ಎಲ್ಲಿ ನೋಡಿದರೂ ಬರೀ ಅನ್ಯಾಯ ಕಣ್ಣಿಗೆ ಬೀಳುತ್ತಿತ್ತು
ಪ್ಯಾಟ್ರಿಕ್ ಓಕಾನ್
ನಾನು 1965ರಲ್ಲಿ ಉತ್ತರ ಐರ್ಲೆಂಡಿನಲ್ಲಿ ಹುಟ್ಟಿದೆ. ನಮ್ಮದು ಬಡ ಕುಟುಂಬ. ಕೌಂಟಿ ಡೆರ್ರಿ ಅನ್ನೋ ಸ್ಥಳದಲ್ಲಿ ಬೆಳೆದೆ. ಆಗ ಅಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರ ನಡುವೆ ಭಯಂಕರ ಕಿತ್ತಾಟ ನಡೆಯುತ್ತಿತ್ತು. 30 ವರ್ಷಗಳಿಗೂ ಹೆಚ್ಚು ಸಮಯ ಇತ್ತು ಈ ಕಿತ್ತಾಟ. ಪ್ರಾಟೆಸ್ಟೆಂಟರ ಸಂಖ್ಯೆ ಜಾಸ್ತಿ ಇತ್ತು. ಹಾಗಾಗಿ ಅಲ್ಪಸಂಖ್ಯಾತರಾಗಿದ್ದ ಕ್ಯಾಥೋಲಿಕರಿಗೆ ತುಂಬ ಭೇದಭಾವ ಮಾಡುತ್ತಿದ್ದರು. ಗೂಂಡಾಗಿರಿ, ಚುನಾವಣೆಯಲ್ಲಿ ಕಳ್ಳವೋಟಿನ ದಂಧೆ ಮತ್ತು ಕೆಲಸದಲ್ಲಿ, ವಸತಿ ಸೌಕರ್ಯದಲ್ಲಿ ಅನ್ಯಾಯ ಇಂಥ ಎಲ್ಲಾ ಆರೋಪಗಳನ್ನು ಹೊರಿಸುತ್ತಿದ್ದರು.
ಎಲ್ಲಿ ನೋಡಿದರೂ ಬರೀ ಅನ್ಯಾಯ, ಭೇದಭಾವ ಕಣ್ಣಿಗೆ ಬೀಳುತ್ತಿತ್ತು. ಅದೆಷ್ಟು ಸಲ ಒದೆ ತಿಂದಿದ್ದೇನೋ ಲೆಕ್ಕ ಇಲ್ಲ. ಎಷ್ಟೋ ಸಲ ಕಾರಿನಿಂದ ನನ್ನನ್ನ ಹೊರಗೆ ಎಳೆದು ತಲೆಗೆ ಗನ್ ಇಟ್ಟು ಬೆದರಿಸಿದ್ದರು. ಅದೆಷ್ಟು ಸಲ ಪೊಲೀಸರು, ಸೈನಿಕರು ನನ್ನನ್ನು ಹುಡುಕಿಕೊಂಡು ಬಂದಿದ್ದರು ಗೊತ್ತಿಲ್ಲ. ಎಲ್ಲದಕ್ಕೂ ನಾನೇ ಬಲಿಪಶು ಆಗುತ್ತಿದ್ದೆ. ಆಮೇಲೆ ಯೋಚಿಸಿದೆ ‘ಒಂದಿಲ್ಲ ಇದನ್ನೆಲ್ಲ ಸಹಿಸಿಕೊಂಡು ಸುಮ್ನಿರಬೇಕು ಇಲ್ಲಾ ಹೊಡೆದರೆ ತಿರುಗಿ ಹೊಡಿಬೇಕು!’
ಇಸವಿ 1972ರಲ್ಲಿ ನಡೆದ ‘ಬ್ಲಡಿ ಸಂಡೆ’ ಪ್ರತಿಭಟನಾ ಆಂದೋಲನದಲ್ಲಿ ಪಾಲ್ಗೊಂಡೆ. ಇದು ಬ್ರಿಟಿಷ್ ಸೈನಿಕರು ಗುಂಡಿಕ್ಕಿ ಕೊಂದ 14 ಜನರ ಸ್ಮರಣಾರ್ಥವಾಗಿತ್ತು. 1981ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿ ಕೈದಿಗಳು ಪ್ರಾಣಬಿಟ್ಟಿದ್ದರು. ಅವರ ಗೌರವಾರ್ಥವಾಗಿ ನಡೆದ ಪ್ರತಿಭಟನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದೆ. ಉತ್ತರ ಐರ್ಲೆಂಡಿನ ಬಾವುಟ ಹಾರಾಟವನ್ನು ನಿಷೇಧಿಸಿದ್ದರು. ಆದರೂ ನಾನು ಅಲ್ಲಲ್ಲಿ ಬಾವುಟಗಳನ್ನು ಕಟ್ಟಿಡುತ್ತಿದ್ದೆ. ಬ್ರಿಟಿಷ್ ವಿರೋಧಿ ವಾಕ್ಯಗಳನ್ನು ಸಿಕ್ಕಿದಲ್ಲೆಲ್ಲ ಗೀಚಿಡುತ್ತಿದ್ದೆ. ಪ್ರತಿಭಟನೆ ಮಾಡೋ ಉದ್ದೇಶಕ್ಕಾಗಿನೇ ಒಬ್ಬ ಕ್ಯಾಥೋಲಿಕನ ಕೊಲೆ ನಡೆಯುತ್ತಿತ್ತು. ಎಷ್ಟೋ ಸಲ ಒಂದು ಚಿಕ್ಕ ರ್ಯಾಲಿ ಅಂತ ಶುರುವಾಗಿ ದೊಡ್ಡ ದೊಂಬಿಗೆ ತಿರುಗಿದ್ದಿದೆ.
ಕಾಲೇಜಿನಲ್ಲಿದ್ದಾಗ ನಾನು ಪರಿಸರ ಪರ ಪ್ರತಿಭಟನೆಯಲ್ಲಿ ಸೇರಿಕೊಳ್ಳುತ್ತಿದ್ದೆ. ಸ್ವಲ್ಪ ಸಮಯದ ನಂತರ ಲಂಡನ್ಗೆ ಹೋದೆ. ಅಲ್ಲಿ ಸರ್ಕಾರದ ನಿಯಮಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸೇರಿಕೊಂಡೆ. ಆ ನಿಯಮಗಳು ಬಡವರಿಂದ ಹಣ ಕಿತ್ತುಕೊಂಡು ಶ್ರೀಮಂತರಿಗೆ ಪ್ರಯೋಜನ ತರುತ್ತಿದ್ದ ಹಾಗೆ ನನಗೆ ಅನಿಸುತ್ತಿತ್ತು. ವ್ಯಾಪಾರ-ವಾಣಿಜ್ಯ ಸಂಘಗಳು ಸಂಬಳ ಕಡಿತದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯಲ್ಲೂ ಸೇರಿಕೊಂಡಿದ್ದೆ. 1990ರಲ್ಲಿ ಪೋಲ್ ತೆರಿಗೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸೇರಿಕೊಂಡೆ. ಆ ಪ್ರತಿಭಟನಾಕಾರರು ಟ್ರಫಲ್ಗರ್ ಸ್ಕ್ವೇರ್ ಅನ್ನೋ ಸ್ಥಳವನ್ನು ಸಿಕ್ಕಾಪಟ್ಟೆ ಹಾಳುಮಾಡಿದ್ದರು.
ಹೋಗ್ತಾ ಹೋಗ್ತಾ ನನಗೆ ತಪ್ಪಿನ ಅರಿವಾಯಿತು. ಪ್ರತಿಭಟನೆಯಿಂದ ನಮ್ಮೊಳಗೆ ಹಗೆ ಜಾಸ್ತಿ ಆಗುತ್ತಿತ್ತು ಬಿಟ್ಟರೆ ಗುರಿ ಸಾಧಿಸುತ್ತಿರಲಿಲ್ಲ.
ಅದೇ ಸಮಯಕ್ಕೆ ನನ್ನ ಸ್ನೇಹಿತನೊಬ್ಬ ನನಗೆ ಯೆಹೋವನ ಸಾಕ್ಷಿಗಳ ಪರಿಚಯ ಮಾಡಿಸಿಕೊಟ್ಟ. ಸಾಕ್ಷಿಗಳು ನನಗೆ ಬೈಬಲಿನಿಂದ ಹಲವು ವಿಷಯಗಳನ್ನು ಹೇಳಿಕೊಟ್ಟರು. ದೇವರು ನಮ್ಮ ಕಷ್ಟಗಳನ್ನೆಲ್ಲ ನೋಡ್ತಿದ್ದಾನೆ, ಮನುಷ್ಯನಿಂದ ಆಗುತ್ತಿರೋ ಹಾನಿಯನ್ನೆಲ್ಲ ದೇವರು ಸರಿಪಡಿಸ್ತಾನೆ ಅನ್ನೋ ವಿಷಯಗಳನ್ನು ಕಲಿಸಿಕೊಟ್ಟರು. (ಯೆಶಾಯ 65:17; ಪ್ರಕಟನೆ 21:3, 4) ಎಷ್ಟೇ ಒಳ್ಳೇ ಉದ್ದೇಶಗಳನ್ನು ಇಟ್ಟುಕೊಂಡರೂ ಮನುಷ್ಯನಿಗೆ ನ್ಯಾಯ, ಸಮಾನತೆಯನ್ನು ಭೂಮಿಯಲ್ಲಿ ಸ್ಥಾಪಿಸಕ್ಕಾಗಲ್ಲ. ಲೋಕದ ಸಮಸ್ಯೆಗಳ ಹಿಂದೆ ಇರುವ ಸೈತಾನನನ್ನು ಸದೆಬಡಿಯಲು ಯೆಹೋವ ದೇವರ ಶಕ್ತಿಯಿಂದ ಮಾತ್ರ ಸಾಧ್ಯ.—ಯೆರೆಮೀಯ 10:23; ಎಫೆಸ 6:12.
ಅನ್ಯಾಯದ ವಿರುದ್ಧ ನಾನು ಮಾಡಿದ್ದ ಪ್ರತಿಭಟನೆಗಳೆಲ್ಲ ವ್ಯರ್ಥ. ಅದು ಮುಳುಗುತ್ತಿರುವ ಹಡಗಿನಲ್ಲಿರುವ ಕುರ್ಚಿಯನ್ನು ಸರಿಪಡಿಸಲು ಪ್ರಯತ್ನಿಸಿದ ಹಾಗೆ ಇತ್ತು. ನಮ್ಮ ಈ ಭೂಗ್ರಹದ ಮೇಲೆ ಅನ್ಯಾಯದ ಸುಳಿವೇ ಇರಲ್ಲ, ಯಾರೂ ಭೇದಭಾವ ಮಾಡಲ್ಲ ಅಂತ ಕಲಿತ ಮೇಲೆ ಮನಸ್ಸಿಗೆಷ್ಟು ನೆಮ್ಮದಿ ಸಿಕ್ಕಿದೆ ಗೊತ್ತಾ!
“ಯೆಹೋವನು ನ್ಯಾಯವನ್ನು ಮೆಚ್ಚುವವನು” ಅಂತ ಬೈಬಲ್ಹೇಳುತ್ತದೆ. (ಕೀರ್ತನೆ 37:28) ಹಾಗಾಗಿ ಮನುಷ್ಯನಿಂದ ತರಲು ಸಾಧ್ಯವಾಗದ ನ್ಯಾಯವನ್ನು ದೇವರು ತರುತ್ತಾನೆ ಅಂತ ಸಂಪೂರ್ಣವಾಗಿ ನಂಬಬಹುದು. (ದಾನಿಯೇಲ 2:44) ಇದರ ಬಗ್ಗೆ ನಿಮಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಇಷ್ಟವಿರುವಲ್ಲಿ ನಿಮ್ಮ ಊರಲ್ಲಿ ಇರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ www.jw.org ನಮ್ಮ ವೆಬ್ಸೈಟಿಗೆ ಭೇಟಿ ನೀಡಿ. (g13-E 07)
[ಪುಟ 8ರಲ್ಲಿರುವ ಚಿತ್ರಗಳು]
[ಕೃಪೆ]
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರ]
ಎಷ್ಟೇ ಒಳ್ಳೇ ಉದ್ದೇಶಗಳನ್ನು ಇಟ್ಟುಕೊಂಡರೂ ಮನುಷ್ಯನಿಗೆ ನ್ಯಾಯ, ಸಮಾನತೆಯನ್ನು ಭೂಮಿಯಲ್ಲಿ ಸ್ಥಾಪಿಸಕ್ಕಾಗಲ್ಲ
Protest images: Copyright Homer Sykes