ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bt ಅಧ್ಯಾ. 7 ಪು. 52-59
  • “ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ
  • ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಚೆಲ್ಲಾಪಿಲ್ಲಿ ಆಗಿದ್ದ ಶಿಷ್ಯರು” (ಅ. ಕಾ. 8:4-8)
  • “ಈ ತರದ ಅಧಿಕಾರ ನನಗೂ ಕೊಡಿ” (ಅ. ಕಾ. 8:9-25)
  • “ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?” (ಅ. ಕಾ. 8:26-40)
  • ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ
    ಕಾವಲಿನಬುರುಜು—1999
  • ಫಿಲಿಪ್ಪನು ಐಥಿಯೋಪ್ಯದ ಒಬ್ಬ ಅಧಿಕಾರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ
    ಕಾವಲಿನಬುರುಜು—1996
  • ಪಯನೀಯರ್‌ ಆತ್ಮವನ್ನು ಪ್ರದರ್ಶಿಸಿರಿ
    2004 ನಮ್ಮ ರಾಜ್ಯದ ಸೇವೆ
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
bt ಅಧ್ಯಾ. 7 ಪು. 52-59

ಅಧ್ಯಾಯ 7

“ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ

ಸಿಹಿಸುದ್ದಿ ಸಾರೋದ್ರಲ್ಲಿ ಫಿಲಿಪ್ಪ ಇಟ್ಟ ಮಾದರಿ

ಆಧಾರ: ಅಪೊಸ್ತಲರ ಕಾರ್ಯ 8:4-40

1, 2. ಒಂದನೇ ಶತಮಾನದಲ್ಲಿ ಸಿಹಿಸುದ್ದಿ ಸಾರೋ ಕೆಲಸವನ್ನ ನಿಲ್ಲಿಸೋಕೆ ಮಾಡಿದ ಪ್ರಯತ್ನಗಳು ಹೇಗೆ ತಲೆಕೆಳಗಾದವು?

ಹಿಂಸೆ ಅನ್ನೋ ದೊಡ್ಡ ಅಲೆ ಕ್ರೈಸ್ತ ಸಭೆಗೆ ಅಪ್ಪಳಿಸ್ತು. ಸೌಲ ಸಭೆಗಳ ಮೇಲೆ “ದಾಳಿ ಮಾಡೋದನ್ನ” ಮುಂದುವರಿಸಿದ. ಆ ದಾಳಿ ಎಷ್ಟರ ಮಟ್ಟಿಗೆ ಇತ್ತು ಅಂತ “ದಾಳಿ” ಅನ್ನೋದಕ್ಕೆ ಮೂಲ ಭಾಷೆಯ ಪದದ ಅರ್ಥ ತಿಳ್ಕೊಳ್ಳೋದ್ರಿಂದ ಗೊತ್ತಾಗುತ್ತೆ. ಅದಕ್ಕೆ ಕ್ರೌರ್ಯ ಅನ್ನೋ ಅರ್ಥ ಇದೆ. (ಅ. ಕಾ. 8:3) ಈ ಹಿಂಸೆಯಿಂದಾಗಿ ಶಿಷ್ಯರು ಯೆರೂಸಲೇಮಿನಿಂದ ಓಡಿಹೋದ್ರು. ಆಗ ಇದನ್ನ ನೋಡಿದ ಕೆಲವ್ರಿಗೆ ಸೌಲ ಅಂದ್ಕೊಂಡ ಹಾಗೆ ಕ್ರೈಸ್ತಧರ್ಮವನ್ನ ಅಳಿಸಿಹಾಕಿಬಿಡ್ತಾನೇನೋ ಅಂತ ಅನಿಸಿರಬೇಕು. ಆದ್ರೆ ಕ್ರೈಸ್ತರು ಚೆಲ್ಲಾಪಿಲ್ಲಿಯಾಗಿದ್ರಿಂದ ಅವರು ನೆನಸದೇ ಇದ್ದ ಒಂದು ವಿಷ್ಯ ನಡೀತು. ಅದೇನು?

2 ಚೆಲ್ಲಾಪಿಲ್ಲಿಯಾದ ಕ್ರೈಸ್ತರು ಹೋದಲೆಲ್ಲಾ “ಸಿಹಿಸುದ್ದಿ ಹೇಳ್ತಾ ಇದ್ರು.” (ಅ. ಕಾ. 8:4) ಇದನ್ನ ಕೇಳಿದಾಗ ನಮಗೆ ಆಶ್ಚರ್ಯ ಆಗುತ್ತೆ. ಯಾಕಂದ್ರೆ ಹಿಂಸೆಯಿಂದಾಗಿ ಸಿಹಿಸುದ್ದಿ ಸಾರೋ ಕೆಲಸ ನಿಂತುಹೋಗಬೇಕಿತ್ತು. ಆದ್ರೆ ಅದ್ರ ಬದಲು ಸಿಹಿಸುದ್ದಿ ಇನ್ನಷ್ಟು ಹಬ್ತಾ ಹೋಯ್ತು! ಹಿಂಸೆ ಕೊಡ್ತಿದ್ದವರು ಶಿಷ್ಯರನ್ನ ಚೆಲ್ಲಾಪಿಲ್ಲಿ ಮಾಡಿ ತಮಗೇ ಗೊತ್ತಿಲ್ಲದೆ ಸಿಹಿಸುದ್ದಿ ದೂರದೂರದ ಜಾಗಗಳಿಗೆ ತಲುಪೋ ತರ ಮಾಡಿದ್ರು! ಅದು ಹೇಗೆ ಅಂತ ನೋಡೋಣ. ಜೊತೆಗೆ ನಮ್ಮ ಕಾಲದಲ್ಲೂ ಇದೇ ತರ ಏನಾಯ್ತು ಅಂತನೂ ನೋಡೋಣ.

“ಚೆಲ್ಲಾಪಿಲ್ಲಿ ಆಗಿದ್ದ ಶಿಷ್ಯರು” (ಅ. ಕಾ. 8:4-8)

3. (ಎ) ಫಿಲಿಪ್ಪ ಯಾರು? (ಬಿ) ಸಮಾರ್ಯದಲ್ಲಿದ್ದ ಹೆಚ್ಚಿನ ಜನ್ರಿಗೆ ಸಿಹಿಸುದ್ದಿ ಕೇಳೋ ಅವಕಾಶ ಯಾಕೆ ಸಿಕ್ಕಿರಲಿಲ್ಲ? (ಸಿ) ಆದ್ರೂ ಅಲ್ಲಿ ಏನಾಗುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು?

3 ‘ಚೆಲ್ಲಾಪಿಲ್ಲಿ ಆಗಿದ್ದ ಶಿಷ್ಯರಲ್ಲಿ’ ಫಿಲಿಪ್ಪ ಕೂಡ ಒಬ್ಬನಾಗಿದ್ದ.a (ಅ. ಕಾ. 8:4; “‘ಸಿಹಿಸುದ್ದಿ ಸಾರುವವನಾಗಿದ್ದ’ ಫಿಲಿಪ್ಪ” ಅನ್ನೋ ಚೌಕ ನೋಡಿ.) ಅವನು ಹೆಚ್ಚಿನ ಜನ್ರಿಗೆ ಸಿಹಿಸುದ್ದಿ ಕೇಳೋ ಅವಕಾಶ ಸಿಕ್ಕಿರದ ಸಮಾರ್ಯಕ್ಕೆ ಹೋದ. ಯಾಕಂದ್ರೆ ಯೇಸು ಹಿಂದೆ ಒಂದುಸಲ ತನ್ನ ಅಪೊಸ್ತಲರಿಗೆ, “ಸಮಾರ್ಯದ ಯಾವ ಪಟ್ಟಣಕ್ಕೂ ಕಾಲಿಡಬೇಡಿ. ಅದ್ರ ಬದಲು ತಪ್ಪಿಹೋದ ಕುರಿಗಳ ತರ ಇರೋ ಇಸ್ರಾಯೇಲ್‌ ಜನ್ರ ಹತ್ರ ಮಾತ್ರ ಹೋಗಿ” ಅಂತ ಹೇಳಿದ್ದನು. (ಮತ್ತಾ. 10:5, 6) ಆದ್ರೆ ಮುಂದೆ ಒಂದಿನ ಸಮಾರ್ಯದ ಎಲ್ಲಾ ಜನ್ರಿಗೂ ಸಿಹಿಸುದ್ದಿ ಕೇಳೋ ಅವಕಾಶ ಸಿಗುತ್ತೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ಆತನು ಸ್ವರ್ಗಕ್ಕೆ ಹೋಗೋ ಮುಂಚೆ ಹೀಗೇ ಹೇಳಿದನು: “ನೀವು ಯೆರೂಸಲೇಮ್‌, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ.”—ಅ. ಕಾ. 1:8.

4. (ಎ) ಫಿಲಿಪ್ಪ ಸಾರಿದಾಗ ಸಮಾರ್ಯದವರು ಹೇಗೆ ನಡ್ಕೊಂಡ್ರು? (ಬಿ) ಸಮಾರ್ಯದವರು ಹಾಗೆ ನಡ್ಕೊಳ್ಳೋಕೆ ಒಂದು ಕಾರಣ ಏನು?

4 ಸಮಾರ್ಯ ‘ಕೊಯ್ಲಿಗೆ ಸಿದ್ಧವಾಗಿದೆ’ ಅಂತ ಫಿಲಿಪ್ಪನಿಗೆ ಗೊತ್ತಾಯ್ತು. (ಯೋಹಾ. 4:35) ಅವನು ಹೇಳೋ ಮಾತು ಅಲ್ಲಿದ್ದ ಜನ್ರಿಗೆ ತಂಗಾಳಿ ತರ ಚೈತನ್ಯ ಕೊಡ್ತಿತ್ತು. ಯಾಕೆ? ಯಾಕಂದ್ರೆ ಯೆಹೂದ್ಯರಿಗೆ ಸಮಾರ್ಯದವರನ್ನ ಕಂಡ್ರೆ ಆಗ್ತಿರಲಿಲ್ಲ, ಅವ್ರನ್ನ ಕೀಳಾಗಿ ನೋಡ್ತಿದ್ರು, ಅವ್ರ ಜೊತೆ ಸಹವಾಸನೂ ಮಾಡ್ತಿರಲಿಲ್ಲ. ಫರಿಸಾಯರು ಸಣ್ಣಬುದ್ಧಿ ತೋರಿಸ್ತಾ ಭೇದಭಾವ ಮಾಡ್ತಿದ್ರು. ಆದ್ರೆ ಫಿಲಿಪ್ಪ ಅವ್ರಿಗೆ ಹಾಗೆ ಮಾಡಲಿಲ್ಲ, ಅವ್ರಿಗೆ ಹುರುಪಿಂದ ಸಾರಿದ. ಇದ್ರಿಂದ ಅವ್ರಿಗೆ ನಿರೀಕ್ಷೆ ಸಿಕ್ತು. ಅದಕ್ಕೆ ಸಮಾರ್ಯದ ಜನ ಫಿಲಿಪ್ಪನ ಮಾತನ್ನ ಗುಂಪುಗುಂಪಾಗಿ ಬಂದು “ಮನಸಾರೆ” ಕೇಳಿದ್ರು.—ಅ. ಕಾ. 8:6.

5-7. ಕ್ರೈಸ್ತರು ಚೆಲ್ಲಾಪಿಲ್ಲಿಯಾದ್ರೂ ಸಿಹಿಸುದ್ದಿ ಬೇರೆ ಬೇರೆ ಕಡೆ ಹಬ್ಬಿದೆ ಅನ್ನೋದಕ್ಕೆ ಉದಾಹರಣೆ ಕೊಡಿ.

5 ಇವತ್ತು ದೇವಜನರಿಗೆ ಕೂಡ ವಿರೋಧಿಗಳು ತುಂಬಾ ಹಿಂಸೆ ಕೊಡ್ತಾ ಸಾರೋ ಕೆಲಸನ ನಿಲ್ಲಿಸೋಕೆ ಪ್ರಯತ್ನಿಸ್ತಿದ್ದಾರೆ. ಅದಕ್ಕಾಗಿ ಕ್ರೈಸ್ತರನ್ನ ಜೈಲಿಗೆ ಹಾಕಿದ್ದಾರೆ ಅಥವಾ ಬಲವಂತವಾಗಿ ಬೇರೆ ದೇಶಕ್ಕೆ ಕಳಿಸಿದ್ದಾರೆ. ಇದ್ರಿಂದ ಸಾರೋ ಕೆಲ್ಸ ನಿಂತು ಹೋಗಿಲ್ಲ, ಅವ್ರು ಹೋದ ಜಾಗದಲ್ಲೆಲ್ಲಾ ಹಬ್ಬೋಕೆ ಶುರು ಆಯ್ತು! ಉದಾಹರಣೆಗೆ, ಎರಡನೇ ಮಹಾ ಯುದ್ಧದ ಸಮಯದಲ್ಲಿ ನಾಜ಼ಿ ಸೆರೆಶಿಬಿರಗಳಲ್ಲಿದ್ದ ಯೆಹೋವನ ಸಾಕ್ಷಿಗಳು ಅಲ್ಲಿದ್ದ ಬೇರೆಯವ್ರಿಗೆ ಸಾಕ್ಷಿಕೊಟ್ರು. ಆ ಶಿಬಿರಗಳಲ್ಲಿ ಸಾಕ್ಷಿಗಳನ್ನ ಭೇಟಿಯಾದ ಒಬ್ಬ ಯೆಹೂದಿ ವ್ಯಕ್ತಿ ಹೀಗಂದ: “ಯೆಹೋವನ ಸಾಕ್ಷಿಗಳಾಗಿದ್ದ ಸೆರೆವಾಸಿಗಳ ಧೈರ್ಯ ನೋಡಿ ಅವರ ನಂಬಿಕೆ ಪವಿತ್ರಗ್ರಂಥದ ಮೇಲೆ ಆಧಾರಿತವಾಗಿದೆ ಅಂತ ನಂಗೆ ಗೊತ್ತಾಯ್ತು. ಅದಕ್ಕೆ ನಾನೂ ಒಬ್ಬ ಸಾಕ್ಷಿಯಾದೆ.”

6 ಇನ್ನೂ ಕೆಲ್ವು ಸಲ ಹಿಂಸೆ ಕೊಟ್ಟವರೇ ಆಮೇಲೆ ಸತ್ಯ ಕಲ್ತಿದ್ದಾರೆ. ಉದಾಹರಣೆಗೆ, ಫ್ರಾಂಟ್ಸ್‌ ಡೆಷ್‌ ಅನ್ನೋ ಸಹೋದರನನ್ನ ಆಸ್ಟ್ರಿಯದ ಗುಸೇನ್‌ ಸೆರೆಶಿಬಿರಕ್ಕೆ ಹಾಕಿದ್ರು. ಅಲ್ಲಿ ಅವರು ಒಬ್ಬ ನಾಜ಼ಿ ಪೊಲೀಸ್‌ ಅಧಿಕಾರಿಗೆ ಬೈಬಲ್‌ ಅಧ್ಯಯನ ಮಾಡಿದ್ರು. ತುಂಬಾ ವರ್ಷಗಳಾದ ಮೇಲೆ ಆ ಅಧಿಕಾರಿಯನ್ನ ಒಂದು ಅಧಿವೇಶನದಲ್ಲಿ ಭೇಟಿಯಾದ್ರು. ಆಗ ಅವ್ರೂ ಒಬ್ಬ ಸಾಕ್ಷಿಯಾಗಿ ಸಿಹಿಸುದ್ದಿ ಸಾರ್ತಿದ್ದಾರೆ ಅಂತ ಗೊತ್ತಾಯ್ತು. ಆಗ ಸಹೋದರ ಡೆಷ್‌ಗೆ ಎಷ್ಟು ಖುಷಿ ಆಗಿರಬೇಕಲ್ವಾ?

7 ಹಿಂಸೆ ಬಂದಾಗ ಕ್ರೈಸ್ತರು ಒಂದು ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಓಡಿಹೋದಾಗ್ಲೂ ಇಂಥದ್ದೇ ಘಟನೆ ನಡೀತು. ಉದಾಹರಣೆಗೆ, 50 ವರ್ಷಗಳ ಹಿಂದೆ ಮಲಾವಿ ದೇಶದ ಸಾಕ್ಷಿಗಳು ಹಿಂಸೆ ಕಾರಣ ಮೊಸಾಂಬೀಕ್‌ ದೇಶಕ್ಕೆ ಓಡಿ ಹೋಗಬೇಕಾದ ಪರಿಸ್ಥಿತಿ ಬಂತು. ಆಗ ಅವರು ಮೊಸಾಂಬೀಕ್‌ ದೇಶದಲ್ಲಿ ತುಂಬ ಜನ್ರಿಗೆ ಸಾರಿದ್ರು. ಆಮೇಲೆ ಅಲ್ಲಿನೂ ವಿರೋಧ ಶುರುವಾಯ್ತು. ಹಾಗಿದ್ರೂ ಸಾರೋ ಕೆಲಸವನ್ನ ಅವರು ಬಿಟ್ಟುಬಿಡಲಿಲ್ಲ. ಇದ್ರ ಬಗ್ಗೆ ಫ್ರಾನ್ಸಿಸ್ಕೊ ಕೊಆನಾ ಹೇಳಿದ್ದು: “ಸಿಹಿಸುದ್ದಿ ಸಾರಿದಕ್ಕೆ ನಮ್ಮಲ್ಲಿ ಕೆಲವರನ್ನ ಎಷ್ಟೋ ಸಲ ಅರೆಸ್ಟ್‌ ಮಾಡಿದ್ರು. ಹಾಗಿದ್ರೂ ತುಂಬಾ ಜನ ಸಿಹಿಸುದ್ದಿ ಕೇಳಿಸ್ಕೊಂಡ್ರು. ಅದನ್ನ ನೋಡಿದಾಗ, ದೇವರು ಒಂದನೇ ಶತಮಾನದ ಕ್ರೈಸ್ತರಿಗೆ ಸಹಾಯ ಮಾಡಿದ ತರನೇ ನಮ್ಗೂ ಸಹಾಯ ಮಾಡ್ತಿದ್ದಾನೆ ಅನ್ನೋ ಭರವಸೆ ಜಾಸ್ತಿ ಆಯ್ತು.”

8. ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಸಾರೋ ಕೆಲಸದ ಮೇಲೆ ಯಾವ ಪರಿಣಾಮ ಬೀರಿದೆ?

8 ಸಿಹಿಸುದ್ದಿ ಬೇರೆ ದೇಶಗಳಿಗೆ ಹಬ್ಬೋದಕ್ಕೆ ಕ್ರೈಸ್ತರ ಮೇಲೆ ಬಂದ ಹಿಂಸೆಯೊಂದೇ ಕಾರಣ ಅಲ್ಲ. ಇತ್ತೀಚಿನ ದಶಕಗಳಲ್ಲಿ ಆಗಿರೋ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳೂ ಸಿಹಿಸುದ್ದಿ ತುಂಬ ಭಾಷೆ ಮತ್ತು ದೇಶಗಳ ಜನ್ರಿಗೆ ಹಬ್ಬಿಸೋಕೆ ದಾರಿಮಾಡ್ಕೊಟ್ಟಿದೆ. ಯುದ್ಧ ಮತ್ತು ಬಡತನ ಹೆಚ್ಚಾಗಿರೋ ಜಾಗಗಳಿಂದ ಜನ್ರು ಓಡಿಹೋಗಿ ಕಡಿಮೆ ಸಮಸ್ಯೆಗಳಿರೋ ದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರು ಬೈಬಲ್‌ ಅಧ್ಯಯನ ಮಾಡೋಕೆ ಶುರುಮಾಡಿದ್ದಾರೆ. ನಿರಾಶ್ರಿತರು ಹಿಂಡುಹಿಂಡಾಗಿ ಬರ್ತಾ ಇರೋದ್ರಿಂದ ಬೇರೆ ಭಾಷೆಯ ಹೊಸಹೊಸ ಕ್ಷೇತ್ರಗಳು ಹುಟ್ಕೊಳ್ತಿವೆ. ನಿಮ್ಮ ಸೇವಾಕ್ಷೇತ್ರದಲ್ಲಿರೋ ‘ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯ’ ಜನ್ರಿಗೆ ಸಾಕ್ಷಿಕೊಡೋಕೆ ಪ್ರಯತ್ನ ಮಾಡ್ತಾ ಇದ್ದೀರಾ?—ಪ್ರಕ. 7:9.

“ಈ ತರದ ಅಧಿಕಾರ ನನಗೂ ಕೊಡಿ” (ಅ. ಕಾ. 8:9-25)

ಮುಂಚೆ ಮಾಟಮಂತ್ರ ಮಾಡ್ತಿದ್ದ ಸೀಮೋನ ಒಬ್ಬ ಅಪೊಸ್ತಲನ ಹತ್ರ ಹಣದ ಚೀಲ ಹಿಡ್ಕೊಂಡು ಬಂದಿದ್ದಾನೆ. ಆ ಅಪೊಸ್ತಲ ಒಬ್ಬ ಕ್ರೈಸ್ತನ ಹೆಗಲ ಮೇಲೆ ಕೈ ಇಟ್ಟಿದ್ದಾನೆ. ಇವ್ರ ಹಿಂದೆ ಇನ್ನೊಬ್ಬ ಕ್ರೈಸ್ತ ಕಾಲು ಬರದೆ ಇದ್ದ ಒಬ್ಬ ಹುಡುಗಿಯನ್ನ ವಾಸಿ ಮಾಡ್ತಿದ್ದಾನೆ. ಅದನ್ನ ನೋಡಿ ಜನ್ರೆಲ್ಲ ಖುಷಿಪಡ್ತಿದ್ದಾರೆ.

‘ಅಪೊಸ್ತಲರು ಯಾರ ಮೇಲೆಲ್ಲ ಕೈ ಇಟ್ರೋ ಅವ್ರಿಗೆಲ್ಲ ಪವಿತ್ರಶಕ್ತಿ ಸಿಗೋದನ್ನ ಸೀಮೋನ ನೋಡಿದ. ಆಗ ಅವನು ಅಪೊಸ್ತಲರಿಗೆ ಹಣ ಕೊಡೋಕೆ ಬಂದ.’—ಅಪೊಸ್ತಲರ ಕಾರ್ಯ 8:18

9. (ಎ) ಸೀಮೋನ ಯಾರು? (ಬಿ) ಫಿಲಿಪ್ಪ ಮಾಡಿದ ಯಾವ ಕೆಲಸ ನೋಡಿ ಅವನು ಪ್ರಭಾವಿತನಾದ?

9 ಫಿಲಿಪ್ಪ ಸಮಾರ್ಯದಲ್ಲಿದ್ದಾಗ ತುಂಬ ಅದ್ಭುತಗಳನ್ನ ಮಾಡಿದ. ಉದಾಹರಣೆಗೆ, ಅಂಗವಿಕಲರನ್ನ ವಾಸಿಮಾಡಿದ ಮತ್ತು ಕೆಟ್ಟ ದೇವದೂತರನ್ನೂ ಬಿಡಿಸಿದ. (ಅ. ಕಾ. 8:6-8) ಈ ವಿಷ್ಯ ಸೀಮೋನ ಅನ್ನೋ ವ್ಯಕ್ತಿಗೆ ಗೊತ್ತಾಯ್ತು. ಅವನೊಬ್ಬ ಮಾಂತ್ರಿಕನಾಗಿದ್ದ. ಅವನಿಗೆ ಜನರು ಎಷ್ಟು ಗೌರವ ಕೊಡ್ತಿದ್ರು ಅಂದ್ರೆ ಅವನಲ್ಲಿ “ದೇವ್ರ ಶಕ್ತಿನೇ ಇರಬೇಕು” ಅಂತ ಹೇಳ್ತಿದ್ರು. ಆದ್ರೆ ಇವನು ಫಿಲಿಪ್ಪ ಮಾಡ್ತಿದ್ದ ಅದ್ಭುತಗಳನ್ನ ಕಣ್ಣಾರೆ ನೋಡಿದಾಗ ಫಿಲಿಪ್ಪ ದೇವರ ನಿಜವಾದ ಶಕ್ತಿಯಿಂದ ಇದನ್ನ ಮಾಡ್ತಿದ್ದಾನೆ ಅಂತ ಗೊತ್ತಾಯ್ತು. ಆಗ ಅವನು ದೀಕ್ಷಾಸ್ನಾನ ಮಾಡಿಸ್ಕೊಂಡ. (ಅ. ಕಾ. 8:9-13) ಆದ್ರೆ ಮುಂದೆ ಅವನು ದೀಕ್ಷಾಸ್ನಾನ ಮಾಡಿಸ್ಕೊಂಡಿದ್ದರ ನಿಜವಾದ ಉದ್ದೇಶ ಬಯಲಾಯ್ತು. ಹೇಗೆ ಅಂತ ನೋಡೋಣ.

10. (ಎ) ಪೇತ್ರ ಮತ್ತು ಯೋಹಾನ ಸಮಾರ್ಯದಲ್ಲಿ ಏನು ಮಾಡಿದ್ರು? (ಬಿ) ಪೇತ್ರ ಮತ್ತು ಯೋಹಾನ ಹೊಸ ಶಿಷ್ಯರ ಮೇಲೆ ಕೈಯಿಟ್ಟಾಗ ಅವ್ರಿಗೆ ಪವಿತ್ರಶಕ್ತಿ ಸಿಗೋದನ್ನ ನೋಡಿ ಸೀಮೋನ ಏನು ಮಾಡಿದ?

10 ಸಮಾರ್ಯದಲ್ಲಿ ಆಗ್ತಿರೋ ಅಭಿವೃದ್ಧಿ ಬಗ್ಗೆ ಗೊತ್ತಾದಾಗ ಅಪೊಸ್ತಲರು ಪೇತ್ರ ಮತ್ತು ಯೋಹಾನನನ್ನ ಅಲ್ಲಿಗೆ ಕಳಿಸಿದ್ರು. (“ಪೇತ್ರ ‘ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ’ ಬಳಸಿದ ವಿಧ” ಅನ್ನೋ ಚೌಕ ನೋಡಿ.) ಅಲ್ಲಿ ತಲುಪಿದ ಆ ಇಬ್ರು ಅಪೊಸ್ತಲರು ಹೊಸ ಶಿಷ್ಯರ ಮೇಲೆ ಕೈಯಿಟ್ಟಾಗ ಅವ್ರಲ್ಲಿ ಒಬ್ಬೊಬ್ರೂ ಪವಿತ್ರಶಕ್ತಿ ಪಡ್ಕೊಂಡ್ರು.b ಇದನ್ನ ನೋಡಿ ಸೀಮೋನನಿಗೆ ತುಂಬ ಆಶ್ಚರ್ಯ ಆಯ್ತು. “ಈ ತರದ ಅಧಿಕಾರ ನನಗೂ ಕೊಡಿ. ನಾನು ಸಹ ಯಾರ ಮೇಲೆಲ್ಲ ಕೈ ಇಡ್ತೀನೋ ಅವ್ರಿಗೆಲ್ಲ ಪವಿತ್ರಶಕ್ತಿ ಸಿಗಬೇಕು” ಅಂತ ಅಪೊಸ್ತಲರಿಗೆ ಹೇಳಿದ. ಈ ಪವಿತ್ರ ಸುಯೋಗವನ್ನ ಖರೀದಿಸಬಹುದು ಅಂತ ನೆನಸಿ ಅವ್ರಿಗೆ ಹಣನೂ ಕೊಡೋಕೆ ಹೋದ!—ಅ. ಕಾ. 8:14-19.

11. (ಎ) ಪೇತ್ರ ಸೀಮೋನನಿಗೆ ಯಾವ ಬುದ್ಧಿವಾದ ಕೊಟ್ಟ? (ಬಿ) ಸೀಮೋನನ ಪ್ರತಿಕ್ರಿಯೆ ಏನಾಗಿತ್ತು?

11 ಪೇತ್ರ ಆಗ ಸೀಮೋನನಿಗೆ ಖಡಾಖಂಡಿತವಾಗಿ ಹೀಗಂದ: “ನಿನ್ನ ಹಣ ನಿನ್ನ ಜೊತೆನೇ ನಾಶವಾಗಿ ಹೋಗಲಿ. ಯಾಕಂದ್ರೆ ದೇವರು ಕೊಡೋ ಉಚಿತ ವರವನ್ನ ನೀನು ಹಣದಿಂದ ಕೊಂಡ್ಕೊಳ್ಳಬೇಕು ಅಂದ್ಕೊಂಡೆ. ನಿನಗೆ ಈ ಅಧಿಕಾರ ಸಿಗೋದಿಲ್ಲ. ಯಾಕಂದ್ರೆ ನಿನ್ನ ಮನಸ್ಸು ದೇವ್ರ ದೃಷ್ಟಿಯಲ್ಲಿ ಸರಿಯಾಗಿಲ್ಲ.” ಆಮೇಲೆ ಪೇತ್ರ ಸೀಮೋನನಿಗೆ, ಪಶ್ಚಾತ್ತಾಪಪಟ್ಟು ಕ್ಷಮೆಗಾಗಿ ಪ್ರಾರ್ಥಿಸೋಕೆ ಹೇಳಿದ. “ನಿನ್ನ ಮನಸ್ಸಲ್ಲಿ ಇಂಥ ಒಂದು ಕೆಟ್ಟ ಯೋಚನೆ ಬಂದಿರೋದಕ್ಕೆ ಕ್ಷಮಿಸು ಅಂತ ಯೆಹೋವನ ಹತ್ರ ಅಂಗಲಾಚಿ ಬೇಡ್ಕೊ” ಅಂದ. ಸೀಮೋನ ಕೆಟ್ಟವನಾಗಿರಲಿಲ್ಲ. ಸರಿಯಾದದ್ದನ್ನೇ ಮಾಡೋ ಮನಸ್ಸು ಅವನಿಗಿತ್ತು, ಆದ್ರೆ ಸ್ವಲ್ಪ ಸಮಯಕ್ಕೆ ಅವನು ದಾರಿತಪ್ಪಿದ್ದ ಅಷ್ಟೇ. ಹಾಗಾಗಿ ಅವನು “ನೀವು ನನಗೆ ಹೇಳಿದ ಹಾಗೆ ನಾನು ನಾಶವಾಗಿ ಹೋಗಬಾರದು. ಹಾಗಾಗಿ ದಯವಿಟ್ಟು ನನ್ನ ಪರವಾಗಿ ಯೆಹೋವನ ಹತ್ರ ಬೇಡ್ಕೊಳ್ಳಿ” ಅಂತ ಅಪೊಸ್ತಲರ ಹತ್ರ ಕೇಳ್ಕೊಂಡ.—ಅ. ಕಾ. 8:20-24.

12. ಚರ್ಚುಗಳಲ್ಲಿ ಸ್ಥಾನಮಾನಗಳ ಖರೀದಿ, ಮಾರಾಟ ಎಷ್ಟು ಸಾಮಾನ್ಯವಾಗಿದೆ?

12 ಪೇತ್ರ ಸೀಮೋನನಿಗೆ ಕೊಟ್ಟ ಬುದ್ಧಿವಾದ ಇವತ್ತಿನ ಕ್ರೈಸ್ತರಿಗೆ ಒಂದು ಎಚ್ಚರಿಕೆಯಾಗಿದೆ. ಸಭೆಯಲ್ಲಿ ಸ್ಥಾನಮಾನಗಳ ಖರೀದಿ ಅಥವಾ ಮಾರಾಟ ಮಾಡಬಾರದು ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. ಆದ್ರೆ ಕ್ರೈಸ್ತರು ಅಂತ ಹೇಳ್ಕೊಳ್ಳೋ ಧರ್ಮಭ್ರಷ್ಟರು ಈ ಮುಂಚೆಯಿಂದಾನೂ ಇದೇ ತರ ಮಾಡ್ಕೊಂಡು ಬಂದಿದ್ದಾರೆ. ದ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕಾ (1878) ಅನ್ನೋ ವಿಶ್ವಕೋಶದ ಒಂಬತ್ತನೇ ಆವೃತ್ತಿಯಲ್ಲಿ ಹೀಗಿದೆ: “ಪೋಪ್‌ ಚುನಾವಣಾ ಸಭೆಗಳ ಚರಿತ್ರೆಯನ್ನ ಅಧ್ಯಯನ ಮಾಡಿದ್ರೆ, ಇಲ್ಲಿ ತನಕ ನಡೆದ ಎಲ್ಲ ಚುನಾವಣೆಗಳಲ್ಲೂ ಸ್ಥಾನಮಾನವನ್ನು ಖರೀದಿ ಮಾಡಿದ್ದಾರೆ, ಮಾರಾಟ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಹೆಚ್ಚಿನವರು ಈ ರೀತಿ ಮಾಡೋಕೆ ಸ್ವಲ್ಪನೂ ನಾಚಿಕೆ ಪಡ್ತಿರಲಿಲ್ಲ, ಬಹಿರಂಗವಾಗಿ ಮಾಡ್ತಿದ್ರು.”

13. ಕ್ರೈಸ್ತರು ಸ್ಥಾನಮಾನಗಳ ಖರೀದಿ, ಮಾರಾಟ ಅನ್ನೋ ಪಾಪದ ವಿಷ್ಯದಲ್ಲಿ ಹೇಗೆ ಎಚ್ಚರವಾಗಿ ಇರಬೇಕು?

13 ಕ್ರೈಸ್ತರು ಸಭೆಯಲ್ಲಿ ಸ್ಥಾನಮಾನಗಳನ್ನ ಖರೀದಿ ಮಾಡೋದು, ಮಾರಾಟ ಮಾಡೋದ್ರಿಂದ ದೂರ ಇರಬೇಕು. ಯಾಕಂದ್ರೆ ಅದೊಂದು ದೊಡ್ಡ ಪಾಪ ಆಗಿದೆ. ಉದಾಹರಣೆಗೆ, ಮೇಲ್ವಿಚಾರಣೆ ಮಾಡೋರಿಗೆ ಉಡುಗೊರೆಗಳನ್ನ ಕೊಟ್ಟು, ಅವರನ್ನ ಹೊಗಳಿ ಅಟ್ಟಕ್ಕೇರಿಸಿ ಸುಯೋಗಗಳನ್ನ ಗಿಟ್ಟಿಸ್ಕೊಳ್ಳೋಕೆ ಪ್ರಯತ್ನ ಮಾಡಬಾರದು. ಇನ್ನೊಂದು ಕಡೆ, ಮೇಲ್ವಿಚಾರಣೆ ಮಾಡೋರು ಶ್ರೀಮಂತರಿಗೆ ಹೆಚ್ಚು ಸುಯೋಗಗಳನ್ನ ಕೊಟ್ಟು ಭೇದಭಾವ ಮಾಡಬಾರದು. ಹಾಗೆ ಮಾಡಿದ್ರೆ ಸ್ಥಾನಮಾನಗಳ ಖರೀದಿ, ಮಾರಾಟ ಅನ್ನೋ ಪಾಪ ಮಾಡಿದ ಹಾಗಾಗುತ್ತೆ. ನಿಜ ಏನಂದ್ರೆ ದೇವರ ಸೇವಕರಲ್ಲಿ ಎಲ್ರೂ ‘ಚಿಕ್ಕವರಾಗಿ ನಡ್ಕೊಳ್ತಾ’ ಸೇವಾಸುಯೋಗಗಳನ್ನ ಪಡಿಯೋಕೆ ಯೆಹೋವನ ಪವಿತ್ರಶಕ್ತಿಗಾಗಿ ಕಾಯಬೇಕು. (ಲೂಕ 9:48) ದೇವರ ಸಂಘಟನೆಯಲ್ಲಿ ಇರೋರು “ತನಗೆ ಗೌರವ ಬರಬೇಕಂತ” ಬಯಸಬಾರದು.—ಜ್ಞಾನೋ. 25:27.

ಪೇತ್ರ “ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ” ಬಳಸಿದ ವಿಧ

ಯೇಸು ಪೇತ್ರನಿಗೆ, “ನಾನು ನಿಂಗೆ ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ ಕೊಡ್ತೀನಿ” ಅಂತ ಹೇಳಿದನು. (ಮತ್ತಾ. 16:19) ಈ ಮಾತಿನ ಅರ್ಥ ಏನಾಗಿತ್ತು? ಈ ‘ಬೀಗದ ಕೈಗಳು’ ಪೇತ್ರ ನಿರ್ದಿಷ್ಟವಾಗಿ ಬೇರೆಬೇರೆ ಗುಂಪಿನ ಜನ್ರಿಗೆ ಸಿಹಿಸುದ್ದಿ ಬಗ್ಗೆ ತಿಳ್ಕೊಳ್ಳೋಕೆ ಮತ್ತು ಮೆಸ್ಸೀಯನ ಆಳ್ವಿಕೆಯಲ್ಲಿ ಆತನ ಜೊತೆ ರಾಜರಾಗಿ ಆಳೋ ಅವಕಾಶದ ಬಾಗಿಲನ್ನ ತೆರೀತಾನೆ ಅಂತ ಸೂಚಿಸ್ತು. ಪೇತ್ರ ಯಾವ ಸಂದರ್ಭಗಳಲ್ಲಿ ಈ ಬೀಗದ ಕೈಗಳನ್ನ ಬಳಸಿದ?

  • ಪೇತ್ರ ಮೊದಲ ಬೀಗದ ಕೈಯನ್ನ ಬಳಸಿದ್ದು ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ. ಆಗ ಅವನು ಯೆಹೂದ್ಯರಿಗೆ ಮತ್ತು ಯೆಹೂದ್ಯರಾಗಿ ಮತಾಂತರ ಆದವ್ರಿಗೆ ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ತಗೊಳ್ಳೋಕೆ ಪ್ರೋತ್ಸಾಹ ಕೊಟ್ಟ. 3,000ದಷ್ಟು ಜನರು ಹಾಗೇ ಮಾಡಿದ್ರು ಮತ್ತು ದೇವರ ಆಳ್ವಿಕೆಯ ವಾರಸುದಾರರಾದ್ರು.—ಅ. ಕಾ. 2:1-41.

  • ಅವನು ಎರಡನೇ ಬೀಗದ ಕೈಯನ್ನ ಬಳಸಿದ್ದು ಸ್ತೆಫನ ತೀರಿಹೋಗಿ ಸ್ವಲ್ಪ ಸಮಯ ಆದ ಮೇಲೆ. ಈ ಸಂದರ್ಭದಲ್ಲಿ, ಹೊಸದಾಗಿ ದೀಕ್ಷಾಸ್ನಾನ ಪಡೆದಿದ್ದ ಸಮಾರ್ಯದವರ ಮೇಲೆ ಪೇತ್ರ ಮತ್ತು ಯೋಹಾನ ಕೈ ಇಟ್ರು. ಆಗ ಈ ಹೊಸದಾಗಿ ಕ್ರೈಸ್ತರಾದವರು ಪವಿತ್ರಶಕ್ತಿ ಪಡ್ಕೊಂಡ್ರು.—ಅ. ಕಾ. 8:14-17.

  • ಪೇತ್ರ ಮೂರನೇ ಬೀಗದ ಕೈಯನ್ನ ಬಳಸಿದ್ದು ಕ್ರಿ.ಶ. 36ರಲ್ಲಿ ಕೊರ್ನೇಲ್ಯನಿಗೆ ಸಾಕ್ಷಿಕೊಟ್ಟಾಗ. ಆಗ ಪೇತ್ರ ಸುನ್ನತಿಯಾಗಿರದ ಬೇರೆ ಜನಾಂಗದವ್ರಿಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆಯ ದಾರಿಯನ್ನ ತೆರೆದ. ಕ್ರಿಸ್ತನ ಶಿಷ್ಯರಾದ ಸುನ್ನತಿಯಾಗದ ಬೇರೆ ಜನಾಂಗದವರಲ್ಲಿ ಕೊರ್ನೇಲ್ಯನೇ ಮೊದಲನೆಯವನು.—ಅ. ಕಾ. 10:1-48.

“ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?” (ಅ. ಕಾ. 8:26-40)

14, 15. (ಎ) ‘ಇಥಿಯೋಪ್ಯದ ಅಧಿಕಾರಿ’ ಅಥವಾ ಕಂಚುಕಿ ಯಾರಾಗಿದ್ದ? (ಬಿ) ಫಿಲಿಪ್ಪ ಅವನನ್ನ ಭೇಟಿಯಾಗಿದ್ದು ಹೇಗೆ? (ಸಿ) ಫಿಲಿಪ್ಪನ ಸಂದೇಶಕ್ಕೆ ಆ ಅಧಿಕಾರಿಯ ಪ್ರತಿಕ್ರಿಯೆ ಏನಾಗಿತ್ತು? (ಡಿ) ಅವನು ದೀಕ್ಷಾಸ್ನಾನವನ್ನ ಹಿಂದೆಮುಂದೆ ಯೋಚ್ನೆ ಮಾಡದೆ ತಗೊಂಡಿಲ್ಲ ಅಂತ ಹೇಗೆ ಹೇಳಬಹುದು? (ಪಾದಟಿಪ್ಪಣಿ ನೋಡಿ.)

14 ಯೆಹೋವನ ದೂತ ಈಗ ಫಿಲಿಪ್ಪನಿಗೆ ಯೆರೂಸಲೇಮಿಂದ ಗಾಜಕ್ಕೆ ಹೋಗೋ ದಾರಿಯಲ್ಲಿ ಹೋಗೋಕೆ ಹೇಳಿದ. ಯಾಕೆ ಅನ್ನೋ ಪ್ರಶ್ನೆ ಫಿಲಿಪ್ಪನ ಮನಸ್ಸಲ್ಲಿ ಬಂದಿರಬೇಕು. ಅದಕ್ಕೆ ಬೇಗ ಉತ್ರನೂ ಸಿಕ್ತು. ಇಥಿಯೋಪ್ಯದ ಅಧಿಕಾರಿ (ಕಂಚುಕಿ) “ಪ್ರವಾದಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದ್ತಿದ್ದ.” ಫಿಲಿಪ್ಪ ಅದನ್ನ ನೋಡಿದ. (“‘ಕಂಚುಕಿ’ ಯಾವ ರೀತಿಯ ಅಧಿಕಾರಿಯಾಗಿದ್ದ?” ಅನ್ನೋ ಚೌಕ ನೋಡಿ.) ಯೆಹೋವನ ಪವಿತ್ರಶಕ್ತಿ ಫಿಲಿಪ್ಪನಿಗೆ ಆ ಅಧಿಕಾರಿಯ ರಥದ ಹತ್ರ ಹೋಗೋಕೆ ಹೇಳ್ತು. ಫಿಲಿಪ್ಪ ಆ ರಥದ ಪಕ್ಕದಲ್ಲಿ ಓಡ್ತಾ ಅವನಿಗೆ “ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?” ಅಂತ ಕೇಳಿದ. ಅದಕ್ಕೆ ಅವನು, “ಯಾರಾದ್ರೂ ಹೇಳಿಕೊಡದಿದ್ರೆ ನನಗೆ ಹೇಗೆ ಅರ್ಥ ಆಗುತ್ತೆ?” ಅಂತ ಹೇಳಿದ.—ಅ. ಕಾ. 8:26-31.

15 ಆ ಅಧಿಕಾರಿ ಫಿಲಿಪ್ಪನಿಗೆ ತನ್ನ ರಥವನ್ನ ಹತ್ತಿ ಕೂತ್ಕೊಳ್ಳೋಕೆ ಹೇಳಿದ. ಅವರಿಬ್ರು ಯಾವುದ್ರ ಬಗ್ಗೆ ಮಾತಾಡಿದ್ರು ಗೊತ್ತಾ? ಯೆಶಾಯನ ಭವಿಷ್ಯವಾಣಿಯಲ್ಲಿ ಹೇಳಿರೋ “ಕುರಿ” ಅಥವಾ “ಸೇವಕ” ಯಾರು ಅನ್ನೋದು ತುಂಬ ಸಮಯದ ತನಕ ರಹಸ್ಯವಾಗಿತ್ತು. (ಯೆಶಾ. 53:1-12) ಆದ್ರೆ ಫಿಲಿಪ್ಪ ಇಥಿಯೋಪ್ಯದ ಅಧಿಕಾರಿಗೆ ಆ ಭವಿಷ್ಯವಾಣಿ ಯೇಸು ಕ್ರಿಸ್ತನ ಬಗ್ಗೆನೇ ಹೇಳ್ತಿದೆ ಅನ್ನೋದನ್ನ ಪ್ರಯಾಣ ಮಾಡ್ತಾ ವಿವರಿಸಿದ. ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದ ದಿನ ದೀಕ್ಷಾಸ್ನಾನ ಪಡ್ಕೊಂಡವರ ತರಾನೇ, ಯೆಹೂದ್ಯನಾಗಿ ಮತಾಂತರ ಆಗಿದ್ದ ಈ ಆಧಿಕಾರಿಗೂ ಅನಿಸ್ತು. ಅದಕ್ಕೆ ಅವನು “ನೋಡು, ಅಲ್ಲಿ ನೀರಿದೆ! ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು?” ಅಂತ ಫಿಲಿಪ್ಪನನ್ನ ಕೇಳಿದ. ಫಿಲಿಪ್ಪ ತಕ್ಷಣ ಅವನಿಗೆ ದೀಕ್ಷಾಸ್ನಾನ ಕೊಟ್ಟ.c (“ದೀಕ್ಷಾಸ್ನಾನ ತಗೊಳ್ಳೋ ಸರಿಯಾದ ವಿಧಾನ” ಅನ್ನೋ ಚೌಕ ನೋಡಿ.) ಆಮೇಲೆ ಯೆಹೋವನ ಪವಿತ್ರಶಕ್ತಿ ಫಿಲಿಪ್ಪನನ್ನ ಹೊಸ ನೇಮಕಕ್ಕೆ ಅಂದ್ರೆ ಅಷ್ಡೋದಿಗೆ ಕರ್ಕೊಂಡು ಹೋಯ್ತು. ಅಲ್ಲಿ ಅವನು ಸಿಹಿಸುದ್ದಿ ಸಾರೋದನ್ನ ಮುಂದುವರಿಸಿದ.—ಅ. ಕಾ. 8:32-40.

“ಕಂಚುಕಿ” ಯಾವ ರೀತಿಯ ಅಧಿಕಾರಿಯಾಗಿದ್ದ?

“ಕಂಚುಕಿ” ಅನ್ನೋಕ್ಕಿರೋ ಗ್ರೀಕ್‌ ಪದ ಎವ್‌ನುಕೋಸ್‌. ಈ ಪದ ಸಂತಾನೋತ್ಪತ್ತಿಯ ಸಾಮರ್ಥ್ಯ ಕಳ್ಕೊಂಡಿರೋ ಪುರುಷನಿಗೆ ಅಥವಾ ಆಸ್ಥಾನದಲ್ಲಿ ಉನ್ನತ ಪದವಿಯಲ್ಲಿರೋ ಅಧಿಕಾರಿಗೆ ಸೂಚಿಸುತ್ತೆ. ರಾಣಿಯರಿರೋ ಅಂತಃಪುರವನ್ನ ನೋಡ್ಕೊಳ್ತಿದ್ದ ಅಧಿಕಾರಿಗಳನ್ನ ನಪುಂಸಕರನ್ನಾಗಿ ಮಾಡಲಾಗ್ತಿತ್ತು. ಆದ್ರೆ ಬೇರೆ ಅಧಿಕಾರಿಗಳಿಗೆ, ಉದಾಹರಣೆಗೆ ರಾಜನ ಪಾನದಾಯಕ ಅಥವಾ ಖಜಾನೆಯ ಮೇಲ್ವಿಚಾರಕನಿಗೆ ಹಾಗೆ ಮಾಡ್ತಿರಲಿಲ್ಲ. ಫಿಲಿಪ್ಪ ದೀಕ್ಷಾಸ್ನಾನ ಕೊಟ್ಟ ಇಥಿಯೋಪ್ಯದ ವ್ಯಕ್ತಿ ಇಂಥ ಅಧಿಕಾರಿಯಾಗಿದ್ದ. ರಾಜಮನೆತನದ ಖಜಾನಾಧಿಕಾರಿ ಒಂದರ್ಥದಲ್ಲಿ ಹಣಕಾಸಿನ ಮಂತ್ರಿ ಆಗಿದ್ದ.

ಆ ಇಥಿಯೋಪ್ಯದವನು ಯೆಹೂದ್ಯನಾಗಿ ಮತಾಂತರನೂ ಆಗಿದ್ದ. ಅಂದ್ರೆ ಅವನು ಹುಟ್ಟಿನಿಂದಲೇ ಯೆಹೂದ್ಯನಾಗಿರಲಿಲ್ಲ, ಆದ್ರೆ ಯೆಹೋವನ ಆರಾಧಕನಾಗಿದ್ದ. ಅವನು ಆಗ ತಾನೇ ಯೆರೂಸಲೇಮಿನಲ್ಲಿ ಆರಾಧನೆ ಮಾಡಿ ವಾಪಸ್‌ ಹೋಗ್ತಿದ್ದ. (ಅ. ಕಾ. 8:27) ಈ ಕಾರಣಕ್ಕೆ ನಾವು ಈ ಇಥಿಯೋಪ್ಯದ ವ್ಯಕ್ತಿ ಒಬ್ಬ ನಪುಂಸಕನಾಗಿರಲಿಲ್ಲ ಅಂತ ಹೇಳಬಹುದು. ಯಾಕಂದ್ರೆ ಅಂಥ ಪುರುಷರು ಇಸ್ರಾಯೇಲ್ಯರ ಜೊತೆ ಆರಾಧನೆಗಾಗಿ ಸೇರಿ ಬರೋದನ್ನ ಮೋಶೆಯ ನಿಯಮಪುಸ್ತಕ ನಿಷೇಧಿಸಿತ್ತು.—ಧರ್ಮೋ. 23:1.

ದೀಕ್ಷಾಸ್ನಾನ ತಗೊಳ್ಳೋ ಸರಿಯಾದ ವಿಧಾನ

ದೀಕ್ಷಾಸ್ನಾನ ತಗೊಳ್ಳೋ ಸರಿಯಾದ ವಿಧಾನ ಯಾವುದು? ಕೆಲವರು ಒಬ್ಬ ವ್ಯಕ್ತಿ ತಲೆ ಮೇಲೆ ನೀರು ಸುರಿದ್ರೆ ಅಥವಾ ಚಿಮುಕಿಸಿದ್ರೆ ಸಾಕು, ಅದೇ ದೀಕ್ಷಾಸ್ನಾನ ಅಂತಾರೆ. ಆದರೆ ಇಥಿಯೋಪ್ಯದ ಕಂಚುಕಿಗೆ “ನೀರಿದ್ದ” ಒಂದು ಜಾಗದಲ್ಲಿ ದೀಕ್ಷಾಸ್ನಾನ ಆಯ್ತು ಅಂತ ಬೈಬಲ್‌ ಹೇಳುತ್ತೆ. ಅದು ಹೇಳೋದು: “ಫಿಲಿಪ್ಪ ಮತ್ತು ಆ ಅಧಿಕಾರಿ ನೀರಿಗೆ ಇಳಿದ್ರು.” (ಅ. ಕಾ. 8:36, 38) ದೀಕ್ಷಾಸ್ನಾನನ ನೀರು ಸುರಿದು ಅಥವಾ ಚಿಮುಕಿಸಿ ಕೊಡೋದೇ ಆಗಿದ್ರೆ, ಆ ಅಧಿಕಾರಿ ತನ್ನ ರಥವನ್ನ ನೀರಿದ್ದ ಆ ಜಾಗದಲ್ಲಿ ನಿಲ್ಲಿಸೋ ಅವಶ್ಯಕತೆ ಇರಲಿಲ್ಲ. ಅವನ ಹತ್ರ ಸ್ವಲ್ಪ ನೀರು ಇದ್ದಿದ್ರೂ ಸಾಕಾಗ್ತಿತ್ತು. ಯಾಕಂದ್ರೆ ಅವನು “ಮರುಭೂಮಿಯಲ್ಲಿ” ಪ್ರಯಾಣ ಮಾಡ್ತಾ ಇದ್ದಿದ್ರಿಂದ ಖಂಡಿತ ಅವನ ಹತ್ರ ಇದ್ದ ಚರ್ಮದ ಬುದ್ದಲಿಯಲ್ಲಿ ಸ್ವಲ್ಪನಾದ್ರೂ ನೀರು ಇದ್ದಿರಲೇಬೇಕು.—ಅ. ಕಾ. 8:26.

“ದೀಕ್ಷಾಸ್ನಾನ” ಅನ್ನೋ ಪದದ ಮೂಲ ಗ್ರೀಕ್‌ ಪದ ಬ್ಯಾಪ್ಟೀಸೊ ಅಂತಾಗಿದೆ. ಲಿಡೆಲ್‌ ಮತ್ತು ಸ್ಕಾಟ್‌ರವರ ಗ್ರೀಕ್‌-ಇಂಗ್ಲಿಷ್‌ ನಿಘಂಟಿಗನುಸಾರ ಅದರರ್ಥ “ಅದ್ದು” ಅಥವಾ “ಮುಳುಗಿಸು” ಅಂತ ಆಗಿದೆ. ದೀಕ್ಷಾಸ್ನಾನದ ಬಗ್ಗೆ ಹೇಳೋ ವಚನಗಳು ಈ ಅರ್ಥವಿವರಣೆಗೆ ಹೊಂದಿಕೆಯಲ್ಲಿವೆ. “ಯೋಹಾನ ಕೂಡ ಸಾಲೀಮ್‌ ಊರಿನ ಐನೋನ ಅನ್ನೋ ಜಾಗದಲ್ಲಿ ದೀಕ್ಷಾಸ್ನಾನ ಮಾಡಿಸ್ತಾ ಇದ್ದನು. ಯಾಕಂದ್ರೆ ಅಲ್ಲಿ ತುಂಬ ನೀರಿತ್ತು” ಅಂತ ಯೋಹಾನ 3:23 ಹೇಳುತ್ತೆ. ಯೇಸುವಿನ ದೀಕ್ಷಾಸ್ನಾನದ ಬಗ್ಗೆ ಮಾತಾಡುವಾಗ್ಲೂ “ಯೇಸು ನೀರಿಂದ ಮೇಲೆ ಬಂದ ತಕ್ಷಣ” ಅಂತ ಹೇಳುತ್ತೆ. (ಮಾರ್ಕ 1:9, 10) ಇದರಿಂದ ಏನು ಗೊತ್ತಾಗುತ್ತೆ? ನೀರಲ್ಲಿ ಪೂರ್ತಿ ಮುಳುಗಿ ತಗೊಳ್ಳೋ ದೀಕ್ಷಾಸ್ನಾನನೇ ಸರಿಯಾದ ದೀಕ್ಷಾಸ್ನಾನ.

16, 17. ಸಾರೋ ಕೆಲಸವನ್ನ ದೇವದೂತರು ಹೇಗೆ ಮಾರ್ಗದರ್ಶಿಸ್ತಿದ್ದಾರೆ?

16 ಫಿಲಿಪ್ಪ ಮಾಡಿದ ತರನೇ ನಾವೂ ಮಾಡಬಹುದು. ನಮಗೂ ತುಂಬ ಸಲ ಸಿಹಿಸುದ್ದಿಯನ್ನ ಅನೌಪಚಾರಿಕವಾಗಿ ಸಾರೋ ಸನ್ನಿವೇಶಗಳು ಸಿಗುತ್ತೆ. ಉದಾಹರಣೆಗೆ ಪ್ರಯಾಣ ಮಾಡೋವಾಗ ಸಿಹಿಸುದ್ದಿ ಸಾರೋಕೆ ನಮಗೆ ತುಂಬಾ ಅವಕಾಶಗಳು ಸಿಗುತ್ತೆ, ಆಗ ಜನನೂ ಚೆನ್ನಾಗಿ ಪ್ರತಿಕ್ರಿಯಿಸಬಹುದು. ಆದ್ರೆ ಇದೆಲ್ಲಾ ಆಕಸ್ಮಿಕವಾಗಿ, ಅನಿರೀಕ್ಷಿತವಾಗಿ ನಡೆಯೋ ವಿಷ್ಯಗಳಲ್ಲ. ಯಾಕಂದ್ರೆ “ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ” ಸಿಹಿಸುದ್ದಿ ಮುಟ್ಟೋ ಹಾಗೆ ದೇವದೂತರು ಸಾರೋ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾರೆ ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ. (ಪ್ರಕ. 14:6) ಸಾರೋ ಕೆಲಸದಲ್ಲಿ ದೇವದೂತರ ಮಾರ್ಗದರ್ಶನ ಇರುತ್ತೆ ಅಂತ ಯೇಸು ಕೂಡ ಮುಂಚೆನೇ ಹೇಳಿದ್ದನು. ಗೋದಿ ಮತ್ತು ಕಳೆಗಳ ಬಗ್ಗೆ ಆತನು ಹೇಳಿದ ಉದಾಹರಣೆಯಲ್ಲಿ, ಕೊಯ್ಲಿನ ಸಮಯ ಅಂದ್ರೆ ಲೋಕದ ಅಂತ್ಯಕಾಲದಲ್ಲಿ “ದೇವದೂತರೇ ಕೊಯ್ಯುವವರು” ಅಂತ ಯೇಸು ಹೇಳಿದ್ದನು. ಆತನು ಮುಂದುವರಿಸಿ ಹೇಳಿದ್ದೇನಂದ್ರೆ “ಪಾಪ ಮಾಡೋಕೆ ಬೇರೆಯವ್ರಿಗೆ ಕುಮ್ಮಕ್ಕು ಕೊಡುವವ್ರನ್ನ ಮತ್ತು ಕೆಟ್ಟ ಕೆಲಸಗಳನ್ನ ಮಾಡುವವ್ರನ್ನ ದೂತರು ದೇವರ ಆಳ್ವಿಕೆಯಿಂದ” ತೆಗೆದುಹಾಕ್ತಾರೆ. (ಮತ್ತಾ. 13:37-41) ಅದೇ ಸಮಯದಲ್ಲಿ ಯೆಹೋವ ಯಾರನ್ನೆಲ್ಲ ತನ್ನ ಸಂಘಟನೆಗೆ ಸೆಳೆಯೋಕೆ ಇಷ್ಟಪಡ್ತಾನೋ ಅವ್ರನ್ನ ದೇವದೂತರು ಒಟ್ಟುಸೇರಿಸ್ತಾರೆ. ಮೊದಲು ದೇವರ ಆಳ್ವಿಕೆಯ ವಾರಸುದಾರರನ್ನ, ಆಮೇಲೆ ‘ಬೇರೆ ಕುರಿಗಳ’ ‘ದೊಡ್ಡ ಗುಂಪನ್ನ’ ಒಟ್ಟುಗೂಡಿಸ್ತಾರೆ.—ಪ್ರಕ. 7:9; ಯೋಹಾ. 6:44, 65; 10:16.

17 ಇದು ಈಗ ನಿಜ ಆಗ್ತಿದೆ ಅನ್ನೋದಕ್ಕೆ ಆಧಾರ ಏನಂದ್ರೆ, ಸೇವೆಯಲ್ಲಿ ನಾವು ಭೇಟಿ ಮಾಡೋ ಕೆಲವರು ‘ದೇವರ ಸಹಾಯಕ್ಕಾಗಿ ಬೇಡಿಕೊಳ್ತಾ ಇದ್ವಿ’ ಅಂತ ಹೇಳಿದ್ದಾರೆ. ಅದಕ್ಕೊಂದು ಅನುಭವ ನೋಡೋಣ. ಇಬ್ರು ಪ್ರಚಾರಕರು ಒಬ್ಬ ಚಿಕ್ಕ ಹುಡುಗನನ್ನ ಸೇವೆಗೆ ಕರ್ಕೊಂಡು ಹೋಗಿದ್ರು. ಮಧ್ಯಾಹ್ನ ಆಗ್ತಾ ಇದ್ದ ಹಾಗೆ ಆ ಇಬ್ರು ಸಾಕ್ಷಿಗಳು ‘ಇವತ್ತಿಗೆ ಇಷ್ಟು ಸಾಕು’ ಅಂತಿದ್ದಾಗ ಆ ಹುಡುಗ ಮುಂದಿನ ಮನೆಗೆ ಹೋಗಬೇಕು ಅಂದ್ಕೊಂಡ. ಅವನೊಬ್ಬನೇ ಹೋಗಿ ಆ ಮನೆ ಬಾಗಿಲನ್ನ ತಟ್ಟೇಬಿಟ್ಟ! ಒಬ್ಬ ಯುವತಿ ಬಾಗಿಲು ತೆರೆದಳು. ಆಗ ಆ ಇಬ್ರು ಸಾಕ್ಷಿಗಳು ಹೋಗಿ ಅವಳ ಹತ್ರ ಮಾತಾಡಿದ್ರು. ಅವಳು ‘ಬೈಬಲನ್ನ ಅರ್ಥ ಮಾಡ್ಕೊಳ್ಳೋಕೆ ಯಾರನ್ನಾದ್ರೂ ಕಳಿಸಿ ಸಹಾಯ ಮಾಡಪ್ಪಾ’ ಅಂತ ಆಗ ತಾನೇ ಪ್ರಾರ್ಥನೆಮಾಡಿ ಮುಗಿಸಿದ್ದಳಂತೆ. ಇದನ್ನ ಕೇಳಿ ಸಾಕ್ಷಿಗಳಿಗೆ ಆಶ್ಚರ್ಯ ಆಯ್ತು. ಅವರು ಅವಳಿಗೆ ಬೈಬಲ್‌ ಅಧ್ಯಯನ ಶುರು ಮಾಡಿದ್ರು.

ಒಬ್ಬ ದಂಪತಿ ಸಿಹಿಸುದ್ದಿ ಸಾರೋಕೆ ಒಂದು ಮನೆಯ ಬೆಲ್‌ ಒತ್ತುತ್ತಿದ್ದಾರೆ. ಮನೆ ಒಳಗಡೆ ಒಬ್ಬ ಮಹಿಳೆ ಪ್ರಾರ್ಥನೆ ಮಾಡ್ತಿದ್ದಾಳೆ.

“ದೇವರೇ, ನೀನು ಯಾರಂತ ನಂಗೊತ್ತಿಲ್ಲ, ಆದ್ರೂ ಪ್ಲೀಸ್‌ ನಂಗೆ ಸಹಾಯಮಾಡು”

18. ನಾವು ಸೇವೆಯನ್ನ ಯಾಕೆ ಹಗುರವಾಗಿ ನೋಡಬಾರದು?

18 ಕ್ರೈಸ್ತ ಸಭೆಯ ಸದಸ್ಯರಾದ ನಿಮಗೂ ಆಧುನಿಕ ದಿನದಲ್ಲಿ ನಡೀತಾ ಇರೋ ಸಾರೋ ಕೆಲಸದಲ್ಲಿ ದೇವದೂತರ ಜೊತೆ ಕೆಲಸಮಾಡೋ ಸುಯೋಗ ಇದೆ. ಈ ಕೆಲಸ ಮುಂಚೆಗಿಂತ ಈಗ ಜಾಸ್ತಿ ಆಗ್ತಾ ಇದೆ. ಹಾಗಾಗಿ ನಿಮಗಿರೋ ಈ ಸುಯೋಗವನ್ನ ಯಾವತ್ತೂ ಹಗುರವಾಗಿ ನೋಡಬೇಡಿ. “ಯೇಸು ಬಗ್ಗೆ ಸಿಹಿಸುದ್ದಿಯನ್ನ” ಹೇಳ್ತಾ ಇರಿ. ಹೀಗೆ ಪಟ್ಟುಬಿಡದೆ ಸಾರ್ತಾ ಇರುವಾಗ ನಿಮಗೂ ತುಂಬ ಖುಷಿ ಸಿಗುತ್ತೆ.—ಅ. ಕಾ. 8:35.

“ಸಿಹಿಸುದ್ದಿ ಸಾರುವವನಾಗಿದ್ದ” ಫಿಲಿಪ್ಪ

ಹಿಂಸೆಯಿಂದಾಗಿ ಕ್ರಿಸ್ತನ ಹಿಂಬಾಲಕರು ಚೆಲ್ಲಾಪಿಲ್ಲಿ ಆದಾಗ ಫಿಲಿಪ್ಪ ಸಮಾರ್ಯಕ್ಕೆ ಹೋದ. ಸಮಾರ್ಯದಲ್ಲಿ ನಡೀತಿದ್ದ ವಿಷ್ಯಗಳ ಬಗ್ಗೆ ಅವನು ಒಂದನೇ ಶತಮಾನದಲ್ಲಿದ್ದ ಆಡಳಿತ ಮಂಡಲಿಗೆ ತಿಳಿಸ್ತಿದ್ದ ಅನ್ಸುತ್ತೆ. ಹೀಗೆ “ಸಮಾರ್ಯದ ಜನ ದೇವ್ರ ಮಾತನ್ನ ನಂಬಿದ್ದಾರೆ ಅನ್ನೋ ಸುದ್ದಿ ಯೆರೂಸಲೇಮಲ್ಲಿದ್ದ ಅಪೊಸ್ತಲರಿಗೆ ಗೊತ್ತಾಯ್ತು. ಆಗ ಅವರು ಪೇತ್ರ ಯೋಹಾನನನ್ನ ಅಲ್ಲಿಗೆ ಕಳಿಸಿದ್ರು.” ಇದ್ರಿಂದ ಅಲ್ಲಿ ಹೊಸದಾಗಿ ಯೇಸುವಿನ ಶಿಷ್ಯರಾದವರು ಪವಿತ್ರಶಕ್ತಿ ಅನ್ನೋ ಉಚಿತ ವರವನ್ನ ಪಡ್ಕೊಂಡ್ರು.—ಅ. ಕಾ. 8:14-17.

ಫಿಲಿಪ್ಪ ರಥದಲ್ಲಿ ಇಥಿಯೋಪ್ಯದ ಅಧಿಕಾರಿ ಜೊತೆ ಕೂತಿದ್ದಾನೆ.

ಅಪೊಸ್ತಲರ ಕಾರ್ಯ 8ನೇ ಅಧ್ಯಾಯದಲ್ಲಿರೋ ಘಟನೆಗಳಾದ ಮೇಲೆ ಫಿಲಿಪ್ಪನ ಬಗ್ಗೆ ಒಂದೇ ಸಲ ಹೇಳಿದೆ. ಇದು, ಫಿಲಿಪ್ಪ ಸಮಾರ್ಯದಲ್ಲಿ ಸಾರೋಕೆ ಆರಂಭಿಸಿ ಸುಮಾರು 20 ವರ್ಷಗಳಾದ ಮೇಲೆ ನಡೆದ ಘಟನೆ ಆಗಿದೆ. ಆಗ ಅಪೊಸ್ತಲ ಪೌಲ ಮತ್ತು ಅವನ ಜೊತೆ ಇದ್ದವರು ಯೆರೂಸಲೇಮಿಗೆ ಹೊಗ್ತಿದ್ರು. ಇದು ಪೌಲನ ಮೂರನೇ ಮಿಷನರಿ ಸಂಚಾರದ ಕೊನೆ ಭಾಗ ಆಗಿತ್ತು. ದಾರಿಯಲ್ಲಿ ಅವರು ತೊಲೆಮಾಯ ಅನ್ನೋ ಊರಲ್ಲಿ ಉಳ್ಕೊಂಡಿದ್ರು. ಲೂಕ ಹೇಳೋದು: “ಮಾರನೇ ದಿನ ಅಲ್ಲಿಂದ ಹೊರಟು ಕೈಸರೈಯಕ್ಕೆ ಬಂದ್ವಿ. ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪನ ಮನೆಗೆ ಹೋಗಿ ಉಳ್ಕೊಂಡ್ವಿ. ಯೆರೂಸಲೇಮಲ್ಲಿ ಅಪೊಸ್ತಲರು ಆರಿಸ್ಕೊಂಡಿದ್ದ ಆ ಏಳು ಮಂದಿಯಲ್ಲಿ ಇವನೂ ಒಬ್ಬನಾಗಿದ್ದ. ಅವನಿಗೆ ಮದುವೆಯಾಗದ ನಾಲ್ಕು ಹೆಣ್ಣುಮಕ್ಕಳಿದ್ರು. ಅವರು ಭವಿಷ್ಯವಾಣಿ ಹೇಳ್ತಿದ್ರು.”—ಅ. ಕಾ. 21:8, 9.

ಫಿಲಿಪ್ಪ ತನಗೆ ಸಾರೋಕೆ ನೇಮಕ ಸಿಕ್ಕಿದ್ದ ಕ್ಷೇತ್ರದಲ್ಲೇ ಇದ್ದಿರಬೇಕು. ಅವನಿಗೆ ಒಂದು ಕುಟುಂಬ ಇತ್ತು. ಲೂಕ ಅವನನ್ನ ‘ಸಿಹಿಸುದ್ದಿ ಸಾರುವವನು’ ಅಂತ ಕರೆದಿರೋದನ್ನ ಗಮನಿಸಿ. ಬೈಬಲಲ್ಲಿ ಈ ಪದವನ್ನ, ಮುಂಚೆ ಯಾರೂ ಸಾರದೇ ಇದ್ದ ಕ್ಷೇತ್ರಗಳಲ್ಲಿ ಸಿಹಿಸುದ್ದಿ ಸಾರೋಕೆ ತಮ್ಮ ಮನೆ-ಊರನ್ನ ಬಿಟ್ಟುಹೋದವ್ರಿಗೆ ಬಳಸಲಾಗಿದೆ. ಸೇವೆ ಮಾಡೋಕೆ ಫಿಲಿಪ್ಪನಿಗಿದ್ದ ಹುರುಪು ಸ್ವಲ್ಪನೂ ಕಮ್ಮಿ ಆಗಿರಲಿಲ್ಲ ಅಂತ ಇದ್ರಿಂದ ಗೊತ್ತಾಗುತ್ತೆ. ಅವನ ನಾಲ್ಕು ಹೆಣ್ಣುಮಕ್ಕಳು ಭವಿಷ್ಯವಾಣಿ ಹೇಳ್ತಿದ್ರು. ಇದ್ರಿಂದ, ಫಿಲಿಪ್ಪ ತನ್ನ ಕುಟುಂಬ ಸದಸ್ಯರಿಗೂ ಯೆಹೋವನನ್ನ ಪ್ರೀತಿಸೋಕೆ ಮತ್ತು ಆತನ ಸೇವೆ ಮಾಡೋಕೆ ಕಲಿಸಿದ್ದ ಅಂತ ಗೊತ್ತಾಗುತ್ತೆ.

a ಇವನು ಅಪೊಸ್ತಲ ಫಿಲಿಪ್ಪ ಅಲ್ಲ, ಈ ಪುಸ್ತಕದ 5ನೇ ಅಧ್ಯಾಯದಲ್ಲಿ ತಿಳಿಸಿರೋ ಫಿಲಿಪ್ಪನಾಗಿದ್ದಾನೆ. ಇವನು, ಯೆರೂಸಲೇಮಿನಲ್ಲಿ ಗ್ರೀಕ್‌ ಮತ್ತು ಹೀಬ್ರು ಭಾಷೆಯ ಕ್ರೈಸ್ತ ವಿಧವೆಯರಿಗೆ ಪ್ರತಿದಿನ ಆಹಾರ ಕೊಡೋದಕ್ಕೆ ನೇಮಿಸಿದ ‘ಏಳು ಸಹೋದರರಲ್ಲಿ’ ಒಬ್ಬನಾಗಿದ್ದ.—ಅ. ಕಾ. 6:1-6.

b ಆ ಕಾಲದಲ್ಲಿ, ಸಾಮಾನ್ಯವಾಗಿ ಹೊಸ ಶಿಷ್ಯರು ದೀಕ್ಷಾಸ್ನಾನದ ಸಮಯದಲ್ಲಿ ಪವಿತ್ರಶಕ್ತಿ ಪಡ್ಕೊಳ್ತಿದ್ರು ಅಥವಾ ಅಭಿಷಿಕ್ತರಾಗ್ತಿದ್ರು ಅನ್ಸುತ್ತೆ. ಹೀಗೆ ಅವ್ರಿಗೆ ಯೇಸು ಜೊತೆ ಸ್ವರ್ಗದಲ್ಲಿ ರಾಜರಾಗಿ, ಪುರೋಹಿತರಾಗಿ ಆಳೋ ನಿರೀಕ್ಷೆ ಸಿಗ್ತಿತ್ತು. (2 ಕೊರಿಂ. 1:21, 22; ಪ್ರಕ. 5:9, 10; 20:6) ಆದ್ರೆ ಈ ಸಂದರ್ಭದಲ್ಲಿ ಹೊಸ ಶಿಷ್ಯರು ದೀಕ್ಷಾಸ್ನಾನದ ಸಮಯದಲ್ಲಿ ಅಭಿಷಿಕ್ತರಾಗಿರಲಿಲ್ಲ. ಪೇತ್ರ ಮತ್ತು ಯೋಹಾನ ಹೊಸದಾಗಿ ದೀಕ್ಷಾಸ್ನಾನ ಪಡೆದ ಈ ಕ್ರೈಸ್ತರ ಮೇಲೆ ಕೈಯಿಟ್ಟ ಮೇಲೆನೇ ಪವಿತ್ರಶಕ್ತಿ ಮತ್ತು ಅದರ ಜೊತೆಗೆ ಸಿಗೋ ಅದ್ಭುತ ವರಗಳನ್ನ ಪಡ್ಕೊಂಡ್ರು.

c ಇದು ಅವನು ಹಿಂದೆಮುಂದೆ ಯೋಚ್ನೆ ಮಾಡದೇ ತಗೊಂಡ ಹೆಜ್ಜೆ ಆಗಿರಲಿಲ್ಲ. ಇಥಿಯೋಪ್ಯದವನು ಯೆಹೂದ್ಯನಾಗಿ ಮತಾಂತರ ಆಗಿದ್ರಿಂದ ಈಗಾಗಲೇ ಅವನಿಗೆ ಪವಿತ್ರಗ್ರಂಥ ಮತ್ತು ಅದ್ರಲ್ಲಿದ್ದ ಮೆಸ್ಸೀಯನ ಭವಿಷ್ಯವಾಣಿಗಳ ಬಗ್ಗೆ ಗೊತ್ತಿತ್ತು. ಆದ್ರೆ ದೇವರ ಉದ್ದೇಶದಲ್ಲಿ ಯೇಸುಗೆ ಯಾವ ಪಾತ್ರ ಇತ್ತು ಅಂತ ಅವನಿಗೆ ಈಗ ಮಾಹಿತಿ ಸಿಕ್ಕಿದ್ರಿಂದ ತಕ್ಷಣ ದೀಕ್ಷಾಸ್ನಾನ ತಗೊಂಡ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ