುನಿಕ ವೈದ್ಯಶಾಸ್ತ್ರ ಏನನ್ನುತ್ತದೆ?
ಶಾಂತವಾಗಿರುವ ಬದಲು ಸದಾ ಕೋಪ ತೋರಿಸುತ್ತಿರುವಲ್ಲಿ ಏನಾಗಬಹುದೆಂದು ಹೃದ್ರೋಗಕ್ಕೆ ಸಂಬಂಧಪಟ್ಟ ಒಂದು ಪತ್ರಿಕೆ ಹೇಳಿದ್ದು: “ಕೋಪ-ದ್ವೇಷಕ್ಕೂ ಪರಿಧಮನಿಯ ಹೃದ್ರೋಗಕ್ಕೂ [ಸಿಎಚ್‌ಡಿ] ಸಂಬಂಧವಿದೆ ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು.” ಆದ್ದರಿಂದ “ಸಿಎಚ್‌ಡಿಯನ್ನು ತಡೆಯಲು ಮತ್ತು ಗುಣಪಡಿಸಲು ಮದ್ದು-ಮಾತ್ರೆ ಮಾತ್ರ ಸಾಲದು, ಕೋಪ-ದ್ವೇಷವನ್ನು ಹತ್ತಿಕ್ಕುವಂಥ ಮನೋನಿಯಂತ್ರಣವೂ ಅಗತ್ಯ” ಎಂದಿತು ಆ ಪತ್ರಿಕೆ. ಇನ್ನೊಂದು ಮಾತಿನಲ್ಲಿ ಹೇಳಬೇಕಾದರೆ, ಶಾಂತ ಹೃದಯ ಆರೋಗ್ಯಕ್ಕೆ ಅಡಿಪಾಯ. ಇದೇ ಜ್ಞಾನೋಕ್ತಿ 14:30ರ ತಾತ್ಪರ್ಯ.
ಹರ್ಷದಿಂದಿರುವುದು ಸಹ ಆರೋಗ್ಯಕ್ಕೆ ಒಳ್ಳೇದು. ಸ್ಕಾಟ್ಲೆಂಡ್‌ನಲ್ಲಿ ಆರೋಗ್ಯಾಧಿಕಾರಿಯಾದ ಡಾಕ್ಟರ್ ಡೆರಿಕ್ ಕಾಕ್ಸ್‌ರವರ ಮಾತನ್ನು ಬಿಬಿಸಿ ನ್ಯೂಸ್ ಹೀಗೆ ವರದಿಸಿತು: “ಉಲ್ಲಾಸಿತ ಮನಸ್ಸಿನವರಿಗೆ ಕಾಯಿಲೆಗಳು ಕಡಿಮೆ. ಸದಾ ಕೊರಗುತ್ತಿರುವವರಿಗೆ ಕಾಯಿಲೆಗಳ ಹಾವಳಿ ಹೆಚ್ಚು.” ಅದೇ ವರದಿಯಲ್ಲಿ “ಉಲ್ಲಾಸಿತ ವ್ಯಕ್ತಿಗಳಿಗೆ ಹೃದ್ರೋಗ ಅಥವಾ ಲಕ್ವ ಹೊಡೆಯುವ ಸಾಧ್ಯತೆಯೂ ತೀರ ಕಡಿಮೆ” ಎಂದು ತಿಳಿಸಲಾಯಿತು.
ಮನುಷ್ಯನಿಗೆ ಈಗ ಗೊತ್ತಾಗಿರುವ ಈ ಸಂಗತಿಗಳು, ಸೊಲೊಮೋನನಿಗೂ ಬೈಬಲಿನ ಇತರ ಬರಹಗಾರರಿಗೂ ಸಾವಿರಾರು ವರ್ಷಗಳ ಹಿಂದೆ ತಿಳಿದುಬಂದದ್ದು ಹೇಗೆ? ‘ದೇವರು ಸೊಲೊಮೋನನಿಗೆ ಅಪರಿಮಿತವಾದ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು’ ಎನ್ನುತ್ತದೆ ಬೈಬಲ್. (1 ಅರಸುಗಳು 4:29) ಅಲ್ಲದೆ, ಅದನ್ನು ಎಲ್ಲರಿಗೂ ಅರ್ಥವಾಗುವಂಥ ರೀತಿಯಲ್ಲಿ ಬರೆದಿಡಲಾಗಿದೆ. ಇದನ್ನು ಪಡಕೊಳ್ಳಲು ನಾವು ಹಣವನ್ನೂ ಕೊಡಬೇಕಾಗಿಲ್ಲ!
ಆದ್ದರಿಂದ ಪ್ರತಿದಿನ ಬೈಬಲ್ ಓದುವುದನ್ನು ನಿಮ್ಮ ಜೀವನದ ರೂಢಿಯಾಗಿ ಮಾಡಿಕೊಳ್ಳಿ. ಆಗ ‘ಜ್ಞಾನವು ನಿಮ್ಮ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿಮ್ಮ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿಮಗೆ ಕಾವಲಾಗಿರುವದು, ವಿವೇಕವು ನಿಮ್ಮನ್ನು ಕಾಪಾಡುವದು.’ (ಜ್ಞಾನೋಕ್ತಿ 2:10, 11) ಲಕ್ಷಾಂತರ ಮಂದಿ ಈ ಮಾತುಗಳ ಸತ್ಯತೆಯನ್ನು ಕಂಡುಕೊಂಡಿದ್ದಾರೆ. ನೀವೂ ನೋಡಬಯಸುತ್ತೀರೆ? (g11-E 08)
[ಪಾದಟಿಪ್ಪಣಿ]
a ಬೈಬಲಿನಲ್ಲಿರುವ “ಹೃದಯ” ಎಂಬ ಪದ ಸಾಮಾನ್ಯವಾಗಿ ಒಬ್ಬನ ಆಂತರ್ಯಕ್ಕೆ ಸೂಚಿಸುತ್ತದೆ. ಇದರಲ್ಲಿ ಅವನ ಭಾವನೆಗಳೂ ಸೇರಿವೆ.