ಭಾಗ 5
ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವ ತನಕ
ಇಸ್ರಾಯೇಲ್ಯರು ಬಾಬೆಲಿನಲ್ಲಿ ಬಂದಿಯಾಗಿರುವಾಗ ಅನೇಕ ಪರೀಕ್ಷೆಗಳನ್ನು ಎದುರಿಸಿದರು. ಇದು ಅವರ ನಂಬಿಕೆಯನ್ನು ಪರೀಕ್ಷಿಸಿದವು. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಇವರನ್ನು ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕಲಾಯಿತು. ಆದರೆ ದೇವರು ಅವರನ್ನು ಆ ಬೆಂಕಿಯಿಂದ ಕಾಪಾಡಿದನು. ತದನಂತರ, ಮೇದ್ಯಯ ಮತ್ತು ಪಾರಸಿಯರಿಂದ ಬಾಬೆಲ್ ಸೋಲಿಸಲ್ಪಟ್ಟಾಗ, ದಾನಿಯೇಲನು ಸಿಂಹಗಳ ಗುಹೆಯೊಳಗೆ ಹಾಕಲ್ಪಟ್ಟನು. ಆದರೆ ದೇವರು ಆ ಸಿಂಹಗಳ ಬಾಯಿಗಳನ್ನು ಕಟ್ಟಿ ಅವನನ್ನೂ ಕಾಪಾಡಿದನು.
ಕೊನೆಗೆ, ಪಾರಸಿಯ ಅರಸ ಕೋರೆಷನು ಇಸ್ರಾಯೇಲ್ಯರನ್ನು ಬಿಡುಗಡೆಮಾಡಿದನು. ಅವರು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಟ್ಟು ಸರೀ 70 ವರ್ಷಗಳ ಅನಂತರ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಯೆರೂಸಲೇಮಿಗೆ ಹಿಂದಿರುಗಿದಾಗ ಅವರು ಮಾಡಿದ ಮೊದಲ ಕೆಲಸವೆಂದರೆ ಯೆಹೋವನ ಆಲಯವನ್ನು ಕಟ್ಟಲಾರಂಭಿಸಿದ್ದೇ. ಆದರೆ, ಶತ್ರುಗಳು ಬೇಗನೆ ಅವರ ಕೆಲಸಕ್ಕೆ ತಡೆಯುಂಟುಮಾಡಿದರು. ಹೀಗೆ ಕಟ್ಟಕಡೆಗೆ ಅವರು ಆಲಯವನ್ನು ಕಟ್ಟಿಮುಗಿಸಿದ್ದು ಯೆರೂಸಲೇಮಿಗೆ ಹಿಂದಿರುಗಿ ಸುಮಾರು 22 ವರುಷಗಳ ಅನಂತರ.
ಆಮೇಲೆ, ಆಲಯವನ್ನು ಅಂದಗೊಳಿಸಲಿಕ್ಕಾಗಿ ಎಜ್ರನು ಯೆರೂಸಲೇಮಿಗೆ ಮಾಡಿದ ಪ್ರಯಾಣದ ಕುರಿತು ನಾವು ಕಲಿಯಲಿದ್ದೇವೆ. ಇದು ಆಲಯ ಕಟ್ಟಿ ಮುಗಿದ ಸುಮಾರು 47 ವರುಷಗಳ ಅನಂತರ ನಡೆಯಿತು. ಎಜ್ರನ ಪ್ರಯಾಣದ 13 ವರ್ಷಗಳ ತರುವಾಯ ಯೆರೂಸಲೇಮಿನ ಮುರಿದು-ಬಿದ್ದ ಗೋಡೆಗಳನ್ನು ಪುನಃ ಕಟ್ಟಲು ನೆಹೆಮೀಯನು ಸಹಾಯಮಾಡುತ್ತಾನೆ. ಭಾಗ ಐದು ಈ ಸಮಯದ ವರೆಗೆ 152 ವರ್ಷಗಳ ಇತಿಹಾಸವನ್ನು ಆವರಿಸುತ್ತದೆ.