ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 32 ಪು. 167-171
  • ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ಯೇಸು ಮತ್ತು ಜೋಯಿಸರು
    ಅತ್ಯಂತ ಮಹಾನ್‌ ಪುರುಷ
  • ಪ್ರಜಾಪೀಡಕ ರಾಜನಿಂದ ಪಾರಾಗುವದು
    ಅತ್ಯಂತ ಮಹಾನ್‌ ಪುರುಷ
  • “ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಯೆಹೋವನು ಯೇಸುವನ್ನು ಕಾಪಾಡಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 32 ಪು. 167-171

ಅಧ್ಯಾಯ 32

ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು

ಯೆಹೋವನು ಕೆಲವೊಮ್ಮೆ ಎಳೆಯ ಮಕ್ಕಳನ್ನು ಮತ್ತು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರದವರನ್ನು ಅದ್ಭುತ ರೀತಿಯಲ್ಲಿ ಸಂರಕ್ಷಿಸುತ್ತಾನೆ. ಇದಕ್ಕೊಂದು ಉದಾಹರಣೆ ನೋಡೋಣ. ನೀನು ಹಳ್ಳಿಗಾಡು ಪ್ರದೇಶಕ್ಕೆ ಹೋಗಿದ್ದಿ ಅಂತ ಇಟ್ಟುಕೋ.

ನೀನು ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಪುರ್ರ್‌ರ್ರ್‌ ಅಂತ ಒಂದು ಪಕ್ಷಿ ಹಾರಿ ಬಂದು ನಿನ್ನ ಮುಂದೆ ಕುಳಿತುಕೊಳ್ಳುವುದನ್ನು ನೀನು ನೋಡುತ್ತೀ. ಏನೋ ಪೆಟ್ಟಾಗಿರುವಂತೆ ಅದು ರೆಕ್ಕೆ ಎಳೆಯುತ್ತಾ ದೂರ ದೂರ ಹೋಗಲು ಪ್ರಯತ್ನಿಸುತ್ತದೆ. ಅದನ್ನು ಹಿಡಿಯಲು ನೀನು ಹತ್ತಿರ ಹೋದರೆ ರೆಕ್ಕೆ ಎಳೆಯುತ್ತಾ ಎಳೆಯುತ್ತಾ ಪಕ್ಷಿನೂ ದೂರ ಹೋಗುತ್ತದೆ. ಹೀಗೆ ಸ್ವಲ್ಪ ದೂರ ಹೋದ ಮೇಲೆ ಪಕ್ಷಿ ಪಟಪಟ ರಕ್ಕೆ ಬಡಿಯುತ್ತಾ ಹಾರಿ ಹೋಗುತ್ತದೆ. ಅದರ ರೆಕ್ಕೆಗೆ ಏನೂ ಆಗಿರುವುದಿಲ್ಲ! ಆ ಪಕ್ಷಿ ಯಾಕೆ ಹಾಗೆ ಮಾಡಿತು ಗೊತ್ತಾ?—

ಆ ಪಕ್ಷಿ ಹಾರಿಬಂದು ಕುಳಿತ ಜಾಗದ ಹತ್ತಿರವಿರುವ ಒಂದು ಪೊದೆಯಲ್ಲಿ ಅದು ತನ್ನ ಪುಟ್ಟ ಮರಿಗಳನ್ನು ಬಚ್ಚಿಟ್ಟಿತ್ತು. ಆ ಮರಿಗಳೆಲ್ಲಿ ನಿನ್ನ ಕಣ್ಣಿಗೆ ಬೀಳುತ್ತವೋ, ನೀನೆಲ್ಲಿ ಅವುಗಳನ್ನು ಎತ್ತಿಕೊಳ್ಳುತ್ತಿಯೋ ಅಂತ ಅಮ್ಮ ಪಕ್ಷಿ ಹೆದರಿಕೊಂಡಿತ್ತು. ಅದಕ್ಕೆ ತನಗೇನೋ ಆಗಿರುವಂತೆ ನಾಟಕವಾಡಿ ನಿನ್ನನ್ನು ದೂರ ಕರೆದುಕೊಂಡು ಹೋಯ್ತು. ಈ ಅಮ್ಮ ಪಕ್ಷಿ ತನ್ನ ಮರಿಗಳನ್ನು ಕಾಪಾಡಿದಂತೆ ನಮ್ಮನ್ನು ಯಾರು ರಕ್ಷಿಸುವರು ಅಂತ ನಿನಗೆ ಗೊತ್ತಾ?— ಬೈಬಲ್‌ ಯೆಹೋವನನ್ನು, ತನ್ನ ಮರಿಗಳಿಗೆ ಸಹಾಯಮಾಡುವಂಥ ಹದ್ದಿಗೆ ಹೋಲಿಸುತ್ತದೆ.—ಧರ್ಮೋಪದೇಶಕಾಂಡ 32:11, 12.

ಒಂದು ಅಮ್ಮ ಪಕ್ಷಿ ತನ್ನ ಮರಿಗಳಿಗೆ ಯಾವುದೇ ಹಾನಿಯಾಗದಂತೆ ತನ್ನ ರೆಕ್ಕೆಯ ಕೆಳಗೆ ಅಡಗಿಸುತ್ತಿದೆ

ಈ ಅಮ್ಮ ಪಕ್ಷಿ ತನ್ನ ಮರಿಗಳನ್ನು ಹೇಗೆ ಸಂರಕ್ಷಿಸುತ್ತಿದೆ?

ಯೆಹೋವನಿಗೆ ಅತೀಪ್ರಿಯನಾದ ಮಗನೇ ಯೇಸು. ಅವನು ಸ್ವರ್ಗದಲ್ಲಿದ್ದಾಗ ತನ್ನ ತಂದೆಯಂತೆಯೇ ಶಕ್ತಿಶಾಲಿಯಾದ ಆತ್ಮಜೀವಿಯಾಗಿದ್ದನು. ಹಾಗಾಗಿ ತನ್ನನ್ನು ತಾನೇ ಕಾಪಾಡಿಕೊಳ್ಳಲು ಅವನು ಶಕ್ತನಾಗಿದ್ದನು. ಆದರೆ ಭೂಮಿಯಲ್ಲಿ ಮಗುವಾಗಿ ಜನಿಸಿದಾಗ ಅವನಿಗೆ ಸಹಾಯದ ಅಗತ್ಯವಿತ್ತು. ಅವನನ್ನು ಯಾರಾದರೂ ಸಂರಕ್ಷಿಸಬೇಕಾಗಿತ್ತು.

ದೇವರು ತನ್ನನ್ನು ಭೂಮಿಗೆ ಕಳುಹಿಸಿದ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಯೇಸು ಬೆಳೆದು ದೊಡ್ಡವನಾಗಿ ಒಬ್ಬ ಪರಿಪೂರ್ಣ ಮನುಷ್ಯನಾಗಬೇಕಿತ್ತು. ಆದರೆ ಮಗುವಾಗಿದ್ದಾಗಲೇ ಯೇಸುವನ್ನು ಕೊಂದುಬಿಡಲು ಸೈತಾನನು ಭಾರೀ ಪ್ರಯತ್ನ ನಡೆಸಿದನು. ಸೈತಾನನು ಏನು ಮಾಡಿದನು, ಆದರೆ ಯೆಹೋವನು ಯಾವ ರೀತಿಯಲ್ಲಿ ಪುಟಾಣಿ ಯೇಸುವನ್ನು ಸಂರಕ್ಷಿಸಿದನು ಇತ್ಯಾದಿ ಕುರಿತ ಸ್ವಾರಸ್ಯಕರವಾದ ಕಥೆಯೊಂದಿದೆ. ಅದನ್ನು ಹೇಳಲಾ?—

ಯೇಸು ಹುಟ್ಟಿದ ಸ್ವಲ್ಪ ಸಮಯದ ಬಳಿಕ ಸೈತಾನನು ನಕ್ಷತ್ರದಂತೆ ತೋರುವ ಒಂದು ವಸ್ತುವನ್ನು ಆಕಾಶದಲ್ಲಿ ಹೊಳೆಯುವಂತೆ ಮಾಡುತ್ತಾನೆ. ಅದು ಪೂರ್ವ ದಿಕ್ಕಿನಲ್ಲಿ ಕಾಣಿಸಿಕೊಳ್ಳುತ್ತದೆ. ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುವ ಜ್ಯೋತಿಷಿಗಳು ನೋಡಿದಾಗ ಆ ನಕ್ಷತ್ರ ಚಲಿಸುತ್ತದೆ. ಅವರದನ್ನು ಹಿಂಬಾಲಿಸಿದಂತೆ ಅದು ಸಹ ಮುಂದೆ ಮುಂದೆ ಚಲಿಸುತ್ತದೆ. ಹೀಗೆ ಅವರು ನೂರಾರು ಕಿಲೊಮೀಟರ್‌ ದೂರ ಪ್ರಯಾಣಿಸಿ ಯೆರೂಸಲೇಮಿಗೆ ಬಂದು ತಲುಪುತ್ತಾರೆ. ಅಲ್ಲಿ ಅವರು, ಯೆಹೂದ್ಯರ ಅರಸನಾಗಲಿರುವವನು ಎಲ್ಲಿ ಹುಟ್ಟಲಿದ್ದಾನೆ ಎಂದು ವಿಚಾರಿಸುತ್ತಾರೆ. ಯೇಸು ಎಲ್ಲಿ ಹುಟ್ಟುವನು ಎಂದು ಬೈಬಲಿನಿಂದ ತಿಳಿದುಕೊಂಡಿದ್ದ ಕೆಲವು ಜನರನ್ನು ಜ್ಯೋತಿಷಿಗಳು ಕೇಳಿದಾಗ, “ಬೇತ್ಲೆಹೇಮಿನಲ್ಲಿಯೇ” ಎಂದು ಉತ್ತರಿಸುತ್ತಾರೆ.—ಮತ್ತಾಯ 2:1-6.

ಯೇಸುಗಾಗಿ ತಂದ ಉಡುಗೊರೆಗಳನ್ನು ಜ್ಯೋತಿಷಿಗಳು ಮರಿಯ ಮತ್ತು ಯೋಸೇಫನಿಗೆ ಕೊಟ್ಟಿದ್ದಾರೆ

ಪುಟ್ಟ ಯೇಸುವನ್ನು ಭೇಟಿಯಾದ ಜ್ಯೋತಿಷಿಗಳಿಗೆ ದೇವರು ಕೊಟ್ಟ ಯಾವ ಎಚ್ಚರಿಕೆಯು ಯೇಸುವನ್ನು ಕಾಪಾಡಿತ್ತು?

ಆ ಸಮಯದಲ್ಲಿ ಯೆರೂಸಲೇಮಿನಲ್ಲಿ ಹೆರೋದ ಎಂಬ ಒಬ್ಬ ನೀಚ ರಾಜನಿದ್ದ. ಸಮೀಪದ ಊರಾದ ಬೇತ್ಲೆಹೇಮಿನಲ್ಲಿ ಈಗಷ್ಟೇ ಜನಿಸಿರುವ ಹೊಸ ಅರಸನ ಸುದ್ದಿ ಅವನ ಕಿವಿಗೆ ಬೀಳುತ್ತದೆ. ಆಗ ಅವನು ಜ್ಯೋತಿಷಿಗಳಿಗೆ, ‘ಆ ಮಗುವನ್ನು ಹುಡುಕಿರಿ, ಸಿಕ್ಕಿದ ಕೂಡಲೇ ಬಂದು ನನಗೆ ತಿಳಿಸಿರಿ’ ಎಂದು ಹೇಳುತ್ತಾನೆ. ಪುಟಾಣಿ ಯೇಸುವನ್ನು ಹೆರೋದನು ಏಕೆ ಹುಡುಕಲು ಇಷ್ಟಪಟ್ಟನು ಗೊತ್ತಾ?— ಏಕೆಂದರೆ ಹೆರೋದನಿಗೆ ಯೇಸುವಿನ ಮೇಲೆ ತುಂಬಾ ಅಸೂಯೆ ಹೊಟ್ಟೆಕಿಚ್ಚು ಇತ್ತು. ಅವನನ್ನು ಕೊಲ್ಲಬೇಕೆಂಬ ಸಂಚು ಅವನಿಗಿತ್ತು.

ದೇವರು ತನ್ನ ಮಗನನ್ನು ಹೇಗೆ ಸಂರಕ್ಷಿಸಿದನು?— ಜ್ಯೋತಿಷಿಗಳು ಯೇಸುವನ್ನು ಹುಡುಕುತ್ತಾ ಅವನಿದ್ದ ಜಾಗಕ್ಕೆ ಬರುತ್ತಾರೆ. ಅವನಿಗೆ ಅನೇಕ ಉಡುಗೊರೆಗಳನ್ನು ಕೊಡುತ್ತಾರೆ. ಆಮೇಲೆ ದೇವರು ಕನಸಿನಲ್ಲಿ ಆ ಜ್ಯೋತಿಷಿಗಳಿಗೆ ಹೆರೋದನ ಬಳಿಗೆ ವಾಪಸ್‌ ಹೋಗದಂತೆ ಎಚ್ಚರಿಕೆ ನೀಡುತ್ತಾನೆ. ಅದನ್ನು ಪಾಲಿಸಿದ ಅವರು ಯೆರೂಸಲೇಮಿಗೆ ಹೋಗದೆ ಬೇರೆ ಮಾರ್ಗವಾಗಿ ತಮ್ಮ ಊರಿಗೆ ಹಿಂದಿರುಗುತ್ತಾರೆ. ಜ್ಯೋತಿಷಿಗಳು ಮೋಸಮಾಡಿ ಹೋಗಿಬಿಟ್ಟಿದ್ದಾರೆಂದು ಹೆರೋದನಿಗೆ ತಿಳಿದಾಗ ಅವನಿಗೆ ತುಂಬಾ ಕೋಪಬರುತ್ತದೆ. ಹೇಗಾದರೂ ಮಾಡಿ ಯೇಸುವನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಬೇತ್ಲೆಹೇಮಿನಲ್ಲಿರುವ ಎರಡು ವರ್ಷದೊಳಗಿನ ಎಲ್ಲಾ ಗಂಡುಮಕ್ಕಳನ್ನು ಕೊಲ್ಲಿಸುತ್ತಾನೆ. ಆದರೆ ಯೇಸು ಬಚಾವಾಗುತ್ತಾನೆ.

ಹೇಗೆ ಗೊತ್ತಾ?— ಜ್ಯೋತಿಷಿಗಳು ಹೊರಟು ಹೋದ ಮೇಲೆ ಯೆಹೋವನು ಯೋಸೇಫನಿಗೆ ಎಚ್ಚರಿಕೆ ನೀಡಿ ತಾಯಿ-ಮಗುವನ್ನು ಕರೆದುಕೊಂಡು ಈಜಿಪ್ಟ್‌ ದೇಶಕ್ಕೆ ಓಡಿಹೋಗುವಂತೆ ತಿಳಿಸುತ್ತಾನೆ. ಹೀಗೆ ದುಷ್ಟ ಹೆರೋದನ ಕೈಗೆ ಬೀಳದೆ ಯೇಸು ಈಜಿಪ್ಟ್‌ನಲ್ಲಿ ಸುರಕ್ಷಿತನಾಗಿರುತ್ತಾನೆ. ಕೆಲವು ವರ್ಷಗಳ ಬಳಿಕ ಮರಿಯಳೂ ಯೋಸೇಫನೂ ಯೇಸುವಿನೊಂದಿಗೆ ಈಜಿಪ್ಟ್‌ ದೇಶದಿಂದ ಮತ್ತೆ ಹಿಂದಿರುಗಿ ಬರುತ್ತಾರೆ. ಆಗ ದೇವರು ಯೋಸೇಫನಿಗೆ ಕನಸಿನಲ್ಲಿ ಇನ್ನೊಂದು ಎಚ್ಚರಿಕೆಯನ್ನು ನೀಡುತ್ತಾನೆ. ಅವರೆಲ್ಲರೂ ನಜರೇತಿಗೆ ಹೋಗುವಂತೆ ತಿಳಿಸುತ್ತಾನೆ. ಅಲ್ಲಿ ಯೇಸು ಸುರಕ್ಷಿತನಾಗಿದ್ದನು.—ಮತ್ತಾಯ 2:7-23.

ಯೋಸೇಫ ಯೇಸುವನ್ನು ಕಾಪಾಡಲು ಮರಿಯಳನ್ನು ಈಜಿಫ್ಟಿಗೆ ಕರೆದುಕೊಂಡು ಹೋಗುತ್ತಾನೆ

ಪುಟ್ಟ ಯೇಸುವನ್ನು ಮತ್ತೊಮ್ಮೆ ಹೇಗೆ ಕಾಪಾಡಲಾಯಿತು?

ಯೆಹೋವನು ತನ್ನ ಮಗನನ್ನು ಹೇಗೆ ಸಂರಕ್ಷಿಸಿದನು ಅಂತ ನಿನಗೆ ಗೊತ್ತಾಯ್ತಾ?— ಪೊದೆಯಲ್ಲಿ ಅಡಗಿದ್ದ ಆ ಪಕ್ಷಿಮರಿಗಳಂತೆ ಯಾರಿದ್ದಾರೆ ಹೇಳು ಅಥವಾ ಪುಟಾಣಿ ಮಗುವಾಗಿದ್ದ ಯೇಸುವಿನಂತೆ ಯಾರಿದ್ದಾರೆ ಹೇಳು? ಚಿನ್ನೂ ಮರಿ, ನೀನುನೂ ಹಾಗೇ ಇದ್ದೀಯ ತಾನೇ?— ನಿನಗೂ ಅಪಾಯ ಉಂಟುಮಾಡಲು ಹೊಂಚು ಹಾಕುವ ಜನರಿದ್ದಾರೆ. ಯಾರಂತ ಗೊತ್ತಾ?—

ಸೈತಾನನು ಗರ್ಜಿಸುವ ಸಿಂಹದಂತಿದ್ದು ನಮ್ಮನ್ನು ಕಬಳಿಸಿಬಿಡಲು ಕಾಯುತ್ತಿದ್ದಾನೆಂದು ಬೈಬಲ್‌ ತಿಳಿಸುತ್ತದೆ. ಸಿಂಹ ಹೆಚ್ಚಾಗಿ ಎಳೆಯ ಮರಿಗಳ ಮೇಲೆ ಆಕ್ರಮಣ ಮಾಡುತ್ತದೆ. ಅದೇ ರೀತಿ ಸೈತಾನ ಮತ್ತು ಅವನ ದೆವ್ವಗಳು ಮಕ್ಕಳ ಮೇಲೆ ಅಪಾಯ ಒಡ್ಡಲು ಕಾಯುತ್ತಿರುತ್ತವೆ. (1 ಪೇತ್ರ 5:8) ಹಾಗಿದ್ದರೂ ಯೆಹೋವನು ಸೈತಾನನಿಗಿಂತ ಹೆಚ್ಚು ಶಕ್ತಿಶಾಲಿ. ಆತನು ತನ್ನ ಮಕ್ಕಳನ್ನು ಸಂರಕ್ಷಿಸಬಲ್ಲನು. ಸೈತಾನನು ಉಂಟುಮಾಡುವ ಯಾವುದೇ ಕೇಡಿನಿಂದ ತಪ್ಪಿಸಬಲ್ಲನು.

ಪಿಶಾಚನೂ ಅವನ ದೆವ್ವಗಳೂ ಏನನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತವೆ ಅಂತ ನಾವು ಅಧ್ಯಾಯ 10ರಲ್ಲಿ ಕಲಿತದ್ದು ನಿನಗೆ ನೆನಪಿದೆಯಾ?— ಯಾವ ರೀತಿಯ ಸೆಕ್ಸ್‌ ಅನ್ನು ದೇವರು ತಪ್ಪೆಂದು ಹೇಳುತ್ತಾನೋ ಅದರಲ್ಲಿ ಒಳಗೂಡುವಂತೆ ಅವು ನಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತವೆ. ನಿನಗೆ ಗೊತ್ತಿದೆಯಾ, ಲೈಂಗಿಕ ಸಂಬಂಧ ಯಾರ ಮಧ್ಯೆ ಮಾತ್ರ ಇರಬೇಕು?— ಹೌದು, ದೊಡ್ಡವರಾಗಿರುವ ಮತ್ತು ಮದುವೆಯಾಗಿರುವ ಪುರುಷ ಹಾಗೂ ಸ್ತ್ರೀ ಮಧ್ಯೆ ಮಾತ್ರ ಇರಬೇಕು.

ಆದರೆ ದುಃಖದ ವಿಷಯವೇನೆಂದರೆ, ಕೆಲವು ದೊಡ್ಡವರು ಮಕ್ಕಳೊಂದಿಗೆ ಸೆಕ್ಸ್‌ ಸುಖ ಅನುಭವಿಸುವ ಕೆಟ್ಟ ಚಟ ಇಟ್ಟುಕೊಂಡಿರುತ್ತಾರೆ. ದೊಡ್ಡವರೇ ಹೀಗೆ ತಪ್ಪಾಗಿ ನಡೆದುಕೊಳ್ಳುವುದನ್ನು ನೋಡಿ ಕೆಲವು ಹುಡುಗ ಹುಡುಗಿಯರೂ ಸೆಕ್ಸ್‌ ಚಾಳಿಗೆ ಇಳಿದುಬಿಡಬಹುದು. ಆ ಮಕ್ಕಳು ತಮ್ಮ ಜನನೇಂದ್ರಿಯಗಳನ್ನು ತಪ್ಪಾದ ರೀತಿಯಲ್ಲಿ ಉಪಯೋಗಿಸಲು ಆರಂಭಿಸಬಹುದು. ಬಹಳ ಕಾಲದ ಹಿಂದೆ ಸೊದೋಮ್‌ ಎಂಬ ಪಟ್ಟಣದಲ್ಲಿ ಈ ರೀತಿ ನಡೆಯಿತು. ಲೋಟ ಎಂಬ ಮನುಷ್ಯನನ್ನು ನೋಡಲು ಬಂದಿದ್ದ ಪುರುಷರೊಂದಿಗೆ ಲೈಂಗಿಕತೆ ನಡೆಸಲು ಆ ಪಟ್ಟಣದ “ಹುಡುಗರು ಮುದುಕರು ಸಹಿತವಾಗಿ” ತುಂಬಾ ಪ್ರಯತ್ನಿಸಿದರು ಎಂದು ಬೈಬಲ್‌ ತಿಳಿಸುತ್ತದೆ.—ಆದಿಕಾಂಡ 19:4, 5.

ಯೇಸುವಿಗೆ ಸಂರಕ್ಷಣೆಯ ಅಗತ್ಯವಿದ್ದಂತೆಯೇ, ನಿನಗೂ ಸಂರಕ್ಷಣೆಯ ಅಗತ್ಯವಿದೆ. ನಿನ್ನೊಂದಿಗೆ ಸೆಕ್ಸ್‌ ಮಾಡಲು ಪ್ರಯತ್ನಿಸುವ ದೊಡ್ಡವರಿಂದಲೂ ಮಕ್ಕಳಿಂದಲೂ ದೂರವಿದ್ದು ನಿನ್ನನ್ನು ಕಾಪಾಡಿಕೊಳ್ಳಬೇಕು. ಸಾಮಾನ್ಯವಾಗಿ ಇಂಥ ಕೆಟ್ಟ ಜನರು ನಿನ್ನ ಸ್ನೇಹಿತರಂತೆ ನಾಟಕಮಾಡುತ್ತಾರೆ. ಅವರು ಸೆಕ್ಸ್‌ ಮಾಡೋದನ್ನು ನೀನು ಯಾರಿಗೂ ಹೇಳದಿರಲು ಬಗೆಬಗೆಯ ವಸ್ತುಗಳನ್ನು ನಿನಗೆ ಕೊಡುವುದಾಗಿಯೂ ಆಶೆ ಆಮಿಷ ತೋರಿಸಬಹುದು. ಪುಟಾಣಿ ನೀನು ಹುಷಾರಾಗಿರಬೇಕು. ಈ ಜನರು ಸೈತಾನನಂತೆ ಮತ್ತು ಅವನ ದೆವ್ವಗಳಂತೆ ಬಲು ಸ್ವಾರ್ಥಿಗಳು. ಸ್ವಂತ ಸುಖವನ್ನು ಮಾತ್ರ ಬಯಸುವ ಕೆಟ್ಟ ಜನರು. ಯಾರಿಗೂ ಗೊತ್ತಾಗದಂತೆ ಚಿಕ್ಕ ಮಕ್ಕಳೊಂದಿಗೆ ಲೈಂಗಿಕತೆ ನಡೆಸಿ ಸುಖ ಪಡೆಯಲು ಅವರು ಪ್ರಯತ್ನಿಸುತ್ತಾರೆ. ಆ ರೀತಿ ಮಾಡೋದು ದೊಡ್ಡ ತಪ್ಪು!

ಸುಖ ಪಡೆಯಲಿಕ್ಕಾಗಿ ಅವರು ಏನೇನು ಮಾಡುತ್ತಾರೆ ಗೊತ್ತಾ?— ನಿನ್ನ ಜನನೇಂದ್ರಿಯವನ್ನು ಸವರಲು ಪ್ರಯತ್ನಿಸಬಹುದು. ಅಥವಾ ತಮ್ಮ ಜನನೇಂದ್ರಿಯವನ್ನು ನಿನ್ನ ಜನನೇಂದ್ರಿಯಕ್ಕೆ ತಾಗಿಸಲು ಪ್ರಯತ್ನಿಸಬಹುದು. ಆದರೆ ನಿನ್ನ ಜನನೇಂದ್ರಿಯದೊಂದಿಗೆ ಆಟವಾಡಲು ಯಾರನ್ನೂ ಬಿಡಬೇಡ. ಯಾರೇ ಆಗಿರಲಿ, ನಿನ್ನ ಸ್ವಂತ ಅಣ್ಣತಮ್ಮ, ಅಕ್ಕತಂಗಿ ಅಥವಾ ತಂದೆತಾಯಿಯೇ ಆಗಿರಲಿ ಹೀಗೆ ಮಾಡಲು ಬಿಡಬೇಡ. ಅದು ನಿನ್ನ ಅಂಗವಾಗಿದೆ. ಅದರ ಮೇಲೆ ಯಾರಿಗೂ ಅಧಿಕಾರವಿಲ್ಲ.

 ಒಂದು ಹುಡುಗಿಯನ್ನು ಒಬ್ಬ ವ್ಯಕ್ತಿ ತಪ್ಫಾದ ರೀತಿಯಲ್ಲಿ ಮುಟ್ಟುತ್ತಿರುವುದಕ್ಕೆ  ಅವಳು ಅವನನ್ನು ತಡೆಯುತ್ತಿದ್ದಾಳೆ

ಯಾರಾದರೂ ನಿನ್ನನ್ನು ತಪ್ಪಾದ ರೀತಿಯಲ್ಲಿ ಮುಟ್ಟಲು ಪ್ರಯತ್ನಿಸಿದರೆ ನೀನು ಏನು ಹೇಳುತ್ತೀ? ಏನು ಮಾಡುತ್ತೀ?

ಇಂಥ ಕೆಟ್ಟ ಕೆಲಸಗಳನ್ನು ಮಾಡುವಂಥ ಜನರಿಂದ ನಿನ್ನನ್ನು ನೀನೇ ಹೇಗೆ ಸಂರಕ್ಷಿಸಿಕೊಳ್ಳುತ್ತೀ?— ನಿನ್ನ ಜನನೇಂದ್ರಿಯದೊಂದಿಗೆ ಆಟವಾಡಲು ಯಾರನ್ನೂ ಬಿಡಬೇಡ. ಯಾರಾದರೂ ಹಾಗೆ ಮಾಡಲು ಪ್ರಯತ್ನಿಸಿದರೆ, “ಮುಟ್ಟಬೇಡ! ಹತ್ತಿರ ಬಂದರೆ ಕಿರಿಚಿ ಎಲ್ಲರನ್ನು ಕರಿತೀನಿ” ಅಂತ ಜೋರಾಗಿ ಧೈರ್ಯದಿಂದ ಹೇಳು. ‘ತಪ್ಪು ನನ್ನದಲ್ಲ ನಿನ್ನದೇ ನೀನೇ ಇದಕ್ಕೆ ಕಾರಣ’ ಅಂತ ಆ ವ್ಯಕ್ತಿ ಹೇಳುವುದಾದರೆ ಅದನ್ನು ನಂಬಬೇಡ. ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ. ಅದು ಯಾರೇ ಆಗಿರಲಿ ಹೋಗಿ ಬೇರೆಯವರಿಗೆ ತಿಳಿಸು. ನಮ್ಮಿಬ್ಬರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ ಅಂತ ಹೇಳುವುದಾದರೂ ಸರಿ ಬೇರೆಯವರಿಗೆ ವಿಷಯ ತಿಳಿಸಿಬಿಡು. ಆ ವ್ಯಕ್ತಿ ಒಳ್ಳೊಳ್ಳೆ ಉಡುಗೊರೆ ಕೊಟ್ಟು ನಿನ್ನನ್ನು ಪುಸಲಾಯಿಸಬಹುದು. ಬೆದರಿಕೆ ಹಾಕಬಹುದು. ಆಗ ನೀನು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗು. ಕೂಡಲೇ ಬೇರೆಯವರಿಗೆ ತಿಳಿಸು.

ಹೀಗೆಲ್ಲಾ ಅಗುತ್ತೆ ಅಂಥ ನೀನೇನೂ ಹೆದರಬೇಕಾಗಿಲ್ಲ. ಆದರೆ ಹುಷಾರಾಗಿರಬೇಕು. ಅಪ್ಪಅಮ್ಮ ಇಂತಿಂಥ ವ್ಯಕ್ತಿಗಳೊಂದಿಗೆ ಸೇರಬೇಡ ಅಥವಾ ಸ್ಥಳಗಳಿಗೆ ಹೋಗಬೇಡ ಅಂತ ಎಚ್ಚರಿಕೆ ನೀಡುವಾಗ ಅವರ ಮಾತನ್ನು ಕೇಳು. ಕೇಳಿದರೆ, ಕೇಡು ಬಗೆಯುವ ಜನರಿಗೆ ನೀನು ಅವಕಾಶನೇ ಕೊಡುವುದಿಲ್ಲ. ಸುರಕ್ಷಿತವಾಗಿರುವಿ.

ತಪ್ಪಾದ ಸೆಕ್ಸ್‌ನ ಪಾಶದಿಂದ ನಿನ್ನನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ನಾವು ಆದಿಕಾಂಡ 39:7-12; ಜ್ಞಾನೋಕ್ತಿ 4:14-16; 14:15, 16; 1 ಕೊರಿಂಥ 6:18 ಮತ್ತು 2 ಪೇತ್ರ 2:14 ಓದಿ ತಿಳಿದುಕೊಳ್ಳೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ