ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 22 ಪು. 117-121
  • ಸುಳ್ಳು ಹೇಳುವುದು ತಪ್ಪೇಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುಳ್ಳು ಹೇಳುವುದು ತಪ್ಪೇಕೆ?
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ಪೇತ್ರ ಮತ್ತು ಅನನೀಯ ಸುಳ್ಳು ಹೇಳಿದರು ನಮಗೇನು ಪಾಠ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಸತ್ಯವನ್ನೇ ಹೇಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಸುಳ್ಳಾಡುವುದನ್ನು ಸರಿಯೆಂದು ಎಂದಾದರೂ ಸಮರ್ಥಿಸಸಾಧ್ಯವೊ?
    ಎಚ್ಚರ!—2000
  • “ನಿನ್ನ ಮರುಜ್ಞಾಪನಗಳು ನನ್ನ ಆನಂದವು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 22 ಪು. 117-121

ಅಧ್ಯಾಯ 22

ಸುಳ್ಳು ಹೇಳುವುದು ತಪ್ಪೇಕೆ?

ಒಬ್ಬ ಹುಡುಗಿ ತನ್ನ ತಾಯಿಗೆ “ಆಯ್ತಮ್ಮ, ಶಾಲೆ ಬಿಟ್ಟ ಕೂಡಲೇ ಸೀದಾ ಮನೆಗೆ ಬರ್ತೀನಿ” ಅಂತ ಹೇಳುತ್ತಾಳೆ. ಆದರೆ ಶಾಲೆ ಬಿಟ್ಟ ಮೇಲೆ ಮನೆಗೆ ಹೋಗದೆ ಅಲ್ಲೇ ತನ್ನ ಗೆಳತಿಯರೊಂದಿಗೆ ತುಂಬಾ ಹೊತ್ತು ಆಟ ಆಡುತ್ತಿರುತ್ತಾಳೆ. ನಂತರ ತಡವಾಗಿ ಮನೆಗೆ ಹೋಗಿ, “ಸ್ಪೆಶಲ್‌ ಕ್ಲಾಸ್‌ ಇತ್ತಮ್ಮ, ಟೀಚರ್‌ ಬಿಡಲಿಲ್ಲ” ಎಂದು ಹೇಳುತ್ತಾಳೆ. ಅವಳು ಹಾಗೆ ಹೇಳಿದ್ದು ಸರಿಯಾ?—

ಒಂದು ಹುಡುಗ ಮನೆಯೊಳಗೆ ಬಾಲ್‌ನಿಂದ ಆಟ ಆಡುತ್ತಿದ್ದಾಗ ದೀಪಕ್ಕೆ ಬಡಿದ ಮೇಲೆ ತಂದೆ ಜೊತೆ ಮಾತಾಡುತ್ತಿದ್ದಾನೆ

ಈ ಹುಡುಗನು ಯಾವ ತಪ್ಪು ಮಾಡಿದ್ದಾನೆ?

ಒಬ್ಬ ಹುಡುಗ ತಂದೆಗೆ, “ಇಲ್ಲ ಅಪ್ಪ, ನಾನು ಮನೆಯೊಳಗೆ ಬಾಲ್‌ ಆಡಲಿಲ್ಲ” ಅಂತ ಹೇಳುತ್ತಾನೆ. ಆದರೆ ನಿಜವಾಗಿಯೂ ಅವನು ಮನೆಯೊಳಗೆ ಕಾಲಿನಿಂದ ಬಾಲ್‌ ಒದಿಯುತ್ತಾ ಆಟ ಆಡಿದ್ದ. ಹಾಗಾದರೆ ತಾನು ಮನೆಯೊಳಗೆ ಆಡಲಿಲ್ಲ ಅಂತ ಅವನು ಹೇಳಿದ್ದು ಸರಿಯಾ?—

ಯಾವುದು ಸರಿಯೆಂದು ಮಹಾ ಬೋಧಕನು ನಮಗೆ ತಿಳಿಸುತ್ತಾನೆ. ‘ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಾಗಿರಲಿ. ಬೇರೆಲ್ಲವೂ ಕೆಡುಕನಿಂದ ಬಂದದ್ದಾಗಿದೆ’ ಎಂದು ಅವನು ಹೇಳಿದನು. (ಮತ್ತಾಯ 5:37) ಯೇಸುವಿನ ಈ ಮಾತಿನ ಅರ್ಥವೇನು?— ನಾವು ಏನು ಹೇಳುತ್ತೇವೋ ಅದನ್ನೇ ಮಾಡಬೇಕು ಅನ್ನೋದೇ ಅವನ ಮಾತಿನ ಅರ್ಥ.

ಬೈಬಲಿನಲ್ಲಿರುವ ಒಂದು ಕಥೆಯು ನಾವು ಸತ್ಯ ಹೇಳುವುದು ಎಷ್ಟು ಪ್ರಾಮುಖ್ಯ ಎಂದು ತೋರಿಸುತ್ತದೆ. ಅದು ಯೇಸುವಿನ ಶಿಷ್ಯರೆಂದು ಹೇಳಿಕೊಂಡಂಥ ಇಬ್ಬರು ವ್ಯಕ್ತಿಗಳ ಕಥೆ. ಅದೇನೆಂದು ನಾವೀಗ ನೋಡೋಣ.

ಯೇಸು ಮರಣಪಟ್ಟು ಎರಡು ತಿಂಗಳು ಕಳೆಯುವಷ್ಟರಲ್ಲಿ ಯೆರೂಸಲೇಮಿನಲ್ಲಿ ಯೆಹೂದ್ಯರ ಒಂದು ದೊಡ್ಡ ಹಬ್ಬ ಪ್ರಾರಂಭವಾಯಿತು. ಅದನ್ನು ಪಂಚಾಶತ್ತಮ ಹಬ್ಬ ಎಂದು ಕರೆಯುತ್ತಿದ್ದರು. ಆ ಹಬ್ಬಕ್ಕಾಗಿ ಜನರು ದೂರ ದೂರದ ಊರುಗಳಿಂದ ಯೆರೂಸಲೇಮಿಗೆ ಬಂದಿದ್ದರು. ಅಪೊಸ್ತಲ ಪೇತ್ರನು ಅವರ ಮನಮುಟ್ಟುವಂಥ ರೀತಿಯಲ್ಲಿ ಒಂದು ಭಾಷಣ ಕೊಟ್ಟನು. ಯೇಸುವಿನ ಬಗ್ಗೆ ಮತ್ತು ಯೆಹೋವನು ಯೇಸುವನ್ನು ಪುನರುತ್ಥಾನ ಮಾಡಿದ ಬಗ್ಗೆ ಅವನು ಆ ಭಾಷಣದಲ್ಲಿ ತಿಳಿಸಿದನು. ಆ ಜನರಲ್ಲಿ ಹೆಚ್ಚಿನವರು ಯೇಸುವಿನ ಬಗ್ಗೆ ಕಲಿಯುತ್ತಿರುವುದು ಇದೇ ಮೊದಲ ಬಾರಿ. ಆದುದರಿಂದ ಅವರು ಇನ್ನೂ ಹೆಚ್ಚನ್ನು ತಿಳಿಯಲು ಇಷ್ಟಪಡುತ್ತಾರೆ. ಅದಕ್ಕಾಗಿ ಅವರು ಏನು ಮಾಡಿದರು ಗೊತ್ತಾ?

ಹಬ್ಬ ಮುಗಿದ ಮೇಲೂ ಯೆರೂಸಲೇಮಿನಲ್ಲೇ ಉಳಿದರು. ಆದರೆ ಸ್ವಲ್ಪ ದಿನಗಳಾದ ಮೇಲೆ ಕೆಲವರಿಗೆ ಹಣದ ಕೊರತೆ ಉಂಟಾಯಿತು. ಆಹಾರವನ್ನು ಕೊಂಡುಕೊಳ್ಳಲು ಅವರ ಹತ್ತಿರ ಈಗ ಹಣವಿರಲಿಲ್ಲ. ಆಗ ಯೆರೂಸಲೇಮಿನಲ್ಲಿ ವಾಸಮಾಡುತ್ತಿದ್ದ ಅನೇಕ ಶಿಷ್ಯರು ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ತಮ್ಮ ವಸ್ತುಗಳನ್ನು ಮಾರಿ ಆ ಹಣವನ್ನು ಅಪೊಸ್ತಲರ ಕೈಗೆ ಕೊಟ್ಟರು. ಅಪೊಸ್ತಲರು ಅದನ್ನು ಆ ಜನರಿಗೆ ಹಂಚಿ ನೆರವು ನೀಡಿದರು.

ಹೀಗೆ ಹಣ ಕೊಟ್ಟವರಲ್ಲಿ ಅನನೀಯ ಮತ್ತು ಅವನ ಹೆಂಡತಿ ಸಪ್ಫೈರ ಸಹ ಇದ್ದರು. ಯೆರೂಸಲೇಮಿನ ಕ್ರೈಸ್ತ ಸಭೆಯ ಸದಸ್ಯರಾಗಿದ್ದ ಇವರು ತಮ್ಮ ಹೊಲವನ್ನು ಮಾರಿದರು. ಹೀಗೆ ಮಾರುವಂತೆ ಅವರಿಗ್ಯಾರೂ ಹೇಳಿರಲಿಲ್ಲ. ಸ್ವಂತ ನಿರ್ಣಯವಾಗಿತ್ತು. ಆದರೆ ಅನನೀಯ ಹಾಗೂ ಸಪ್ಫೈರ ಹೊಲ ಮಾರಿದ್ದು ಯೇಸುವಿನ ಹೊಸ ಶಿಷ್ಯರ ಮೇಲಿದ್ದ ಪ್ರೀತಿಯಿಂದಾಗಿ ಅಲ್ಲ. ಅವರಿಗೆ ಜನರ ಮುಂದೆ ತಾವು ತುಂಬಾ ಒಳ್ಳೆಯವರೆಂದು ತೋರಿಸಿಕೊಳ್ಳಬೇಕಿತ್ತು. ಹಾಗಾಗಿ, ಹೊಲ ಮಾರಿ ಸಿಕ್ಕಿದ ಎಲ್ಲಾ ಹಣವನ್ನು ತಾವು ಜನರಿಗೆ ಸಹಾಯ ಮಾಡಲಿಕ್ಕಾಗಿ ದಾನ ಮಾಡುತ್ತೇವೆಂದು ಹೇಳಲು ಅವರು ತೀರ್ಮಾನಿಸಿಕೊಂಡರು. ಆದರೆ ನಿಜವೇನೆಂದರೆ ಆ ಹಣದಲ್ಲಿ ಕೇವಲ ಸ್ವಲ್ಪ ಮಾತ್ರ ಕೊಡಲಿದ್ದರು. ಅವರು ಹಾಗೆ ಯೋಚನೆ ಮಾಡಿಕೊಂಡಿದ್ದರ ಕುರಿತು ನಿನಗೆ ಏನು ಅನಿಸುತ್ತದೆ?—

ಅನನೀಯ ಅಪೊಸ್ತಲರನ್ನು ಭೇಟಿಯಾಗಿ ಹಣ ಕೊಡುತ್ತಾನೆ. ಹೊಲ ಮಾರಿ ಸಿಕ್ಕಿದ ಎಲ್ಲಾ ಹಣವನ್ನು ಕೊಡದೆ ಅವನು ಅಪೊಸ್ತಲರ ಮುಂದೆ ಸತ್ಯ ಮರೆಮಾಚುತ್ತಿರುವುದು ದೇವರಿಗೆ ಗೊತ್ತಾಗುತ್ತದೆ. ಅದನ್ನು ಅಪೊಸ್ತಲ ಪೇತ್ರನು ತಿಳಿದುಕೊಳ್ಳುವಂತೆ ದೇವರು ಮಾಡುತ್ತಾನೆ.

ಅನನೀಯನು ಅಪೊಸ್ತಲ ಪೇತ್ರನಿಗೆ ಸುಳ್ಳು ಹೇಳುತ್ತಾನೆ

ಅನನೀಯನು ಪೇತ್ರನಿಗೆ ಏನೆಂದು ಸುಳ್ಳು ಹೇಳುತ್ತಿದ್ದಾನೆ?

ಆಗ ಪೇತ್ರನು ಅನನೀಯನಿಗೆ, ‘ಅನನೀಯ, ಹೀಗೇಕೆ ಮಾಡಿದೆ? ನಿನ್ನನ್ನು ಪ್ರೇರಿಸುವಂತೆ ಸೈತಾನನಿಗೆ ಏಕೆ ಅವಕಾಶಕೊಟ್ಟೆ? ಆ ಹೊಲವು ನಿನ್ನದಾಗಿತ್ತು. ಅದನ್ನು ನೀನೇನೂ ಮಾರಬೇಕಾಗಿರಲಿಲ್ಲ. ಮಾರಿದ ಮೇಲೂ ಆ ಹಣವನ್ನು ಏನು ಮಾಡಬೇಕು ಅನ್ನೋದು ನಿನಗೆ ಬಿಟ್ಟಿದ್ದು. ಆದರೆ ನೀನು ಆ ಹಣದಲ್ಲಿ ಒಂದು ಭಾಗ ಮಾತ್ರ ಕೊಟ್ಟು ಎಲ್ಲಾ ಹಣವನ್ನು ಕೊಟ್ಟ ಹಾಗೆ ಏಕೆ ನಾಟಕ ಮಾಡುತ್ತಿದ್ದೀ? ನೀನು ನಮಗೆ ಮಾತ್ರವಲ್ಲ ದೇವರಿಗೂ ಸುಳ್ಳುಹೇಳುತ್ತಿದ್ದೀ’ ಅಂದನು.

ಹೌದು, ಅನನೀಯನು ಮಾಡಿದ್ದು ದೊಡ್ಡ ತಪ್ಪಾಗಿತ್ತು. ಅವನು ಮನುಷ್ಯರಿಗೆ ಮಾತ್ರವಲ್ಲ ದೇವರಿಗೂ ಸುಳ್ಳು ಹೇಳಿದ್ದನು. ತಾನು ಏನು ಹೇಳಿದ್ದನೋ ಅದನ್ನು ಅವನು ಮಾಡಿರಲಿಲ್ಲ. ಬರೀ ನಾಟಕ ಆಡಿದ್ದನು. ನಂತರ ಏನಾಯಿತು ಗೊತ್ತಾ? ‘ಪೇತ್ರನ ಮಾತನ್ನು ಕೇಳಿದೊಡನೆ ಅನನೀಯನು ಕೆಳಗೆ ಬಿದ್ದು ಪ್ರಾಣಬಿಟ್ಟನು’ ಎಂದು ಬೈಬಲು ತಿಳಿಸುತ್ತದೆ. ದೇವರೇ ಅನನೀಯನು ಸಾಯುವಂತೆ ಮಾಡಿದನು. ಆ ನಂತರ ಅಲ್ಲಿದ್ದ ಕೆಲವರು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು.

ಅನನೀಯನು ಕೆಳಗೆ ಬಿದ್ದು ಸತ್ತು ಹೋಗುತ್ತಾನೆ

ಸುಳ್ಳು ಹೇಳಿದ್ದರಿಂದ ಅನನೀಯನಿಗೆ ಏನಾಯಿತು?

ಇದೆಲ್ಲಾ ಆಗಿ ಸುಮಾರು ಮೂರು ಗಂಟೆಗಳಾದ ಮೇಲೆ ಸಪ್ಫೈರಳು ಒಳಗೆ ಬರುತ್ತಾಳೆ. ತನ್ನ ಗಂಡನಿಗೆ ಏನಾಯಿತು ಅನ್ನೋದು ಅವಳಿಗೆ ಗೊತ್ತಿರಲಿಲ್ಲ. ಪೇತ್ರನು ಅವಳಿಗೆ, “ನೀವಿಬ್ಬರು ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೊ?” ಅಂತ ಕೇಳುತ್ತಾನೆ.

ಆಗ ಸಪ್ಫೈರಳು, ‘ಹೌದು, ನಾವು ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೆ’ ಎಂದು ಉತ್ತರಿಸುತ್ತಾಳೆ. ಆದರೆ ಅದು ಶುದ್ಧ ಸುಳ್ಳಾಗಿತ್ತು. ಹೊಲ ಮಾರಿ ಸಿಕ್ಕ ಹಣದಲ್ಲಿ ಸ್ವಲ್ಪವನ್ನು ತಮಗಾಗಿ ತೆಗೆದಿಟ್ಟುಕೊಂಡಿದ್ದರು. ಸುಳ್ಳು ಹೇಳಿದ್ದರಿಂದ ಸಪ್ಫೈರಳನ್ನೂ ದೇವರು ಸಾಯುವಂತೆ ಮಾಡುತ್ತಾನೆ.—ಅಪೊಸ್ತಲರ ಕಾರ್ಯಗಳು 5:1-11.

ಅನನೀಯ ಹಾಗೂ ಸಪ್ಫೈರಳಿಗೆ ಆದ ಅನಾಹುತದಿಂದ ನಾವು ಯಾವ ಪಾಠ ಕಲಿತುಕೊಳ್ಳಬಹುದು?— ದೇವರು ಸುಳ್ಳು ಹೇಳುವವರನ್ನು ದ್ವೇಷಿಸುತ್ತಾನೆ ಎಂಬ ಪಾಠವನ್ನೇ. ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕೆಂದು ದೇವರು ಇಷ್ಟಪಡುತ್ತಾನೆ. ಆದರೆ ಸುಳ್ಳು ಹೇಳೋದರಲ್ಲಿ ಏನೂ ತಪ್ಪಿಲ್ಲ ಅಂತ ಅನೇಕರು ಹೇಳುತ್ತಾರೆ. ಅದು ಸರಿಯಾ? ನಿನಗೆ ಏನನಿಸುತ್ತದೆ?— ಒಂದೇ ಒಂದು ಸುಳ್ಳಿನಿಂದಾಗಿಯೇ ಮನುಷ್ಯರು ರೋಗ, ಮರಣ, ನೋವಿನಿಂದ ಕಷ್ಟಪಡುತ್ತಿದ್ದಾರೆ. ನಿನಗಿದು ಗೊತ್ತಿತ್ತಾ?—

ಯೇಸು

ಮೊಟ್ಟಮೊದಲ ಸುಳ್ಳುಗಾರನೆಂದು ಯೇಸು ಯಾರನ್ನು ಕರೆದನು ಮತ್ತು ಆ ಸುಳ್ಳಿನ ಫಲಿತಾಂಶವೇನು?

ಮೊದಲ ಸ್ತ್ರೀಯಾದ ಹವ್ವಳ ಹತ್ತಿರ ಪಿಶಾಚನು ಸುಳ್ಳು ಹೇಳಿದ್ದು ನಿನಗೆ ನೆನಪಿರಬಹುದು. ತಿನ್ನಬಾರದೆಂದು ದೇವರು ಹೇಳಿದ್ದ ಹಣ್ಣನ್ನು ತಿಂದರೆ ಹವ್ವಳೇನು ಸಾಯುವುದಿಲ್ಲ ಅಂತ ಅವನು ಹೇಳಿದ್ದನು. ಹವ್ವಳು ಪಿಶಾಚನ ಮಾತನ್ನು ನಂಬಿ ದೇವರಿಗೆ ಅವಿಧೇಯಳಾದಳು. ಹಣ್ಣನ್ನು ತಿಂದುಬಿಟ್ಟಳು. ಆದಾಮನೂ ತಿನ್ನುವಂತೆ ಮಾಡಿದಳು. ಹೀಗೆ ಅವರು ಪಾಪಿಗಳಾದರು ಮತ್ತು ಅವರಿಗೆ ಹುಟ್ಟುವ ಮಕ್ಕಳು ಸಹ ಪಾಪಿಗಳಾಗಿ ಹುಟ್ಟಲಿದ್ದರು. ಆದಾಮಹವ್ವರ ಪಾಪದಿಂದಾಗಿ ಅವರ ಮಕ್ಕಳೆಲ್ಲರೂ ಕಷ್ಟ ನೋವನ್ನು ಅನುಭವಿಸಿ ಮರಣಪಟ್ಟರು. ಇದೆಲ್ಲ ಆರಂಭವಾಗಿದ್ದು ಹೇಗೆ ಅಂತಿಯಾ?— ಒಂದೇ ಒಂದು ಸುಳ್ಳಿನಿಂದ!

ಅದಕ್ಕೆ ಯೇಸು ಪಿಶಾಚನನ್ನು “ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ” ಎಂದು ಹೇಳಿದನು. ಮೊಟ್ಟಮೊದಲ ಸುಳ್ಳನ್ನು ಹೇಳಿದ್ದು ಪಿಶಾಚನೇ. ಸುಳ್ಳು ಹೇಳುವವರು, ಪಿಶಾಚನ ಕೆಟ್ಟ ಮಾದರಿಯನ್ನು ಅನುಸರಿಸುತ್ತಾರೆ. ಸುಳ್ಳು ಹೇಳಿಬಿಡೋಣ ಅಂತ ನಮಗೆ ಅನಿಸುವಾಗೆಲ್ಲಾ ಈ ವಿಷಯವನ್ನು ನಾವು ನೆನಪಿಸಿಕೊಳ್ಳಬೇಕು.—ಯೋಹಾನ 8:44.

ಸುಳ್ಳು ಹೇಳಬೇಕು ಅಂತ ನಿನಗೆ ಯಾವಾಗ ಅನಿಸುತ್ತದೆ?— ಏನಾದರೂ ತಪ್ಪು ಮಾಡಿದಾಗ ಅಲ್ವಾ?— ಉದಾಹರಣೆಗೆ, ನಿನ್ನ ಕೈತಪ್ಪಿ ಒಂದು ವಸ್ತು ಕೆಳಗೆ ಬಿದ್ದು ಒಡೆದು ಹೋಗಿರಬಹುದು. ಅದು ಹೇಗೆ ಒಡೆದು ಹೋಯಿತು ಅಂತ ಕೇಳಿದಾಗ, ತಂಗಿ ಅಥವಾ ತಮ್ಮ ಒಡೆದು ಹಾಕಿದರು ಅಂತ ಹೇಳ್ತಿಯಾ? ಅಥವಾ ಒಡೆದು ಹೋಗಿದ್ದು ಗೊತ್ತೇ ಇಲ್ಲ ಅನ್ನೋ ಹಾಗೆ ನಾಟಕ ಆಡ್ತಿಯಾ?—

ತಾಯಿ ತನ್ನ ಮಗಳಿಗೆ ಹೋಮ್‌ವರ್ಕ್‌ ಮುಗಿಸುವಂತೆ ಹೇಳುತ್ತಿದ್ದಾಳೆ

ಸುಳ್ಳು ಹೇಳಬೇಕೆಂದು ನಿನಗೆ ಯಾವಾಗ ಅನಿಸುತ್ತದೆ?

ಒಂದು ವೇಳೆ ನೀನು ಅರ್ಧ ಹೋಮ್‌ವರ್ಕ್‌ ಮಾತ್ರ ಮಾಡಿರಬಹುದು. ಆದರೆ ಹೋಮ್‌ವರ್ಕ್‌ ಎಲ್ಲಾ ಮುಗಿತು ಅಂತ ಹೇಳೋದಾದರೆ?— ಅನನೀಯ ಮತ್ತು ಸಪ್ಫೈರಳನ್ನು ನೆನಪಿಟ್ಟುಕೋ. ಅವರು ಅರ್ಧ ಸತ್ಯ ಹೇಳಿದ್ದರು. ಹಾಗೆ ಹೇಳೋದು ಎಷ್ಟು ತಪ್ಪು ಅಂತ ದೇವರು ಅವರಿಗೆ ಸಾವನ್ನು ಬರಮಾಡುವ ಮೂಲಕ ತೋರಿಸಿದನು.

ಆದುದರಿಂದ ನಾವು ಏನೇ ತಪ್ಪು ಮಾಡಿರಲಿ ಅದರಿಂದ ತಪ್ಪಿಸಿಕೊಳ್ಳಬೇಕು ಅಂತ ಸುಳ್ಳು ಹೇಳಿದರೆ ಅದರಿಂದ ತೊಂದರೆ ಹೆಚ್ಚು. ಅದರಲ್ಲೂ ಅರ್ಧ ಸತ್ಯ ಅರ್ಧ ಸುಳ್ಳು ಹೇಳಬಾರದು. ಏಕೆಂದರೆ ಬೈಬಲು ‘ಸತ್ಯವನ್ನೇ ಆಡಿರಿ’ “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ” ಅಂತ ನಮಗೆ ಬುದ್ಧಿವಾದ ನೀಡುತ್ತದೆ. ಯೆಹೋವನು ಯಾವಾಗಲೂ ಸತ್ಯವನ್ನೇ ನುಡಿಯುತ್ತಾನೆ. ನಾವೂ ಸತ್ಯವನ್ನೇ ನುಡಿಯಬೇಕೆಂದು ಇಷ್ಟಪಡುತ್ತಾನೆ.—ಎಫೆಸ 4:25; ಕೊಲೊಸ್ಸೆ 3:9.

ನಾವು ಸದಾ ಸತ್ಯವನ್ನೇ ಹೇಳಬೇಕು. ಇದನ್ನೇ ವಿಮೋಚನಕಾಂಡ 20:16; ಜ್ಞಾನೋಕ್ತಿ 6:16-19; 12:19; 14:5; 16:6 ಮತ್ತು ಇಬ್ರಿಯ 4:13 ರಲ್ಲಿ ತಿಳಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ