ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 48 ಪು. 250-256
  • ದೇವರ ಹೊಸ ಲೋಕದಲ್ಲಿ ಜೀವಿಸಲು ನೀನೇನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಹೊಸ ಲೋಕದಲ್ಲಿ ಜೀವಿಸಲು ನೀನೇನು ಮಾಡಬೇಕು?
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಶಾಂತಿಭರಿತ ಹೊಸ ಲೋಕದಲ್ಲಿ ಜೀವನ
    ಶಾಂತಿಭರಿತ ಹೊಸ ಲೋಕದಲ್ಲಿ ಜೀವನ
  • ಸುಂದರ ಲೋಕ ಅತೀ ಹತ್ತಿರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 48 ಪು. 250-256

ಅಧ್ಯಾಯ 48

ದೇವರ ಹೊಸ ಲೋಕದಲ್ಲಿ ಜೀವಿಸಲು ನೀನೇನು ಮಾಡಬೇಕು?

ದೇವರು ಏದೆನ್‌ ತೋಟವನ್ನು ಆದಾಮಹವ್ವರಿಗಾಗಿ ಕೊಟ್ಟರೂ ಅವರದನ್ನು ಕಳಕೊಂಡರು. ಅವಿಧೇಯರಾದ ಕಾರಣ ಸಾವನ್ನಪ್ಪಿದರು. ಆದರೆ ಅವರಿಂದ ಬಂದ ಮಾನವ ಸಂತತಿ ಪರದೈಸ್‌ನಲ್ಲಿ ಸದಾಕಾಲ ಜೀವಿಸುವಂತೆ ದೇವರು ಏರ್ಪಾಡು ಮಾಡಿದ್ದಾನೆ. ಆ ಕುರಿತು ಬೈಬಲ್‌ ಹೀಗೆ ವಾಗ್ದಾನಮಾಡುತ್ತದೆ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

“ನೂತನ ಆಕಾಶ” ಮತ್ತು “ನೂತನ ಭೂಮಿಯ” ಕುರಿತು ಬೈಬಲ್‌ನಲ್ಲಿದೆ. (ಯೆಶಾಯ 65:17; 2 ಪೇತ್ರ 3:13) ಯೇಸು ಕ್ರಿಸ್ತ ಹಾಗೂ ಅವನೊಂದಿಗೆ ಸ್ವರ್ಗದಲ್ಲಿ ಆಳಲಿರುವವರನ್ನು “ನೂತನ ಆಕಾಶ” ಅಂತ ಕರೆಯಲಾಗುತ್ತದೆ. ಹಾಗಾದರೆ ಈಗಿನ “ಆಕಾಶ” ಇಂದಿನ ಮಾನವ ಸರಕಾರಗಳನ್ನು ಸೂಚಿಸುತ್ತದೆ. ಈ ಮಾನವ ಸರಕಾರಗಳೆಲ್ಲಾ ನಾಶವಾಗಿ ನೂತನ ಆಕಾಶ ಅಂದರೆ ದೇವರ ಸರಕಾರ ಈ ಭೂಮಿಯಲ್ಲಿ ಶಾಂತಿ ಸಮಾಧಾನದಿಂದ ರಾಜ್ಯಭಾರ ಮಾಡುವಾಗ ಎಷ್ಟು ಚೆನ್ನಾಗಿರುತ್ತೆ ಅಲ್ವಾ!

ಹಾಗಾದರೆ “ನೂತನ ಭೂಮಿ” ಅಂದರೇನು?— ನೂತನ ಭೂಮಿ ಯೆಹೋವನನ್ನು ಪ್ರೀತಿಸುವ ಒಳ್ಳೇ ಜನರನ್ನು ಸೂಚಿಸುತ್ತದೆ. ‘ಭೂಮಿ’ ಅಂತ ಬೈಬಲಿನಲ್ಲಿ ಹೇಳುವಾಗ ಕೆಲವೊಮ್ಮೆ ಅದು ನೆಲವನ್ನಲ್ಲ ಬದಲಿಗೆ ಭೂಮಿಯಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆ. (ಆದಿಕಾಂಡ 11:1; ಕೀರ್ತನೆ 66:4; 96:1) ಹಾಗಾಗಿ ನೂತನ ಭೂಮಿಯೆಂದು ಸೂಚಿಸಲಾಗಿರುವ ಜನರೆಲ್ಲಾ ಇದೇ ಭೂಮಿಯಲ್ಲಿ ಜೀವಿಸುವರು.

ಆಗ ದುಷ್ಟ ಜನರು ಇರುವುದಿಲ್ಲ. ನೋಹನ ಕಾಲದ ಜಲಪ್ರಳಯ ದುಷ್ಟ ಜನರನ್ನು ನಾಶಮಾಡಿತು ಅಂತ ನಿನಗೆ ನೆನಪಿರಬಹುದು. ಹಾಗೆಯೇ ಈಗಿನ ದುಷ್ಟ ಲೋಕ ಅರ್ಮಗೆದೋನಿನಲ್ಲಿ ನಾಶವಾಗುವುದು. ಅರ್ಮಗೆದೋನಿನ ಬಳಿಕ ದೇವರ ಹೊಸ ಲೋಕದಲ್ಲಿ ಜೀವನವು ಹೇಗಿರುವುದು ಅಂತ ನಾವೀಗ ನೋಡೋಣ.

ಶಾಂತಿಸಮಾಧಾನದಿಂದ ತುಂಬಿರುವ ದೇವರ ಹೊಸ ಲೋಕದಲ್ಲಿ ಅಂದರೆ ಪರದೈಸ್‌ನಲ್ಲಿ ಸದಾಕಾಲ ಜೀವಿಸಲು ನೀನು ಇಷ್ಟಪಡುತ್ತೀಯಾ?— ನಮಗೆ ಸಾವೇ ಬರದಂತೆ ಮಾಡಲು ಯಾವ ಡಾಕ್ಟರಿಂದಲೂ ಸಾಧ್ಯವಿಲ್ಲ. ನಾವು ಸದಾಕಾಲ ಜೀವಿಸುವಂತೆ ಮಾಡುವ ಯಾವ ಮಾತ್ರೆಯೂ ಇಲ್ಲ. ಸದಾಕಾಲ ಜೀವಿಸಲು ಇರುವುದು ಒಂದೇ ಒಂದು ಮಾರ್ಗ. ದೇವರಿಗೆ ಆಪ್ತರಾಗಿರುವುದೇ. ದೇವರಿಗೆ ಆಪ್ತರಾಗುವುದು ಹೇಗೆಂದು ಮಹಾ ಬೋಧಕನು ತಿಳಿಸುತ್ತಾನೆ.

ನಾವೀಗ ಯೋಹಾನ 17ನೇ ಅಧ್ಯಾಯದ 3ನೇ ವಚನವನ್ನು ತೆರೆಯೋಣ. ಅಲ್ಲಿ ಮಹಾ ಬೋಧಕನು ಹೀಗೆ ಹೇಳುತ್ತಾನೆ: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”

ಹಾಗಾದರೆ, ನಾವು ನಿತ್ಯಜೀವ ಪಡೆಯಬೇಕಾದರೆ ಏನು ಮಾಡಬೇಕೆಂದು ಯೇಸು ಈ ವಚನದಲ್ಲಿ ಹೇಳುತ್ತಿದ್ದಾನೆ?— ಮೊದಲನೆಯದಾಗಿ, ನಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವನ ಜ್ಞಾನವನ್ನು ಪಡೆದುಕೊಳ್ಳಬೇಕು. ಎರಡನೆಯದಾಗಿ, ನಮಗೋಸ್ಕರ ಜೀವವನ್ನು ಅರ್ಪಿಸಿದ ಯೇಸುವಿನ ಜ್ಞಾನವನ್ನೂ ಪಡೆದುಕೊಳ್ಳಬೇಕು. ಅವರ ಕುರಿತ ಜ್ಞಾನ ನಮಗೆ ಬೈಬಲಿನ ಅಧ್ಯಯನದಿಂದ ಸಿಗುತ್ತದೆ. ಮತ್ತು ಬೈಬಲನ್ನು ಅಧ್ಯಯನ ಮಾಡಲು ನಿನ್ನ ಕೈಯಲ್ಲಿರುವ ಮಹಾ ಬೋಧಕನಿಂದ ಕಲಿಯೋಣ ಎಂಬ ಪುಸ್ತಕ ಸಹಾಯಮಾಡುತ್ತದೆ.

ಸರಿ ಹೇಳು, ಯೆಹೋವನ ಕುರಿತ ಜ್ಞಾನ ಪಡೆಯುವುದು ಸದಾಕಾಲ ಜೀವಿಸುವಂತೆ ಹೇಗೆ ಸಹಾಯಮಾಡುತ್ತದೆ?— ನಾವು ಜೀವಂತವಾಗಿರಲು ದಿನಾಲೂ ಊಟಮಾಡಬೇಕಲ್ವಾ. ಹಾಗೆಯೇ ದಿನಾಲೂ ಯೆಹೋವನ ಬಗ್ಗೆ ಕಲಿತರೆ ನಾವು ಸದಾಕಾಲ ಬಾಳುತ್ತೇವೆ. ಏಕೆಂದರೆ “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು” ಎಂದು ಬೈಬಲ್‌ ಹೇಳುತ್ತದೆ.—ಮತ್ತಾಯ 4:4.

ನಾವು ಯೆಹೋವನ ಕುರಿತ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಯೇಸು ಕ್ರಿಸ್ತನ ಬಗ್ಗೆನೂ ಕಲಿಯಬೇಕು. ಏಕೆಂದರೆ ನಮ್ಮ ಪಾಪಗಳನ್ನು ಅಳಿಸಿಹಾಕಲಿಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಕಳುಹಿಸಿಕೊಟ್ಟನು. “ಬೇರೆ ಯಾರಿಂದಲೂ ರಕ್ಷಣೆಯು ದೊರಕುವುದಿಲ್ಲ” “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು” ಅಂತ ಬೈಬಲ್‌ ಕೂಡ ಹೇಳುತ್ತದೆ. (ಅಪೊಸ್ತಲರ ಕಾರ್ಯಗಳು 4:12; ಯೋಹಾನ 3:36) ಹಾಗಾದರೆ, ಯೇಸು ಇಲ್ಲದೇ ನಮಗೆ ನಿತ್ಯಜೀವ ಸಿಗಲಾರದೆಂದು ಗ್ರಹಿಸಿ ನಾವು ಅವನಲ್ಲಿ ಬಲವಾದ ನಂಬಿಕೆಯಿಡಬೇಕು. ಅಂಥ ಬಲವಾದ ನಂಬಿಕೆ ನಮಗಿದೆಯಾ?— ಅಂಥ ನಂಬಿಕೆ ಇರೋದಾದರೆ, ದಿನಾಲೂ ಮಹಾ ಬೋಧಕನಿಂದ ಕಲಿಯುತ್ತಾ ಇರುವೆವು. ಮಾತ್ರವಲ್ಲ ಅವನು ಹೇಳುವುದನ್ನೆಲ್ಲಾ ಮಾಡುವೆವು.

ಮಹಾ ಬೋಧಕನಿಂದ ಕಲಿಯಬೇಕಾದರೆ ಈ ಪುಸ್ತಕವನ್ನು ಮತ್ತೆ ಮತ್ತೆ ಓದು. ಓದಿದ ವಿಷಯಕ್ಕೆ ಚಿತ್ರಗಳು ಹೇಗೆ ಸಂಬಂಧಿಸಿದೆ ಅಂತ ಯೋಚಿಸು. ಚಿತ್ರಗಳೊಂದಿಗಿರುವ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸು. ಅಪ್ಪಅಮ್ಮನೊಂದಿಗೆ ಈ ಪುಸ್ತಕವನ್ನು ಓದೋದು ಒಳ್ಳೇದು. ಇಲ್ಲಾಂದ್ರೆ ಮನೆಯಲ್ಲಿರುವ ದೊಡ್ಡವರೊಂದಿಗೋ ಇತರ ಮಕ್ಕಳೊಂದಿಗೋ ಸೇರಿ ಓದು. ಮಹಾ ಬೋಧಕನಿಂದ ಕಲಿತುಕೊಳ್ಳುವಂತೆ ಇತರರಿಗೆ ನೀನು ಸಹಾಯಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ದೇವರ ಹೊಸ ಲೋಕದಲ್ಲಿ ಸದಾಕಾಲ ಜೀವಿಸಲು ಏನು ಮಾಡಬೇಕೆಂದು ಅವರು ಸಹ ಕಲಿತುಕೊಳ್ಳುತ್ತಾರೆ. ಅವರಿಗೆ ಸಹಾಯಮಾಡಲು ನೀನು ಇಷ್ಟಪಡುತ್ತೀಯಾ?—

‘ಲೋಕ ಗತಿಸಿಹೋಗುತ್ತಿದೆ’ ಎಂದು ಬೈಬಲ್‌ ಹೇಳಿರುವುದಾದರೂ ದೇವರ ಹೊಸ ಲೋಕದಲ್ಲಿ ಸದಾಕಾಲ ಜೀವಿಸಲು ನಾವು ಏನು ಮಾಡಬೇಕೆಂದೂ ಅದು ವಿವರಿಸುತ್ತದೆ. “ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎಂಬ ಅಶ್ವಾಸನೆ ನೀಡುತ್ತದೆ. (1 ಯೋಹಾನ 2:17) ದೇವರ ಹೊಸ ಲೋಕದಲ್ಲಿ ಸದಾಕಾಲ ಜೀವಿಸಬೇಕಾದರೆ ನಾವೇನು ಮಾಡಬೇಕೆಂದು ನಿನಗೆ ನೆನಪಿದೆ ತಾನೆ?— ಹೌದು. ಯೆಹೋವನ ಮತ್ತು ಆತನ ಪ್ರಿಯ ಮಗನಾದ ಯೇಸುವಿನ ಜ್ಞಾನವನ್ನು ನಾವು ಪಡೆದುಕೊಳ್ಳುತ್ತಾ ಇರಬೇಕು. ಮಾತ್ರವಲ್ಲ ಕಲಿತಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಪುಸ್ತಕ ನಿನಗೆ ಸಹಾಯಮಾಡಲಿ.

ದೊಡ್ಡವರು ಮತ್ತು ಮಕ್ಕಳು ಪರದೈಸ್‌ನಲ್ಲಿ ಪ್ರಾಣಿಗೊಂದಿಗೆ ಆಟವಾಡುತ್ತಿದ್ದಾರೆ, ಪ್ರಾಣಿಗಳು ಅವರಿಗೂ ಏನೂ ಮಾಡುತ್ತಿಲ್ಲ

ಯೆಶಾಯ 11:6-9 ಮತ್ತು ಯೆಶಾಯ 65:25 ಓದು. ಅಲ್ಲಿ ಪ್ರಾಣಿಪಕ್ಷಿಗಳೆಲ್ಲಾ ಒಗ್ಗಟ್ಟಿನಲ್ಲಿ ಬದುಕುವುದರ ಬಗ್ಗೆ ತಿಳಿಸಲಾಗಿದೆ. ಈ ಚಿತ್ರ ನೋಡು. ಕುರಿಮರಿ, ಆಡುಮರಿ, ಚಿರತೆ, ಕರು, ಸಿಂಹ, ಪುಟ್ಟ ಮಕ್ಕಳು ಎಲ್ಲಾ ಒಟ್ಟಿಗಿದ್ದಾರೆ. ಇತರ ಪ್ರಾಣಿಗಳ ಹೆಸರು ಹೇಳು ನೋಡೋಣ?— ಅಲ್ಲಿ ನೋಡು! ಆ ಮಗು ನಾಗರಹಾವಿನೊಂದಿಗೆ ಆಡುತ್ತಿದೆ. ಹೊಸ ಲೋಕದಲ್ಲಿ ಭಯನೇ ಇರೊಲ್ಲ. (ಹೋಶೇಯ 2:18) ಇದರ ಬಗ್ಗೆ ನಿನಗೆ ಹೇಗನಿಸುತ್ತದೆ?—

ವಿವಿಧ ಕುಲಗಳ ಜನರು ಹೊಸಲೋಕದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಆನಂದಿಸಲಿದ್ದಾರೆ

ಈ ಚಿತ್ರ ನೋಡು. ಎಲ್ಲಾ ರೀತಿಯ ಜನರು ಶಾಂತಿಯಿಂದ ಇದ್ದಾರೆ. ಅವರೆಲ್ಲರೂ ಪ್ರೀತಿ ಐಕ್ಯತೆಯಲ್ಲಿ ಇದ್ದಾರೆ. ತನ್ನ ಹಿಂಬಾಲಕರು ಹೀಗೆ ಇರುವರು ಅಂತ ಯೇಸು ಹೇಳಿದನಲ್ವಾ. (ಯೋಹಾನ 13:34, 35) ಅಲ್ಲಿ ನೋಡು ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳನ್ನು ಕುಲುಮೆಗೆ ಹಾಕಿ ಕೃಷಿ ಉಪಕರಣಗಳನ್ನಾಗಿ ಮಾಡುತ್ತಿದ್ದಾರೆ. ದೇವರ ಹೊಸ ಲೋಕದಲ್ಲಿ ಜನರಿಗೆ ಶಾಂತಿ ಭದ್ರತೆ ಇರುವುದೆಂದು ಬೈಬಲ್‌ ತಿಳಿಸುತ್ತದೆ. ಆ ಕುರಿತು ಕೀರ್ತನೆ 72:7; ಯೆಶಾಯ 2:4; 32:16-18 ಮತ್ತು ಯೆಹೆಜ್ಕೇಲ 34:25 ರಲ್ಲಿ ಓದಬಹುದು.

ಪರದೈಸ್‌ನಲ್ಲಿ ಜನರು ಮನೆ ಕಟ್ಟುತ್ತಾರೆ, ಭೂಮಿ ನೋಡಿಕೊಳ್ಳುತ್ತಾರೆ ಮತ್ತು ಅದರ ಫಲವನ್ನು ಅನುಭವಿಸುತ್ತಾರೆ

ಇಲ್ಲಿರುವ ಜನರನ್ನು ಗಮನಿಸು. ಅವರು ಭೂಮಿಯನ್ನು ಸುಂದರ ಉದ್ಯಾನವನವಾಗಿ ಮಾರ್ಪಡಿಸುತ್ತಿದ್ದಾರೆ. ಅಗೋ ಅಲ್ಲಿ ಜನರು ಸುಂದರ ಮನೆ ಕಟ್ಟುತ್ತಿದ್ದಾರೆ. ಇಲ್ಲಿ ರಸಭರಿತ ಹಣ್ಣು ತಾಜಾ ತರಕಾರಿ ಎಷ್ಟೊಂದಿವೆ. ಜನರು ಭೂಮಿಗೆ ಯಾವ ಹಾನಿ ಮಾಡುತ್ತಿಲ್ಲ. ಹಾಗಾಗಿ ಇಡೀ ಭೂಮಿ ಏದೆನ್‌ ತೋಟದಂತೆ ಪರದೈಸಾಗಿ ಕಂಗೊಳಿಸುತ್ತಿದೆ. ಈ ಅಹ್ಲಾದಕರ ವಿಷಯಗಳ ಕುರಿತು ನಾವು ಕೀರ್ತನೆ 67:6; 72:16; ಯೆಶಾಯ 25:6; 65:21-24 ಮತ್ತು ಯೆಹೆಜ್ಕೇಲ 36:35 ರಲ್ಲಿ ಓದಬಹುದು.

ಪರದೈಸ್‌ನಲ್ಲಿ ಜನರಿಗೆ ಒಳ್ಳೇ ಆರೋಗ್ಯವಿರುತ್ತದೆ, ಅವರು ಸಂತೋಷದಿಂದ ಇರುತ್ತಾರೆ

ಈ ಚಿತ್ರದಲ್ಲಿ ನೀನು ಕಣ್ಣಾಯಿಸುವುದಾದರೆ ಪ್ರತಿಯೊಬ್ಬರಿಗೂ ಮಿಡಿಯುವ ಆರೋಗ್ಯವಿದೆ. ಸಂತೋಷ ಸಂತೃಪ್ತಿಯಿದೆ. ಜಿಂಕೆಮರಿಯಂತೆ ನೆಗೆಯಬಲ್ಲರು. ಕುಂಟರು, ಕುರುಡರು, ರೋಗಿಗಳು ಇಲ್ಲಿಲ್ಲ. ಪುನರುತ್ಥಾನಗೊಂಡು ಬಂದಿರುವ ಜನರು ಸಹ ಇದ್ದಾರೆ. ಈ ವಿಷಯಗಳು, ಯೆಶಾಯ 25:8; 33:24; 35:5, 6; ಅಪೊಸ್ತಲರ ಕಾರ್ಯಗಳು 24:15 ಮತ್ತು ಪ್ರಕಟನೆ 21:3, 4 ರಲ್ಲಿ ಇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ