ಅಧ್ಯಾಯ 40
ಹೇಳಿಕೆಯ ನಿಷ್ಕೃಷ್ಟತೆ
ಒಬ್ಬ ಕ್ರೈಸ್ತನು ಸತ್ಯವಲ್ಲದ ಹೇಳಿಕೆಯೊಂದನ್ನು ಏಕೆ ಮಾಡಬಹುದು? ಅವನು ತಾನು ಕೇಳಿಸಿಕೊಂಡಿರುವ ಯಾವುದೋ ವಿಷಯವನ್ನು, ನಿಜತ್ವಗಳನ್ನು ಪರೀಕ್ಷಿಸಲು ಸಮಯವನ್ನು ತೆಗೆದುಕೊಳ್ಳದೆ ಕೇವಲ ಪುನರುಚ್ಚರಿಸುತ್ತಿರಬಹುದು. ಅಥವಾ, ಅರಿವಿಲ್ಲದೇ ಅವನು ತನ್ನ ಮಾಹಿತಿಯ ಮೂಲವನ್ನು ತಪ್ಪಾಗಿ ಓದಿರುವ ಕಾರಣ, ಅದನ್ನು ಅತಿಶಯಿಸಿ ತಿಳಿಸುತ್ತಿರಬಹುದು. ಆದರೆ ನಾವು ಅತಿ ಚಿಕ್ಕ ವಿಷಯಗಳಲ್ಲಿಯೂ ನಿಷ್ಕೃಷ್ಟತೆಗೆ ಜಾಗರೂಕತೆಯ ಗಮನವನ್ನು ಕೊಡುವಲ್ಲಿ, ನಮ್ಮ ಸಂದೇಶದ ಹೆಚ್ಚು ಪ್ರಾಮುಖ್ಯವಾದ ಅಂಶಗಳ ಸತ್ಯತೆಯಲ್ಲೂ ತಾವು ಭರವಸೆಯಿಡಸಾಧ್ಯವಿದೆ ಎಂಬುದನ್ನು ನಮ್ಮ ಕೇಳುಗರು ತಿಳಿದುಕೊಳ್ಳುವರು.
ಕ್ಷೇತ್ರ ಶುಶ್ರೂಷೆಯಲ್ಲಿ. ತಮಗೆ ಕಲಿಯಲು ಇನ್ನೂ ಎಷ್ಟೋ ವಿಷಯಗಳಿವೆ ಎಂದೆಣಿಸುತ್ತಾ ಅನೇಕರು ಕ್ಷೇತ್ರ ಶುಶ್ರೂಷೆಯಲ್ಲಿ ತೊಡಗಲು ಭಯಪಡುತ್ತಾರೆ. ಆದರೂ, ತಮಗೆ ಸತ್ಯದ ಕುರಿತಾದ ಮೂಲಭೂತ ಜ್ಞಾನವು ಮಾತ್ರ ಇರುವುದಾದರೂ, ತಾವು ಪರಿಣಾಮಕಾರಿಯಾದ ಸಾಕ್ಷಿಯನ್ನು ಕೊಡಶಕ್ತರೆಂಬುದನ್ನು ಇವರು ಬೇಗನೆ ಕಂಡುಕೊಳ್ಳುತ್ತಾರೆ. ಇದು ಹೇಗೆ? ತಯಾರಿಯೇ ಇದಕ್ಕೆ ಕೀಲಿ ಕೈಯಾಗಿದೆ.
ಕ್ಷೇತ್ರ ಸೇವೆಗೆ ಹೋಗುವ ಮೊದಲು, ನೀವು ಚರ್ಚಿಸಲು ಬಯಸುವಂಥ ವಿಷಯವಸ್ತುವಿನ ಪರಿಚಯಮಾಡಿಕೊಳ್ಳಿರಿ. ನಿಮ್ಮ ಕೇಳುಗರು ಕೇಳಬಹುದಾದ ಪ್ರಶ್ನೆಗಳನ್ನು ಮುಂಭಾವಿಸಲು ಪ್ರಯತ್ನಿಸಿರಿ. ಸಂತೃಪ್ತಿಕರವಾದ ಬೈಬಲಾಧಾರಿತ ಉತ್ತರಗಳಿಗಾಗಿ ಹುಡುಕಿರಿ. ಇದು ನೀವು ಆರಾಮವಾದ ಮನಃಸ್ಥಿತಿಯಿಂದ ನಿಷ್ಕೃಷ್ಟ ಉತ್ತರಗಳನ್ನು ಕೊಡುವಂತೆ ನಿಮ್ಮನ್ನು ತಯಾರಿಸುವುದು. ನೀವು ಒಂದು ಬೈಬಲ್ ಅಧ್ಯಯನವನ್ನು ನಡೆಸಲು ಹೋಗಲಿದ್ದೀರೊ? ಹಾಗಿರುವಲ್ಲಿ ಅಧ್ಯಯನಕ್ಕಾಗಿರುವ ವಿಷಯಭಾಗವನ್ನು ಜಾಗರೂಕತೆಯಿಂದ ಪುನರ್ವಿಮರ್ಶಿಸಿರಿ. ಮುದ್ರಿತ ಪ್ರಶ್ನೆಗಳ ಉತ್ತರಗಳಿಗಿರುವ ಶಾಸ್ತ್ರಾಧಾರವು ನಿಮಗೆ ಅರ್ಥವಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ.
ಆದರೆ ಮನೆಯವನೊ ಜೊತೆಕಾರ್ಮಿಕನೊ ನೀವು ಉತ್ತರವನ್ನು ತಯಾರಿಸಿರದಂಥ ಒಂದು ಪ್ರಶ್ನೆಯನ್ನು ಕೇಳುವುದಾದರೆ ಆಗೇನು? ನಿಜತ್ವಗಳು ನಿಮಗೆ ನಿಶ್ಚಿತವಾಗಿ ತಿಳಿದಿರದಿದ್ದಲ್ಲಿ, ಊಹಿಸಿ ಉತ್ತರ ಕೊಡುವ ಪ್ರೇರೇಪಣೆಯನ್ನು ತಡೆದು ಹಿಡಿಯಿರಿ. “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.” (ಜ್ಞಾನೋ. 15:28) ನಿಮಗೆ ಬೇಕಾಗಿರುವ ಸಹಾಯವನ್ನು ನೀವು ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್) ಪುಸ್ತಕದಲ್ಲಿ ಅಥವಾ “ಚರ್ಚೆಗಾಗಿ ಬೈಬಲ್ ವಿಷಯಗಳು” ಪುಸ್ತಿಕೆಯಲ್ಲಿ—ಇವು ನಿಮಗೆ ಅರ್ಥವಾಗುವ ಭಾಷೆಯಲ್ಲಿ ಲಭ್ಯವಿರುವಲ್ಲಿ—ಕಂಡುಕೊಳ್ಳಬಹುದು. ಈ ಪುಸ್ತಕಗಳು ನಿಮ್ಮ ಬಳಿ ಲಭ್ಯವಿಲ್ಲದಿರುವಲ್ಲಿ, ನೀವು ತುಸು ಸಂಶೋಧನೆ ನಡೆಸಿ ಹಿಂದಿರುಗಿ ಬರುವಿರೆಂದು ಅವರಿಗೆ ಹೇಳಿರಿ. ನಿಮಗೆ ಪ್ರಶ್ನೆ ಕೇಳಿದವನು ಯಥಾರ್ಥಚಿತ್ತನಾಗಿರುವಲ್ಲಿ, ಅವನು ಸರಿಯಾದ ಉತ್ತರಕ್ಕಾಗಿ ಕಾಯಲು ಹಿಂಜರಿಯನು. ವಾಸ್ತವವಾಗಿ, ನಿಮ್ಮ ದೈನ್ಯಭಾವವನ್ನು ನೋಡಿ ಅವನಿಗೆ ನಿಮ್ಮ ಬಗ್ಗೆ ಸದಭಿಪ್ರಾಯವುಂಟಾಗಬಹುದು.
ಕ್ಷೇತ್ರ ಶುಶ್ರೂಷೆಯಲ್ಲಿ ಅನುಭವಸ್ಥ ಪ್ರಚಾರಕರೊಂದಿಗೆ ಸೇವೆಮಾಡುವುದರಿಂದ, ದೇವರ ವಾಕ್ಯವನ್ನು ಸರಿಯಾಗಿ ಉಪಯೋಗಿಸುವ ಕೌಶಲವನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯ ದೊರೆಯಬಲ್ಲದು. ಅವರು ಯಾವ ವಚನಗಳನ್ನು ಉಪಯೋಗಿಸುತ್ತಾರೆ ಮತ್ತು ಅವುಗಳ ಬಗ್ಗೆ ಹೇಗೆ ತರ್ಕಬದ್ಧವಾಗಿ ಮಾತಾಡುತ್ತಾರೆ ಎಂಬುದನ್ನು ಗಮನಿಸಿರಿ. ಅವರು ಯಾವುದೇ ಸಲಹೆಗಳನ್ನು ಅಥವಾ ತಿದ್ದುಪಾಟನ್ನು ನೀಡುವಲ್ಲಿ, ಅದನ್ನು ದೈನ್ಯಭಾವದಿಂದ ಅಂಗೀಕರಿಸಿರಿ. ಹುರುಪಿನ ಶಿಷ್ಯನಾಗಿದ್ದ ಅಪೊಲ್ಲೋಸನು ಇತರರಿಂದ ಪಡೆದ ಸಹಾಯದಿಂದ ಪ್ರಯೋಜನಪಡೆದನು. ಲೂಕನು ಅವನನ್ನು, “ವಾಕ್ಚಾತುರ್ಯವುಳ್ಳವನು,” “ಶಾಸ್ತ್ರಗಳಲ್ಲಿ ಪ್ರವೀಣನು,” “ಆಸಕ್ತ ಮನಸ್ಸುಳ್ಳವನು” ಮತ್ತು “ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿ”ಸುವವನು ಎಂದು ವರ್ಣಿಸುತ್ತಾನೆ. ಆದರೂ ಅವನ ತಿಳಿವಳಿಕೆಯಲ್ಲಿ ಸ್ವಲ್ಪ ಕೊರತೆಯಿತ್ತು. ಪ್ರಿಸ್ಕಿಲ್ಲಳೂ ಅಕ್ವಿಲನೂ ಇದನ್ನು ಗಮನಿಸಿದಾಗ, ಅವರು ಅವನನ್ನು “ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.”—ಅ. ಕೃ. 18:24-28.
“ನಂಬತಕ್ಕ ವಾಕ್ಯವನ್ನು ದೃಢವಾಗಿ” ಹಿಡಿದುಕೊಳ್ಳುವುದು. ನಾವು ಕೂಟಗಳಲ್ಲಿ ಕೊಡುವ ಭಾಷಣಗಳು, “ಸತ್ಯಕ್ಕೆ ಸ್ತಂಭವೂ ಆಧಾರವೂ” ಆದ ಸಭೆಯ ಪಾತ್ರಕ್ಕೆ ಅತ್ಯಧಿಕ ಗೌರವವನ್ನು ತೋರಿಸಬೇಕು. (1 ತಿಮೊ. 3:15) ಸತ್ಯವನ್ನು ಸಮರ್ಥಿಸಬೇಕಾದರೆ, ನಾವು ಭಾಷಣಗಳಲ್ಲಿ ಉಪಯೋಗಿಸಲು ಯೋಜಿಸುವ ಶಾಸ್ತ್ರವಚನಗಳ ನಿಜಾರ್ಥ ನಮಗೆ ತಿಳಿದಿರುವುದು ಪ್ರಾಮುಖ್ಯ. ಅವುಗಳ ಪೂರ್ವಾಪರವನ್ನು ಮತ್ತು ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳಿರಿ.
ಸಭಾ ಕೂಟದಲ್ಲಿ ನೀವು ಹೇಳುವ ವಿಷಯಗಳನ್ನೇ ಯಾರಾದರೂ ಪುನಃ ಬೇರೊಂದೆಡೆ ಹೇಳಬಹುದು. ಹೌದು, “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು” ಎಂಬುದು ನಿಶ್ಚಯ. (ಯಾಕೋ. 3:2) ಆದರೆ ನಿಷ್ಕೃಷ್ಟವಾದ ಮಾತನಾಡುವಿಕೆಗೆ ಸಹಾಯಮಾಡುವಂಥ ರೂಢಿಗಳನ್ನು ಬೆಳೆಸಿಕೊಳ್ಳುವುದರಿಂದ ನೀವು ಪ್ರಯೋಜನಹೊಂದುವಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸೇರಿರುವ ಅನೇಕ ಮಂದಿ ಸಹೋದರರು ಸಕಾಲದಲ್ಲಿ ಹಿರಿಯರಾಗುತ್ತಾರೆ. ಇಂತಹ ಜವಾಬ್ದಾರಿಗಳಿರುವವರಿಂದ ‘ಇನ್ನೂ ಹೆಚ್ಚನ್ನು’ ನಿರೀಕ್ಷಿಸಲಾಗುತ್ತದೆ. (ಲೂಕ 12:48) ಒಬ್ಬ ಹಿರಿಯನು ಅಲಕ್ಷ್ಯದಿಂದ ಕೊಡುವ ತಪ್ಪು ಸಲಹೆಯ ಕಾರಣ ಸಭೆಯ ಸದಸ್ಯರಿಗೆ ಗಂಭೀರವಾದ ಸಮಸ್ಯೆಗಳೇಳುವಲ್ಲಿ, ಆ ಹಿರಿಯನು ದೇವರ ಅಸಮ್ಮತಿಗೆ ಗುರಿಯಾಗಸಾಧ್ಯವಿದೆ. (ಮತ್ತಾ. 12:36, 37) ಆದುದರಿಂದ, ಹಿರಿಯನಾಗಲು ಅರ್ಹನಾಗುವ ಒಬ್ಬ ಸಹೋದರನು, “ಕ್ರಿಸ್ತಬೋಧಾನುಸಾರವಾದ ನಂಬತಕ್ಕ ವಾಕ್ಯವನ್ನು ದೃಢವಾಗಿ” ಹಿಡಿದುಕೊಳ್ಳುವವನೆಂದು ಎಲ್ಲರಿಂದಲೂ ಗುರುತಿಸಲ್ಪಟ್ಟಿರುವ ವ್ಯಕ್ತಿಯಾಗಿರಬೇಕು.—ತೀತ 1:9.
ನಿಮ್ಮ ತರ್ಕಸರಣಿಗಳು, ಶಾಸ್ತ್ರೀಯ ಸತ್ಯದ ಇಡೀ ಸಂಗ್ರಹದಲ್ಲಿ ಕಂಡುಬರುವ “ಸ್ವಸ್ಥಬೋಧನಾವಾಕ್ಯ”ಕ್ಕೆ ಹೊಂದಿಕೆಯಾಗಿರುವಂತೆ ಜಾಗ್ರತೆ ವಹಿಸಿರಿ. (2 ತಿಮೊ. 1:13) ಈ ಸಂಗತಿಯು ನಿಮ್ಮನ್ನು ಹೆದರಿಸಬಾರದು. ನೀವು ಒಂದುವೇಳೆ ಇನ್ನೂ ಬೈಬಲನ್ನು ಪೂರ್ತಿಯಾಗಿ ಓದಿ ಮುಗಿಸಿರಲಿಕ್ಕಿಲ್ಲ. ಅದನ್ನು ಓದುವುದನ್ನು ಮುಂದುವರಿಸುತ್ತಾ ಹೋಗಿರಿ. ಆದರೆ ಈ ಮಧ್ಯೆ ಈ ಕೆಳಗಿನ ಸೂಚನೆಗಳು, ನಿಮ್ಮ ಬೋಧಿಸುವಿಕೆಯಲ್ಲಿ ನೀವು ಉಪಯೋಗಿಸಲು ಆಲೋಚಿಸುತ್ತಿರುವ ವಿಷಯಭಾಗವನ್ನು ವಿಶ್ಲೇಷಿಸಲು ನಿಮಗೆ ಹೇಗೆ ನೆರವಾಗುತ್ತವೆಂಬುದನ್ನು ಗಮನಿಸಿರಿ.
ಪ್ರಥಮವಾಗಿ, ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಈ ಮಾಹಿತಿಯು ನಾನು ಬೈಬಲಿನಿಂದ ಈಗಾಗಲೇ ಏನನ್ನು ಕಲಿತಿದ್ದೇನೊ ಅದಕ್ಕೆ ಹೊಂದಿಕೆಯಲ್ಲಿದೆಯೆ? ಇದು ನನ್ನ ಕೇಳುಗರನ್ನು ಯೆಹೋವನ ಕಡೆಗೆ ನಡೆಸುತ್ತದೊ ಅಥವಾ ಇದು ಲೋಕದ ವಿವೇಕವನ್ನು ಮೇಲಕ್ಕೆತ್ತಿ ಹಿಡಿದು, ಅದರಿಂದ ಜನರು ಮಾರ್ಗದರ್ಶಿಸಲ್ಪಡುವಂತೆ ಉತ್ತೇಜಿಸುತ್ತದೊ?’ “ನಿನ್ನ ವಾಕ್ಯವೇ ಸತ್ಯವು” ಎಂದು ಯೇಸು ಹೇಳಿದನು. (ಯೋಹಾ. 17:17; ಧರ್ಮೋ. 13:1-5; 1 ಕೊರಿಂ. 1:19-21) ಬಳಿಕ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಒದಗಿಸಿರುವ ಅಧ್ಯಯನದ ಉಪಕರಣಗಳನ್ನು ಸದುಪಯೋಗಿಸಿರಿ. ಇವು ನೀವು ಶಾಸ್ತ್ರವಚನಗಳನ್ನು ನಿಷ್ಕೃಷ್ಟವಾಗಿ ತಿಳಿದುಕೊಳ್ಳುವಂತೆ ನಿಮಗೆ ಸಹಾಯಮಾಡುವವು ಮಾತ್ರವಲ್ಲ, ಅವುಗಳನ್ನು ಸಮತೆಯಿಂದ ಮತ್ತು ವಿವೇಚನಾಶಕ್ತಿಯಿಂದ ಅನ್ವಯಿಸುವಂತೆಯೂ ಸಹಾಯಮಾಡುವವು. ನೀವು ನಿಮ್ಮ ಭಾಷಣಗಳನ್ನು “ಸ್ವಸ್ಥಬೋಧನಾವಾಕ್ಯ”ದ ಮೇಲೆ ಆಧಾರಿಸಿ, ಶಾಸ್ತ್ರವಚನಗಳನ್ನು ವಿವರಿಸುವಾಗ ಮತ್ತು ಅನ್ವಯಿಸುವಾಗ ಯೆಹೋವನ ಸಂಪರ್ಕ ಮಾಧ್ಯಮದ ಮೇಲೆ ಆತುಕೊಳ್ಳುವುದಾದರೆ, ನಿಮ್ಮ ಹೇಳಿಕೆಗಳು ನಿಷ್ಕೃಷ್ಟವಾಗಿರುವವು.
ಮಾಹಿತಿಯ ನಿಷ್ಕೃಷ್ಟತೆಯನ್ನು ಪರೀಕ್ಷಿಸಿ ನೋಡುವುದು. ನೀವು ಕೆಲವು ಅಂಶಗಳನ್ನು ದೃಷ್ಟಾಂತಿಸುತ್ತಿರುವಾಗ ಮತ್ತು ಅನ್ವಯಿಸುತ್ತಿರುವಾಗ, ಪ್ರಚಲಿತ ಸಂಭವಗಳು, ಉಲ್ಲೇಖಗಳು ಮತ್ತು ಅನುಭವಗಳು ನಿಮಗೆ ಸಹಾಯಕರವಾಗಿರಸಾಧ್ಯವಿದೆ. ಆದರೆ ಅವು ನಿಷ್ಕೃಷ್ಟವಾದವುಗಳೆಂದು ನೀವು ಹೇಗೆ ಖಾತ್ರಿಯಿಂದಿರಸಾಧ್ಯವಿದೆ? ಖಾತ್ರಿಪಡಿಸಿಕೊಳ್ಳುವ ಒಂದು ವಿಧವು, ಅಂತಹ ವಿಷಯಗಳನ್ನು ನಂಬಲರ್ಹವಾದ ಮೂಲಗಳಿಂದ ಪಡೆದುಕೊಳ್ಳುವುದೇ. ಆ ಮಾಹಿತಿಯು ಸದ್ಯೋಚಿತವಾಗಿದೆಯೋ ಎಂಬುದನ್ನು ಪರೀಕ್ಷಿಸಿ ನೋಡಲು ಮರೆಯಬೇಡಿರಿ. ಸಂಖ್ಯಾಸಂಗ್ರಹಣಗಳು ಹಳತಾಗಿ ಹೋಗುತ್ತವೆ; ವೈಜ್ಞಾನಿಕ ಸಂಶೋಧನೆಗಳು ಬೇಗನೆ ತ್ಯಜಿಸಲ್ಪಡುತ್ತವೆ; ಇದಲ್ಲದೆ ಮನುಷ್ಯನು ಇತಿಹಾಸ ಮತ್ತು ಪುರಾತನ ಭಾಷೆಗಳ ತಿಳಿವಳಿಕೆಯಲ್ಲಿ ಬೆಳೆದಂತೆ, ಹಿಂದಿನ ಜ್ಞಾನದ ಮೇಲೆ ಆಧಾರಿತವಾದ ತೀರ್ಮಾನಗಳನ್ನು ತಿದ್ದಿ ಸರಿಪಡಿಸಬೇಕಾಗುತ್ತದೆ. ನೀವು ವಾರ್ತಾಪತ್ರಿಕೆಗಳು, ಟೆಲಿವಿಷನ್, ರೇಡಿಯೊ, ಇ-ಮೇಲ್ ಅಥವಾ ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಉಪಯೋಗಿಸಲು ಯೋಚಿಸುತ್ತಿರುವಲ್ಲಿ, ತುಂಬ ಜಾಗ್ರತೆಯನ್ನು ವಹಿಸಿರಿ. “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು,” ಎನ್ನುತ್ತದೆ ಜ್ಞಾನೋಕ್ತಿ 14:15. ಹೀಗೆ ಕೇಳಿಕೊಳ್ಳಿರಿ: ‘ಈ ಮಾಹಿತಿಯ ಮೂಲವು ನಿಷ್ಕೃಷ್ಟತೆಗೆ ಹೆಸರುವಾಸಿಯಾಗಿದೆಯೆ? ಈ ಮಾಹಿತಿಯನ್ನು ಬೇರೆ ಮೂಲಗಳಿಂದ ದೃಢಪಡಿಸಲು ಸಾಧ್ಯವಿದೆಯೆ?’ ಒಂದು ವಿಷಯದ ಸತ್ಯತೆಯ ಬಗ್ಗೆ ನಿಮಗೆ ಅನುಮಾನವಿರುವುದಾದರೆ, ಅದನ್ನು ಉಪಯೋಗಿಸಬೇಡಿರಿ.
ಮಾಹಿತಿಯ ಮೂಲಗಳ ಭರವಸಾರ್ಹತೆಯನ್ನು ಪರೀಕ್ಷಿಸಿ ನೋಡುವುದಕ್ಕೆ ಕೂಡಿಸಿ, ನೀವು ಆ ಮಾಹಿತಿಯನ್ನು ಹೇಗೆ ಉಪಯೋಗಿಸಲಿದ್ದೀರಿ ಎಂಬುದನ್ನು ಜಾಗರೂಕತೆಯಿಂದ ಪರಿಗಣಿಸಿರಿ. ನೀವು ಉಪಯೋಗಿಸುವ ಉಲ್ಲೇಖಗಳೂ ಸಂಖ್ಯಾಸಂಗ್ರಹಣಗಳೂ, ಅವುಗಳನ್ನು ಯಾವುದರಿಂದ ತೆಗೆಯಲಾಗಿದೆಯೊ ಅದರ ಪೂರ್ವಾಪರಕ್ಕೆ ಹೊಂದಿಕೆಯಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ. ನೀವು ಒಂದು ಅಂಶವನ್ನು ಒತ್ತಿಹೇಳುವ ಪ್ರಯತ್ನದಲ್ಲಿ, “ಕೆಲವರು” ಎಂಬುದು “ಬಹುತೇಕ ಜನರು” ಆಗದಂತೆಯೂ, “ಅನೇಕ ಜನರು” ಎಂಬುದು “ಪ್ರತಿಯೊಬ್ಬರೂ” ಆಗದಂತೆಯೂ, ಮತ್ತು “ಕೆಲವು ಸಂದರ್ಭಗಳಲ್ಲಿ” ಎಂಬುದು “ಎಲ್ಲಾ ಸಂದರ್ಭಗಳಲ್ಲಿ” ಎಂದು ಆಗದಂತೆಯೂ ಜಾಗ್ರತೆ ವಹಿಸಿರಿ. ವಿಷಯಗಳನ್ನು ಉತ್ಪ್ರೇಕ್ಷಿಸಿ ಹೇಳುವುದು ಅಥವಾ ಸಂಖ್ಯೆ, ವ್ಯಾಪಕತೆ ಮತ್ತು ಗಂಭೀರತೆಯ ವರದಿಗಳನ್ನು ಅತಿಶಯಿಸಿ ಹೇಳುವುದು, ನಿಮ್ಮ ಭರವಸಾರ್ಹತೆಯ ವಿಷಯದಲ್ಲಿ ಪ್ರಶ್ನೆಗಳನ್ನೆಬ್ಬಿಸುವುದು.
ನೀವು ಏನು ಹೇಳುತ್ತೀರೊ ಅದರಲ್ಲಿ ಸತತವಾಗಿ ನಿಷ್ಕೃಷ್ಟತೆಯನ್ನು ತೋರಿಸುವಾಗ, ಸತ್ಯವನ್ನು ಗೌರವಿಸುವ ವ್ಯಕ್ತಿಯೆಂಬ ಹೆಸರನ್ನು ನೀವು ಪಡೆಯುವಿರಿ. ಇದು ಒಂದು ಗುಂಪಿನೋಪಾದಿ ಯೆಹೋವನ ಸಾಕ್ಷಿಗಳಿಗೆ ಒಳ್ಳೆಯ ಹೆಸರನ್ನು ತರುವುದು. ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿ, ಅದು ‘ಸತ್ಯದ ದೇವರಾಗಿರುವ ಯೆಹೋವನನ್ನು’ ಗೌರವಿಸುವುದು.—ಕೀರ್ತ. 31:5, NW.