ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bhs ಅಧ್ಯಾ. 1 ಪು. 8-18
  • ದೇವರು ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರು ಯಾರು?
  • ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಓದಿ ಬೈಬಲ್‌ ಬೋಧಿಸುತ್ತದೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯಾ?
  • ನಮ್ಮ ಕಷ್ಟ ನೋಡುವಾಗ ದೇವರಿಗೆ ಹೇಗನಿಸುತ್ತದೆ?
  • ದೇವರು ನಿಮ್ಮ ಸ್ನೇಹಿತನಾಗಲು ಇಷ್ಟಪಡುತ್ತಾನೆ
  • ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
  • ದೇವರು ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ದೇವರ ಮತ್ತು ಯೇಸುವಿನ ಬಗ್ಗೆ ಸತ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಸೃಷ್ಟಿಕರ್ತ ದೇವರು ಯಾರು?
    ದೇವರಿಂದ ನಿಮಗೊಂದು ಸಿಹಿಸುದ್ದಿ!
  • ದೇವರು ಯಾರು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಬೈಬಲ್‌ ನಮಗೆ ಏನು ಕಲಿಸುತ್ತದೆ?
bhs ಅಧ್ಯಾ. 1 ಪು. 8-18

ಅಧ್ಯಾಯ 1

ದೇವರು ಯಾರು?

1, 2. ನಾವು ಯಾವ ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ?

ಮಕ್ಕಳು ತುಂಬ ಪ್ರಶ್ನೆಗಳನ್ನು ಕೇಳುತ್ತಾರೆ. ನೀವು ಯಾವುದಾದರೂ ಒಂದು ವಿಷಯವನ್ನು ವಿವರಿಸಿದರೆ, ‘ಅದ್ಯಾಕೆ ಹಾಗೆ?’ ಅಂತ ಕೇಳುತ್ತಾರೆ. ಅದಕ್ಕೆ ಉತ್ತರ ಕೊಡುವಷ್ಟರಲ್ಲಿ ಇನ್ನೊಂದು ಪ್ರಶ್ನೆ ತಯಾರಾಗಿರುತ್ತದೆ.

2 ಮಕ್ಕಳಿಗೆ ಮಾತ್ರ ಅಲ್ಲ, ನಮಗೂ ತುಂಬ ಪ್ರಶ್ನೆಗಳು ಬರುತ್ತವೆ. ಉದಾಹರಣೆಗೆ, ಸಮಯ ಎಷ್ಟಾಗಿದೆ ಎಂದು ತಿಳಿದುಕೊಳ್ಳಬೇಕಾದರೆ, ದಾರಿ ಗೊತ್ತಾಗದಿದ್ದರೆ ನಾವು ಬೇರೆಯವರ ಹತ್ತಿರ ಕೇಳುತ್ತಿರುತ್ತೇವೆ. ಕೆಲವೊಮ್ಮೆ ತುಂಬ ಪ್ರಾಮುಖ್ಯವಾದ ಪ್ರಶ್ನೆಗಳು ಸಹ ಬರುತ್ತವೆ. ನಮ್ಮ ಜೀವನದ ಬಗ್ಗೆ, ಮುಂದೆ ಏನಾಗುತ್ತದೆ ಎನ್ನುವುದರ ಬಗ್ಗೆ ಮನಸ್ಸಿನಲ್ಲಿ ಪ್ರಶ್ನೆಗಳು ಬರುತ್ತವೆ. ಆದರೆ ಸರಿಯಾದ ಉತ್ತರ ಸಿಗದಿದ್ದಾಗ ನಾವು ಅದರ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಡುತ್ತೇವೆ.

3. ಕೆಲವರು ತಮಗಿರುವ ಪ್ರಾಮುಖ್ಯವಾದ ಪ್ರಶ್ನೆಗಳನ್ನು ಯಾಕೆ ಕೇಳುವುದಿಲ್ಲ?

3 ಜೀವನದಲ್ಲಿ ಬರುವ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಸಿಗುತ್ತದಾ? ಅಂಥ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದು ದೇವರಿಗೆ ಮಾತ್ರ, ಅದಕ್ಕೆಲ್ಲ ನಾವು ತಲೆ ಹಾಕಬಾರದು ಎಂದು ಕೆಲವರು ಹೇಳುತ್ತಾರೆ. ಅಥವಾ ಇಂಥ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದು ಹೆಚ್ಚು ಓದಿದವರಿಗೆ, ಧರ್ಮಗುರುಗಳಿಗೆ ಮಾತ್ರ ಎಂದು ಸಹ ಹೇಳುತ್ತಾರೆ. ಮತ್ತೆ ಕೆಲವರು, ತಮಗೆ ಉತ್ತರ ಗೊತ್ತಿಲ್ಲ ಎಂದು ಹೇಳಿದರೆ ಎಲ್ಲಿ ಮರ್ಯಾದೆ ಕಡಿಮೆಯಾಗುತ್ತದೋ ಅಂತ ಬೇರೆಯವರ ಹತ್ತಿರ ಪ್ರಶ್ನೆಗಳನ್ನು ಕೇಳುವುದೇ ಇಲ್ಲ. ನಿಮಗೂ ಹಾಗೆ ಅನಿಸುತ್ತದಾ?

4, 5. (ಎ) ನಿಮ್ಮ ಜೀವನದ ಬಗ್ಗೆ ನಿಮಗೆ ಯಾವ ಪ್ರಶ್ನೆ ಇದೆ? (ಬಿ) ಉತ್ತರ ತಿಳಿದುಕೊಳ್ಳಲು ನೀವು ಪ್ರಯತ್ನಿಸುತ್ತಾ ಇರಬೇಕು ಏಕೆ?

4 ‘ನಾವು ಯಾಕೆ ಹುಟ್ಟಿದ್ದೇವೆ? ಜೀವನ ಅಂದರೆ ಇಷ್ಟೇನಾ? ಸತ್ತ ಮೇಲೆ ನಮಗೆ ಏನಾಗುತ್ತದೆ? ದೇವರನ್ನು ನೋಡಲು ಆಗುತ್ತಾ?’ ಎಂಬ ಪ್ರಶ್ನೆಗಳು ನಿಮಗೆ ಬಂದಿರಬಹುದು. ಆದರೆ ಉತ್ತರ ಸಿಕ್ಕಿಲ್ಲ ಅಂದುಕೊಳ್ಳಿ, ಆಗ ಏನು ಮಾಡುತ್ತೀರಾ? ಪ್ರಸಿದ್ಧ ಬೋಧಕನಾದ ಯೇಸು ಹೀಗೆ ಹೇಳಿದನು: “ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.” (ಮತ್ತಾಯ 7:7) ಹಾಗಾಗಿ ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುವ ವರೆಗೂ ಪ್ರಯತ್ನ ಮಾಡುತ್ತಾ ಇರಿ.

5 ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಬೈಬಲಿನಲ್ಲಿ ‘ಹುಡುಕುತ್ತಾ ಇದ್ದರೆ’ ಉತ್ತರ ಸಿಕ್ಕೇ ಸಿಗುತ್ತದೆ. (ಜ್ಞಾನೋಕ್ತಿ 2:1-5) ಆ ಉತ್ತರಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟ ಅಲ್ಲ. ಅವುಗಳನ್ನು ತಿಳಿದುಕೊಂಡರೆ ನಿಮಗೆ ಈಗಲೂ ಸಂತೋಷ ಸಿಗುತ್ತದೆ, ಮುಂದಕ್ಕೂ ನಿಮ್ಮ ಜೀವನ ತುಂಬ ಚೆನ್ನಾಗಿರುತ್ತದೆ. ತುಂಬ ಜನರಿಗೆ ಸರಿಯಾದ ಉತ್ತರ ಸಿಕ್ಕಿರದ ಒಂದು ಪ್ರಶ್ನೆ ಇದೆ. ಅದು ಏನಂತ ನಾವೀಗ ನೋಡೋಣ.

ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯಾ?

6. ದೇವರಿಗೆ ನಮ್ಮ ಬಗ್ಗೆ ಚಿಂತೆಯಿಲ್ಲ ಎಂದು ಜನರು ಯಾಕೆ ಯೋಚಿಸುತ್ತಾರೆ?

6 ದೇವರಿಗೆ ನಮ್ಮ ಬಗ್ಗೆ ಚಿಂತೆನೇ ಇಲ್ಲ, ಇದ್ದಿದ್ದರೆ ಪ್ರಪಂಚ ಈ ರೀತಿ ಯಾಕೆ ಇರುತ್ತಿತ್ತು ಅಂತ ತುಂಬ ಜನ ಯೋಚಿಸುತ್ತಾರೆ. ಎಲ್ಲಿ ನೋಡಿದರೂ ದ್ವೇಷ, ದುಃಖ ತುಂಬಿತುಳುಕುತ್ತಿದೆ. ಯುದ್ಧಗಳು ನಡೆಯುತ್ತಿವೆ. ಜನರು ಕಾಯಿಲೆ ಬೀಳುತ್ತಾರೆ, ನರಳುತ್ತಾರೆ, ಸಾಯುತ್ತಾರೆ. ಇದನ್ನೆಲ್ಲ ನೋಡಿ ಕೆಲವರು, ‘ದೇವರಿಗೆ ನಮ್ಮ ಬಗ್ಗೆ ನಿಜಕ್ಕೂ ಚಿಂತೆ ಇದ್ದಿದ್ರೆ ಇದನ್ನೆಲ್ಲ ಹೀಗೇ ಬಿಡುತ್ತಿದ್ದನಾ?’ ಅಂತ ಪ್ರಶ್ನಿಸುತ್ತಾರೆ.

7. (ಎ) ದೇವರು ಕ್ರೂರಿ ಎಂದು ಜನರು ನಂಬಲು ಧರ್ಮಗುರುಗಳು ಹೇಗೆ ಕಾರಣರಾಗಿದ್ದಾರೆ? (ಬಿ) ದೇವರು ಕೆಟ್ಟದ್ದನ್ನು ಮಾಡುವುದಿಲ್ಲ ಅಂತ ನಾವು ಹೇಗೆ ಹೇಳಬಹುದು?

7 ದೇವರಿಗೆ ನಮ್ಮ ಮೇಲೆ ಪ್ರೀತಿಯಿಲ್ಲ, ಅವನು ಕ್ರೂರಿ ಅಂತ ಜನರು ನಂಬುವ ಹಾಗೆ ಕೆಲವೊಮ್ಮೆ ಧರ್ಮಗುರುಗಳೇ ಮಾಡುತ್ತಾರೆ. ಕೆಟ್ಟದ್ದು ಏನಾದರೂ ನಡೆದಾಗ ‘ಅದು ದೇವರ ಇಚ್ಛೆ’ ಅಂತ ಹೇಳಿ, ಕೆಟ್ಟದ್ದಕ್ಕೆಲ್ಲ ದೇವರೇ ಕಾರಣನೆಂದು ಜನರು ಯೋಚಿಸುವಂತೆ ಮಾಡುತ್ತಾರೆ. ಆದರೆ ದೇವರು ಯಾವತ್ತೂ ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ಬೈಬಲಿನಲ್ಲಿದೆ. ಯಾಕೋಬ 1:13⁠ರಲ್ಲಿ ಹೀಗಿದೆ: “ಪರೀಕ್ಷೆಗೆ ಒಳಪಡುವಾಗ, ‘ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ’ ಎಂದು ಯಾವನೂ ಹೇಳದಿರಲಿ. ಏಕೆಂದರೆ ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” ಇದರರ್ಥ, ದೇವರು ಕೆಟ್ಟದ್ದನ್ನು ತಡೆಯುತ್ತಿಲ್ಲವಾದರೂ ಕೆಟ್ಟದ್ದನ್ನು ಮಾಡುತ್ತಿರುವವನು ಆತನಲ್ಲ. (ಯೋಬ 34:10-12 ಓದಿ.) ಇದನ್ನು ಅರ್ಥಮಾಡಿಕೊಳ್ಳಲು ಮುಂದೆ ಕೊಟ್ಟಿರುವ ಉದಾಹರಣೆ ನಿಮಗೆ ಸಹಾಯಮಾಡುತ್ತದೆ.

8, 9. ನಮ್ಮ ಕಷ್ಟಗಳಿಗೆ ದೇವರನ್ನು ದೂರುವುದು ಸರಿಯಲ್ಲ ಏಕೆ? ಉದಾಹರಣೆ ಕೊಡಿ.

8 ಹೀಗೆ ನೆನಸಿ: ಬೆಳೆದ ಮಗನೊಬ್ಬ ಅಪ್ಪಅಮ್ಮನೊಟ್ಟಿಗೆ ವಾಸಿಸುತ್ತಿದ್ದ. ಅಪ್ಪನಿಗೆ ಮಗನ ಮೇಲೆ ತುಂಬ ಪ್ರೀತಿ. ಒಳ್ಳೇ ನಿರ್ಣಯಗಳನ್ನು ಮಾಡುವುದು ಹೇಗೆಂದು ಮಗನಿಗೆ ಕಲಿಸಿಕೊಟ್ಟಿದ್ದನು. ಆದರೂ ಒಂದು ದಿನ ಮಗ ಅಪ್ಪನ ವಿರುದ್ಧ ತಿರುಗಿಬಿದ್ದು ಮನೆಬಿಟ್ಟು ಹೋದ. ಕೆಟ್ಟ ಕೆಲಸಗಳನ್ನು ಮಾಡಿ, ತುಂಬ ಕಷ್ಟದಲ್ಲಿ ಸಿಕ್ಕಿಬಿದ್ದ. ಈಗ ನೀವೇ ಹೇಳಿ, ಮಗನ ಈ ಸ್ಥಿತಿಗೆ ಯಾರು ಕಾರಣ? ಮಗ ಮನೆಬಿಟ್ಟು ಹೋಗುವಾಗ ತಡೆಯದಿದ್ದ ಅಪ್ಪನಾ? ಇಲ್ಲ ಮಗನಾ? (ಲೂಕ 15:11-13) ಈ ಉದಾಹರಣೆಯಲ್ಲಿ ಆದಂತೆಯೇ ಮನುಷ್ಯರು ದೇವರ ವಿರುದ್ಧ ತಿರುಗಿಬಿದ್ದು ಕೆಟ್ಟದ್ದನ್ನು ಮಾಡಿದರು. ಆಗ ದೇವರು ಅವರನ್ನು ತಡೆಯಲಿಲ್ಲ. ಹಾಗಾಗಿ ನಮ್ಮ ಕಷ್ಟಗಳಿಗೆ ನಾವು ದೇವರನ್ನು ದೂರಬಾರದು. ಏಕೆಂದರೆ ಇದಕ್ಕೆ ನಾವೇ ಕಾರಣ, ದೇವರಲ್ಲ.

9 ಈಗ ಆಗುತ್ತಿರುವ ಕೆಟ್ಟದ್ದನ್ನು ದೇವರು ಯಾಕೆ ತಡೆಯುತ್ತಿಲ್ಲ ಅನ್ನುವುದಕ್ಕೆ ಒಂದು ಒಳ್ಳೇ ಕಾರಣ ಬೈಬಲಿನಲ್ಲಿದೆ. ಅದರ ಬಗ್ಗೆ ಈ ಪುಸ್ತಕದ 11⁠ನೇ ಅಧ್ಯಾಯದಲ್ಲಿ ನೀವು ಕಲಿಯುತ್ತೀರಿ. ಅಷ್ಟರ ವರೆಗೆ ಇದನ್ನು ನೆನಪಿನಲ್ಲಿಡಿ: ದೇವರು ನಮ್ಮನ್ನು ಪ್ರೀತಿಸುತ್ತಾನೆ, ನಮ್ಮ ಕಷ್ಟಗಳಿಗೆ ಆತನು ಕಾರಣನಲ್ಲ. ಅಷ್ಟೇ ಅಲ್ಲ ಕೊನೆಗೆ ಆತನೇ ನಮ್ಮ ಕಷ್ಟಗಳನ್ನು ತೆಗೆದುಹಾಕಲಿದ್ದಾನೆ.—ಯೆಶಾಯ 33:2.

10. ಎಲ್ಲ ದುಷ್ಟತನವನ್ನು ದೇವರು ತೆಗೆದುಹಾಕುತ್ತಾನೆ ಎಂದು ನಾವು ಹೇಗೆ ನಂಬಬಹುದು?

10 ಯೆಹೋವನು ಪರಿಶುದ್ಧ ದೇವರು. (ಯೆಶಾಯ 6:3) ಆತನು ಮಾಡುವುದೆಲ್ಲ ಶುದ್ಧ, ಪವಿತ್ರ ಮತ್ತು ಒಳ್ಳೇದಾಗಿರುತ್ತದೆ. ಹಾಗಾಗಿ ಕೆಟ್ಟದ್ದನ್ನೆಲ್ಲ ಆತನು ತೆಗೆದುಹಾಕುತ್ತಾನೆ ಎಂದು ನಾವು ಭರವಸೆ ಇಡಬಹುದು. ಆದರೆ ಈ ರೀತಿಯ ಭರವಸೆಯನ್ನು ಮನುಷ್ಯರ ಮೇಲೆ ಇಡಲು ಆಗುವುದಿಲ್ಲ. ಯಾಕೆಂದರೆ ಅವರೇ ಕೆಲವು ಸಲ ಕೆಟ್ಟದ್ದನ್ನು ಮಾಡುತ್ತಾರೆ. ಒಬ್ಬ ವ್ಯಕ್ತಿ ತುಂಬ ಪ್ರಾಮಾಣಿಕನಾಗಿದ್ದರೂ ಕೆಟ್ಟದ್ದನ್ನೆಲ್ಲ ಸರಿಮಾಡಲು ಅವನಿಂದ ಆಗುವುದಿಲ್ಲ. ಏಕೆಂದರೆ ಅದನ್ನು ಮಾಡುವಷ್ಟು ಶಕ್ತಿ ಅವನಿಗಿಲ್ಲ. ಅದು ದೇವರಲ್ಲಿ ಮಾತ್ರ ಇದೆ. ಹಾಗಾಗಿ ಕೆಟ್ಟ ಜನರು ಮಾಡಿರುವ ಎಲ್ಲ ದುಷ್ಟತನವನ್ನು ದೇವರು ತೆಗೆದುಹಾಕುತ್ತಾನೆ. ಮುಂದೆ ಯಾವತ್ತೂ ಕೆಟ್ಟದ್ದಾಗದಂತೆ ನೋಡಿಕೊಳ್ಳುತ್ತಾನೆ.—ಕೀರ್ತನೆ 37:9-11 ಓದಿ.

ನಮ್ಮ ಕಷ್ಟ ನೋಡುವಾಗ ದೇವರಿಗೆ ಹೇಗನಿಸುತ್ತದೆ?

11. ನಮ್ಮ ಕಷ್ಟ ನೋಡುವಾಗ ದೇವರಿಗೆ ಹೇಗನಿಸುತ್ತದೆ?

11 ಈ ಪ್ರಪಂಚದಲ್ಲಿ ಆಗುತ್ತಿರುವುದನ್ನು ಮತ್ತು ನಿಮ್ಮ ಪರಿಸ್ಥಿತಿಯನ್ನು ನೋಡುವಾಗ ದೇವರಿಗೆ ಹೇಗನಿಸುತ್ತದೆ? ದೇವರು “ನ್ಯಾಯವನ್ನು ಮೆಚ್ಚುವವನು” ಎಂದು ಬೈಬಲಿನಲ್ಲಿ ತಿಳಿಸಲಾಗಿದೆ. (ಕೀರ್ತನೆ 37:28) ಹಾಗಾಗಿ ಒಳ್ಳೇದನ್ನು ಆತನು ಇಷ್ಟಪಡುತ್ತಾನೆ, ಕೆಟ್ಟದ್ದನ್ನು ದ್ವೇಷಿಸುತ್ತಾನೆ. ಜನರು ಕಷ್ಟಪಡುವುದು ದೇವರಿಗೆ ಸ್ವಲ್ಪವೂ ಇಷ್ಟವಿಲ್ಲ. ಈಗ ಇರುವಂಥ ಪರಿಸ್ಥಿತಿಯೇ ಒಂದು ಕಾಲದಲ್ಲಿತ್ತು. ಆಗ ದೇವರು “ತನ್ನ ಹೃದಯದಲ್ಲಿ ನೊಂದುಕೊಂಡನು” ಎಂದು ಬೈಬಲಿನಲ್ಲಿದೆ. (ಆದಿಕಾಂಡ 6:5, 6) ಈಗಲೂ ದೇವರಿಗೆ ಅದೇ ರೀತಿಯ ಭಾವನೆಯಿದೆ. (ಮಲಾಕಿಯ 3:6) ನಿಮ್ಮ ಬಗ್ಗೆ ದೇವರು ತುಂಬ ಚಿಂತೆ ಮಾಡುತ್ತಾನೆ.—1 ಪೇತ್ರ 5:7 ಓದಿ.

ಯೆಹೋವ ದೇವರ ಸೃಷ್ಟಿ: ಪರ್ವತಗಳು, ನದಿ, ಮೀನು, ಪಕ್ಷಿಗಳು, ಮರಗಳು

ಇಡೀ ಜಗತ್ತನ್ನು ಪ್ರೀತಿಯಿಂದ ಸೃಷ್ಟಿಸಿದವನು ಯೆಹೋವ ದೇವರು ಎಂದು ಬೈಬಲ್‌ ಹೇಳುತ್ತದೆ

12, 13. (ಎ) ನಮ್ಮಲ್ಲಿ ಪ್ರೀತಿ ಎಂಬ ಗುಣ ಹೇಗೆ ಬಂತು? (ಬಿ) ಪ್ರಪಂಚದಲ್ಲಿರುವ ಕಷ್ಟಗಳನ್ನು ನೋಡುವಾಗ ನಿಮಗೆ ಹೇಗನಿಸುತ್ತದೆ? (ಸಿ) ಎಲ್ಲ ಅನ್ಯಾಯ, ಕಷ್ಟಗಳನ್ನು ದೇವರು ಖಂಡಿತ ತೆಗೆದು ಹಾಕುತ್ತಾನೆ ಅಂತ ನಾವು ಹೇಗೆ ಹೇಳಬಹುದು?

12 ದೇವರು ನಮ್ಮನ್ನು ತನ್ನ “ಸ್ವರೂಪದಲ್ಲಿ” ಸೃಷ್ಟಿ ಮಾಡಿದನು ಎಂದು ಬೈಬಲಿನಲ್ಲಿದೆ. (ಆದಿಕಾಂಡ 1:26) ಅಂದರೆ ದೇವರು ತನ್ನಲ್ಲಿರುವ ಗುಣಗಳನ್ನೇ ನಮ್ಮಲ್ಲಿಟ್ಟು ಸೃಷ್ಟಿಮಾಡಿದನು. ಯೋಚಿಸಿ, ಮುಗ್ಧ ಜನರು ಕಷ್ಟಪಡುವುದನ್ನು ನೋಡಿ ನಮಗೇ ಇಷ್ಟೊಂದು ನೋವಾಗುವುದಾದರೆ, ದೇವರಿಗೆ ಇನ್ನೆಷ್ಟು ನೋವಾಗುತ್ತಿರಬೇಕು!

13 ಜನರ ಕಷ್ಟವನ್ನು ನೋಡಿ ದೇವರಿಗೆ ನಿಜವಾಗಿಯೂ ನೋವಾಗುತ್ತದೆ ಎಂದು ನಮಗೆ ಹೇಗೆ ಗೊತ್ತು? “ದೇವರು ಪ್ರೀತಿಯಾಗಿದ್ದಾನೆ” ಎಂದು ಬೈಬಲಿನಲ್ಲಿದೆ. (1 ಯೋಹಾನ 4:8) ಹಾಗಾಗಿ ಆತನು ಮಾಡುವ ಎಲ್ಲ ವಿಷಯಗಳಿಗೆ ಆತನಲ್ಲಿರುವ ಪ್ರೀತಿಯೇ ಕಾರಣ. ದೇವರಲ್ಲಿ ಪ್ರೀತಿ ಎಂಬ ಗುಣ ಇರುವುದರಿಂದಲೇ ನಮ್ಮಲ್ಲೂ ಪ್ರೀತಿ ಇದೆ. ಯೋಚಿಸಿ: ಪ್ರಪಂಚದಲ್ಲಿರುವ ಅನ್ಯಾಯ, ಕಷ್ಟಗಳನ್ನೆಲ್ಲ ತೆಗೆಯುವಷ್ಟು ಶಕ್ತಿ ನಿಮಗಿದ್ದರೆ ಅದನ್ನು ಖಂಡಿತ ತೆಗೆಯುತ್ತೀರಿ ಅಲ್ವಾ? ಯಾಕೆಂದರೆ ಜನರ ಮೇಲೆ ನಿಮಗೆ ಪ್ರೀತಿ ಇದೆ. ಈಗ ದೇವರ ಬಗ್ಗೆ ಯೋಚಿಸಿ. ದೇವರಿಗೆ ಮನುಷ್ಯರ ಮೇಲೆ ಪ್ರೀತಿಯೂ ಇದೆ. ಜೊತೆಗೆ ಅನ್ಯಾಯ, ಕಷ್ಟಗಳನ್ನೆಲ್ಲ ತೆಗೆದುಹಾಕುವ ಶಕ್ತಿಯೂ ಇದೆ. ಅಂದಮೇಲೆ ಅದನ್ನು ತೆಗೆದುಹಾಕದೇ ಇರುತ್ತಾನಾ? ಈ ಪುಸ್ತಕದ ಆರಂಭದ ಚಿತ್ರಗಳಲ್ಲಿ ಕೊಟ್ಟಿರುವ ಎಲ್ಲ ವಿಷಯಗಳನ್ನು ದೇವರು ಮಾಡೇ ಮಾಡುತ್ತಾನೆ. ಇದರ ಮೇಲೆ ನಿಮಗೆ ನಂಬಿಕೆ ಬರಬೇಕಾದರೆ ದೇವರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳಬೇಕು.

ದೇವರು ನಿಮ್ಮ ಸ್ನೇಹಿತನಾಗಲು ಇಷ್ಟಪಡುತ್ತಾನೆ

ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತಿರುವುದು

ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ ಮೊದಲು ನಿಮ್ಮ ಹೆಸರು ಹೇಳುತ್ತೀರಿ ತಾನೇ? ಹಾಗೆಯೇ ದೇವರು ತನ್ನ ಹೆಸರನ್ನು ಬೈಬಲಿನಲ್ಲಿ ತಿಳಿಸಿದ್ದಾನೆ

14. (ಎ) ದೇವರ ಹೆಸರೇನು? (ಬಿ) ನಾವು ಆ ಹೆಸರನ್ನು ಯಾಕೆ ಹೇಳಬೇಕು?

14 ನೀವು ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ ಮೊದಲು ನಿಮ್ಮ ಹೆಸರನ್ನು ಹೇಳುತ್ತೀರಿ ತಾನೇ? ಅದೇರೀತಿ ನಿಮ್ಮ ಸ್ನೇಹಿತನಾಗಲು ಇಷ್ಟಪಡುವ ದೇವರು ಸಹ ತನ್ನ ಹೆಸರನ್ನು ನಿಮಗೆ ತಿಳಿಸಿದ್ದಾನೆ. ಆ ಹೆಸರೇನು ಅಂತ ನಿಮಗೆ ಗೊತ್ತಾ? ಅನೇಕ ಧರ್ಮಗಳಲ್ಲಿ, ದೇವರ ಹೆಸರು “ದೇವರು” ಅಥವಾ “ಕರ್ತ” ಅಂತ ಹೇಳುತ್ತಾರೆ. ಆದರೆ ಇವು ಬಿರುದುಗಳು. ಉದಾಹರಣೆಗೆ, ನಿಮ್ಮ ತಂದೆಯ ಹೆಸರು ಏನೆಂದು ಕೇಳಿದರೆ ನೀವೇನು ಹೇಳುತ್ತೀರಿ? ಅಪ್ಪ ಅಂತ ಹೇಳುತ್ತೀರಾ? ಇಲ್ಲ. ಅವರ ಹೆಸರನ್ನು ಹೇಳುತ್ತೀರಿ. ಹಾಗೆಯೇ ದೇವರಿಗೂ ಒಂದು ಹೆಸರಿದೆ. ಆ ಹೆಸರು “ಯೆಹೋವ” ಅಂತ ದೇವರೇ ಹೇಳಿದ್ದಾನೆ. ಕೀರ್ತನೆ 83:18⁠ರಲ್ಲಿ ಹೀಗಿದೆ: ‘ಆಗ ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.’ ದೇವರ ಹೆಸರು 7,000ಕ್ಕಿಂತ ಹೆಚ್ಚು ಸಲ ಬೈಬಲಿನಲ್ಲಿದೆ. ನೀವು ಆತನ ಹೆಸರನ್ನು ತಿಳಿದುಕೊಂಡು ಅದನ್ನು ಹೇಳಬೇಕು ಅನ್ನೋದೇ ಯೆಹೋವ ದೇವರ ಇಷ್ಟ. ದೇವರು ನಿಮ್ಮ ಸ್ನೇಹಿತನಾಗಲು ಇಷ್ಟಪಡುತ್ತಾನೆ, ಅದಕ್ಕೇ ತನ್ನ ಹೆಸರನ್ನು ನಿಮಗೆ ಹೇಳಿದ್ದಾನೆ.

15. ‘ಯೆಹೋವ’ ಎಂಬ ಹೆಸರಿನ ಅರ್ಥ ಏನು?

15 ‘ಯೆಹೋವ’ ಎಂಬ ಹೆಸರಿಗೆ ಒಂದು ಪ್ರಾಮುಖ್ಯ ಅರ್ಥ ಇದೆ. ಅದೇನೆಂದರೆ, ‘ಆತನು ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುತ್ತಾನೆ, ಏನು ಮಾಡಬೇಕೆಂದು ಯೋಚಿಸಿರುತ್ತಾನೋ ಅದನ್ನು ಮಾಡೇ ಮಾಡುತ್ತಾನೆ. ಆತನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಾಗಿದೆ. ಹಾಗಾಗಿ ಈ ಹೆಸರು ಇಟ್ಟುಕೊಳ್ಳುವ ಅರ್ಹತೆ ಇರುವುದು ದೇವರಿಗೆ ಮಾತ್ರ.a

16, 17. “ಸರ್ವಶಕ್ತ,” “ನಿತ್ಯತೆಯ ರಾಜ,” “ಸೃಷ್ಟಿಕರ್ತ” ಎಂಬ ಬಿರುದುಗಳ ಅರ್ಥವೇನು?

16 ದೇವರಿಗೆ ಅನೇಕ ಬಿರುದುಗಳಿವೆ. ಉದಾಹರಣೆಗೆ, ಪ್ರಕಟನೆ 15:3⁠ರಲ್ಲಿ ಹೀಗಿದೆ: “ಸರ್ವಶಕ್ತನಾದ ಯೆಹೋವ ದೇವರೇ, ನಿನ್ನ ಕಾರ್ಯಗಳು ಮಹತ್ತರವಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ. ನಿತ್ಯತೆಯ ರಾಜನೇ, ನಿನ್ನ ಮಾರ್ಗಗಳು ನೀತಿಯುತವೂ ಸತ್ಯವೂ ಆಗಿವೆ.” “ಸರ್ವಶಕ್ತ” ಅಂದರೆ ‘ಇಡೀ ಜಗತ್ತಿನಲ್ಲಿ ಯೆಹೋವ ದೇವರೇ ತುಂಬ ಶಕ್ತಿವಂತ’ ಎಂದರ್ಥ. “ನಿತ್ಯತೆಯ ರಾಜ” ಅಂದರೆ ‘ಯೆಹೋವ ದೇವರು ಸದಾಕಾಲ ಇರುವವನು’ ಎಂದರ್ಥ. ಕೀರ್ತನೆ 90:2⁠ರಲ್ಲಿ, ಆತನು ಯುಗಯುಗಾಂತರಗಳಿಂದ ಇದ್ದವನು ಮತ್ತು ಯುಗಯುಗಾಂತರಗಳಲ್ಲಿಯೂ ಇರುತ್ತಾನೆ ಅಂತ ಇದೆ. ಇದನ್ನು ಓದುವಾಗ ಎಷ್ಟು ಆಶ್ಚರ್ಯ ಆಗುತ್ತದೆ ಅಲ್ವಾ?

17 ಯೆಹೋವ ದೇವರಿಗೆ ಸೃಷ್ಟಿಕರ್ತ ಎಂಬ ಬಿರುದು ಸಹ ಇದೆ. ಸೃಷ್ಟಿಕರ್ತ ಅಂದರೆ ಎಲ್ಲವನ್ನು ಸೃಷ್ಟಿಸಿದವನು ಎಂದರ್ಥ. ಪ್ರಕಟನೆ 4:11⁠ರಲ್ಲಿ ಹೀಗಿದೆ: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ . . . ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.” ಸ್ವರ್ಗದಲ್ಲಿರುವ ದೇವದೂತರಿಂದ ಹಿಡಿದು ಆಕಾಶದಲ್ಲಿರುವ ನಕ್ಷತ್ರಗಳ ವರೆಗೆ, ಹಾರಾಡುವ ಪಕ್ಷಿಗಳಿಂದ ಹಿಡಿದು ಸಮುದ್ರದಲ್ಲಿ ಈಜಾಡುವ ಮೀನುಗಳ ವರೆಗೆ, ಹೀಗೆ ನೀವು ಏನೆಲ್ಲ ಯೋಚಿಸುತ್ತೀರೋ ಅದೆಲ್ಲವನ್ನು ಸೃಷ್ಟಿ ಮಾಡಿದವನು ಯೆಹೋವ ದೇವರೇ.

ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?

18. (ಎ) ನಾವು ದೇವರ ಸ್ನೇಹಿತರಾಗಲು ಸಾಧ್ಯವೇ ಇಲ್ಲ ಎಂದು ಕೆಲವರು ಯಾಕೆ ಯೋಚಿಸುತ್ತಾರೆ? (ಬಿ) ದೇವರ ಸ್ನೇಹಿತರಾಗುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

18 ದೇವರ ಬಗ್ಗೆ ಇಷ್ಟೆಲ್ಲ ಕಲಿತ ಮೇಲೆ ಕೆಲವರು, ‘ದೇವರು ತುಂಬ ಶಕ್ತಿವಂತ, ನಮಗಿಂತ ಎಷ್ಟೋ ದೊಡ್ಡವನು, ಎಷ್ಟೋ ದೂರದಲ್ಲಿದ್ದಾನೆ. ಅಂದಮೇಲೆ ನನ್ನಂಥ ಅಲ್ಪ ಮಾನವನ ಕಡೆಗೆ ಗಮನ ಕೊಡ್ತಾನಾ?’ ಅಂತ ಯೋಚಿಸುತ್ತಾರೆ. ಆದರೆ ನಾವು ಹಾಗೆ ಯೋಚಿಸಬಾರದು ಎಂದು ಯೆಹೋವ ದೇವರ ಇಷ್ಟ. ಏಕೆಂದರೆ ನಮ್ಮ ಆಪ್ತ ಗೆಳೆಯನಾಗಬೇಕು ಎನ್ನುವುದು ಆತನ ಆಸೆ. ‘ನಮ್ಮಲ್ಲಿ ಒಬ್ಬನಿಗೂ ಆತನು ದೂರವಾಗಿರುವುದಿಲ್ಲ’ ಎಂದು ಬೈಬಲ್‌ ಹೇಳುತ್ತದೆ. (ಅಪೊಸ್ತಲರ ಕಾರ್ಯಗಳು 17:27) ನೀವು ಸಹ ಆತನಿಗೆ ಆಪ್ತರಾಗಬೇಕೆಂದು ದೇವರು ಬಯಸುತ್ತಾನೆ. ನೀವು ಆತನಿಗೆ ಆಪ್ತರಾದರೆ ಆತನೂ ನಿಮಗೆ ಆಪ್ತನಾಗುತ್ತಾನೆ. —ಯಾಕೋಬ 4:8.

19. (ಎ) ದೇವರ ಸ್ನೇಹಿತರಾಗಲು ನೀವೇನು ಮಾಡಬೇಕು? (ಬಿ) ಯೆಹೋವ ದೇವರ ಗುಣಗಳಲ್ಲಿ ನಿಮಗೆ ಯಾವ ಗುಣ ತುಂಬ ಇಷ್ಟ?

19 ದೇವರ ಸ್ನೇಹಿತರಾಗಲು ನೀವೇನು ಮಾಡಬೇಕೆಂದು ಯೇಸುವಿನ ಮಾತುಗಳಿಂದ ಗೊತ್ತಾಗುತ್ತದೆ. ಆತನು ಹೇಳಿದ್ದು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾನ 17:3) ಇದರರ್ಥ ನೀವು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತು ಹೆಚ್ಚೆಚ್ಚು ಕಲಿತರೆ ಅವರನ್ನು ಹೆಚ್ಚೆಚ್ಚು ತಿಳಿದುಕೊಳ್ಳುವಿರಿ. “ದೇವರು ಪ್ರೀತಿಯಾಗಿದ್ದಾನೆ” ಎಂದು ನೀವು ಈಗಾಗಲೇ ಕಲಿತಿದ್ದೀರಿ. (1 ಯೋಹಾನ 4:16) ಯೆಹೋವ ದೇವರಲ್ಲಿ ಪ್ರೀತಿ ಮಾತ್ರವಲ್ಲ ಬೇರೆ ಗುಣಗಳೂ ಇವೆ. ಆತನಲ್ಲಿ ‘ಕನಿಕರ, ದಯೆ, ದೀರ್ಘಶಾಂತಿ, ನಂಬಿಕೆ’ ಇದೆ. (ವಿಮೋಚನಕಾಂಡ 34:6) ಆತನು ‘ಒಳ್ಳೆಯವನು, ಕ್ಷಮಿಸುವವನು,’ ತಾಳ್ಮೆ ಇರುವವನು, ನಿಷ್ಠಾವಂತನು. (ಕೀರ್ತನೆ 86:5; 2 ಪೇತ್ರ 3:9; ಪ್ರಕಟನೆ 15:4) ದೇವರ ಬಗ್ಗೆ ಬೈಬಲಿನಿಂದ ಹೆಚ್ಚೆಚ್ಚು ಕಲಿಯುತ್ತಾ ಹೋದಂತೆ ಆತನಲ್ಲಿ ಇನ್ನು ಯಾವೆಲ್ಲ ಸುಂದರ ಗುಣಗಳಿವೆ ಎಂದು ನಿಮಗೆ ಗೊತ್ತಾಗುತ್ತದೆ.

20, 21. ದೇವರನ್ನು ನೋಡಲು ಸಾಧ್ಯವಿಲ್ಲದಿದ್ದರೂ ಆತನ ಸ್ನೇಹಿತರಾಗುವುದು ಹೇಗೆ?

20 ದೇವರನ್ನು ನೋಡಲು ಸಾಧ್ಯವಿಲ್ಲ. ಹಾಗಿರುವಾಗ ಆತನ ಸ್ನೇಹಿತರಾಗುವುದು ಹೇಗೆ? (ಯೋಹಾನ 1:18; 4:24; 1 ತಿಮೊಥೆಯ 1:17) ನೋಡಲು ಸಾಧ್ಯವಿಲ್ಲದಿದ್ದರೂ ಆತನ ಬಗ್ಗೆ ನೀವು ಬೈಬಲಿನಿಂದ ಕಲಿಯಬಹುದು. ಎಷ್ಟರ ಮಟ್ಟಿಗೆಂದರೆ, ಯೆಹೋವನನ್ನು ನಿಜವಾಗಿ ನೋಡುತ್ತಿದ್ದೇವೋ ಎಂಬಂತೆ ನಿಮಗೆ ಅನಿಸುವುದು. (ಕೀರ್ತನೆ 27:4; ರೋಮನ್ನರಿಗೆ 1:20) ಹೀಗೆ ಆತನ ಬಗ್ಗೆ ಕಲಿಯುತ್ತಾ ಹೋದಂತೆ ಆತನನ್ನು ಹೆಚ್ಚೆಚ್ಚು ಪ್ರೀತಿಸುತ್ತೀರಿ, ಆತನಿಗೆ ತುಂಬ ಆಪ್ತರಾಗುತ್ತೀರಿ.

ಅಪ್ಪ ತನ್ನ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಸುಂದರ ಸೃಷ್ಟಿಯನ್ನು ತೋರಿಸುತ್ತಿದ್ದಾನೆ

ತಂದೆ ತನ್ನ ಮಕ್ಕಳನ್ನು ತುಂಬ ಪ್ರೀತಿಸುತ್ತಾನೆ. ನಮ್ಮ ತಂದೆಯಾದ ಯೆಹೋವನು ನಮ್ಮನ್ನು ಅದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ

21 ಯೆಹೋವನು ನಮಗೆ ತಂದೆ ಸಹ ಆಗಿದ್ದಾನೆ. (ಮತ್ತಾಯ 6:9) ಆತನು ನಮಗೆ ಜೀವ ಕೊಟ್ಟಿದ್ದಾನೆ. ಮಾತ್ರವಲ್ಲ ನಮ್ಮ ಜೀವನ ತುಂಬ ಚೆನ್ನಾಗಿರಬೇಕು ಎಂದು ಇಷ್ಟಪಡುತ್ತಾನೆ. ಪ್ರೀತಿಯಿರುವ ಒಬ್ಬ ತಂದೆ ತನ್ನ ಮಕ್ಕಳಿಗಾಗಿ ಬಯಸುವುದು ಇದನ್ನೇ ತಾನೇ? (ಕೀರ್ತನೆ 36:9) ನೀವು ಯೆಹೋವನ ಸ್ನೇಹಿತರಾಗಲು ಖಂಡಿತ ಸಾಧ್ಯ ಎಂದು ಬೈಬಲಿನಿಂದ ಗೊತ್ತಾಗುತ್ತದೆ. (ಯಾಕೋಬ 2:23) ಇಡೀ ಜಗತ್ತನ್ನೇ ನಿರ್ಮಿಸಿದ ಯೆಹೋವ ದೇವರು ನಿಮ್ಮ ಸ್ನೇಹಿತನಾಗಲು ಇಷ್ಟಪಡುತ್ತಾನೆಂದರೆ ಅದೆಷ್ಟು ದೊಡ್ಡ ವಿಷಯ!

22. ಬೈಬಲ್‌ ಬಗ್ಗೆ ಕಲಿಯುವುದನ್ನು ನಿಲ್ಲಿಸುವಂತೆ ಯಾರಾದರೂ ಹೇಳಿದರೆ ನೀವೇನು ಮಾಡಬೇಕು?

22 ಬೈಬಲ್‌ ಕಲಿಯುವುದನ್ನು ನಿಲ್ಲಿಸುವಂತೆ ಕೆಲವರು ನಿಮಗೆ ಹೇಳಬಹುದು. ಏಕೆಂದರೆ ನೀವೆಲ್ಲಿ ನಿಮ್ಮ ಧರ್ಮವನ್ನು ಬಿಟ್ಟುಬಿಡುತ್ತೀರೋ ಎನ್ನುವ ಭಯ ಅವರಿಗೆ ಇರಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ಯೆಹೋವ ದೇವರೊಂದಿಗಿನ ಸ್ನೇಹವನ್ನು ಬಿಡಬೇಡಿ. ಆತನಷ್ಟು ಒಳ್ಳೇ ಸ್ನೇಹಿತ ನಿಮಗೆ ಬೇರೆ ಯಾರೂ ಸಿಗುವುದಿಲ್ಲ.

23, 24. (ಎ) ಅರ್ಥ ಆಗದಿದ್ದರೆ ಏಕೆ ಕೇಳಿ ತಿಳಿದುಕೊಳ್ಳಬೇಕು? (ಬಿ) ಮುಂದಿನ ಅಧ್ಯಾಯದಲ್ಲಿ ಯಾವ ವಿಷಯ ಇದೆ?

23 ಬೈಬಲನ್ನು ಕಲಿಯುವಾಗ ಕೆಲವು ವಿಷಯಗಳು ನಿಮಗೆ ಅರ್ಥ ಆಗದಿರಬಹುದು. ಅರ್ಥ ಆಗದಿದ್ದಾಗ ಕೇಳಿ ತಿಳಿದುಕೊಳ್ಳಿ. ಕೇಳಲು ನಾಚಿಕೆಪಡಬೇಡಿ. ನಾವು ಚಿಕ್ಕ ಮಕ್ಕಳಂತೆ ಇರಬೇಕೆಂದು ಯೇಸು ಹೇಳಿದನು. (ಮತ್ತಾಯ 18:2-4) ಚಿಕ್ಕ ಮಕ್ಕಳಲ್ಲಿ ಅಹಂಕಾರ ಇರುವುದಿಲ್ಲ. ತಮಗೆ ಗೊತ್ತಿಲ್ಲದ್ದನ್ನು ಬೇರೆಯವರ ಹತ್ತಿರ ಕೇಳಲು ಅವರು ನಾಚಿಕೆಪಡುವುದಿಲ್ಲ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕು ಎನ್ನುವುದೇ ದೇವರ ಆಸೆ. ಹಾಗಾಗಿ ಒಂದೊಂದು ಹೊಸ ವಿಷಯ ಕಲಿತಂತೆ ಅದು ಸರಿಯೋ ತಪ್ಪೋ ಎಂದು ಬೈಬಲಿನಲ್ಲಿ ಪರೀಕ್ಷಿಸಿ ನೋಡಿ.—ಅಪೊಸ್ತಲರ ಕಾರ್ಯಗಳು 17:11 ಓದಿ.

24 ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳಲು ಇರುವ ಒಳ್ಳೇ ವಿಧಾನವೆಂದರೆ ಬೈಬಲನ್ನು ಕಲಿಯುವುದೇ. ಬೇರೆ ಪುಸ್ತಕಗಳಿಗೂ ಬೈಬಲಿಗೂ ಏನು ವ್ಯತ್ಯಾಸ ಇದೆ ಎಂದು ಮುಂದಿನ ಅಧ್ಯಾಯದಲ್ಲಿ ನೋಡೋಣ.

a ನಿಮ್ಮ ಬೈಬಲಿನಲ್ಲಿ ‘ಯೆಹೋವ’ ಎಂಬ ಹೆಸರು ಇಲ್ಲದಿದ್ದರೆ, ನಿಮಗೆ ಆ ಹೆಸರಿನ ಅರ್ಥ ಮತ್ತು ಉಚ್ಚರಣೆಯ ಬಗ್ಗೆ ಹೆಚ್ಚು ತಿಳಿಯಲು ಮನಸ್ಸಿದ್ದರೆ ಟಿಪ್ಪಣಿ 1ನ್ನು ನೋಡಿ.

ನಾನೇನು ಕಲಿತೆ?

1: ದೇವರು ಯಾರು?

“ಎಲ್ಲವನ್ನೂ ನೀನೇ ಸೃಷ್ಟಿಸಿದಿ.”—ಪ್ರಕಟನೆ 4:11

ದೇವರ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

  • ಪ್ರಕಟನೆ 15:3

    ದೇವರು ಸರ್ವಶಕ್ತ. ಅಂದರೆ ಜಗತ್ತಿನಲ್ಲೇ ಹೆಚ್ಚು ಶಕ್ತಿವಂತ.

  • ಕೀರ್ತನೆ 90:2

    ದೇವರು ಯಾವಾಗಲೂ ಇರುವವನು.

  • ಮತ್ತಾಯ 6:9

    ದೇವರು ನಮ್ಮ ತಂದೆ.

    ನಮ್ಮ ಜೀವನ ತುಂಬ ಚೆನ್ನಾಗಿರಬೇಕು ಎನ್ನುವುದು ಆತನ ಆಸೆ.

  • ಅಪೊಸ್ತಲರ ಕಾರ್ಯಗಳು 17:27

    ನಮ್ಮ ಸ್ನೇಹಿತನಾಗಲು ದೇವರು ಇಷ್ಟಪಡುತ್ತಾನೆ.

2: ದೇವರ ಹೆಸರೇನು?

‘ಯೆಹೋವ, ಇದು ಸದಾಕಾಲಕ್ಕೂ ನನ್ನ ಹೆಸರು’ —ವಿಮೋಚನಕಾಂಡ 3:15

ದೇವರ ಹೆಸರು ಪ್ರಾಮುಖ್ಯ ಏಕೆ?

  • ಕೀರ್ತನೆ 83:18

    ತನ್ನ ಹೆಸರು ‘ಯೆಹೋವ’ ಎಂದು ದೇವರು ಹೇಳಿದ್ದಾನೆ. ಆ ಹೆಸರನ್ನು ನಾವು ಬಳಸಬೇಕೆಂದು ಆತನು ಇಷ್ಟಪಡುತ್ತಾನೆ. “ದೇವರು” “ಕರ್ತ” ಇವು ಆತನ ಹೆಸರುಗಳಲ್ಲ. “ರಾಜ” “ಅಪ್ಪ” “ಪ್ರಧಾನ ಮಂತ್ರಿ” ಇವುಗಳಂತೆ ಬಿರುದುಗಳು.

  • ವಿಮೋಚನಕಾಂಡ 3:14

    ದೇವರ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ.” ಎಲ್ಲವನ್ನು ಯೆಹೋವನೇ ಸೃಷ್ಟಿಸಿದ್ದರಿಂದ, ಕೊಟ್ಟ ಮಾತಿನಂತೆ ನಡೆಯಲು, ಯೋಚಿಸಿದ್ದನ್ನೆಲ್ಲ ಮಾಡಲು ಆತನಿಂದ ಸಾಧ್ಯ.

3: ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ

“ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾನ 4:8

ದೇವರು ನಮಗೆ ಹೇಗೆ ಪ್ರೀತಿ ತೋರಿಸುತ್ತಾನೆ?

  • ವಿಮೋಚನಕಾಂಡ 34:6; ಕೀರ್ತನೆ 37:28

    ದೇವರು ಕನಿಕರ, ದಯೆ ಇರುವವನು. ನ್ಯಾಯವನ್ನು ಪ್ರೀತಿಸುವವನು.

  • ಕೀರ್ತನೆ 86:5

    ನಮ್ಮನ್ನು ಕ್ಷಮಿಸುತ್ತಾನೆ.

  • 2 ಪೇತ್ರ 3:9

    ನಮ್ಮೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುತ್ತಾನೆ.

  • ಪ್ರಕಟನೆ 15:4

    ನಮಗೆ ನಿಷ್ಠೆ ತೋರಿಸುತ್ತಾನೆ.

4: ದೇವರಿಗೆ ನಿಮ್ಮ ಬಗ್ಗೆ ಚಿಂತೆಯಿದೆ

“ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7

ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆ ಅಂತ ನಿಮಗೆ ಹೇಗೆ ಗೊತ್ತು?

  • ಕೀರ್ತನೆ 37:9-11

    ‘ದುಷ್ಟತನವನ್ನೆಲ್ಲ ತೆಗೆದುಹಾಕಿ ನಿಮ್ಮ ಕಷ್ಟಗಳನ್ನೆಲ್ಲ ಕೊನೆಗಾಣಿಸುತ್ತೇನೆ’ ಎಂದು ದೇವರು ಮಾತು ಕೊಟ್ಟಿದ್ದಾನೆ.

  • ಯಾಕೋಬ 4:8

    ನೀವು ತನ್ನ ಸ್ನೇಹಿತರಾಗಬೇಕೆಂದು ಯೆಹೋವನು ಬಯಸುತ್ತಾನೆ.

  • ಯೋಹಾನ 17:3

    ನೀವು ದೇವರ ಬಗ್ಗೆ ಹೆಚ್ಚೆಚ್ಚು ಕಲಿತ ಹಾಗೆ ಆತನ ಮೇಲೆ ನಿಮಗೆ ಪ್ರೀತಿ ಹೆಚ್ಚಾಗುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ