ಕಷ್ಟಪಟ್ಟು ಕೆಲಸಮಾಡಲು ಕಲಿಯುವುದು ವ್ಯಾಯಾಮದಂತಿದ್ದು ಅದರಿಂದ ಈಗಲೂ ಮುಂದಕ್ಕೂ ಪ್ರಯೋಜನವಾಗುತ್ತದೆ
ಯುವಜನರಿಗಾಗಿ
11 ಶ್ರಮಶೀಲತೆ
ಅರ್ಥವೇನು?
ಶ್ರಮಜೀವಿಗಳು ಕೆಲಸಗಳ್ಳರಲ್ಲ. ಸ್ವಂತ ಅಗತ್ಯಗಳನ್ನು ಪೂರೈಸಲು ಬೇಕಾದ ಹಣ ಸಂಪಾದಿಸಲಿಕ್ಕಾಗಿ ಮತ್ತು ಬೇರೆಯವರಿಗೆ ಸಹಾಯಮಾಡಲಿಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಲು ಸಂತೋಷಪಡುತ್ತಾರೆ. ಅವರ ಕೆಲಸ ಅಷ್ಟೇನೂ ಆಕರ್ಷಕವಾಗಿ ತೋರದಿದ್ದರೂ ಮಾಡುತ್ತಾರೆ.
ಯಾಕೆ ಮುಖ್ಯ?
ನಿಮಗೆ ಇಷ್ಟವಿರಲಿ ಇಲ್ಲದಿರಲಿ ಬದುಕಿನಲ್ಲಿ ಜವಾಬ್ದಾರಿಗಳನ್ನು ಹೊರಲೇಬೇಕಾಗುತ್ತದೆ. ಈಗಿನ ಲೋಕದಲ್ಲಿ ಬೆವರು ಸುರಿಸಿ ಕೆಲಸಮಾಡುವುದು ಅನೇಕರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದ್ದರಿಂದ ನೀವು ಶ್ರಮಜೀವಿಗಳಾಗಿದ್ದರೆ ಅದರಿಂದ ನಿಮಗೇ ಲಾಭ.—ಪ್ರಸಂಗಿ 3:13.
“ಕಷ್ಟಪಟ್ಟು ದುಡಿದಾಗ ನಮ್ಮ ಬಗ್ಗೆ ನಮಗೇ ಹೆಮ್ಮೆಯೆನಿಸುತ್ತದೆ, ಒಳಗೊಳಗೇ ತೃಪ್ತಿಯೆನಿಸುತ್ತದೆಂದು ನನಗೆ ಗೊತ್ತಾಗಿದೆ. ಈ ತೃಪ್ತಿಯ ಭಾವನೆ ನಾನು ಕೆಲಸಮಾಡುವುದನ್ನು ಇಷ್ಟಪಡುವಂತೆ ಮಾಡಿದೆ. ಕೆಲಸಮಾಡುವ ಒಳ್ಳೇ ರೂಢಿಗಳಿದ್ದರೆ ನಿಮಗೆ ಒಳ್ಳೇ ಹೆಸರೂ ಬರುತ್ತದೆ.”—ರೇಯನ್.
ಬೈಬಲ್ ತತ್ವ: “ಶ್ರಮೆಯಿಂದ ಸಮೃದ್ಧಿ.”—ಜ್ಞಾನೋಕ್ತಿ 14:23.
ನೀವೇನು ಮಾಡಬಹುದು?
ಇಲ್ಲಿ ಕೊಡಲಾಗಿರುವ ವಿಷಯಗಳನ್ನು ಮಾಡಿ, ಕೆಲಸದ ಬಗ್ಗೆ ಸಕಾರಾತ್ಮಕ ನೋಟವನ್ನು ಬೆಳೆಸಿಕೊಳ್ಳಿ.
ಚೆನ್ನಾಗಿ ಕೆಲಸ ಮಾಡಲು ಕಲಿಯುವುದರಲ್ಲಿ ಹೆಮ್ಮೆಪಡಿ. ನೀವು ಮನೆಯ ಕೆಲಸಗಳನ್ನು ಮಾಡುತ್ತಿರಲಿ, ಶಾಲೆಯ ಹೋಂವರ್ಕ್ ಮಾಡುತ್ತಿರಲಿ, ಉದ್ಯೋಗ ಮಾಡುತ್ತಿರಲಿ ಹೀಗೆ ಯಾವುದೇ ಕೆಲಸಮಾಡುತ್ತಿರಲಿ ಅದರಲ್ಲಿ ತಲ್ಲೀನರಾಗಿ. ಒಂದು ಕೆಲಸವನ್ನು ಚೆನ್ನಾಗಿ ಮಾಡಲು ಕಲಿತ ನಂತರ ಅದನ್ನು ಇನ್ನಷ್ಟು ಉತ್ತಮವಾಗಿ, ಇನ್ನಷ್ಟು ವೇಗವಾಗಿ ಮಾಡುವುದು ಹೇಗೆಂದು ತಿಳಿದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಕೌಶಲ ಗಳಿಸಿದರೆ, ಅದರಲ್ಲಿ ಹೆಚ್ಚು ಆನಂದವನ್ನೂ ಪಡೆಯುವಿರಿ.
ಬೈಬಲ್ ತತ್ವ: “ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆಸಲ್ಲಿಸುವನು.”—ಜ್ಞಾನೋಕ್ತಿ 22:29, ಪವಿತ್ರ ಗ್ರಂಥ ಭಾಷಾಂತರ.
ನಿಮ್ಮ ಕೆಲಸದಿಂದಾಗುವ ಪ್ರಯೋಜನದ ಬಗ್ಗೆ ಯೋಚಿಸಿ. ನಿಮಗೆ ಕೊಡಲಾಗಿರುವ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುವಾಗ ಅದರಿಂದ ಸಾಮಾನ್ಯವಾಗಿ ಬೇರೆಯವರಿಗೆ ಪ್ರಯೋಜನವಾಗುತ್ತದೆ. ಉದಾಹರಣೆಗೆ, ನೀವು ಮನೆಯಲ್ಲಿ ಕೊಡಲಾದ ಕೆಲಸಗಳನ್ನು ಶ್ರಮವಹಿಸಿ ಮಾಡುವಾಗ ನಿಮ್ಮ ಕುಟುಂಬದವರ ಹೊರೆಯನ್ನು ಹಗುರಮಾಡುತ್ತೀರಿ.
ಬೈಬಲ್ ತತ್ವ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅಪೊಸ್ತಲರ ಕಾರ್ಯಗಳು 20:35.
ಕೊಟ್ಟದ್ದಕ್ಕಿಂತ ಹೆಚ್ಚನ್ನು ಮಾಡಿ. ನಿಮಗೆ ಏನಾದರೂ ಕೆಲಸ ಕೊಡಲಾದಾಗ ಆದಷ್ಟು ಕಡಿಮೆ ಕೆಲಸ ಮಾಡುವ ಬದಲು ಕೊಟ್ಟದ್ದಕ್ಕಿಂತ ಹೆಚ್ಚನ್ನು ಮಾಡಲು ಪ್ರಯತ್ನಿಸಿ. ಹೀಗೆ ಮಾಡುವಾಗ ನಿಮ್ಮ ಬದುಕು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ನೀವು ಆ ಕೆಲಸವನ್ನು ಯಾರದ್ದೋ ಒತ್ತಾಯದಿಂದಲ್ಲ, ಸ್ವಂತ ಇಷ್ಟದಿಂದ ಮಾಡುತ್ತೀರಿ.—ಮತ್ತಾಯ 5:41.
ಬೈಬಲ್ ತತ್ವ: ‘ನಿನ್ನ ಸುಕೃತ್ಯವು ಬಲಾತ್ಕಾರದಿಂದಲ್ಲ, ನಿನ್ನ ಸ್ವಂತ ಇಷ್ಟದಿಂದ ಮಾಡಲ್ಪಡಬೇಕು.’—ಫಿಲೆಮೋನ 14.
ಸಮತೋಲನವಿರಲಿ. ಶ್ರಮಜೀವಿಗಳು ಸೋಮಾರಿಗಳಲ್ಲ, ಹಾಗಂತ ಅವರು ಮೂರೂ ಹೊತ್ತು ಕೆಲಸದಲ್ಲಿ ಮುಳುಗಿರುವುದಿಲ್ಲ. ಅವರು ಸಮತೋಲನ ತೋರಿಸುತ್ತಾರೆ ಅಂದರೆ ಕಷ್ಟಪಟ್ಟು ಕೆಲಸಮಾಡಲು ಸಂತೋಷಪಡುತ್ತಾರೆ, ವಿಶ್ರಾಂತಿಗಾಗಿಯೂ ಸಮಯವನ್ನು ಬದಿಗಿರಿಸುತ್ತಾರೆ.
ಬೈಬಲ್ ತತ್ವ: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.”—ಪ್ರಸಂಗಿ 4:6.