ಅಧ್ಯಾಯ 22
ಧೈರ್ಯದಿಂದ ಸುವಾರ್ತೆ ಸಾರಿದ ಅಪೊಸ್ತಲರು
ಹಿಂಸೆ, ವಿರೋಧಗಳಿದ್ದಾಗಲೂ ಕ್ರೈಸ್ತ ಸಭೆಯು ತೀವ್ರವಾಗಿ ಅಭಿವೃದ್ಧಿ ಹೊಂದುತ್ತದೆ
ಯೇಸು ಸ್ವರ್ಗಕ್ಕೆ ಏರಿ ಹೋಗಿ ಹತ್ತು ದಿನಗಳಾಗಿದ್ದವು. ಅವನ ಸುಮಾರು 120 ಮಂದಿ ಶಿಷ್ಯರು ಕ್ರಿ.ಶ. 33ರ ಯೆಹೂದಿ ಪಂಚಾಶತ್ತಮ ಹಬ್ಬದಂದು ಯೆರೂಸಲೇಮ್ ಪಟ್ಟಣದ ಒಂದು ಮನೆಯಲ್ಲಿ ಒಟ್ಟುಗೂಡಿದ್ದರು. ಥಟ್ಟನೆ ರಭಸವಾಗಿ ಗಾಳಿ ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದ ಅವರಿದ್ದ ಮನೆಯನ್ನು ಆವರಿಸಿತು. ಆಗ ಶಿಷ್ಯರೆಲ್ಲರೂ ಪವಾಡ ರೀತಿಯಲ್ಲಿ ತಮಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಲಾರಂಭಿಸಿದರು. ದೇವರು ಆ ಶಿಷ್ಯರಿಗೆ ಪವಿತ್ರಾತ್ಮ ಶಕ್ತಿಯನ್ನು ಕೊಟ್ಟದ್ದೇ ವಿಸ್ಮಯಕರವಾದ ಈ ಘಟನೆ ನಡೆಯಲು ಕಾರಣವಾಗಿತ್ತು.
ಮನೆಯ ಹೊರಗೆ ಬಹಳ ಜನಸಂದಣಿ ಇತ್ತು. ಹಬ್ಬಕ್ಕಾಗಿ ದೇಶ ವಿದೇಶಗಳಿಂದ ಬಂದಿದ್ದ ಅನೇಕರು ಅಲ್ಲಿ ನೆರೆದಿದ್ದರು. ಆ ಜನರೊಂದಿಗೆ ಅವರವರ ಸ್ವಂತ ಭಾಷೆಯಲ್ಲೇ ಯೇಸುವಿನ ಶಿಷ್ಯರು ಸರಾಗವಾಗಿ ಮಾತಾಡುತ್ತಿದ್ದರು. ಇದನ್ನು ಕಂಡು ಜನರು ಮೂಕವಿಸ್ಮಿತರಾದರು. ಪೇತ್ರನೆಂಬ ಅಪೊಸ್ತಲನು ಈ ಘಟನೆಗೆ ಕಾರಣ ವಿವರಿಸಿದನು. ಅವನು ಯೋವೇಲ ಎಂಬ ಪ್ರವಾದಿ ನುಡಿದಿದ್ದ ಒಂದು ಪ್ರವಾದನೆಯ ಕಡೆಗೆ ಜನರ ಗಮನಸೆಳೆದನು. ದೇವರು ತನ್ನ “ಆತ್ಮವನ್ನು ಸುರಿಸು”ವನೆಂದು ಮತ್ತು ಅದನ್ನು ಪಡೆದುಕೊಳ್ಳುವವರಿಗೆ ಅದ್ಭುತಮಾಡುವ ವರ ದೊರೆಯುವುದೆಂದು ಯೋವೇಲನು ತನ್ನ ಪ್ರವಾದನೆಯಲ್ಲಿ ನುಡಿದಿದ್ದನು. (ಯೋವೇಲ 2:28, 29) ಪವಿತ್ರಾತ್ಮದಿಂದ ಉಂಟಾದ ಈ ಕಾರ್ಯವು ಒಂದು ಮಹತ್ತ್ವದ ಬದಲಾವಣೆಯನ್ನು ಎತ್ತಿತೋರಿಸಿತು. ದೇವರು ಇಸ್ರಾಯೇಲ್ಯರಿಗೆ ನೀಡಿದ್ದ ಅನುಗ್ರಹವನ್ನು ತೆಗೆದು ಹೊಸದಾಗಿ ಆರಂಭವಾದ ಕ್ರೈಸ್ತ ಸಭೆಗೆ ನೀಡಿರುವನೆಂದು ಇದು ಸೂಚಿಸಿತು. ಆದುದರಿಂದ ಯಾರಿಗಾದರೂ ದೇವರ ಸೇವೆ ಮಾಡಲು ಇಷ್ಟವಿದ್ದರೆ ಅವರು ಕ್ರಿಸ್ತನ ಹಿಂಬಾಲಕರಾಗಿ ಕ್ರೈಸ್ತ ಸಭೆಯ ಭಾಗವಾಗಬೇಕಿತ್ತು.
ಕ್ರಿಸ್ತನ ಹಿಂಬಾಲಕರ ಸಂಖ್ಯೆ ಹೆಚ್ಚಾದಷ್ಟು ಹಿಂಸೆ ವಿರೋಧ ಸಹ ತೀವ್ರವಾಯಿತು. ವಿರೋಧಿಗಳು ಶಿಷ್ಯರನ್ನು ಸೆರೆಮನೆಗೆ ಹಾಕಿಸಿದರು. ಆದರೆ, ರಾತ್ರಿಯಲ್ಲಿ ಯೆಹೋವನ ದೂತನು ಬಂದು ಸೆರೆಮನೆಯ ಬಾಗಿಲನ್ನು ತೆರೆದು ಶಿಷ್ಯರನ್ನು ಬಿಡಿಸಿ ಸುವಾರ್ತೆ ಸಾರುವುದನ್ನು ಮುಂದುವರಿಸುವಂತೆ ಹೇಳಿದನು. ದೇವದೂತನು ಹೇಳಿದಂತೆಯೇ ಅವರು ಮರುದಿನ ಬೆಳಿಗ್ಗೆ ಮಾಡಿದರು. ದೇವಾಲಯಕ್ಕೆ ಹೋಗಿ ಯೇಸುವಿನ ಕುರಿತು ಸುವಾರ್ತೆ ಸಾರತೊಡಗಿದರು. ಇದರಿಂದ ಕುಪಿತರಾದ ಧಾರ್ಮಿಕ ವಿರೋಧಿಗಳು ಸಾರುವುದನ್ನು ನಿಲ್ಲಿಸುವಂತೆ ಶಿಷ್ಯರಿಗೆ ಆಜ್ಞಾಪಿಸಿದರು. ಅದಕ್ಕೆ ಸ್ವಲ್ಪವೂ ಹೆದರದ ಅಪೊಸ್ತಲರು, “ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂದು ಉತ್ತರಿಸಿದರು.—ಅಪೊಸ್ತಲರ ಕಾರ್ಯಗಳು 5:28, 29.
ಹಿಂಸೆ ಇನ್ನಷ್ಟು ಹೆಚ್ಚಾಯಿತು. ಕೆಲವು ಯೆಹೂದ್ಯರು ಸ್ತೆಫನ ಎಂಬ ಒಬ್ಬ ಶಿಷ್ಯನ ಮೇಲೆ ದೇವದೂಷಣೆಯ ಆರೋಪ ಹೊರಿಸಿ ಅವನನ್ನು ಕಲ್ಲೆಸೆದು ಕೊಂದರು. ತಾರ್ಸ ಊರಿನ ಸೌಲನೆಂಬ ತರುಣನು ಇದನ್ನು ನೋಡುತ್ತಾ ನಿಂತಿದ್ದನಲ್ಲದೆ ಕೊಲೆಗೆ ತನ್ನ ಒಪ್ಪಿಗೆ ಸಹ ನೀಡಿದನು. ಮಾತ್ರವಲ್ಲ, ಕ್ರಿಸ್ತನ ಹಿಂಬಾಲಕರೆಲ್ಲರನ್ನು ಬಂಧಿಸಬೇಕೆಂದು ಅವನು ದಮಸ್ಕ ಪಟ್ಟಣಕ್ಕೆ ಹೊರಟನು. ದಾರಿಯಲ್ಲಿ ಹೋಗುತ್ತಿರುವಾಗ ಸೌಲನ ಸುತ್ತಲೂ ಆಕಾಶದಿಂದ ಪ್ರಕಾಶಮಾನವಾದ ಬೆಳಕು ಮಿಂಚಿ “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತಿದ್ದೀ?” ಎಂಬ ವಾಣಿ ಕೇಳಿಸಿತು. ಆ ಬೆಳಕಿನ ಪ್ರಭೆಯಿಂದ ದೃಷ್ಟಿ ಕಳೆದುಕೊಂಡ ಸೌಲನು “ನೀನು ಯಾರು?” ಎಂದು ಕೇಳಿದನು. ಅದಕ್ಕೆ ವಾಣಿಯು ‘ನಾನು ಯೇಸು’ ಎಂದು ಉತ್ತರಿಸಿತು.—ಅಪೊಸ್ತಲರ ಕಾರ್ಯಗಳು 9:3-5.
ಇದಾಗಿ ಮೂರು ದಿನಗಳಾದ ತರುವಾಯ, ಯೇಸು ಅನನೀಯ ಎಂಬ ಶಿಷ್ಯನೊಬ್ಬನನ್ನು ಸೌಲನ ಬಳಿ ಕಳುಹಿಸಿದನು. ಅವನು ಯೇಸುವಿನ ಅಣತಿಯಂತೆ ಸೌಲನ ದೃಷ್ಟಿದೋಷವನ್ನು ಸರಿಪಡಿಸಿದನು. ಸೌಲನು ದೀಕ್ಷಾಸ್ನಾನ ಹೊಂದಿ ಯೇಸುವಿನ ಕುರಿತು ಧೈರ್ಯದಿಂದ ಸಾರತೊಡಗಿದನು. ಮುಂದೆ ಸೌಲನು ಅಪೊಸ್ತಲ ಪೌಲನೆಂದು ಹೆಸರು ಪಡೆದು ಕ್ರೈಸ್ತ ಸಭೆಯ ಒಬ್ಬ ಹುರುಪಿನ ಸದಸ್ಯನಾದನು.
ಯೇಸುವಿನ ಶಿಷ್ಯರೆಲ್ಲರು ದೇವರ ರಾಜ್ಯದ ಸುವಾರ್ತೆಯನ್ನು ಕೇವಲ ಯೆಹೂದಿಗಳಿಗೆ ಮತ್ತು ಸಮಾರ್ಯದವರಿಗೆ ಸಾರುತ್ತಿದ್ದರು. ಹಾಗಿರುವಾಗ ಒಬ್ಬ ದೇವದೂತನು ಯೆಹೂದ್ಯನಲ್ಲದ ಕೊರ್ನೇಲ್ಯ ಎಂಬವನಿಗೆ ಕಾಣಿಸಿಕೊಂಡು ಅಪೊಸ್ತಲ ಪೇತ್ರನಿಗೆ ಕರೆಕಳುಹಿಸುವಂತೆ ತಿಳಿಸಿದನು. ಕೊರ್ನೇಲ್ಯನು ದೇವಭಯವುಳ್ಳ ವ್ಯಕ್ತಿಯಾಗಿದ್ದು ರೋಮನ್ ಸೈನ್ಯದಲ್ಲಿ ಶತಾಧಿಪತಿಯಾಗಿ ಕೆಲಸಮಾಡುತ್ತಿದ್ದನು. ಅವನು ಕರೆಕಳುಹಿಸಿದಾಗ ಪೇತ್ರನು ಇತರರೊಂದಿಗೆ ಅಲ್ಲಿ ಬಂದು ಕೊರ್ನೇಲ್ಯನಿಗೂ ಅವನ ಮನೆಯವರಿಗೂ ಸುವಾರ್ತೆ ಸಾರಿದನು. ಪೇತ್ರನು ಮಾತಾಡುತ್ತಿದ್ದಾಗ ಯೆಹೂದ್ಯರಲ್ಲದ ಆ ವಿಶ್ವಾಸಿಗಳ ಮೇಲೆ ಪವಿತ್ರಾತ್ಮ ಶಕ್ತಿ ಬಂತು. ಆಗ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಪೇತ್ರನು ಅವರಿಗೆ ಮಾರ್ಗದರ್ಶನ ನೀಡಿದನು. ಹೀಗೆ, ನಿತ್ಯಜೀವಕ್ಕಾಗಿರುವ ಮಾರ್ಗವು ಎಲ್ಲಾ ಜನಾಂಗದವರಿಗೆ ತೆರೆದುಕೊಂಡಿತು. ಭೂಮಿಯ ಉದ್ದಗಲಕ್ಕೂ ಸುವಾರ್ತೆಯನ್ನು ಹಬ್ಬಿಸಲು ಸಭೆಯು ಈಗ ಸಿದ್ಧಗೊಂಡಿತು.
—ಅಪೊಸ್ತಲರ ಕಾರ್ಯಗಳು 1:1–11:21 ರ ಮೇಲೆ ಆಧಾರಿತವಾಗಿದೆ.