ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bhs ಅಧ್ಯಾ. 18 ಪು. 185-196
  • ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕಾ?
  • ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಓದಿ ಬೈಬಲ್‌ ಬೋಧಿಸುತ್ತದೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜ್ಞಾನ ಪಡೆದುಕೊಂಡು ನಂಬಿಕೆ ಇಡಬೇಕು
  • ಬೈಬಲಿನಲ್ಲಿರುವ ಸತ್ಯಗಳನ್ನು ಬೇರೆಯವರಿಗೂ ತಿಳಿಸಿ
  • ಪಾಪಗಳಿಗೆ ಪಶ್ಚಾತ್ತಾಪಪಡಿರಿ ದೇವರ ಕಡೆಗೆ ತಿರುಗಿಕೊಳ್ಳಿರಿ
  • ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಿ
  • ಸಮರ್ಪಣೆ ಮಾಡಿಕೊಳ್ಳಲು ಭಯಪಡಬೇಡಿ
  • ಸಮರ್ಪಣೆಯನ್ನು ಬಹಿರಂಗವಾಗಿ ಪ್ರಕಟಿಸಿ
  • ದೀಕ್ಷಾಸ್ನಾನದ ಅರ್ಥವೇನು?
  • ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ದೀಕ್ಷಾಸ್ನಾನ ಯಾಕೆ ತಗೊಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 1: ದೀಕ್ಷಾಸ್ನಾನದ ಅರ್ಥ
    ಯುವಜನರ ಪ್ರಶ್ನೆಗಳು
  • ಸಮರ್ಪಣೆ ಮತ್ತು ದೀಕ್ಷಾಸ್ನಾನ ಯಾಕಷ್ಟು ಮುಖ್ಯ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಬೈಬಲ್‌ ನಮಗೆ ಏನು ಕಲಿಸುತ್ತದೆ?
bhs ಅಧ್ಯಾ. 18 ಪು. 185-196

ಅಧ್ಯಾಯ 18

ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕಾ?

1. ಬೈಬಲಿನಲ್ಲಿರುವ ಅನೇಕ ಸತ್ಯಗಳನ್ನು ಕಲಿತ ಮೇಲೆ ನೀವೀಗ ಯಾವುದರ ಬಗ್ಗೆ ಯೋಚಿಸುತ್ತಿರಬಹುದು?

ನೀವು ಈ ಪುಸ್ತಕದ ಸಹಾಯದಿಂದ ಬೈಬಲಿನಲ್ಲಿರುವ ಅನೇಕ ಸತ್ಯಗಳನ್ನು ಈಗಾಗಲೇ ಕಲಿತಿದ್ದೀರಿ. ಉದಾಹರಣೆಗೆ, ಸಾವಿಲ್ಲದ ಜೀವನವನ್ನು ದೇವರು ನಮಗೆಲ್ಲರಿಗೆ ಕೊಡಲಿದ್ದಾನೆಂದು ಕಲಿತಿದ್ದೀರಿ, ಸತ್ತ ಮೇಲೆ ಏನಾಗುತ್ತದೆ ಎನ್ನುವುದೂ ನಿಮಗೀಗ ಗೊತ್ತಿದೆ. ಸತ್ತವರಿಗೆ ದೇವರು ಪುನಃ ಜೀವ ಕೊಡುತ್ತಾನೆ ಎನ್ನುವುದನ್ನೂ ನೀವು ತಿಳಿದಿದ್ದೀರಿ. (ಪ್ರಸಂಗಿ 9:5; ಲೂಕ 23:43; ಯೋಹಾನ 5:28, 29; ಪ್ರಕಟನೆ 21:3, 4) ಈಗ ನೀವು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗಲು ಶುರುಮಾಡಿರಬಹುದು. ಅವರೇ ಸರಿಯಾದ ರೀತಿಯಲ್ಲಿ ದೇವರನ್ನು ಆರಾಧಿಸುತ್ತಿರುವವರು ಎಂದು ನಿಮಗೆ ಖಚಿತವಾಗಿರಬಹುದು. (ಯೋಹಾನ 13:35) ನೀವು ಯೆಹೋವ ದೇವರಿಗೆ ಹೆಚ್ಚೆಚ್ಚು ಆಪ್ತರಾಗಿದ್ದು, ಆತನ ಸೇವೆಯನ್ನು ಮಾಡಬೇಕೆಂದು ಸಹ ನಿರ್ಧರಿಸಿರಬಹುದು. ಹಾಗಾಗಿ ದೇವರ ಸೇವೆಯನ್ನು ಮಾಡುವುದು ಹೇಗೆಂದು ನೀವು ಯೋಚಿಸುತ್ತಿರಬಹುದು.

ಫಿಲಿಪ್ಪ ಮತ್ತು ಇಥಿಯೋಪ್ಯದ ಆಸ್ಥಾನದಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿ

2. ಇಥಿಯೋಪ್ಯದ ವ್ಯಕ್ತಿ ಯಾಕೆ ದೀಕ್ಷಾಸ್ನಾನ ಪಡೆಯಲು ಬಯಸಿದನು?

2 ನಿಮ್ಮ ಹಾಗೆಯೇ ನಿರ್ಣಯ ಮಾಡಿದ ಒಬ್ಬ ವ್ಯಕ್ತಿಯ ಬಗ್ಗೆ ನೋಡೋಣ. ಅವನು ಇಥಿಯೋಪ್ಯದವನು. ಯೇಸುವಿನ ಪುನರುತ್ಥಾನವಾದ ಸ್ವಲ್ಪ ಸಮಯದ ನಂತರ ಆ ವ್ಯಕ್ತಿಗೆ ಯೇಸುವಿನ ಶಿಷ್ಯನಾಗಿದ್ದ ಫಿಲಿಪ್ಪನು ಸುವಾರ್ತೆ ಸಾರಿದನು. ದೇವರು ಕಳುಹಿಸಿದ ಮೆಸ್ಸೀಯನು ಯೇಸುವೇ ಎಂದು ಫಿಲಿಪ್ಪನು ಅವನಿಗೆ ಪುರಾವೆಗಳ ಸಹಿತ ವಿವರಿಸಿದನು. ಕಲಿತ ವಿಷಯವು ಆ ಇಥಿಯೋಪ್ಯದವನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ತಕ್ಷಣ ಅವನು ಫಿಲಿಪ್ಪನಿಗೆ “ಅಲ್ಲಿ ನೋಡು, ಜಲರಾಶಿ! ದೀಕ್ಷಾಸ್ನಾನ ಪಡೆದುಕೊಳ್ಳಲು ನನಗೆ ಅಡ್ಡಿ ಏನು?” ಎಂದನು.—ಅಪೊಸ್ತಲರ ಕಾರ್ಯಗಳು 8:26-36.

3. (ಎ) ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆ ಕೊಟ್ಟನು? (ಬಿ) ದೀಕ್ಷಾಸ್ನಾನ ಕೊಡುವ ಸರಿಯಾದ ವಿಧ ಯಾವುದು?

3 ನಾವು ಯೆಹೋವ ದೇವರ ಸೇವೆಯನ್ನು ಮಾಡಬೇಕಾದರೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಎಂದು ಬೈಬಲ್‌ ಹೇಳುತ್ತದೆ. ಹಾಗಾಗಿಯೇ ಯೇಸು ತನ್ನ ಹಿಂಬಾಲಕರಿಗೆ “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ . . .  ದೀಕ್ಷಾಸ್ನಾನ ಮಾಡಿಸಿ” ಎಂದು ಹೇಳಿದನು. (ಮತ್ತಾಯ 28:19) ಸ್ವತಃ ಯೇಸುವೇ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಮಗೆ ಮಾದರಿಯಿಟ್ಟಿದ್ದಾನೆ. ತಲೆಯ ಮೇಲೆ ನೀರನ್ನು ಚಿಮುಕಿಸಿ ಆತನಿಗೆ ದೀಕ್ಷಾಸ್ನಾನ ಕೊಡಲಿಲ್ಲ, ಬದಲಿಗೆ ಆತನನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಲಾಯಿತು. (ಮತ್ತಾಯ 3:16) ಯೇಸುವಿನ ಹಿಂಬಾಲಕರು ಸಹ ಈ ರೀತಿಯಲ್ಲೇ ದೀಕ್ಷಾಸ್ನಾನ ಪಡೆದುಕೊಳ್ಳಬೇಕು.

4. ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನೀವು ಬೇರೆಯವರಿಗೆ ಏನನ್ನು ತೋರಿಸಿಕೊಡುತ್ತೀರಿ?

4 ನೀವು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ಯೆಹೋವನ ಸ್ನೇಹಿತರಾಗಲು ಮತ್ತು ಆತನ ಸೇವೆಯನ್ನು ಮಾಡಲು ನಿಜವಾಗಿಯೂ ಬಯಸುತ್ತೀರಿ ಎಂದು ಎಲ್ಲರಿಗೂ ತೋರಿಸಿಕೊಡುತ್ತೀರಿ. (ಕೀರ್ತನೆ 40:7, 8) ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದರೆ ನೀವು ಏನು ಮಾಡಬೇಕು? ಅದನ್ನೀಗ ನೋಡೋಣ.

ಜ್ಞಾನ ಪಡೆದುಕೊಂಡು ನಂಬಿಕೆ ಇಡಬೇಕು

5. (ಎ) ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತ ಮುಂಚೆ ಏನು ಮಾಡಬೇಕು? (ಬಿ) ಕೂಟಗಳಿಗೆ ತಪ್ಪದೆ ಹಾಜರಾಗುವುದು ಯಾಕೆ ಮುಖ್ಯ?

5 ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಯೆಹೋವನ ಬಗ್ಗೆ ಮತ್ತು ಯೇಸುವಿನ ಬಗ್ಗೆ ತಿಳಿದುಕೊಳ್ಳಬೇಕು. ನೀವು ಬೈಬಲನ್ನು ಅಧ್ಯಯನ ಮಾಡುವ ಮೂಲಕ ಈಗಾಗಲೇ ಅದನ್ನು ಮಾಡುತ್ತಿದ್ದೀರಿ. (ಯೋಹಾನ 17:3 ಓದಿ.) ಆದರೆ ಅಷ್ಟು ಮಾತ್ರ ಸಾಕಾಗುವುದಿಲ್ಲ. ಬೈಬಲಿನಲ್ಲಿ ಹೇಳಲಾಗಿರುವಂತೆ, ದೇವರು ಏನು ಇಷ್ಟಪಡುತ್ತಾನೆ ಎನ್ನುವುದರ ಕುರಿತು ನೀವು ‘ನಿಷ್ಕೃಷ್ಟ ಜ್ಞಾನ ಪಡೆದುಕೊಳ್ಳಬೇಕು.’ (ಕೊಲೊಸ್ಸೆ 1:9) ಯೆಹೋವನ ಸಾಕ್ಷಿಗಳ ಕೂಟಗಳಿಗೆ ನೀವು ಹಾಜರಾಗುವುದರಿಂದ ಇಂಥ ಜ್ಞಾನವನ್ನು ಪಡೆದುಕೊಳ್ಳುತ್ತೀರಿ. ಅದರಿಂದ ನೀವು ಯೆಹೋವ ದೇವರಿಗೆ ತುಂಬ ಆಪ್ತರಾಗುತ್ತೀರಿ. ಕೂಟಗಳಿಗೆ ತಪ್ಪದೆ ಹಾಜರಾಗಲು ಇದು ಒಂದು ಮುಖ್ಯ ಕಾರಣವಾಗಿದೆ.—ಇಬ್ರಿಯ 10:24, 25.

ಇಬ್ಬರು ಯೆಹೋವನ ಸಾಕ್ಷಿಗಳು ಒಬ್ಬ ವ್ಯಕ್ತಿಗೆ ಬೈಬಲಿನಲ್ಲಿರುವ ವಿಷಯಗಳನ್ನು ಕಲಿಸುತ್ತಿದ್ದಾರೆ

ದೀಕ್ಷಾಸ್ನಾನ ಪಡೆಯುವುದಕ್ಕಿಂತ ಮುಂಚೆ ನೀವು ಬೈಬಲಿನಲ್ಲಿರುವ ವಿಷಯಗಳನ್ನು ಕಲಿಯಬೇಕು

6. ದೀಕ್ಷಾಸ್ನಾನ ಪಡೆಯುವ ಮುಂಚೆ ಬೈಬಲಿನ ಬಗ್ಗೆ ನಿಮಗೆ ಎಷ್ಟು ತಿಳಿದಿರಬೇಕು?

6 ‘ಬೈಬಲಿನಲ್ಲಿರುವ ಎಲ್ಲವನ್ನು ತಿಳಿದುಕೊಂಡರೆ ಮಾತ್ರ ನಿಮಗೆ ದೀಕ್ಷಾಸ್ನಾನ’ ಎಂದು ಯೆಹೋವನು ಹೇಳುವುದಿಲ್ಲ. ಹಾಗಾಗಿಯೇ ಇಥಿಯೋಪ್ಯದವನು ದೀಕ್ಷಾಸ್ನಾನಕ್ಕೆ ಮುಂಚೆ ಎಲ್ಲವನ್ನು ತಿಳಿದುಕೊಳ್ಳಬೇಕು ಎಂದು ಯೆಹೋವನು ಬಯಸಲಿಲ್ಲ. (ಅಪೊಸ್ತಲರ ಕಾರ್ಯಗಳು 8:30, 31) ಅಷ್ಟೇ ಅಲ್ಲ, ಎಲ್ಲವನ್ನು ಕಲಿತು ಮುಗಿಸಲು ನಮಗೂ ಆಗುವುದಿಲ್ಲ, ಏಕೆಂದರೆ ನಾವು ಸದಾ ಕಾಲಕ್ಕೂ ದೇವರ ಬಗ್ಗೆ ಕಲಿಯುತ್ತಲೇ ಇರುತ್ತೇವೆ. (ಪ್ರಸಂಗಿ 3:11) ಆದರೆ ದೀಕ್ಷಾಸ್ನಾನ ಪಡೆಯುವ ಮುಂಚೆ ನಿಮಗೆ ಬೈಬಲಿನ ಮುಖ್ಯ ಬೋಧನೆಗಳ ಬಗ್ಗೆ ಗೊತ್ತಿರಲೇಬೇಕು ಮತ್ತು ಅವುಗಳನ್ನು ನೀವು ನಂಬಬೇಕು.—ಇಬ್ರಿಯ 5:12.

7. ಬೈಬಲಿನಲ್ಲಿರುವ ವಿಷಯಗಳನ್ನು ಕಲಿತದ್ದರಿಂದ ನಿಮಗೆ ಏನು ಮಾಡಲು ಸಾಧ್ಯವಾಗಿದೆ?

7 ‘ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ’ ಎಂದು ಬೈಬಲಿನಲ್ಲಿ ಹೇಳಲಾಗಿದೆ. (ಇಬ್ರಿಯ 11:6) ಹಾಗಾಗಿ ದೀಕ್ಷಾಸ್ನಾನ ಪಡೆಯುವ ಮುಂಚೆ ನೀವು ದೇವರಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಸಹ ತುಂಬ ಪ್ರಾಮುಖ್ಯ. ಹಿಂದೆ ಕೊರಿಂಥ ನಗರದಲ್ಲಿ ಯೇಸುವಿನ ಶಿಷ್ಯರು ಸುವಾರ್ತೆ ಸಾರುತ್ತಿದ್ದಾಗ ಕೆಲವರು ಅದಕ್ಕೆ ಕಿವಿಗೊಟ್ಟರು. ಅವರು ಅದನ್ನು “ನಂಬಿ ದೀಕ್ಷಾಸ್ನಾನ ಪಡೆದುಕೊಂಡರು” ಎಂದು ಬೈಬಲ್‌ ಹೇಳುತ್ತದೆ. (ಅಪೊಸ್ತಲರ ಕಾರ್ಯಗಳು 18:8) ಅವರ ಹಾಗೆಯೇ ನೀವು ಸಹ ಬೈಬಲಿನಲ್ಲಿರುವ ವಿಷಯಗಳನ್ನು ಕಲಿತು ಅವುಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಂಡಿದ್ದೀರಿ. ಹಾಗಾಗಿ ಯೆಹೋವನು ಮಾತು ಕೊಟ್ಟಂತೆಯೇ ನಡೆದುಕೊಳ್ಳುತ್ತಾನೆ ಮತ್ತು ಯೇಸು ತನ್ನ ಜೀವ ಕೊಟ್ಟಿದ್ದರಿಂದ ನಮಗೆ ಪಾಪ, ಮರಣದಿಂದ ಬಿಡುಗಡೆ ಸಿಗುತ್ತದೆ ಎಂದು ನಂಬಿಕೆ ಇಟ್ಟಿದ್ದೀರಿ.—ಯೆಹೋಶುವ 23:14; ಅಪೊಸ್ತಲರ ಕಾರ್ಯಗಳು 4:12; 2 ತಿಮೊಥೆಯ 3:16, 17.

ಬೈಬಲಿನಲ್ಲಿರುವ ಸತ್ಯಗಳನ್ನು ಬೇರೆಯವರಿಗೂ ತಿಳಿಸಿ

8. ಏನು ಮಾಡಿದರೆ ನಿಮಗೆ ಕಲಿತ ವಿಷಯಗಳನ್ನು ಬೇರೆಯವರಿಗೆ ಹೇಳಲು ಮನಸ್ಸಾಗುತ್ತದೆ?

8 ನೀವು ಬೈಬಲಿನಿಂದ ಹೆಚ್ಚೆಚ್ಚು ವಿಷಯಗಳನ್ನು ಕಲಿತು ಅವುಗಳ ಪ್ರಕಾರವೇ ಜೀವಿಸಿದರೆ, ಅವುಗಳಿಂದ ಏನೆಲ್ಲ ಪ್ರಯೋಜನವಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಇದರಿಂದ ನಿಮ್ಮ ನಂಬಿಕೆ ಹೆಚ್ಚಾಗುತ್ತದೆ. ಆಗ, ಕಲಿತ ವಿಷಯಗಳನ್ನು ಬೇರೆಯವರಿಗೆ ಹೇಳಲು ನಿಮಗೆ ಖಂಡಿತ ಮನಸ್ಸಾಗುತ್ತದೆ. (ಯೆರೆಮೀಯ 20:9; 2 ಕೊರಿಂಥ 4:13) ಆದರೆ ನೀವು ಇದನ್ನು ಯಾರಿಗೆ ಹೇಳಬೇಕು?

ಬೈಬಲ್‌ ವಿದ್ಯಾರ್ಥಿಯು ಮತ್ತೊಬ್ಬನಿಗೆ ಬೈಬಲಿನ ಸಂದೇಶವನ್ನು ತಿಳಿಸುತ್ತಿದ್ದಾನೆ. ಅದನ್ನು ಬೈಬಲ್‌ ಶಿಕ್ಷಕನು ಗಮನಿಸುತ್ತಿದ್ದಾನೆ

ದೇವರಲ್ಲಿ ನೀವೆಷ್ಟು ನಂಬಿಕೆ ಬೆಳೆಸಿಕೊಳ್ಳಬೇಕೆಂದರೆ ಆತನ ಬಗ್ಗೆ ಬೇರೆಯವರಿಗೆ ಹೇಳಬೇಕೆಂದು ನಿಮಗೆ ಅನಿಸಬೇಕು

9, 10. (ಎ) ನೀವು ಕಲಿತ ವಿಷಯಗಳನ್ನು ಯಾರಿಗೆಲ್ಲ ಹೇಳಬಹುದು? (ಬಿ) ನಿಮಗೆ ಸಭೆಯವರ ಜೊತೆ ಹೋಗಿ ಸಾರಬೇಕೆಂದು ಅನಿಸಿದಾಗ ಏನು ಮಾಡಬೇಕು?

9 ನೀವು ಕಲಿತದ್ದನ್ನು ಕುಟುಂಬದವರಿಗೆ, ಸ್ನೇಹಿತರಿಗೆ, ಅಕ್ಕಪಕ್ಕದ ಮನೆಯವರಿಗೆ, ನಿಮ್ಮ ಜೊತೆ ಕೆಲಸ ಮಾಡುವವರಿಗೆ ಹೇಳಬೇಕೆಂದು ನಿಮಗೆ ಅನಿಸಬಹುದು. ದೇವರ ಬಗ್ಗೆ ಅವರಿಗೆ ಹೇಳುವುದು ತುಂಬ ಒಳ್ಳೆಯದು. ಆದರೆ ಹೇಳುವಾಗ ಸೌಜನ್ಯದಿಂದ ಪ್ರೀತಿಯಿಂದ ಮಾತಾಡಿ. ಹೀಗೆ ಮಾಡಿದರೆ ಸ್ವಲ್ಪ ಸಮಯದ ನಂತರ ನೀವು ಸಭೆಯವರೊಂದಿಗೆ ಹೋಗಿ ಬೇರೆಯವರಿಗೆ ಕಲಿಸಬಹುದು. ನಿಮಗೆ ಸಭೆಯವರ ಜೊತೆ ಹೋಗಿ ಸಾರಬೇಕೆಂದು ಅನಿಸಿದಾಗ ನಿಮಗೆ ಬೈಬಲನ್ನು ಕಲಿಸುತ್ತಿರುವವರ ಹತ್ತಿರ ನಿಮ್ಮ ಆಸೆಯನ್ನು ಹೇಳಿಕೊಳ್ಳಿ. ನೀವು ನಂಬುವ ವಿಷಯಗಳಿಗೆ ಬೈಬಲಿನಿಂದ ಕಾರಣ ಹೇಳಲು ನಿಮ್ಮಿಂದ ಆಗುತ್ತದೆಂದು ಮತ್ತು ನೀವು ಬೈಬಲಿನ ಮಟ್ಟಗಳ ಪ್ರಕಾರ ಜೀವಿಸುತ್ತಿದ್ದೀರೆಂದು ಅವರಿಗೆ ಅನಿಸುವಲ್ಲಿ ಅವರು ಹೋಗಿ ಸಭೆಯ ಹಿರಿಯರಿಗೆ ತಿಳಿಸುತ್ತಾರೆ. ಹಿರಿಯರಲ್ಲಿ ಇಬ್ಬರು ಬಂದು ನಿಮ್ಮಿಬ್ಬರೊಟ್ಟಿಗೆ ಮಾತಾಡುತ್ತಾರೆ.

10 ಹಿರಿಯರು ನಿಮ್ಮೊಂದಿಗೆ ಮಾತಾಡುವಾಗ ನಿಮಗೆ ಬೈಬಲಿನಲ್ಲಿರುವ ಬೋಧನೆಗಳು ಅರ್ಥವಾಗಿವೆಯಾ, ಅವುಗಳನ್ನು ನೀವು ನಂಬುತ್ತೀರಾ, ಅವುಗಳ ಪ್ರಕಾರ ಜೀವಿಸುತ್ತಿದ್ದೀರಾ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟೇ ಅಲ್ಲ, ನಿಮಗೆ ಯೆಹೋವನ ಸಾಕ್ಷಿಯಾಗಲು ನಿಜವಾಗಿಯೂ ಮನಸ್ಸಿದೆಯಾ ಎಂದು ತಿಳಿಯಲು ಸಹ ಅವರು ಬಯಸುತ್ತಾರೆ. ಹಿರಿಯರು ನಿಮ್ಮನ್ನು ಮತ್ತು ಸಭೆಯಲ್ಲಿರುವ ಎಲ್ಲರನ್ನು ಪ್ರೀತಿಸುತ್ತಾರೆ, ಕಾಳಜಿ ವಹಿಸುತ್ತಾರೆ. ಹಾಗಾಗಿ ಅವರೊಂದಿಗೆ ಮಾತಾಡಲು ನೀವು ಹೆದರಬೇಡಿ. (ಅಪೊಸ್ತಲರ ಕಾರ್ಯಗಳು 20:28; 1 ಪೇತ್ರ 5:2, 3) ನಿಮ್ಮೊಂದಿಗೆ ಮಾತಾಡಿದ ಮೇಲೆ ನೀವು ಸಭೆಯವರ ಜೊತೆ ಸುವಾರ್ತೆ ಸಾರಲು ಹೋಗಬಹುದಾ ಇಲ್ವಾ ಎಂದು ಹಿರಿಯರು ಹೇಳುತ್ತಾರೆ.

11. ಹಿರಿಯರು ಹೇಳಿದ ಬದಲಾವಣೆಗಳನ್ನು ನೀವು ಯಾಕೆ ಮಾಡಿಕೊಳ್ಳಬೇಕು?

11 ಕೆಲವೊಮ್ಮೆ ನಿಮ್ಮೊಂದಿಗೆ ಮಾತಾಡಿದ ಹಿರಿಯರಿಗೆ ನೀವು ಇನ್ನೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಅನಿಸಬಹುದು. ಅದರ ಬಗ್ಗೆ ಅವರು ನಿಮ್ಮ ಹತ್ತಿರ ಮಾತಾಡಬಹುದು. ಆ ಬದಲಾವಣೆಗಳನ್ನು ಮಾಡಿಕೊಳ್ಳುವುದು ಯಾಕೆ ಪ್ರಾಮುಖ್ಯ? ಯಾಕೆಂದರೆ ನೀವು ಜನರಿಗೆ ಸುವಾರ್ತೆ ಸಾರುವಾಗ ಯೆಹೋವ ದೇವರನ್ನು ಪ್ರತಿನಿಧಿಸುತ್ತೀರಿ. ಆದ್ದರಿಂದ ಆತನಿಗೆ ಗೌರವ ತರುವಂಥ ರೀತಿಯಲ್ಲಿ ನೀವು ಜೀವಿಸುತ್ತಿರಬೇಕು.—1 ಕೊರಿಂಥ 6:9, 10; ಗಲಾತ್ಯ 5:19-21.

ಪಾಪಗಳಿಗೆ ಪಶ್ಚಾತ್ತಾಪಪಡಿರಿ ದೇವರ ಕಡೆಗೆ ತಿರುಗಿಕೊಳ್ಳಿರಿ

12. ನಾವೆಲ್ಲರೂ ಏಕೆ ಪಶ್ಚಾತ್ತಾಪಪಡಬೇಕು?

12 ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ನೀವು ಇನ್ನೊಂದು ವಿಷಯವನ್ನು ಸಹ ಮಾಡಬೇಕು. ಅದೇನೆಂದು ಅಪೊಸ್ತಲ ಪೇತ್ರನ ಈ ಮಾತುಗಳಿಂದ ತಿಳಿದುಕೊಳ್ಳಬಹುದು: “ನಿಮ್ಮ ಪಾಪಗಳು ಅಳಿಸಿಬಿಡಲ್ಪಡುವಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ.” (ಅಪೊಸ್ತಲರ ಕಾರ್ಯಗಳು 3:19) ಪಶ್ಚಾತ್ತಾಪ ಅಂದರೇನು? ನಾವು ಮಾಡಿರುವ ತಪ್ಪುಗಳ ಬಗ್ಗೆ ಯೋಚಿಸಿ ದುಃಖಪಡುವುದೇ ಪಶ್ಚಾತ್ತಾಪ. ಉದಾಹರಣೆಗೆ, ಯಾರಾದರೂ ಅನೈತಿಕ ಜೀವನ ನಡೆಸಿದ್ದರೆ ಅವರು ತಮ್ಮ ತಪ್ಪಿಗೆ ಪಶ್ಚಾತ್ತಾಪಪಡಬೇಕು. ಆದರೆ ಕೆಲವರು ತಮ್ಮ ಜೀವನದಲ್ಲಿ ತಪ್ಪು ಮಾಡಲೇಬಾರದು ಎಂದು ಸಾಕಷ್ಟು ಪ್ರಯತ್ನಪಟ್ಟಿರಬಹುದು. ಹಾಗಿದ್ದರೂ ಅವರು ಪಶ್ಚಾತ್ತಾಪಪಡಲೇಬೇಕು. ಏಕೆಂದರೆ ನಾವೆಲ್ಲರೂ ಪಾಪಿಗಳಾಗಿರುವುದರಿಂದ ತಪ್ಪುಗಳನ್ನು ಮಾಡೇ ಮಾಡುತ್ತೇವೆ. ಹಾಗಾಗಿ ನಾವು ಪಶ್ಚಾತ್ತಾಪಪಟ್ಟು ದೇವರ ಹತ್ತಿರ ಕ್ಷಮೆ ಕೇಳಬೇಕು.—ರೋಮನ್ನರಿಗೆ 3:23; 5:12.

13. ‘ತಿರುಗಿಕೊಳ್ಳುವುದು’ ಅಂದರೇನು?

13 ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟರೆ ಮಾತ್ರ ಸಾಕಾ? ಪಶ್ಚಾತ್ತಾಪಪಟ್ಟ ಮೇಲೆ “ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಸಹ ಪೇತ್ರನು ಹೇಳಿದನು. ‘ತಿರುಗಿಕೊಳ್ಳುವುದು’ ಅಂದರೆ ಹಿಂದೆ ನೀವು ಜೀವಿಸುತ್ತಿದ್ದ ರೀತಿಯನ್ನು ಅಥವಾ ಮಾಡುತ್ತಿದ್ದ ತಪ್ಪನ್ನು ಬಿಟ್ಟು, ಸರಿಯಾದದ್ದನ್ನು ಮಾಡಲು ಆರಂಭಿಸುವುದಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು ಹೀಗೆ ಊಹಿಸಿಕೊಳ್ಳಿ: ನೀವು ಯಾವುದೋ ಒಂದು ಊರಿಗೆ ಮೊದಲ ಬಾರಿ ಪ್ರಯಾಣಿಸುತ್ತಿದ್ದೀರಿ. ಸ್ವಲ್ಪ ದೂರ ಹೋದ ಮೇಲೆ ನೀವು ತಪ್ಪಾದ ದಿಕ್ಕಿನಲ್ಲಿ ಹೋಗುತ್ತಿದ್ದೀರೆಂದು ನಿಮಗೆ ಗೊತ್ತಾಗುತ್ತದೆ. ಆಗ ಏನು ಮಾಡುತ್ತೀರಿ? ವಾಹನವನ್ನು ನಿಲ್ಲಿಸಿ ಹಿಂತಿರುಗಿ ಬಂದು ಸರಿಯಾದ ದಿಕ್ಕಿಗೆ ಪ್ರಯಾಣಿಸಲು ಆರಂಭಿಸುತ್ತೀರಿ. ಅದೇ ರೀತಿಯಲ್ಲಿ, ಬೈಬಲ್‌ನಿಂದ ಕಲಿಯುತ್ತಾ ಇರುವಾಗ ನೀವು ಮಾಡುತ್ತಿರುವ ಕೆಲವು ವಿಷಯಗಳು, ಕೆಲವು ರೂಢಿಗಳು ಸರಿಯಲ್ಲ ಎಂದು ನಿಮಗೆ ಅನಿಸಿರಬಹುದು. ಈಗ ನೀವು ‘ತಿರುಗಿಕೊಳ್ಳಲು’ ಅಂದರೆ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸರಿಯಾದದ್ದನ್ನು ಮಾಡಲು ಶುರುಮಾಡಬೇಕು.

ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಿ

ಬೈಬಲ್‌ ವಿದ್ಯಾರ್ಥಿಯೊಬ್ಬನು ಪ್ರಾರ್ಥಿಸುತ್ತಾ ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳುತ್ತಿದ್ದಾನೆ

ಯೆಹೋವನ ಸೇವೆಯನ್ನು ಮಾಡುತ್ತೀರೆಂದು ನೀವು ಆತನಿಗೆ ಮಾತು ಕೊಟ್ಟಿದ್ದೀರಾ?

14. ಸಮರ್ಪಣೆ ಅಂದರೇನು?

14 ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಮಾಡಬೇಕಾದ ಒಂದು ಪ್ರಾಮುಖ್ಯ ವಿಷಯ ಸಮರ್ಪಣೆ. ಸಮರ್ಪಣೆ ಅಂದರೆ ನೀವು ಯೆಹೋವನನ್ನು ಮಾತ್ರ ಆರಾಧಿಸುತ್ತೀರೆಂದು, ನಿಮ್ಮ ಜೀವನದಲ್ಲಿ ಆತನ ಸೇವೆಗೆ ಪ್ರಥಮ ಸ್ಥಾನ ಕೊಡುತ್ತೀರೆಂದು ಮತ್ತು ಇನ್ನು ಮುಂದೆ ಆತನಿಗಾಗಿಯೇ ಬದುಕುತ್ತೀರೆಂದು ಪ್ರಾರ್ಥನೆಯಲ್ಲಿ ಯೆಹೋವನಿಗೆ ಮಾತು ಕೊಡುವುದಾಗಿದೆ.—ಧರ್ಮೋಪದೇಶಕಾಂಡ 6:15.

15, 16. ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಯಾವುದು ಪ್ರಚೋದಿಸುತ್ತದೆ?

15 ಈ ಉದಾಹರಣೆಯನ್ನು ನೋಡಿ. ಒಬ್ಬ ಹುಡುಗ ಮತ್ತು ಹುಡುಗಿಗೆ ಪರಿಚಯವಾಗುತ್ತದೆ. ಹುಡುಗಿಯ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಹುಡುಗನಿಗೆ ಅವಳ ಮೇಲೆ ಪ್ರೀತಿ ಹುಟ್ಟುತ್ತದೆ ಮತ್ತು ಮದುವೆಯಾಗಲು ಬಯಸುತ್ತಾನೆ. ಇದೊಂದು ಗಂಭೀರವಾದ ಜವಾಬ್ದಾರಿ ಆಗಿದೆಯೆಂದು ಅವನಿಗೆ ಗೊತ್ತಿದೆ. ಆದರೂ ಹುಡುಗಿಯ ಮೇಲೆ ಅವನಿಗೆ ಪ್ರೀತಿ ಇರುವುದರಿಂದ ಮದುವೆಯಾಗುತ್ತೇನೆಂದು ಮತ್ತು ಜೀವನಪೂರ್ತಿ ಜೊತೆಗಿರುತ್ತೇನೆಂದು ಅವಳಿಗೆ ಮಾತು ಕೊಡುತ್ತಾನೆ. ನಾವು ಯೆಹೋವ ದೇವರಿಗೆ ‘ನಿನ್ನನ್ನು ಮಾತ್ರ ಆರಾಧಿಸುತ್ತೇವೆ’ ಎಂದು ಮಾತು ಕೊಡುವುದು ಸಹ ಇದೇ ರೀತಿಯಾಗಿದೆ.

16 ನೀವು ಯೆಹೋವ ದೇವರ ಗುಣಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ಆತನನ್ನು ಪ್ರೀತಿಸುತ್ತೀರಿ. ಅಷ್ಟೇ ಅಲ್ಲ, ಆತನ ಸೇವೆಗಾಗಿ ನಿಮ್ಮಿಂದಾದ ಎಲ್ಲವನ್ನೂ ಮಾಡಲು ಬಯಸುತ್ತೀರಿ. ಆ ಪ್ರೀತಿ ಮತ್ತು ಬಯಕೆಯು ನೀವು ಪ್ರಾರ್ಥನೆಯಲ್ಲಿ ನಿಮ್ಮ ಜೀವನವನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಪ್ರೇರಣೆ ಕೊಡುತ್ತದೆ. ಯೇಸುವನ್ನು ಹಿಂಬಾಲಿಸಲು ಬಯಸುವವನು ‘ತನ್ನನ್ನೇ ನಿರಾಕರಿಸಬೇಕು’ ಎಂದು ಬೈಬಲ್‌ ಹೇಳುತ್ತದೆ. (ಮಾರ್ಕ 8:34) ಇದರರ್ಥ ನಮ್ಮ ಜೀವನದಲ್ಲಿ ಬೇರೆ ಎಲ್ಲದ್ದಕ್ಕಿಂತ ಯೆಹೋವನ ಮಾತು ಕೇಳುವುದಕ್ಕೆ ಹೆಚ್ಚು ಮಹತ್ವ ಕೊಡುವುದಾಗಿದೆ. ಹಾಗಾಗಿ ನಮ್ಮ ಇಚ್ಛೆಗಳು ಮತ್ತು ಗುರಿಗಳಿಗಿಂತ ಯೆಹೋವನು ಏನು ಇಷ್ಟಪಡುತ್ತಾನೋ ಅದು ನಮಗೆ ಹೆಚ್ಚು ಮುಖ್ಯವಾಗಿರಬೇಕು.—1 ಪೇತ್ರ 4:2 ಓದಿ.

ಸಮರ್ಪಣೆ ಮಾಡಿಕೊಳ್ಳಲು ಭಯಪಡಬೇಡಿ

17. ಕೆಲವರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಯಾಕೆ ಹೆದರುತ್ತಾರೆ?

17 ಯೆಹೋವನಿಗೆ ಸಮರ್ಪಿಸಿಕೊಂಡು ಮುಂದೆ ಅದರ ಪ್ರಕಾರ ಜೀವಿಸಲಿಕ್ಕೆ ಆಗದಿದ್ದರೆ ಏನು ಮಾಡುವುದು ಎಂಬ ಭಯ ಕೆಲವರಿಗಿದೆ. ಹಾಗಾಗಿ ಸಮರ್ಪಣೆ ಮಾಡಿಕೊಳ್ಳುವುದೇ ಬೇಡ ಎಂದು ಅವರು ನಿರ್ಧರಿಸುತ್ತಾರೆ. ಯೆಹೋವ ದೇವರನ್ನು ಬೇಸರಪಡಿಸಲು ತಮಗೆ ಇಷ್ಟವಿಲ್ಲ ಎಂದು ಅವರು ಹೇಳುತ್ತಾರೆ. ಇನ್ನು ಕೆಲವರು, ಸಮರ್ಪಣೆ ಮಾಡಿಕೊಳ್ಳದೆ ಇರುವುದೇ ಒಳ್ಳೇದು, ಆಗ ನಾವು ತಪ್ಪು ಮಾಡಿದರೂ ಯೆಹೋವನಿಗೆ ಉತ್ತರ ಕೊಡಬೇಕಾಗಿಲ್ಲ ಅಂದುಕೊಳ್ಳುತ್ತಾರೆ.

18. ಯೆಹೋವನನ್ನು ಬೇಸರಪಡಿಸುತ್ತೇವೆಂಬ ಭಯಕ್ಕೆ ಮದ್ದು ಯಾವುದು?

18 ಯೆಹೋವನ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಯಾವುದೇ ರೀತಿಯ ಭಯ ನಿಮಗೆ ಇರುವುದಿಲ್ಲ. ಏಕೆಂದರೆ ಪ್ರೀತಿ ಇದ್ದರೆ ಆತನಿಗೆ ಕೊಟ್ಟಿರುವ ಮಾತಿನ ಪ್ರಕಾರ ನಡೆಯಲು ನಿಮ್ಮಿಂದ ಆಗುವ ಎಲ್ಲವನ್ನು ನೀವು ಮಾಡುತ್ತೀರಿ. (ಪ್ರಸಂಗಿ 5:4; ಕೊಲೊಸ್ಸೆ 1:10) ಅಷ್ಟೇ ಅಲ್ಲ, ಯೆಹೋವನು ಇಷ್ಟಪಡುವಂಥ ರೀತಿಯಲ್ಲಿ ಜೀವಿಸುವುದು ತುಂಬ ಕಷ್ಟವೆಂದು ಸಹ ನಿಮಗೆ ಅನಿಸುವುದಿಲ್ಲ. ಹಾಗಾಗಿಯೇ ಅಪೊಸ್ತಲ ಯೋಹಾನನು ಹೀಗೆ ಬರೆದಿದ್ದಾನೆ: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾನ 5:3.

19. ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಹೆದರಬಾರದು ಯಾಕೆ?

19 ನೀವು ಸಮರ್ಪಿಸಿಕೊಂಡ ನಂತರ ಅಪ್ಪಿತಪ್ಪಿಯೂ ತಪ್ಪು ಮಾಡಬಾರದು ಎಂದು ಯೆಹೋವನು ಹೇಳುವುದಿಲ್ಲ. ನಿಮ್ಮಿಂದ ಆಗದ್ದನ್ನು ಮಾಡುವಂತೆಯೂ ಆತನು ಕೇಳಿಕೊಳ್ಳುವುದಿಲ್ಲ. (ಕೀರ್ತನೆ 103:14) ಬದಲಿಗೆ, ಸರಿಯಾದದ್ದನ್ನು ಮಾಡಲು ಆತನೇ ನಿಮಗೆ ಸಹಾಯ ಮಾಡುತ್ತಾನೆ. (ಯೆಶಾಯ 41:10) ಹಾಗಾಗಿ ಯೆಹೋವನಲ್ಲಿ ಸಂಪೂರ್ಣ ಭರವಸೆಯಿಡಿ. ಆತನು ನಿಮ್ಮ “ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:5, 6.

ಸಮರ್ಪಣೆಯನ್ನು ಬಹಿರಂಗವಾಗಿ ಪ್ರಕಟಿಸಿ

20. ಸಮರ್ಪಣೆ ಮಾಡಿಕೊಂಡ ನಂತರ ನೀವು ತೆಗೆದುಕೊಳ್ಳುವ ಮುಂದಿನ ಹೆಜ್ಜೆ ಯಾವುದು?

20 ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಲು ನೀವು ತಯಾರಾಗಿದ್ದೀರೆಂದು ನಿಮಗೆ ಅನಿಸುತ್ತದಾ? ಹಾಗಿದ್ದರೆ ಸಮರ್ಪಣೆ ಮಾಡಿಕೊಳ್ಳಲು ಹಿಂಜರಿಯಬೇಡಿ. ಸಮರ್ಪಣೆ ಮಾಡಿಕೊಂಡ ನಂತರ ನೀವು ತೆಗೆದುಕೊಳ್ಳುವ ಮುಂದಿನ ಹೆಜ್ಜೆ ದೀಕ್ಷಾಸ್ನಾನ.

21, 22. ನೀವು ಮಾಡಿರುವ ಸಮರ್ಪಣೆಯನ್ನು ‘ಬಹಿರಂಗವಾಗಿ ಪ್ರಕಟಿಸುವುದು’ ಹೇಗೆ?

21 ನೀವು ಸಮರ್ಪಣೆ ಮಾಡಿಕೊಂಡಿದ್ದೀರೆಂದು ಮತ್ತು ದೀಕ್ಷಾಸ್ನಾನವಾಗಲು ಬಯಸುತ್ತೀರೆಂದು ನಿಮ್ಮ ಸಭೆಯಲ್ಲಿರುವ ಹಿರಿಯರ ಮಂಡಲಿಯ ಸಂಯೋಜಕನಿಗೆ ಹೇಳಿ. ಆಗ ಆತನು, ಕೆಲವು ಹಿರಿಯರು ನಿಮ್ಮೊಂದಿಗೆ ಮಾತಾಡುವ ಏರ್ಪಾಡನ್ನು ಮಾಡುತ್ತಾನೆ. ಆ ಹಿರಿಯರು ಬೈಬಲಿನ ಮುಖ್ಯ ಬೋಧನೆಗಳ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ನಿಮಗೆ ಕೇಳುತ್ತಾರೆ. ದೀಕ್ಷಾಸ್ನಾನ ಪಡೆಯಲು ನೀವು ಅರ್ಹರಾಗಿದ್ದೀರೆಂದು ಅವರಿಗೆ ಅನಿಸಿದರೆ ಮುಂದಿನ ಅಧಿವೇಶನ ಅಥವಾ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆಯಬಹುದೆಂದು ಹೇಳುತ್ತಾರೆ. ಅಧಿವೇಶನದಲ್ಲಾಗಲಿ ಸಮ್ಮೇಳನದಲ್ಲಾಗಲಿ ದೀಕ್ಷಾಸ್ನಾನ ಪಡೆಯುವವರಿಗಾಗಿ ಒಂದು ಭಾಷಣ ಇರುತ್ತದೆ. ಅದರಲ್ಲಿ ದೀಕ್ಷಾಸ್ನಾನದ ಅರ್ಥವೇನೆಂದು ವಿವರಿಸುತ್ತಾರೆ. ನಂತರ ಭಾಷಣಗಾರನು ನಿಮಗೆ ಎರಡು ಸರಳ ಪ್ರಶ್ನೆಗಳನ್ನು ಕೇಳುತ್ತಾನೆ. ಅವುಗಳಿಗೆ ಉತ್ತರ ಕೊಡುವ ಮೂಲಕ ನೀವು ನಿಮ್ಮ ನಂಬಿಕೆಯನ್ನು ‘ಬಹಿರಂಗವಾಗಿ ಪ್ರಕಟಿಸುತ್ತೀರಿ.’—ರೋಮನ್ನರಿಗೆ 10:10.

22 ಅದರ ನಂತರ ನಿಮಗೆ ದೀಕ್ಷಾಸ್ನಾನ ಕೊಡಲಾಗುತ್ತದೆ. ಅಂದರೆ, ನಿಮ್ಮನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ಮೇಲೆತ್ತಲಾಗುತ್ತದೆ. ನೀವು ನಿಮ್ಮ ಜೀವನವನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡಿದ್ದೀರಿ ಮತ್ತು ಯೆಹೋವನ ಸಾಕ್ಷಿಯಾಗಿದ್ದೀರಿ ಎನ್ನುವುದು ಆಗ ಎಲ್ಲರಿಗೆ ಗೊತ್ತಾಗುತ್ತದೆ.

ದೀಕ್ಷಾಸ್ನಾನದ ಅರ್ಥವೇನು?

23. “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಪಡೆದುಕೊಳ್ಳುವುದರ ಅರ್ಥವೇನು?

23 “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 28:19 ಓದಿ.) ಇದರ ಅರ್ಥ ಏನಾಗಿತ್ತು? ದೀಕ್ಷಾಸ್ನಾನ ಪಡೆಯಲಿರುವ ವ್ಯಕ್ತಿ ಯೆಹೋವ ದೇವರಿಗಿರುವ ಅಧಿಕಾರವನ್ನು ಒಪ್ಪಿಕೊಳ್ಳಬೇಕು, ಯೆಹೋವನ ಇಷ್ಟವನ್ನು ನೆರವೇರಿಸುವುದರಲ್ಲಿ ಯೇಸುವಿಗಿರುವ ಪಾತ್ರವನ್ನು ಒಪ್ಪಿಕೊಳ್ಳಬೇಕು ಮತ್ತು ಯೆಹೋವನು ತನ್ನ ಇಷ್ಟವನ್ನು ನೆರವೇರಿಸಲು ಪವಿತ್ರಾತ್ಮವನ್ನು ಉಪಯೋಗಿಸುವ ವಿಧಗಳನ್ನು ಒಪ್ಪಿಕೊಳ್ಳಬೇಕು ಎಂದಾಗಿತ್ತು.—ಕೀರ್ತನೆ 83:18; ಮತ್ತಾಯ 28:18; ಗಲಾತ್ಯ 5:22, 23; 2 ಪೇತ್ರ 1:21.

ಬೈಬಲ್‌ ವಿದ್ಯಾರ್ಥಿಯು ತಾನು ದೇವರಿಗೆ ಸಮರ್ಪಣೆ ಮಾಡಿಕೊಂಡಿದ್ದೇನೆಂದು ದೀಕ್ಷಾಸ್ನಾನ ಪಡೆಯುವ ಮೂಲಕ ತೋರಿಸಿಕೊಡುತ್ತಿದ್ದಾನೆ

ನೀವು ಯೆಹೋವನ ಇಷ್ಟದಂತೆ ಜೀವಿಸಲು ಬಯಸುತ್ತೀರೆಂದು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ತೋರಿಸಿಕೊಡುತ್ತೀರಿ

24, 25. (ಎ) ದೀಕ್ಷಾಸ್ನಾನದ ಅರ್ಥವೇನು? (ಬಿ) ಕೊನೆಯ ಅಧ್ಯಾಯದಲ್ಲಿ ನಾವೇನು ಕಲಿಯುತ್ತೇವೆ?

24 ದೀಕ್ಷಾಸ್ನಾನಕ್ಕೆ ತುಂಬ ಪ್ರಾಮುಖ್ಯವಾದ ಅರ್ಥ ಇದೆ. ನಿಮ್ಮನ್ನು ನೀರಿನಲ್ಲಿ ಮುಳುಗಿಸಿದಾಗ, ನೀವು ನಿಮ್ಮ ಹಿಂದಿನ ಜೀವನಕ್ಕೆ ಸತ್ತಿದ್ದೀರೆಂದು ಅಂದರೆ ಆ ಜೀವನವನ್ನು ಬಿಟ್ಟುಬಿಟ್ಟಿದ್ದೀರೆಂದು ಅರ್ಥ. ನೀವು ನೀರಿನಿಂದ ಮೇಲಕ್ಕೆ ಬಂದಾಗ ಒಂದು ಹೊಸ ಜೀವನವನ್ನು ಅಂದರೆ ಯೆಹೋವನು ಇಷ್ಟಪಡುವಂಥ ಜೀವನವನ್ನು ಶುರುಮಾಡಿದ್ದೀರೆಂದು ಅರ್ಥ. ನೀವು ಯೆಹೋವನ ಸೇವೆಯನ್ನು ಮಾಡುತ್ತೀರೆಂದು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ತೋರಿಸಿಕೊಡುತ್ತೀರಿ. ನೀವು ನಿಮ್ಮನ್ನು ಸಮರ್ಪಿಸಿಕೊಂಡಿರುವುದು ಒಬ್ಬ ಮನುಷ್ಯನಿಗಾಗಲಿ, ಒಂದು ಸಂಸ್ಥೆ ಅಥವಾ ಕೆಲಸಕ್ಕಾಗಲಿ ಅಲ್ಲ, ಬದಲಿಗೆ ನಿಮ್ಮ ಸೃಷ್ಟಿಕರ್ತನಾದ ಯೆಹೋವನಿಗೆ ಎನ್ನುವುದನ್ನು ಯಾವತ್ತೂ ಮರೆಯಬೇಡಿ.

25 ನೀವು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡರೆ ಆತನೊಂದಿಗಿನ ನಿಮ್ಮ ಸ್ನೇಹ ಇನ್ನೂ ಆಪ್ತವಾಗುತ್ತದೆ. (ಕೀರ್ತನೆ 25:14) ಆದರೆ ದೀಕ್ಷಾಸ್ನಾನ ಪಡೆದುಕೊಂಡ ಮಾತ್ರಕ್ಕೆ ನಮಗೆ ರಕ್ಷಣೆ ಸಿಗುತ್ತದೆ ಎಂದಲ್ಲ. ಅಪೊಸ್ತಲ ಪೌಲನು ಹೇಳಿರುವಂತೆ, ‘ನಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಬೇಕು.’ (ಫಿಲಿಪ್ಪಿ 2:12) ಅಂದರೆ ರಕ್ಷಣೆ ಪಡೆಯಲಿಕ್ಕಾಗಿ ನಾವು ತುಂಬ ಶ್ರಮ ಹಾಕಬೇಕು. ದೀಕ್ಷಾಸ್ನಾನ ಕೇವಲ ಆರಂಭವಾಗಿದೆ ಅಷ್ಟೆ. ಹಾಗಾದರೆ ಯೆಹೋವನ ಆಪ್ತ ಸ್ನೇಹಿತರಾಗಿಯೇ ಉಳಿದು ರಕ್ಷಣೆ ಪಡೆಯಲು ನಾವು ಇನ್ನೇನು ಮಾಡಬೇಕು? ಅದನ್ನು ಮುಂದಿನ ಅಂದರೆ ಕೊನೆಯ ಅಧ್ಯಾಯದಲ್ಲಿ ನೋಡೋಣ.

ನಾನೇನು ಕಲಿತೆ?

1: ನಾನು ದೀಕ್ಷಾಸ್ನಾನ ಪಡೆದುಕೊಳ್ಳಬೇಕಾ?

“ಅಲ್ಲಿ ನೋಡು, ಜಲರಾಶಿ! ದೀಕ್ಷಾಸ್ನಾನ ಪಡೆದುಕೊಳ್ಳಲು ನನಗೆ ಅಡ್ಡಿ ಏನು?”—ಅಪೊಸ್ತಲರ ಕಾರ್ಯಗಳು 8:36

ದೀಕ್ಷಾಸ್ನಾನ ಯಾಕೆ ಪಡೆದುಕೊಳ್ಳಬೇಕು? ಅದನ್ನು ಹೇಗೆ ಕೊಡಲಾಗುತ್ತದೆ?

ಹಿಂದಿನ ಜೀವನವನ್ನು ಬಿಟ್ಟು, ಯೆಹೋವನ ಇಷ್ಟದಂತೆ ನಡೆಯುವ ಹೊಸ ಜೀವನವನ್ನು ಶುರು ಮಾಡಿದ್ದೀರೆಂದು ದೀಕ್ಷಾಸ್ನಾನದಿಂದ ಗೊತ್ತಾಗುತ್ತದೆ.

  • ಮತ್ತಾಯ 28:19, 20

    ಯೆಹೋವನ ಸೇವೆ ಮಾಡಬೇಕಾದರೆ ನೀವು ದೀಕ್ಷಾಸ್ನಾನ ಪಡೆಯಬೇಕು.

  • ಕೀರ್ತನೆ 40:8

    ನಿಮಗೆ ದೇವರ ಸೇವೆಮಾಡಲು ಇಷ್ಟವಿದೆಯೆಂದು ನೀವು ದೀಕ್ಷಾಸ್ನಾನ ಪಡೆದುಕೊಂಡಾಗ ಬೇರೆಯವರಿಗೆ ಗೊತ್ತಾಗುತ್ತದೆ.

  • ಮತ್ತಾಯ 3:16

    ದೀಕ್ಷಾಸ್ನಾನ ಪಡೆದುಕೊಳ್ಳುವಾಗ ಯೇಸುವಿನಂತೆಯೇ ನಿಮ್ಮನ್ನು ಸಹ ನೀರಿನಲ್ಲಿ ಪೂರ್ಣವಾಗಿ ಮುಳುಗಿಸುತ್ತಾರೆ.

2: ನಿಮ್ಮಿಂದ ಆಗದ್ದನ್ನು ದೇವರು ಕೇಳುವುದಿಲ್ಲ

“ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾನ 5:3

ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಲು ಯಾಕೆ ಹೆದರಬಾರದು?

  • ಕೀರ್ತನೆ 103:14; ಯೆಶಾಯ 41:10

    ಸಮರ್ಪಣೆಯ ನಂತರ ಅಪ್ಪಿತಪ್ಪಿಯೂ ತಪ್ಪು ಮಾಡಬಾರದೆಂದು ದೇವರು ಹೇಳಲ್ಲ. ಸರಿಯಾದದ್ದನ್ನು ಮಾಡಲು ಆತನೇ ನೆರವಾಗುತ್ತಾನೆ.

  • ಕೊಲೊಸ್ಸೆ 1:10

    ಕೊಟ್ಟ ಮಾತಿನಂತೆ ನಡೆಯದೆ ಎಲ್ಲಿ ಯೆಹೋವನನ್ನು ಬೇಸರಪಡಿಸುತ್ತೇವೋ ಎಂಬ ಭಯಕ್ಕೆ ಆತನ ಮೇಲೆ ನಿಮಗಿರುವ ಪ್ರೀತಿಯೇ ಮದ್ದು.

3: ದೀಕ್ಷಾಸ್ನಾನಕ್ಕೆ ಮುಂಚೆ ಏನೆಲ್ಲ ಮಾಡಬೇಕು?

“ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”—ಕೀರ್ತನೆ 40:8

ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಬೇಕಾದರೆ ನೀವೇನು ಮಾಡಬೇಕು?

  • ಯೋಹಾನ 17:3

    ಬೈಬಲನ್ನು ಕಲಿಯಿರಿ ಯೆಹೋವನ ಬಗ್ಗೆ ಮತ್ತು ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಂತೆ ಅವರ ಮೇಲಿನ ಪ್ರೀತಿ ಹೆಚ್ಚೆಚ್ಚಾಗುತ್ತದೆ.

  • ಇಬ್ರಿಯ 11:6

    ನಂಬಿಕೆಯನ್ನು ಬೆಳೆಸಿಕೊಳ್ಳಿ ತಾನು ಮಾತುಕೊಟ್ಟಂತೆ ಯೆಹೋವನು ನಡೆಯುತ್ತಾನೆಂದು ಮತ್ತು ಯೇಸು ತನ್ನ ಜೀವ ಕೊಟ್ಟಿದ್ದರಿಂದ ನಮಗೆ ಪಾಪ, ಮರಣದಿಂದ ಬಿಡುಗಡೆ ಸಿಗುತ್ತದೆಂದು ಪೂರ್ಣ ನಂಬಿಕೆಯಿಡಿ.

  • ಅಪೊಸ್ತಲರ ಕಾರ್ಯಗಳು 3:19

    ಪಶ್ಚಾತ್ತಾಪಪಡಿ ಇದರರ್ಥ, ನೀವು ಮಾಡಿರುವ ಎಲ್ಲ ತಪ್ಪುಗಳ ಬಗ್ಗೆ ಯೋಚಿಸಿ ದುಃಖಪಡುವುದು.

    ತಿರುಗಿಕೊಳ್ಳಿ ಇದರರ್ಥ, ತಪ್ಪಾದ ನಡತೆಯನ್ನು ಬಿಟ್ಟು ಸರಿಯಾದದ್ದನ್ನು ಮಾಡುವುದು.

  • 1 ಪೇತ್ರ 4:2

    ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿ ನೀವು ಯೆಹೋವನನ್ನೇ ಆರಾಧಿಸುತ್ತೀರೆಂದು ಮತ್ತು ಆತನ ಇಷ್ಟದಂತೆ ನಡೆಯುವುದಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡುತ್ತೀರೆಂದು ಪ್ರಾರ್ಥನೆಯಲ್ಲಿ ಆತನಿಗೆ ಮಾತು ಕೊಡುವುದೇ ಸಮರ್ಪಣೆಯಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ