ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lf ಪ್ರಶ್ನೆ 3 ಪು. 13-21
  • ನಿರ್ದೇಶನಗಳು ಎಲ್ಲಿಂದ ಬರುತ್ತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿರ್ದೇಶನಗಳು ಎಲ್ಲಿಂದ ಬರುತ್ತೆ?
  • ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಅದ್ಭುತಕರವಾದ ಅಣುವಿನ ರಚನೆ
  • ಮಾಹಿತಿಯನ್ನ ಸಂಗ್ರಹಿಸಿ ಇಡೋ ಅತ್ಯುತ್ತಮ ವಿಧಾನ
  • ಬರಹಗಾರನಿಲ್ಲದೆ ಪುಸ್ತಕ ಬರೋಕೆ ಸಾಧ್ಯನಾ?
  • ಕೆಲಸ ಮಾಡುತ್ತಿರುವ ಯಂತ್ರಗಳು
  • ಡಿ.ಎನ್‌.ಎಯನ್ನ “ಓದುವುದು”
  • ಸತ್ಯಗಳ ಪರಿಶೀಲನೆ ಯಾಕಷ್ಟು ಮುಖ್ಯ?
  • ಪುಟಾಣಿ ಡಿಎನ್‌ಎ ಅಪಾರ ಶೇಖರಣೆ
    ಎಚ್ಚರ!—2014
  • ದೇವರಿದ್ದಾನೆಂಬ ನಂಬಿಕೆ ತರ್ಕಬದ್ಧವೋ?
    ಎಚ್ಚರ!—2010
ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
lf ಪ್ರಶ್ನೆ 3 ಪು. 13-21

ಪ್ರಶ್ನೆ 3

ನಿರ್ದೇಶನಗಳು ಎಲ್ಲಿಂದ ಬರುತ್ತವೆ?

ತಂದೆ ಮತ್ತು ಮಗ

ನೀವು ಹೇಗೆ ಕಾಣಬೇಕು ಅಂತ ಯಾರು ಹೇಳುತ್ತಾರೆ? ನಿಮ್ಮ ಕಣ್ಣಿನ, ಕೂದಲಿನ ಮತ್ತು ಚರ್ಮದ ಬಣ್ಣ ಹೇಗಿರಬೇಕು ಅಂತ ಯಾರು ತೀರ್ಮಾನ ಮಾಡುತ್ತಾರೆ? ನಿಮ್ಮ ಎತ್ತರ, ಮೈಕಟ್ಟು, ಅಪ್ಪ ತರನಾ, ಅಮ್ಮ ತರನಾ ಅಥವಾ ಇಬ್ಬರ ಹಾಗೆ ಕಾಣಿಸಬೇಕಾ ಅಂತ ಯಾರು ಹೇಳುತ್ತಾರೆ? ನಿಮ್ಮ ಬೆರಳುಗಳು ಒಂದು ಕಡೆ ಮೃದುವಾಗಿ ಇನ್ನೊಂದು ಕಡೆ ಗಟ್ಟಿಯಾಗಿ ಉಗುರುಗಳ ಸಮೇತ ಬೆಳೆಯಬೇಕು ಅಂತ ಯಾರು ತೀರ್ಮಾನ ಮಾಡುತ್ತಾರೆ?

ಚಾರ್ಲ್ಸ್‌ ಡಾರ್ವಿನ್‌ನ ದಿನದಲ್ಲಿ ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿರಲಿಲ್ಲ. ತಂದೆ ತಾಯಿಯಲ್ಲಿ ಇರುವಂಥ ಗುಣಗಳು ಮಕ್ಕಳಲ್ಲಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹೇಗೆ ಬರುತ್ತೆ ಅನ್ನೋದರ ಬಗ್ಗೆ ಸ್ವತಃ ಡಾರ್ವಿನ್‌ಗೇ ಆಶ್ಚರ್ಯ ಆಗಿತ್ತು. ಅವನಿಗೆ ಅನುವಂಶಿಕ ನಿಯಮದ ಬಗ್ಗೆ ಅಲ್ಪಸ್ವಲ್ಪ ಗೊತ್ತಿತ್ತು. ಆದರೆ ಅನುವಂಶಿಕ ಜೀವಕೋಶಗಳು ಹೇಗೆ ಕೆಲಸ ಮಾಡುತ್ತವೆ ಅಂತ ಅವನಿಗೆ ಹೆಚ್ಚು ಗೊತ್ತಿರಲಿಲ್ಲ. ಈಗ ಜೀವ-ವಿಜ್ಞಾನಿಗಳು ಮಾನವನ ಅನುವಂಶಿಕದ ಬಗ್ಗೆ, ಒಂದೊಂದೂ ನಿರ್ದೇಶನಗಳು ಇರೋ ಅದ್ಭುತವಾದ ಅಣುವಾದ ಡಿ.ಎನ್‌.ಎ (Deoxyribonucleic acid-ಡಿಯಾಕ್ಸಿರೈಬೋನ್ಯುಕ್ಲಿಕ್‌ ಆಸಿಡ್‌) ಬಗ್ಗೆ ಅಧ್ಯಯನ ಮಾಡಲಿಕ್ಕೆ ಎಷ್ಟೋ ದಶಕಗಳನ್ನೇ ಕಳೆದಿದ್ದಾರೆ. ಡಿ.ಎನ್‌.ಎ ಚಿಕ್ಕ ಅಣುವಾದರೂ ಅದರಲ್ಲಿ ತುಂಬ ನಿರ್ದೇಶನಗಳಿವೆ. ಈಗ ನಮ್ಮ ಮುಂದಿರೋ ಪ್ರಶ್ನೆ, ಈ ನಿರ್ದೇಶನಗಳು ಎಲ್ಲಿಂದ ಬರುತ್ತವೆ?

ಅನೇಕ ವಿಜ್ಞಾನಿಗಳು ಏನು ಹೇಳ್ತಾರೆ? ಅನೇಕ ಜೀವಶಾಸ್ತ್ರದ ಮತ್ತು ಬೇರೆ ವಿಜ್ಞಾನಿಗಳು, ಡಿ.ಎನ್‌.ಎ ಮತ್ತು ಅದರಲ್ಲಿರೋ ನಿರ್ದೇಶನಗಳು ಮಿಲ್ಯಾಂತರ ವರ್ಷಗಳಿಂದ ತುಂಬಾ ಪ್ರಕ್ರಿಯೆಗಳು ನಡೆದು ಈ ಜೀವಕೋಶ ತನ್ನಿಂದ ತಾನೇ ಬಂತು ಅಂತ ನಂಬುತ್ತಾರೆ. ಒಂದು ಅಣುವಿನ ರಚನೆ, ಕೆಲಸ ಮಾಡುವ ವಿಧ, ಇದರಲ್ಲಿರೋ ನಿರ್ದೇಶನಗಳು ಮತ್ತು ಇದನ್ನ ಬೇರೆ ಅಣುವಿಗೆ ಹೇಗೆ ಕಳಿಸುತ್ತೆ ಅನ್ನೋ ವಿಷಯಗಳ ಬಗ್ಗೆ ನಮ್ಮ ಹತ್ತಿರ ಯಾವ ಆಧಾರ ಇಲ್ಲ ಅಂತ ಹೇಳುತ್ತಾರೆ.17

ಬೈಬಲ್‌ ಏನು ಹೇಳುತ್ತೆ? ನಮ್ಮ ದೇಹದ ಎಲ್ಲಾ ಅಂಗಗಳು ಯಾವಾಗ ರಚನೆಯಾದವು, ಯಾವ ಸಮಯದಲ್ಲಿ ರೂಪುಗೊಂಡವು ಅಂತ ಬೈಬಲ್‌ನಲ್ಲಿದೆ. ದೇವರು ಮಾಡಿರೋ ಅದ್ಭುತ ರಚನೆಯ ಬಗ್ಗೆ ರಾಜ ದಾವೀದ ಹೀಗೆ ಹೇಳಿದ್ದಾನೆ: “ನಾನು ಇನ್ನೂ ಪಿಂಡವಾಗಿ ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು, ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ, ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತ ನಿನ್ನ ಪುಸ್ತಕದಲ್ಲಿ ಬರೆದಿತ್ತು.”—ಕೀರ್ತನೆ 139:16.

ಈ ಆಧಾರಗಳಿಂದ ಏನು ಗೊತ್ತಾಗುತ್ತೆ? ಒಂದುವೇಳೆ ವಿಕಾಸವಾದ ನಿಜ ಆಗಿದ್ದರೆ ಕಡಿಮೆಪಕ್ಷ ಡಿ.ಎನ್‌.ಎ ತನ್ನಷ್ಟಕ್ಕೆ ತಾನೇ ನಡೆದ ಘಟನೆಗಳಿಂದಾಗಿ ಅಸ್ತಿತ್ವಕ್ಕೆ ಬಂತು ಅಂತ ರುಜುವಾಗಿರಬೇಕು ಅಥವಾ ಬೈಬಲ್‌ ನಿಜ ಆಗಿದ್ದರೆ, ಡಿ.ಎನ್‌.ಎಯನ್ನ ಒಬ್ಬ ಬುದ್ಧಿವಂತ ವ್ಯಕ್ತಿ ಮಾಡಿದ್ದಾನೆ ಅನ್ನೋದಕ್ಕೂ ಆಧಾರ ಇರಬೇಕು.

ಡಿ.ಎನ್‌.ಎ ಬಗ್ಗೆ ಸರಳವಾಗಿ ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸಿದಾಗ ಅದು ಅರ್ಥನೂ ಆಗುತ್ತೆ, ಆಶ್ಚರ್ಯನೂ ಆಗುತ್ತೆ. ಹಾಗಾದರೆ ಬನ್ನಿ, ಜೀವಕೋಶದ ಒಳಗೆ ಇನ್ನೊಂದು ಟೂರ್‌ ಮಾಡಿ ನೋಡೋಣ್ವಾ? ಈಗ ನಾವು ಜೀವಕೋಶವನ್ನ ಒಂದು ಮ್ಯೂಸಿಯಮ್‌ಗೆ ಹೋಲಿಸೋಣ. ಒಬ್ಬ ಮನುಷ್ಯನ ಜೀವಕೋಶದ ಬಗ್ಗೆ ತಿಳಿದುಕೊಳ್ಳೋಕ್ಕೆ ಸಹಾಯ ಮಾಡೋ ಒಂದು ಮ್ಯೂಸಿಯಮ್‌ ಒಳಗೆ ನೀವು ಹೋಗುತ್ತಾ ಇದ್ದೀರ ಅಂತ ಊಹಿಸಿ. ಈ ಮ್ಯೂಸಿಯಮ್‌ನ್ನ ಮಾನವ ಜೀವಕೋಶದ ಹಾಗೇನೇ ಮಾಡಿದ್ದಾರೆ. ಇದನ್ನ ಒಂದು ಜೀವಕೋಶಕ್ಕೆ ಹೋಲಿಸಿದರೆ 1,30,00,000 ಪಟ್ಟು ದೊಡ್ಡದಿದೆ. ಅಂದರೆ, 70,000 ಸಾವಿರ ಜನರು ಕೂರಬಹುದಾದ ಒಂದು ಕ್ರೀಡಾಂಗಣದಷ್ಟು ದೊಡ್ಡದು.

ನೀವೀಗ ಮ್ಯೂಸಿಯಮ್‌ ಒಳಗೆ ಹೋಗುತ್ತಾ ಇದ್ದೀರ. ಅಲ್ಲಿ ನಡೆಯುತ್ತಿರೋ ಕೆಲಸಗಳನ್ನ, ಅಲ್ಲಿರುವ ಆಕಾರವನ್ನೆಲ್ಲ ನೋಡಿ ನಿಮಗೆ ತುಂಬ ಆಶ್ಚರ್ಯ ಆಗುತ್ತೆ. ಜೀವಕೋಶದ ಮಧ್ಯದಲ್ಲಿ ನ್ಯೂಕ್ಲಿಯಸ್‌ ಇದೆ. ಅದರ ಎತ್ತರ 20 ಅಂತಸ್ತಿನ ಬಿಲ್ಡಿಂಗ್‌ನಷ್ಟು ಇದೆ.

ಜೀವಕೋಶದ ನ್ಯೂಕ್ಲಿಯಸ್‌ನಲ್ಲಿ ಡಿ.ಎನ್‌.ಎಯನ್ನ ಪ್ಯಾಕ್‌ ಮಾಡಲಾಗಿದೆ

“ಇಂಜಿನಿಯರಿಂಗ್‌ ಸಾಧನೆ”—ಡಿ.ಎನ್‌.ಎಯನ್ನ ಹೇಗೆ ಪ್ಯಾಕ್‌ ಮಾಡಲಾಗಿದೆ: ನ್ಯುಕ್ಲಿಯಸ್‌ನಲ್ಲಿ ಡಿ.ಎನ್‌.ಎ ಅಚ್ಚುಕಟ್ಟಾಗಿ ಪ್ಯಾಕ್‌ ಆಗಿರೋದನ್ನ ನೋಡಿದರೆ ಅದನ್ನ ಇಂಜಿನಿಯರಿಂಗ್‌ ಸಾಧನೆ ಅಂತ ಕರಿಬಹುದು—ಇದನ್ನ ಒಂದು ಟೆನಿಸ್‌ ಬಾಲ್‌ ಒಳಗಡೆ 40 ಕಿ.ಮೀ. ಉದ್ದವಾಗಿರೋ ದಾರವನ್ನ ಅಚ್ಚುಕಟ್ಟಾಗಿ ಸುತ್ತಿರೋದಕ್ಕೆ ಹೋಲಿಸಬಹುದು

ಈಗ ನೀವು ಅದರ ಕಡೆ ಹೆಜ್ಜೆ ಹಾಕ್ತಾ ಇದ್ದೀರ. ನ್ಯುಕ್ಲಿಯಸ್‌ನ ಹೊರಗಿನ ಪೊರೆಯ ಬಾಗಿಲಿಂದ ಒಳಗೆ ಹೋಗುತ್ತೀರ. ಅಲ್ಲಿ ಕ್ರೋಮೊಸೋಮ್‌ಗಳು ನಿಮ್ಮ ಕಣ್ಣಿಗೆ ಕಾಣಿಸ್ತಾ ಇದೆ. ಇದರಲ್ಲಿ 46 ಕ್ರೋಮೊಸೋಮ್ಸ್‌ ಇವೆ. ಇವನ್ನು ಎರೆಡೆರೆಡಾಗಿ ಜೋಡಿಸಲಾಗಿದೆ. ಆದರೆ ಅವುಗಳ ಎತ್ತರ ಬೇರೆಬೇರೆ ಆಗಿದೆ. ನಿಮ್ಮ ಹತ್ತಿರ ಇರೋ ಒಂದು ಕ್ರೋಮೊಸೋಮ್‌ನ ಎತ್ತರ 12 ಅಂತಸ್ತಿನ ಬಿಲ್ಡಿಂಗ್‌ನಷ್ಟು ಇದೆ. (1) ಒಂದೊಂದು ಕ್ರೋಮೊಸೋಮ್‌ನ ದಪ್ಪ ಒಂದು ಮರದ ಕಾಂಡದಷ್ಟು ಇದೆ ಮತ್ತು ಅದನ್ನ ಮಧ್ಯದಲ್ಲಿ ಅದುಮಲಾಗಿದೆ. ಕ್ರೋಮೊಸೋಮ್‌ನ ಸುತ್ತ ಬೇರೆಬೇರೆ ರೀತಿಯ ಬ್ಯಾಂಡ್‌ ಹಾಕಿರೋದನ್ನ ನೀವು ನೋಡುತ್ತೀರ. ಹತ್ತಿರದಿಂದ ನೋಡಿದಾಗ ಈ ಬ್ಯಾಂಡ್‌ಗಳು ಉದ್ದವಾಗಿ, ಅಡ್ಡವಾಗಿ ಸುತ್ತಿಕೊಂಡಿವೆ, ಇದರೊಳಗೆ ಇನ್ನೂ ಇಣುಕಿ ನೋಡಿದಾಗ ಪುನಃ ಬ್ಯಾಂಡ್‌ಗಳು ಅಡ್ಡವಾಗಿ ಸುತ್ತಿಕೊಂಡಿರೋದು ನಿಮಗೆ ಕಾಣಿಸುತ್ತೆ. (2) ಇವು ನಿಮಗೆ ಶೆಲ್ಫ್‌ನಲ್ಲಿ ಇಟ್ಟಿರೋ ಪುಸ್ತಕಗಳ ಹಾಗೆ ಕಾಣಿಸ್ತಾ ಇದೆಯಾ? ಇಲ್ಲ. ಇವುಗಳ ಜೋಡಣೆ ಸ್ಪ್ರಿಂಗ್‌ನ ಹಾಗೆ ವ್ಯವಸ್ತಿತವಾಗಿ, ಬಿಗಿಯಾಗಿ ಇದೆ. ಒಂದನ್ನ ಎಳೆದರೆ ಎಲ್ಲವೂ ಸುಲಭವಾಗಿ ಬಂದುಬಿಡುತ್ತೆ. ಈ ಸ್ಪ್ರಿಂಗ್‌ನ ಒಳಗೆ ಚಿಕ್ಕ ಸ್ಪ್ರಿಂಗ್‌ ತರ ಇರುವ ಇನ್ನೊಂದು ವಸ್ತು ನಿಮಗೆ ಕಾಣಿಸುತ್ತೆ. ಇದನ್ನ ನೋಡಿ ನಿಮಗೆ ಆಶ್ಚರ್ಯ ಆಗುತ್ತೆ. (3) ಇದು ಕೂಡ ವ್ಯವಸ್ಥಿತವಾಗಿ ಇರೋದನ್ನ ನೀವು ನೋಡುತ್ತೀರ. ಈ ಚಿಕ್ಕ ಸ್ಪ್ರಿಂಗ್‌ ಒಳಗೆ ಕ್ರೋಮೊಸೋಮ್‌ಗೆ ಬೇಕಾಗಿರೋ ಮುಖ್ಯವಾದ ಅಂಶ ಇದೆ. ಇದು ನೋಡೋಕೆ ಹಗ್ಗದ ತರ ಉದ್ದವಾಗಿ ಇದೆ. ಏನಿದು?

ಒಂದು ಅದ್ಭುತಕರವಾದ ಅಣುವಿನ ರಚನೆ

ಇದನ್ನ ಅರ್ಥ ಮಾಡಿಕೊಳ್ಳೋಕೆ ಕ್ರೋಮೊಸೋಮನ್ನು ಒಂದು ಹಗ್ಗಕ್ಕೆ ಹೋಲಿಸೋಣ. ಇದರ ದಪ್ಪ ಹೆಚ್ಚುಕಮ್ಮಿ 1 ಇಂಚು ಇದೆ ಮತ್ತು ಇದನ್ನ ಒಂದು ರೀಲ್‌ನಲ್ಲಿ ಬಿಗಿಯಾಗಿ ಸುತ್ತಲಾಗಿದೆ. (4) ಸ್ಪ್ರಿಂಗ್‌ನ ಒಳಗೆ ಇನ್ನೂ ಚಿಕ್ಕ ಸ್ಪ್ರಿಂಗ್‌ಗಳನ್ನು ಮಾಡಲಿಕ್ಕೆ ಇದರಿಂದ ಸಹಾಯ ಆಗುತ್ತೆ. ತನ್ನ ಜಾಗದಿಂದ ಬೇರೆ ಕಡೆ ಹೋಗದೇ ಇರೋದಕ್ಕೆ ರೀಲ್‌ಗೆ ಇದು ಬಿಗಿಯಾಗಿ ಸುತ್ತಿಕೊಂಡಿರುತ್ತೆ. ಮ್ಯೂಸಿಮ್‌ನಲ್ಲಿರೋ ಒಂದು ಬೋರ್ಡ್‌ನಲ್ಲಿ ಈ ಹಗ್ಗ ತುಂಬ ವ್ಯವಸ್ಥಿತವಾಗಿ ಸುತ್ತಿ ಪ್ಯಾಕ್‌ ಮಾಡಲಾಗಿದೆ ಅಂತ ಬರೆದಿದೆ. ಒಂದುವೇಳೆ, ಈ ಕ್ರೋಮೊಸೋಮ್‌ನಲ್ಲಿರೋ ಹಗ್ಗಗಳನ್ನ ಎಳೆದು ಒಂದಕ್ಕೊಂದು ಜೋಡಿಸಿದರೆ ಇದು ಭೂಮಿಯ ಅರ್ಧ ಭಾಗವನ್ನ ಆವರಿಸುತ್ತೆ!a

ಇಷ್ಟು ಚೆನ್ನಾಗಿ ಪ್ಯಾಕ್‌ ಮಾಡಿರೋ ಈ ವಿಧಾನವನ್ನು ಒಂದು ವಿಜ್ಞಾನ ಪುಸ್ತಕ “ಇಂಜಿನಿಯರಿಂಗ್‌ ಸಾಧನೆ” ಅಂತ ಕರೆಯುತ್ತೆ.18 ಈ ಎಲ್ಲಾ ಕೆಲಸಗಳು ತನ್ನಿಂದ ತಾನೇ ಆಗುತ್ತೆ ಅಂತ ನಿಮಗೆ ಯಾರಾದರೂ ಹೇಳಿದರೆ ನೀವದನ್ನ ನಂಬುತ್ತೀರಾ? ಊಹಿಸಿ, ಅದೇ ಮ್ಯೂಸಿಯಮ್‌ನಲ್ಲಿ ಒಂದು ದೊಡ್ಡ ಅಂಗಡಿ ಇದೆ ಮತ್ತು ಅದರಲ್ಲಿ ಲಕ್ಷಗಟ್ಟಲೆ ವಸ್ತುಗಳನ್ನ ಮಾರಾಟಕ್ಕೆ ಇಟ್ಟಿದ್ದಾರೆ. ಎಲ್ಲ ವಸ್ತುಗಳನ್ನ ಅದರದರ ಜಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಇವೆಲ್ಲಾ ಅದರಷ್ಟಕ್ಕೆ ಅದೇ ಹೋಗಿ ತಮ್ಮ ಜಾಗದಲ್ಲಿ ಕೂತುಕೊಳ್ತು ಅಂತ ಹೇಳಿದರೆ ನೀವದನ್ನ ನಂಬುತ್ತೀರಾ?

ಮ್ಯೂಸಿಯಮ್‌ನಲ್ಲಿರೋ ಬೋರ್ಡ್‌ನಲ್ಲಿ ಈ ಹಗ್ಗವನ್ನ ಕೈಯಲ್ಲಿ ಹಿಡಿದುಕೊಂಡು ಹತ್ತಿರದಿಂದ ನೋಡಿ ಅಂತ ಬರೆದಿದೆ (5). ಈಗ ನೀವದನ್ನ ಕೈಯಲ್ಲಿ ತಗೊಂಡು ನೋಡಿದಾಗ ಅದು ಮಾಮೂಲಿ ಹಗ್ಗ ಅಲ್ಲ ಅಂತ ನಿಮಗೆ ಗೊತ್ತಾಗುತ್ತೆ. ಅದು ಸ್ಪ್ರಿಂಗ್‌ ರೂಪದಲ್ಲಿ ಎರಡು ಹಗ್ಗಗಳಿಂದ ಜೋಡಣೆಯಾಗಿ ರಚನೆಯಾಗಿದೆ. ಇವುಗಳ ಮಧ್ಯೆ ಅಂತರ ಇರೋ ಹಾಗೆ ಚಿಕ್ಕ-ಚಿಕ್ಕ ಬಾರ್‌ಗಳಿಂದ ಜೋಡಿಸಲಾಗಿದೆ. (ಪುಟ 20ರಲ್ಲಿರೋ ಚಿತ್ರ ನೋಡಿ.) ಈ ಚಿತ್ರ ಸುರುಳಿ ಆಕಾರದಲ್ಲಿರೋ ಮೆಟ್ಟಿಲುಗಳ ಸರಣಿ ತರ ಕಾಣಿಸುತ್ತೆ. ಜೀವನದಲ್ಲೇ ಅತೀ ರಹಸ್ಯವಾಗಿರೋ ಅಣು ನಿಮ್ಮ ಕೈಯಲ್ಲಿದೆ ಅಂತ ನಿಮಗೆ ಈಗ ಗೊತ್ತಾಗುತ್ತೆ (6). ಅದೇ ಡಿ.ಎನ್‌.ಎ.

ಯಾವುದನ್ನ ತುಂಬ ಅಚ್ಚುಕಟ್ಟಾಗಿ, ಬಿಗಿಯಾಗಿ ಪ್ಯಾಕ್‌ ಮಾಡಲಾಗಿರುತ್ತೋ ಆ ಡಿ.ಎನ್‌.ಎ ಅಣುವನ್ನ ಕ್ರೋಮೊಸೋಮ್‌ ಅಂತ ಕರಿತಾರೆ. ಏಣಿಯ ಮೆಟ್ಟಿಲುಗಳನ್ನ ಬೇಸ್‌ ಪೇರ್ಸ್‌ (Base pairs) ಅಂತ ಕರಿತಾರೆ. (7) ಇವೆಲ್ಲಾ ಯಾವ ಕೆಲಸಗಳನ್ನ ಮಾಡ್ತವೆ? ಇದರಿಂದ ಏನು ಪ್ರಯೋಜನ ಅಂತ ಮ್ಯೂಸಿಯಮ್‌ನಲ್ಲಿರೋ ಇನ್ನೊಂದು ಬೋರ್ಡ್‌ ಸರಳವಾಗಿ ವಿವರಿಸುತ್ತೆ.

ಮಾಹಿತಿಯನ್ನ ಸಂಗ್ರಹಿಸಿ ಇಡೋ ಅತ್ಯುತ್ತಮ ವಿಧಾನ

ಈಗ ಆ ಬೋರ್ಡ್‌ನಲ್ಲಿ, ನೀವು ಡಿ.ಎನ್‌.ಎಯನ್ನು ಅರ್ಥ ಮಾಡಿಕೊಳ್ಳಬೇಕಂದ್ರೆ ಏಣಿಯ ಮೆಟ್ಟಿಲುಗಳನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಬರೆದಿದೆ. ಈ ಏಣಿಯ ಮೆಟ್ಟಿಲುಗಳನ್ನ ಕಟ್‌ ಮಾಡಿ ಎರಡು ಭಾಗ ಮಾಡಲಾಗಿದೆ. ಹೀಗೆ ಕಟ್‌ ಮಾಡಿರೋದ್ರಿಂದ ಏಣಿಯ ಎರಡೂ ಭಾಗಗಳಲ್ಲಿ ಅರ್ಧ ಮೆಟ್ಟಿಲುಗಳು ಉಳಿದುಕೊಂಡಿರೋದನ್ನ ನೀವು ನೋಡಬಹುದು. ಇದು ನಾಲ್ಕು ವಿಧಗಳಲ್ಲಿ ಇರುತ್ತೆ ಅಂತ ವಿಜ್ಞಾನಿಗಳು ಹೇಳ್ತಾರೆ. ಅವರು ಇದಕ್ಕೆ ಎ, ಟಿ, ಜಿ ಮತ್ತು ಸಿ ಅಂತ ಹೆಸರಿಟ್ಟಿದ್ದಾರೆ. ಈ ನಾಲ್ಕು ಅಕ್ಷರಗಳ ಕ್ರಮವು, ಮಾಹಿತಿಯನ್ನ ಒಂದು ಕೋಡ್‌ ರೀತಿಯಲ್ಲಿ ತಿಳಿಸುತ್ತೆ ಅಂತ ವಿಜ್ಞಾನಿಗಳು ಕಂಡುಹಿಡಿದಾಗ ಅವರಿಗೆ ಅಚ್ಚರಿ ಆಯಿತು.

19ನೇ ಶತಮಾನದಲ್ಲಿ ಜನ ಒಬ್ಬರ ಜೊತೆ ಒಬ್ಬರು ಮಾತಾಡೋಕೆ ಮಾರ್ಸ್‌ ಕೋಡನ್ನು ಕಂಡುಹಿಡಿದರು. ಈ ಮಾರ್ಸ್‌ ಕೋಡ್‌ನಲ್ಲಿ ಕೇವಲ ಎರಡೇ ಚಿಹ್ನೆ ಅಥವಾ “ಅಕ್ಷರ” ಇತ್ತು. ಒಂದು ಚುಕ್ಕೆ (.), ಇನ್ನೊಂದು ಡ್ಯಾಶ್‌ (-). ಈ ಅಕ್ಷರಗಳನ್ನ ಮಾತ್ರ ಬಳಸುತ್ತಾ ಅನೇಕ ಪದಗಳನ್ನ, ವಾಕ್ಯಗಳನ್ನ ರಚಿಸಬಹುದು. ಅದೇ ತರ ಡಿ.ಎನ್‌.ಎಯಲ್ಲಿ ನಾಲ್ಕು ಕೋಡ್‌ಗಳ ಅಕ್ಷರ ಇದೆ. ಎ, ಟಿ, ಜಿ ಮತ್ತು ಸಿ. ಈ “ಅಕ್ಷರಗಳು” ಯಾವ ಕ್ರಮದಲ್ಲಿ ಬರುತ್ತೋ ಅದು ಒಂದು ಶಬ್ಧ ಅಥವಾ ಕೋಡಾನ್‌ ಆಗುತ್ತೆ. ಈ ಕೋಡಾನ್‌ಗಳಿಂದ “ಕಥೆಗಳನ್ನ” ಬರೆಯಬಹುದು. ಅದನ್ನೇ ಜೀನ್ಸ್‌ ಅಂತ ಕರೀತಾರೆ. ಒಂದು ಜೀನ್‌ನಲ್ಲಿ ಸುಮಾರು 27,000 ಅಕ್ಷರಗಳು ಇರುತ್ತವೆ. ಈ ಜೀನ್‌ಗಳು ಮತ್ತು ಅದರ ಮಧ್ಯೆ ಇರೋ ಗ್ಯಾಪ್‌ಗಳು ಸೇರಿ ಒಂದು ಕ್ರೋಮೊಸೋಮ್‌ ಆಗುತ್ತೆ. ಇಂತ 23 ಕ್ರೋಮೊಸೋಮ್‌ಗಳು ಸೇರಿ ಒಂದು ಪೂರ್ತಿ “ಪುಸ್ತಕ” ಅಥವಾ ಜೀನೋಮ್‌ ಆಗುತ್ತೆ. ಜೀನೋಮ್‌ ಅಂದರೆ ಒಂದು ಜೀವಿಯ ಬಗ್ಗೆ ಇರುವ ಸಂಪೂರ್ಣ ಅನುವಂಶಿಕ ಮಾಹಿತಿ.b

ಈ ಜೀನೋಮ್‌ ಒಂದು ದೊಡ್ಡ ಪುಸ್ತಕ ಅಂತ ಹೇಳಬಹುದು. ಅದರಲ್ಲಿ ಎಷ್ಟು ಮಾಹಿತಿ ಇದೆ? ಮನುಷ್ಯನ ಜೀನೋಮ್‌ನಲ್ಲಿ ಏಣಿಯ ತರ ಇರುವ 300 ಕೋಟಿ ಬೇಸ್‌ ಪೇರ್‌ಗಳು ಇವೆ.19 ಇದನ್ನ ಅರ್ಥ ಮಾಡಿಕೊಳ್ಳೋಕೆ 1,000 ಪುಟಗಳಿರೋ ಎನ್‌ಸೈಕ್ಲೋಪಿಡಿಯ ಬಗ್ಗೆ ಊಹಿಸಿ. ಒಂದು ಜೀನೋಮ್‌ನಲ್ಲಿರೋ ಮಾಹಿತಿಯನ್ನ ನಾವು ಬರೆಯೋಕೆ ಶುರುಮಾಡಿದರೆ ಎನ್‌ಸೈಕ್ಲೋಪಿಡಿಯದಂತ 428 ಪುಸ್ತಕಗಳು ಬೇಕಾಗುತ್ತೆ. ನಾವೀಗಾಗಲೇ ನೋಡಿದ ಹಾಗೆ ಒಂದು ಜೀವಕೋಶದಲ್ಲಿ ಎರಡು ಜೀನೋಮ್‌ನ ಪ್ರತಿಗಳು ಇರುತ್ತೆ. ಆದ್ದರಿಂದ ಈ ಇನ್ನೊಂದು ಪ್ರತಿಯನ್ನೂ ಬರೆಯೋದಕ್ಕೆ ಶುರು ಮಾಡಿದರೆ ಪುನಃ 428 ಎನ್‌ಸೈಕ್ಲೋಪಿಡಿಯ ಬೇಕಾಗುತ್ತೆ. ಹೀಗೆ ಒಟ್ಟು 856 ಪುಸ್ತಕಗಳು ಬೇಕಾಗುತ್ತೆ. ನಾವು ಹಗಲೂ ರಾತ್ರಿ ನಿದ್ದೆ ಇಲ್ಲದೆ ಜೀನೋಮ್‌ನಲ್ಲಿರೋ ಮಾಹಿತಿಗಳನ್ನ ಬರೆಯೋಕೆ ಶುರುಮಾಡಿದರೆ, ಇಡೀ ಪುಸ್ತಕವನ್ನ ಬರೆದು ಮುಗಿಸೋಕೆ ಸುಮಾರು 80 ವರ್ಷ ಹಿಡಿಯುತ್ತೆ.

ಇಷ್ಟು ಪ್ರಯತ್ನ ಹಾಕಿ ನಾವಿದನ್ನ ಬರೆದರೂ ನಮ್ಮ ದೇಹಕ್ಕೆ ಯಾವುದೇ ಪ್ರಯೋಜನ ಆಗಲ್ಲ. ಯಾಕೆಂದರೆ ಈ ನೂರಾರು ಎನ್‌ಸೈಕ್ಲೋಪಿಡಿಯದ ಮಾಹಿತಿಯನ್ನ ನಿಮ್ಮ ದೇಹದಲ್ಲಿರೋ 10 ಕೋಟಿ ಜೀವಕೋಶಗಳ ಒಳಗೆ ಹೇಗೆ ಹಾಕುತ್ತೀರ? ಇದನ್ನ ಜನರು ಮಾಡೋದಿರಲಿ, ಊಹಿಸೋಕೂ ಆಗಲ್ಲ.

ಕಂಪ್ಯೂಟರ್‌ ಸೈನ್ಸ್‌ ಮತ್ತು ಅಣುಜೀವ ಶಾಸ್ತ್ರದ ಪ್ರೊಫೆಸರ್‌ ಹೀಗೆ ಹೇಳುತ್ತಾರೆ: “ಒಣಗಿಸಿದ ಒಂದು ಗ್ರಾಮ್‌ ಡಿ.ಎನ್‌.ಎ ಒಂದು ಘನ (Cubic) ಸೆಂಟಿಮೀಟರ್‌ ಜಾಗವನ್ನ ಆವರಿಸುತ್ತೆ. ಇಷ್ಟು ಚಿಕ್ಕ ಜಾಗದಲ್ಲಿ ಸುಮಾರು 1 ಲಕ್ಷ ಕೋಟಿ ಸಿಡಿಗಳಲ್ಲಿ ಇರುವಷ್ಟು ಮಾಹಿತಿಯನ್ನ ಸಂಗ್ರಹಿಸಬಹುದು.”20 ಇದರಿಂದ ಏನು ಗೊತ್ತಾಗುತ್ತೆ? ನಾವೀಗಾಗಲೇ ನೋಡಿದ ಹಾಗೆ ಡಿ.ಎನ್‌.ಎಯಲ್ಲಿ ಜೀನ್‌ ಅಥವಾ ಕಥೆಗಳು ಇವೆ ಅಂದರೆ ಮಾನವ ದೇಹದ ರಚನೆ ಹೇಗೆ ಆಗಬೇಕು ಅನ್ನೋ ನಿರ್ದೇಶನ ಅದರಲ್ಲಿ ಇರುತ್ತೆ. ಈ ನಿರ್ದೇಶನಗಳಿಂದಾಗಿ ಮನುಷ್ಯರು ನೋಡೋಕೆ ಒಬ್ಬರ ಹಾಗೇ ಇನ್ನೊಬ್ಬರು ಇರೋದಿಲ್ಲ. ಈ ಎಲ್ಲಾ ನಿರ್ದೇಶನಗಳು ಒಂದೊಂದು ಜೀವಕೋಶದಲ್ಲೂ ಇರುತ್ತೆ. ಒಂದು ಚಮಚ ಡಿ.ಎನ್‌.ಎಯಲ್ಲಿ ಲೋಕದಲ್ಲಿರೋ ಜನ ಸಂಖ್ಯೆಗಿಂತ 350ಪಟ್ಟು ಹೆಚ್ಚು ಮಾನವರನ್ನ ರಚಿಸುವ ಮಾಹಿತಿ ಇರುತ್ತೆ. ಇಂದು ಭೂಮಿಯಲ್ಲಿರೋ 700 ಕೋಟಿ ಜನರನ್ನ ರಚಿಸೋಕೆ ಆ ಚಮಚದ ಮೇಲಿರೋ ತೆಳುವಾದ ಪದರದಷ್ಟು ಡಿ.ಎನ್‌.ಎ ಸಾಕು!21

ಬರಹಗಾರನಿಲ್ಲದೆ ಪುಸ್ತಕ ಬರೋಕೆ ಸಾಧ್ಯನಾ?

ಒಂದು ಸಿಡಿ ಡಿಸ್ಕ್‌

ಒಂದು ಗ್ರಾಮ್‌ ಡಿ.ಎನ್‌.ಎಯಲ್ಲಿ ಸುಮಾರು 1 ಲಕ್ಷ ಕೋಟಿ ಸಿಡಿಗಳಲ್ಲಿ ಇರುವಷ್ಟು ಮಾಹಿತಿ ಇರುತ್ತೆ

ಈಗಿನ ಕಾಲದಲ್ಲಿ ಜನರು ಚಿಕ್ಕ ವಸ್ತುಗಳನ್ನ ಇನ್ನೂ ಪುಟ್ಟದಾಗಿ ಮಾಡುವಷ್ಟು ಅಭಿವೃದ್ಧಿಯನ್ನು ಹೊಂದಿದ್ದಾರೆ. ಮಾಹಿತಿಯನ್ನ ಸಂಗ್ರಹಿಸಿ ಇಡೋಕೆ ಮನುಷ್ಯರು ಮಾಡಿರೋ ವಸ್ತುಗಳನ್ನ ಡಿ.ಎನ್‌.ಎಗೆ ಹೋಲಿಸಿದರೆ ಅವು ಯಾವ ಲೆಕ್ಕಕ್ಕೂ ಬರಲ್ಲ. ಡಿ.ಎನ್‌.ಎಯನ್ನ ಒಂದು ಸಿಡಿಗೆ ಹೋಲಿಸಬಹುದು. ಒಂದು ಸಿಡಿ ಗೋಳಾಕಾರದಲ್ಲಿರುತ್ತೆ, ತೆಳ್ಳಗೆ, ಹೊಳೆಯುತ್ತಾ ಇರುತ್ತೆ. ಇದನ್ನ ಒಬ್ಬ ಬುದ್ಧಿವಂತ ಮಾಡಿದ್ದಾನೆ ಅಂತನೂ ನಾವು ಒಪ್ಪಿಕೊಳ್ಳುತ್ತೇವೆ. ಈ ಸಿಡಿಯಲ್ಲಿರೋ ಮಾಹಿತಿ ತುಂಬ ಪ್ರಯೋಜನಕರ. ಒಂದು ಜಟಿಲವಾದ ಯಂತ್ರವನ್ನ ಹೇಗೆ ತಯಾರಿಸೋದು, ಹೇಗೆ ರಿಪೇರಿ ಮಾಡೋದು ಅನ್ನೋ ಎಲ್ಲಾ ಮಾಹಿತಿ ಇದರಲ್ಲಿ ಬರೆದಿರುತ್ತೆ. ಇಷ್ಟೆಲ್ಲಾ ಮಾಹಿತಿ ಸಿಡಿ ಒಳಗೆ ಬರೆದಿದ್ದರೂ ಅದರ ಗಾತ್ರ ತೆಳ್ಳಗೇ ಇರುತ್ತೆ. ಈ ಸಿಡಿಯ ವಿಶೇಷತೆನೇ ಇದು. ಈ ಸಿಡಿಯಲ್ಲಿ ಇಷ್ಟೆಲ್ಲಾ ಮಾಹಿತಿ ಇದೆ ಅಂದರೆ ಇದರ ಹಿಂದೆ ಒಬ್ಬ ಬುದ್ಧಿವಂತನ ಕೈ ಕೆಲಸ ಇದೇ ಅಂತ ನಿಮಗೆ ಅನಿಸುವುದಿಲ್ಲವಾ? ಅದೇ ತರ, ಬರಹಗಾರನಿಲ್ಲದೆ ಒಂದು ಪುಸ್ತಕವನ್ನ ಬರೆಯೋಕೆ ಆಗುತ್ತಾ?

ಡಿ.ಎನ್‌.ಎಯನ್ನು ಒಂದು ಸಿಡಿ ಅಥವಾ ಪುಸ್ತಕಕ್ಕೆ ಹೋಲಿಸೋದರಲ್ಲಿ ಏನೂ ತಪ್ಪಿಲ್ಲ. “ಜಿನೋಮ್‌ ಅನ್ನೋ ಒಂದು ಪುಸ್ತಕಕ್ಕೆ ಹೋಲಿಸೋದು ಮಾತ್ರ ಅಲ್ಲ, ಅದೊಂದು ಪುಸ್ತಕ ಅಂತಾನೇ ಹೇಳಬಹುದು” ಅಂತ ಜಿನೋಮ್‌ ಬಗ್ಗೆ ಇರೋ ಒಂದು ಪುಸ್ತಕದಲ್ಲಿ ಇದೆ. ಅದರಲ್ಲಿ ಮುಂದುವರಿಸಿ ಹೀಗೆ ಬರೆಯಲಾಗಿದೆ: “ಹೇಗೆ ಒಂದು ಎಲೆಕ್ಟ್ರಾನಿಕ್‌ ಪುಸ್ತಕದಲ್ಲಿ ತುಂಬಾ ಮಾಹಿತಿ ಇರುತ್ತೋ, ಅದೇ ತರ ಇದರಲ್ಲೂ ತುಂಬ ಮಾಹಿತಿ ಇರುತ್ತೆ. ಜಿನೋಮ್‌ನ್ನ ಪುಸ್ತಕಕ್ಕಿಂತಲೂ ವಿಶೇಷ ಅಂತ ಹೇಳಬಹುದು. ಒಂದು ಸರಿಯಾದ ವಾತಾವರಣದಲ್ಲಿ ಇರೋ ಜಿನೋಮ್‌, ತನ್ನಷ್ಟಕ್ಕೆ ತಾನೇ ಮಾಹಿತಿಯನ್ನ ನಕಲು ಮಾಡಿ ಓದುವ ಸಾಮರ್ಥ್ಯ ಹೊಂದಿದೆ.”22 ಇದು ಡಿ.ಎನ್‌.ಎಗೆ ಇರೋ ಇನ್ನೊಂದು ಮುಖ್ಯವಾದ ವೈಶಿಷ್ಟ್ಯದ ಕಡೆ ನಮ್ಮ ಗಮನವನ್ನ ಸೆಳೆಯುತ್ತೆ.

ಕೆಲಸ ಮಾಡುತ್ತಿರುವ ಯಂತ್ರಗಳು

ನೀವಿನ್ನೂ ಜೀವಕೋಶದ ಮ್ಯೂಸಿಯಮ್‌ನ ಒಳಗಡೆ ಮೌನವಾಗಿ ನಿಂತು ನೋಡುತ್ತಾ ಇದ್ದೀರ. ಇನ್ನೊಂದು ಕಡೆ ಹಾಗೇ ಕಣ್ಣು ಹಾಯಿಸಿದಾಗ ಒಂದು ಗಾಜಿನ ಕೇಸ್‌ನಲ್ಲಿ ಡಿ.ಎನ್‌.ಎಯ ಮಾದರಿ ಇಟ್ಟಿರೋದನ್ನ ನೀವು ನೋಡುತ್ತೀರ. ಅದರ ಮೇಲಿರೋ ಬೋರ್ಡ್‌ನಲ್ಲಿ “ಇದು ಕೆಲಸ ಮಾಡೋದನ್ನು ನೋಡಲು ಈ ಬಟನ್‌ ಒತ್ತಿ” ಅಂತ ಬರೆದಿದೆ. ಅದನ್ನ ಒತ್ತಿದಾಗ ಒಂದು ಧ್ವನಿ ಇದರ ಬಗ್ಗೆ ಹೀಗೆ ವಿವರಿಸೋಕೆ ಶುರು ಮಾಡುತ್ತೆ: “ಡಿ.ಎನ್‌.ಎ ಎರಡು ಮುಖ್ಯವಾದ ಕೆಲಸ ಮಾಡುತ್ತೆ. ಒಂದು, ತನ್ನಲ್ಲಿರೋ ಮಾಹಿತಿಯನ್ನ ನಕಲು ಮಾಡಿ, ಹೊಸ ಜೀವಕೋಶಕ್ಕೆ ಹಾಕುತ್ತೆ. ಅದು ಹೇಗೆ ಅಂತ ನೋಡಿ.”

ಡಿ.ಎನ್‌.ಎಯ ಮಾದರಿ ಇರೋ ಜಾಗದ ಒಂದು ಮೂಲೆಯಿಂದ ಜಟಿಲವಾದ ಒಂದು ಯಂತ್ರ ಹೊರಗೆ ಬರುತ್ತೆ. ಇದು ಅನೇಕ ರೋಬೋಟ್‌ಗಳ ಜೋಡಣೆಯಾಗಿದೆ. ಈ ಯಂತ್ರ ಡಿ.ಎನ್‌.ಎಗೆ ಹೋಗಿ ಅಂಟಿಕೊಳ್ಳುತ್ತೆ. ರೈಲು ಹಳಿ ಮೇಲೇನೇ ಹೇಗೆ ಹೋಗುತ್ತೋ ಅದೇ ತರ ಈ ಯಂತ್ರ ಡಿ.ಎನ್‌.ಎಗೆ ಅಂಟಿಕೊಂಡು ಚಲಿಸುತ್ತೆ. ಅಲ್ಲಿ ಏನು ಆಗುತ್ತಿದೆ ಅಂತ ನೋಡೋಕೆ ಆಗದಷ್ಟು ವೇಗವಾಗಿ ಈ ಯಂತ್ರ ಚಲಿಸುತ್ತಾ ಇದೆ. ಇದು ಮುಂದೆ ಹೋದಂತೆ ಅದರ ಕೊನೆಯಲ್ಲಿ ಒಂದು ಎಳೆ ನಿಮಗೆ ಕಾಣಿಸುತ್ತೆ. ಹತ್ತಿರ ಹೋಗಿ ನೋಡಿದರೆ ಅದು ಒಂದಲ್ಲ ಎರಡು ಡಿ.ಎನ್‌.ಎ ಎಳೆಗಳು ಅಂತ ನಿಮಗೆ ಗೊತ್ತಾಗುತ್ತೆ.

ಧ್ವನಿ ಹೀಗೆ ಹೇಳುತ್ತೆ: “ಡಿ.ಎನ್‌.ಎಯನ್ನ ಸರಳವಾಗಿ ಅರ್ಥ ಮಾಡಿಕೊಳ್ಳೋಕೆ ಇರೋ ವಿಧಾನ ಇದೆ. ಅಣುಗಳ ಗುಂಪಿರೋ ಆ ಯಂತ್ರವನ್ನ ಎನ್‌ಜೈಮ್‌ (Enzyme-ಕಿಣ್ವ) ಅಂತ ಕರೆಯಬಹುದು. ಈ ಎನ್‌ಜೈಮ್‌ಗಳು ಡಿ.ಎನ್‌.ಎ ಜೊತೆ ಸೇರಿ ಚಲಿಸುವಾಗ ಡಿ.ಎನ್‌.ಎಯನ್ನ ಎರಡು ಎಳೆಗಳಾಗಿ ವಿಭಜಿಸುತ್ತೆ. ಒಂದು ಎಳೆಯನ್ನ ಬಳಸಿ ಅದರ ಹಾಗೇ ಇರೋ ಇನ್ನೊಂದು ಹೊಸ ಎಳೆಯನ್ನ ತಯಾರಿಸುತ್ತೆ. ಈ ಪ್ರಕ್ರಿಯೆಯಲ್ಲಿ ಯಂತ್ರದ ಜೊತೆ ಒಳಗೂಡಿರೋ ಎಲ್ಲಾ ಭಾಗಗಳನ್ನ ತೋರಿಸಲು ಸಾಧ್ಯ ಇಲ್ಲ. ಉದಾಹರಣೆಗೆ, ಈ ಯಂತ್ರದ ಮುಂದೆ ಇರೋ ಒಂದು ಸಣ್ಣ ಭಾಗ. ಅದು ಡಿ.ಎನ್‌.ಎ ಎಳೆಗಳನ್ನ ಮಧ್ಯದಲ್ಲಿ ವಿಭಾಗಿಸಿ ಒಂದಕ್ಕೊಂದು ಅಂಟದೇ ಸುತ್ತಿಕೊಳ್ಳೋಕೆ ಸಹಾಯ ಮಾಡುತ್ತೆ. ಅದೇ ರೀತಿ, ಇದು ಡಿ.ಎನ್‌.ಎಯಲ್ಲಿರೋ ತಪ್ಪನ್ನು ಪತ್ತೆಹಚ್ಚಿ ಹೇಗೆ ‘ಸರಿಮಾಡುತ್ತೆ’ ಅನ್ನೋದನ್ನೂ ತೋರಿಸೋಕ್ಕೆ ಆಗಲ್ಲ. ತಪ್ಪು ಆಗಾಗ ಆದರೂ ಅದನ್ನ ಸರಿಪಡಿಸ್ತಾನೇ ಇರುತ್ತೆ.”—ಪುಟ 16 ಮತ್ತು 17ರಲ್ಲಿರೋ ಚಿತ್ರ ನೋಡಿ.

ನಕಲು ಮಾಡೋ ಕೆಲಸ—ಡಿ.ಎನ್‌.ಎಯನ್ನು ಕಾಪಿ ಮಾಡೋ ವಿಧ

  1. ಎನ್‌ಜೈಮ್‌ ಯಂತ್ರದ ಈ ಭಾಗ ಡಿ.ಎನ್‌.ಎಯನ್ನ ಎರಡು ಬೇರೆ-ಬೇರೆ ಎಳೆಗಳಾಗಿ ಬೇರ್ಪಡಿಸುತ್ತೆ

  2. ಯಂತ್ರದ ಈ ಭಾಗ ಡಿ.ಎನ್‌.ಎಯ ಒಂದು ಭಾಗವನ್ನ ಒಳಗೆ ತಗೆದುಕೊಂಡು ಅದರ ಆಧಾರದ ಮೇಲೆ ಇನ್ನೊಂದು ಹೊಸ ಎಳೆಯನ್ನು ತಯಾರಿಸುತ್ತೆ

  3. ಗೋಳಾಕಾರವಾಗಿರುವ ಮತ್ತು ಜಾರುವಂತ ಕ್ಲಾಂಪ ಎನ್‌ಜೈಮ್‌ ಯಂತ್ರಕ್ಕೆ ನಿರ್ದೇಶನ ಕೊಡುತ್ತೆ ಮತ್ತು ಅದು ಒಂದೇ ಕಡೆ ಇರೊ ತರ ನೋಡಿಕೊಳ್ಳುತ್ತೆ

  4. ಡಿ.ಎನ್‌.ಎಯ ಹೊಸ ಎರಡು ಎಳೆಗಳು

    ಎನ್‌ಜೈಮ್‌ ಯಂತ್ರದಿಂದ ಡಿ.ಎನ್‌.ಎಯನ್ನ ನಕಲು ಮಾಡಲಾಗ್ತಿದೆ

ಒಂದುವೇಳೆ ಡಿ.ಎನ್‌.ಎಯ ಹಳಿಗಳು ರೈಲಿನ ಹಳಿಗಳ ಹಾಗೆ ಇದ್ದಿದ್ದರೆ ಎನ್‌ಜೈಮ್‌ ಯಂತ್ರಗಳು ಒಂದು ಗಂಟೆಗೆ 80 ಕಿ.ಮೀ. ವೇಗದಲ್ಲಿ ಹೋಗುತ್ತಿತ್ತು

ಆ ಧ್ವನಿ ಮುಂದುವರಿಸುತ್ತಾ ಹೇಳೋದು: “ಈ ಯಂತ್ರದ ವೇಗವನ್ನ ನಾವು ತೋರಿಸಬಹುದು. ನೀವು ನೋಡುತ್ತಿರೋ ತರ, ಎನ್‌ಜೈಮ್‌ಗಳು ಒಂದೇ ಸೆಕೆಂಡಿನಲ್ಲಿ ಡಿ.ಎನ್‌.ಎಯ 100 ಮೆಟ್ಟಿಲುಗಳನ್ನ ದಾಟಿ ಹೋಗುತ್ತೆ.23 ಒಂದುವೇಳೆ ಡಿ.ಎನ್‌.ಎಯ ‘ಹಳಿ’ ರೈಲಿನ ಹಳಿಗಳಷ್ಟು ದಪ್ಪ ಇದ್ದಿದ್ದರೆ ಒಂದು ಗಂಟೆಗೆ 80 ಕಿ.ಮೀ. ವೇಗದಲ್ಲಿ ಅದು ಹೋಗ್ತಿತ್ತು. ಆದ್ರೆ ಒಂದು ಬ್ಯಾಕ್ಟೀರಿಯದಲ್ಲಿ ನಕಲು ಮಾಡೋ ಎನ್‌ಜೈಮ್‌ ಯಂತ್ರ 10ಪಟ್ಟು ವೇಗದಲ್ಲಿ ಹೋಗುತ್ತೆ. ಮಾನವ ದೇಹದಲ್ಲಿರೋ ಜೀವಕೋಶದಲ್ಲಿ ನೂರಾರು ನಕಲು ಮಾಡೋ ಎನ್‌ಜೈಮ್‌ ಯಂತ್ರಗಳು ಡಿ.ಎನ್‌.ಎ ‘ಹಳಿಯ’ ಉದ್ದಕ್ಕೂ ಬೇರೆ-ಬೇರೆ ಜಾಗದಲ್ಲಿದ್ದು ಕೆಲಸ ಮಾಡ್ತವೆ. ಕೇವಲ 8 ಗಂಟೆಗಳಲ್ಲಿ ಸಂಪೂರ್ಣ ಜಿನೋಮ್‌ ಅನ್ನು ನಕಲು ಮಾಡುತ್ತೆ.”24 (ಪುಟ 20ರಲ್ಲಿರೋ “ಓದಲು ಮತ್ತು ತನ್ನನ್ನೇ ನಕಲು ಮಾಡಿಕೊಳ್ಳುವಂಥ ಒಂದು ಅಣು” ಅನ್ನೋ ಚೌಕವನ್ನ ನೋಡಿ.)

ಡಿ.ಎನ್‌.ಎಯನ್ನ “ಓದುವುದು”

ಈ ಎನ್‌ಜೈಮ್‌ ಯಂತ್ರಗಳು ಅಲ್ಲಿಂದ ಹೊರಗೆ ಬಂದು ಬೇರೆ ಕಡೆಯಲ್ಲಿ ಕಾಣಿಸಿಕೊಳ್ಳುತ್ತೆ. ಇದೂ ಕೂಡ ಡಿ.ಎನ್‌.ಎ ಜೊತೆ ನಿಧಾನವಾಗಿ ಚಲಿಸುತ್ತೆ. ಹಗ್ಗದ ತರ ಇರೋ ಈ ಡಿ.ಎನ್‌.ಎ ಯಂತ್ರದ ಒಂದು ತುದಿಯಿಂದ ಹೋಗಿ ಇನ್ನೊಂದು ತುದಿಯಿಂದ ಆಚೆ ಬರೋದನ್ನ ನೀವು ನೋಡುತ್ತೀರ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಒಂದು ಹೊಸ ಎಳೆ ಆ ಯಂತ್ರದ ಕೊನೆಯಿಂದ ಬರುತ್ತಾ ಇರೋದನ್ನ ನೀವು ನೋಡುತ್ತೀರಾ. ಇಲ್ಲಿ ಏನಾಗುತ್ತಿದೆ?

ಆ ಧ್ವನಿ ಹೀಗೆ ವಿವರಿಸುತ್ತೆ: “ಡಿ.ಎನ್‌.ಎಯ ಎರಡನೇ ಕೆಲಸ, ಮಾಹಿತಿಯನ್ನ ಬರಹ ರೂಪದಲ್ಲಿ ಕೊಡೋದು. ಇದಕ್ಕೆ ಸುರಕ್ಷಿತವಾದ ಸ್ಥಳ ನ್ಯುಕ್ಲಿಯಸ್‌. ಇದನ್ನ ಬಿಟ್ಟು ಡಿ.ಎನ್‌.ಎ ಯಾವತ್ತೂ ಹೊರಗೆ ಬರಲ್ಲ. ಹಾಗಾದರೆ ಜೀನ್‌ನಲ್ಲಿರೋ ಮಾಹಿತಿಯನ್ನ ಇದು ಓದಿ ಹೇಗೆ ಬಳಸುತ್ತೆ? ಮೊದಲು, ಎನ್‌ಜ಼ೈಮ್‌ ಯಂತ್ರ ನ್ಯುಕ್ಲಿಯಸ್‌ ಒಳಗೆ ಹೋಗಿ ಡಿ.ಎನ್‌ಎನಲ್ಲಿರೋ ಜೀನನ್ನು ಹುಡುಕುತ್ತೆ. ಜೀನ್‌ ಎಲ್ಲಿದೆ ಅಂತ ನ್ಯುಕ್ಲಿಯಸ್‌, ಸಿಗ್ನಲ್‌ ಕೊಡುತ್ತೆ. ನಂತರ ಎನ್‌ಜೈಮ್‌ ಯಂತ್ರ ಆರ್‌.ಎನ್‌.ಎ (Ribonucleic acid-ರೈಬೋನ್ಯುಕ್ಲಿಕ್‌ ಆಸಿಡ್‌) ಅಣುವಿನ ಸಹಾಯದಿಂದ ಜೀನ್‌ನಲ್ಲಿರೋ ಎಲ್ಲಾ ಮಾಹಿತಿಯ ಪ್ರತಿಯನ್ನ ಮಾಡಿಕೊಳ್ಳುತ್ತೆ. ಈ ಆರ್‌.ಎನ್‌.ಎಯು ಡಿ.ಎನ್‌.ಎನಲ್ಲಿರೋ ಒಂದು ಎಳೆ ತರ ಕಾಣಿಸೋದಾದರೂ ಅದು ಬೇರೆಯೇ ಆಗಿದೆ. ಜೀನ್‌ನಲ್ಲಿರೋ ಮಾಹಿತಿಯನ್ನ ತಗೆದುಕೊಳ್ಳೋದೇ ಇದರ ಕೆಲಸ. ಈ ಎಲ್ಲಾ ಮಾಹಿತಿಯನ್ನ ತಗೊಂಡು, ನ್ಯುಕ್ಲಿಯಸ್‌ನಿಂದ ಹೊರಗೆ ಬಂದು, ರೈಬೋಸೋಮ್‌ಗೆ ಈ ಮಾಹಿತಿಯನ್ನ ಕೊಡುತ್ತೆ. ಸಿಕ್ಕಿರೋ ಮಾಹಿತಿಯ ಪ್ರಕಾರ ರೈಬೋಸೋಮ್‌ ಪ್ರೋಟೀನ್‌ ತಯಾರು ಮಾಡುತ್ತೆ.”

ಬರಹ ರೂಪದಲ್ಲಿ ಮಾಹಿತಿ—ಡಿ.ಎನ್‌.ಎಯನ್ನ ಹೇಗೆ “ಓದಲಾಗುತ್ತೆ”

  1. ಇಲ್ಲಿ ಗೋಳಾಕಾರದ ಡಿ.ಎನ್‌.ಎಯನ್ನ ನೆಟ್ಟಗೆ ಮಾಡಲಾಗುತ್ತೆ ಮತ್ತು ಆ ಎಳೆಗಳಲ್ಲಿರುವ ಮಾಹಿತಿಯನ್ನ ಆರ್‌.ಎನ್‌.ಎಗೆ ಕೊಡಲಾಗುತ್ತೆ

  2. ಆರ್‌.ಎನ್‌ಯು ಡಿ.ಎನ್‌.ಎಯಲ್ಲಿರುವ ಜೀನ್‌ನ್ನ ಹುಡುಕಿ ಅದರಲ್ಲಿರುವ ಮಾಹಿತಿಯನ್ನ “ಓದುತ್ತೆ.” ಡಿ.ಎನ್‌.ಎಯು ಟ್ರಾನ್ಸ್‌ಕ್ರಿಪ್ಷನ್‌ ಯಂತ್ರಕ್ಕೆ ಎಲ್ಲಿಂದ ಶುರು ಮಾಡಿ ಎಲ್ಲಿ ತನಕ ಓದಬೇಕು ಅನ್ನೋ ನಿರ್ದೇಶನವನ್ನ ಕೊಡುತ್ತೆ

  3. ಎಲ್ಲಾ ಮಾಹಿತಿಯನ್ನ ಸಂಗ್ರಹಿಸಿಕೊಂಡು ಆರ್‌.ಎನ್‌.ಎಯು ಜೀವಕೋಶದಿಂದ ಹೊರಗೆ ಬಂದು ರೈಬೋಸೊಮ್‌ ಒಳಗೆ ಹೋಗಿ ಜಟಿಲವಾದ ಪ್ರೋಟೀನನ್ನ ತಯಾರಿಸಲು ನಿರ್ದೇಶನವನ್ನ ಕೊಡುತ್ತೆ

  4. ಟ್ರಾನ್ಸ್‌ಕ್ರಿಪ್ಷನ್‌ ಯಂತ್ರ

    ಡಿ.ಎನ್‌.ಎಯನ್ನ ಆರ್‌.ಎನ್‌.ಎ ಓದಲಾಗ್ತಿದೆ

ಇದನ್ನೆಲ್ಲಾ ನೋಡಿ ನಿಮ್ಮ ಕಣ್ಣನ್ನೇ ನಿಮ್ಮಿಂದ ನಂಬಕ್ಕಾಗಲ್ಲ. ಈ ಮ್ಯೂಸಿಯಮ್‌ ಮತ್ತು ಅದರಲ್ಲಿ ನಡೆಯುತ್ತಿರೋ ಎಲ್ಲಾ ಕೆಲಸಗಳನ್ನ ನೋಡಿ ಇದನ್ನು ರಚಿಸಿರೋ ವ್ಯಕ್ತಿ ಎಂಥ ಬುದ್ಧಿವಂತ ಅಂತ ನಿಮಗೆ ಗೊತ್ತಾಗುತ್ತೆ. ಮಾನವ ದೇಹದೊಳಗೆ ನಡೆಯೋ ಸಾವಿರಾರು ಕೆಲಸಗಳನ್ನ ಒಂದೇ ಸರಿ ತೋರಿಸಿದರೆ ನಿಮಗೆ ಹೇಗನಿಸುತ್ತೆ? ಆ ವಿಸ್ಮಯವನ್ನ ನೋಡಿ ನಾವು ನಿಬ್ಬೆರಗಾಗೋದಂತೂ ಖಂಡಿತ!

ನಿಮ್ಮ ಶರೀರದಲ್ಲಿರೋ 10 ಕೋಟಿ ಜೀವಕೋಶಗಳಲ್ಲಿ ಈ ಸೂಕ್ಷ್ಮ ಮತ್ತು ಜಟಿಲವಾದ ಯಂತ್ರಗಳು ಈ ಕ್ಷಣ ನಿಮ್ಮ ದೇಹದಲ್ಲಿ ಕೆಲಸ ಮಾಡುತ್ತಾ ಇದೆ ಅನ್ನೋದು ಈಗ ನಿಮ್ಮ ಗಮನಕ್ಕೆ ಬರುತ್ತೆ. ನಿಮ್ಮ ಡಿ.ಎನ್‌.ಎಯಲ್ಲಿರೋ ಮಾಹಿತಿಯನ್ನ ಓದಲಾಗುತ್ತಿದೆ, ಶರೀರಕ್ಕೆ ಬೇಕಾದ ಸಾವಿರಾರು ಪ್ರೋಟೀನ್‌ಗಳನ್ನ ಮಾಡೋದಕ್ಕೆ ನಿರ್ದೇಶನಗಳನ್ನ ಕೊಡಲಾಗುತ್ತಿದೆ, ಇದರಲ್ಲಿ ನಮ್ಮ ದೇಹದ ಅಂಗಗಳು, ಅಂಗಾಂಶಗಳು (ಟಿಶ್ಶು) ಮತ್ತು ಎನ್‌ಜೈಮ್‌ಗಳೂ ಸೇರಿದೆ. ಈ ಕ್ಷಣದಲ್ಲಿ ನಿಮ್ಮ ಡಿ.ಎನ್‌.ಎಯ ಒಂದು ಪ್ರತಿ ತಯಾರಾಗುತ್ತಾ ಇದೆ. ಹೊಸ ಜೀವಕೋಶದಲ್ಲಿ ಎಲ್ಲಾ ನಿರ್ದೇಶನಗಳು ಸರಿಯಾಗಿ ಇರಬೇಕಂತ ಡಿ.ಎನ್‌.ಎಯಲ್ಲಿ ಒಂದುವೇಳೆ ತಪ್ಪಿದ್ದರೆ ಅದನ್ನೂ ತಿದ್ದಲಾಗುತ್ತಾ ಇದೆ.

ಸತ್ಯಗಳ ಪರಿಶೀಲನೆ ಯಾಕಷ್ಟು ಮುಖ್ಯ?

‘ಈ ಎಲ್ಲಾ ನಿರ್ದೇಶನಗಳು ಎಲ್ಲಿಂದ ಬರುತ್ತವೆ?’ ಅಂತ ನಮ್ಮನ್ನೇ ನಾವು ಕೇಳಿಕೊಳ್ಳೋಣ. ಈ “ಪುಸ್ತಕ” ಅಥವಾ ಜೀನೋಮ್‌ನಲ್ಲಿರೋ ಮಾಹಿತಿ ಅಥವಾ ನಿರ್ದೇಶನಗಳು ಯಾವುದೇ ಮನುಷ್ಯನಿಗಿಂತ ಹೆಚ್ಚು ಬುದ್ಧಿಯಿರುವ ವ್ಯಕ್ತಿಯಿಂದನೇ ಬರೋಕೆ ಸಾಧ್ಯ ಅಂತ ಬೈಬಲ್‌ ಹೇಳುತ್ತೆ. ನಾವು ಈ ನಿರ್ಧಾರಕ್ಕೆ ಬರೋದರಿಂದ ಹಳೇ ಕಾಲದ ವಿಷಯವನ್ನ ನಂಬುತ್ತಾ ಇದ್ದೀವಿ ಅಥವಾ ವಿಜ್ಞಾನಕ್ಕೆ ವಿರೋಧವಾಗಿ ಮಾತಾಡುತ್ತಾ ಇದ್ದೀವಿ ಅಂತನಾ?

ನಿಮಗೇನನಿಸುತ್ತೆ? ಮೇಲೆ ವಿವರಿಸಿದಂತ ಮ್ಯೂಸಿಯಂನ ಮನುಷ್ಯರಿಂದ ತಯಾರು ಮಾಡೋಕೆ ಆಗುತ್ತಾ? ಖಂಡಿತ ಇದು ಮನುಷ್ಯರ ಕೈಯಿಂದ ಸಾಧ್ಯನೇ ಇಲ್ಲ. ಇಲ್ಲಿ ವರೆಗೂ ಮನುಷ್ಯನಲ್ಲಿರೋ ಜೀನೋಮ್‌ ಮತ್ತು ಅದು ಹೇಗೆ ಕೆಲಸ ಮಾಡುತ್ತೆ ಅಂತ ಸ್ವಲ್ಪ ವಿಷಯಗಳನ್ನ ಮಾತ್ರ ತಿಳಿದುಕೊಳ್ಳೋಕೆ ಆಗಿದೆ. ವಿಜ್ಞಾನಿಗಳಿಗೆ ಈ ಜೀನ್‌ಗಳು ಎಲ್ಲಿವೆ, ಹೇಗೆ ಕೆಲಸ ಮಾಡುತ್ತವೆ ಅಂತ ಇನ್ನು ಕಂಡುಹಿಡಿಯುತ್ತಲೇ ಇದ್ದಾರೆ. ಜೀನ್‌ ಡಿ.ಎನ್‌.ಎಯಲ್ಲಿರೋ ಒಂದು ಚಿಕ್ಕ ಭಾಗವಾಗಿದೆ. ಹಾಗಾದರೆ ಡಿ.ಎನ್‌.ಎ ಒಳಗೆ ಜೀನ್‌ಗಳು ಇಲ್ಲದೆ ಇರುವಂತ ಉದ್ದವಾಗಿರೋ ಖಾಲಿ ಜಾಗಗಳ ಬಗ್ಗೆ ಏನು? ಆ ಜಾಗ ಪ್ರಯೋಜನಕ್ಕಿಲ್ಲ ಅಂತ ವಿಜ್ಞಾನಿಗಳು ಅಂದುಕೊಂಡಿದ್ದರು. ಆದರೆ ಅವರ ಹೇಳಿಕೆಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಜೀನ್‌ಗಳನ್ನ ಎಷ್ಟರ ಮಟ್ಟಿಗೆ ಉಪಯೋಗಿಸಬಹುದು ಅಂತ ಈ ಖಾಲಿ ಜಾಗಗಳು ನಿರ್ಧಾರ ಮಾಡುತ್ತೆ. ಒಂದುವೇಳೆ, ವಿಜ್ಞಾನಿಗಳು, ಡಿ.ಎನ್‌.ಎಯ ಸಂಪೂರ್ಣ ಮಾದರಿಯನ್ನ ತಯಾರಿಸಿ, ಮಾಹಿತಿಗಳನ್ನ ನಕಲು ಮಾಡಿ, ತಪ್ಪನ್ನ ಸರಿಮಾಡುವ ಯಂತ್ರಗಳನ್ನ ತಯಾರಿಸಿದರೂ, ಅದು ನಿಜವಾದ ಡಿ.ಎನ್‌.ಎ ತರ ಕೆಲಸ ಮಾಡಕ್ಕೆ ಸಾಧ್ಯನಾ?

ಪ್ರಸಿದ್ಧ ವಿಜ್ಞಾನಿಯಾದ ರಿರ್ಚಡ್‌ ಫೈನ್ಮನ್‌ “ನನ್ನಿಂದ ಏನು ತಯಾರು ಮಾಡಕ್ಕೆ ಆಗುವುದಿಲ್ಲವೊ ಅದನ್ನ ಅರ್ಥಮಾಡಿಕೊಳ್ಳೋಕೂ ಆಗಲ್ಲ” ಅಂತ ಅವರು ಸಾಯೋ ಸ್ವಲ್ಪ ದಿನಗಳ ಮುಂಚೆ ಬ್ಲ್ಯಾಕ್‌ಬೋರ್ಡ್‌ ಮೇಲೆ ಬರೆದರು.25 ದೀನತೆಯಿಂದ ಅವರು ಒಪ್ಪಿಕೊಂಡಿದ್ದು ನಿಜವಾಗಲೂ ಒಂದು ದೊಡ್ಡ ವಿಷ್ಯನೇ. ಅದರಲ್ಲೂ ಅವರು ಹೇಳಿದ ಈ ಮಾತು ಡಿ.ಎನ್‌.ಎ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ವಿಜ್ಞಾನಿಗಳಿಗೆ ಡಿ.ಎನ್‌.ಎ ತಯಾರು ಮಾಡೋಕೆ ಸಾಧ್ಯನೇ ಇಲ್ಲ, ಅದರಲ್ಲೂ ನಕಲು ಮಾಡಿ ಮಾಹಿತಿಯನ್ನ ಬೇರೆ ಅಣುಗಳಿಗೆ ಕಳುಹಿಸುವಂತ ಸಾಮರ್ಥ್ಯ ಇರುವ ಡಿ.ಎನ್‌.ಎ ಅವರಿಗೆ ತಯಾರಿ ಮಾಡೋಕೆ ಸಾಧ್ಯನೂ ಇಲ್ಲ, ಅದನ್ನ ಅರ್ಥಮಾಡಿಕೊಳ್ಳೋಕೂ ಆಗಲ್ಲ. ಕೆಲವರು ಏನು ವಾದ ಮಾಡುತ್ತಾರೆ ಅಂದರೆ ಇದು ಎಲ್ಲ ತನ್ನಿಂದ ತಾನೇ ಬಂತು ಅಂತ ನಮಗೆ ಚೆನ್ನಾಗಿ ಗೊತ್ತು. ಇಷ್ಟೆಲ್ಲಾ ಆಧಾರಗಳನ್ನ ನೋಡಿದ ಮೇಲೆ ಅವರು ಹೇಳಿದ್ದು ನಿಜ ಅಂತ ನಿಮಗೆ ಅನಿಸುತ್ತಾ?

ಕೆಲವು ವಿದ್ವಾಂಸರು ಮೇಲೆ ಇರುವಂತ ಎಲ್ಲಾ ಆಧಾರಗಳನ್ನ ಮನಸ್ಸಲ್ಲಿಟ್ಟು ಬೇರೆ ತೀರ್ಮಾನಕ್ಕೆ ಬಂದರು. ಉದಾಹರಣೆಗೆ ಫ್ರಾನ್ಸಿಸ್‌ ಕ್ರಿಕ್‌ರವರು ಡಿ.ಎನ್‌.ಎಯ ಡಬಲ್‌ ಹೆಲಿಕ್ಸ್‌ ರಚನೆಯನ್ನ ಕಂಡುಹಿಡಿಯೋಕೆ ಸಹಾಯ ಮಾಡಿದರು. ಅವರು ಹೇಳಿದ್ದು ಈ ಡಿ.ಎನ್‌.ಎ ಎಷ್ಟು ಕ್ರಮಬದ್ಧವಾಗಿ ಕೆಲಸ ಮಾಡುತ್ತೆ ಅಂದರೆ ಅದು ತನ್ನಿಂದ ತಾನೇ ಬರೋಕೆ ಸಾಧ್ಯನೇ ಇಲ್ಲ. ಇವರ ಪ್ರಕಾರ ಬೇರೆ ಗ್ರಹದಲ್ಲಿರುವ ಬುದ್ಧಿವಂತ ಜೀವಿಗಳು ಭೂಮಿ ಮೇಲೆ ಜೀವ ಶುರು ಆಗೋಕೆ ಡಿ.ಎನ್‌.ಎಯನ್ನ ಆ ಗ್ರಹದಿಂದ ಕಳಿಸಿರಬಹುದು ಅಂತ ನಂಬುತ್ತಾರೆ.26

50 ವರ್ಷಗಳಿಂದ ನಾಸ್ತಿಕವಾದವನ್ನ ನಂಬುವ ಪ್ರಸಿದ್ಧ ತತ್ವಜ್ಞಾನಿಯಾದ ಆ್ಯಂಟನಿ ಫ್ಲೂರವರ ಯೋಚನೆಯಲ್ಲಿ ಒಂದು ದೊಡ್ಡ ಬದಲಾವಣೆ ಆಯಿತು. ಇವರಿಗೆ 81 ವರ್ಷ ಆದಾಗ ಜೀವ ತನ್ನಿಂದ ತಾನೇ ಬರೋಕೆ ಸಾಧ್ಯನೇ ಇಲ್ಲ, ಇದರ ಹಿಂದೆ ಯಾರೋ ಒಬ್ಬ ಬುದ್ಧಿವಂತನ ಕೈ ಕೆಲಸವಿದೆ ಅಂತ ನಂಬಕ್ಕೆ ಶುರು ಮಾಡಿದ್ದರು. ಅವರ ಯೋಚನೆಯಲ್ಲಿ ಇಷ್ಟು ದೊಡ್ಡ ಬದಲಾವಣೆ ಆಗೋಕೆ ಏನು ಕಾರಣ ಇರಬಹುದು? ಯಾಕೆಂದರೆ ಅವರು ಡಿ.ಎನ್‌.ಎ ಬಗ್ಗೆ ಅಧ್ಯಯನ ಮಾಡಿದರು. ಬೇರೆ ವಿಜ್ಞಾನಿಗಳು ಇದನ್ನ ಒಪ್ಪಿಕೊಳ್ಳಲ್ಲ ಅಂದರೆ ಏನು ಮಾಡುತ್ತೀರಾ ಅಂತ ಅವರಿಗೆ ಕೇಳಿದಾಗ, ಫ್ಲೂರವರು ಹೇಳಿದ್ದು: “ಅವರು ಹಾಗೆ ಮಾಡುವುದು ಸರಿಯಲ್ಲ. ನನ್ನ ಇಡೀ ಜೀವನದಲ್ಲಿ ನಾನು ಕಲಿತಿರುವ ಒಂದು ತತ್ವ ಏನಂದರೆ . . . ಆಧಾರಗಳು ಇದ್ದರೆ ಮಾತ್ರ ನಾವು ಒಂದು ವಿಷಯವನ್ನ ನಂಬಬೇಕು.”27

ನಿಮಗೇನನಿಸುತ್ತೆ? ಈ ಎಲ್ಲಾ ಆಧಾರಗಳಿಂದ ನಿಮಗೇನು ಗೊತ್ತಾಗುತ್ತೆ? ಊಹಿಸಿ, ಒಂದು ಫ್ಯಾಕ್ಟರಿಯ ಪ್ರಾಮುಖ್ಯವಾದ ಸ್ಥಳದಲ್ಲಿ ಒಂದು ಕಂಪ್ಯೂಟರ್‌ ರೂಮ್‌ ಇರುವುದನ್ನು ನೋಡುತ್ತೀರ. ಅಲ್ಲಿ, ಒಂದು ಕಂಪ್ಯೂಟರ್‌ನಲ್ಲಿ ಆ ಫ್ಯಾಕ್ಟರಿಯಲ್ಲಿ ನಡೆಯುವಂತ ಎಲ್ಲ ಜಟಿಲವಾದ ಕೆಲಸಗಳು ಹೇಗೆ ನಡೆಯಬೇಕು ಅಂತ ಪ್ರೋಗ್ರಾಮ್‌ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಫ್ಯಾಕ್ಟರಿಯಲ್ಲಿ ಇರುವಂಥ ಎಲ್ಲ ಮಷೀನ್‌ಗಳನ್ನ ತಯಾರಿ ಮಾಡೋಕೆ ಮತ್ತು ಅವು ಸರಿಯಾಗಿ ಕೆಲಸ ಮಾಡೋಕೆ ಬೇಕಾಗಿರುವ ನಿರ್ದೇಶನಗಳನ್ನ ಈ ಕಂಪ್ಯೂಟರ್‌ ಪ್ರೋಗ್ರಾಮ್‌ ಕ್ರಮವಾಗಿ ಕಳಿಸುತ್ತಾ ಇರುತ್ತೆ. ಅದರ ಜೊತೆಗೆ ತನ್ನಂತೆ ಇರುವ ಕಾಪಿಗಳನ್ನ ಮಾಡ್ತಾ ಅದರಲ್ಲಿರುವ ತಪ್ಪುಗಳನ್ನ ಸರಿ ಮಾಡ್ತಾ ಇರುತ್ತೆ. ಈ ಎಲ್ಲ ಆಧಾರಗಳನ್ನ ನೋಡುವಾಗ ನೀವು ಯಾವ ತೀರ್ಮಾನಕ್ಕೆ ಬರುತ್ತೀರಾ? ಈ ಕಂಪ್ಯೂಟರ್‌ ಮತ್ತು ಅದರಲ್ಲಿರುವ ಪ್ರೋಗ್ರಾಮ್‌, ತನ್ನಿಂದ ತಾನೇ ಬಂತಾ ಅಥವಾ ಇದರ ಹಿಂದೆ ಒಬ್ಬ ಬುದ್ಧಿವಂತ ವ್ಯಕ್ತಿಯ ಕೈ ಕೆಲಸ ಇದೆಯಾ? ಆಧಾರಗಳು ತುಂಬಾನೇ ಸ್ಪಷ್ಟವಾಗಿದೆ.

a ಮಾಲಿಕ್ಯುಲರ್‌ ಬಯಾಲಜಿ ಆಫ್‌ ದಿ ಸೆಲ್‌ ಅನ್ನೊ ಪುಸ್ತಕ ಇದನ್ನ ಇನ್ನೊಂದು ರೀತಿಯಲ್ಲಿ ವಿವರಿಸುತ್ತೆ. ಈ ಉದ್ದವಾದ ಹಗ್ಗದಂತಿರುವ ಕ್ರೋಮೊಸೋಮನ್ನು ನ್ಯೂಕ್ಲಿಯಸ್‌ನಲ್ಲಿ ಇಡೋದನ್ನ ಹೇಗೆ ಅರ್ಥ ಮಾಡಿಕೊಳ್ಳಬಹುದು ಅಂದರೆ, ಒಂದು ಟೆನಿಸ್‌ ಬಾಲ್‌ ಒಳಗೆ 40 ಕಿ.ಮೀ. ಉದ್ದವಾಗಿರೋ ದಾರವನ್ನ ಅಚ್ಚುಕಟ್ಟಾಗಿ ಸುತ್ತಿರೋದಕ್ಕೆ ಹೋಲಿಸಬಹುದು. ಇದು ಎಷ್ಟು ಅಚ್ಚುಕಟ್ಟಾಗಿ ಇರಬೇಕೆಂದರೆ ನಾವು ಆ ದಾರವನ್ನು ಎಳೆದರೆ ತುಂಬ ಸುಲಭವಾಗಿ ನಮ್ಮ ಕೈಗೆ ಬರೋ ತರ ಇರಬೇಕು.

b ಪ್ರತಿಯೊಂದು ಜೀವಕೋಶದಲ್ಲಿ ಜೀನೋಮ್‌ನ ಎರಡು ಪ್ರತಿಗಳು ಇರುತ್ತೆ. ಇದೆಲ್ಲಾ ಸೇರಿ ಒಂದು ಜೀವಕೋಶದಲ್ಲಿ 46 ಕ್ರೋಮೊಸೋಮ್‌ಗಳಿರುತ್ತೆ.

ಓದಲು ಮತ್ತು ತನ್ನನ್ನೇ ನಕಲು ಮಾಡಿಕೊಳ್ಳುವಂಥ ಒಂದು ಅಣು

ಡಿ.ಎನ್‌.ಎ ಏಣಿ

ಡಿ.ಎನ್‌.ಎ ಹೇಗೆ ತನ್ನನ್ನ ತಾನೇ ಓದಿಕೊಳ್ಳುತ್ತೆ ಮತ್ತು ತನ್ನಂತೆ ಇರುವಂಥ ಬೇರೆ ಪ್ರತಿಗಳನ್ನ ಹೇಗೆ ಮಾಡುತ್ತೆ? ಡಿ.ಎನ್‌.ಎ ಏಣಿಯಲ್ಲಿ ಎ, ಟಿ, ಜಿ, ಸಿ ಅನ್ನೋ ನಾಲ್ಕು ರಾಸಾಯನಿಕ ಬೇಸ್‌ಗಳಿವೆ. ಇದು ಯಾವಾಗ್ಲೂ ಒಂದೇ ರೀತಿಯಲ್ಲಿ ಜೋಡಣೆಯಾಗಿ, ಮೆಟ್ಟಿಲುಗಳ ತರ ಇರುತ್ತೆ. ಅಂದರೆ, ‘ಎ’ ಯಾವಾಗಲೂ ‘ಟಿ’ ಜೊತೆ, ‘ಜಿ’ ಯಾವಾಗ್ಲೂ ‘ಸಿ’ ಜೊತೆನೇ ಇರುತ್ತೆ. ಯಾವಾಗಲೂ ಮೆಟ್ಟಿಲಿನ ಒಂದು ಕಡೆ ‘ಎ’ ಇದ್ದರೆ ಇನ್ನೊಂದು ಕಡೆ ‘ಟಿ’ನೇ ಇರುತ್ತೆ. ಒಂದು ಕಡೆ ‘ಜಿ’ ಇದ್ದರೆ ಇನ್ನೊಂದು ಕಡೆ ‘ಸಿ’ನೇ ಇರುತ್ತೆ. ಆದ್ದರಿಂದ ಏಣಿಯ ಒಂದು ಭಾಗ ನಿಮ್ಮ ಹತ್ತಿರ ಇದ್ದರೆ ಇನ್ನೊಂದು ಭಾಗ ಯಾವುದು ಅಂತ ನಿಮಗೇ ಗೊತ್ತಾಗಿ ಬಿಡುತ್ತೆ. ಏಣಿಯ ಒಂದು ಭಾಗದಲ್ಲಿ ಜಿ, ಟಿ, ಸಿ, ಎ ಇದ್ದರೆ ಇನ್ನೊಂದು ಭಾಗದಲ್ಲಿ ಸಿ, ಎ, ಜಿ, ಟಿ ಇರುತ್ತೆ. ಮೆಟ್ಟಲುಗಳ ಉದ್ದ ಬೇರೆ-ಬೇರೆಯಾಗಿರುತ್ತೆ ಆದರೆ ಇವು ಒಂದಕ್ಕೊಂದು ಜೋಡಣೆಯಾದಾಗ ಅವುಗಳ ಗಾತ್ರ ಸಮವಾಗುತ್ತೆ.

ಈ ಅಣುವಿನ ಬಗ್ಗೆ ವಿಜ್ಞಾನಿಗಳು ಇನ್ನೊಂದು ವಿಷಯವನ್ನೂ ಕಂಡುಹಿಡಿದಿದ್ದಾರೆ. ಈ ಡಿ.ಎನ್‌.ಎ ಅಣು ಎಷ್ಟು ಅದ್ಭುತಕರವಾಗಿದೆ ಅಂದರೆ ತನ್ನಂತೆ ಇರುವ ಪ್ರತಿಗಳನ್ನ ಪದೇ-ಪದೇ ತಯಾರಿ ಮಾಡುತ್ತಾ ಇರುತ್ತೆ. ಎನ್‌ಜೈಮ್‌ ಯಂತ್ರ ಡಿ.ಎನ್‌.ಎಯನ್ನು ಮಧ್ಯದಲ್ಲಿ ಕತ್ತರಿಸುತ್ತೆ. ಆ ಮೇಲೆ ನ್ಯೂಕ್ಲಿಯಸ್‌ ಒಳಗೆ ತೇಲಾಡುತ್ತಿರುವ ಆ ನಾಲ್ಕು ರಾಸಾಯನಿಕಗಳ ಸಹಾಯದಿಂದ ಡಿ.ಎನ್‌.ಎಯ ಕತ್ತರಿಸಿದ ಎರಡೂ ಭಾಗಗಳಿಗೆ ಇನ್ನೊಂದು ಹೊಸ ಎಳೆಯನ್ನು ತಯಾರು ಮಾಡುತ್ತೆ.

ಈ ಡಿ.ಎನ್‌.ಎ ಅಣು ತನ್ನನ್ನು ತಾನೇ ಪದೇ-ಪದೇ ಓದುವ ಮತ್ತು ತನ್ನಂತೆ ಇರುವ ಪ್ರತಿಯನ್ನ ಪದೇ-ಪದೇ ನಕಲು ಮಾಡುವ, ಒಂದು ಪುಸ್ತಕದಂತಿದೆ. ಒಬ್ಬ ಮನುಷ್ಯನ ಜೀವಮಾನದಲ್ಲಿ ಡಿ.ಎನ್‌.ಎ ಸುಮಾರು 10,000,000,000,000,000ರಷ್ಟು ಪ್ರತಿಗಳನ್ನ ಮಾಡುತ್ತೆ. ಅದು ಯಾವುದೇ ತಪ್ಪಿಲ್ಲದೆ ನಿಖರವಾಗಿ ಮಾಡುತ್ತೆ.28

ನಿಜಾಂಶಗಳು ಮತ್ತು ಪ್ರಶ್ನೆಗಳು

  • ನಿಜಾಂಶ: ಡಿ.ಎನ್‌.ಎ ಕ್ರೋಮೊಸೋಮ್‌ ಒಳಗೆ ಎಷ್ಟು ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಲ್ಪಟ್ಟಿದೆ ಅಂದರೆ ಅದನ್ನ “ಇಂಜಿನಿಯರಿಂಗ್‌ ಸಾಧನೆ” ಅಂತ ಕರೆಯಬಹುದು.

    ಪ್ರಶ್ನೆ: ಇಷ್ಟೊಂದು ವ್ಯವಸ್ಥಿತವಾಗಿ ಕೆಲಸ ಮಾಡುವಂಥ ಒಂದು ಅಣುವು ತನ್ನಿಂದ ತಾನೇ ಹೇಗೆ ಬರಲಿಕ್ಕೆ ಸಾಧ್ಯ?

  • ನಿಜಾಂಶ: ಒಂದು ಡಿ.ಎನ್‌.ಎಯಲ್ಲಿ ಇರುವಷ್ಟು ಮಾಹಿತಿಯನ್ನ ನಮ್ಮ ಕಾಲದಲ್ಲಿ ಇರುವ ಯಾವುದೇ ವಸ್ತುವಾಗಲಿ, ಕಂಪ್ಯೂಟರ್‌ ಆಗಲಿ ತನ್ನಲ್ಲಿ ಇಟ್ಟುಕೊಳ್ಳೋದಕ್ಕೆ ಸಾಧ್ಯನೇ ಇಲ್ಲ.

    ಪ್ರಶ್ನೆ: ಒಬ್ಬ ಕಂಪ್ಯೂಟರ್‌ ಇಂಜಿನಿಯರ್‌ಗೆ ಇದನ್ನೆಲ್ಲ ಮಾಡಕ್ಕಾಗಲ್ಲ ಅಂದಮೇಲೆ ಒಂದು ಬುದ್ಧಿಯಿಲ್ಲದ ವಸ್ತು ಇಷ್ಟೆಲ್ಲಾ ಕೆಲಸಗಳನ್ನ ತನ್ನಿಂದ ತಾನೇ ಹೇಗೆ ಮಾಡೋಕ್ಕೆ ಸಾಧ್ಯ?

  • ನಿಜಾಂಶ: ಒಂದು ಮಗುವಿನ ದೇಹ ಹೇಗಿರಬೇಕು, ಅದರ ಅಂಗಗಳು ಹೇಗೆ ಬೆಳೆಯುತ್ತಾ ಇರಬೇಕು ಅನ್ನೋ ಎಲ್ಲಾ ಮಾಹಿತಿ ಡಿ.ಎನ್‌.ಎಯಲ್ಲಿದೆ.

    ಪ್ರಶ್ನೆ: ಡಿ.ಎನ್‌.ಎಯಲ್ಲಿ ಇರುವಂತ ಮಾಹಿತಿ, ಒಬ್ಬ ಲೇಖಕನಿಲ್ಲದೆ ಹೇಗೆ ಬರೋಕೆ ಸಾಧ್ಯ? ಮತ್ತು ಅದರಲ್ಲಿರುವ ಪ್ರೋಗ್ರಾಮ್‌ ಒಬ್ಬ ಪ್ರೋಗ್ರಾಮರ್‌ ಇಲ್ಲದೆ ಹೇಗೆ ಬರೋಕೆ ಸಾಧ್ಯ?

  • ನಿಜಾಂಶ: ಡಿ.ಎನ್‌.ಎ ಸರಿಯಾಗಿ ಕೆಲಸ ಮಾಡಬೇಕಂದರೆ ಅದನ್ನ ನಕಲು ಮಾಡುತ್ತಾ ಇರಬೇಕು, ಓದುತ್ತಾ ಇರಬೇಕು, ಅದರಲ್ಲಿರುವ ತಪ್ಪುಗಳನ್ನ ಸರಿಮಾಡುತ್ತಾ ಇರಬೇಕು. ಇಷ್ಟೆಲ್ಲಾ ಕೆಲಸಗಳನ್ನ ಅತೀ ಜಟಿಲವಾದ ಯಂತ್ರದ ಹಾಗಿರುವ ಅಣು ಅಂದರೆ ಎನ್‌ಜೈಮ್‌ ಮಾಡುತ್ತೆ. ಇದೆಲ್ಲಾ ಒಂದು ಸೆಕೆಂಡು ಕೂಡ ಆಚೆ-ಈಚೆ ಆಗದಿರೋ ಹಾಗೇ ಒಟ್ಟಿಗೆ ಸೇರಿ ಕೆಲಸ ಮಾಡಬೇಕಾಗುತ್ತೆ.

    ಪ್ರಶ್ನೆ: ಇಷ್ಟೊಂದು ಜಟಿಲವಾಗಿರೋ ಮತ್ತು ಅಚ್ಚುಕಟ್ಟಾಗಿ ಕೆಲಸ ಮಾಡುವಂಥ ಯಂತ್ರ ತನ್ನಿಂದ ತಾನೇ ಬಂತು ಅಂತ ನೀವು ನಂಬುತ್ತೀರಾ? ಬಲವಾದ ಆಧಾರ ಇಲ್ಲದೆ ಇದನ್ನ ಕಣ್ಣುಮುಚ್ಚಿ ನಂಬುವುದು ನಿಮಗೇ ಸರಿ ಅನಿಸುತ್ತಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ