ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bh ಅಧ್ಯಾ. 7 ಪು. 66-75
  • ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ
  • ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಿಯರೊಬ್ಬರು ಸಾಯುವಾಗ
  • “ಲಾಜರನೇ, ಹೊರಗೆ ಬಾ”
  • ಪುನರುತ್ಥಾನದ ವೃತ್ತಾಂತಗಳಿಂದ ಕಲಿತುಕೊಳ್ಳಬಹುದಾದ ವಿಷಯಗಳು
  • ‘ಸ್ಮಾರಕ ಸಮಾಧಿಗಳಲ್ಲಿರುವವರೆಲ್ಲರು’
  • ಸ್ವರ್ಗೀಯ ಪುನರುತ್ಥಾನ
  • ಸತ್ತವರನ್ನು ಮತ್ತೆ ನೋಡಬಹುದಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಏಕೈಕ ಪರಿಹಾರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಸತ್ತು ಹೋಗಿರುವ ನಮ್ಮ ಪ್ರಿಯರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಮೃತರಿಗಾಗಿ ಆಶಾಕಿರಣ—ಪುನರುತ್ಥಾನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
bh ಅಧ್ಯಾ. 7 ಪು. 66-75

ಅಧ್ಯಾಯ ಏಳು

ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ

  • ಪುನರುತ್ಥಾನವು ನಿಜವಾಗಿಯೂ ಸಂಭವಿಸುವುದೆಂದು ನಮಗೆ ಹೇಗೆ ಗೊತ್ತು?

  • ಮೃತರನ್ನು ಪುನರುತ್ಥಾನಗೊಳಿಸುವುದರ ಕುರಿತು ಯೆಹೋವನಿಗೆ ಹೇಗನಿಸುತ್ತದೆ?

  • ಯಾರಿಗೆ ಪುನರುತ್ಥಾನವಾಗುವುದು?

1-3. ಯಾವ ಶತ್ರು ನಮ್ಮೆಲ್ಲರನ್ನು ಬೆನ್ನಟ್ಟುತ್ತಿದ್ದಾನೆ, ಮತ್ತು ಬೈಬಲು ಏನನ್ನು ಬೋಧಿಸುತ್ತದೊ ಅದನ್ನು ಪರಿಗಣಿಸುವುದು ನಮಗೆ ತುಸು ನೆಮ್ಮದಿಯನ್ನು ಏಕೆ ತರುವುದು?

ಕ್ರೂರಿಯಾದ ಶತ್ರುವೊಬ್ಬನಿಂದ ನೀವು ತಪ್ಪಿಸಿಕೊಂಡು ಓಡಿಹೋಗುತ್ತಿದ್ದೀರೆಂದು ಭಾವಿಸಿರಿ. ಅವನು ನಿಮಗಿಂತ ಅತಿ ಬಲಾಢ್ಯನೂ ಹೆಚ್ಚು ವೇಗಿಯೂ ಆಗಿದ್ದಾನೆ. ಅವನು ನಿರ್ದಯಿಯೆಂದು ನಿಮಗೆ ತಿಳಿದದೆ, ಏಕೆಂದರೆ ನಿಮ್ಮ ಮಿತ್ರರಲ್ಲಿ ಕೆಲವರನ್ನು ಅವನು ಕೊಂದಿರುವುದನ್ನು ನೀವು ನೋಡಿದ್ದೀರಿ. ನೀವು ಅವನಿಗಿಂತ ಹೆಚ್ಚು ವೇಗದಿಂದ ಓಡಿಹೋಗಲು ಎಷ್ಟೇ ಪ್ರಯತ್ನಿಸಿದರೂ, ಅವನು ನಿಮ್ಮನ್ನು ಹಿಡಿಯಲು ಹತ್ತಿರ ಹತ್ತಿರ ಬರುತ್ತಿದ್ದಾನೆ. ಯಾವ ನಿರೀಕ್ಷೆಯೂ ಇಲ್ಲವೆಂದು ನಿಮಗನಿಸುತ್ತದೆ. ಆದರೆ ಥಟ್ಟನೆ, ನಿಮ್ಮ ಪಕ್ಕದಲ್ಲಿ ಒಬ್ಬ ರಕ್ಷಕನು ಬರುತ್ತಾನೆ. ಆತನು ನಿಮ್ಮ ಶತ್ರುವಿಗಿಂತ ಹೆಚ್ಚು ಬಲಾಢ್ಯನಾಗಿದ್ದಾನೆ ಮತ್ತು ನಿಮಗೆ ಸಹಾಯ ನೀಡುವೆನೆಂದು ಮಾತುಕೊಡುತ್ತಾನೆ. ಆಗ ನಿಮಗೆಷ್ಟು ನೆಮ್ಮದಿ ಸಿಗುತ್ತದೆ!

2 ಒಂದರ್ಥದಲ್ಲಿ, ಅಂತಹ ಶತ್ರುವಿನಿಂದ ನೀವು ಮತ್ತು ನಾವೆಲ್ಲರು ಸಹ ನಿಜವಾಗಿಯೂ ಬೆನ್ನಟ್ಟಲ್ಪಡುತ್ತಾ ಇದ್ದೇವೆ. ನಾವು ಹಿಂದಿನ ಅಧ್ಯಾಯದಲ್ಲಿ ಕಲಿತಂತೆ, ಬೈಬಲು ಮರಣವನ್ನು ಶತ್ರುವೆಂದು ಕರೆಯುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಅಥವಾ ಅದರೊಂದಿಗೆ ಕಾದಾಡಲು ನಮ್ಮಲ್ಲಿ ಯಾವನೂ ಶಕ್ತನಲ್ಲ. ಈ ಶತ್ರುವು ನಮಗೆ ಪ್ರಿಯರಾಗಿದ್ದವರ ಜೀವವನ್ನು ಕಬಳಿಸಿರುವುದನ್ನು ನಮ್ಮಲ್ಲಿ ಹೆಚ್ಚಿನವರು ನೋಡಿದ್ದೇವೆ. ಆದರೆ ಯೆಹೋವನು ಮರಣಕ್ಕಿಂತ ಎಷ್ಟೋ ಹೆಚ್ಚು ಬಲಾಢ್ಯನು. ತಾನು ಈ ಶತ್ರುವನ್ನು ಸೋಲಿಸಬಲ್ಲೆನೆಂದು ಈಗಾಗಲೇ ತೋರಿಸಿರುವ ನಮ್ಮ ಪ್ರೀತಿಭರಿತ ರಕ್ಷಕನು ಆತನೇ. ಆತನು ಈ ಶತ್ರುವಾದ ಮರಣವನ್ನು ನಿರ್ಣಾಯಕವಾಗಿ ಮತ್ತು ಸಂಪೂರ್ಣವಾಗಿ ನಾಶಮಾಡುವೆನೆಂದು ವಚನವೀಯುತ್ತಾನೆ. ಬೈಬಲು ಹೀಗೆ ಬೋಧಿಸುತ್ತದೆ: “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:26) ಇದು ಶುಭವಾರ್ತೆಯೇ ಸರಿ!

3 ಮರಣವೆಂಬ ಈ ಶತ್ರು ಬಂದೆರಗುವಾಗ ಅದು ನಮ್ಮನ್ನು ಹೇಗೆ ಬಾಧಿಸುತ್ತದೆಂಬುದರ ಕಡೆಗೆ ಸ್ವಲ್ಪ ಗಮನಹರಿಸೋಣ. ಆಗ ನಮ್ಮನ್ನು ಸಂತೋಷಿತರನ್ನಾಗಿ ಮಾಡುವ ಒಂದು ವಿಷಯವನ್ನು ನಾವು ಗಣ್ಯಮಾಡಲು ಸಾಧ್ಯವಾಗುವುದು. ಅದೇನು? ಮೃತರು ಪುನಃ ಜೀವಿಸುವರೆಂದು ಯೆಹೋವನು ವಚನ ಕೊಡುತ್ತಾನೆ. (ಯೆಶಾಯ 26:19) ಅವರಿಗೆ ಪುನಃ ಜೀವವನ್ನು ಕೊಡಲಾಗುವುದು. ಅದೇ ಪುನರುತ್ಥಾನದ ನಿರೀಕ್ಷೆಯಾಗಿದೆ.

ಪ್ರಿಯರೊಬ್ಬರು ಸಾಯುವಾಗ

4. (ಎ) ಒಬ್ಬ ಪ್ರಿಯ ವ್ಯಕ್ತಿಯ ಮರಣಕ್ಕೆ ಯೇಸು ತೋರಿಸಿದ ಪ್ರತಿಕ್ರಿಯೆಯು ನಮಗೆ ಯೆಹೋವನ ಭಾವನೆಗಳ ಕುರಿತು ಕಲಿಸುತ್ತದೆಂದು ಏಕೆ ಹೇಳಬಲ್ಲೆವು? (ಬಿ) ಯೇಸು ಯಾವ ವಿಶೇಷ ಮಿತ್ರತ್ವವನ್ನು ಬೆಳೆಸಿದ್ದನು?

4 ನಿಮಗೆ ಪ್ರಿಯರಾದ ಒಬ್ಬ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಿದ್ದೀರೊ? ಆ ಸಮಯದಲ್ಲಿ ಉಂಟಾಗುವ ನೋವು, ದುಃಖ ಮತ್ತು ನಿಸ್ಸಹಾಯಕ ಭಾವನೆಗಳು ಸಹಿಸಲಾಗದಂಥದ್ದಾಗಿ ಕಂಡುಬರಸಾಧ್ಯವಿದೆ. ಅಂತಹ ಸಮಯಗಳಲ್ಲಿ, ನಾವು ಸಾಂತ್ವನಕ್ಕಾಗಿ ದೇವರ ವಾಕ್ಯವನ್ನು ಪರಿಶೀಲಿಸುವುದು ಆವಶ್ಯಕ. (2 ಕೊರಿಂಥ 1:3, 4) ಯೆಹೋವನಿಗೆ ಮತ್ತು ಯೇಸುವಿಗೆ ಮರಣದ ಕುರಿತು ಹೇಗನಿಸುತ್ತೆಂಬುದನ್ನು ತಿಳಿದುಕೊಳ್ಳಲು ಬೈಬಲು ನಮಗೆ ಸಹಾಯಮಾಡುತ್ತದೆ. ಯೇಸು ಯಾವಾಗಲೂ ತನ್ನ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ದನು, ಮತ್ತು ಮರಣದಲ್ಲಿ ಒಬ್ಬನನ್ನು ಕಳೆದುಕೊಳ್ಳುವುದರ ಮನೋವೇದನೆ ಏನೆಂಬುದು ಅವನಿಗೆ ಗೊತ್ತಿತ್ತು. (ಯೋಹಾನ 14:9) ಯೇಸು ಯೆರೂಸಲೇಮಿನಲ್ಲಿದ್ದಾಗ, ಸಮೀಪದ ಬೇಥಾನ್ಯ ಪಟ್ಟಣದಲ್ಲಿ ವಾಸಿಸುತ್ತಿದ್ದ ಲಾಜರನನ್ನೂ ಅವನ ಸಹೋದರಿಯರಾಗಿದ್ದ ಮರಿಯ ಮತ್ತು ಮಾರ್ಥಳನ್ನೂ ಭೇಟಿಮಾಡುತ್ತಿದ್ದನು. ಅವರು ಆಪ್ತ ಸ್ನೇಹಿತರಾದರು. “ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು” ಎಂದು ಬೈಬಲು ಹೇಳುತ್ತದೆ. (ಯೋಹಾನ 11:5) ಆದರೆ ನಾವು ಹಿಂದಿನ ಅಧ್ಯಾಯದಲ್ಲಿ ಕಲಿತಂತೆ, ಲಾಜರನು ಸತ್ತುಹೋದನು.

5, 6. (ಎ) ಲಾಜರನ ದುಃಖತಪ್ತ ಕುಟುಂಬ ಮತ್ತು ಮಿತ್ರರೊಂದಿಗಿದ್ದಾಗ ಯೇಸು ಯಾವ ಪ್ರತಿಕ್ರಿಯೆಯನ್ನು ತೋರಿಸಿದನು? (ಬಿ) ಯೇಸುವಿನ ಶೋಕ ನಮಗೆ ಏಕೆ ಪ್ರೋತ್ಸಾಹದಾಯಕವಾಗಿದೆ?

5 ತನ್ನ ಮಿತ್ರನನ್ನು ಕಳೆದುಕೊಂಡಾಗ ಯೇಸುವಿಗೆ ಹೇಗನಿಸಿತು? ಲಾಜರನ ಸಂಬಂಧಿಕರೂ ಮಿತ್ರರೂ ಅವನನ್ನು ಮರಣದಲ್ಲಿ ಕಳೆದುಕೊಂಡಿರುವ ನಷ್ಟದ ಕುರಿತು ದುಃಖಿಸುತ್ತಿದ್ದಾಗ ಯೇಸು ಅವರ ಬಳಿಗೆ ಬಂದನೆಂದು ಆ ವೃತ್ತಾಂತವು ನಮಗೆ ತಿಳಿಸುತ್ತದೆ. ಅವರನ್ನು ನೋಡಿ ಯೇಸುವಿಗೆ ದುಃಖ ಉಕ್ಕಿಬಂತು. ಅವನು ‘ಆತ್ಮದಲ್ಲಿ ನೊಂದುಕೊಂಡನು.’ ಬಳಿಕ, ವೃತ್ತಾಂತವು ಹೇಳುವುದು: “ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:33, 35) ಯೇಸುವಿನ ದುಃಖವು ಅವನಿಗೆ ಯಾವುದೇ ನಿರೀಕ್ಷೆ ಇರಲಿಲ್ಲ ಎಂಬುದನ್ನು ಸೂಚಿಸಿತೊ? ನಿಶ್ಚಯವಾಗಿಯೂ ಇಲ್ಲ! ವಾಸ್ತವವೇನಂದರೆ, ಅದ್ಭುತಕರವಾದ ಒಂದು ವಿಷಯವು ಆಗ ಸಂಭವಿಸಲಿಕ್ಕಿದೆಯೆಂದು ಯೇಸುವಿಗೆ ತಿಳಿದಿತ್ತು. (ಯೋಹಾನ 11:3, 4) ಹೀಗಿದ್ದರೂ, ಮರಣವು ತರುವ ವೇದನೆ ಮತ್ತು ಶೋಕವು ಅವನಿಗೂ ತಟ್ಟಿತು.

6 ಒಂದು ವಿಧದಲ್ಲಿ, ಯೇಸುವಿನ ಶೋಕ ನಮಗೆ ಪ್ರೋತ್ಸಾಹದಾಯಕವಾಗಿದೆ. ಯೇಸು ಮತ್ತು ಆತನ ಪಿತನಾದ ಯೆಹೋವನು ಮರಣವನ್ನು ದ್ವೇಷಿಸುತ್ತಾರೆಂದು ಇದು ನಮಗೆ ಬೋಧಿಸುತ್ತದೆ. ಆದರೆ ಯೆಹೋವ ದೇವರಿಗೆ ಆ ಶತ್ರುವಿನ ವಿರುದ್ಧ ಹೋರಾಡಿ ಅದನ್ನು ಜಯಿಸುವ ಸಾಮರ್ಥ್ಯವಿದೆ! ಮತ್ತು ಆತನು ಯೇಸುವಿಗೆ ಯಾವ ಸಾಮರ್ಥ್ಯವನ್ನು ಕೊಟ್ಟನೆಂಬುದನ್ನು ನಾವು ನೋಡೋಣ.

“ಲಾಜರನೇ, ಹೊರಗೆ ಬಾ”

7, 8. ಮಾನವ ಪ್ರೇಕ್ಷಕರಿಗೆ ಲಾಜರನ ಸನ್ನಿವೇಶವು ನಿರೀಕ್ಷಾಹೀನವಾಗಿ ಏಕೆ ಕಂಡುಬಂದಿದ್ದಿರಬೇಕು, ಆದರೆ ಯೇಸು ಏನು ಮಾಡಿದನು?

7 ಲಾಜರನನ್ನು ಒಂದು ಗವಿಯಲ್ಲಿ ಇಡಲಾಗಿತ್ತು ಮತ್ತು ಆ ಗವಿಯ ಬಾಯಿಗೆ ಮುಚ್ಚಲಾಗಿದ್ದ ಕಲ್ಲನ್ನು ತೆಗೆದುಹಾಕುವಂತೆ ಯೇಸು ಕೇಳಿಕೊಂಡನು. ಮಾರ್ಥಳು ಇದಕ್ಕೆ ಆಕ್ಷೇಪವನ್ನೆತ್ತಿದಳು. ಏಕೆಂದರೆ ನಾಲ್ಕು ದಿನಗಳ ಬಳಿಕ ಲಾಜರನ ದೇಹ ಈಗಾಗಲೇ ಕೊಳೆಯಲು ಆರಂಭಿಸಿದ್ದಿರಬಹುದು. (ಯೋಹಾನ 11:39) ಹೀಗಿರುವಾಗ ಮಾನವ ದೃಷ್ಟಿಕೋನದಿಂದ ಯಾವ ನಿರೀಕ್ಷೆ ಉಳಿದಿತ್ತು?

ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದನು, ಲಾಜರನ ಕುಟುಂಬ, ಸ್ನೇಹಿತರು ಆಶ್ಚರ್ಯಚಕಿತರಾದರು ಹಾಗೂ ಖುಷಿಪಟ್ಟರು

ಲಾಜರನ ಪುನರುತ್ಥಾನವು ಮಹಾ ಸಂತೋಷವನ್ನು ತಂದಿತು.—ಯೋಹಾನ 11:38-44

8 ಆ ಕಲ್ಲನ್ನು ಹೊರಳಿಸಿದ ಬಳಿಕ ಯೇಸು ಗಟ್ಟಿಯಾದ ಸ್ವರದಲ್ಲಿ, “ಲಾಜರನೇ, ಹೊರಗೆ ಬಾ” ಎಂದು ಕೂಗಿದನು. ಆಗ ಏನು ಸಂಭವಿಸಿತು? “ಸತ್ತಿದ್ದವನು ಹೊರಗೆ ಬಂದನು.” (ಯೋಹಾನ 11:43, 44) ಅಲ್ಲಿ ನೆರೆದಿದ್ದ ಜನರಿಗಾದ ಸಂತೋಷವನ್ನು ನೀವು ಊಹಿಸಬಲ್ಲಿರಾ? ಲಾಜರನು ಅವರ ಸಹೋದರನಾಗಿದ್ದಿರಲಿ, ಮಿತ್ರನಾಗಿದ್ದಿರಲಿ ಅಥವಾ ನೆರೆಯವನೇ ಆಗಿದ್ದಿರಲಿ, ಅವನು ಸತ್ತಿದ್ದನೆಂದು ಅವರಿಗೆ ತಿಳಿದಿತ್ತು. ಆದರೆ ಈಗ ಅದೇ ಪ್ರಿಯ ವ್ಯಕ್ತಿ ಪುನಃ ಅವರ ಮಧ್ಯೆ ನಿಂತಿದ್ದನು. ಸಾಮಾನ್ಯವಾಗಿ ಅದು ಅಸಾಧ್ಯವಾದ ಸಂಗತಿಯಾಗಿತ್ತು. ಅನೇಕರು ಲಾಜರನನ್ನು ಹರ್ಷದಿಂದ ಬಿಗಿದಪ್ಪಿದರೆಂಬುದರಲ್ಲಿ ಸಂಶಯವೇ ಇಲ್ಲ. ಮರಣದ ವೇಲೆ ಎಂತಹ ವಿಜಯವಿದು!

ಎಲೀಯನು ಪುನರುತ್ಥಾನಗೊಳಿಸಿದ ಬಾಲಕನನ್ನು ವಿಧವೆಯಾಗಿರುವ ಅವನ ತಾಯಿ ಅಪ್ಪಿಕೊಳ್ಳುತ್ತಿರುವುದು

ಎಲೀಯನು ವಿಧವೆಯೊಬ್ಬಳ ಮಗನನ್ನು ಪುನರುತ್ಥಾನಗೊಳಿಸಿದನು.—1 ಅರಸುಗಳು 17:17-24

9, 10. (ಎ) ಲಾಜರನನ್ನು ಪುನರುತ್ಥಾನಗೊಳಿಸುವ ತನ್ನ ಶಕ್ತಿಗೆ ಕಾರಣನು ಯಾರೆಂಬುದನ್ನು ಯೇಸು ಹೇಗೆ ತಿಳಿಯಪಡಿಸಿದನು? (ಬಿ) ಪುನರುತ್ಥಾನದ ಕುರಿತಾದ ಬೈಬಲ್‌ ವೃತ್ತಾಂತಗಳನ್ನು ಓದುವುದರಿಂದ ಬರುವ ಕೆಲವು ಪ್ರಯೋಜನಗಳಾವುವು?

9 ಈ ಆಶ್ಚರ್ಯಕರವಾದ ಅದ್ಭುತವನ್ನು ತನ್ನ ಸ್ವಂತ ಶಕ್ತಿಯಿಂದ ನಡೆಸಿದೆನೆಂದು ಯೇಸು ಹೇಳಿಕೊಳ್ಳಲಿಲ್ಲ. ಲಾಜರನನ್ನು ಹೊರಗೆ ಕರೆಯುವ ಮೊದಲು ಅವನು ಮಾಡಿದ ಪ್ರಾರ್ಥನೆಯಲ್ಲಿ, ಯೆಹೋವನೇ ಆ ಪುನರುತ್ಥಾನಕ್ಕೆ ಕಾರಣನೆಂದು ಅವನು ಸ್ಪಷ್ಟಪಡಿಸಿದನು. (ಯೋಹಾನ 11:41, 42) ಯೆಹೋವನು ತನ್ನ ಶಕ್ತಿಯನ್ನು ಈ ವಿಧದಲ್ಲಿ ಉಪಯೋಗಿಸಿದ್ದು ಇದೊಂದೇ ಬಾರಿಯಾಗಿರಲಿಲ್ಲ. ಲಾಜರನ ಪುನರುತ್ಥಾನವು ದೇವರ ವಾಕ್ಯದಲ್ಲಿ ದಾಖಲೆಯಾಗಿರುವ ಒಂಬತ್ತು ಅದ್ಭುತಗಳಲ್ಲಿ ಕೇವಲ ಒಂದಾಗಿದೆ.a ಈ ವೃತ್ತಾಂತಗಳನ್ನು ಓದಿ ಅಧ್ಯಯನ ಮಾಡುವುದು ಹರ್ಷದಾಯಕವಾಗಿದೆ. ದೇವರು ಪಕ್ಷಪಾತಿಯಲ್ಲ ಎಂಬುದನ್ನು ಅವು ಕಲಿಸುತ್ತವೆ, ಏಕೆಂದರೆ ಹೀಗೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಹಿರಿಯರೂ ಕಿರಿಯರೂ, ಪುರುಷರೂ ಸ್ತ್ರೀಯರೂ, ಇಸ್ರಾಯೇಲ್ಯರೂ ಇಸ್ರಾಯೇಲ್ಯರಲ್ಲದವರೂ ಇದ್ದಾರೆ. ಮತ್ತು ಈ ವಚನಭಾಗಗಳಲ್ಲಿ ವರ್ಣಿಸಲಾಗಿರುವ ಸಂತೋಷವು ಅದೆಷ್ಟು ರೋಮಾಂಚಕ! ದೃಷ್ಟಾಂತಕ್ಕೆ, ಮೃತಪಟ್ಟಿದ್ದ ಎಳೆಯ ಹುಡುಗಿಯೊಬ್ಬಳನ್ನು ಯೇಸು ಎಬ್ಬಿಸಿದಾಗ, ಆಕೆಯ ಹೆತ್ತವರು “ಆಶ್ಚರ್ಯದಿಂದ ಬೆರಗಾದರು.” (ಮಾರ್ಕ 5:42, 43) ಹೌದು, ಯೆಹೋವನು ಅವರಿಗೆ, ಅವರೆಂದೂ ಮರೆಯಲಾಗದಂತಹ ರೀತಿಯಲ್ಲಿ ಹರ್ಷಿಸಲು ಕಾರಣವನ್ನು ಕೊಟ್ಟಿದ್ದನು.

ದೊರ್ಕಳನ್ನು ಪೇತ್ರ ಪುನರುತ್ಥಾನಗೊಳಿಸಿದನು

ಅಪೊಸ್ತಲ ಪೇತ್ರನು ದೊರ್ಕಳೆಂಬ ಕ್ರೈಸ್ತ ಮಹಿಳೆಯನ್ನು ಪುನರುತ್ಥಾನಗೊಳಿಸಿದನು.—ಅ. ಕೃತ್ಯಗಳು 9:36-42

10 ಯೇಸುವಿನಿಂದ ಪುನರುತ್ಥಾನಗೊಳಿಸಲ್ಪಟ್ಟವರು ಕಟ್ಟಕಡೆಗೆ ಪುನಃ ಸತ್ತರೆಂಬುದು ನಿಜ. ಹಾಗಾದರೆ ಅವರನ್ನು ಪುನರುತ್ಥಾನಗೊಳಿಸಿದ್ದು ನಿರರ್ಥಕವೆಂದು ಅರ್ಥವೊ? ನಿಶ್ಚಯವಾಗಿಯೂ ಇಲ್ಲ. ಈ ಬೈಬಲ್‌ ವೃತ್ತಾಂತಗಳು ಪ್ರಮುಖ ಸತ್ಯಗಳನ್ನು ದೃಢೀಕರಿಸಿ, ನಮಗೆ ನಿರೀಕ್ಷೆಯನ್ನು ನೀಡುತ್ತವೆ.

ಪುನರುತ್ಥಾನದ ವೃತ್ತಾಂತಗಳಿಂದ ಕಲಿತುಕೊಳ್ಳಬಹುದಾದ ವಿಷಯಗಳು

11. ಲಾಜರನ ಪುನರುತ್ಥಾನದ ಕುರಿತಾದ ವೃತ್ತಾಂತವು ಪ್ರಸಂಗಿ 9:5 ರಲ್ಲಿ ಹೇಳಿರುವ ಸತ್ಯವನ್ನು ಹೇಗೆ ದೃಢೀಕರಿಸುತ್ತದೆ?

11 ಮೃತರಿಗೆ “ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲು ಬೋಧಿಸುತ್ತದೆ. ಅವರು ಜೀವದಿಂದಿರುವುದಿಲ್ಲ ಮತ್ತು ಪ್ರಜ್ಞಾಪೂರ್ವಕ ಅಸ್ತಿತ್ವವನ್ನು ಎಲ್ಲಿಯೂ ಹೊಂದಿರುವುದಿಲ್ಲ. ಈ ಸಂಗತಿಯನ್ನು ಲಾಜರನ ಕುರಿತಾದ ವೃತ್ತಾಂತವು ದೃಢೀಕರಿಸುತ್ತದೆ. ಲಾಜರನು ಪುನಃ ಜೀವಿತನಾದಾಗ, ಸ್ವರ್ಗವು ಹೇಗಿತ್ತು ಎಂಬುದರ ಕುರಿತಾದ ವರ್ಣನೆಗಳಿಂದ ಅವನು ಜನರನ್ನು ರಂಜಿಸಿದನೊ? ಇಲ್ಲವೆ ಉರಿಯುತ್ತಿರುವ ನರಕದ ಕುರಿತು ಭಯಂಕರ ಕಥೆಗಳನ್ನು ಹೇಳಿ ಅವರನ್ನು ಹೆದರಿಸಿದನೊ? ಇಲ್ಲ. ಲಾಜರನು ಅಂತಹ ಮಾತುಗಳನ್ನಾಡಿದನೆಂದು ಬೈಬಲು ಹೇಳುವುದಿಲ್ಲ. ಅವನು ಸತ್ತುಹೋಗಿದ್ದ ಆ ನಾಲ್ಕು ದಿನಗಳಲ್ಲಿ ಅವನಿಗೆ ‘ಯಾವ ತಿಳುವಳಿಕೆಯೂ ಇರಲಿಲ್ಲ.’ (ಪ್ರಸಂಗಿ 9:5) ಲಾಜರನು ಮರಣದಲ್ಲಿ ಕೇವಲ ನಿದ್ರೆಹೋಗಿದ್ದನು, ಅಷ್ಟೆ.—ಯೋಹಾನ 11:11.

12. ಲಾಜರನ ಪುನರುತ್ಥಾನವು ನಿಜವಾಗಿಯೂ ಸಂಭವಿಸಿತೆಂದು ನಾವೇಕೆ ಖಾತ್ರಿಯಿಂದಿರಬಲ್ಲೆವು?

12 ಲಾಜರನ ಕುರಿತಾದ ವೃತ್ತಾಂತವು ಪುನರುತ್ಥಾನ ಕೇವಲ ಕಾಲ್ಪನಿಕ ಕಥೆಯಲ್ಲ, ಬದಲಿಗೆ ನೈಜವೆಂದು ನಮಗೆ ಕಲಿಸುತ್ತದೆ. ಲಾಜರನನ್ನು ಯೇಸು ಪ್ರತ್ಯಕ್ಷಸಾಕ್ಷಿಗಳಾಗಿದ್ದ ಒಂದು ಗುಂಪಿನ ಮುಂದೆ ಎಬ್ಬಿಸಿದನು. ಯೇಸುವನ್ನು ದ್ವೇಷಿಸುತ್ತಿದ್ದ ಧಾರ್ಮಿಕ ಮುಖಂಡರು ಸಹ ಈ ಅದ್ಭುತವನ್ನು ಅಲ್ಲಗಳೆಯಲಿಲ್ಲ. ಬದಲಿಗೆ, “ನಾವು ಮಾಡುವದು ಇದೇನು? ಈ ಮನುಷ್ಯನು [ಯೇಸು] ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ” ಎಂದರವರು. (ಯೋಹಾನ 11:47) ಅನೇಕ ಜನರು ಪುನರುತ್ಥಾನಗೊಂಡ ಲಾಜರನನ್ನು ನೋಡಲು ಹೋದರು. ಇದರಿಂದಾಗಿ ಇನ್ನೂ ಹೆಚ್ಚು ಜನರು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು. ಯೇಸು ದೇವರಿಂದ ಕಳುಹಿಸಲ್ಪಟ್ಟವನೆಂಬುದಕ್ಕೆ ಲಾಜರನು ಜೀವಂತ ಸಾಕ್ಷ್ಯವಾಗಿದ್ದನೆಂಬುದನ್ನು ಅವರು ಗ್ರಹಿಸಿದರು. ಈ ಪುರಾವೆಯು ಎಷ್ಟು ಪ್ರಬಲವಾದದ್ದಾಗಿತ್ತೆಂದರೆ, ಕಠಿನಹೃದಯದ ಕೆಲವು ಯೆಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ಮತ್ತು ಲಾಜರನನ್ನೂ ಕೊಲ್ಲಲು ಯೋಜಿಸಿದರು.—ಯೋಹಾನ 11:53; 12:9-11.

13. ಯೆಹೋವನು ಮೃತರನ್ನು ನಿಜವಾಗಿಯೂ ಪುನರುತ್ಥಾನಗೊಳಿಸಬಲ್ಲನೆಂದು ನಂಬುವುದಕ್ಕೆ ನಮಗೆ ಯಾವ ಆಧಾರವಿದೆ?

13 ಪುನರುತ್ಥಾನವನ್ನು ನಿಜತ್ವವೆಂದು ಅಂಗೀಕರಿಸುವುದು ಅವಾಸ್ತವಿಕವೊ? ಇಲ್ಲ, ಏಕೆಂದರೆ ಒಂದು ದಿನ “ಸ್ಮಾರಕ ಸಮಾಧಿಗಳಲ್ಲಿರುವವರೆಲ್ಲರೂ” (NW) ಪುನರುತ್ಥಾನ ಹೊಂದುವರೆಂದು ಯೇಸು ಬೋಧಿಸಿದನು. (ಯೋಹಾನ 5:28) ಯೆಹೋವನು ಸಕಲ ಜೀವರಾಶಿಯ ಸೃಷ್ಟಿಕರ್ತನು. ಹೀಗಿರುವಾಗ ಆತನು ಒಂದು ಜೀವಿಯನ್ನು ಪುನಃ ಸೃಷ್ಟಿಸಬಲ್ಲನೆಂಬ ಮಾತು ನಂಬಲು ಕಷ್ಟಕರವಾಗಿರಬೇಕೊ? ಇದು ಯೆಹೋವನ ಸ್ಮರಣಶಕ್ತಿಯ ಮೇಲೆ ಬಹಳಷ್ಟು ಹೊಂದಿಕೊಂಡಿದೆ ಎಂಬುದು ನಿಶ್ಚಯ. ಮೃತರಾಗಿರುವ ನಮ್ಮ ಪ್ರಿಯರನ್ನು ಆತನು ನೆನಪಿನಲ್ಲಿಡಬಲ್ಲನೊ? ವಿಶ್ವದಲ್ಲಿ ಅಸಂಖ್ಯಾತ ನಕ್ಷತ್ರಗಳಿವೆ ಆದರೆ ದೇವರು ಅವುಗಳಲ್ಲಿ ಪ್ರತಿಯೊಂದನ್ನು ಹೆಸರೆತ್ತಿ ಕರೆಯುತ್ತಾನೆ! (ಯೆಶಾಯ 40:26) ಆದಕಾರಣ ಯೆಹೋವ ದೇವರು ಮೃತರಾಗಿರುವ ನಮ್ಮ ಪ್ರಿಯಜನರ ಪ್ರತಿಯೊಂದೂ ವಿವರವನ್ನು ಕೂಲಂಕಷವಾಗಿ ನೆನಪಿಸಿಕೊಳ್ಳಬಲ್ಲನು ಮತ್ತು ಆತನು ಅವರನ್ನು ಪುನರುತ್ಥಾನಗೊಳಿಸಲು ಸಿದ್ಧನಾಗಿದ್ದಾನೆ.

14, 15. ಯೋಬನು ಏನು ಹೇಳಿದನೊ ಅದಕ್ಕನುಸಾರ, ಮೃತರನ್ನು ಪುನಃ ಜೀವಕ್ಕೆ ತರುವ ವಿಷಯದಲ್ಲಿ ಯೆಹೋವನಿಗೆ ಹೇಗನಿಸುತ್ತದೆ?

14 ಆದರೆ ಮೃತರನ್ನು ಪುನರುತ್ಥಾನಗೊಳಿಸುವುದರ ಕುರಿತು ಯೆಹೋವನಿಗೆ ಹೇಗನಿಸುತ್ತದೆ? ಆತನು ಮೃತಜನರನ್ನು ಜೀವಕ್ಕೆ ತರಲು ತವಕಿಸುತ್ತಿದ್ದಾನೆಂದು ಬೈಬಲು ತಿಳಿಸುತ್ತದೆ. ನಂಬಿಗಸ್ತ ಮನುಷ್ಯನಾಗಿದ್ದ ಯೋಬನು ಪ್ರಶ್ನಿಸಿದ್ದು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಯೋಬನು ಇಲ್ಲಿ, ದೇವರು ತನ್ನನ್ನು ಸ್ಮರಿಸುವ ಸಮಯವು ಬರುವ ತನಕ ಸಮಾಧಿಯಲ್ಲೇ ಕಾಯುವುದರ ಕುರಿತು ಮಾತಾಡುತ್ತಿದ್ದನು. ಅವನು ಯೆಹೋವನಿಗೆ ಹೇಳಿದ್ದು: “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.”—ಯೋಬ 14:13-15.

15 ತುಸು ಯೋಚಿಸಿ! ಮೃತರನ್ನು ಪುನಃ ಜೀವಕ್ಕೆ ತರಲು ಯೆಹೋವನು ನಿಜವಾಗಿಯೂ ಹಂಬಲಿಸುತ್ತಾನೆ. ಯೆಹೋವನಿಗೆ ಹಾಗನಿಸುತ್ತದೆಂದು ತಿಳಿಯುವುದು ಹೃದಯೋತ್ತೇಜಕವಲ್ಲವೊ? ಆದರೆ ಭವಿಷ್ಯತ್ತಿನಲ್ಲಿ ಸಂಭವಿಸುವ ಪುನರುತ್ಥಾನದ ಕುರಿತಾಗಿ ಏನು? ಯಾರಿಗೆ ಪುನರುತ್ಥಾನವಾಗುವುದು, ಮತ್ತು ಎಲ್ಲಿ?

‘ಸ್ಮಾರಕ ಸಮಾಧಿಗಳಲ್ಲಿರುವವರೆಲ್ಲರು’

16. ಮೃತರು ಯಾವ ರೀತಿಯ ಪರಿಸ್ಥಿತಿಗಳಲ್ಲಿ ಜೀವಿಸಲಿಕ್ಕಾಗಿ ಪುನರುತ್ಥಾನಗೊಳಿಸಲ್ಪಡುವರು?

16 ಬೈಬಲಿನಲ್ಲಿರುವ ಪುನರುತ್ಥಾನದ ಕುರಿತಾದ ವೃತ್ತಾಂತಗಳು ಮುಂದೆ ನಡೆಯಲಿರುವ ಪುನರುತ್ಥಾನದ ಕುರಿತು ನಮಗೆ ಬಹಳಷ್ಟನ್ನು ಬೋಧಿಸುತ್ತವೆ. ಇದೇ ಭೂಮಿಯಲ್ಲಿ ಜೀವಕ್ಕೆ ಪುನಸ್ಸ್ಥಾಪಿಸಲ್ಪಟ್ಟವರು, ತಮ್ಮ ಪ್ರಿಯರೊಂದಿಗೆ ಪುನರ್ಮಿಲನಗೊಂಡರು. ಭವಿಷ್ಯತ್ತಿನಲ್ಲಿ ನಡೆಯಲಿರುವ ಪುನರುತ್ಥಾನವೂ ಹಾಗೆಯೇ ಇರುವುದು, ಮತ್ತು ಅದಕ್ಕಿಂತಲೂ ಹೆಚ್ಚು ಉತ್ತಮವಾಗಿರುವುದು. ನಾವು 3ನೆಯ ಅಧ್ಯಾಯದಲ್ಲಿ ಕಲಿತಂತೆ, ಇಡೀ ಭೂಮಿಯು ಪರದೈಸಾಗಬೇಕೆಂಬುದು ದೇವರ ಉದ್ದೇಶವಾಗಿದೆ. ಆದುದರಿಂದ ಯುದ್ಧ, ಪಾತಕ ಮತ್ತು ರೋಗವೇ ಇಲ್ಲದಿರುವಂಥ ಲೋಕದಲ್ಲಿ ಜೀವಿಸಲಿಕ್ಕಾಗಿ ಮೃತರನ್ನು ಎಬ್ಬಿಸಲಾಗುವುದು. ಇದೇ ಭೂಮಿಯ ಮೇಲೆ ಶಾಂತಿ ಮತ್ತು ಸಂತೋಷಭರಿತ ಪರಿಸ್ಥಿತಿಗಳಲ್ಲಿ ಅನಂತಕಾಲ ಜೀವಿಸುವ ಅವಕಾಶ ಅವರಿಗಿರುವುದು.

17. ಪುನರುತ್ಥಾನವು ಎಷ್ಟು ವ್ಯಾಪಕವಾಗಿರುವುದು?

17 ಯಾರಿಗೆ ಪುನರುತ್ಥಾನವಾಗುವುದು? ಯೇಸು ಹೇಳಿದ್ದು: ‘[“ಸ್ಮಾರಕ,” NW] ಸಮಾಧಿಗಳಲ್ಲಿರುವವರೆಲ್ಲರೂ ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವರು.’ (ಯೋಹಾನ 5:28, 29) ಅದೇ ರೀತಿ, ಪ್ರಕಟನೆ 20:13 ಹೇಳುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” “ಹೇಡೀಸ್‌” ಎಂಬುದು ಮಾನವಕುಲಕ್ಕೆ ಸಾಮಾನ್ಯವಾಗಿರುವ ಸಮಾಧಿಯನ್ನು ಸೂಚಿಸುತ್ತದೆ. (ಪರಿಶಿಷ್ಟದ 212-13ನೇ ಪುಟಗಳನ್ನು ನೋಡಿರಿ.) ಈ ಸಾಮುದಾಯಿಕ ಸಮಾಧಿ ಬರಿದಾಗುವುದು. ಅಲ್ಲಿ ನಿದ್ರಿಸುತ್ತಿರುವ ಕೋಟಿಗಟ್ಟಲೆ ಜನರೆಲ್ಲರೂ ಪುನಃ ಜೀವಿಸುವರು. ಅಪೊಸ್ತಲ ಪೌಲನು ಹೇಳಿದ್ದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ (ಅ. ಕೃತ್ಯಗಳು 24:15) ಅದರ ಅರ್ಥವೇನು?

ಎಲ್ಲರು ತಮ್ಮ ಮೃತ ಪ್ರಿಯಜನರನ್ನು ಪರದೈಸಿನಲ್ಲಿ ಮತ್ತೆ ನೋಡಬಹುದು, ಸಮಾಧಿಗಳೆಲ್ಲ ಖಾಲಿಯಾಗುತ್ತವೆ

ಪರದೈಸಿನಲ್ಲಿ ಮೃತರು ಎಬ್ಬಿಸಲ್ಪಟ್ಟು ಅವರ ಪ್ರಿಯರೊಂದಿಗೆ ಪುನರ್ಮಿಲನಗೊಳ್ಳುವರು

18. ಪುನರುತ್ಥಾನ ಹೊಂದಲಿರುವ ‘ನೀತಿವಂತರಲ್ಲಿ’ ಯಾರು ಒಳಗೂಡಿದ್ದಾರೆ, ಮತ್ತು ಈ ನಿರೀಕ್ಷೆ ನಿಮ್ಮ ಮೇಲೆ ವ್ಯಕ್ತಿಪರವಾಗಿ ಹೇಗೆ ಪರಿಣಾಮ ಬೀರಬಹುದು?

18 ಈ ‘ನೀತಿವಂತರಲ್ಲಿ,’ ಯೇಸು ಭೂಮಿಗೆ ಬರುವುದಕ್ಕೆ ಮುಂಚೆ ಈ ಭೂಮಿಯ ಮೇಲೆ ಜೀವಿಸಿದರೆಂದು ನಾವು ಬೈಬಲಿನಲ್ಲಿ ಓದುವ ಅನೇಕರು ಸೇರಿರುತ್ತಾರೆ. ನೋಹ, ಅಬ್ರಹಾಮ, ಸಾರ, ಮೋಶೆ, ರೂತ್‌, ಎಸ್ತೇರ್‌ ಮತ್ತು ಇನ್ನೂ ಅನೇಕರ ಕುರಿತು ನೀವು ಯೋಚಿಸಬಹುದು. ಈ ಸ್ತ್ರೀಪುರುಷರಲ್ಲಿ ಕೆಲವರ ಬಗ್ಗೆ ಇಬ್ರಿಯ 11ನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಆದರೆ ಆ ‘ನೀತಿವಂತರಲ್ಲಿ’ ನಮ್ಮ ಸಮಯಗಳಲ್ಲಿ ಮರಣಪಡುವ ಯೆಹೋವನ ಸೇವಕರೂ ಒಳಗೂಡಿದ್ದಾರೆ. ಹೀಗೆ ಈ ಪುನರುತ್ಥಾನದ ನಿರೀಕ್ಷೆಯ ಕಾರಣ, ನಾವು ಮರಣಭಯದಿಂದ ಮುಕ್ತರಾಗಬಹುದು.—ಇಬ್ರಿಯ 2:15.

19. ‘ಅನೀತಿವಂತರು’ ಯಾರು, ಮತ್ತು ಅವರಿಗೆ ಯೆಹೋವನು ದಯೆಯಿಂದ ಯಾವ ಅವಕಾಶವನ್ನು ಕೊಡುತ್ತಾನೆ?

19 ಹಾಗಾದರೆ, ಯೆಹೋವನ ಕುರಿತು ಏನೂ ತಿಳಿಯದಿದ್ದ ಕಾರಣ ಆತನನ್ನು ಸೇವಿಸದಿದ್ದ ಅಥವಾ ಆತನಿಗೆ ವಿಧೇಯರಾಗದಿದ್ದ ಜನರೆಲ್ಲರ ಕುರಿತಾಗಿ ಏನು? ಈ ಕೋಟ್ಯಂತರ ಮಂದಿ ‘ಅನೀತಿವಂತರು’ ಮರೆಯಲ್ಪಡುವುದಿಲ್ಲ. ಅವರಿಗೂ ಪುನರುತ್ಥಾನವಾಗಿ, ಸತ್ಯದೇವರ ಕುರಿತು ಕಲಿಯಲು ಮತ್ತು ಆತನನ್ನು ಸೇವಿಸಲು ಸಮಯವನ್ನು ಕೊಡಲಾಗುವುದು. ಒಂದು ಸಾವಿರ ವರುಷಗಳ ಅವಧಿಯಲ್ಲಿ, ಮೃತರು ಪುನರುತ್ಥಾನ ಹೊಂದಿ, ಯೆಹೋವನನ್ನು ಸೇವಿಸುವುದರಲ್ಲಿ ಭೂಮಿಯ ಮೇಲಿರುವ ನಂಬಿಗಸ್ತರನ್ನು ಜೊತೆಗೂಡಲು ಅವರಿಗೆ ಒಂದು ಅವಕಾಶವನ್ನು ಕೊಡಲಾಗುವುದು. ಇದೊಂದು ಅದ್ಭುತಕರವಾದ ಸಮಯವಾಗಿರುವುದು. ಇದು ಬೈಬಲು ‘ನ್ಯಾಯವಿಚಾರಣೆಯ ದಿನ’ವೆಂದು ಸೂಚಿಸುವ ಅವಧಿಯಾಗಿದೆ.b

20. ಗೆಹೆನ್ನ ಅಂದರೇನು, ಮತ್ತು ಯಾರು ಅಲ್ಲಿಗೆ ಹೋಗುತ್ತಾರೆ?

20 ಹಾಗಾದರೆ, ಒಂದು ಸಮಯದಲ್ಲಿ ಜೀವದಿಂದಿದ್ದ ಪ್ರತಿಯೊಬ್ಬ ಮಾನವನಿಗೂ ಪುನರುತ್ಥಾನವಾಗುವುದೆಂದು ಇದರ ಅರ್ಥವೊ? ಇಲ್ಲ. ಏಕೆಂದರೆ ಮೃತರಲ್ಲಿ ಕೆಲವರು ಗೆಹೆನ್ನದಲ್ಲಿ ಇದ್ದಾರೆಂದು ಬೈಬಲು ಹೇಳುತ್ತದೆ ಮತ್ತು ಗೆಹೆನ್ನ ನಿತ್ಯನಾಶನವನ್ನು ಸೂಚಿಸುತ್ತದೆ. ಕನ್ನಡ ಬೈಬಲು ಲೂಕ 12:5 ರಲ್ಲಿ ಗೆಹೆನ್ನ ಎಂಬ ಪದವನ್ನು “ನರಕ” ಎಂದು ಭಾಷಾಂತರಿಸಿದೆ. ಗೆಹೆನ್ನ ಎಂಬ ಹೆಸರು, ಪುರಾತನ ಕಾಲದ ಯೆರೂಸಲೇಮಿನ ಹೊರಗಿದ್ದ ಕಸದ ತಿಪ್ಪೆಗಿದ್ದ ಹೆಸರಿನಿಂದ ಬಂದದ್ದಾಗಿದೆ. ಆ ತಿಪ್ಪೆಯಲ್ಲಿ ಶವಗಳನ್ನು ಮತ್ತು ಕಸವನ್ನು ಸುಡಲಾಗುತ್ತಿತ್ತು. ಅಲ್ಲಿ ಯಾರ ಶವಗಳನ್ನು ಎಸೆಯಲಾಗುತ್ತಿತ್ತೊ ಆ ಮೃತರನ್ನು ಹೂಣಿಡುವಿಕೆ ಮತ್ತು ಪುನರುತ್ಥಾನಕ್ಕೆ ಅನರ್ಹರೆಂದು ಯೆಹೂದ್ಯರು ಎಣಿಸುತ್ತಿದ್ದರು. ಆದುದರಿಂದ ಗೆಹೆನ್ನ ನಿತ್ಯನಾಶನಕ್ಕೆ ಸೂಕ್ತವಾದ ಸಂಕೇತವಾಗಿದೆ. ಜೀವಿತರಿಗೂ ಸತ್ತವರಿಗೂ ನ್ಯಾಯವಿಚಾರಣೆ ಮಾಡುವುದರಲ್ಲಿ ಯೇಸುವಿಗೆ ಒಂದು ಪಾತ್ರವಿರುತ್ತದಾದರೂ, ಯೆಹೋವನೇ ಅಂತಿಮ ನ್ಯಾಯಾಧೀಶನು. (ಅ. ಕೃತ್ಯಗಳು 10:42) ಆತನು ಯಾರನ್ನು ದುಷ್ಟರೆಂದೂ ಬದಲಾಗಲು ಇಷ್ಟಪಡದವರೆಂದೂ ತೀರ್ಮಾನಿಸುತ್ತಾನೊ ಅಂಥವರನ್ನು ಆತನು ಎಂದಿಗೂ ಪುನರುತ್ಥಾನಗೊಳಿಸನು.

ಸ್ವರ್ಗೀಯ ಪುನರುತ್ಥಾನ

21, 22. (ಎ) ಬೇರೆ ಯಾವ ವಿಧದ ಪುನರುತ್ಥಾನ ಇದೆ? (ಬಿ) ಆತ್ಮಜೀವನಕ್ಕಾಗಿ ಪುನರುತ್ಥಾನವನ್ನು ಪಡೆದವರಲ್ಲಿ ಪ್ರಥಮನು ಯಾರು?

21 ಬೈಬಲು ಇನ್ನೊಂದು ವಿಧದ ಪುನರುತ್ಥಾನಕ್ಕೂ ಸೂಚಿಸುತ್ತದೆ. ಇದು ಸ್ವರ್ಗೀಯ ಜೀವನಕ್ಕೆ ಆತ್ಮಜೀವಿಯಾಗಿ ಎಬ್ಬಿಸಲ್ಪಡುವ ಪುನರುತ್ಥಾನವಾಗಿದೆ. ಈ ಪುನರುತ್ಥಾನದ ಒಂದೇ ಒಂದು ದೃಷ್ಟಾಂತವನ್ನು ಬೈಬಲು ದಾಖಲೆ ಮಾಡಿದೆ. ಅದು ಯೇಸು ಕ್ರಿಸ್ತನ ಪುನರುತ್ಥಾನವೇ ಆಗಿದೆ.

22 ಯೇಸು ಮಾನವನಾಗಿ ಕೊಲ್ಲಲ್ಪಟ್ಟ ಬಳಿಕ, ಯೆಹೋವನು ತನ್ನ ನಂಬಿಗಸ್ತ ಕುಮಾರನು ಪಾತಾಳ ಇಲ್ಲವೆ ಸಮಾಧಿಯಲ್ಲಿಯೇ ಇರುವಂತೆ ಅನುಮತಿಸಲಿಲ್ಲ. (ಕೀರ್ತನೆ 16:10; ಅ. ಕೃತ್ಯಗಳು 13:34, 35) ದೇವರು ಯೇಸುವನ್ನು ಪುನರುತ್ಥಾನಗೊಳಿಸಿದನು, ಆದರೆ ಒಬ್ಬ ಮನುಷ್ಯನನ್ನಾಗಿ ಅಲ್ಲ. ಕ್ರಿಸ್ತನು “ಶರೀರಸಂಬಂಧದಲ್ಲಿ ಕೊಲ್ಲಲ್ಪಟ್ಟನು, ಆತ್ಮಸಂಬಂಧದಲ್ಲಿ ತಿರಿಗಿ ಬದುಕುವವನಾದನು” ಎಂದು ಅಪೊಸ್ತಲ ಪೇತ್ರನು ವಿವರಿಸುತ್ತಾನೆ. (1 ಪೇತ್ರ 3:18) ಇದು ನಿಜವಾಗಿಯೂ ಒಂದು ಮಹಾ ಅದ್ಭುತವಾಗಿತ್ತು. ಏಕೆಂದರೆ, ಯೇಸು ಪುನಃ ಶಕ್ತಿಶಾಲಿಯಾದ ಆತ್ಮವ್ಯಕ್ತಿಯಾಗಿ ಎಬ್ಬಿಸಲ್ಪಟ್ಟನು! (1 ಕೊರಿಂಥ 15:3-6) ಈ ಮಹಿಮಾಭರಿತ ಪುನರುತ್ಥಾನವನ್ನು ಪಡೆದವರಲ್ಲಿ ಯೇಸುವೇ ಪ್ರಪ್ರಥಮನು. (ಯೋಹಾನ 3:13) ಆದರೆ ಅವನೇ ಕೊನೆಯವನಾಗಿರನು.

23, 24. ಯೇಸುವಿನ ‘ಚಿಕ್ಕ ಹಿಂಡಿನಲ್ಲಿ’ ಯಾರಿದ್ದಾರೆ, ಮತ್ತು ಅವರ ಸಂಖ್ಯೆಯೆಷ್ಟು?

23 ತಾನು ಬೇಗನೆ ಸ್ವರ್ಗಕ್ಕೆ ಹಿಂದಿರುಗುವೆನೆಂದು ತಿಳಿದಿದ್ದ ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ, ಸ್ವರ್ಗದಲ್ಲಿ ಅವರಿಗಾಗಿ “ಸ್ಥಳವನ್ನು ಸಿದ್ಧ”ಮಾಡುವೆನೆಂದು ಹೇಳಿದನು. (ಯೋಹಾನ 14:2) ಸ್ವರ್ಗಕ್ಕೆ ಹೋಗಲಿದ್ದವರನ್ನು ಯೇಸು ‘ಚಿಕ್ಕ ಹಿಂಡು’ ಎಂದು ಕರೆದನು. (ಲೂಕ 12:32) ತುಲನಾತ್ಮಕವಾಗಿ ಚಿಕ್ಕದ್ದಾಗಿರುವ ಈ ನಂಬಿಗಸ್ತ ಕ್ರೈಸ್ತರ ಗುಂಪಿನಲ್ಲಿ ಎಷ್ಟು ಜನರಿರುತ್ತಾರೆ? ಪ್ರಕಟನೆ 14:1 ರಲ್ಲಿ ಅಪೊಸ್ತಲ ಯೋಹಾನನು ಹೇಳುವುದು: “ನಾನು ನೋಡಲಾಗಿ ಯಜ್ಞದ ಕುರಿಯಾದಾತನು [ಯೇಸು ಕ್ರಿಸ್ತನು] ಚೀಯೋನ್‌ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.”

24 ಯೇಸುವಿನ ನಂಬಿಗಸ್ತ ಅಪೊಸ್ತಲರು ಸೇರಿರುವ ಈ 1,44,000 ಮಂದಿ ಕ್ರೈಸ್ತರು ಸ್ವರ್ಗದಲ್ಲಿನ ಜೀವನಕ್ಕೆ ಎಬ್ಬಿಸಲ್ಪಡುತ್ತಾರೆ. ಅವರ ಪುನರುತ್ಥಾನ ಯಾವಾಗ ಸಂಭವಿಸುತ್ತದೆ? ಅದು ಕ್ರಿಸ್ತನ ಪ್ರತ್ಯಕ್ಷತೆಯ ಸಮಯದಲ್ಲಿ ಸಂಭವಿಸುವುದೆಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 15:23) ನಾವೀಗ ಆ ಸಮಯದಲ್ಲೇ ಜೀವಿಸುತ್ತಿದ್ದೇವೆಂದು ಅಧ್ಯಾಯ 9ರಲ್ಲಿ ನೀವು ಕಲಿಯಲಿದ್ದೀರಿ. ಆದುದರಿಂದ, ಆ 1,44,000 ಮಂದಿಯಲ್ಲಿ ಉಳಿದಿರುವ ಕೆಲವೇ ಜನರು ನಮ್ಮ ದಿನಗಳಲ್ಲಿ ಸಾಯುವಾಗ ಸ್ವರ್ಗದಲ್ಲಿನ ಜೀವನಕ್ಕಾಗಿ ಕ್ಷಣಮಾತ್ರದಲ್ಲಿ ಪುನರುತ್ಥಾನ ಹೊಂದುತ್ತಾರೆ. (1 ಕೊರಿಂಥ 15:51-55) ಆದರೆ ಮಾನವಕುಲದಲ್ಲಿ ಬಹುಸಂಖ್ಯಾತರಿಗೆ ಭೂಪರದೈಸಿನ ಜೀವನಕ್ಕಾಗಿ ಭವಿಷ್ಯತ್ತಿನಲ್ಲಿ ಪುನರುತ್ಥಾನ ಹೊಂದುವ ಪ್ರತೀಕ್ಷೆಯಿದೆ.

25. ಮುಂದಿನ ಅಧ್ಯಾಯದಲ್ಲಿ ಏನನ್ನು ಪರಿಗಣಿಸಲಾಗುವುದು?

25 ಹೌದು, ಯೆಹೋವನು ನಿಜವಾಗಿಯೂ ನಮ್ಮ ಶತ್ರುವಾದ ಮರಣವನ್ನು ಸೋಲಿಸುವನು ಮತ್ತು ಅದೆಂದಿಗೂ ಇಲ್ಲದೇ ಹೋಗುವುದು! (ಯೆಶಾಯ 25:8) ಆದರೂ ನೀವು ಇದನ್ನು ತಿಳಿಯಲು ಬಯಸಬಹುದು: ‘ಸ್ವರ್ಗದ ಜೀವನಕ್ಕೆ ಪುನರುತ್ಥಾನವಾಗುವವರು ಅಲ್ಲಿ ಏನು ಮಾಡುತ್ತಾರೆ?’ ಅವರು ಸ್ವರ್ಗದಲ್ಲಿನ ಆಶ್ಚರ್ಯಕರವಾದ ರಾಜ್ಯ ಸರಕಾರದ ಭಾಗವಾಗುವರು. ನಾವು ಮುಂದಿನ ಅಧ್ಯಾಯದಲ್ಲಿ ಆ ಸರಕಾರದ ಬಗ್ಗೆ ಇನ್ನೂ ಹೆಚ್ಚನ್ನು ಕಲಿಯುವೆವು.

a ಇತರ ವೃತ್ತಾಂತಗಳನ್ನು, 1 ಅರಸುಗಳು 17:17-24; 2 ಅರಸುಗಳು 4:32-37; 13:20, 21; ಮತ್ತಾಯ 28:5-7; ಲೂಕ 7:11-17; 8:40-56; ಅ. ಕೃತ್ಯಗಳು 9:36-42; ಮತ್ತು 20:7-12 ರಲ್ಲಿ ಕಂಡುಕೊಳ್ಳುವಿರಿ.

b ನ್ಯಾಯವಿಚಾರಣೆಯ ದಿನ ಮತ್ತು ತೀರ್ಪಿಗೆ ಆಧಾರವೇನಾಗಿರುವುದು ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಪರಿಶಿಷ್ಟದ 213-15ನೇ ಪುಟಗಳನ್ನು ನೋಡಿ.

ಬೈಬಲು ಹೀಗೆ ಬೋಧಿಸುತ್ತದೆ

  • ಬೈಬಲಿನ ಪುನರುತ್ಥಾನದ ವೃತ್ತಾಂತಗಳು ನಮಗೆ ನಿಶ್ಚಿತ ನಿರೀಕ್ಷೆಯನ್ನು ಕೊಡುತ್ತವೆ.—ಯೋಹಾನ 11:39-44.

  • ಮೃತರನ್ನು ಪುನಃ ಜೀವಂತಗೊಳಿಸಲು ಯೆಹೋವನು ಹಂಬಲಿಸುತ್ತಾನೆ.—ಯೋಬ 14:13-15.

  • ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿರುವವರೆಲ್ಲರೂ ಪುನರುತ್ಥಾನ ಹೊಂದುವರು.—ಯೋಹಾನ 5:28, 29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ