ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 28 ಪು. 179-ಪು. 180 ಪ್ಯಾ. 7
  • ಸಂಭಾಷಣಾ ರೀತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಭಾಷಣಾ ರೀತಿ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸ್ವಾಭಾವಿಕತೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ವಾಭಾವಿಕ ಸಂಭಾಷಣೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ನಿರರ್ಗಳವಾಗಿ ಭಾಷಣ ನೀಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವುದನ್ನೇ’ ಮಾತಾಡಿರಿ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 28 ಪು. 179-ಪು. 180 ಪ್ಯಾ. 7

ಅಧ್ಯಾಯ 28

ಸಂಭಾಷಣಾ ರೀತಿ

ನೀವೇನು ಮಾಡುವ ಅಗತ್ಯವಿದೆ?

ದಿನನಿತ್ಯದ ಸಂಭಾಷಣೆಯ ಶೈಲಿಯಲ್ಲಿ, ಆದರೆ ನಿಮ್ಮ ಸಭಿಕರಿಗೆ ತಕ್ಕಂತೆ ಹೊಂದಿಸಿಕೊಂಡು ಮಾತಾಡಿರಿ.

ಇದು ಪ್ರಾಮುಖ್ಯವೇಕೆ?

ತಕ್ಕದಾದ ಸಂಭಾಷಣಾ ಶೈಲಿಯ ಭಾಷಣವು ನಿಮ್ಮ ಸಭಿಕರನ್ನು ಆರಾಮವಾಗಿಸಿ, ನೀವು ಹೇಳುವುದನ್ನು ಅವರು ಕ್ಷಿಪ್ರವಾಗಿ ಗ್ರಹಿಸುವಂತೆ ಸಹಾಯಮಾಡುತ್ತದೆ.

ಜನರು ತಮ್ಮ ಮಿತ್ರರೊಂದಿಗೆ ಮಾತಾಡುತ್ತಿರುವಾಗ ಸಾಮಾನ್ಯವಾಗಿ ಆರಾಮವಾಗಿರುತ್ತಾರೆ. ಅವರ ಮಾತುಗಳು ಸಹಜವಾಗಿ ಹೊರಬರುತ್ತವೆ. ಕೆಲವರ ಸಂಭಾಷಣೆಯಲ್ಲಿ ಕಳೆದುಂಬಿರುತ್ತದೆ; ಇನ್ನೂ ಕೆಲವರು, ಮಾತಾಡುವಾಗ ಭಾವನೆಗಳನ್ನು ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ. ಆದರೂ, ಅವರ ಮಾತುಗಳ ಸ್ವಾಭಾವಿಕತೆಯು ಹಿಡಿಸುವಂತಹದ್ದಾಗಿರುತ್ತದೆ.

ಆದರೆ ಅಪರಿಚಿತನೊಬ್ಬನನ್ನು ಸಮೀಪಿಸುವಾಗ, ವಿಪರೀತ ಪರಿಚಯವಿದ್ದವರಂತೆ ಅಥವಾ ತೀರ ಮಾಮೂಲಿಯಾಗಿ ಮಾತಾಡುವುದು ಸೂಕ್ತವಾದದ್ದಲ್ಲ. ವಾಸ್ತವದಲ್ಲಿ, ಕೆಲವು ಸಂಸ್ಕೃತಿಗಳಲ್ಲಿ ಅಪರಿಚಿತರೊಂದಿಗೆ ನಡೆಯುವ ಎಲ್ಲ ಸಂಭಾಷಣೆಗಳು ತುಂಬ ಔಪಚಾರಿಕ ರೀತಿಯಲ್ಲಿ ಆರಂಭಗೊಳ್ಳುತ್ತವೆ. ಹೀಗೆ ಯೋಗ್ಯ ಗೌರವವನ್ನು ತೋರಿಸಿದ ಬಳಿಕ, ವಿವೇಚನೆಯ ಮೇಲೆ ಹೊಂದಿಕೊಂಡು, ಕಡಿಮೆ ಔಪಚಾರಿಕವಾದ ಮತ್ತು ಹೆಚ್ಚು ಸಂಭಾಷಣಾ ರೀತಿಯ ಪದಪ್ರಯೋಗ ಮಾಡುವುದು ಅಪೇಕ್ಷಣೀಯವಾಗಿರಬಹುದು.

ನೀವು ವೇದಿಕೆಯ ಮೇಲಿಂದ ಮಾತಾಡುವಾಗ ಸಹ ಜಾಗ್ರತೆ ವಹಿಸಬೇಕು. ತೀರ ಮಾಮೂಲಿಯಾದ ಭಾಷೆಯು ಕ್ರೈಸ್ತ ಕೂಟದ ಘನತೆಯನ್ನು ಮತ್ತು ಹೇಳಲ್ಪಡುವ ವಿಷಯದ ಗಂಭೀರತೆಯನ್ನು ಕುಂದಿಸುತ್ತದೆ. ಕೆಲವು ಭಾಷೆಗಳಲ್ಲಿ, ಒಬ್ಬ ವಯಸ್ಕ ವ್ಯಕ್ತಿಯನ್ನೊ, ಅಧ್ಯಾಪಕರನ್ನೊ, ಅಧಿಕಾರಿಯನ್ನೊ, ಹೆತ್ತವರನ್ನೊ ಸಂಬೋಧಿಸುವಾಗ ನಿರ್ದಿಷ್ಟ ಅಭಿವ್ಯಕ್ತಿಗಳನ್ನು ಉಪಯೋಗಿಸಬೇಕಾಗುತ್ತದೆ. (ಅ. ಕೃತ್ಯಗಳು 7:1, 2 ಮತ್ತು 13:17ರಲ್ಲಿ ಉಪಯೋಗಿಸಿರುವ ಪದಗಳನ್ನು ಗಮನಿಸಿರಿ.) ಒಬ್ಬ ವಿವಾಹ ಸಂಗಾತಿಯನ್ನು ಅಥವಾ ಆಪ್ತಮಿತ್ರನನ್ನು ಸಂಬೋಧಿಸುವಾಗ ವಿಭಿನ್ನ ಅಭಿವ್ಯಕ್ತಿಗಳನ್ನು ಉಪಯೋಗಿಸಲಾಗುತ್ತದೆ. ವೇದಿಕೆಯ ಮೇಲಿನ ನಮ್ಮ ಭಾಷಣ ರೀತಿಯು ತೀರ ಔಪಚಾರಿಕವಾಗಿರಬಾರದಾದರೂ, ಅದು ಗೌರವಪೂರ್ಣವಾಗಿರಬೇಕು.

ಆದರೆ ಒಬ್ಬನ ಭಾಷಣವು ಅನಾವಶ್ಯಕವಾಗಿ ಬಿಗುಮಾನವುಳ್ಳದ್ದಾಗಿ ಅಥವಾ ಔಪಚಾರಿಕವಾಗಿ ಕೇಳಿಬರುವಂತೆ ಮಾಡಬಹುದಾದ ಸಂಗತಿಗಳೂ ಇವೆ. ಇವುಗಳಲ್ಲಿ ಒಂದು, ವಾಕ್ಯರಚನೆ ಅಥವಾ ಪದವಿನ್ಯಾಸವಾಗಿದೆ. ಭಾಷಣಕಾರನು ಅಭಿವ್ಯಕ್ತಿಗಳನ್ನು ಮುದ್ರಿಸಲ್ಪಟ್ಟಿರುವಂತೆಯೇ ಪುನರುಚ್ಚರಿಸಲು ಪ್ರಯತ್ನಿಸುವಲ್ಲಿ, ಒಂದು ಸಮಸ್ಯೆ ಏಳುತ್ತದೆ. ಲಿಖಿತ ಶೈಲಿಯು ಸಾಮಾನ್ಯವಾಗಿ ಮಾತಾಡುವ ಶೈಲಿಗಿಂತ ತೀರ ಭಿನ್ನವಾಗಿರುತ್ತದೆ. ಒಂದು ಭಾಷಣಕ್ಕಾಗಿ ತಯಾರಿ ಮಾಡುವಾಗ ಸಾಮಾನ್ಯವಾಗಿ ಸಂಶೋಧನೆಯನ್ನು ಪ್ರಕಾಶನಗಳಲ್ಲೇ ಮಾಡಲಾಗುತ್ತದೆಂಬುದು ನಿಜ. ಭಾಷಣಕ್ಕೆ ಆಧಾರವನ್ನು ಪ್ರಾಯಶಃ ಒಂದು ಮುದ್ರಿತ ಹೊರಮೇರೆಯೇ ಕೊಡುತ್ತದೆ. ಆದರೆ ನೀವು ಆಲೋಚನೆಗಳನ್ನು ಅವು ಮುದ್ರಿತರೂಪದಲ್ಲಿ ಕಂಡುಬರುವ ಪ್ರಕಾರವೇ ವ್ಯಕ್ತಪಡಿಸುವುದಾದರೆ ಅಥವಾ ನಿಮ್ಮ ಭಾಷಣದ ಸಮಯದಲ್ಲಿ ನೀವು ಮುದ್ರಿತ ಹೊರಮೇರೆಯಿಂದ ನೇರವಾಗಿ ಓದುವುದಾದರೆ, ನಿಮ್ಮ ಭಾಷಣವು ಸಂಭಾಷಣಾ ರೂಪದಂತೆ ಕೇಳಿಬರುವುದು ಅಸಂಭವನೀಯ. ಸಂಭಾಷಣಾ ಶೈಲಿಯಲ್ಲಿ ಭಾಷಣ ಕೊಡಬೇಕಾದರೆ, ನಿಮ್ಮ ಆಲೋಚನೆಗಳನ್ನು ಸ್ವಂತ ಮಾತುಗಳಲ್ಲಿ ಹೇಳಿರಿ ಮತ್ತು ಜಟಿಲ ವಾಕ್ಯ ರಚನೆಯನ್ನು ಉಪಯೋಗಿಸದಿರಿ.

ಇನ್ನೊಂದು ಸಂಗತಿಯು, ವೇಗದ ಗತಿಯಲ್ಲಿ ಬದಲಾವಣೆಯೇ ಆಗಿದೆ. ಅನೇಕವೇಳೆ, ತುಸು ಬಿಗುಮಾನವುಳ್ಳ ಮತ್ತು ಔಪಚಾರಿಕವಾದ ಭಾಷಣದಲ್ಲಿನ ಪದಗಳ ಪ್ರವಾಹದಲ್ಲಿ, ಪ್ರತಿಯೊಂದು ಪದದ ನಡುವಿನ ಅಂತರವು ಒಂದೇ ಸಮನಾಗಿರುತ್ತದೆ ಮತ್ತು ವೇಗವು ಸಹ ಅತ್ಯಧಿಕವಾಗಿ ಒಂದೇ ಧಾಟಿಯಲ್ಲಿರುತ್ತದೆ. ಸಾಮಾನ್ಯವಾದ ಸಂಭಾಷಣೆಯಲ್ಲಿ ಮಾತಿನ ವೇಗದಲ್ಲಿ ಬದಲಾವಣೆಗಳಿರುತ್ತವೆ ಮತ್ತು ಮಾತಾಡುವಾಗ ನಿಲ್ಲಿಸುವ ಸಮಯಾವಧಿಗಳೂ ವಿವಿಧವಾಗಿರುತ್ತವೆ.

ನೀವು ಒಂದು ದೊಡ್ಡ ಸಭೆಗೆ ಮಾತಾಡುವಾಗ, ಸಭಿಕರ ಗಮನವನ್ನು ಹಿಡಿದಿಡಲಿಕ್ಕಾಗಿ, ಭಾಷಣದ ಸಂಭಾಷಣಾ ಶೈಲಿಗೆ ಹೆಚ್ಚು ಗಟ್ಟಿಯಾದ ಸ್ವರ, ತೀಕ್ಷ್ಣತೆ ಮತ್ತು ಉತ್ಸಾಹವನ್ನು ಕೂಡಿಸಬೇಕು ಎಂಬುದಂತೂ ನಿಶ್ಚಯ.

ಶುಶ್ರೂಷೆಗೆ ತಕ್ಕದಾದ ಸಂಭಾಷಣಾ ರೀತಿಯನ್ನು ಉಪಯೋಗಿಸಲಿಕ್ಕಾಗಿ, ನೀವು ಪ್ರತಿದಿನ ಚೆನ್ನಾಗಿ ಮಾತನಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ನೀವು ತುಂಬ ವಿದ್ಯಾವಂತರಾಗಿರಬೇಕೆಂದು ಇದರ ಅರ್ಥವಲ್ಲ. ನೀವು ಏನು ಹೇಳುತ್ತೀರೋ ಅದನ್ನು ಇತರರು ಗೌರವಭಾವದಿಂದ ಆಲಿಸುವಂತೆ ಮಾಡುವ ಮಾತುಕತೆಯ ರೂಢಿಗಳನ್ನು ಬೆಳೆಸಿಕೊಳ್ಳುವುದು ಒಳ್ಳೇದಾಗಿದೆ. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ನಿಮ್ಮ ದೈನಂದಿನ ಸಂಭಾಷಣೆಯಲ್ಲಿ ನೀವು ಈ ಕೆಳಗಿನ ಅಂಶಗಳಲ್ಲಿ ಅಭಿವೃದ್ಧಿಮಾಡಲು ಪ್ರಯತ್ನಿಸಬೇಕೊ ಎಂಬುದನ್ನು ಪರಿಗಣಿಸಿರಿ.

  1.  ಉತ್ತಮ ವ್ಯಾಕರಣವನ್ನು ಉಲ್ಲಂಘಿಸುವ ಅಥವಾ ಯಾರ ಜೀವನ ಮಾರ್ಗಗಳು ದೈವಿಕ ಮಟ್ಟಗಳನ್ನು ಅಗೌರವಿಸುತ್ತವೋ ಅಂಥ ಜನರೊಂದಿಗೆ ನಿಮ್ಮನ್ನು ಗುರುತಿಸುವ ಅಭಿವ್ಯಕ್ತಿಗಳಿಂದ ದೂರವಿರಿ. ಕೊಲೊಸ್ಸೆ 3:8 ರಲ್ಲಿರುವ ಸಲಹೆಯ ಮೇರೆಗೆ, ಒರಟಾದ ಅಥವಾ ಅಶ್ಲೀಲವಾದ ಭಾಷೆಯನ್ನು ತೊರೆಯಿರಿ. ಆದರೆ ಆಡುಭಾಷೆಯು ಆಕ್ಷೇಪಣೀಯವಾಗಿರುವುದಿಲ್ಲ. ಬಳಕೆಯ ಮಾತುಗಳು ಅಥವಾ ದೈನಂದಿನ ಆಡುಮಾತುಗಳು ಅನೌಪಚಾರಿಕವಾಗಿದ್ದರೂ, ಅವು ಅಂಗೀಕಾರಾರ್ಹವಾದ ಮಾತಿನ ಮಟ್ಟಗಳಿಗೆ ಹೊಂದಿಕೊಂಡಿರುತ್ತವೆ.

  2. ನಿಮಗಿರುವ ಪ್ರತಿಯೊಂದು ವಿಭಿನ್ನ ವಿಚಾರವನ್ನು ತಿಳಿಯಪಡಿಸಲಿಕ್ಕಾಗಿ ಒಂದೇ ರೀತಿಯ ಅಭಿವ್ಯಕ್ತಿಗಳನ್ನು ಅಥವಾ ಪದಗುಚ್ಛಗಳನ್ನು ಸತತವಾಗಿ ಪುನರುಚ್ಚರಿಸುವುದರಿಂದ ದೂರವಿರಿ. ನೀವು ಏನನ್ನು ಅರ್ಥೈಸುತ್ತೀರೊ ಅದನ್ನು ಸ್ಪಷ್ಟವಾಗಿ ತಿಳಿಯಪಡಿಸುವ ಪದಗಳನ್ನು ಉಪಯೋಗಿಸಲು ಕಲಿಯಿರಿ.

  3. ಹೇಳಿದ್ದನ್ನೇ ಅನಾವಶ್ಯಕವಾಗಿ ಪುನಃ ಹಿಂದೆ ಹೋಗಿ ಹೇಳುವುದನ್ನು ತಪ್ಪಿಸಲಿಕ್ಕಾಗಿ, ನೀವು ಏನು ಹೇಳಲು ಬಯಸುತ್ತೀರೋ ಅದನ್ನು ಮೊದಲು ಸ್ಪಷ್ಟವಾಗಿ ಮನಸ್ಸಿಗೆ ತಂದುಕೊಳ್ಳಿ; ಬಳಿಕ ಮಾತಾಡತೊಡಗಿರಿ.

  4. ತೀರ ಹೆಚ್ಚು ಪದಗಳನ್ನು ಉಪಯೋಗಿಸುತ್ತಾ ಉತ್ತಮ ವಿಚಾರಗಳನ್ನು ಮರೆಮಾಡಿಬಿಡಬೇಡಿ. ನೆನಪಿನಲ್ಲಿಡಬೇಕಾದ ಅಂಶವನ್ನು ಒಂದು ಸರಳ ವಾಕ್ಯದಲ್ಲಿ ಸ್ಪಷ್ಟವಾಗಿ ಹೇಳುವ ರೂಢಿಯನ್ನು ಮಾಡಿಕೊಳ್ಳಿರಿ.

  5. ಇತರರಿಗೆ ಗೌರವವನ್ನು ತೋರಿಸುವಂಥ ರೀತಿಯಲ್ಲಿ ಮಾತಾಡಿರಿ.

ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ವಿಧ

  • ನಿಮ್ಮ ಸಭಿಕರಲ್ಲಿರುವವರ ಕಡೆಗೆ ನಿಮಗಿರುವ ದೃಷ್ಟಿಕೋನದಿಂದ ಪ್ರಾರಂಭಿಸಿರಿ. ಅವರನ್ನು ಸ್ನೇಹಿತರಂತೆ ನೋಡಿರಿ, ಆದರೆ ವಿಪರೀತ ಮಾಮೂಲಿಯಾದ ರೀತಿಯಲ್ಲಲ್ಲ. ಅವರನ್ನು ಗೌರವದಿಂದ ಉಪಚರಿಸಿರಿ.

  • ಆಶುಭಾಷಣ ಮಾಡಿರಿ. ಮುದ್ರಿತ ವಿಷಯಭಾಗದಲ್ಲಿರುವ ಪದಗಳನ್ನೇ ಉಪಯೋಗಿಸಲು ಪ್ರಯತ್ನಿಸಬೇಡಿರಿ. ವಿಚಾರಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಹೇಳಿರಿ. ಚಿಕ್ಕ ವಾಕ್ಯಗಳನ್ನು ಉಪಯೋಗಿಸಿರಿ ಮತ್ತು ನಿಮ್ಮ ವೇಗವನ್ನು ಬದಲಾಯಿಸುತ್ತಾ ಇರಿ.

  • ಸಂವಾದವನ್ನು ಮಾಡುವ ಅಪೇಕ್ಷೆಯ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಹೃತ್ಪೂರ್ವಕವಾಗಿ ಮಾತಾಡಿರಿ. ನಿಮ್ಮ ಸಂದೇಶವು ಪ್ರಾಮುಖ್ಯವೇ ಹೊರತು ನೀವು ನಿಮ್ಮ ಬಗ್ಗೆ ಇತರರ ಮನಸ್ಸಿನಲ್ಲಿ ಮೂಡಿಸುತ್ತಿರುವ ಅಭಿಪ್ರಾಯವಲ್ಲ.

  • ನಿಮ್ಮ ದಿನನಿತ್ಯದ ಸಂಭಾಷಣೆಯನ್ನು ಉತ್ತಮಗೊಳಿಸಿರಿ. ಈ ಪುಟದಲ್ಲಿ ಕೊಡಲಾಗಿರುವ ಸಲಹೆಗಳನ್ನು ಒಂದೊಂದಾಗಿ ಉಪಯೋಗಿಸಿ ಅಭಿವೃದ್ಧಿಮಾಡಲು ಪ್ರಯತ್ನಿಸಿರಿ.

ಅಭ್ಯಾಸಪಾಠ: ನಿಮ್ಮ ಸ್ವಂತ ಸಂಭಾಷಣಾ ರೂಢಿಗಳನ್ನು ಪರೀಕ್ಷಿಸಿರಿ. ಮೇಲೆ ಸಂಖ್ಯೆಗನುಸಾರ ಕೊಡಲ್ಪಟ್ಟಿರುವ ಐದು ಅಂಶಗಳನ್ನು, ಒಮ್ಮೆಗೆ ಒಂದರಂತೆ ಇಡೀ ದಿನ ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನೀವು ತಪ್ಪು ಮಾಡುವಾಗೆಲ್ಲ, ನೀವು ಹೇಳಬಯಸುವ ವಿಚಾರವನ್ನು ಸರಿಪಡಿಸುತ್ತಾ, ಕಡಿಮೆಪಕ್ಷ ನಿಮ್ಮ ಮನಸ್ಸಿನಲ್ಲಿಯಾದರೂ ಪುನರಾವರ್ತಿಸಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ