ಪಾಠ 1
ನಮಗೆ ಸಂತೋಷ ತರುವ ಒಂದು ಗುಟ್ಟು
ಯಾರಾದರೂ ನಿನಗೆ ಒಂದು ಗುಟ್ಟು ಹೇಳಿದ್ದಾರಾ?—a ಬೈಬಲ್ ಒಂದು ಗುಟ್ಟಿನ ಬಗ್ಗೆ ಹೇಳುತ್ತದೆ. ಅದು ವಿಶೇಷ ಗುಟ್ಟು. ಅದನ್ನು “ಪವಿತ್ರ ರಹಸ್ಯ” ಅಂತ ಕರೆಯಲಾಗಿದೆ. ಅದು ಪವಿತ್ರ ಏಕೆಂದರೆ ಆ ಗುಟ್ಟನ್ನು ದೇವರು ತಿಳಿಸಿದ್ದಾನೆ. ಅದು ರಹಸ್ಯ ಏಕೆಂದರೆ ಜನರಿಗೆ ಆ ಗುಟ್ಟಿನ ಬಗ್ಗೆ ಗೊತ್ತಿಲ್ಲ. ದೇವದೂತರಿಗೂ ಅದರ ಬಗ್ಗೆ ಎಲ್ಲ ಗೊತ್ತಿರಲಿಲ್ಲ. ಇನ್ನೂ ಹೆಚ್ಚು ತಿಳಿಯಬೇಕು ಅಂತ ಅವರಿಗೆ ಇಷ್ಟ ಇತ್ತು. ಆ ಗುಟ್ಟೇನು ಅಂತ ತಿಳಿಯಲು ನಿನಗೂ ಇಷ್ಟ ಇದೆಯಾ?—
ದೇವದೂತರು ಏನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾ ಇದ್ದಾರೆ?
ತುಂಬ ತುಂಬ ವರ್ಷಗಳ ಹಿಂದೆ ದೇವರು ಮೊದಲ ಗಂಡಸನ್ನು ಮತ್ತು ಹೆಂಗಸನ್ನು ಸೃಷ್ಟಿಮಾಡಿದನು. ಗಂಡಸಿನ ಹೆಸರು ಆದಾಮ. ಹೆಂಗಸಿನ ಹೆಸರು ಹವ್ವ. ದೇವರು ಅವರಿಗೆ ಸುಂದರ ಮನೆ ಕೊಟ್ಟನು. ಅದು ಏದೆನ್ ತೋಟ. ಆದಾಮ ಹವ್ವ ದೇವರ ಮಾತು ಕೇಳಿರುತ್ತಿದ್ದರೆ ಅವರು ಮತ್ತು ಅವರ ಮಕ್ಕಳು ಇಡೀ ಭೂಮಿಯನ್ನು ಏದೆನ್ ತೋಟದ ಹಾಗೇ ಸುಂದರವಾಗಿ ಮಾಡಬಹುದಿತ್ತು. ಅಂದರೆ ಪರದೈಸ್ ಆಗಿ ಮಾಡಬಹುದಿತ್ತು. ಅಷ್ಟೇ ಅಲ್ಲ ಅವರು ಆ ಪರದೈಸಿನಲ್ಲಿ ಸಾಯದೆ ಶಾಶ್ವತವಾಗಿ ಬದುಕಬಹುದಿತ್ತು. ಆದರೆ ಆದಾಮ ಹವ್ವ ಏನು ಮಾಡಿದರು ಅಂತ ನಿನಗೆ ನೆನಪಿದೆಯಾ?—
ಆದಾಮ ಹವ್ವ ದೇವರ ಮಾತು ಕೇಳಲಿಲ್ಲ. ಹಾಗಾಗಿ ನಾವು ಜೀವಿಸುತ್ತಿರುವ ಈ ಭೂಮಿ ಸುಂದರ ಪರದೈಸ್ ಆಗಿಲ್ಲ. ಆದರೆ ಭೂಮಿಯನ್ನು ಪರದೈಸಾಗಿ ಮಾಡುತ್ತೇನೆ ಅಂತ ದೇವರು ಹೇಳಿದ್ದಾನೆ. ಸಾಯದೆ ಎಲ್ಲರೂ ಸಂತೋಷವಾಗಿ ಬದುಕುವ ಹಾಗೆ ಮಾಡುತ್ತೇನೆ ಅಂತ ಕೂಡ ಹೇಳಿದ್ದಾನೆ. ದೇವರು ಅದನ್ನು ಹೇಗೆ ಮಾಡುತ್ತಾನೆ? ಅನೇಕ ವರ್ಷಗಳ ತನಕ ಜನರಿಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಅದು ಗುಟ್ಟಾಗಿ ಉಳಿದಿತ್ತು.
ಆ ಗುಟ್ಟೇನು ಅಂತ ಯೇಸು ಭೂಮಿಗೆ ಬಂದಾಗ ಕಲಿಸಿದನು. ಅದು ದೇವರ ರಾಜ್ಯವೇ ಅಂತ ಜನರಿಗೆ ತಿಳಿಸಿದನು. ದೇವರ ರಾಜ್ಯ ಭೂಮಿಗೆ ಬರಲಿ ಅಂತ ಪ್ರಾರ್ಥನೆ ಮಾಡಬೇಕೆಂದು ಹೇಳಿದನು. ಈ ರಾಜ್ಯವೇ ಭೂಮಿಯನ್ನು ಪರದೈಸ್ ಅಂದರೆ ಸುಂದರ ತೋಟವಾಗಿ ಮಾಡುತ್ತದೆ.
ಗುಟ್ಟೇನು ಅಂತ ಗೊತ್ತಾದಾಗ ನಿನಗೆ ಖುಷಿ ಆಯಿತಾ?— ಯೆಹೋವ ದೇವರ ಮಾತು ಕೇಳುವವರು ಮಾತ್ರ ಪರದೈಸಲ್ಲಿ ಇರುತ್ತಾರೆ. ಯೆಹೋವನ ಮಾತು ಕೇಳಿದ ಜನರ ಕಥೆಗಳು ಬೈಬಲಲ್ಲಿವೆ. ಅವರ ಬಗ್ಗೆ ತಿಳಿಯಲು ನಿನಗೆ ಇಷ್ಟವಿದೆಯಾ?— ಅವರು ಯಾರು ಮತ್ತು ನಾವು ಹೇಗೆ ಅವರಂತೆ ಇರಬಹುದು ಅಂತ ನೋಡೋಣ.
ಬೈಬಲಲ್ಲೇ ಓದೋಣ
a ಕೆಲವು ಪ್ರಶ್ನೆಗಳ ನಂತರ ಈ (—) ಗುರುತನ್ನು ಹಾಕಲಾಗಿದೆ. ಕಥೆಗಳನ್ನು ಓದಿ ಹೇಳುತ್ತಿರುವಾಗ ಈ ಗುರುತು ಕಂಡುಬಂದಾಗೆಲ್ಲ ಉತ್ತರ ಹೇಳಲು ಮಕ್ಕಳಿಗೆ ಸಮಯ ಕೊಡಿ.