ಅಧ್ಯಾಯ 28
“ನೀನೊಬ್ಬನೇ ನಿಷ್ಠಾವಂತನು”
1, 2. ಅರಸನಾದ ದಾವೀದನಿಗೆ ನಿಷ್ಠಾಹೀನತೆ ಎಂದರೇನೆಂಬುದು ಚೆನ್ನಾಗಿ ತಿಳಿದಿತ್ತೆಂದು ಏಕೆ ಹೇಳಸಾಧ್ಯವಿದೆ?
ನಿಷ್ಠಾಹೀನತೆ ಅಂದರೇನೆಂಬುದು ಅರಸನಾದ ದಾವೀದನಿಗೆ ಚೆನ್ನಾಗಿ ತಿಳಿದಿತ್ತು. ಒಂದು ಹಂತದಲ್ಲಿ ಅವನ ಗೊಂದಲಭರಿತ ಆಳಿಕೆಯು ಒಳಸಂಚಿನಿಂದ ಮುತ್ತಲ್ಪಟ್ಟಿತ್ತು; ಅವನ ಸ್ವಂತ ಜನಾಂಗದ ಸದಸ್ಯರು ಅವನ ವಿರುದ್ಧವಾಗಿ ಪಿತೂರಿ ನಡಿಸಿದರು. ಅಲ್ಲದೆ, ಯಾರು ಅವನ ಅತ್ಯಾಪ್ತ ಸಂಗಡಿಗರಾಗಿರುವರೆಂದು ಅವನು ನಿರೀಕ್ಷಿಸಿದ್ದನೊ ಅಂಥವರಲ್ಲೇ ಕೆಲವರು ಅವನಿಗೆ ದ್ರೋಹಬಗೆದರು. ಉದಾಹರಣೆಗೆ, ದಾವೀದನ ಮೊದಲ ಪತ್ನಿಯಾಗಿದ್ದ ಮೀಕಲಳನ್ನು ತೆಗೆದುಕೊಳ್ಳಿರಿ. ಆರಂಭದಲ್ಲಿ ಅವಳು “ದಾವೀದನನ್ನು ಪ್ರೀತಿಸಿದಳು,” ಮತ್ತು ಅರಸನೋಪಾದಿ ಅವನಿಗಿದ್ದ ಕರ್ತವ್ಯಗಳಲ್ಲಿ ನಿಸ್ಸಂಶಯವಾಗಿ ಅವನನ್ನು ಬೆಂಬಲಿಸಿದ್ದಳು. ತದನಂತರವಾದರೊ ಅವಳು “ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು” ಮತ್ತು ದಾವೀದನನ್ನು “ನೀಚರಲ್ಲೊಬ್ಬನಂತೆ” ಪರಿಗಣಿಸಿದ್ದಳು ಸಹ.—1 ಸಮುವೇಲ 18:20; 2 ಸಮುವೇಲ 6:16, 20.
2 ಇನ್ನೊಬ್ಬನು, ದಾವೀದನ ಖಾಸಗಿ ಸಲಹೆಗಾರನಾಗಿದ್ದ ಅಹೀತೋಫೆಲನಾಗಿದ್ದನು. ಅವನ ಸಲಹೆಗಳು ಯೆಹೋವನಿಂದ ನೇರವಾಗಿ ಬಂದಿರುವ ಮಾತುಗಳಾಗಿವೆಯೋ ಎಂಬುವಷ್ಟು ಬೆಲೆಬಾಳುವಂಥವುಗಳಾಗಿ ಎಣಿಸಲ್ಪಡುತ್ತಿದ್ದವು. (2 ಸಮುವೇಲ 16:23) ಆದರೆ ಸಮಯಾನಂತರ ಈ ಭರವಸಯೋಗ್ಯ ಮಿತ್ರನು ದ್ರೋಹಿಯಾಗಿ ಪರಿಣಮಿಸಿ, ದಾವೀದನ ವಿರುದ್ಧವಾಗಿ ಸಂಘಟಿತ ದಂಗೆಯಲ್ಲಿ ಸೇರಿಕೊಂಡನು. ಈ ಒಳಸಂಚಿನ ಚಿತಾವಣೆಗಾರನು ಯಾರು? ದಾವೀದನ ಸ್ವಂತ ಮಗನಾದ ಅಬ್ಷಾಲೋಮನೇ! ಆ ಸಮಯಸಾಧಕ ಸಂಚುಗಾರನು, ‘ಇಸ್ರಾಯೇಲ್ಯರಲ್ಲಿ ಎಲ್ಲರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಳ್ಳುತ್ತಾ,’ ತನ್ನನ್ನು ಒಬ್ಬ ಪ್ರತಿಸ್ಪರ್ಧಿ ರಾಜನಾಗಿ ಮಾಡಿಕೊಂಡನು. ಅಬ್ಷಾಲೋಮನ ಪಿತೂರಿಯು ಎಷ್ಟು ತೀವ್ರವಾಯಿತೆಂದರೆ, ಅರಸನಾದ ದಾವೀದನು ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಪಲಾಯನಗೈಯಬೇಕಾಗಿ ಬಂತು.—2 ಸಮುವೇಲ 15:1-6, 12-17.
3. ದಾವೀದನಿಗೆ ಯಾವ ಭರವಸೆಯಿತ್ತು?
3 ದಾವೀದನಿಗೆ ನಿಷ್ಠಾವಂತರಾಗಿ ಉಳಿದವರು ಒಬ್ಬರೂ ಇರಲಿಲ್ಲವೋ? ತನ್ನ ಕಷ್ಟಕಾಲದಲ್ಲೆಲ್ಲಾ ನಿಷ್ಠಾವಂತನಾಗಿ ಉಳಿದವನೊಬ್ಬನು ಇದ್ದನೆಂದು ದಾವೀದನಿಗೆ ನಿಶ್ಚಯವಾಗಿ ತಿಳಿದಿತ್ತು. ಆತನು ಯಾರು? ಆತನು ಬೇರೆ ಯಾರೂ ಅಲ್ಲದೆ ಯೆಹೋವ ದೇವರೇ ಆಗಿದ್ದನು. ‘ನೀನು ಕೃಪೆಯುಳ್ಳವನಿಗೆ [“ನಿಷ್ಠಾವಂತನೊಂದಿಗೆ,” NW] ಕೃಪಾವಂತನು [“ನಿಷ್ಠಾವಂತನು,” NW] ಆಗಿರುವಿ’ ಎಂದು ದಾವೀದನು ಯೆಹೋವನ ಕುರಿತು ಹೇಳಿದ್ದಾನೆ. (2 ಸಮುವೇಲ 22:26, 27) ನಿಷ್ಠೆ ಎಂದರೇನು? ಮತ್ತು ಯೆಹೋವನು ಈ ಗುಣದ ಅತ್ಯುಚ್ಚ ಮಾದರಿಯನ್ನು ಒದಗಿಸಿರುವುದು ಹೇಗೆ?
ನಿಷ್ಠೆ ಎಂದರೇನು?
4, 5. (ಎ) “ನಿಷ್ಠೆ” ಎಂದರೇನು? (ಬಿ) ನಿಷ್ಠೆಗೂ ನಂಬಿಗಸ್ತಿಕೆಗೂ ವ್ಯತ್ಯಾಸವೇನು?
4 ಹೀಬ್ರು ಶಾಸ್ತ್ರಗಳಲ್ಲಿ ಉಪಯೋಗಿಸಲ್ಪಟ್ಟಿರುವ ಪ್ರಕಾರ, “ನಿಷ್ಠೆಯು,” ಒಂದು ವ್ಯಕ್ತಿ ಅಥವಾ ವಿಷಯಕ್ಕೆ ತನ್ನನ್ನು ಪ್ರೀತಿಯಿಂದ ಅಂಟಿಸಿಕೊಳ್ಳುವ ಮತ್ತು ಆ ವ್ಯಕ್ತಿ ಅಥವಾ ವಿಷಯದ ಸಂಬಂಧದಲ್ಲಿ ಅದರ ಉದ್ದೇಶವು ಪೂರೈಸಲ್ಪಡುವ ತನಕ ಅದರಿಂದ ಅಗಲದಿರುವ ದಯೆಯೇ ಆಗಿದೆ. ನಂಬಿಗಸ್ತಿಕೆಗಿಂತ ಹೆಚ್ಚು ಇದರಲ್ಲಿ ಒಳಗೂಡಿರುತ್ತದೆ. ಎಷ್ಟೆಂದರೂ ಒಬ್ಬನು ಕೇವಲ ಕರ್ತವ್ಯ ದೃಷ್ಟಿಯಿಂದಲೂ ನಂಬಿಗಸ್ತಿಕೆಯನ್ನು ತೋರಿಸಾನು. ಇದಕ್ಕೆ ವ್ಯತಿರಿಕ್ತವಾಗಿ ನಿಷ್ಠೆಯಾದರೋ ಪ್ರೀತಿಯಲ್ಲಿ ಬೇರೂರಿರುತ್ತದೆ. ಅದಲ್ಲದೆ “ನಂಬಿಗಸ್ತ” ಎಂಬ ಶಬ್ದವು ನಿರ್ಜೀವ ವಸ್ತುಗಳಿಗೂ ಅನ್ವಯಿಸಬಲ್ಲದು. ಉದಾಹರಣೆಗೆ, ಕೀರ್ತನೆಗಾರನು ಚಂದ್ರನನ್ನು ‘ಪರಲೋಕದ ಸತ್ಯ [“ನಂಬಿಗಸ್ತ,” NW] ಸಾಕ್ಷಿ’ ಎಂದು ಕರೆದಿದ್ದಾನೆ, ಯಾಕಂದರೆ ಅದು ಕ್ರಮವಾಗಿ ರಾತ್ರಿ ಸಮಯದಲ್ಲಿ ಗೋಚರಿಸುತ್ತದೆ. (ಕೀರ್ತನೆ 89:37) ಆದರೆ ಚಂದ್ರನನ್ನು ನಿಷ್ಠಾವಂತನೆಂದು ವರ್ಣಿಸಸಾಧ್ಯವಿಲ್ಲ. ಏಕೆ? ಏಕೆಂದರೆ ನಿಷ್ಠೆಯು ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ; ಮತ್ತು ನಿರ್ಜೀವ ವಸ್ತುಗಳು ಈ ಗುಣವನ್ನು ತೋರ್ಪಡಿಸಲು ಅಸಮರ್ಥವಾಗಿವೆ.
ಚಂದ್ರನನ್ನು ನಂಬಿಗಸ್ತ ಸಾಕ್ಷಿಯೆಂದು ಕರೆಯಲಾಗಿದೆ, ಆದರೆ ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳು ಮಾತ್ರವೇ ಯೆಹೋವನ ನಿಷ್ಠೆಯನ್ನು ನಿಜವಾಗಿ ಪ್ರತಿಬಿಂಬಿಸಬಲ್ಲವು
5 ಶಾಸ್ತ್ರೀಯ ಅರ್ಥದಲ್ಲಿ ನಿಷ್ಠೆಯು ಆದರಣೀಯವಾದದ್ದಾಗಿದೆ. ಅದರ ಪ್ರದರ್ಶಿಸುವಿಕೆಯು ತಾನೇ, ಆ ಗುಣವನ್ನು ತೋರಿಸುವ ವ್ಯಕ್ತಿ ಮತ್ತು ಯಾರ ಕಡೆಗೆ ಅದು ತೋರಿಸಲ್ಪಡುತ್ತದೋ ಆ ವ್ಯಕ್ತಿಯ ನಡುವೆ ಒಂದು ಸಂಬಂಧವಿದೆಯೆಂಬುದನ್ನು ಸೂಚಿಸುತ್ತದೆ. ಅಂಥ ನಿಷ್ಠೆಯು ಚಂಚಲವಾದುದ್ದಲ್ಲ. ಗಾಳಿಗೆ ತಕ್ಕಂತೆ ಅತ್ತಇತ್ತ ಹೊಯ್ದಾಡುವ ಸಮುದ್ರದ ತೆರೆಗಳಂತೆ ಅದಿಲ್ಲ. ಅದಕ್ಕೆ ಪ್ರತಿಯಾಗಿ, ನಿಷ್ಠೆ ಅಥವಾ ನಿಷ್ಠಾವಂತ ಪ್ರೀತಿಗೆ ಅತ್ಯಂತ ಕಷ್ಟಕರವಾದ ಅಡ್ಡಿತಡೆಗಳನ್ನೂ ಜಯಿಸುವಂಥ ಸ್ಥಿರತೆಯಿದೆ ಮತ್ತು ಶಕ್ತಿಯಿದೆ.
6. (ಎ) ಮಾನವರಲ್ಲಿ ನಿಷ್ಠೆಯು ಎಷ್ಟು ಅಪರೂಪವಾಗಿದೆ, ಮತ್ತು ಇದು ಬೈಬಲಿನಲ್ಲಿ ಹೇಗೆ ಸೂಚಿಸಲ್ಪಟ್ಟಿದೆ? (ಬಿ) ನಿಷ್ಠೆಯೆಂದರೇನೆಂದು ಕಲಿಯುವ ಅತ್ಯುತ್ತಮ ಮಾರ್ಗವು ಯಾವುದು, ಮತ್ತು ಏಕೆ?
6 ಅಂಥ ನಿಷ್ಠೆಯು ಇಂದು ಅಪರೂಪವೆಂಬುದು ಒಪ್ಪತಕ್ಕದ್ದೇ. ನಿಕಟವರ್ತಿಗಳು ಸಹ “ಒಬ್ಬರನ್ನೊಬ್ಬರು ಚೂರು ಚೂರಾಗಿ ತುಂಡರಿಸುವ ಪ್ರವೃತ್ತಿ”ಯುಳ್ಳವರಾಗಿರುವುದು ಸರ್ವಸಾಮಾನ್ಯವಾಗಿಬಿಟ್ಟಿದೆ. ಪತಿಪತ್ನಿಯರು ಒಬ್ಬರನ್ನೊಬ್ಬರು ಬಿಟ್ಟುಬಿಡುವ ಸುದ್ದಿಯನ್ನು ನಾವು ಅಧಿಕಾಧಿಕವಾಗಿ ಕೇಳುತ್ತಿರುತ್ತೇವೆ. (ಜ್ಞಾನೋಕ್ತಿ 18:24, NW; ಮಲಾಕಿಯ 2:14-16) ದ್ರೋಹದ ಕೃತ್ಯಗಳು ಎಷ್ಟು ಸಾಮಾನ್ಯವಾಗಿವೆ ಎಂದರೆ ಪ್ರವಾದಿಯಾದ ಮೀಕನ ಮಾತುಗಳನ್ನು ನಾವೂ ಪುನರುಚ್ಚರಿಸುತ್ತಿರಬಹುದು: “ಸದ್ಭಕ್ತರು [“ನಿಷ್ಠಾವಂತರು,” NW] ದೇಶದೊಳಗಿಂದ ನಾಶವಾಗಿದ್ದಾರೆ.” (ಮೀಕ 7:2) ಜನರು ಪ್ರೀತಿಪೂರ್ವಕ ದಯೆಯನ್ನು ತೋರಿಸಲು ಅನೇಕಸಲ ತಪ್ಪುತ್ತಾರಾದರೂ, ನಿಷ್ಠೆಯು ಯೆಹೋವನ ಎದ್ದುಕಾಣುವ ಗುಣಲಕ್ಷಣವಾಗಿರುತ್ತದೆ. ವಾಸ್ತವದಲ್ಲಿ ನಿಜವಾದ ನಿಷ್ಠೆಯೆಂದರೇನೆಂದು ಕಲಿಯುವ ಉತ್ತಮ ಮಾರ್ಗವು, ಯೆಹೋವನು ತನ್ನ ಪ್ರೀತಿಯ ಈ ಮಹಾ ವೈಶಿಷ್ಟ್ಯವನ್ನು ಹೇಗೆ ಪ್ರದರ್ಶಿಸುತ್ತಾನೆಂದು ಪರೀಕ್ಷಿಸುವುದೇ ಆಗಿದೆ.
ಯೆಹೋವನ ಸರಿಸಾಟಿಯಿಲ್ಲದ ನಿಷ್ಠೆ
7, 8. ಯೆಹೋವನೊಬ್ಬನೇ ನಿಷ್ಠಾವಂತನೆಂದು ಹೇಗೆ ಹೇಳಸಾಧ್ಯವಿದೆ?
7 ಬೈಬಲು ಯೆಹೋವನ ಕುರಿತು ಹೇಳುವುದು: “ನೀನೊಬ್ಬನೇ ಪರಿಶುದ್ಧನು [“ನಿಷ್ಠಾವಂತನು,” NW].” (ಪ್ರಕಟನೆ 15:4) ಇದು ಹೇಗೆ ಸಾಧ್ಯ? ಮನುಷ್ಯರು ಹಾಗೂ ದೇವದೂತರು ಸಹ ಆಗಿಂದಾಗ್ಗೆ ಗಮನಾರ್ಹವಾದ ನಿಷ್ಠೆಯನ್ನು ತೋರಿಸಿದ್ದಾರಲ್ಲವೇ? (ಯೋಬ 1:1; ಪ್ರಕಟನೆ 4:8) ಮತ್ತು ಯೇಸು ಕ್ರಿಸ್ತನ ಕುರಿತೇನು? ದೇವರಿಗೆ ಪ್ರಧಾನವಾಗಿ “ನಿಷ್ಠಾವಂತ”ನಾಗಿರುವ ವ್ಯಕ್ತಿಯು ಅವನೇ ಅಲ್ಲವೇ? (ಕೀರ್ತನೆ 16:10, NW) ಹೀಗಿರಲಾಗಿ, ಯೆಹೋವನೊಬ್ಬನೇ ನಿಷ್ಠಾವಂತನೆಂದು ಹೇಗೆ ಹೇಳಸಾಧ್ಯ?
8 ಮೊತ್ತಮೊದಲಾಗಿ, ನಿಷ್ಠೆಯು ಪ್ರೀತಿಯ ಒಂದು ವೈಶಿಷ್ಟ್ಯವೆಂಬುದನ್ನು ಮರೆಯಬೇಡಿರಿ. ಮತ್ತು “ದೇವರು ಪ್ರೀತಿಸ್ವರೂಪಿಯು” ಆಗಿದ್ದಾನೆ, ಪ್ರೀತಿಯ ಸಾಕಾರರೂಪವೇ ಆಗಿದ್ದಾನೆ. (ಓರೆ ಅಕ್ಷರಗಳು ನಮ್ಮವು.) ಆದುದರಿಂದ ಯೆಹೋವನಷ್ಟು ಸಂಪೂರ್ಣವಾಗಿ ನಿಷ್ಠೆಯನ್ನು ತೋರಿಸುವವರು ಯಾರಿರಬಲ್ಲರು? (1 ಯೋಹಾನ 4:8) ಮನುಷ್ಯರು ಮತ್ತು ದೇವದೂತರು ದೇವರ ಗುಣಲಕ್ಷಣಗಳನ್ನು ಪ್ರಾಯಶಃ ಪ್ರತಿಬಿಂಬಿಸಬಲ್ಲರು ನಿಜ, ಆದರೆ ಸರ್ವೋತ್ಕೃಷ್ಟ ಮಟ್ಟದಲ್ಲಿ ಯೆಹೋವನೊಬ್ಬನೇ ನಿಷ್ಠಾವಂತನು. “ಮಹಾವೃದ್ಧ”ನೋಪಾದಿ ಆತನು ಯಾವನೇ ಐಹಿಕ ಅಥವಾ ಸ್ವರ್ಗೀಯ ಜೀವಿಗಿಂತ ಅಧಿಕ ಸಮಯದಿಂದ ಪ್ರೀತಿಪೂರ್ವಕ ದಯೆಯನ್ನು ತೋರಿಸಿರುತ್ತಾನೆ. (ದಾನಿಯೇಲ 7:9) ಹೀಗಿರುವುದರಿಂದ ಯೆಹೋವನು ನಿಷ್ಠೆಯ ಸಾರವೇ ಆಗಿರುತ್ತಾನೆ. ಆತನು ಈ ಗುಣವನ್ನು ಪ್ರದರ್ಶಿಸುವ ರೀತಿಯಲ್ಲಿ ಬೇರೆ ಯಾವ ಸೃಷ್ಟಿಜೀವಿಯೂ ಆತನಿಗೆ ಸರಿಸಮವಾಗಲಾರದು. ಕೆಲವು ಉದಾಹರಣೆಗಳನ್ನು ಗಮನಿಸಿರಿ.
9. ಯೆಹೋವನು “ತನ್ನ ಎಲ್ಲಾ ಕಾರ್ಯಗಳಲ್ಲಿ ನಿಷ್ಠೆ ತೋರಿಸುವವನು” ಆಗಿರುವುದು ಹೇಗೆ?
9 ಯೆಹೋವನು “ಎಲ್ಲಾ ಕಾರ್ಯಗಳಲ್ಲಿ ಕೃಪೆ [“ನಿಷ್ಠೆ,” NW] ತೋರಿಸುವವನು.” (ಕೀರ್ತನೆ 145:17) ಯಾವ ರೀತಿಯಲ್ಲಿ? ಕೀರ್ತನೆ 136 ಉತ್ತರವನ್ನು ನೀಡುತ್ತದೆ. ಅಲ್ಲಿ ಯೆಹೋವನ ಹಲವಾರು ರಕ್ಷಣಾತ್ಮಕ ಕಾರ್ಯಗಳು ಉಲ್ಲೇಖಿಸಲ್ಪಟ್ಟಿವೆ. ಇದರಲ್ಲಿ, ಕೆಂಪು ಸಮುದ್ರದ ಮಧ್ಯದಿಂದ ಇಸ್ರಾಯೇಲ್ಯರ ನಾಟಕೀಯ ಬಿಡುಗಡೆಯೂ ತಿಳಿಸಲ್ಪಟ್ಟಿದೆ. ಈ ಕೀರ್ತನೆಯ ಪ್ರತಿಯೊಂದು ವಚನವು “ಆತನ ಕೃಪೆಯು [ಅಥವಾ, ನಿಷ್ಠಾವಂತ ಪ್ರೀತಿಯು] ಶಾಶ್ವತವಾದದ್ದು” ಎಂಬ ವಾಕ್ಯದಿಂದ ಒತ್ತಿಹೇಳಲ್ಪಟ್ಟಿರುವುದೂ ಗಮನಾರ್ಹವಾಗಿದೆ. ಈ ಕೀರ್ತನೆಯು, 289ನೆಯ ಪುಟದಲ್ಲಿರುವ ಧ್ಯಾನಕ್ಕಾಗಿರುವ ಪ್ರಶ್ನೆಗಳಲ್ಲಿ ಸೇರಿಸಲ್ಪಟ್ಟಿರುತ್ತದೆ. ನೀವು ಆ ವಚನಗಳನ್ನು ಓದುತ್ತಾ ಹೋದಂತೆ ಯೆಹೋವನು ತನ್ನ ಜನರ ಕಡೆಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರುವ ಅನೇಕ ವಿಧಾನಗಳಿಂದ ಪ್ರಭಾವಿಸಲ್ಪಡದೆ ಇರಸಾಧ್ಯವಿಲ್ಲ. ಹೌದು, ತನ್ನ ನಂಬಿಗಸ್ತ ಸೇವಕರು ಸಹಾಯಕ್ಕಾಗಿ ಮೊರೆಯಿಡುವಾಗ ಯೆಹೋವನು ಕಿವಿಗೊಡುವ ಮೂಲಕ ಮತ್ತು ತನ್ನ ಕ್ಲುಪ್ತಕಾಲದಲ್ಲಿ ಕ್ರಿಯೆಗೈಯುವ ಮೂಲಕ ಅವರ ಕಡೆಗೆ ನಿಷ್ಠೆಯನ್ನು ಪ್ರದರ್ಶಿಸುತ್ತಾನೆ. (ಕೀರ್ತನೆ 34:6) ಯೆಹೋವನ ಸೇವಕರು ಎಷ್ಟರ ತನಕ ಆತನಿಗೆ ನಿಷ್ಠರಾಗಿ ಉಳಿಯುತ್ತಾರೋ ಅಷ್ಟರ ತನಕ ಆತನೂ ತನ್ನ ಸೇವಕರಿಗೆ ನಿಷ್ಠನಾಗಿ ಉಳಿಯುವನು.
10. ತನ್ನ ಮಟ್ಟಗಳ ಸಂಬಂಧದಲ್ಲಿ ಯೆಹೋವನು ಹೇಗೆ ನಿಷ್ಠೆಯನ್ನು ತೋರಿಸುತ್ತಾನೆ?
10 ಅಷ್ಟಲ್ಲದೆ, ತನ್ನ ಮಟ್ಟಗಳಿಗೆ ನಂಬಿಗಸ್ತನಾಗಿ ಉಳಿಯುವ ಮೂಲಕವೂ ಯೆಹೋವನು ತನ್ನ ಸೇವಕರ ಕಡೆಗೆ ನಿಷ್ಠೆಯನ್ನು ತೋರಿಸುತ್ತಾನೆ. ತಟ್ಟನೆ ಮನಸ್ಸಿಗೆ ಹೊಳೆಯುವಂಥ ವಿಚಾರಕ್ಕನುಸಾರ ಮತ್ತು ಭಾವುಕರಾಗಿ ಮನಸ್ಸೋ ಇಚ್ಛೆಯಂತೆ ನಡೆಯುವ ಕೆಲವು ಮಾನವರಂತೆ ಇರದೆ, ಸರಿ ಯಾವುದು ಮತ್ತು ತಪ್ಪು ಯಾವುದೆಂಬ ವಿಷಯದ ಬಗ್ಗೆ ಆತನಿಗಿರುವ ದೃಷ್ಟಿಕೋನದಲ್ಲಿ ಯಾವ ಚಂಚಲತ್ವವೂ ಇಲ್ಲ. ಸಹಸ್ರಾರು ವರ್ಷಗಳಿಂದಲೂ ಪ್ರೇತಾತ್ಮವಾದ, ವಿಗ್ರಹಾರಾಧನೆ, ಮತ್ತು ಕೊಲೆಪಾತಕವೇ ಮುಂತಾದ ಪದ್ಧತಿಗಳ ಕುರಿತ ಆತನ ನೋಟವು ಬದಲಾಗಿರುವುದಿಲ್ಲ. “ನಾನು ಮಾರ್ಪಟ್ಟಿಲ್ಲ” ಎಂದು ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ ಅವನು ತಿಳಿಸಿದನು. (ಮಲಾಕಿಯ 3:6) ಆದುದರಿಂದ ದೇವರ ವಾಕ್ಯದಲ್ಲಿ ಕಂಡುಬರುವ ಸ್ಪಷ್ಟವಾದ ನೈತಿಕ ನಿರ್ದೇಶನವನ್ನು ಅನುಸರಿಸುವ ಮೂಲಕ ನಾವು ಪ್ರಯೋಜನ ಹೊಂದುವೆವೆಂಬ ಭರವಸೆಯು ನಮಗಿರಬಲ್ಲದು.—ಯೆಶಾಯ 48:17-19.
11. ಯೆಹೋವನು ತನ್ನ ಮಾತನ್ನು ಪಾಲಿಸುವ ಮೂಲಕ ನಿಷ್ಠಾವಂತನಾಗಿದ್ದಾನೆಂದು ತೋರಿಸುವ ಕೆಲವು ಉದಾಹರಣೆಗಳನ್ನು ಕೊಡಿರಿ.
11 ಕೊಟ್ಟ ಮಾತನ್ನು ಪಾಲಿಸುವ ಮೂಲಕವೂ ಯೆಹೋವನು ನಿಷ್ಠೆಯನ್ನು ಪ್ರದರ್ಶಿಸುತ್ತಾನೆ. ಆತನು ಏನನ್ನು ಮುಂತಿಳಿಸುತ್ತಾನೋ ಅದು ನೆರವೇರಿಯೇ ತೀರುವುದು. ಹೀಗಿರುವುದರಿಂದ ಯೆಹೋವನು ಹೇಳಿದ್ದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:11) ಕೊಟ್ಟ ಮಾತಿಗೆ ತಕ್ಕಂತೆ ನಡೆಯುವ ಮೂಲಕ ಯೆಹೋವನು ತನ್ನ ಜನರಿಗೆ ನಿಷ್ಠೆಯನ್ನು ತೋರಿಸುತ್ತಾನೆ. ತಾನು ನೆರವೇರಿಸಿಕೊಡಲು ಉದ್ದೇಶಿಸಿರದಂಥ ಒಂದು ವಿಷಯಕ್ಕಾಗಿ ಅವರು ಆತುರಾಕಾಂಕ್ಷೆಯಿಂದ ಕಾಯುತ್ತಿರುವಂತೆ ಆತನು ಬಿಡುವುದಿಲ್ಲ. ಈ ವಿಷಯದಲ್ಲಿ ಯೆಹೋವನ ಸತ್ಕೀರ್ತಿಯು ಎಷ್ಟು ಕಳಂಕವಿಲ್ಲದ್ದಾಗಿದೆಯೆಂದರೆ, ಯೆಹೋಶುವನು ಹೀಗನ್ನಲು ಶಕ್ತನಾದನು: “ಆತನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು.” (ಯೆಹೋಶುವ 21:45) ಹೀಗಿರಲಾಗಿ, ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ಯೆಹೋವನು ತಪ್ಪದ ಕಾರಣದಿಂದಾಗಿ ನಾವೆಂದೂ ನಿರಾಶೆಗೆ ನಡಿಸಲ್ಪಡೆವೆಂಬ ವಿಷಯದಲ್ಲಿ ನಾವು ಭರವಸೆಯುಳ್ಳವರಾಗಿರಬಲ್ಲೆವು.—ಯೆಶಾಯ 49:23; ರೋಮಾಪುರ 5:5.
12, 13. ಯೆಹೋವನ ಪ್ರೀತಿಪೂರ್ವಕ ದಯೆಯು ಯಾವ ವಿಧಗಳಲ್ಲಿ “ಶಾಶ್ವತ”ವಾಗಿದೆ?
12 ಆರಂಭದಲ್ಲಿ ಗಮನಿಸಿದ ಪ್ರಕಾರ, ಯೆಹೋವನ ಪ್ರೀತಿಪೂರ್ವಕ ದಯೆಯು “ಶಾಶ್ವತವಾದದ್ದು” ಎಂದು ಬೈಬಲು ನಮಗೆ ಹೇಳುತ್ತದೆ. (ಕೀರ್ತನೆ 136:1) ಅದು ಹೇಗೆ? ಯೆಹೋವನು ಪಾಪಗಳನ್ನು ಶಾಶ್ವತವಾಗಿ ಕ್ಷಮಿಸುತ್ತಾನೆ ಎಂಬುದು ಒಂದರ್ಥವಾಗಿರುತ್ತದೆ. ಅಧ್ಯಾಯ 26ರಲ್ಲಿ ಚರ್ಚಿಸಲ್ಪಟ್ಟ ಪ್ರಕಾರ, ಯಾವ ತಪ್ಪುಗಳಿಗಾಗಿ ವ್ಯಕ್ತಿಯೊಬ್ಬನು ಕ್ಷಮಿಸಲ್ಪಟ್ಟಿರುತ್ತಾನೋ ಆ ತಪ್ಪುಗಳನ್ನೇ ಯೆಹೋವನು ಪುನಃ ಮೇಲೆ ತರುವುದಿಲ್ಲ. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿ”ರುವದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನ ಪ್ರೀತಿಪೂರ್ವಕ ದಯೆಯು ಶಾಶ್ವತವಾಗಿರುವುದಕ್ಕಾಗಿ ಕೃತಜ್ಞರಾಗಿರತಕ್ಕದ್ದು.—ರೋಮಾಪುರ 3:23.
13 ಆದರೆ ಯೆಹೋವನ ಪ್ರೀತಿಪೂರ್ವಕ ದಯೆಯು ಇನ್ನೊಂದು ಅರ್ಥದಲ್ಲೂ ಶಾಶ್ವತವಾಗಿರುತ್ತದೆ. ನೀತಿವಂತನು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:3) ಯಾವುದರ ಎಲೆಗಳು ಎಂದೂ ಬಾಡಿಹೋಗುವುದಿಲ್ಲವೊ ಆ ಸೊಂಪಾಗಿ ಬೆಳೆದಿರುವ ವೃಕ್ಷವನ್ನು ಕಲ್ಪಿಸಿಕೊಳ್ಳಿರಿ! ಅಂತೆಯೇ ನಾವು ದೇವರ ವಾಕ್ಯದಲ್ಲಿ ನಿಜ ಉಲ್ಲಾಸವನ್ನು ಪಡೆದುಕೊಳ್ಳುವುದಾದರೆ, ನಮ್ಮ ಜೀವಿತವು ಸಹ ದೀರ್ಘವೂ ಶಾಂತಿಭರಿತವೂ ಫಲಭರಿತವೂ ಆಗಿರುವುದು. ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ನಿಷ್ಠೆಯಿಂದ ಕೊಡುವ ಆಶೀರ್ವಾದಗಳು ಶಾಶ್ವತವಾದವುಗಳು. ಯೆಹೋವನು ಬರಮಾಡಲಿರುವ ನೀತಿಯ ಹೊಸ ಲೋಕದಲ್ಲಿ, ವಿಧೇಯ ಮಾನವಕುಲವು ಆತನ ಪ್ರೀತಿಪೂರ್ವಕ ದಯೆಯನ್ನು ನಿಜವಾಗಿಯೂ ಶಾಶ್ವತವಾಗಿ ಅನುಭವಿಸುವುದು.—ಪ್ರಕಟನೆ 21:3, 4.
ಯೆಹೋವನು “ತನ್ನ ನಿಷ್ಠಾವಂತರನ್ನು ಎಂದಿಗೂ ಕೈಬಿಡುವವನಲ್ಲ”
14. ತನ್ನ ಸೇವಕರು ನಿಷ್ಠೆಯನ್ನು ತೋರಿಸುವಾಗ ಯೆಹೋವನು ಹೇಗೆ ಗಣ್ಯತೆ ತೋರಿಸುತ್ತಾನೆ?
14 ಯೆಹೋವನು ತನ್ನ ನಿಷ್ಠೆಯನ್ನು ಪದೇಪದೇ ಪ್ರದರ್ಶಿಸಿ ತೋರಿಸಿದ್ದಾನೆ. ಆತನು ಯಾವಾಗಲೂ ಪರಿಪೂರ್ಣ ರೀತಿಯಲ್ಲಿ ಏಕಪ್ರಕಾರವಾಗಿ ನಡೆದುಕೊಳ್ಳುವುದರಿಂದ, ಆತನ ನಂಬಿಗಸ್ತ ಸೇವಕರ ಕಡೆಗೆ ಆತನು ತೋರಿಸುವ ನಿಷ್ಠೆಯು ಎಂದೂ ಕುಂದುವುದಿಲ್ಲ. ಕೀರ್ತನೆಗಾರನು ಬರೆದದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ. ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು [“ನಿಷ್ಠಾವಂತರನ್ನು,” NW] ಎಂದಿಗೂ ಕೈಬಿಡುವವನಲ್ಲ.” (ಕೀರ್ತನೆ 37:25, 28) ಸೃಷ್ಟಿಕರ್ತನಾಗಿರುವುದರಿಂದ ಯೆಹೋವನಿಗೆ ನಮ್ಮ ಆರಾಧನೆಯು ಸಲ್ಲಲೇಬೇಕೆಂಬುದು ನಿಜ. (ಪ್ರಕಟನೆ 4:11) ಆದರೂ ಯೆಹೋವನು ನಿಷ್ಠಾವಂತನಾಗಿರುವುದರಿಂದ ಆತನು ನಮ್ಮ ನಂಬಿಗಸ್ತಿಕೆಯ ಕ್ರಿಯೆಗಳನ್ನು ನೆಚ್ಚುತ್ತಾನೆ.—ಮಲಾಕಿಯ 3:16, 17.
15. ಇಸ್ರಾಯೇಲ್ಯರೊಂದಿಗೆ ಯೆಹೋವನ ವ್ಯವಹಾರಗಳು ಆತನ ನಿಷ್ಠೆಯನ್ನು ಹೇಗೆ ಎತ್ತಿತೋರಿಸುತ್ತವೆಂಬುದನ್ನು ವಿವರಿಸಿರಿ.
15 ತನ್ನ ಪ್ರೀತಿಪರ ದಯೆಯಿಂದಾಗಿ ಯೆಹೋವನು ತನ್ನ ಜನರು ಸಂಕಷ್ಟದಲ್ಲಿರುವಾಗ ಸಹ ಪದೇಪದೇ ಅವರ ಸಹಾಯಕ್ಕಾಗಿ ಬರುತ್ತಾನೆ. ಕೀರ್ತನೆಗಾರನು ನಮಗೆ ಹೇಳುವದು: “ಆತನು ತನ್ನ ಭಕ್ತರ [“ನಿಷ್ಠಾವಂತರ,” NW] ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.” (ಕೀರ್ತನೆ 97:10) ಇಸ್ರಾಯೇಲ್ ಜನಾಂಗದೊಂದಿಗೆ ಆತನ ವ್ಯವಹಾರಗಳನ್ನು ನೆನಪಿಗೆ ತನ್ನಿರಿ. ಕೆಂಪು ಸಮುದ್ರದ ಮಧ್ಯದಿಂದ ಅವರನ್ನು ಅದ್ಭುತ ರೀತಿಯಲ್ಲಿ ಪಾರುಗೊಳಿಸಿದ ಬಳಿಕ, ಇಸ್ರಾಯೇಲ್ಯರು ಯೆಹೋವನಿಗೆ ಹಾಡಿದ ಗೀತೆಯಲ್ಲಿ ಘೋಷಿಸಿದ್ದು: “ನೀನು ಬಿಡುಗಡೆ ಮಾಡಿದ ಪ್ರಜೆಯನ್ನೋ ಪ್ರೀತಿಯಿಂದ [ಇಲ್ಲವೆ, ನಿಷ್ಠಾವಂತ ಪ್ರೀತಿಯಿಂದ] ನಡಿಸಿಕೊಂಡು . . . ಬರಮಾಡಿದಿ.” (ವಿಮೋಚನಕಾಂಡ 15:13) ಕೆಂಪು ಸಮುದ್ರದ ಬಳಿಯಲ್ಲಿ ಅವರನ್ನು ಪಾರುಗೊಳಿಸಿದ್ದು ನಿಶ್ಚಯವಾಗಿಯೂ ಯೆಹೋವನ ನಿಷ್ಠಾವಂತ ಪ್ರೀತಿಯ ಕೃತ್ಯವಾಗಿತ್ತು. ಆದುದರಿಂದ ಮೋಶೆಯು ಇಸ್ರಾಯೇಲ್ಯರಿಗೆ ಹೇಳಿದ್ದು: “ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪ ಮಂದಿಯಷ್ಟೆ. ಯೆಹೋವನು ನಿಮ್ಮನ್ನು ಪ್ರೀತಿಸಿ ತಾನು ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು.”—ಧರ್ಮೋಪದೇಶಕಾಂಡ 7:7, 8.
16, 17. (ಎ) ಇಸ್ರಾಯೇಲ್ಯರು ಕೃತಜ್ಞತೆಯ ಯಾವ ಘೋರ ಕೊರತೆಯನ್ನು ತೋರಿಸಿದರು, ಆದರೂ ಯೆಹೋವನು ಅವರ ಕಡೆಗೆ ಕನಿಕರವನ್ನು ತೋರಿಸಿದ್ದು ಹೇಗೆ? (ಬಿ) ಅವರು “ವಾಸಿಯಾಗುವ ಯಾವುದೇ ಸೂಚನೆ ಇಲ್ಲ”ವೆಂಬುದನ್ನು ಹೆಚ್ಚಿನ ಇಸ್ರಾಯೇಲ್ಯರು ತೋರಿಸಿದ್ದು ಹೇಗೆ, ಮತ್ತು ಇದು ನಮಗೆ ಯಾವ ಎಚ್ಚರಿಕೆಯ ಮಾದರಿಯನ್ನು ನೀಡುತ್ತದೆ?
16 ಹೌದು, ಇಸ್ರಾಯೇಲ್ಯರು ಒಂದು ಜನಾಂಗದೋಪಾದಿ ಯೆಹೋವನ ಪ್ರೀತಿಪೂರ್ವಕ ದಯೆಗೆ ಕೃತಜ್ಞತೆಯನ್ನು ತೋರಿಸಲು ತಪ್ಪಿದರು ಯಾಕಂದರೆ ಅವರ ಬಿಡುಗಡೆಯ ಅನಂತರ “ಅವರು . . . ಪರಾತ್ಪರನಿಗೆ [ಯೆಹೋವನಿಗೆ] ಪದೇಪದೇ ಅವಿಧೇಯರಾಗಿ ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.” (ಕೀರ್ತನೆ 78:17) ಶತಮಾನಗಳಲ್ಲೆಲ್ಲಾ ಅವರು ಪುನಃ ಪುನಃ ಯೆಹೋವನ ವಿರುದ್ಧವಾಗಿ ದಂಗೆಯೆದ್ದು, ಕೇವಲ ಅವನತಿಯನ್ನೇ ಬರಮಾಡಿದ ಸುಳ್ಳು ದೇವರುಗಳಿಗೆ, ಮತ್ತು ವಿಧರ್ಮಿ ಪದ್ಧತಿಗಳಿಗೆ ಹಿಂದಿರುಗಿದರು. ಆದಾಗ್ಯೂ ಯೆಹೋವನು ತಾನು ಮಾಡಿದ್ದ ಒಡಂಬಡಿಕೆಯನ್ನು ಮುರಿಯಲಿಲ್ಲ. ಬದಲಿಗೆ, ತನ್ನ ಪ್ರವಾದಿಯಾದ ಯೆರೆಮೀಯನ ಮುಖಾಂತರ ಯೆಹೋವನು ತನ್ನ ಜನರಿಗೆ ದೈನ್ಯದಿಂದ ಬೇಡಿಕೊಂಡದ್ದು: “ಭ್ರಷ್ಟಳಾದ ಇಸ್ರಾಯೇಲೇ, ಹಿಂದಿರುಗು; ನಾನು ಕೋಪ ಮುಖದಿಂದ ನಿನ್ನನ್ನು ನೋಡೆನು, ನಾನು ಕರುಣಾಶಾಲಿ [“ನಿಷ್ಠಾವಂತನು,” NW].” (ಯೆರೆಮೀಯ 3:12) ಅಧ್ಯಾಯ 25ರಲ್ಲಿ ನಾವು ಗಮನಿಸಿದಂತೆ, ಹೆಚ್ಚಿನ ಇಸ್ರಾಯೇಲ್ಯರಾದರೋ ತಮ್ಮ ದುರ್ಮಾರ್ಗವನ್ನು ಬಿಟ್ಟುಬಿಡಲು ಪ್ರೇರಿಸಲ್ಪಡಲಿಲ್ಲ. ಅವರು “ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿ”ದರು. ಪರಿಣಾಮವೇನಾಯಿತು? ಕಟ್ಟಕಡೆಗೆ, “ಅವರು ವಾಸಿಯಾಗುವ ಯಾವುದೇ ಸೂಚನೆ ಇಲ್ಲದಿದ್ದಾಗ, ಯೆಹೋವನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು.”—2 ಪೂರ್ವಕಾಲವೃತ್ತಾಂತ 36:15, 16, NW.
17 ಇದರಿಂದ ನಾವು ಏನನ್ನು ಕಲಿಯುತ್ತೇವೆ? ಯೆಹೋವನ ನಿಷ್ಠೆಯು ಕುರುಡೂ ಅಲ್ಲ ಅಥವಾ ಮೋಸ ಹೋಗುವಂಥಾದ್ದೂ ಅಲ್ಲ. ಯೆಹೋವನು “ಪ್ರೀತಿಪೂರ್ವಕ ದಯೆಯಲ್ಲಿ ಸಮೃದ್ಧ”ನಾಗಿರುತ್ತಾನೆ (NW) ಮತ್ತು ಕರುಣೆ ತೋರಿಸಲು ಆಧಾರವಿರುವಾಗ ಹಾಗೆ ಮಾಡಲು ಸಂತೋಷಪಡುತ್ತಾನೆ. ಆದರೆ ಒಬ್ಬ ತಪ್ಪಿತಸ್ಥನು ತಿದ್ದಲಾಗದ ದುಷ್ಟನಾಗಿರುವಲ್ಲಿ ಏನು? ಅಂಥ ಸಂದರ್ಭದಲ್ಲಿ ಯೆಹೋವನು ತನ್ನ ಸ್ವಂತ ನೀತಿಯುತ ಮಟ್ಟಗಳಿಗೆ ಅಂಟಿಕೊಂಡು ದಂಡನೆಯ ತೀರ್ಪನ್ನು ಕೊಡುತ್ತಾನೆ. ಮೋಶೆಗೆ ಹೇಳಲ್ಪಟ್ಟ ಪ್ರಕಾರ, ಯೆಹೋವನು “[ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು” ಆಗಿದ್ದಾನೆ.—ವಿಮೋಚನಕಾಂಡ 34:6, 7.
18, 19. (ಎ) ಯೆಹೋವನು ದುಷ್ಟರನ್ನು ಶಿಕ್ಷಿಸುವುದು ತಾನೇ ಒಂದು ನಿಷ್ಠೆಯ ಕೃತ್ಯವಾಗಿದೆ ಹೇಗೆ? (ಬಿ) ಮರಣಪರ್ಯಂತರ ಹಿಂಸಿಸಲ್ಪಟ್ಟಿರುವ ತನ್ನ ಸೇವಕರಿಗೆ ಯಾವ ರೀತಿಯಲ್ಲಿ ಯೆಹೋವನು ನಿಷ್ಠೆಯನ್ನು ತೋರಿಸುವನು?
18 ದೇವರು ದುಷ್ಟರನ್ನು ಶಿಕ್ಷಿಸುವುದು ತಾನೇ ನಿಷ್ಠೆಯ ಒಂದು ಕೃತ್ಯವಾಗಿರುತ್ತದೆ. ಹೇಗೆ? ಇದರ ಒಂದು ಸೂಚನೆಯು, ಪ್ರಕಟನೆ ಪುಸ್ತಕದಲ್ಲಿ ಏಳುಮಂದಿ ದೇವದೂತರಿಗೆ ಯೆಹೋವನು ವಿಧಿಸುವ ಆಜ್ಞೆಗಳಲ್ಲಿ ಕಂಡುಬರುತ್ತದೆ: “ನೀವು ಹೋಗಿ ಆ ಏಳು ಪಾತ್ರೆಗಳಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ.” ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು “ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ” ಹೊಯ್ದಾಗ ಅವುಗಳ ನೀರು ರಕ್ತವಾಯಿತು. ಆ ಮೇಲೆ ಆ ದೇವದೂತನು ಯೆಹೋವನಿಗೆ ಅನ್ನುವುದು: “ಸದಾ ಇರುವಾತನೇ, ಪರಿಶುದ್ಧನೇ [“ನಿಷ್ಠಾವಂತನೇ,” NW], ನೀನು ಹೀಗೆ ತೀರ್ಪುಮಾಡಿದ್ದರಲ್ಲಿ ನೀತಿಸ್ವರೂಪನಾಗಿದ್ದೀ. ಅವರು ದೇವಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ; ಇದಕ್ಕೆ ಅವರು ಪಾತ್ರರು.”—ಪ್ರಕಟನೆ 16:1-6.
19 ಆ ತೀರ್ಪಿನ ಸಂದೇಶವನ್ನು ಕೊಡುತ್ತಿರುವ ಮಧ್ಯೆಯೂ ಆ ದೇವದೂತನು ಯೆಹೋವನನ್ನು “ನಿಷ್ಠಾವಂತ”ನೆಂದು ಕರೆದನೆಂಬುದನ್ನು ಗಮನಿಸಿರಿ. ಯಾಕೆ? ಯಾಕಂದರೆ ದುಷ್ಟರನ್ನು ನಾಶಮಾಡುವ ಮೂಲಕ ಯೆಹೋವನು ತನ್ನ ಸೇವಕರಿಗೆ ನಿಷ್ಠೆಯನ್ನು ತೋರಿಸುತ್ತಿದ್ದಾನೆ. ಇವರಲ್ಲಿ ಅನೇಕರು ಮರಣಪರ್ಯಂತರವೂ ಹಿಂಸಿಸಲ್ಪಟ್ಟಿದ್ದಾರೆ. ನಿಷ್ಠೆಯಿಂದಲೇ, ಅಂಥವರನ್ನು ಯೆಹೋವನು ತನ್ನ ಸ್ಮರಣೆಯಲ್ಲಿ ಸಜೀವವಾಗಿರಿಸುತ್ತಾನೆ. ಅಗಲಿಹೋಗಿರುವ ಈ ನಂಬಿಗಸ್ತರನ್ನು ಪುನಃ ನೋಡಲು ಯೆಹೋವನು ಹಂಬಲಿಸುತ್ತಾನೆ, ಮತ್ತು ಪುನರುತ್ಥಾನದ ಮೂಲಕ ಅವರನ್ನು ಬಹುಮಾನಿಸುವುದು ಆತನ ಉದ್ದೇಶವಾಗಿದೆ ಎಂಬುದನ್ನು ಬೈಬಲು ದೃಢೀಕರಿಸುತ್ತದೆ. (ಯೋಬ 14:14, 15) ಈಗ ಅವರು ಜೀವಂತರಾಗಿರುವುದಿಲ್ಲವೆಂಬ ಕಾರಣ ಮಾತ್ರದಿಂದ ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಮರೆತುಬಿಡುವುದಿಲ್ಲ. ಅದಕ್ಕೆ ಪ್ರತಿಯಾಗಿ, “ಆತನಿಗೆ ಎಲ್ಲರೂ ಜೀವಿಸುವವರೇ.” (ಲೂಕ 20:37, 38) ಯಾರು ಆತನ ಸ್ಮರಣೆಯಲ್ಲಿದ್ದಾರೋ ಅವರನ್ನು ಪುನರ್ಜೀವಗೊಳಿಸುವ ದೇವರ ಉದ್ದೇಶವು ಆತನ ನಿಷ್ಠೆಯ ಪ್ರಬಲ ರುಜುವಾತಾಗಿರುತ್ತದೆ.
ಬರ್ನಾರ್ಡ್ ವಿಯಿಮಸ್ (ಮೇಲೆ) ಮತ್ತು ವೂಲ್ಫ್‌ಗ್ಯಾಂಗ್ ಕುಸ್ರೋ (ಮಧ್ಯೆ) ನಾಸಿಗಳಿಂದ ವಧಿಸಲ್ಪಟ್ಟರು
ಮೋಸಸ್ ಯಮುಸ್ವನನ್ನು ಒಂದು ರಾಜಕೀಯ ಗುಂಪು ಈಟಿಯಿಂದ ಇರಿದು ಕೊಂದುಹಾಕಿತು
ಯೆಹೋವನ ನಿಷ್ಠಾವಂತ ಪ್ರೀತಿಯು ರಕ್ಷಣಾ ಮಾರ್ಗವನ್ನು ತೆರೆಯುತ್ತದೆ
20. ‘ಕರುಣಾಪಾತ್ರರು’ ಯಾರು, ಮತ್ತು ಯೆಹೋವನು ಅವರಿಗೆ ಹೇಗೆ ನಿಷ್ಠೆಯನ್ನು ತೋರಿಸುತ್ತಾನೆ?
20 ಇತಿಹಾಸದಾದ್ಯಂತ ಯೆಹೋವನು ನಂಬಿಗಸ್ತ ಮಾನವರ ಕಡೆಗೆ ಗಮನಾರ್ಹವಾದ ನಿಷ್ಠೆಯನ್ನು ತೋರಿಸಿರುತ್ತಾನೆ. ವಾಸ್ತವದಲ್ಲಿ, ಸಾವಿರಾರು ವರ್ಷಗಳಿಂದ ಯೆಹೋವನು “ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ.” ಯಾಕೆ? “ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿ”ಸಲಿಕ್ಕಾಗಿಯೇ. (ರೋಮಾಪುರ 9:22, 23) ಈ ‘ಕರುಣಾಪಾತ್ರರು,’ ಕ್ರಿಸ್ತನೊಂದಿಗೆ ಅವನ ರಾಜ್ಯದಲ್ಲಿ ಸಹಬಾಧ್ಯಸ್ಥರಾಗಿರಲು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ಯೋಗ್ಯ ಪ್ರವೃತ್ತಿಯುಳ್ಳ ಜನರೇ. (ಮತ್ತಾಯ 19:28) ಈ ಕರುಣಾಪಾತ್ರರಿಗೆ ರಕ್ಷಣಾ ಮಾರ್ಗವನ್ನು ತೆರೆಯುವ ಮೂಲಕ ಯೆಹೋವನು ಅಬ್ರಹಾಮನಿಗೆ ನಿಷ್ಠಾವಂತನಾಗಿ ಉಳಿದನು; ಯಾಕಂದರೆ ಅಬ್ರಹಾಮನೊಂದಿಗೆ ಆತನು ಈ ಒಡಂಬಡಿಕೆಯ ವಚನವನ್ನಿತ್ತಿದ್ದನು: “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.”—ಆದಿಕಾಂಡ 22:18.
ಯೆಹೋವನ ನಿಷ್ಠೆಯ ಕಾರಣ, ಆತನ ನಂಬಿಗಸ್ತ ಸೇವಕರೆಲ್ಲರಿಗೆ ಭವಿಷ್ಯತ್ತಿಗಾಗಿ ಭರವಸಾರ್ಹ ನಿರೀಕ್ಷೆಯಿದೆ
21. (ಎ) ‘ಮಹಾ ಸಂಕಟವನ್ನು’ ಪಾರಾಗಿ ಬರುವ ಪ್ರತೀಕ್ಷೆಯುಳ್ಳ ‘ಮಹಾ ಸಮೂಹಕ್ಕೆ’ ಯೆಹೋವನು ಹೇಗೆ ನಿಷ್ಠೆ ತೋರಿಸುತ್ತಾನೆ? (ಬಿ) ಯೆಹೋವನ ನಿಷ್ಠೆಯು ನಿಮ್ಮನ್ನು ಏನು ಮಾಡುವಂತೆ ಪ್ರೇರೇಪಿಸುವುದು?
21 ಅದೇ ರೀತಿಯ ನಿಷ್ಠೆಯನ್ನು ಯೆಹೋವನು “ಮಹಾ ಸಮೂಹ”ದವರಿಗೂ ತೋರಿಸುತ್ತಾನೆ. ಇವರಿಗೆ ‘ಮಹಾ ಸಂಕಟವನ್ನು’ (NW) ಪಾರಾಗುವ ಮತ್ತು ಪರದೈಸ್ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯು ಇದೆ. (ಪ್ರಕಟನೆ 7:9, 10, 14) ಆತನ ಸೇವಕರು ಅಪರಿಪೂರ್ಣರಾಗಿದ್ದರೂ, ಯೆಹೋವನು ನಿಷ್ಠೆಯಿಂದ ಅವರಿಗೆ ಪರದೈಸ್ ಭೂಮಿಯಲ್ಲಿ ಸದಾಕಾಲ ಜೀವಿಸುವ ಸಂದರ್ಭವನ್ನು ನೀಡುತ್ತಿದ್ದಾನೆ. ಆತನು ಅದನ್ನು ಮಾಡುವುದು ಹೇಗೆ? ಯೆಹೋವನ ನಿಷ್ಠೆಯ ಅತ್ಯಂತ ಮಹಾನ್ ಪ್ರದರ್ಶನ, ಅಂದರೆ ಈಡು ಯಜ್ಞದ ಮೂಲಕವೇ. (ಯೋಹಾನ 3:16; ರೋಮಾಪುರ 5:8) ಯಾರು ತಮ್ಮ ಹೃದಯದಲ್ಲಿ ನೀತಿಗಾಗಿ ಹಸಿದಿರುತ್ತಾರೊ ಅವರನ್ನು ಯೆಹೋವನ ನಿಷ್ಠೆಯು ಆಕರ್ಷಿಸುತ್ತದೆ. (ಯೆರೆಮೀಯ 31:3) ಆತನು ತೋರಿಸುತ್ತಿರುವ ಮತ್ತು ಇನ್ನೂ ತೋರಿಸಲಿರುವ ಗಾಢವಾದ ನಿಷ್ಠೆಯಿಂದಾಗಿ ನೀವು ಯೆಹೋವನಿಗೆ ಇನ್ನೂ ಹೆಚ್ಚು ಸಮೀಪ ಬಂದಿರುವಂತೆ ನಿಮಗನಿಸುವುದಿಲ್ಲವೇ? ದೇವರ ಸಮೀಪಕ್ಕೆ ಬರುವುದೇ ನಮ್ಮ ಅಪೇಕ್ಷೆಯಾಗಿರುವುದರಿಂದ, ಆತನನ್ನು ನಿಷ್ಠೆಯಿಂದ ಸೇವಿಸುವ ನಮ್ಮ ನಿರ್ಧಾರವನ್ನು ದೃಢಗೊಳಿಸುವ ಮೂಲಕ ಆತನ ಪ್ರೀತಿಗೆ ನಾವು ಸ್ಪಂದಿಸೋಣ.