ಅಧ್ಯಾಯ ಹತ್ತೊಂಬತ್ತು
ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಮುಂದುವರಿಯಿರಿ
1. (ಎ) ಯೇಸುವಿನ ಶಿಷ್ಯರು ಯಾವ ಸುವಾರ್ತೆಯನ್ನು ಸಾರಿದರು, ಆದರೆ ಕೆಲವು ಮಂದಿ ಯೆಹೂದ್ಯರು ಹೇಗೆ ಪ್ರತಿಕ್ರಿಯೆ ತೋರಿಸಿದರು? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಬಹುದು?
ಸುಮಾರು 2,000 ವರುಷಗಳ ಹಿಂದೆ, ದೇವಪುತ್ರನಾದ ಯೇಸು ಕ್ರಿಸ್ತನನ್ನು ಇಡೀ ಭೂಮಿಯ ಭಾವೀ ಅರಸನಾಗಿ ಅಭಿಷೇಕಿಸಲಾಯಿತು. ಯೇಸು ಧಾರ್ಮಿಕ ವೈರಿಗಳ ಚಿತಾವಣೆಯಿಂದ ವಧಿಸಲ್ಪಟ್ಟರೂ, ಯೆಹೋವನು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನು. ಹೀಗೆ, ಯೇಸುವಿನ ಮೂಲಕ ನಿತ್ಯಜೀವವು ಸಾಧ್ಯಗೊಳಿಸಲ್ಪಟ್ಟಿತು. ಆದರೆ ಯೇಸುವಿನ ಶಿಷ್ಯರು ಈ ಸುವಾರ್ತೆಯನ್ನು ಬಹಿರಂಗವಾಗಿ ಸಾರತೊಡಗಿದಾಗ, ಹಿಂಸೆಯು ಆರಂಭಗೊಂಡಿತು. ಅವರಲ್ಲಿ ಕೆಲವರನ್ನು ಸೆರೆಮನೆಗೆ ಹಾಕಲಾಯಿತು, ಅವರನ್ನು ಹೊಡೆದು, ಯೇಸುವಿನ ವಿಷಯದಲ್ಲಿ ಮಾತಾಡುವುದನ್ನು ನಿಲ್ಲಿಸಬೇಕೆಂದೂ ಆಜ್ಞಾಪಿಸಲಾಯಿತು. (ಅ. ಕೃತ್ಯಗಳು 4:1-3, 17; 5:17, 18, 40) ಆಗ ಅವರೇನು ಮಾಡುವರು? ನೀವು ಏನು ಮಾಡುತ್ತಿದ್ದಿರಿ? ಧೈರ್ಯದಿಂದ ಸಾಕ್ಷಿ ನೀಡುತ್ತಾ ಮುಂದುವರಿಯುತ್ತಿದ್ದಿರೊ?
2. (ಎ) ನಮ್ಮ ದಿನಗಳಲ್ಲಿ ಯಾವ ಆಶ್ಚರ್ಯಕರವಾದ ವಾರ್ತೆಯನ್ನು ಘೋಷಿಸುವುದು ಅಗತ್ಯ? (ಬಿ) ಸುವಾರ್ತೆಯನ್ನು ಸಾರುವ ಜವಾಬ್ದಾರಿ ಯಾರಿಗಿದೆ?
2 ದೇವರ ರಾಜ್ಯದ ಅರಸನಾದ ಯೇಸು ಕ್ರಿಸ್ತನು 1914ರಲ್ಲಿ ಸ್ವರ್ಗದಲ್ಲಿ ಸಿಂಹಾಸನವನ್ನೇರಿ, ‘ತನ್ನ ವೈರಿಗಳ ಮಧ್ಯೆ’ ಆಳತೊಡಗಿದನು. (ಕೀರ್ತನೆ 110:2) ಬಳಿಕ, ಸೈತಾನನೂ ಅವನ ದೆವ್ವಗಳೂ ಭೂಮಿಗೆ ದೊಬ್ಬಲ್ಪಟ್ಟವು. (ಪ್ರಕಟನೆ 12:1-5, 7-12) ಆಗ, ಈ ದುಷ್ಟ ವ್ಯವಸ್ಥೆಯ ಕೊನೆಯ ದಿನಗಳು ಆರಂಭಗೊಂಡವು. ಈ ಸಮಯವು ಅಂತ್ಯಗೊಳ್ಳುವಾಗ, ಸೈತಾನನ ಇಡೀ ವಿಷಯಗಳ ವ್ಯವಸ್ಥೆಯನ್ನು ದೇವರು ನಿರ್ನಾಮಮಾಡುವನು. (ದಾನಿಯೇಲ 2:44; ಮತ್ತಾಯ 24:21) ಇದರಲ್ಲಿ ಬದುಕಿ ಉಳಿಯುವವರಿಗೆ ಮುಂದೆ ಪರದೈಸಾಗಿ ಪರಿಣಮಿಸುವ ಭೂಮಿಯ ಮೇಲೆ ನಿತ್ಯಜೀವದ ಪ್ರತೀಕ್ಷೆಯಿರುವುದು. ಈ ಸುವಾರ್ತೆಯನ್ನು ಅಂಗೀಕರಿಸಿರುವಲ್ಲಿ, ಅದನ್ನು ಇತರರಿಗೆ ಹಂಚಲು ನೀವು ಬಯಸುವಿರಿ. (ಮತ್ತಾಯ 24:14) ಆದರೆ ದೊರೆಯುವ ಪ್ರತಿವರ್ತನೆ ಏನಾಗಿರಬಲ್ಲದು?
3. (ಎ) ಜನರು ರಾಜ್ಯ ಸಂದೇಶಕ್ಕೆ ಹೇಗೆ ಪ್ರತಿವರ್ತಿಸುತ್ತಾರೆ? (ಬಿ) ನಾವು ಯಾವ ಪ್ರಶ್ನೆಯನ್ನು ಎದುರಿಸಬೇಕು?
3 ನೀವು ಸುವಾರ್ತೆಯನ್ನು ಸಾರುವಾಗ, ಕೆಲವರು ಅದನ್ನು ಸ್ವಾಗತಿಸಬಹುದಾದರೂ, ಹೆಚ್ಚಿನವರು ಅದರಲ್ಲಿ ನಿರಾಸಕ್ತಿಯನ್ನು ತೋರಿಸುವರು. (ಮತ್ತಾಯ 24:37-39) ಕೆಲವರು ನಿಮಗೆ ಅಪಹಾಸ್ಯ ಮಾಡಬಹುದು ಅಥವಾ ವಿರೋಧಿಸಬಹುದು. ಈ ವಿರೋಧವು ನಿಮ್ಮ ಸಂಬಂಧಿಗಳಿಂದಲೇ ಬಂದೀತೆಂದು ಯೇಸು ಎಚ್ಚರಿಸಿದನು. (ಲೂಕ 21:16-19) ಅದು ನಿಮ್ಮ ಕೆಲಸದ ಸ್ಥಳದಿಂದ ಇಲ್ಲವೆ ಶಾಲೆಯಿಂದ ಬರಬಹುದು. ಲೋಕದ ಕೆಲವು ಭಾಗಗಳಲ್ಲಿ ಯೆಹೋವನ ಸಾಕ್ಷಿಗಳನ್ನು ಸರಕಾರಗಳೂ ನಿಷೇಧಿಸಿವೆ. ಇಂತಹ ಪರಿಸ್ಥಿತಿಗಳನ್ನು ಎದುರಿಸುವಾಗ, ನೀವು ಧೈರ್ಯದಿಂದ ದೇವರ ವಾಕ್ಯವನ್ನು ಹೇಳುತ್ತಾ, “ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲು”ವಿರೊ?—1 ಕೊರಿಂಥ 16:13.
ನಮ್ಮ ಸ್ವಂತ ಶಕ್ತಿಯನ್ನು ಅವಲಂಬಿಸದೆ ಇರುವುದು
4. (ಎ) ನಾವು ದೇವರ ನಂಬಿಗಸ್ತ ಸೇವಕರಾಗಿದ್ದೇವೆಂದು ತೋರಿಸಿಕೊಡಲು, ಒಂದು ಮೂಲ ಆವಶ್ಯಕತೆ ಏನು? (ಬಿ) ಕ್ರೈಸ್ತ ಕೂಟಗಳು ಅಷ್ಟು ಪ್ರಾಮುಖ್ಯವೇಕೆ?
4 ಯೆಹೋವನ ನಂಬಿಗಸ್ತ ಸೇವಕನಾಗಿ ಇರಬೇಕಾದರೆ ಆವಶ್ಯಕವಾಗಿರುವ ವಿಷಯವು ಯೆಹೋವನ ಒದಗಿಸುವಿಕೆಗಳನ್ನು ಅವಲಂಬಿಸಿರುವುದೇ. ಅವುಗಳಲ್ಲಿ ಒಂದು, ಸಭಾ ಕೂಟಗಳೇ ಆಗಿವೆ. ನಾವು ಅವನ್ನು ಅಸಡ್ಡೆ ಮಾಡಬಾರದೆಂದು ಶಾಸ್ತ್ರವು ನಮ್ಮನ್ನು ಉತ್ತೇಜಿಸುತ್ತದೆ. (ಇಬ್ರಿಯ 10:23-25) ಯೆಹೋವನ ನಂಬಿಗಸ್ತ ಸಾಕ್ಷಿಗಳಾಗಿ ಮುಂದುವರಿದಿರುವವರು ತಮ್ಮ ಜೊತೆ ಆರಾಧಕರೊಂದಿಗೆ ಕೂಟಗಳಲ್ಲಿ ಉಪಸ್ಥಿತರಾಗಿರುವುದರಲ್ಲಿ ಕ್ರಮವಾಗಿರಲು ಪ್ರಯಾಸಪಟ್ಟಿದ್ದಾರೆ. ಈ ಕೂಟಗಳಲ್ಲಿ ನಮ್ಮ ಶಾಸ್ತ್ರಜ್ಞಾನ ಹೆಚ್ಚಾಗುತ್ತದೆ. ಅಲ್ಲದೆ, ಸುವಿದಿತವಾದ ಸತ್ಯಗಳ ನಮ್ಮ ತಿಳಿವಳಿಕೆ ಹೆಚ್ಚಾಗಿ, ಅವನ್ನು ಹೇಗೆ ಉಪಯೋಗಿಸಬಹುದೆಂಬುದರ ಪ್ರಜ್ಞೆ ಹರಿತವಾಗುತ್ತದೆ. ನಾವು ಐಕ್ಯಾರಾಧನೆಯಲ್ಲಿ ನಮ್ಮ ಕ್ರೈಸ್ತ ಸಹೋದರರ ಸಮೀಪಕ್ಕೆ ಸೆಳೆಯಲ್ಪಟ್ಟು, ದೇವರ ಚಿತ್ತವನ್ನು ಮಾಡಲು ಬಲಗೊಳಿಸಲ್ಪಡುತ್ತೇವೆ. ಯೆಹೋವನ ಆತ್ಮವು ಸಭೆಯ ಮುಖಾಂತರ ಮಾರ್ಗದರ್ಶನವನ್ನು ನೀಡುತ್ತದೆ, ಮತ್ತು ಅದೇ ಆತ್ಮದ ಮೂಲಕವಾಗಿ, ಯೇಸು ನಮ್ಮ ಮಧ್ಯದಲ್ಲಿರುತ್ತಾನೆ.—ಮತ್ತಾಯ 18:20; ಪ್ರಕಟನೆ 3:6.
5. ಯೆಹೋವನ ಸಾಕ್ಷಿಗಳು ನಿಷೇಧಕ್ಕೊಳಗಾಗಿರುವಾಗ, ಕೂಟಗಳ ವಿಷಯದಲ್ಲಿ ಏನು ಮಾಡಲಾಗುತ್ತದೆ?
5 ನೀವು ಎಲ್ಲಾ ಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಾಗುತ್ತೀರೊ, ಮತ್ತು ಚರ್ಚಿಸಲ್ಪಡುವಾಗ ಕೇಳಿದ ವಿಷಯಗಳನ್ನು ಸ್ವತಃ ಅನ್ವಯಿಸಿಕೊಳ್ಳುತ್ತೀರೊ? ಕೆಲವೊಮ್ಮೆ, ಯೆಹೋವನ ಸಾಕ್ಷಿಗಳು ನಿಷೇಧಕ್ಕೊಳಗಾಗಿರುವಾಗ, ಕೂಟಗಳನ್ನು ಸಣ್ಣ ಗುಂಪುಗಳಾಗಿ ಖಾಸಗಿ ಮನೆಗಳಲ್ಲಿ ನಡೆಸಬೇಕಾಗುತ್ತದೆ. ವಿಭಿನ್ನ ಸ್ಥಳ ಮತ್ತು ಸಮಯಗಳಲ್ಲಿ, ಕೆಲವು ಸಲ ರಾತ್ರಿ ತಡವಾಗಿ ಪ್ರಾರಂಭವಾಗುವ ಕೂಟಗಳು ಸದಾ ನಮಗೆ ಅನುಕೂಲವಾಗಿರಲಿಕ್ಕಿಲ್ಲ. ಆದರೆ ಸ್ವಂತ ಅನನುಕೂಲ ಅಥವಾ ಅಪಾಯವಿದ್ದರೂ, ನಂಬಿಗಸ್ತ ಸಹೋದರ ಸಹೋದರಿಯರು ಪ್ರತಿ ಕೂಟಕ್ಕೆ ಕೂಡಿ ಬರಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುತ್ತಾರೆ.
6. ಯೆಹೋವನ ಮೇಲೆ ಅವಲಂಬಿಸಿದ್ದೇವೆಂದು ನಾವು ಹೇಗೆ ತೋರಿಸುತ್ತೇವೆ, ಮತ್ತು ನಾವು ಧೈರ್ಯದಿಂದ ಮಾತಾಡುತ್ತಾ ಮುಂದುವರಿಯುವಂತೆ ಇದು ನಮಗೆ ಹೇಗೆ ಸಹಾಯಮಾಡಬಲ್ಲದು?
6 ದೇವರ ಸಹಾಯದ ಅಗತ್ಯವುಳ್ಳವರಾಗಿದ್ದೇವೆಂದು ಗ್ರಹಿಸಿಕೊಂಡು, ಕ್ರಮವಾಗಿ ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ಆತನ ಕಡೆಗೆ ತಿರುಗುವುದರಿಂದ, ಯೆಹೋವನ ಮೇಲಿನ ಅವಲಂಬನೆಯು ಇನ್ನಷ್ಟು ಬೆಳೆಯುತ್ತದೆ. ನೀವು ಅದನ್ನು ಮಾಡುತ್ತೀರೊ? ಯೇಸು ತನ್ನ ಭೂಶುಶ್ರೂಷೆಯ ಕಾಲದಲ್ಲೆಲ್ಲ ಪದೇ ಪದೇ ಪ್ರಾರ್ಥಿಸಿದನು. (ಲೂಕ 3:21; 6:12, 13; 22:39-44) ಮತ್ತು ಅವನನ್ನು ಶೂಲಕ್ಕೇರಿಸುವ ಮುಂಚಿನ ರಾತ್ರಿ, ಅವನು ತನ್ನ ಶಿಷ್ಯರನ್ನು, “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ” ಎಂದು ಹೇಳಿ ಪ್ರೋತ್ಸಾಹಿಸಿದನು. (ಮಾರ್ಕ 14:38) ರಾಜ್ಯ ಸಂದೇಶಕ್ಕೆ ನಿರಾಸಕ್ತಿಯು ತೋರಿಸಲ್ಪಡುವಲ್ಲಿ, ನಮ್ಮ ಶುಶ್ರೂಷೆಯಲ್ಲಿ ನಿಧಾನಿಸುವಂತೆ ನಾವು ಪ್ರೇರೇಪಿಸಲ್ಪಟ್ಟೇವು. ಜನರು ನಮಗೆ ಅಪಹಾಸ್ಯ ಮಾಡುವಲ್ಲಿ ಅಥವಾ ಹಿಂಸಿಸುವಲ್ಲಿ, ಸಮಸ್ಯೆಗಳಿಂದ ದೂರವಿರುವ ಸಲುವಾಗಿ ನಾವು ಸಾರುವುದನ್ನು ನಿಲ್ಲಿಸುವಂತೆ ಪ್ರೇರೇಪಿಸಲ್ಪಟ್ಟೇವು. ಆದರೆ ಧೈರ್ಯದಿಂದ ಮಾತಾಡಲು ಸಹಾಯವನ್ನು ಕೋರುತ್ತಾ ಶ್ರದ್ಧಾಪೂರ್ವಕವಾಗಿ ದೇವರಾತ್ಮಕ್ಕಾಗಿ ಪ್ರಾರ್ಥಿಸುವಲ್ಲಿ, ಅಂತಹ ಶೋಧನೆಗಳಿಗೆ ಬಲಿಯಾಗದಂತೆ ನಾವು ಕಾಪಾಡಲ್ಪಡುವೆವು.—ಲೂಕ 11:13; ಎಫೆಸ 6:18-20.
ಧೈರ್ಯದಿಂದ ಸಾಕ್ಷಿ ನೀಡುವುದರ ದಾಖಲೆ
7. (ಎ) ಅಪೊಸ್ತಲರ ಕೃತ್ಯಗಳು ಪುಸ್ತಕದ ದಾಖಲೆಯು ನಮಗೇಕೆ ವಿಶೇಷ ಆಸಕ್ತಿಯದ್ದಾಗಿದೆ? (ಬಿ) ಈ ಪರಿಚ್ಛೇದದ ಕೆಳಗೆ ಕೊಡಲ್ಪಟ್ಟಿರುವ ಪ್ರಶ್ನೆಗಳಿಗೆ, ಆ ಮಾಹಿತಿಯು ನಮಗೆ ಹೇಗೆ ಸಹಾಯಮಾಡಬಲ್ಲದೆಂಬುದನ್ನು ಒತ್ತಿಹೇಳುತ್ತಾ, ಉತ್ತರ ಕೊಡಿರಿ.
7 ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿರುವ ದಾಖಲೆ ನಮ್ಮೆಲ್ಲರಿಗೆ ವಿಶೇಷ ಆಸಕ್ತಿಯದ್ದಾಗಿರುತ್ತದೆ. ನಮ್ಮ ಹಾಗಿನ ಅನಿಸಿಕೆಗಳಿದ್ದ ಅಪೊಸ್ತಲರೂ ಇತರ ಆದಿಶಿಷ್ಯರೂ ತಮಗೆ ಎದುರಾದ ತಡೆಗಳನ್ನು ಹೇಗೆ ಜಯಿಸಿ ಧೈರ್ಯ ಮತ್ತು ನಂಬಿಗಸ್ತಿಕೆಯ ಯೆಹೋವನ ಸಾಕ್ಷಿಗಳಾಗಿ ಪರಿಣಮಿಸಿದರೆಂದು ಅದು ತಿಳಿಸುತ್ತದೆ. ಈಗ ಆ ದಾಖಲೆಯ ಒಂದು ಭಾಗವನ್ನು, ಕೆಳಗಿನ ಪ್ರಶ್ನೆ ಮತ್ತು ಉದಾಹರಿಸಿದ ವಚನಗಳ ಸಹಾಯದಿಂದ ಪರೀಕ್ಷಿಸೋಣ. ಹಾಗೆ ಮಾಡುವಾಗ, ನಿಮ್ಮ ಓದಿನಿಂದ ನೀವು ಸ್ವತಃ ಹೇಗೆ ಪ್ರಯೋಜನ ಪಡೆಯಬಲ್ಲಿರೆಂಬುದನ್ನು ಪರಿಗಣಿಸಿರಿ.
ಅಪೊಸ್ತಲರು ಹೆಚ್ಚು ವಿದ್ಯಾವಂತರಾಗಿದ್ದರೊ? ಅವರು ಏನು ಸಂಭವಿಸಿದರೂ ಸ್ವಾಭಾವಿಕವಾಗಿ ಭಯವಿಲ್ಲದವರಾಗಿದ್ದರೊ? (ಯೋಹಾನ 18:17, 25-27; 20:19; ಅ. ಕೃತ್ಯಗಳು 4:13)
ದೇವರ ಸ್ವಂತ ಮಗನಿಗೆ ಮರಣಶಿಕ್ಷೆ ವಿಧಿಸಿದ್ದ ಯೆಹೂದಿ ನ್ಯಾಯಾಲಯದ ಮುಂದೆ ಧೈರ್ಯವಾಗಿ ಮಾತಾಡುವಂತೆ ಪೇತ್ರನಿಗೆ ಯಾವುದು ಸಾಧ್ಯಮಾಡಿತು? (ಮತ್ತಾಯ 10:19, 20; ಅ. ಕೃತ್ಯಗಳು 4:8)
ಅಪೊಸ್ತಲರು ಸನ್ಹೇದ್ರಿನ್‌ನ ಮುಂದೆ ತರಲ್ಪಡುವ ಹಿಂದಿನ ವಾರಗಳಲ್ಲಿ ಅವರು ಏನು ಮಾಡುತ್ತಿದ್ದರು? (ಅ. ಕೃತ್ಯಗಳು 1:14; 2:1, 42)
ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸಬೇಕೆಂದು ಆ ಅಧಿಪತಿಗಳು ಅಪ್ಪಣೆ ಕೊಟ್ಟಾಗ, ಪೇತ್ರ ಮತ್ತು ಯೋಹಾನರು ಹೇಗೆ ಉತ್ತರ ಕೊಟ್ಟರು? (ಅ. ಕೃತ್ಯಗಳು 4:19, 20)
ಅವರು ಬಿಡುಗಡೆ ಹೊಂದಿದ ಮೇಲೆ, ಪುನಃ ಸಹಾಯಕ್ಕಾಗಿ ಯಾರ ಕಡೆಗೆ ನೋಡಿದರು? ಹಿಂಸೆ ನಿಲ್ಲಬೇಕೆಂದು ಅವರು ಪ್ರಾರ್ಥಿಸಿದರೊ, ಅಥವಾ ಏನು? (ಅ. ಕೃತ್ಯಗಳು 4:24-31)
ವಿರೋಧಿಗಳು ಸಾರುವ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಯೆಹೋವನು ಯಾವುದರ ಮೂಲಕ ನೆರವನ್ನು ನೀಡಿದನು? (ಅ. ಕೃತ್ಯಗಳು 5:17-20)
ಬಿಡುಗಡೆ ಮಾಡಲ್ಪಟ್ಟ ಕಾರಣವು ತಮಗೆ ತಿಳಿದಿತ್ತೆಂಬುದನ್ನು ಅಪೊಸ್ತಲರು ಹೇಗೆ ತೋರಿಸಿದರು? (ಅ. ಕೃತ್ಯಗಳು 5:21, 41, 42)
ಹಿಂಸೆಯ ಕಾರಣ ಶಿಷ್ಯರಲ್ಲಿ ಅನೇಕರು ಚದರಿಸಲ್ಪಟ್ಟಿದ್ದರೂ, ಅವರೇನು ಮಾಡುತ್ತಾ ಹೋದರು? (ಅ. ಕೃತ್ಯಗಳು 8:3, 4; 11:19-21)
8. ಆದಿಶಿಷ್ಯರ ಶುಶ್ರೂಷೆಯಿಂದ ಯಾವ ರೋಮಾಂಚಕವಾದ ಫಲಗಳು ಬಂದವು, ಮತ್ತು ನಾವು ಅದರಲ್ಲಿ ಭಾಗಿಗಳಾಗುವಂತಾದದ್ದು ಹೇಗೆ?
8 ಸುವಾರ್ತೆಯನ್ನು ಸಾರುವ ಕೆಲಸವು ವ್ಯರ್ಥವಾಗಿರಲಿಲ್ಲ. ಸಾ.ಶ. 33ರ ಪಂಚಾಶತ್ತಮದಲ್ಲಿ ಸುಮಾರು 3,000 ಮಂದಿ ಶಿಷ್ಯರು ದೀಕ್ಷಾಸ್ನಾನ ಹೊಂದಿದರು. “ಇನ್ನು ಎಷ್ಟೋ ಮಂದಿ ಗಂಡಸರೂ ಹೆಂಗಸರೂ ಕರ್ತನಲ್ಲಿ ನಂಬಿಕೆಯಿಡುವವರಾಗಿ ಅವರ ಮಂಡಲಿಯಲ್ಲಿ ಸೇರಿಕೊಳ್ಳುತ್ತಿದ್ದರು.” (ಅ. ಕೃತ್ಯಗಳು 2:41; 4:4; 5:14) ಸಕಾಲದಲ್ಲಿ, ದೇವಜನರ ಭಯಂಕರ ಹಿಂಸಕನಾಗಿದ್ದ ತಾರ್ಸದ ಸೌಲನೂ ಕ್ರೈಸ್ತನಾಗಿ ಸತ್ಯಕ್ಕೆ ಧೈರ್ಯದಿಂದ ಸಾಕ್ಷಿಕೊಡಲು ತೊಡಗಿದನು. ಅವನು ಅಪೊಸ್ತಲ ಪೌಲನಾಗಿ ಹೆಸರುವಾಸಿಯಾದನು. (ಗಲಾತ್ಯ 1:22-24) ಪ್ರಥಮ ಶತಮಾನದಲ್ಲಿ ಆರಂಭಗೊಂಡ ಕೆಲಸವು ನಿಂತಿಲ್ಲ. ಅದು ಈ ಕಡೇ ದಿವಸಗಳಲ್ಲಿ ಉದ್ದೀಪನ ಹೊಂದಿ ಭೂಮಿಯ ಎಲ್ಲಾ ಭಾಗಗಳಿಗೆ ತಲಪಿದೆ. ನಮಗೆ ಅದರಲ್ಲಿ ಭಾಗವಹಿಸುವ ಸದವಕಾಶವಿದೆ, ಮತ್ತು ನಾವು ಅದನ್ನು ಮಾಡುವಾಗ, ನಮಗಿಂತ ಮೊದಲು ಸೇವೆಮಾಡಿದ್ದ ನಿಷ್ಠಾವಂತರಾದ ಸಾಕ್ಷಿಗಳಿಟ್ಟ ಮಾದರಿಯಿಂದ ನಾವು ಪಾಠವನ್ನು ಕಲಿಯಬಲ್ಲೆವು.
9. (ಎ) ಸಾಕ್ಷಿ ನೀಡಲು ಪೌಲನು ಯಾವ ಅವಕಾಶಗಳನ್ನು ಉಪಯೋಗಿಸಿದನು? (ಬಿ) ನೀವು ಇತರರಿಗೆ ರಾಜ್ಯ ಸಂದೇಶವನ್ನು ಯಾವ ವಿಧಗಳಲ್ಲಿ ಹರಡಿಸುತ್ತೀರಿ?
9 ಪೌಲನು ಯೇಸು ಕ್ರಿಸ್ತನ ವಿಷಯವಾಗಿ ಸತ್ಯವನ್ನು ಕಲಿತುಕೊಂಡಾಗ ಏನು ಮಾಡಿದನು? “ತಡಮಾಡದೆ . . . ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವದಕ್ಕೆ ಪ್ರಾರಂಭಮಾಡಿದನು.” (ಅ. ಕೃತ್ಯಗಳು 9:20) ದೇವರು ಅವನಿಗೆ ತೋರಿಸಿದ ಅಪಾತ್ರ ದಯೆಗೆ ಅವನು ಕೃತಜ್ಞನಾಗಿ, ತನಗೆ ದೊರೆತಿದ್ದ ಸುವಾರ್ತೆಯು ಸಕಲರಿಗೂ ಅಗತ್ಯವೆಂದು ಗ್ರಹಿಸಿದನು. ಪೌಲನು ಯೆಹೂದ್ಯನಾಗಿದ್ದುದರಿಂದ, ಆ ದಿನಗಳ ವಾಡಿಕೆಯಂತೆ ಅವನು ಸಾಕ್ಷಿಕೊಡಲು ಸಭಾಮಂದಿರಕ್ಕೆ ಹೋದನು. ಅವನು ಮನೆಯಿಂದ ಮನೆಗೂ ಸಾರಿ, ಮಾರುಕಟ್ಟೆಯಲ್ಲಿ ಜನರೊಂದಿಗೆ ತರ್ಕಿಸಿದನು. ಮತ್ತು ಸುವಾರ್ತೆ ಸಾರಲು ಹೊಸ ಪ್ರದೇಶಗಳಿಗೆ ಹೋಗಲು ಅವನು ಇಷ್ಟಪಟ್ಟನು.—ಅ. ಕೃತ್ಯಗಳು 17:17; 20:20; ರೋಮಾಪುರ 15:23, 24.
10. (ಎ) ಸಾಕ್ಷಿ ನೀಡಿದ ವಿಧದಿಂದ, ತಾನು ಧೈರ್ಯಶಾಲಿಯಾಗಿದ್ದರೂ ವಿವೇಚನೆಯುಳ್ಳವನೂ ಆಗಿದ್ದನೆಂದು ಪೌಲನು ಹೇಗೆ ತೋರಿಸಿದನು? (ಬಿ) ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ ಅಥವಾ ಸಹಪಾಠಿಗಳಿಗೆ ಸಾಕ್ಷಿ ನೀಡುವಾಗ ನಾವು ಪೌಲನ ಗುಣಗಳನ್ನು ಹೇಗೆ ತೋರಿಸಬಹುದು?
10 ಪೌಲನು ಧೈರ್ಯಶಾಲಿಯಾಗಿದ್ದರೂ ವಿವೇಚನೆಯುಳ್ಳವನಾಗಿದ್ದನು. ನಾವೂ ಹಾಗಿರಬೇಕು. ಅವನು ಯೆಹೂದ್ಯರಿಗೆ, ದೇವರು ಅವರ ಪಿತೃಗಳಿಗೆ ಮಾಡಿದ್ದ ವಾಗ್ದಾನಗಳ ಆಧಾರದ ಮೇರೆಗೆ ಮನವೊಲಿಸುವಂತೆ ಮಾತಾಡಿದನು. ಗ್ರೀಕರಿಗೆ, ಅವರಿಗೆ ಚೆನ್ನಾಗಿ ತಿಳಿದಿದ್ದ ವಿಷಯಗಳ ಆಧಾರದ ಮೇರೆಗೆ ಮಾತಾಡಿದನು. ಕೆಲವು ಸಲ ಸಾಕ್ಷಿ ನೀಡಲು, ಸತ್ಯವನ್ನು ಕಲಿತಾಗ ತನಗಾದ ಸ್ವಂತ ಅನುಭವಗಳನ್ನು ಅವನು ಉಪಯೋಗಿಸಿದನು. ಅವನಂದದ್ದು: “ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.”—1 ಕೊರಿಂಥ 9:20-23; ಅ. ಕೃತ್ಯಗಳು 22:3-21.
11. (ಎ) ವಿರೋಧಿಗಳೊಂದಿಗೆ ಪದೇ ಪದೇ ಮುಕಾಬಿಲೆಮಾಡುವುದನ್ನು ತಪ್ಪಿಸಲು ಪೌಲನು ಏನು ಮಾಡಿದನು? (ಬಿ) ಪೌಲನ ಮಾದರಿಯನ್ನು ನಾವು ವಿವೇಕದಿಂದ ಯಾವಾಗ ಅನುಕರಿಸಬಹುದು, ಮತ್ತು ಹೇಗೆ? (ಸಿ) ಧೈರ್ಯದಿಂದ ಮಾತಾಡುತ್ತಾ ಹೋಗಲು ಶಕ್ತಿಯು ಎಲ್ಲಿಂದ ಬರುತ್ತದೆ?
11 ವಿರೋಧದ ಕಾರಣ ಸ್ವಲ್ಪ ಸಮಯ ಬೇರೆ ಕಡೆಯಲ್ಲಿ ಸುವಾರ್ತೆ ಸಾರುವುದು ಉಚಿತವೆಂದು ಕಂಡುಬಂದಾಗ, ವಿರೋಧಿಗಳನ್ನು ಪದೇ ಪದೇ ಎದುರಿಸಿ ಮುಕಾಬಿಲೆಮಾಡುವ ಬದಲು ಪೌಲನು ಇನ್ನೊಂದು ಪ್ರದೇಶಕ್ಕೆ ಹೋದನು. (ಅ. ಕೃತ್ಯಗಳು 14:5-7; 18:5-7; ರೋಮಾಪುರ 12:18) ಆದರೆ ಅವನು ಸುವಾರ್ತೆಯ ವಿಷಯದಲ್ಲಿ ನಾಚಿಕೆಪಡಲಿಲ್ಲ. (ರೋಮಾಪುರ 1:16) ಅಪಹಾಸ್ಯ ಮಾಡುವವರು, ಕೆಲವು ವೇಳೆ ಹಿಂಸಾತ್ಮಕರೂ ಆದ ವ್ಯಕ್ತಿಗಳ ಉಪಚಾರದಿಂದ ಪೌಲನು ಅಪ್ರಸನ್ನಗೊಂಡಿದ್ದರೂ, ಅವನು “ದೇವರ ಮೂಲಕ ಧೈರ್ಯಗೊಂಡು” ಸಾರುವುದನ್ನು ಮುಂದುವರಿಸಿದನು. ಅವನು ಹೇಳಿದ್ದು: “ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆ . . . ಮಾಡಿದನು.” (1 ಥೆಸಲೊನೀಕ 2:2; 2 ತಿಮೊಥೆಯ 4:17) ಕ್ರೈಸ್ತ ಸಭೆಯ ಶಿರಸ್ಸಾದ ಯೇಸು, ನಮ್ಮ ದಿನಗಳಲ್ಲಿ ಮಾಡಬೇಕೆಂದು ತಾನು ಮುಂತಿಳಿಸಿದ ಕೆಲಸವನ್ನು ಮಾಡಲು ಬೇಕಾದ ಶಕ್ತಿಯನ್ನು ನಮಗೆ ಒದಗಿಸುತ್ತಾ ಬಂದಿದ್ದಾನೆ.—ಮಾರ್ಕ 13:10.
12. ಕ್ರೈಸ್ತ ಧೈರ್ಯಕ್ಕೆ ಯಾವುದು ರುಜುವಾತನ್ನು ಕೊಡುತ್ತದೆ, ಮತ್ತು ಅದಕ್ಕೆ ಆಧಾರವೇನು?
12 ಯೇಸುವೂ ದೇವರ ಇತರ ನಂಬಿಗಸ್ತ ಸೇವಕರೂ ಪ್ರಥಮ ಶತಮಾನದಲ್ಲಿ ಮಾಡಿದಂತೆ, ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಹೋಗಲು ನಮಗೂ ಸರ್ವ ಕಾರಣಗಳಿವೆ. ಇದರ ಅರ್ಥವು ಸುವಾರ್ತೆಯು ಬೇಡವೆಂದು ಹೇಳುವವರ ಭಾವನೆಗಳನ್ನು ಲಕ್ಷಿಸದೆ ಇರಬೇಕು ಅಥವಾ ಸಂದೇಶವನ್ನು ಬಲಾತ್ಕಾರದಿಂದ ಹೇಳಲು ಪ್ರಯತ್ನಿಸಬೇಕೆಂದಾಗಿರುವುದಿಲ್ಲ. ಆದರೆ ಜನರು ಕೇವಲ ನಿರಾಸಕ್ತಿಯುಳ್ಳವರು ಎಂಬ ಮಾತ್ರಕ್ಕೆ ನಾವು ಪ್ರಯತ್ನವನ್ನು ಬಿಟ್ಟುಬಿಡುವುದೂ ಇಲ್ಲ, ವಿರೋಧದ ಕಾರಣ ಮೌನವಾಗಿರುವುದೂ ಇಲ್ಲ. ಯೇಸುವಿನಂತೆ ನಾವು ಸಹ ದೇವರ ರಾಜ್ಯವನ್ನು ಇಡೀ ಭೂಮಿಯ ಹಕ್ಕುಳ್ಳ ಸರಕಾರವೆಂದು ಸೂಚಿಸಿ ಮಾತಾಡುತ್ತೇವೆ. ನಾವು ವಿಶ್ವ ಪರಮಾಧಿಕಾರಿಯಾದ ಯೆಹೋವನನ್ನು ಪ್ರತಿನಿಧಿಸುವುದರಿಂದಲೂ, ನಾವು ಸಾರುವ ಸಂದೇಶವು ನಮ್ಮದಲ್ಲ, ಆತನದ್ದಾಗಿರುವುದರಿಂದಲೂ ನಾವು ಭರವಸೆಯಿಂದ ಮಾತಾಡುತ್ತೇವೆ. ಮತ್ತು ಯೆಹೋವನ ಕಡೆಗೆ ನಮಗಿರುವ ಪ್ರೀತಿಯು ಆತನನ್ನು ಸ್ತುತಿಸಲು ನಮಗಿರುವ ಅತಿ ಬಲವಾದ ಪ್ರಚೋದನೆಯಾಗಿರಬೇಕು.—ಫಿಲಿಪ್ಪಿ 1:27, 28; 1 ಥೆಸಲೊನೀಕ 2:13.
ಪುನರ್ವಿಮರ್ಶೆಯ ಚರ್ಚೆ
• ಸಾಧ್ಯವಿರುವ ಸಕಲರೊಂದಿಗೆ ರಾಜ್ಯ ಸಂದೇಶವನ್ನು ಸಾರುವುದರಲ್ಲಿ ಭಾಗಿಗಳಾಗುವುದು ಪ್ರಾಮುಖ್ಯವೇಕೆ, ಮತ್ತು ಯಾವ ಪ್ರತಿಕ್ರಿಯೆಗಳನ್ನು ನಾವು ನಿರೀಕ್ಷಿಸಬಲ್ಲೆವು?
• ಯೆಹೋವನನ್ನು ಸೇವಿಸಲು ನಾವು ನಮ್ಮ ಸ್ವಂತ ಶಕ್ತಿಯನ್ನು ಆಧಾರ ಮಾಡಿಕೊಳ್ಳುವುದಿಲ್ಲವೆಂಬುದನ್ನು ಹೇಗೆ ತೋರಿಸಬಲ್ಲೆವು?
• ಅಪೊಸ್ತಲರ ಕೃತ್ಯಗಳು ಪುಸ್ತಕದಿಂದ ಯಾವ ಬೆಲೆಬಾಳುವ ಪಾಠಗಳನ್ನು ನಾವು ಕಲಿತುಕೊಳ್ಳುತ್ತೇವೆ?
[ಪುಟ 173ರಲ್ಲಿರುವ ಚಿತ್ರಗಳು]
ಹಿಂದಿನ ಕಾಲದಲ್ಲಿದ್ದಂತೆಯೇ, ಇಂದು ಯೆಹೋವನ ಸೇವಕರು ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾರೆ