ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 56-ಪು. 61 ಪ್ಯಾ. 2
  • ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನ ಮೇಲೆ ಅವಲಂಬಿಸಿರಿ
  • ಯೆಹೋವನನ್ನು ಗೌರವಿಸಿರಿ
  • ‘ವಿವೇಚಿಸುವುದು’
  • ಕಿವಿಗೊಡುವವರು ಯೋಚಿಸುವಂತೆ ಪ್ರೋತ್ಸಾಹಿಸಿ
  • ಹೃದಯವನ್ನು ತಲಪಿರಿ
  • ಅನ್ವಯವನ್ನು ಒದಗಿಸಿರಿ
  • ಒಳ್ಳೆಯ ಮಾದರಿಯನ್ನಿಡಿ
  • ಹೃದಯವನ್ನು ತಲಪಲು ಪ್ರಯತ್ನಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಒಳನೋಟ ಮತ್ತು ಮನವೊಪ್ಪಿಸುವ ಕೌಶಲದೊಂದಿಗೆ ಕಲಿಸಿರಿ
    ಕಾವಲಿನಬುರುಜು—1999
  • ‘ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಾವು ಸಾರಲೇಬೇಕಾದಂಥ ಸಂದೇಶ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 56-ಪು. 61 ಪ್ಯಾ. 2

ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ

ಒಬ್ಬ ಬೋಧಕರೋಪಾದಿ ನಿಮ್ಮ ಗುರಿ ಏನು? ನೀವು ಇತ್ತೀಚೆಗೆ ರಾಜ್ಯ ಪ್ರಚಾರಕರಾಗಿರುವಲ್ಲಿ, ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನು ಮಾಡುವ ಕೆಲಸವನ್ನು ನೇಮಿಸಿರುವುದರಿಂದ, ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡೆಸುವುದು ಹೇಗೆಂದು ಕಲಿಯುವ ಅಪೇಕ್ಷೆ ನಿಮಗಿದೆಯೆಂಬುದರಲ್ಲಿ ಸಂದೇಹವಿಲ್ಲ. (ಮತ್ತಾ. 28:19, 20) ಈ ಚಟುವಟಿಕೆಯಲ್ಲಿ ನೀವು ಈಗಾಗಲೇ ಅನುಭವಸ್ಥರಾಗಿರುವಲ್ಲಿ, ಪ್ರಾಯಶಃ ನಿಮ್ಮ ಗುರಿಯು, ನೀವು ಯಾರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರೊ ಅಂತಹವರ ಹೃದಯಗಳನ್ನು ತಲಪುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುದೇ ಆಗಿದೆ. ನೀವು ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳು ತಮ್ಮ ಜೀವನಗಳನ್ನು ದೇವರಿಗೆ ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸುವಂಥ ರೀತಿಯ ಬೋಧಕರಾಗಲು ಬಯಸುತ್ತೀರೆಂಬುದು ನಿಶ್ಚಯ. (3 ಯೋಹಾ. 4) ನೀವು ಹಿರಿಯರಾಗಿರುವಲ್ಲಿ ಅಥವಾ ಆ ಸುಯೋಗಕ್ಕಾಗಿ ಪ್ರಯತ್ನಿಸುವವರಾಗಿರುವಲ್ಲಿ, ನೀವು ನಿಮ್ಮ ಕೇಳುಗರಲ್ಲಿ ಯೆಹೋವನಿಗಾಗಿ ಮತ್ತು ಆತನ ಮಾರ್ಗಗಳಿಗಾಗಿ ಹೆಚ್ಚು ಆಳವಾದ ಕೃತಜ್ಞತೆಯನ್ನು ವರ್ಧಿಸಬಲ್ಲ ಸಾರ್ವಜನಿಕ ಭಾಷಣಕಾರರಾಗಲು ಬಯಸಬಹುದು. ಈ ಗುರಿಗಳನ್ನು ನೀವು ಹೇಗೆ ಮುಟ್ಟಬಲ್ಲಿರಿ?

ನಿಪುಣ ಬೋಧಕನಾದ ಯೇಸು ಕ್ರಿಸ್ತನಿಂದ ಪಾಠವನ್ನು ಕಲಿಯಿರಿ. (ಲೂಕ 6:40) ಯೇಸು ಪರ್ವತದ ತಪ್ಪಲಲ್ಲಿ ಒಂದು ಜನಸ್ತೋಮಕ್ಕೆ ಮಾತಾಡುತ್ತಿದ್ದಿರಲಿ, ಇಲ್ಲವೆ ದಾರಿಯಲ್ಲಿ ನಡೆಯುತ್ತಿದ್ದ ಕೆಲವೇ ಜನರೊಂದಿಗೆ ಮಾತಾಡುತ್ತಿದ್ದಿರಲಿ, ಅವನು ಹೇಳಿದ ಮಾತುಗಳು ಮತ್ತು ಅವನು ಹೇಳಿದ ವಿಧವು, ಜನರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿತು. ಯೇಸು ತನ್ನ ಕೇಳುಗರ ಮನಸ್ಸುಗಳನ್ನೂ ಹೃದಯಗಳನ್ನೂ ಹುರಿದುಂಬಿಸಿದನು ಮತ್ತು ಅವರು ಅರ್ಥವನ್ನು ಗ್ರಹಿಸುವ ರೀತಿಯಲ್ಲಿ ಪ್ರಾಯೋಗಿಕ ಅನ್ವಯವನ್ನು ಮಾಡಿದನು. ತದ್ರೀತಿಯ ವಿಷಯಗಳನ್ನು ನೀವೂ ಸಾಧಿಸಬಲ್ಲಿರೊ?

ಯೆಹೋವನ ಮೇಲೆ ಅವಲಂಬಿಸಿರಿ

ಯೇಸುವಿನಲ್ಲಿದ್ದ ಬೋಧನಾ ಸಾಮರ್ಥ್ಯವು, ಅವನಿಗೆ ತನ್ನ ಸ್ವರ್ಗೀಯ ಪಿತನೊಂದಿಗಿದ್ದ ಆಪ್ತ ಸಂಬಂಧ ಮತ್ತು ದೇವರ ಪವಿತ್ರಾತ್ಮದ ಆಶೀರ್ವಾದದ ಕಾರಣ ವರ್ಧಿಸಲ್ಪಟ್ಟಿತು. ಒಂದು ಮನೆ ಬೈಬಲ್‌ ಅಧ್ಯಯನವನ್ನು ಪರಿಣಾಮಕಾರಿಯಾಗಿ ನಡೆಸಲು ಶಕ್ತರಾಗುವಂತೆ ನೀವು ಯೆಹೋವನಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುತ್ತೀರೊ? ನೀವು ಒಬ್ಬ ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳಿಗೆ ಕಲಿಸುವ ವಿಷಯದಲ್ಲಿ ದೈವಿಕ ಮಾರ್ಗದರ್ಶನಕ್ಕಾಗಿ ಕ್ರಮವಾಗಿ ಪ್ರಾರ್ಥಿಸುತ್ತೀರೊ? ಭಾಷಣಗಳನ್ನು ಕೊಡಲು ತಯಾರಿಸುತ್ತಿರುವಾಗ ಅಥವಾ ಕೂಟಗಳನ್ನು ನಡೆಸಲಿರುವಾಗ ನೀವು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೀರೊ? ಯೆಹೋವನ ಮೇಲೆ ಇಂತಹ ಪ್ರಾರ್ಥನಾಪೂರ್ವಕವಾದ ಅವಲಂಬನೆಯು, ನೀವು ಹೆಚ್ಚು ಪರಿಣಾಮಕಾರಿಯಾದ ಬೋಧಕರಾಗುವಂತೆ ಸಹಾಯಮಾಡುವುದು.

ಯೆಹೋವನ ಮೇಲೆ ಹೊಂದಿಕೊಳ್ಳುವಿಕೆಯು ಆತನ ವಾಕ್ಯವಾದ ಬೈಬಲಿನ ಮೇಲಿನ ಅವಲಂಬನೆಯಲ್ಲಿಯೂ ತೋರಿಬರುತ್ತದೆ. ಒಬ್ಬ ಪರಿಪೂರ್ಣ ಮಾನವನೋಪಾದಿ ತನ್ನ ಜೀವಿತದ ಅಂತಿಮ ಸಾಯಂಕಾಲದಂದು ಯೇಸು ಪ್ರಾರ್ಥಿಸಿದಾಗ, “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ” ಎಂದು ತನ್ನ ತಂದೆಗೆ ಹೇಳಿದನು. (ಯೋಹಾ. 17:14) ಯೇಸುವಿಗೆ ಅಪಾರವಾದ ಅನುಭವವಿತ್ತಾದರೂ, ಅವನು ಎಂದೂ ತನ್ನ ಸ್ವಂತಿಕೆಯಿಂದ ಮಾತಾಡಲಿಲ್ಲ. ತನ್ನ ತಂದೆಯು ಕಲಿಸಿದ್ದನ್ನೇ ಅವನು ಯಾವಾಗಲೂ ಮಾತಾಡಿ, ಹೀಗೆ ನಮಗೆ ಅನುಕರಿಸಲು ಒಂದು ಮಾದರಿಯನ್ನಿಟ್ಟನು. (ಯೋಹಾ. 12:49, 50) ಬೈಬಲಿನಲ್ಲಿ ಜೋಪಾನವಾಗಿ ಸಂರಕ್ಷಿಸಿಡಲ್ಪಟ್ಟಿರುವ ದೇವರ ವಾಕ್ಯಕ್ಕೆ ಜನರನ್ನು, ಅಂದರೆ ಅವರ ನಡೆನುಡಿ, ಅಂತರಾಳದ ಯೋಚನೆಗಳು ಮತ್ತು ಅನಿಸಿಕೆಗಳನ್ನು ಪ್ರಭಾವಿಸುವ ಶಕ್ತಿಯಿದೆ. (ಇಬ್ರಿ. 4:12) ನೀವು ದೇವರ ವಾಕ್ಯದ ಜ್ಞಾನದಲ್ಲಿ ಬೆಳೆದು, ನಿಮ್ಮ ಶುಶ್ರೂಷೆಯಲ್ಲಿ ಅದನ್ನು ಉತ್ತಮವಾಗಿ ಉಪಯೋಗಿಸಲು ಕಲಿಯುವಾಗ, ದೇವರ ಕಡೆಗೆ ಜನರನ್ನು ಸೆಳೆಯುವಂತಹ ರೀತಿಯ ಬೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಿರಿ.—2 ತಿಮೊ. 3:16, 17.

ಯೆಹೋವನನ್ನು ಗೌರವಿಸಿರಿ

ಕ್ರಿಸ್ತನ ಅನುಕರಣೆಯಲ್ಲಿ ಒಬ್ಬ ಬೋಧಕನಾಗಿರುವದೆಂದರೆ, ಕೇವಲ ಆಸಕ್ತಿಕರವಾದ ಒಂದು ಭಾಷಣವನ್ನು ಕೊಡಲು ಶಕ್ತನಾಗಿರುವದು ಎಂದರ್ಥವಲ್ಲ. ಹೌದು, ಜನರು ಯೇಸುವಿನ “ಇಂಪಾದ ಮಾತುಗಳಿಗೆ” ಆಶ್ಚರ್ಯಪಟ್ಟರು ಎಂಬುದು ನಿಜವೇ. (ಲೂಕ 4:22) ಆದರೆ ಉತ್ತಮವಾಗಿ ಮಾತಾಡುವುದರಲ್ಲಿ ಯೇಸುವಿನ ಉದ್ದೇಶವೇನಾಗಿತ್ತು? ಯೆಹೋವನನ್ನು ಗೌರವಿಸುವುದು ಆಗಿತ್ತೇ ಹೊರತು, ಸ್ವತಃ ತನ್ನ ಕಡೆಗೆ ಗಮನ ಸೆಳೆಯುವುದಾಗಿರಲಿಲ್ಲ. (ಯೋಹಾ. 7:16-18) ಮತ್ತು ಅವನು ತನ್ನ ಹಿಂಬಾಲಕರನ್ನು ಹೀಗೆ ಪ್ರೋತ್ಸಾಹಿಸಿದನು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಓರೆ ಅಕ್ಷರಗಳು ನಮ್ಮವು.) (ಮತ್ತಾ. 5:16) ಆ ಸಲಹೆಯು ನಾವು ಬೋಧಿಸುವ ವಿಧವನ್ನು ಪ್ರಭಾವಿಸಬೇಕು. ಆ ಉದ್ದೇಶದಿಂದ ನಮ್ಮನ್ನು ಅಪಕರ್ಷಿಸುವಂಥ ಯಾವುದೇ ವಿಷಯದಿಂದ ನಾವು ದೂರವಿರುವುದು ನಮ್ಮ ಧ್ಯೇಯವಾಗಿರಬೇಕು. ಆದುದರಿಂದ, ನಾವು ಏನು ಹೇಳಲಿದ್ದೇವೆ ಮತ್ತು ಅದನ್ನು ಹೇಗೆ ಹೇಳಲಿದ್ದೇವೆ ಎಂಬುದನ್ನು ಯೋಜಿಸುವಾಗ, ‘ಇದು ಯೆಹೋವನಿಗಾಗಿ ಗಣ್ಯತೆಯನ್ನು ಗಾಢಗೊಳಿಸುವುದೊ ಅಥವಾ ಅದು ನನ್ನ ಕಡೆಗೆ ಗಮನವನ್ನು ಸೆಳೆಯುವುದೊ?’ ಎಂದು ಸ್ವತಃ ಕೇಳಿಕೊಳ್ಳುವುದು ಉತ್ತಮ.

ಉದಾಹರಣೆಗೆ, ದೃಷ್ಟಾಂತಗಳು ಮತ್ತು ನಿಜ ಜೀವನದ ಮಾದರಿಗಳನ್ನು ಬೋಧಿಸುವಿಕೆಯಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ. ಆದರೂ, ಒಂದು ದೃಷ್ಟಾಂತವು ತುಂಬ ಉದ್ದವಾಗಿರುವುದಾದರೆ ಅಥವಾ ಅನುಭವವು ವಿಪರೀತವಾದ ವಿವರಗಳೊಂದಿಗೆ ಕೊಡಲ್ಪಡುವುದಾದರೆ, ಉಪದೇಶದ ಮುಖ್ಯಾಂಶವೇ ತಪ್ಪಿಹೋಗಬಹುದು. ಅದೇ ರೀತಿ, ಜನರಿಗೆ ಕೇವಲ ಮನೋರಂಜನೆಯನ್ನು ನೀಡುವಂಥ ಕಥೆಗಳನ್ನು ಹೇಳುವುದು ನಮ್ಮ ಶುಶ್ರೂಷೆಯ ಉದ್ದೇಶವನ್ನು ಕುಂದಿಸುತ್ತದೆ. ಕಾರ್ಯತಃ, ಬೋಧಕನು ದೇವಪ್ರಭುತ್ವಾತ್ಮಕ ಶಿಕ್ಷಣವೆಂಬ ನಿಜ ಗುರಿಯನ್ನು ಸಾಧಿಸುವ ಬದಲಾಗಿ ತನ್ನ ಕಡೆಗೇ ಗಮನವನ್ನು ಸೆಳೆಯುತ್ತಿರುತ್ತಾನೆ.

‘ವಿವೇಚಿಸುವುದು’

ಒಬ್ಬ ವ್ಯಕ್ತಿಯು ನಿಜವಾಗಿಯೂ ಶಿಷ್ಯನಾಗಬೇಕಾದರೆ ಅವನಿಗೆ ಏನು ಕಲಿಸಲ್ಪಡುತ್ತಿದೆಯೊ ಅದನ್ನು ಅವನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅವನು ಸತ್ಯಕ್ಕೆ ಕಿವಿಗೊಡಬೇಕು ಮತ್ತು ಅದು ಬೇರೆ ನಂಬಿಕೆಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನೂ ನೋಡಬೇಕು. ಪರಸ್ಪರ ವ್ಯತ್ಯಾಸಗಳನ್ನು ಗುರುತಿಸುವುದು ಇದನ್ನು ಸಾಧಿಸುವಂತೆ ಸಹಾಯಮಾಡುತ್ತದೆ.

ತನ್ನ ಜನರು ಶುದ್ಧಾಶುದ್ಧಗಳ ಮಧ್ಯೆ ಇರುವ ವ್ಯತ್ಯಾಸವನ್ನು ‘ವಿವೇಚಿಸಬೇಕೆಂದು’ ಯೆಹೋವನು ಪದೇ ಪದೇ ಅವರನ್ನು ಪ್ರೋತ್ಸಾಹಿಸಿದನು. (ಯಾಜ. 10:9-11) ತನ್ನ ಮಹಾ ಆತ್ಮಿಕಾಲಯದಲ್ಲಿ ಸೇವೆ ಮಾಡುವವರು, ಜನರಿಗೆ ‘ಮೀಸಲಾದದ್ದಕ್ಕೂ ಮೀಸಲಲ್ಲದ್ದಕ್ಕೂ ಇರುವ ಭೇದವನ್ನು’ ಕಲಿಸಬೇಕೆಂದು ಆತನು ಹೇಳಿದನು. (ಯೆಹೆ. 44:23) ಜ್ಞಾನೋಕ್ತಿಗಳ ಪುಸ್ತಕವು ಸಹ ನೀತಿ ಮತ್ತು ದುಷ್ಟತನ, ವಿವೇಕ ಮತ್ತು ಮೂರ್ಖತನ—ಇವುಗಳ ಮಧ್ಯೆ ಇರುವ ವೈದೃಶ್ಯಗಳಿಂದ ತುಂಬಿದೆ. ವಿರೋಧ ಗುಣಗಳಿಲ್ಲದಿರುವ ವಿಷಯಗಳನ್ನು ಸಹ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಸಾಧ್ಯವಿದೆ. ರೋಮಾಪುರ 5:7 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೌಲನು ನೀತಿವಂತನು ಮತ್ತು ಉಪಕಾರಿಯ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸಿದನು. ಇಬ್ರಿಯ ಪುಸ್ತಕದಲ್ಲಿ ಅವನು, ಆರೋನನದ್ದಕ್ಕೆ ಹೋಲಿಕೆಯಾಗಿ ಕ್ರಿಸ್ತನ ಮಹಾಯಾಜಕ ಸೇವೆಯ ಶ್ರೇಷ್ಠತೆಯನ್ನು ತೋರಿಸಿದನು. ವಾಸ್ತವದಲ್ಲಿ, 17ನೆಯ ಶತಮಾನದ ಶಿಕ್ಷಣಜ್ಞ ಯೋಹನ್‌ ಏಮಸ್‌ ಕಮೀನಿಯಸ್‌ ಬರೆದುದು: “ಬೋಧಿಸುವುದರ ಅರ್ಥ, ವಿಷಯಗಳು ತಮ್ಮ ವಿಭಿನ್ನ ಉದ್ದೇಶಗಳು, ರೂಪಗಳು ಮತ್ತು ಮೂಲಗಳಲ್ಲಿ ಒಂದರಿಂದ ಮತ್ತೊಂದು ಹೇಗೆ ಭಿನ್ನವಾಗಿವೆ ಎಂದು ತಿಳಿಯಪಡಿಸುವುದಕ್ಕಿಂತ ಹೆಚ್ಚಿನದ್ದೇನೂ ಇರುವುದಿಲ್ಲ. . . . ಆದಕಾರಣ, ವಿಷಯಗಳ ಮಧ್ಯೆ ಇರುವ ಭಿನ್ನತೆಯನ್ನು ಉತ್ತಮವಾಗಿ ವಿವರಿಸುವವನು ಉತ್ತಮವಾಗಿ ಕಲಿಸುವವನಾಗಿದ್ದಾನೆ.”

ಉದಾಹರಣೆಗಾಗಿ, ನೀವು ದೇವರ ರಾಜ್ಯದ ಕುರಿತು ಯಾರಿಗಾದರೂ ಕಲಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ರಾಜ್ಯವೆಂದರೇನು ಎಂದು ಅವನಿಗೆ ಅರ್ಥವಾಗದಿದ್ದರೆ, ರಾಜ್ಯವು ಕೇವಲ ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿ ಎಂಬ ವಿಚಾರಕ್ಕೆ ವೈದೃಶ್ಯವಾಗಿ ಬೈಬಲು ಏನು ಹೇಳುತ್ತದೆಂಬುದನ್ನು ನೀವು ತೋರಿಸಬಹುದು. ಅಥವಾ, ರಾಜ್ಯವು ಮಾನವ ಸರಕಾರಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನೀವು ತೋರಿಸಬಹುದು. ಆದರೆ, ಈ ಮೂಲಭೂತ ಸತ್ಯಗಳನ್ನು ತಿಳಿದಿರುವ ಜನರಿಗೆ ನೀವು ಇನ್ನೂ ಹೆಚ್ಚಿನ ವಿವರಣೆಗಳನ್ನು ಕೊಡಲು ಪ್ರಯತ್ನಿಸಬಹುದು. ಮೆಸ್ಸೀಯನ ರಾಜ್ಯವು ಕೀರ್ತನೆ 103:19 ರಲ್ಲಿ ವರ್ಣಿಸಿರುವ ಯೆಹೋವನ ಸ್ವಂತ ವಿಶ್ವ ರಾಜತ್ವದಿಂದ, ಅಥವಾ ಕೊಲೊಸ್ಸೆ 1:13 ರಲ್ಲಿ ಹೇಳಿರುವ “ಪ್ರಿಯ ಕುಮಾರನ ರಾಜ್ಯ”ದಿಂದ, ಅಥವಾ ಎಫೆಸ 1:9 ರಲ್ಲಿ ತಿಳಿಸಲ್ಪಟ್ಟಿರುವಂಥ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸುವ ಕೆಲಸಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನೀವು ಅವರಿಗೆ ತೋರಿಸಬಹುದು. ಇಂತಹ ವೈದೃಶ್ಯಗಳ ಉಪಯೋಗವು, ಈ ಪ್ರಮುಖ ಬೈಬಲ್‌ ಬೋಧನೆಯನ್ನು ನಿಮ್ಮ ಸಭಿಕರ ದೃಷ್ಟಿಗೆ ಸ್ಪಷ್ಟವಾಗಿ ತೋರಿಬರುವಂತೆ ಮಾಡಲು ಸಹಾಯಮಾಡಬಲ್ಲದು.

ಯೇಸು ಈ ಕಲಿಸುವ ವಿಧಾನವನ್ನು ಪದೇ ಪದೇ ಉಪಯೋಗಿಸಿದನು. ಅವನು ಮೋಶೆಯ ಧರ್ಮಶಾಸ್ತ್ರದ ಜನಪ್ರಿಯ ತಿಳಿವಳಿಕೆಯನ್ನು ಧರ್ಮಶಾಸ್ತ್ರದ ನಿಜ ಇಂಗಿತಕ್ಕೆ ಹೋಲಿಸಿದನು. (ಮತ್ತಾ. 5:21-48) ಅವನು ಫರಿಸಾಯರ ಕಪಟ ವರ್ತನೆಗಳಿಂದ ನಿಜ ದೈವಿಕ ಭಕ್ತಿಯನ್ನು ಪ್ರತ್ಯೇಕಿಸಿದನು. (ಮತ್ತಾ. 6:1-18) ಅವನು ಬೇರೆಯವರ ಮೇಲೆ “ಅಹಂಕಾರದಿಂದ ದೊರೆತನ”ಮಾಡುವವರ ಮನೋಭಾವವನ್ನು ತನ್ನ ಶಿಷ್ಯರು ತೋರಿಸುವ ಆತ್ಮತ್ಯಾಗದ ಮನೋಭಾವದೊಂದಿಗೆ ಹೋಲಿಸಿ ವ್ಯತ್ಯಾಸವನ್ನು ತೋರಿಸಿದನು. (ಮತ್ತಾ. 20:25-28) ಮತ್ತಾಯ 21:28-32 ರಲ್ಲಿ ದಾಖಲಿಸಲ್ಪಟ್ಟಿರುವ ಇನ್ನೊಂದು ಸಂದರ್ಭದಲ್ಲಿ, ಸ್ವನೀತಿ ಮತ್ತು ನಿಜ ಪಶ್ಚಾತ್ತಾಪಗಳ ಮಧ್ಯೆ ಇರುವ ವ್ಯತ್ಯಾಸವನ್ನು ಸ್ವತಃ ತಾವೇ ಕಂಡುಹಿಡಿಯುವಂತೆ ತನ್ನ ಕೇಳುಗರನ್ನು ಕೇಳಿಕೊಂಡನು. ಇದು ನಮ್ಮನ್ನು ಉತ್ತಮವಾದ ಬೋಧಿಸುವಿಕೆಯ ಬೆಲೆಬಾಳುವ ಇನ್ನೊಂದು ಭಾಗಕ್ಕೆ ಕರೆದೊಯ್ಯುತ್ತದೆ.

ಕಿವಿಗೊಡುವವರು ಯೋಚಿಸುವಂತೆ ಪ್ರೋತ್ಸಾಹಿಸಿ

ಮತ್ತಾಯ 21:28 ರಲ್ಲಿ, “ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳುವ ಮೂಲಕ ಯೇಸು ತನ್ನ ಹೋಲಿಕೆಯನ್ನು ಪರಿಚಯಪಡಿಸುತ್ತಾನೆ. ಒಬ್ಬ ಸಮರ್ಥ ಬೋಧಕನು ಕೇವಲ ನಿಜತ್ವಗಳನ್ನು ತಿಳಿಸುವುದಿಲ್ಲ ಅಥವಾ ಉತ್ತರಗಳನ್ನು ಕೊಡುವುದಿಲ್ಲ. ಅದಕ್ಕೆ ಬದಲಾಗಿ, ತನ್ನ ಕೇಳುಗರು ತಮ್ಮ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸುವಂತೆ ಅವನು ಪ್ರೋತ್ಸಾಹಿಸುತ್ತಾನೆ. (ಜ್ಞಾನೋ. 3:21, NW; ರೋಮಾ. 12:1) ಇದು ಆಂಶಿಕವಾಗಿ, ಪ್ರಶ್ನೆಗಳನ್ನು ಕೇಳುವ ಮೂಲಕ ಮಾಡಲ್ಪಡುತ್ತದೆ. ಮತ್ತಾಯ 17:25 ರಲ್ಲಿ ಕಂಡುಬರುವಂತೆ, ಯೇಸು ಪ್ರಶ್ನಿಸಿದ್ದು: “ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ”? (ಓರೆ ಅಕ್ಷರಗಳು ನಮ್ಮವು.) ಯೇಸುವಿನ ಆಲೋಚನಾಪ್ರೇರಕ ಪ್ರಶ್ನೆಗಳು, ದೇವಾಲಯದ ತೆರಿಗೆಯನ್ನು ಕೊಡುವ ವಿಚಾರದಲ್ಲಿ ಪೇತ್ರನು ತನ್ನ ಸ್ವಂತ ಹಾಗೂ ಸರಿಯಾದ ತೀರ್ಮಾನವನ್ನು ಮಾಡುವಂತೆ ಸಹಾಯಮಾಡಿದವು. “ನನ್ನ ನೆರೆಯವನು ಯಾರು”? ಎಂದು ಕೇಳಿದ ಮನುಷ್ಯನಿಗೆ ಉತ್ತರ ಕೊಡುವಾಗಲೂ, ಯೇಸು ಅಲ್ಲಿ ಯಾಜಕನ ಮತ್ತು ಲೇವಿಯನ ವರ್ತನೆಗಳಿಗೂ ಸಮಾರ್ಯದವನ ವರ್ತನೆಗಳಿಗೂ ಇರುವ ವ್ಯತ್ಯಾಸವನ್ನು ತೋರಿಸಿದನು. ಬಳಿಕ ಅವನು ಈ ಪ್ರಶ್ನೆಯನ್ನು ಕೇಳಿದನು: “ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ”? (ಲೂಕ 10:29-36) ಇಲ್ಲಿ ಪುನಃ, ತನ್ನ ಕೇಳುಗನಿಗಾಗಿ ತಾನೇ ಯೋಚಿಸುವ ಬದಲು, ಕೇಳುಗನು ತನ್ನ ಪ್ರಶ್ನೆಗೆ ತಾನೇ ಉತ್ತರ ಹೇಳುವಂತೆ ಯೇಸು ಕೇಳಿಕೊಂಡನು.—ಲೂಕ 7:41-43.

ಹೃದಯವನ್ನು ತಲಪಿರಿ

ದೇವರ ವಾಕ್ಯದ ಅರ್ಥವನ್ನು ಗ್ರಹಿಸುವ ಬೋಧಕರು, ನಿರ್ದಿಷ್ಟ ನಿಜತ್ವಗಳನ್ನು ಕಂಠಪಾಠ ಮಾಡಿಕೊಂಡು, ನಿರ್ದಿಷ್ಟ ನಿಯಮಗಳಿಗನುಸಾರವಾಗಿ ನಡೆಯುವುದಷ್ಟೇ ಸತ್ಯಾರಾಧನೆಯಾಗಿರುವುದಿಲ್ಲ ಎಂಬುದನ್ನು ಗ್ರಹಿಸುತ್ತಾರೆ. ಅದು ಯೆಹೋವನೊಂದಿಗಿನ ಒಳ್ಳೆಯ ಸಂಬಂಧದ ಮೇಲೆ ಮತ್ತು ಆತನ ಮಾರ್ಗಗಳಿಗಾಗಿರುವ ಗಣ್ಯತೆಯ ಮೇಲೆ ಕಟ್ಟಲ್ಪಡುತ್ತದೆ. ಇಂತಹ ಆರಾಧನೆಯಲ್ಲಿ ಹೃದಯವು ಒಳಗೂಡಿರುತ್ತದೆ. (ಧರ್ಮೋ. 10:12, 13; ಲೂಕ 10:25-27) ಶಾಸ್ತ್ರವಚನಗಳಲ್ಲಿ “ಹೃದಯ” ಎಂಬ ಪದವು, ಅನೇಕವೇಳೆ ಬಯಕೆಗಳು, ಮಮತೆ, ಅನಿಸಿಕೆಗಳು ಮತ್ತು ಪ್ರಚೋದನೆಗಳಂತಹ ವಿಷಯಗಳು ಸೇರಿರುವ ಪೂರ್ಣವಾದ ಆಂತರಿಕ ವ್ಯಕ್ತಿಯನ್ನು ಸೂಚಿಸುತ್ತದೆ.

ಮನುಷ್ಯರು ಬಾಹ್ಯ ತೋರಿಕೆಗಳನ್ನು ನೋಡುವಾಗ ದೇವರಾದರೊ ಹೃದಯವನ್ನು ನೋಡುತ್ತಾನೆಂದು ಯೇಸು ತಿಳಿದಿದ್ದನು. (1 ಸಮು. 16:7) ದೇವರಿಗೆ ನಾವು ಸಲ್ಲಿಸುವ ಸೇವೆಯು ಆತನಿಗಾಗಿ ನಮಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಡಬೇಕೇ ಹೊರತು ಜೊತೆಮಾನವರನ್ನು ಮೆಚ್ಚಿಸಲು ಮಾಡುವ ಪ್ರಯತ್ನಗಳಿಂದಲ್ಲ. (ಮತ್ತಾ. 6:5-8) ಆದರೆ ಫರಿಸಾಯರು ಬಾಹ್ಯ ತೋರಿಕೆಗಾಗಿ ಅನೇಕ ಸಂಗತಿಗಳನ್ನು ಮಾಡಿದರು. ಧರ್ಮಶಾಸ್ತ್ರದ ಎಲ್ಲ ವಿವರಗಳನ್ನು ಅನುಸರಿಸುವುದರ ಮೇಲೆ ಮತ್ತು ಅವರೇ ರಚಿಸಿದಂತಹ ಸ್ವಂತ ನಿಯಮಗಳನ್ನು ಪಾಲಿಸುವುದರ ಮೇಲೆ ಅವರು ಭಾರೀ ಒತ್ತನ್ನು ನೀಡಿದರು. ಆದರೆ ತಮ್ಮ ಜೀವಿತಗಳಲ್ಲಿ, ತಾವು ಯಾರನ್ನು ಆರಾಧಿಸುತ್ತೇವೆಂದು ಅವರು ಹೇಳಿಕೊಂಡರೊ ಆ ದೇವರ ಜನರು ತಾವಾಗಿದ್ದೇವೆ ಎಂಬುದನ್ನು ಗುರುತಿಸುವಂಥ ಗುಣಗಳನ್ನು ಪ್ರದರ್ಶಿಸಲು ಅವರು ತಪ್ಪಿಹೋದರು. (ಮತ್ತಾ. 9:13; ಲೂಕ 11:42) ಆದರೆ, ದೇವರ ಆವಶ್ಯಕತೆಗಳಿಗೆ ವಿಧೇಯತೆಯನ್ನು ತೋರಿಸುವುದು ಪ್ರಾಮುಖ್ಯವಾಗಿರುವುದಾದರೂ, ಅಂತಹ ವಿಧೇಯತೆಯ ಮೌಲ್ಯವು ಹೃದಯದಲ್ಲಿ ಏನಿದೆಯೊ ಅದರಿಂದ ನಿರ್ಧರಿಸಲ್ಪಡುತ್ತದೆಂದು ಯೇಸು ಬೋಧಿಸಿದನು. (ಮತ್ತಾ. 15:7-9; ಮಾರ್ಕ 7:20-23; ಯೋಹಾ. 3:36) ನಾವು ಯೇಸುವಿನ ಮಾದರಿಯನ್ನು ಅನುಸರಿಸುವಲ್ಲಿ, ನಮ್ಮ ಬೋಧನೆಯು ಅತಿ ಹೆಚ್ಚು ಒಳಿತನ್ನು ಪೂರೈಸುವುದು. ದೇವರು ಜನರಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ಅವರು ಕಲಿಯುವಂತೆ ನಾವು ಸಹಾಯಮಾಡುವುದು ಪ್ರಾಮುಖ್ಯ. ಆದರೆ ಅವರೂ ಯೆಹೋವನನ್ನು ವ್ಯಕ್ತಿಗತವಾಗಿ ತಿಳಿದುಕೊಂಡು, ಆತನನ್ನು ಪ್ರೀತಿಸುವುದು ಪ್ರಾಮುಖ್ಯ. ಹೀಗೆ ಅವರ ನಡತೆಯು, ಸತ್ಯ ದೇವರೊಂದಿಗೆ ಒಪ್ಪಿಗೆಯ ಸಂಬಂಧಕ್ಕೆ ಅವರು ಕೊಡುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.

ಆದರೆ ಇಂತಹ ಬೋಧನೆಯಿಂದ ಪ್ರಯೋಜನ ಪಡೆಯಬೇಕಾದರೆ, ಜನರು ತಮ್ಮ ಸ್ವಂತ ಹೃದಯಗಳಲ್ಲಿ ಏನಿದೆಯೆಂಬ ವಿಷಯವನ್ನು ಧೈರ್ಯದಿಂದ ಎದುರಿಸಬೇಕು. ಜನರು ತಮ್ಮ ಹೇತುಗಳನ್ನು ವಿಶ್ಲೇಷಿಸಿ, ತಮ್ಮ ಅನಿಸಿಕೆಗಳನ್ನು ಪರೀಕ್ಷಿಸುವಂತೆ ಯೇಸು ಅವರನ್ನು ಪ್ರೋತ್ಸಾಹಿಸಿದನು. ಒಂದು ತಪ್ಪಾದ ದೃಷ್ಟಿಕೋನವನ್ನು ತಿದ್ದುವಾಗ, ತನ್ನ ಕೇಳುಗರು ಏಕೆ ಕೆಲವೊಂದು ವಿಷಯಗಳ ಕುರಿತು ಹಾಗೆ ಆಲೋಚಿಸಿದರು, ಹೇಳಿದರು ಅಥವಾ ಮಾಡಿದರು ಎಂದು ಯೇಸು ಅವರನ್ನು ಕೇಳುತ್ತಿದ್ದನು. ಆದರೂ, ಅವರನ್ನು ಆ ಹಂತದಲ್ಲಿ ಬಿಟ್ಟುಬಿಡದಿರಲಿಕ್ಕಾಗಿ, ಯೇಸು ತನ್ನ ಪ್ರಶ್ನೆಯನ್ನು, ಅವರು ಆ ವಿಷಯವನ್ನು ಸರಿಯಾದ ನೋಟದಲ್ಲಿ ನೋಡುವಂತೆ ಪ್ರೋತ್ಸಾಹಿಸಲು ಒಂದು ಹೇಳಿಕೆಯಿಂದಲೊ ದೃಷ್ಟಾಂತದಿಂದಲೊ ಒಂದು ಕ್ರಿಯೆಯಿಂದಲೊ ಜೊತೆಗೂಡಿಸಿದನು. (ಮಾರ್ಕ 2:8; 4:40; 8:17; ಲೂಕ 6:41, 46) ನಾವೂ ನಮ್ಮ ಕೇಳುಗರಿಗೆ, ‘ಈ ನಡವಳಿಕೆಯು ನನಗೇಕೆ ಹಿಡಿಸುತ್ತದೆ? ಈ ಸನ್ನಿವೇಶಕ್ಕೆ ನಾನು ಹೀಗೇಕೆ ಪ್ರತಿವರ್ತಿಸುತ್ತೇನೆ?’ ಎಂದು ಅವರು ಸ್ವತಃ ಕೇಳಿಕೊಳ್ಳುವಂತೆ ಸೂಚಿಸುವ ಮೂಲಕ ಅವರಿಗೆ ಸಹಾಯ ನೀಡಬಹುದು. ಬಳಿಕ, ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವಂತೆ ಬೇಕಾದ ಪ್ರಚೋದನೆಯನ್ನು ಅವರಿಗೆ ನೀಡಿರಿ.

ಅನ್ವಯವನ್ನು ಒದಗಿಸಿರಿ

ಒಳ್ಳೆಯ ಬೋಧಕನಿಗೆ, “ಜ್ಞಾನ [“ವಿವೇಕ,” NW]ವನ್ನು ಪಡೆಯಬೇಕೆಂಬದೇ . . . ಪ್ರಥಮಪಾಠ”ವೆಂಬುದು ತಿಳಿದದೆ. (ಜ್ಞಾನೋ. 4:7) ಸಮಸ್ಯೆಗಳನ್ನು ಬಗೆಹರಿಸಲು, ಅಪಾಯಗಳನ್ನು ತಪ್ಪಿಸಲು, ಗುರಿಗಳನ್ನು ಮುಟ್ಟಲು ಮತ್ತು ಇತರರಿಗೆ ಸಹಾಯಮಾಡಲು ಜ್ಞಾನವನ್ನು ಯಶಸ್ವಿಕರವಾಗಿ ಅನ್ವಯಿಸುವ ಸಾಮರ್ಥ್ಯವೇ ವಿವೇಕವಾಗಿದೆ. ಹೀಗೆ ಮಾಡಲು ಕಲಿಯುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದು ಒಬ್ಬ ಬೋಧಕನ ಜವಾಬ್ದಾರಿಯಾಗಿದೆ; ಆದರೆ ಅವರಿಗಾಗಿ ನಿರ್ಣಯಗಳನ್ನು ಮಾಡುವುದು ಅವನ ಜವಾಬ್ದಾರಿಯಲ್ಲ. ವಿವಿಧ ಬೈಬಲ್‌ ಮೂಲತತ್ತ್ವಗಳನ್ನು ಚರ್ಚಿಸುತ್ತಿರುವಾಗ, ವಿದ್ಯಾರ್ಥಿಗಳು ಅವರಾಗಿಯೇ ತರ್ಕಿಸುವಂತೆ ಸಹಾಯಮಾಡಿರಿ. ನೀವು ದಿನನಿತ್ಯದ ಜೀವನದ ಒಂದು ಸನ್ನಿವೇಶವನ್ನು ಉದಾಹರಿಸಿದ ಬಳಿಕ, ಆ ಸನ್ನಿವೇಶವು ಎದುರಾಗುವಲ್ಲಿ ಈಗ ತಾನೇ ಅಧ್ಯಯನ ಮಾಡಿದ ಬೈಬಲ್‌ ಮೂಲತತ್ತ್ವವು ಆ ವಿದ್ಯಾರ್ಥಿಗೆ ಹೇಗೆ ಸಹಾಯಮಾಡುವುದೆಂದು ಅವನನ್ನು ಕೇಳಿರಿ.—ಇಬ್ರಿ. 5:14.

ಸಾ.ಶ. 33 ರ ಪಂಚಾಶತ್ತಮ ದಿನದ ತನ್ನ ಭಾಷಣದಲ್ಲಿ, ಜನರ ಜೀವನದ ಮೇಲೆ ಪ್ರಭಾವ ಬೀರಿದಂಥ ಪ್ರಾಯೋಗಿಕ ಅನ್ವಯದ ಒಂದು ಮಾದರಿಯನ್ನು ಅಪೊಸ್ತಲ ಪೇತ್ರನು ಒದಗಿಸಿದನು. (ಅ. ಕೃ. 2:14-36) ಜನರು ನಂಬಿದ್ದರು ಎಂದು ಎಣಿಸಲ್ಪಟ್ಟಿದ್ದ ಮೂರು ಶಾಸ್ತ್ರೀಯ ಭಾಗಗಳನ್ನು ಚರ್ಚಿಸಿದ ಬಳಿಕ ಪೇತ್ರನು, ಅವರು ಯಾವ ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡಿದ್ದರೋ ಅದರ ಬೆಳಕಿನಲ್ಲಿ ಅವುಗಳನ್ನು ಅನ್ವಯಿಸಿದನು. ಇದರ ಪರಿಣಾಮವಾಗಿ, ಆ ಜನರು ತಾವು ಕೇಳಿದ್ದ ವಿಷಯಕ್ಕೆ ಅನುಸಾರವಾಗಿ ವರ್ತಿಸುವ ಅಗತ್ಯವನ್ನು ಮನಗಂಡರು. ನಿಮ್ಮ ಬೋಧನೆಯೂ ಜನರ ಮೇಲೆ ಅದೇ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೊ? ನೀವು ನಿಜತ್ವಗಳನ್ನು ಕೇವಲ ಪಠಿಸುವುದಕ್ಕಿಂತಲೂ ಹೆಚ್ಚು ಪ್ರಯತ್ನವನ್ನು ಮಾಡಿ, ವಿಷಯಗಳು ಏಕೆ ಹಾಗಿವೆ ಎಂದು ಜನರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುತ್ತೀರೊ? ಅವರು ಕಲಿಯುವ ವಿಷಯಗಳು ಅವರ ಜೀವನಗಳನ್ನು ಹೇಗೆ ಪ್ರಭಾವಿಸಬೇಕು ಎಂಬುದನ್ನು ಪರಿಗಣಿಸಲು ನೀವು ಅವರಿಗೆ ಪ್ರೋತ್ಸಾಹ ನೀಡುತ್ತೀರೊ? ಪಂಚಾಶತ್ತಮದಂದು ಜನರ ಗುಂಪು ಮಾಡಿದಂತೆ ಅವರು, “ನಾವೇನು ಮಾಡಬೇಕು” ಎಂದು ಗಟ್ಟಿಯಾಗಿ ಕೇಳಲಿಕ್ಕಿಲ್ಲ ನಿಜ, ಆದರೆ ನೀವು ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸಿರುವಲ್ಲಿ, ತಕ್ಕ ಕ್ರಮವನ್ನು ಕೈಕೊಳ್ಳುವುದನ್ನು ಪರಿಗಣಿಸುವಂತೆ ಅವರು ಪ್ರೇರಿಸಲ್ಪಡುವರು.—ಅ. ಕೃ. 2:37.

ನಿಮ್ಮ ಮಕ್ಕಳೊಂದಿಗೆ ಬೈಬಲನ್ನು ಓದುವಾಗ, ಬೈಬಲ್‌ ಮೂಲತತ್ತ್ವಗಳ ಪ್ರಾಯೋಗಿಕ ಅನ್ವಯದ ಕುರಿತು ಯೋಚಿಸುವಂತೆ ಅವರನ್ನು ತರಬೇತುಗೊಳಿಸುವ ಉತ್ತಮ ಅವಕಾಶವು ಹೆತ್ತವರಾದ ನಿಮಗಿದೆ. (ಎಫೆ. 6:4) ಉದಾಹರಣೆಗೆ, ಆ ವಾರಕ್ಕಾಗಿ ನೇಮಿಸಲ್ಪಟ್ಟಿರುವ ಬೈಬಲ್‌ ವಾಚನದಲ್ಲಿ ಕೆಲವು ವಚನಗಳನ್ನು ನೀವು ಆರಿಸಿಕೊಂಡು, ಅವುಗಳ ಅರ್ಥವನ್ನು ಚರ್ಚಿಸಿ, ಬಳಿಕ ಇಂತಹ ಪ್ರಶ್ನೆಗಳನ್ನು ಕೇಳಬಹುದು: ‘ಇದು ನಮಗೆ ಹೇಗೆ ಮಾರ್ಗದರ್ಶನವನ್ನು ಒದಗಿಸುತ್ತದೆ? ಈ ವಚನಗಳನ್ನು ನಾವು ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸಬಹುದು? ಅವು ಯೆಹೋವನ ಬಗ್ಗೆ ಮತ್ತು ಆತನು ಕಾರ್ಯವನ್ನು ನಡಿಸುವ ರೀತಿಯ ಬಗ್ಗೆ ಏನನ್ನು ತಿಳಿಸುತ್ತವೆ, ಮತ್ತು ಅದು ನಮಗೆ ಆತನ ಕಡೆಗಿರುವ ನಮ್ಮ ಗಣ್ಯತೆಯನ್ನು ಹೇಗೆ ವರ್ಧಿಸುತ್ತದೆ?’ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಬೈಬಲಿನ ಮುಖ್ಯಾಂಶಗಳ ಚರ್ಚೆಯಲ್ಲಿ ಈ ವಿಷಯಗಳ ಕುರಿತು ಹೇಳಿಕೆ ನೀಡುವಂತೆ ನಿಮ್ಮ ಕುಟುಂಬವನ್ನು ಪ್ರೋತ್ಸಾಹಿಸಿರಿ. ಅವರು ಯಾವ ವಚನಗಳ ಮೇಲೆ ಹೇಳಿಕೆ ನೀಡುತ್ತಾರೊ ಅವು ಅವರ ಜ್ಞಾಪಕದಲ್ಲಿ ಉಳಿಯುವುದು ಸಂಭವನೀಯ.

ಒಳ್ಳೆಯ ಮಾದರಿಯನ್ನಿಡಿ

ಬಾಯಿಮಾತಿನಿಂದಷ್ಟೇಯಲ್ಲ, ಕ್ರಿಯೆಯಿಂದಲೂ ನೀವು ಕಲಿಸುತ್ತೀರಿ. ನೀವು ಹೇಳುವ ಮಾತುಗಳನ್ನು ಹೇಗೆ ಅನ್ವಯಿಸುವುದೆಂಬುದರ ಪ್ರಾಯೋಗಿಕ ಮಾದರಿಯನ್ನು ನಿಮ್ಮ ಕ್ರಿಯೆಗಳು ಒದಗಿಸುತ್ತವೆ. ಮಕ್ಕಳು ಕಲಿಯುವ ವಿಧವು ಇದೇ. ಅವರು ತಮ್ಮ ಹೆತ್ತವರನ್ನು ಅನುಕರಿಸುವಾಗ, ತಾವು ಹೆತ್ತವರಂತಾಗಲು ಬಯಸುತ್ತೇವೆ ಎಂಬುದಕ್ಕೆ ಅವರು ಪುರಾವೆ ನೀಡುತ್ತಾರೆ. ತಮ್ಮ ಹೆತ್ತವರು ಮಾಡುವುದನ್ನೇ ತಾವೂ ಮಾಡುವಾಗ ಹೇಗನಿಸುವುದೆಂದು ತಿಳಿಯುವುದು ಅವರ ಬಯಕೆಯಾಗಿರುತ್ತದೆ. ಅದೇ ರೀತಿ, ನೀವು ಯಾರಿಗೆ ಕಲಿಸುತ್ತೀರೊ ಅವರು, ‘ನೀವು ಕ್ರಿಸ್ತನನ್ನು ಅನುಕರಿಸುವಂತೆಯೇ ಅವರು ನಿಮ್ಮನ್ನು ಅನುಕರಿಸುವಾಗ,’ ಯೆಹೋವನ ಮಾರ್ಗಗಳಲ್ಲಿ ನಡೆಯುವುದರಿಂದ ಸಿಗುವ ಆಶೀರ್ವಾದಗಳನ್ನು ಅವರೂ ಅನುಭವಿಸತೊಡಗುತ್ತಾರೆ. (1 ಕೊರಿಂ. 11:1) ಅವರೊಂದಿಗೆ ದೇವರು ಮಾಡುವ ವ್ಯವಹಾರವು ಅವರ ಸ್ವಂತ ಅನುಭವಗಳ ಭಾಗವಾಗಿ ಪರಿಣಮಿಸುತ್ತದೆ.

ಇದು ಒಳ್ಳೆಯ ಮಾದರಿಯನ್ನಿಡುವುದರ ಪ್ರಾಮುಖ್ಯತೆಯ ಗಂಭೀರವಾದ ಮರುಜ್ಞಾಪನವಾಗಿದೆ. “ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳ” ಜನರಾಗಿ ನಾವು ಇಡುವ ಮಾದರಿಯು, ನಾವು ಯಾರಿಗೆ ಬೋಧಿಸುತ್ತೇವೊ ಅವರಿಗೆ ಬೈಬಲ್‌ ಮೂಲತತ್ತ್ವಗಳನ್ನು ಹೇಗೆ ಅನ್ವಯಿಸುವುದೆಂಬುದಕ್ಕೆ ಸಜೀವವಾದ ಪುರಾವೆಯನ್ನು ನೀಡುವುದರಲ್ಲಿ ಹೆಚ್ಚಿನ ಸಹಾಯವನ್ನು ಒದಗಿಸುವುದು. (2 ಪೇತ್ರ 3:11) ಒಬ್ಬ ಬೈಬಲ್‌ ವಿದ್ಯಾರ್ಥಿಯು ಕ್ರಮವಾಗಿ ಬೈಬಲನ್ನು ಓದುವಂತೆ ನೀವು ಅವನನ್ನು ಪ್ರೋತ್ಸಾಹಿಸುವಲ್ಲಿ, ಅದನ್ನು ಸ್ವತಃ ನೀವೇ ಶ್ರದ್ಧೆಯಿಂದ ಓದಿರಿ. ನಿಮ್ಮ ಮಕ್ಕಳು ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಡೆಯುವಂತೆ ನೀವು ಬಯಸುವಲ್ಲಿ, ನಿಮ್ಮ ಸ್ವಂತ ವರ್ತನೆಗಳು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿವೆ ಎಂಬುದನ್ನು ಅವರು ಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಿರಿ. ಸಭೆಯು ಶುಶ್ರೂಷೆಯಲ್ಲಿ ಹುರುಪುಳ್ಳದ್ದಾಗಿರಬೇಕೆಂದು ನೀವು ಬೋಧಿಸುವಲ್ಲಿ, ಆ ಕೆಲಸದಲ್ಲಿ ನೀವೂ ಪೂರ್ಣವಾಗಿ ಭಾಗವಹಿಸುವಂತೆ ನೋಡಿಕೊಳ್ಳಿರಿ. ನೀವು ಏನನ್ನು ಬೋಧಿಸುತ್ತೀರೊ ಅದನ್ನು ನೀವೇ ಮಾಡುವಲ್ಲಿ, ಇತರರನ್ನು ಪ್ರಚೋದಿಸುವ ವಿಷಯದಲ್ಲಿ ನೀವು ಹೆಚ್ಚು ಉತ್ತಮವಾದ ಸ್ಥಾನದಲ್ಲಿರುವಿರಿ.—ರೋಮಾ. 2:21-23.

ನಿಮ್ಮ ಬೋಧನೆಯನ್ನು ಉತ್ತಮಗೊಳಿಸುವ ದೃಷ್ಟಿಕೋನದಿಂದ, ಈ ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ‘ನಾನು ಉಪದೇಶ ನೀಡುವಾಗ, ಅದನ್ನು ಕೇಳಿಸಿಕೊಳ್ಳುವವರು ತಮ್ಮ ಮನೋಭಾವ, ಮಾತು ಅಥವಾ ಕ್ರಿಯೆಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡುವಂಥ ರೀತಿಯಲ್ಲಿ ಮಾಡುತ್ತೇನೊ? ವಿಷಯಗಳನ್ನು ಸ್ಪಷ್ಟಗೊಳಿಸಲಿಕ್ಕಾಗಿ, ನಾನು ಒಂದು ವಿಚಾರವು ಅಥವಾ ವರ್ತನಾರೀತಿಯು ಇನ್ನೊಂದಕ್ಕಿಂತ ಭಿನ್ನವಾಗಿದೆಯೆಂದು ತೋರಿಸುತ್ತೇನೊ? ನಾನು ಹೇಳುವ ವಿಷಯವನ್ನು ನನ್ನ ವಿದ್ಯಾರ್ಥಿಗಳು, ನನ್ನ ಮಕ್ಕಳು ಅಥವಾ ಕೂಟದಲ್ಲಿನ ಸಭಿಕರು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡಲು ನಾನೇನು ಮಾಡುತ್ತೇನೆ? ನನ್ನ ಕೇಳುಗರು ಏನನ್ನು ಕಲಿಯುತ್ತಿದ್ದಾರೋ ಅದನ್ನು ಹೇಗೆ ಅನ್ವಯಿಸಬೇಕೆಂಬುದನ್ನು ನಾನು ಅವರಿಗೆ ಸ್ಪಷ್ಟವಾಗಿ ತೋರಿಸುತ್ತೇನೊ? ನನ್ನ ಮಾದರಿಯಲ್ಲಿ ಇದನ್ನು ಅವರು ಕಾಣಬಲ್ಲರೊ? ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ಅವರು ತೋರಿಸುವ ಪ್ರತಿವರ್ತನೆಯು, ಯೆಹೋವನೊಂದಿಗೆ ಅವರಿಗಿರುವ ಸಂಬಂಧವನ್ನು ಹೇಗೆ ಪ್ರಭಾವಿಸಬಲ್ಲದೆಂಬುದನ್ನು ಅವರು ಗಣ್ಯಮಾಡುತ್ತಾರೊ?’ (ಜ್ಞಾನೋ. 9:10) ಬೋಧಕರೋಪಾದಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಈ ವಿಷಯಗಳಿಗೆ ಗಮನ ಕೊಡುತ್ತ ಮುಂದುವರಿಯಿರಿ. “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊ. 4:16.

ನಿಮ್ಮ ಬೋಧನೆಯಲ್ಲಿ ಪರಿಣಾಮಕಾರಿಯಾಗಿರಲಿಕ್ಕಾಗಿ

  • ನಿಮ್ಮ ಸ್ವಂತ ಸಾಮರ್ಥ್ಯದ ಮೇಲಲ್ಲ, ಯೆಹೋವನ ಮೇಲೆ ಅವಲಂಬಿಸಿರಿ

  • ದೇವರ ವಾಕ್ಯದ ಶಕ್ತಿಯನ್ನು ಗಣ್ಯಮಾಡಿ, ಮತ್ತು ಅದನ್ನು ಉತ್ತಮವಾಗಿ ಉಪಯೋಗಿಸಿರಿ

  • ನಿಮ್ಮ ಕಡೆಗೆ ಗಮನ ಸೆಳೆಯುವುದನ್ನಲ್ಲ, ಬದಲಾಗಿ ಯೆಹೋವನನ್ನು ಗೌರವಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ

  • ಇತರರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಪರಸ್ಪರ ವೈದೃಶ್ಯಗಳನ್ನು ಉಪಯೋಗಿಸಿರಿ

  • ಕೇಳುಗರು ಯೋಚಿಸುವಂತೆ ಅವರನ್ನು ಪ್ರೋತ್ಸಾಹಿಸಿ

  • ತಮ್ಮ ಹೇತುಗಳು ಮತ್ತು ಅನಿಸಿಕೆಗಳನ್ನು ಪರೀಕ್ಷಿಸುವಂತೆ ಇತರರನ್ನು ಉತ್ತೇಜಿಸಿ

  • ಬೈಬಲ್‌ ಜ್ಞಾನವು ಅವರ ಜೀವಿತಗಳ ಮೇಲೆ ಹೇಗೆ ಪರಿಣಾಮ ಬೀರಬೇಕೆಂಬುದನ್ನು ಪರಿಗಣಿಸುವಂತೆ ಕೇಳುಗರನ್ನು ಪ್ರೋತ್ಸಾಹಿಸಿ

  • ನೀವೇ ಅನುಕರಣೆಗೆ ಯೋಗ್ಯರಾದ ಮಾದರಿಯಾಗಿರಬೇಕು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ