ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g17 ನಂ. 1 ಪು. 10-11
  • ಕರುಳಿನ ನರ ಮಂಡಲ—ನಮ್ಮ “ಎರಡನೇ ಮೆದುಳು!”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕರುಳಿನ ನರ ಮಂಡಲ—ನಮ್ಮ “ಎರಡನೇ ಮೆದುಳು!”
  • ಎಚ್ಚರ!—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ರಾಸಾಯನಿಕ ಕಾರ್ಖಾನೆ”
  • ಒಳ್ಳೆಯ ಸಂಪರ್ಕ
  • ಪರಿವಿಡಿ
    ಎಚ್ಚರ!—2017
ಎಚ್ಚರ!—2017
g17 ನಂ. 1 ಪು. 10-11
ಜೀರ್ಣಾಂಗವ್ಯೂಹದಲ್ಲಿರುವ ಕರುಳಿನ ನರ ಮಂಡಲ

ಜೀರ್ಣಾಂಗವ್ಯೂಹದಲ್ಲಿರುವ ಕರುಳಿನ ನರ ಮಂಡಲ ಅಥವಾ ENS (ನೀಲಿ ಬಣ್ಣದಲ್ಲಿದೆ).

ಕರುಳಿನ ನರಮಂಡಲ ನಮ್ಮ “ಎರಡನೇ ಮೆದುಳು!”

ನಿಮಗೆ ಎಷ್ಟು ಮೆದುಳು ಇದೆ? “ಒಂದು” ಅಂತ ನೀವು ಉತ್ತರಿಸಿದರೆ ಅದು ಸರಿನೇ. ಆದರೆ, ದೇಹದಲ್ಲಿ ಮೆದುಳಿನ ಥರ ಇನ್ನೂ ಹಲವಾರು ನರಮಂಡಲಗಳಿವೆ. ಅವುಗಳಲ್ಲಿನ ನರಕೋಶಗಳ ಒಂದು ಜಾಲ ಎಷ್ಟು ವ್ಯಾಪಕವಾಗಿದೆ ಅಂದರೆ ಅದನ್ನು ಕೆಲವು ವಿಜ್ಞಾನಿಗಳು “ಎರಡನೇ ಮೆದುಳು” ಎಂದು ಕರೆದಿದ್ದಾರೆ! ಈ ಎರಡನೇ ಮೆದುಳೇ “ಕರುಳಿನ ನರ ಮಂಡಲ” (ENS). ಇದು ಮೆದುಳಿನ ಹಾಗೆ ತಲೆಯಲ್ಲಿ ಅಲ್ಲ, ಹೊಟ್ಟೆಯಲ್ಲಿ ಇರುತ್ತದೆ.

ತಿಂದ ಆಹಾರವನ್ನು ಶಕ್ತಿಯನ್ನಾಗಿ ಮಾರ್ಪಡಿಸಲು ನಮ್ಮ ದೇಹದ ಒಳಗಿನ ಅಂಗಗಳು ತುಂಬಾ ಕೆಲಸ ಮಾಡಬೇಕು ಮತ್ತು ಒಂದಕ್ಕೊಂದು ಸಹಕಾರ ಕೊಡಬೇಕು. ಆದ್ದರಿಂದ ಜೀರ್ಣಕ್ರಿಯೆಯ ಬಹುತೇಕ ಕೆಲಸವನ್ನು ಮೆದುಳು ENSಗೆ ವಹಿಸುತ್ತದೆ.

ENSನ ರಚನೆ ಮೆದುಳಿಗಿಂತ ಸರಳವಾಗಿದ್ದರೂ ತುಂಬಾ ಕ್ಲಿಷ್ಟಕರವಾಗಿದೆ. ಮನುಷ್ಯರ ಕರುಳಿನ ನರ ಮಂಡಲದಲ್ಲಿ ಸುಮಾರು 20-60 ಕೋಟಿ ನರಕೋಶಗಳಿವೆ. ನರಕೋಶಗಳ ಈ ಕ್ಲಿಷ್ಟಕರ ರಚನೆ ಜೀರ್ಣಾಂಗವ್ಯೂಹದಲ್ಲಿ ಇದೆ. ENSನ ಕೆಲಸವನ್ನು ಒಂದುವೇಳೆ ಮೆದುಳೇ ಮಾಡಬೇಕಾಗಿ ಬಂದಿದ್ದರೆ ಮೆದುಳಿನಲ್ಲಿ ನರಗಳು ದಟ್ಟವಾಗಿ ಇರಬೇಕಾಗುತ್ತಿತ್ತು. “ಜೀರ್ಣಾಂಗವ್ಯೂಹ ತನ್ನ ಕೆಲಸವನ್ನು ತಾನೇ ನಿರ್ವಹಿಸುವುದರಿಂದ ಈ ಕೆಲಸವನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ಮಾಡಲು ಸಾಧ್ಯವಾಗಿದೆ” ಎಂದು ದಿ ಸೆಕೆಂಡ್‌ ಬ್ರೇನ್‌ ಎಂಬ ಪುಸ್ತಕ ಹೇಳುತ್ತದೆ.

“ರಾಸಾಯನಿಕ ಕಾರ್ಖಾನೆ”

ಆಹಾರ ಜೀರ್ಣವಾಗಬೇಕಾದರೆ ನಿರ್ದಿಷ್ಟ ರಾಸಾಯನಿಕಗಳು ಸರಿಯಾದ ಸಮಯದಲ್ಲಿ ಮಿಶ್ರಣವಾಗಿ ಸರಿಯಾದ ಜಾಗಗಳಿಗೆ ಹೋಗಬೇಕು. “ಜೀರ್ಣಾಂಗವ್ಯೂಹವು ಒಂದು ರಾಸಾಯನಿಕ ಕಾರ್ಖಾನೆ” ಎಂದು ಪ್ರೋಫೆಸರ್‌ ಗ್ಯಾರಿ ಮಾವೇ ಹೇಳಿರುವುದು ತುಂಬಾ ಸೂಕ್ತ. ಈ ಕ್ರಮಬದ್ಧವಾಗಿ ನಡೆಯುವ ರಾಸಾಯನಿಕ ಕ್ರಿಯೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಉದಾಹರಣೆಗೆ, ಕರುಳಿನ ಒಳಪದರವು ವಿಶೇಷವಾದ ಜೀವಕೋಶಗಳಿಂದ ಆವೃತವಾಗಿದೆ. ಇವು ಆಹಾರದಲ್ಲಿನ ರಾಸಾಯನಿಕವನ್ನು ಪತ್ತೆ ಹಚ್ಚುವ, ಆಹಾರದ ರುಚಿಯನ್ನು ತಿಳಿಯುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲಾ ಮಾಹಿತಿಯ ಸಹಾಯದಿಂದ ENS ಯಾವ ನಿರ್ದಿಷ್ಟ ಕಿಣ್ವಗಳಿಂದ ಆಹಾರ ಜೀರ್ಣವಾಗುತ್ತದೆ ಎಂದು ಗುರುತಿಸುತ್ತದೆ. ನಂತರ ನಮ್ಮ ದೇಹವು ಆಹಾರದಲ್ಲಿರುವ ಸಾರವನ್ನು ಹೀರಿಕೊಳ್ಳುತ್ತದೆ. ದೇಹದಲ್ಲಿನ ಆಮ್ಲತೆಯನ್ನು ಮತ್ತು ಆಹಾರದಲ್ಲಿನ ರಾಸಾಯನಿಕಗಳನ್ನು ಸರಿಯಾಗಿ ನಿಯಂತ್ರಿಸುವುದರಲ್ಲಿ ಮತ್ತು ಜೀರ್ಣಕ್ರಿಯೆಯ ಕಿಣ್ವಗಳನ್ನು ಹೊಂದಿಸುವುದರಲ್ಲಿ ENS ಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀರ್ಣಾಂಗವು ಒಂದು ಕಾರ್ಖಾನೆಯಲ್ಲಿ ವಸ್ತುಗಳನ್ನು ಸಾಲಾಗಿ ಸಾಗಿಸುವ ವ್ಯವಸ್ಥೆಯಂತಿದ್ದು, ಇದನ್ನು ಮುಖ್ಯವಾಗಿ ENS ನಿರ್ವಹಿಸುತ್ತದೆ. ಈ ENS ಅಥವಾ “ಎರಡನೇ ಮೆದುಳು” ಆಹಾರವನ್ನು ಜೀರ್ಣಾಂಗವ್ಯೂಹದ ಮೂಲಕ ಸಾಗಿಸುತ್ತದೆ. ಹೀಗೆ ಸಾಗಿಸುವಂತೆ ಜೀರ್ಣಾಂಗ ವ್ಯವಸ್ಥೆಯ ಒಳಪದರದ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ENS ಈ ಸ್ನಾಯುಗಳ ಸಂಕುಚಿತದ ಬಲವನ್ನು ಮತ್ತು ವೇಗವನ್ನು ನಿಯಂತ್ರಿಸುತ್ತದೆ.

ಇದು ಸುರಕ್ಷಾ ಕೆಲಸವನ್ನು ಸಹ ನೋಡಿಕೊಳ್ಳುತ್ತದೆ. ನೀವು ಸೇವಿಸುವ ಆಹಾರದಲ್ಲಿ ಸಾಮಾನ್ಯವಾಗಿ ಹಾನಿಕಾರಕ ಬ್ಯಾಕ್ಟಿರೀಯಗಳು ಇರುತ್ತವೆ. ಆದ್ದರಿಂದ ರೋಗನಿರೋಧಕ ಶಕ್ತಿಗೆ ಅಗತ್ಯವಾದ ಲಿಂಫೊಸೈಟ್‌ ಕೋಶಗಳು ನಿಮ್ಮ ಹೊಟ್ಟೆಯಲ್ಲಿ 70-80 ಪ್ರತಿಶತ ಇರುತ್ತವೆ. ಒಂದುವೇಳೆ, ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿ ದೇಹದೊಳಗೆ ಪ್ರವೇಶಿಸಿದರೆ ENS ನಿಮ್ಮ ರಕ್ಷಣೆಗೆ ಬರುತ್ತದೆ. ಇದಕ್ಕಾಗಿ ಅದು ಸ್ನಾಯುಗಳನ್ನು ಹೆಚ್ಚು ಸಂಕುಚಿತಗೊಳಿಸಿ ಹಾನಿಕಾರಕ ಅಂಶಗಳನ್ನು ವಾಂತಿ ಮತ್ತು ಭೇದಿಯ ಮೂಲಕ ಹೊರಹಾಕುತ್ತದೆ.

ಒಳ್ಳೆಯ ಸಂಪರ್ಕ

ENS ಸ್ವತಂತ್ರವಾಗಿ ಕೆಲಸ ಮಾಡುವುದಾದರೂ ಇದು ಮೆದುಳಿನೊಂದಿಗೆ ಸತತವಾಗಿ ಸಂಪರ್ಕ ಹೊಂದಿರುತ್ತದೆ. ಉದಾಹರಣೆಗೆ, ಯಾವಾಗ ತಿನ್ನಬೇಕು, ಎಷ್ಟು ತಿನ್ನಬೇಕು ಎಂಬ ಮಾಹಿತಿಯನ್ನು ಮೆದುಳಿಗೆ ತಿಳಿಸುವ ಹಾರ್ಮೋನುಗಳನ್ನು ENS ನಿಯಂತ್ರಿಸುತ್ತದೆ. ಹೊಟ್ಟೆ ತುಂಬಿದಾಗ ಆ ಮಾಹಿತಿಯನ್ನು ಮೆದುಳಿಗೆ ನರಕೋಶಗಳ ಮೂಲಕ ತಿಳಿಸುತ್ತದೆ ಮತ್ತು ಇನ್ನೂ ಹೆಚ್ಚು ತಿಂದರೆ ವಾಕರಿಕೆ ತರಿಸುತ್ತದೆ.

ಮೆದುಳಿಗೂ ಜೀರ್ಣಾಂಗವ್ಯೂಹಕ್ಕೂ ಸಂಪರ್ಕವಿದೆ ಎಂದು ಈ ಲೇಖನವನ್ನು ಓದುವ ಮುಂಚೆಯೇ ನಿಮಗೆ ಅನಿಸಿರಬಹುದು. ಸಾಮಾನ್ಯವಾಗಿ ಕೊಬ್ಬಿನಾಂಶ ಇರುವ ಆಹಾರವನ್ನು ತಿಂದಾಗ ಖುಷಿಯಾಗುತ್ತದೆ. ಇಂತಹ ಆಹಾರ ತಿಂದಾಗ ENS ಮೆದುಳಿಗೆ ಸಂತೋಷದ ಸೂಚನೆಯನ್ನು ಕಳುಹಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಆಗ ನಿಮಗೆ ಸಂತೋಷ ಆಗುತ್ತದೆ. ಅದಕ್ಕೇ, ಜನರು ಒತ್ತಡದಲ್ಲಿದ್ದಾಗ ಅವರಿಗಿಷ್ಟವಾಗುವ ಆಹಾರವನ್ನು ತಿನ್ನಬೇಕೆಂದು ಬಯಸುತ್ತಾರೆ. ಖಿನ್ನತೆಗೆ ಒಳಗಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಜ್ಞಾನಿಗಳು ENS ಅನ್ನು ಕೃತಕವಾಗಿ ಪ್ರೇರೇಪಿಸುವ ವಿಧಾನಗಳಿಗಾಗಿ ಹುಡುಕುತ್ತಿದ್ದಾರೆ.

ಮೆದುಳು ಮತ್ತು ಜೀರ್ಣಾಂಗವ್ಯೂಹದ ಮಧ್ಯೆ ಸಂಪರ್ಕ ಇದೆ ಎಂದು ತಿಳಿಸುವ ಮತ್ತೊಂದು ಉದಾಹರಣೆಯು ನಿಮಗಾಗುವ ಒತ್ತಡ. ಮೆದುಳು ಒತ್ತಡಕ್ಕೆ ಒಳಗಾದಾಗ ENS ಹೊಟ್ಟೆಯ ಕಡೆಗೆ ರಕ್ತ ಹರಿಯದಂತೆ ತಡೆಯುತ್ತದೆ. ಒತ್ತಡದಲ್ಲಿದ್ದಾಗ ಮೆದುಳು ENSಗೆ ಸಂದೇಶವನ್ನು ಕಳುಹಿಸುವ ಮೂಲಕ ಕರುಳಿನ ಸಾಮಾನ್ಯ ಸಂಕುಚನಗಳನ್ನು ಬದಲಾಯಿಸುತ್ತದೆ. ಹಾಗಾಗಿ ವಾಕರಿಕೆಯಾಗುತ್ತದೆ. ಈ ಅನಿಸಿಕೆ ಬರಲು ಕರುಳು ಮತ್ತು ಮೆದುಳಿಗಿರುವ ಸಂಬಂಧ ಸಹ ಕಾರಣವಾಗಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ENS ನಮ್ಮಲ್ಲಿ ಇಂತಹ ಅನಿಸಿಕೆಗಳನ್ನು ತರಬಹುದಾದರೂ ಅದು ಮೆದುಳಿನಂತೆ ಯೋಚಿಸುವ, ನಿರ್ಧಾರ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಅದು ನಿಜವಾದ ಮೆದುಳಲ್ಲ, ಒಂದು ಹಾಡು ಬರೆಯಲು, ಲೆಕ್ಕಾಚಾರ ಮಾಡಲು, ಹೋಮ್‌ವರ್ಕ್‌ ಮಾಡಲು ಅದು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದರೂ, ಈ ಅದ್ಭುತ ವ್ಯವಸ್ಥೆ ತನ್ನ ಕ್ಲಿಷ್ಟಕರ ರಚನೆಯಿಂದ ವಿಜ್ಞಾನಿಗಳನ್ನು ಆಶ್ಚರ್ಯಪಡಿಸುತ್ತಲೇ ಇದೆ. ವಿಜ್ಞಾನಿಗಳಿಗೆ ಇದರ ಬಗ್ಗೆ ತಿಳಿದಿರುವುದು ಅಲ್ಪಸ್ವಲ್ಪವಷ್ಟೆ. ಇನ್ನೂ ತಿಳಿಯಬೇಕಾಗಿರುವುದು ಬೆಟ್ಟದಷ್ಟಿದೆ! ಸರಿ ಹಾಗಾದ್ರೆ, ಮುಂದಿನ ಸಲ ಊಟಮಾಡುವ ಮುಂಚೆ ಒಂದು ಕ್ಷಣ ನಿಮ್ಮ ಜೀರ್ಣ ವ್ಯವಸ್ಥೆಯಲ್ಲಿ ನಡೆಯುವ ನಿರ್ವಹಣೆ, ಮಾಹಿತಿ ರವಾನೆ, ಸಂಯೋಜನೆ, ಮಾಹಿತಿ ವಿನಿಮಯದ ಬಗ್ಗೆ ಸ್ವಲ್ಪ ಯೋಚಿಸಿ. ◼

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ