ಅಧ್ಯಾಯ 12
ನಮ್ಮನ್ನು ಮಾರ್ಗದರ್ಶಿಸುವ ದೈವಿಕ ವಿವೇಕ
ದೈವಿಕ ಸಲಹೆಗಳ ಸಂಗ್ರಹವೇ ಜ್ಞಾನೋಕ್ತಿ ಪುಸ್ತಕವಾಗಿದ್ದು ಹೆಚ್ಚಿನವುಗಳು ಸೊಲೊಮೋನನದ್ದಾಗಿವೆ. ಈ ಸಲಹೆಗಳು ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತವೆ
ಯೆಹೋವನು ಒಬ್ಬ ವಿವೇಕವುಳ್ಳ ಅಧಿಪತಿಯೋ? ಅದನ್ನು ತಿಳಿಯುವುದಾದರೂ ಹೇಗೆ? ಆತನು ಕೊಡುವ ಸಲಹೆಯು ಅವನೊಬ್ಬ ವಿವೇಕವುಳ್ಳ ಅಧಿಪತಿಯಾಗಿದ್ದಾನೋ ಇಲ್ಲವೋ ಎಂಬುದನ್ನು ತೋರಿಸಿಕೊಡುತ್ತದೆ. ಆತನ ಸಲಹೆಯಿಂದ ನಮಗೆ ಪ್ರಯೋಜನವಾದರೆ ಹಾಗೂ ಅದನ್ನು ಪಾಲಿಸುವುದರಿಂದ ನಮ್ಮ ಜೀವನ ಸುಧಾರಣೆಯಾಗಿ ಉತ್ತಮಗೊಂಡರೆ ಆತನೊಬ್ಬ ವಿವೇಕವುಳ್ಳ ಅಧಿಪತಿ ಎಂದು ಹೇಳಬಹುದು. ದೇವರು ನೀಡಿರುವ ಅನೇಕಾನೇಕ ಸಲಹೆಗಳನ್ನು ವಿವೇಕಿ ರಾಜ ಸೊಲೊಮೋನನು ಜ್ಞಾನೋಕ್ತಿ ಪುಸ್ತಕದಲ್ಲಿ ಬರೆದಿದ್ದಾನೆ. ಈ ಸಲಹೆಗಳು ನಮ್ಮ ದಿನನಿತ್ಯ ಜೀವನದಲ್ಲಿ ನೆರವಾಗುವವೋ ಎಂದು ಒಂದೆರಡು ಉದಾಹರಣೆಗಳಿಂದ ಪರೀಕ್ಷಿಸಿ ನೋಡೋಣ.
ದೇವರಲ್ಲಿ ಭರವಸೆಯಿಡುವ ಕುರಿತು. ಯೆಹೋವನಲ್ಲಿ ಭರವಸೆಯಿಡುವುದಾದರೆ ಮಾತ್ರ ಆತನೊಂದಿಗೆ ಆಪ್ತ ಸ್ನೇಹ ಹೊಂದಲು ಸಾಧ್ಯ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂದು ಸೊಲೊಮೋನನು ಬರೆದನು. (ಜ್ಞಾನೋಕ್ತಿ 3:5, 6) ದೇವರ ಮಾರ್ಗದರ್ಶನವನ್ನು ಕೋರಿ ಆತನಿಗೆ ವಿಧೇಯರಾಗುವ ಮೂಲಕ ದೇವರಲ್ಲಿ ಭರವಸೆಯಿದೆ ಎಂಬುದನ್ನು ತೋರಿಸಿಕೊಡುತ್ತೇವೆ. ಹೀಗೆ ಮಾಡುವದರಿಂದ ನಮ್ಮ ಜೀವನವು ಅರ್ಥಭರಿತವಾಗಿರುತ್ತದೆ, ಅಂದರೆ ದೇವರು ಇಷ್ಟಪಡುವಂಥ ರೀತಿಯಲ್ಲಿ ನಾವು ಜೀವಿಸುತ್ತೇವೆ. ಒಬ್ಬನು ಇಂಥ ಜೀವನಕ್ರಮವನ್ನು ಪಾಲಿಸುವಾಗ ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತಾನೆ. ಮಾತ್ರವಲ್ಲ ಇದರಿಂದ ಯೆಹೋವನು ತನ್ನ ವೈರಿಯಾದ ಸೈತಾನನು ಒಡ್ಡಿದ ಸವಾಲಿಗೆ ಉತ್ತರಕೊಡಲು ಸಾಧ್ಯವಾಗುತ್ತದೆ.—ಜ್ಞಾನೋಕ್ತಿ 27:11.
ಇತರರೊಂದಿಗೆ ವಿವೇಕದಿಂದ ನಡಕೊಳ್ಳುವ ಕುರಿತು. ಹಿಂದೆಂದಿಗಿಂತಲೂ ಇಂದು ಗಂಡಂದಿರಿಗೆ, ಹೆಂಡತಿಯರಿಗೆ ಮತ್ತು ಮಕ್ಕಳಿಗೆ ಬೈಬಲಿನ ಸಲಹೆಯು ಅಗತ್ಯವಾಗಿದೆ. “ಯೌವನಕಾಲದ ಪತ್ನಿಯಲ್ಲಿ ಆನಂದಿಸು” ಎಂದು ಗಂಡಂದಿರಿಗೆ ದೇವರು ಸಲಹೆ ನೀಡುತ್ತಾನೆ. ಅಂದರೆ, ಗಂಡನು ತನ್ನ ಹೆಂಡತಿಗೆ ಎಂದಿಗೂ ದಾಂಪತ್ಯ ದ್ರೋಹ ಮಾಡಬಾರದೆಂದು ದೇವರು ತಿಳಿಸುತ್ತಿದ್ದಾನೆ. (ಜ್ಞಾನೋಕ್ತಿ 5:18-20) ತನ್ನ ಗಂಡನ ಹಾಗೂ ಮಕ್ಕಳ ಮೆಚ್ಚುಗೆ ಗಳಿಸುವ ಗುಣವತಿಯಾದ ಪತ್ನಿ ಹೇಗಿರಬೇಕು ಎಂಬ ಸುಂದರ ವರ್ಣನೆಯನ್ನು ವಿವಾಹಿತ ಸ್ತ್ರೀಯರು ಜ್ಞಾನೋಕ್ತಿ ಪುಸ್ತಕದಲ್ಲಿ ಕಂಡುಕೊಳ್ಳಬಹುದು. (ಜ್ಞಾನೋಕ್ತಿ, ಅಧ್ಯಾಯ 31) ಮಕ್ಕಳು ತಂದೆತಾಯಿಯ ಮಾತನ್ನು ಕೇಳಬೇಕೆಂಬ ಬುದ್ಧಿಮಾತನ್ನು ಸಹ ಆ ಪುಸ್ತಕದಲ್ಲಿ ಕೊಡಲಾಗಿದೆ. (ಜ್ಞಾನೋಕ್ತಿ 6:20) ಮಾತ್ರವಲ್ಲ, ಜನರೊಂದಿಗೆ ಸೇರದಿರುವುದು ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತದೆ. ಆದ್ದರಿಂದ, ಸ್ನೇಹಿತರು ಅಗತ್ಯವೆಂದು ಈ ಪುಸ್ತಕ ತೋರಿಸುತ್ತದೆ. (ಜ್ಞಾನೋಕ್ತಿ 18:1) ಸ್ನೇಹಿತರು ನಮ್ಮ ಮೇಲೆ ಒಂದೋ ಒಳ್ಳೆಯ ಇಲ್ಲವೆ ಕೆಟ್ಟ ಪ್ರಭಾವ ಬೀರಬಲ್ಲರು. ಹಾಗಾಗಿ, ನಾವು ವಿವೇಕದಿಂದ ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಬೇಕು.—ಜ್ಞಾನೋಕ್ತಿ 13:20; 17:17.
ತಮ್ಮ ಸ್ವಂತ ಜೀವನವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಕುರಿತು. ಮದ್ಯಪಾನ ಚಟದಿಂದ ದೂರವಿರುವುದು, ಕೆಟ್ಟ ಸ್ವಭಾವಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಶ್ರಮಪಟ್ಟು ದುಡಿಯುವುದು ಮುಂತಾದ ವಿಷಯಗಳ ಕುರಿತು ಬೆಲೆಕಟ್ಟಲಾಗದ ಸಲಹೆಗಳು ಜ್ಞಾನೋಕ್ತಿ ಪುಸ್ತಕದಲ್ಲಿವೆ. (ಜ್ಞಾನೋಕ್ತಿ 6:6; 14:30; 20:1) ದೇವರ ಸಲಹೆಯನ್ನು ಬಿಟ್ಟು ಮಾನವ ತೀರ್ಮಾನಗಳ ಪ್ರಕಾರ ನಡೆಯುವುದು ಅಪಾಯವೆಂದು ಈ ಪುಸ್ತಕ ಎಚ್ಚರಿಸುತ್ತದೆ. (ಜ್ಞಾನೋಕ್ತಿ 14:12) “[ಹೃದಯದೊಳಗಿಂದ] ಜೀವಧಾರೆಗಳು ಹೊರಡುವವು” ಎಂದು ಜ್ಞಾನೋಕ್ತಿ ಪುಸ್ತಕ ತಿಳಿಸುತ್ತದೆ. ಆದುದರಿಂದ, ಅಶುದ್ಧ ವಿಚಾರಗಳು ನಮ್ಮ ಮನಸ್ಸನ್ನು ಕೆಡಿಸದಂತೆ ನಾವು ನಮ್ಮ ಹೃದಯ ಅಥವಾ ಅಂತರಂಗವನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.—ಜ್ಞಾನೋಕ್ತಿ 4:23.
ಲೋಕದ ನಾನಾ ಕಡೆಗಳಲ್ಲಿರುವ ಲಕ್ಷಾಂತರ ಜನರು ಯೆಹೋವನ ಈ ಸಲಹೆಗಳನ್ನು ಪಾಲಿಸಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಹೀಗೆ, ಯೆಹೋವನು ನಿಜವಾಗಿಯೂ ಒಬ್ಬ ವಿವೇಕವುಳ್ಳ ಅಧಿಪತಿಯೆಂದು ಅವರು ತೋರಿಸಿಕೊಟ್ಟಿದ್ದಾರೆ.
—ಜ್ಞಾನೋಕ್ತಿ ಪುಸ್ತಕದ ಮೇಲೆ ಆಧಾರಿತವಾಗಿದೆ.