ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 21 ಪು. 112-116
  • ಜಂಬ ಕೊಚ್ಚಿಕೊಳ್ಳುವುದು ಸರಿನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಂಬ ಕೊಚ್ಚಿಕೊಳ್ಳುವುದು ಸರಿನಾ?
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ಪ್ರಾರ್ಥನೆಯ ಮತ್ತು ನಮ್ರತೆಯ ಆವಶ್ಯಕತೆ
    ಅತ್ಯಂತ ಮಹಾನ್‌ ಪುರುಷ
  • ‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 21 ಪು. 112-116

ಅಧ್ಯಾಯ 21

ಜಂಬ ಕೊಚ್ಚಿಕೊಳ್ಳುವುದು ಸರಿನಾ?

ಜಂಬ ಕೊಚ್ಚಿಕೊಳ್ಳುವುದು ಅಂದರೆ ಏನು ಗೊತ್ತಾ?— ಒಂದು ಉದಾಹರಣೆ ನೋಡೋಣ. ನೀನು ಈಗಷ್ಟೇ ಒಂದು ವಿಷಯ ಮಾಡಲು ಕಲಿಯುತ್ತಿದ್ದೀ ಅಂತ ಇಟ್ಟುಕೋ. ನೀನು ಸೈಕಲ್‌ ಹೊಡೆಯಲು ಕಲಿಯುತ್ತಿರಬಹುದು ಅಥವಾ ಫುಟ್‌ಬಾಲ್‌ ಆಡಲು ಮೊದಲ ಬಾರಿ ಪ್ರಯತ್ನಿಸಿರಬಹುದು. ಆಗ ಯಾರಾದರೂ ನಿನ್ನನ್ನು ನೋಡಿ, “ಹ್ಹೀ-ಹ್ಹೀ! ನಿನಗಿಂತ ಚೆನ್ನಾಗಿ ನನಗೆ ಬರುತ್ತೆ” ಅಂತ ಹೇಳಿದ್ದಾರಾ?— ಹಾಗೆ ಹೇಳಿರುವುದಾದರೆ ಆ ವ್ಯಕ್ತಿ ನಿನ್ನ ಹತ್ತಿರ ಜಂಬ ಕೊಚ್ಚಿಕೊಳ್ಳುತ್ತಿದ್ದಾನೆ.

ಹಾಗೆ ಆ ವ್ಯಕ್ತಿ ಹೇಳೋದು ನಿನಗೆ ಇಷ್ಟ ಆಗ್ತದಾ?— ಹಾಗಾದರೆ ನೀನು ಬೇರೆಯವರ ಮುಂದೆ ಜಂಬ ಕೊಚ್ಚಿಕೊಳ್ಳುವುದಾದರೆ ಅವರಿಗೆ ಹೇಗೆ ಅನಿಸುತ್ತದೆ?— “ನಿಂಗೇನು ಬರುತ್ತೆ? ಇಲ್ಲಿ ನೋಡು ನಾನು ಮಾಡಿ ತೋರಿಸ್ತೀನಿ” ಅಂತ ನೀನು ಬೇರೆಯವರಿಗೆ ಹೇಳೋದು ಸರಿನಾ?— ತಾವೇ ಶ್ರೇಷ್ಠರೆಂದು ಜಂಬ ಕೊಚ್ಚಿಕೊಳ್ಳುವವರನ್ನು ಯೆಹೋವನು ಇಷ್ಟಪಡುತ್ತಾನಾ?—

ತಾವೇ ಶ್ರೇಷ್ಠರೆಂದು ಭಾವಿಸುತ್ತಿದ್ದ ಜನರು ಯೇಸು ಜೀವಿಸಿದ್ದ ಕಾಲದಲ್ಲಿಯೂ ಇದ್ದರು. ಜಂಬದಿಂದ ಸದಾ ಬಡಾಯಿ ಕೊಚ್ಚಿಕೊಳ್ಳುತ್ತಾ ಅವರು ಬೇರೆಯವರನ್ನು ತುಂಬಾ ಕೀಳಾಗಿ ಕಾಣುತ್ತಿದ್ದರು. ಇಂಥ ಸ್ವಭಾವ ತಪ್ಪು ಎಂದು ಅವರಿಗೆ ತೋರಿಸಿಕೊಡಲಿಕ್ಕಾಗಿ ಯೇಸು ಒಂದು ಕಥೆ ಹೇಳಿದನು. ಅದೇನೆಂದು ನೋಡೋಣ.

ಅದು ಒಬ್ಬ ಫರಿಸಾಯನ ಮತ್ತು ತೆರಿಗೆ ವಸೂಲಿ ಮಾಡುತ್ತಿದ್ದವನ ಕಥೆ. ಧರ್ಮ ಗುರುಗಳಾದ ಫರಿಸಾಯರು ಇತರರಿಗಿಂತ ತಾವೇ ನೀತಿವಂತರೆಂದು ನೆನಸುತ್ತಿದ್ದರು. ಯೇಸು ಕಥೆಯಲ್ಲಿ ತಿಳಿಸಿದ ಫರಿಸಾಯನು ಒಮ್ಮೆ ಪ್ರಾರ್ಥನೆ ಮಾಡಲಿಕ್ಕಾಗಿ ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ಹೋದನು.

ಒಬ್ಬ ಫರಿಸಾಯ ಮತ್ತು ಒಬ್ಬ ತೆರಿಗೆ ವಸೂಲಿಗಾರ ಪ್ರಾರ್ಥಿಸುತ್ತಿದ್ದಾರೆ

ಯೆಹೋವನು ತೆರಿಗೆ ವಸೂಲಿಗಾರನ ಪ್ರಾರ್ಥನೆಯನ್ನು ಏಕೆ ಮೆಚ್ಚಿದನು? ಫರಿಸಾಯನ ಪ್ರಾರ್ಥನೆಯನ್ನು ಏಕೆ ಮೆಚ್ಚಲಿಲ್ಲ?

ಅಲ್ಲಿಗೆ ತೆರಿಗೆ ವಸೂಲಿ ಮಾಡುವವನು ಸಹ ಪ್ರಾರ್ಥನೆಗೆಂದು ಬಂದನು. ತೆರಿಗೆ ವಸೂಲಿ ಮಾಡುವವರನ್ನು ನೋಡಿದರೆ ಹೆಚ್ಚಿನ ಜನರು ಇಷ್ಟಪಡುತ್ತಿರಲಿಲ್ಲ. ಅವರು ಮೋಸಗಾರರು ಎಂಬ ಭಾವನೆ ಜನರಿಗಿತ್ತು. ಅದು ಸರಿನೇ. ಏಕೆಂದರೆ ಅನೇಕ ತೆರಿಗೆ ವಸೂಲಿಗಾರರು ಕೆಲವೊಮ್ಮೆ ಜನರಿಗೆ ಮೋಸ ಮಾಡುತ್ತಿದ್ದರು.

ದೇವಾಲಯದಲ್ಲಿ ಫರಿಸಾಯನು ಹೀಗೆ ಪ್ರಾರ್ಥಿಸಿದನು. ‘ಓ ದೇವರೇ, ಬೇರೆ ಜನರಂತೆ ನಾನು ಪಾಪಿ ಅಲ್ಲ. ಅದಕ್ಕಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಜನರಿಗೆ ಮೋಸ ಮಾಡುವುದಿಲ್ಲ ಕೆಟ್ಟ ಕೆಲಸ ಮಾಡುವುದಿಲ್ಲ. ಅಲ್ಲಿ ನಿಂತಿರುವ ತೆರಿಗೆ ವಸೂಲಿಗಾರನ ಥರ ನಾನಿಲ್ಲ. ನಾನು ನೀತಿವಂತ. ನಿನ್ನ ಬಗ್ಗೆ ಧ್ಯಾನಿಸಲಿಕ್ಕಾಗಿ ನಾನು ವಾರಕ್ಕೆ ಎರಡು ಸಲ ಉಪವಾಸ ಮಾಡುತ್ತೇನೆ. ನನಗೆ ಸಿಗುವ ಎಲ್ಲದರಲ್ಲೂ ಹತ್ತರಲ್ಲೊಂದು ಪಾಲನ್ನು ಕಾಣಿಕೆಯಾಗಿ ಕೊಡುತ್ತೇನೆ’. ಆ ಫರಿಸಾಯನು ತಾನು ಎಲ್ಲರಿಗಿಂತಲೂ ಉತ್ತಮನೆಂದು ನೆನಸಿದನು ಅಲ್ವಾ?— ತಾನು ನೆನಸಿದ್ದು ಮಾತ್ರವಲ್ಲ ದೇವರಿಗೂ ಹೇಳಿದನು.

ಆದರೆ ತೆರಿಗೆ ವಸೂಲಿಗಾರನು ಆ ಫರಿಸಾಯನಂತೆ ಇರಲಿಲ್ಲ. ಪ್ರಾರ್ಥಿಸುವಾಗ ಅವನು ಆಕಾಶದ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ದೂರದಲ್ಲೇ ನಿಂತು ತಲೆ ತಗ್ಗಿಸಿ ಪ್ರಾರ್ಥಿಸಿದನು. ತನ್ನ ಪಾಪಗಳಿಗಾಗಿ ಕೊರಗಿ ದುಃಖದಿಂದ ಎದೆ ಬಡಿದುಕೊಂಡನು. ದೇವರ ಮುಂದೆ ಒಳ್ಳೆಯವನೆಂದು ತೋರಿಸಲು ಪ್ರಯತ್ನಿಸಲಿಲ್ಲ. ಬದಲಿಗೆ ‘ದೇವರೇ, ಪಾಪಿಯಾದ ನನಗೆ ಕರುಣೆ ತೋರಿಸು’ ಎಂದು ವಿನಮ್ರನಾಗಿ ಬೇಡಿಕೊಂಡನು.

ಈ ಇಬ್ಬರಲ್ಲಿ ಯಾರ ಪ್ರಾರ್ಥನೆಯನ್ನು ದೇವರು ಮೆಚ್ಚಿದನೆಂದು ನಿನಗೆ ಅನಿಸುತ್ತೆ? ತಾನೇ ನೀತಿವಂತನೆಂದು ನೆನಸಿಕೊಂಡ ಫರಿಸಾಯನನ್ನೋ? ಅಥವಾ ತನ್ನ ಪಾಪಗಳಿಗಾಗಿ ಕ್ಷಮೆಕೇಳಿದ ತೆರಿಗೆ ವಸೂಲಿಗಾರನನ್ನೋ?—

ತೆರಿಗೆ ವಸೂಲಿಗಾರನ ಪ್ರಾರ್ಥನೆಯನ್ನೇ ದೇವರು ಮೆಚ್ಚಿದನು ಎಂದು ಯೇಸು ಹೇಳಿದನು. ಏಕೆ? ಯೇಸು ವಿವರಿಸಿದ್ದು, ‘ತಾನೇ ಉತ್ತಮನೆಂದು ತೋರಿಸಿಕೊಳ್ಳುತ್ತಾ ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.’—ಲೂಕ 18:9-14.

ಈ ಕಥೆಯ ಮೂಲಕ ಯೇಸು ಯಾವ ಪಾಠವನ್ನು ಕಲಿಸುತ್ತಿದ್ದನು?— ಇತರರಿಗಿಂತಲೂ ನಾವೇ ಉತ್ತಮರೆಂದು ಅಥವಾ ಶ್ರೇಷ್ಠರೆಂದು ಭಾವಿಸುವುದು ತಪ್ಪು ಎಂಬ ಪಾಠವನ್ನೇ. ಒಂದು ವೇಳೆ, ನಾವು ಬೇರೆಯವರಿಗಿಂತ ಉತ್ತಮರೆಂದು ಬಾಯಿಮಾತಿನಲ್ಲಿ ಹೇಳದೇ ಇರಬಹುದಾದರೂ ನಾವು ನಡಕೊಳ್ಳುವ ರೀತಿ ಅದನ್ನು ತೋರಿಸಬಹುದು. ಆ ರೀತಿಯಲ್ಲಿ ನೀನು ನಡಕೊಂಡಿದ್ದೀಯಾ?— ಅಪೊಸ್ತಲ ಪೇತ್ರನ ಬಗ್ಗೆ ನೋಡೋಣ.

ಯೇಸು ತಾನು ಬಂಧನಕ್ಕೆ ಒಳಗಾಗುವನೆಂದೂ ಆಗ ಅಪೊಸ್ತಲರೆಲ್ಲರೂ ತನ್ನನ್ನು ಬಿಟ್ಟು ಓಡಿಹೋಗುವರೆಂದೂ ಹೇಳಿದನು. ಕೂಡಲೇ ಪೇತ್ರನು, ‘ಎಲ್ಲರೂ ಬಿಟ್ಟುಹೋದರೂ ನಾನು ಮಾತ್ರ ನಿನ್ನನ್ನು ಎಂದಿಗೂ ಬಿಟ್ಟುಹೋಗುವುದಿಲ್ಲ’ ಅಂತ ಜಂಬದಿಂದ ಹೇಳಿದನು. ಆದರೆ ಅದು ಕೇವಲ ಬಾಯಿಮಾತಾಗಿತ್ತು. ಅವನು ಯೇಸುವನ್ನು ಬಿಟ್ಟುಹೋದನು. ಹಾಗಿದ್ದರೂ ಅವನು ಮತ್ತೆ ತಿರಿಗಿ ಬಂದನು. ಇದರ ಕುರಿತು ನಾವು ಅಧ್ಯಾಯ 30ರಲ್ಲಿ ಕಲಿಯುತ್ತೇವೆ.—ಮತ್ತಾಯ 26:31-33.

ಈಗ ನಮ್ಮ ದಿನದ ಒಂದು ಉದಾಹರಣೆ ತೆಗೆದುಕೊಳ್ಳೋಣ. ನಿನ್ನ ಕ್ಲಾಸ್‌ನಲ್ಲಿ ಟೀಚರ್‌ ಒಂದು ಪ್ರಶ್ನೆ ಕೇಳಿದ್ದಾರೆ ಎಂದಿಟ್ಟುಕೋ. ನಿನಗೆ ಥಟ್ಟನೇ ಉತ್ತರ ಗೊತ್ತಾಯಿತು. ಬೇರೆ ಮಕ್ಕಳಿಗೆ ಉತ್ತರ ಹೊಳೆಯಲೇ ಇಲ್ಲ. ಅವರಿಗೆ ಗೊತ್ತಿಲ್ಲದ ಉತ್ತರವನ್ನು ನೀನು ಕೊಟ್ಟಾಗ ಖಂಡಿತ ನಿನಗೆ ಸಂತೋಷ ಆಗುತ್ತೆ. ಆದರೆ ಉತ್ತರ ಗೊತ್ತಾಗದಿದ್ದ ಆ ಬೇರೆ ಮಕ್ಕಳೊಂದಿಗೆ ನಿನ್ನನ್ನೇ ನೀನು ಹೋಲಿಸಿ ನೋಡುವುದು ಸರಿನಾ?— ನೀನೊಬ್ಬನೇ ಬುದ್ಧಿವಂತನೆಂದು ತೋರಿಸಿಕೊಳ್ಳುತ್ತಾ ಕ್ಲಾಸಿನಲ್ಲಿರುವ ಇತರ ಮಕ್ಕಳನ್ನು ಕಡೆಗಣಿಸಿ ನೋಡುವುದು ಸರಿಯಾಗಿರುತ್ತದಾ?—

ಆ ಫರಿಸಾಯನು ಹಾಗೆ ಮಾಡಿದನು. ಅವನು ತೆರಿಗೆ ವಸೂಲಿಗಾರನಿಗಿಂತ ತಾನೇ ಉತ್ತಮನೆಂದು ಜಂಬ ಕೊಚ್ಚಿಕೊಂಡನು. ಅವನು ಹಾಗೆ ಮಾಡಿದ್ದು ತಪ್ಪು ಅಂತ ಮಹಾ ಬೋಧಕನು ಹೇಳಿದನು. ಒಬ್ಬನು ಮತ್ತೊಬ್ಬರಿಗಿಂತ ಚೆನ್ನಾಗಿ ಒಂದು ಕೆಲಸವನ್ನು ಮಾಡಿ ಮುಗಿಸುವ ಪ್ರತಿಭೆಯನ್ನು ಹೊಂದಿರಬಹುದು. ಹಾಗಂತ ಬೇರೆಯವರಿಗಿಂತ ಅವನೇನು ಹೆಚ್ಚಿನವನಲ್ಲ.

ಒಂದು ಹುಡುಗಿ ಕ್ಲಾಸ್‌ನಲ್ಲಿ ಕೈ ಎತ್ತಿದ್ದಾಳೆ

ಬೇರೆಯವರಿಗಿಂತ ನಿನಗೆ ಹೆಚ್ಚು ಗೊತ್ತಿರುವುದಾದರೆ ಅವರಿಗಿಂತ ನೀನು ಉತ್ತಮ ಎಂದು ಅರ್ಥವಾ?

ಒಂದು ವೇಳೆ ನಮಗೆ ಮತ್ತೊಬ್ಬರಿಗಿಂತ ಹೆಚ್ಚು ಗೊತ್ತಿರಬಹುದು. ಅದಕ್ಕಾಗಿ ನಾವು ಜಂಬ ಕೊಚ್ಚಿಕೊಳ್ಳುವುದು ಸರಿನಾ?— ನಮ್ಮ ಮಿದುಳಿನ ಬಗ್ಗೆ ಸ್ವಲ್ಪ ಯೋಚಿಸು. ಅದನ್ನು ನಾವೇ ಸೃಷ್ಟಿಮಾಡಿಕೊಂಡೆವಾ?— ಇಲ್ಲ. ಪ್ರತಿಯೊಬ್ಬರಿಗೂ ಮಿದುಳನ್ನು ಕೊಟ್ಟವನು ದೇವರು. ನಮಗೆ ಗೊತ್ತಿರುವ ಹೆಚ್ಚಿನ ವಿಷಯಗಳನ್ನು ನಾವು ಬೇರೆಯವರು ಹೇಳಿದ್ದನ್ನು ಕೇಳಿ ಕಲಿತಿರಬಹುದು. ಅಥವಾ ಪುಸ್ತಕದಲ್ಲಿ ಓದಿ ತಿಳಿದುಕೊಂಡಿರಬಹುದು. ಕೆಲವೊಮ್ಮೆ ನಾವೇ ಒಂದು ಹೊಸ ವಿಷಯವನ್ನು ಕಂಡುಹಿಡಿದೆವು ಅಂತ ಇಟ್ಟುಕೊಳ್ಳೋಣ. ಅದು ಹೇಗೆ ಸಾಧ್ಯವಾಯಿತು?— ಹೌದು, ದೇವರು ನಮಗೆ ಕೊಟ್ಟಿರುವ ಮಿದುಳನ್ನು ಉಪಯೋಗಿಸುವ ಮೂಲಕ.

ಒಬ್ಬನು ಶ್ರಮಪಟ್ಟು ಒಂದು ಕೆಲಸವನ್ನು ಮಾಡುತ್ತಿರುವಾಗ, ಪ್ರೋತ್ಸಾಹದ ಮಾತುಗಳನ್ನು ಆಡುವುದು ಅವನನ್ನು ಹುರಿದುಂಬಿಸುತ್ತದೆ. ಉದಾಹರಣೆಗೆ, ನೀನು ಮಾಡಿದ್ದು ನನಗೆ ಇಷ್ಟ ಆಯಿತು ಅಂತ ಹೇಳಬಹುದು. ಅಥವಾ ಅದನ್ನು ಇನ್ನೂ ಚೆನ್ನಾಗಿ ಮಾಡಲು ನೀನು ಅವನಿಗೆ ಸಹಾಯ ಮಾಡಬಹುದು. ಬೇರೆಯವರು ಸಹ ನಿನಗೆ ಈ ರೀತಿ ಹೇಳಬೇಕು ಸಹಾಯ ಮಾಡಬೇಕು ಅಂತ ನೀನೂ ಬಯಸುತ್ತೀಯಾ ತಾನೆ?—

ಒಂದು ಹುಡುಗ ತನ್ನ ಸ್ನಾಯುಗಳನ್ನು ಇನ್ನೊಬ್ಬ ಹುಡುಗನಿಗೆ ತೋರಿಸುತ್ತಿದ್ದಾನೆ

ನಾವು ಇತರರಿಗಿಂತ ಬಲಶಾಲಿ ಆಗಿರುವುದಾದರೆ ಅದಕ್ಕಾಗಿ ಜಂಬ ಕೊಚ್ಚಿಕೊಳ್ಳುವುದು ಏಕೆ ತಪ್ಪಾಗಿದೆ?

ಕೆಲವು ಜನರು ಬೇರೆಯವರಿಗಿಂತ ಬಲಶಾಲಿ ಆಗಿರುತ್ತಾರೆ. ನೀನು ನಿನ್ನ ತಮ್ಮ ಅಥವಾ ತಂಗಿಗಿಂತ ಬಲಶಾಲಿ ಆಗಿರುವುದಾದರೆ ಅದಕ್ಕಾಗಿ ನೀನು ಜಂಬ ಕೊಚ್ಚಿಕೊಳ್ಳಬೇಕಾ?— ಇಲ್ಲ. ನಾವು ಬಲಶಾಲಿಯಾಗಿರುವುದು ನಾವು ಉಣ್ಣುವ ಆಹಾರದಿಂದ. ಮತ್ತು ಆ ಆಹಾರ ನಮಗೆ ಹೇಗೆ ಸಿಗುತ್ತದೆ? ಸೂರ್ಯನ ಬೆಳಕು, ಮಳೆ ಇತ್ಯಾದಿಯನ್ನೆಲ್ಲ ದೇವರು ಕೊಡುವುದರಿಂದ ತಾನೆ?— ಹೀಗಿರುವಾಗ, ಬಲಶಾಲಿ ಆಗಿರುವುದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳಬೇಕು.—ಅಪೊಸ್ತಲರ ಕಾರ್ಯಗಳು 14:16, 17.

ಯಾರಾದರೂ ಜಂಬ ಕೊಚ್ಚಿಕೊಳ್ಳುವಾಗ ಅದನ್ನು ಕೇಳಲು ನಮಗೆ ಇಷ್ಟ ಆಗೋದಿಲ್ಲ ಅಲ್ವಾ?— ಆದುದರಿಂದ ಯೇಸುವಿನ ಈ ಮಾತುಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.” ಹೀಗೆ ಮಾಡಿದರೆ, ಮಹಾ ಬೋಧಕನು ಕಥೆಯಲ್ಲಿ ಹೇಳಿದ ಜಂಬಕೋರ ಫರಿಸಾಯನಂತೆ ನಾವಿರುವುದಿಲ್ಲ.—ಲೂಕ 6:31.

ಒಮ್ಮೆ ಒಬ್ಬ ವ್ಯಕ್ತಿ ಯೇಸುವನ್ನು ಒಳ್ಳೆಯವನೆಂದು ಹೊಗಳಿದನು. ಆಗ ಮಹಾ ಬೋಧಕನು ‘ಹೌದು, ನಾನು ಒಳ್ಳೆಯವನು’ ಎಂದು ಹಿಗ್ಗಿದನಾ?— ಇಲ್ಲ. ಬದಲಿಗೆ, “ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಎಂದು ಹೇಳಿದನು. (ಮಾರ್ಕ 10:18) ನೋಡಿದಿಯಾ, ಮಹಾ ಬೋಧಕನು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದರೂ ಜಂಬ ಪಟ್ಟುಕೊಳ್ಳಲಿಲ್ಲ. ಸ್ತುತಿ ಹೊಗಳಿಕೆಯೆಲ್ಲ ತಂದೆಯಾದ ಯೆಹೋವನಿಗೆ ಸೇರುವಂತೆ ನೋಡಿಕೊಂಡನು.

ಇಬ್ಬರು ಹುಡುಗರು ಸೂರ್ಯ ಮುಳುಗುತ್ತಿರುವುದನ್ನು ನೋಡುತ್ತಿದ್ದಾರೆ

ಈ ಹುಡುಗನು ಯಾರನ್ನು ಹೊಗಳುತ್ತಿದ್ದಾನೆ?

ಹಾಗಾದರೆ, ನಾವು ಯಾರ ಬಗ್ಗೆ ಮಾತಾಡುವಾಗ ಜಂಬ ಪಟ್ಟುಕೊಳ್ಳಬಹುದು?— ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಬಗ್ಗೆ. ಸುಂದರವಾದ ಸೂರ್ಯಾಸ್ತಮಾನ ನೋಡುವಾಗ ಅಥವಾ ಸೃಷ್ಟಿಯ ಸೊಬಗನ್ನು ಸವಿಯುವಾಗ, ‘ಇದನ್ನೆಲ್ಲಾ ಮಾಡಿದ್ದು ನಮ್ಮ ಯೆಹೋವ ದೇವರು!’ ಎಂದು ನಾವು ಜಂಬ ಪಟ್ಟುಕೊಳ್ಳಬಹುದು. ಹೌದು, ಯೆಹೋವನು ನಮಗಾಗಿ ಅನೇಕ ಮಹಾ ವಿಷಯಗಳನ್ನು ಮಾಡಿದ್ದಾನೆ ಇನ್ನು ಮುಂದೆನೂ ಮಾಡುವನು. ಅವೆಲ್ಲವುದರ ಕುರಿತು ಇತರರ ಮುಂದೆ ಮಾತಾಡಲು ಯೆಹೋವನನ್ನು ಹೊಗಳಲು ಸದಾ ಸಿದ್ಧರಾಗಿರೋಣ.

ಜಂಬ ಕೊಚ್ಚಿಕೊಳ್ಳುವುದರ ಬಗ್ಗೆ ಶಾಸ್ತ್ರವಚನಗಳು ಏನು ಹೇಳುತ್ತವೆ ಮತ್ತು ನಾವೇಕೆ ಜಂಬ ಕೊಚ್ಚಿಕೊಳ್ಳಬಾರದು ಎಂದು ತಿಳಿಯಲು ಈ ವಚನಗಳನ್ನು ಓದೋಣ: ಜ್ಞಾನೋಕ್ತಿ 16:5, 18; ಯೆರೆಮೀಯ 9:23, 24; 1 ಕೊರಿಂಥ 4:7 ಮತ್ತು 13:4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ