ಪಾಠ 14
ಒಬ್ಬ ಆಳು ದೇವರಿಗೆ ವಿಧೇಯನಾದ
ಯೋಸೇಫ ಯಾಕೋಬನ ಹನ್ನೊಂದನೇ ಮಗನಾಗಿದ್ದನು. ಅವನು ಯಾಕೋಬನ ಅಚ್ಚುಮೆಚ್ಚಿನ ಮಗ. ಇದರಿಂದ ಉಳಿದ ಹತ್ತು ಅಣ್ಣಂದಿರಿಗೆ ಹೇಗನಿಸಿತು? ಅವರಿಗೆ ಯೋಸೇಫನ ಮೇಲೆ ಹೊಟ್ಟೆಕಿಚ್ಚಾಯಿತು. ಅವರು ಅವನನ್ನು ದ್ವೇಷಿಸಲು ಶುರುಮಾಡಿದರು. ಒಂದಿನ ಯೋಸೇಫನಿಗೆ ಕೆಲವು ವಿಚಿತ್ರವಾದ ಕನಸುಗಳು ಬಿದ್ದವು. ಆ ಕನಸನ್ನು ಅವನು ಅಣ್ಣಂದಿರಿಗೆ ಹೇಳಿದ. ಅದನ್ನು ಅವರು ತಪ್ಪಾಗಿ ಅರ್ಥಮಾಡಿಕೊಂಡರು. ಅಂದರೆ ಅವರೆಲ್ಲರೂ ಒಂದಿನ ಯೋಸೇಫನ ಕಾಲಿಗೆ ಅಡ್ಡಬೀಳುತ್ತಾರೆ ಅಂತ ಅಂದುಕೊಂಡರು. ಇದರಿಂದ ಅವರು ಯೋಸೇಫನನ್ನು ಇನ್ನಷ್ಟು ಹೆಚ್ಚು ದ್ವೇಷಿಸಿದರು!
ಒಂದಿನ ಯೋಸೇಫನ ಅಣ್ಣಂದಿರು ಶೆಕೆಮ್ ಎಂಬ ಊರಿಗೆ ಕುರಿಮೇಯಿಸಲು ಹೋಗಿದ್ದರು. ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ಯಾಕೋಬ ಯೋಸೇಫನನ್ನು ಕಳುಹಿಸಿದ. ದೂರದಲ್ಲಿ ಬರುತ್ತಿದ್ದ ಯೋಸೇಫನನ್ನು ನೋಡಿ ಅವನ ಅಣ್ಣಂದಿರು ‘ಅಲ್ಲಿ ನೋಡು, ಕನಸುಗಾರ ಬರ್ತಿದ್ದಾನೆ. ಬನ್ನಿ, ಅವನನ್ನ ಸಾಯಿಸೋಣ!’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ನಂತರ ಅವರು ಅವನನ್ನು ಎಳೆದುಕೊಂಡು ಬಂದು ಆಳವಾದ ಗುಂಡಿಗೆ ಹಾಕಿದರು. ಆದರೆ ಅಣ್ಣಂದಿರಲ್ಲಿ ಒಬ್ಬನಾದ ಯೆಹೂದನು ‘ಅವನನ್ನು ಸಾಯಿಸಬೇಡಿ! ಅದರ ಬದಲು ಅವನನ್ನು ದಾಸನಾಗಿ ಮಾರೋಣ’ ಎಂದನು. ಅವರು ಯೋಸೇಫನನ್ನು ಈಜಿಪ್ಟಿಗೆ ಹೋಗುತ್ತಿದ್ದ ಮಿದ್ಯಾನಿನ ವ್ಯಾಪಾರಿಗಳಿಗೆ ಮಾರಿ ಅವರಿಂದ 20 ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡರು.
ನಂತರ ಯೋಸೇಫನ ಅಣ್ಣಂದಿರು ಅವನ ಬಟ್ಟೆಯನ್ನು ಆಡಿನ ರಕ್ತದಲ್ಲಿ ಅದ್ದಿ ತಮ್ಮ ತಂದೆಗೆ ಕಳುಹಿಸಿದರು. ಅದನ್ನು ತಂದವರು ‘ಇದು ನಿನ್ನ ಮಗನ ಅಂಗಿ ಅಲ್ವಾ?’ ಅಂದರು. ಅದನ್ನು ನೋಡಿ ಕಾಡು ಪ್ರಾಣಿಯೊಂದು ಯೋಸೇಫನನ್ನು ಕೊಂದಿರಬೇಕು ಎಂದು ಯಾಕೋಬ ಅಂದುಕೊಂಡನು. ಅವನ ಎದೆ ಒಡೆದುಹೋಯಿತು. ಯಾರು ಏನೇ ಹೇಳಿದರೂ ಅವನಿಗೆ ಸಮಾಧಾನವಾಗಲಿಲ್ಲ.
ಈಜಿಪ್ಟಿನಲ್ಲಿ ಯೋಸೇಫನನ್ನು ಒಬ್ಬ ಉನ್ನತ ಅಧಿಕಾರಿಯಾದ ಪೋಟೀಫರನಿಗೆ ದಾಸನಾಗಿ ಮಾರಲಾಯಿತು. ಆದರೆ ಯೆಹೋವನು ಯೋಸೇಫನ ಜೊತೆ ಇದ್ದನು. ಯೋಸೇಫ ಕಷ್ಟಪಟ್ಟು ಕೆಲಸಮಾಡುವುದನ್ನು ಹಾಗೂ ಅವನ ನಂಬಿಗಸ್ತಿಕೆಯನ್ನು ಪೋಟೀಫರ ಗಮನಿಸಿದ. ಆದ್ದರಿಂದ ಯೋಸೇಫನಿಗೆ ತನ್ನ ಇಡೀ ಮನೆಯ ಜವಾಬ್ದಾರಿಯನ್ನು ವಹಿಸಿದ.
ಯೋಸೇಫನ ಸೌಂದರ್ಯ ಹಾಗೂ ಮೈಕಟ್ಟನ್ನು ಗಮನಿಸಿದ ಪೋಟೀಫರನ ಹೆಂಡತಿ ತನ್ನ ಜೊತೆ ಮಲಗುವಂತೆ ಅವನನ್ನು ಯಾವಾಗಲೂ ಪೀಡಿಸುತ್ತಿದ್ದಳು. ಯೋಸೇಫ ಏನು ಮಾಡಿದ? ಯೋಸೇಫ ಅದನ್ನು ನಿರಾಕರಿಸಿ ‘ಇಲ್ಲ! ಅದು ಮಹಾಪಾಪ! ಧಣಿ ನನ್ನ ನಂಬಿ ಎಲ್ಲವನ್ನ ನನ್ನ ಕೈಗೆ ಕೊಟ್ಟಿದ್ದಾನೆ. ಆದ್ರೆ ನೀನು ಅವನ ಹೆಂಡತಿ. ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ!’ ಎಂದನು.
ಒಂದಿನ ಪೋಟೀಫರನ ಹೆಂಡತಿ ಅವಳೊಂದಿಗೆ ಮಲಗಲು ಯೋಸೇಫನನ್ನು ತುಂಬ ಒತ್ತಾಯ ಮಾಡಿದಳು. ಅವಳು ಯೋಸೇಫನ ಬಟ್ಟೆಯನ್ನು ಹಿಡಿದು ಎಳೆದಾಗ ಅವನು ಅಲ್ಲಿಂದ ಓಡಿಹೋದ. ಪೋಟೀಫರ ಮನೆಗೆ ಬಂದಾಗ ಅವಳು ‘ಯೋಸೇಫ ನನ್ನನ್ನ ಕೆಡಿಸೋಕೆ ಬಂದ’ ಅಂದಳು. ಅವಳು ಸುಳ್ಳು ಹೇಳಿದಳು. ಇದನ್ನು ಕೇಳಿದಾಗ ಪೋಟೀಫರ ಕೋಪಗೊಂಡು ಯೋಸೇಫನನ್ನು ಜೈಲಿಗೆ ಹಾಕಿಸಿದ. ಆದರೆ ಯೆಹೋವನು ಯೋಸೇಫನನ್ನು ಮರೆಯಲಿಲ್ಲ.
“ಹಾಗಾಗಿ ತುಂಬ ಶಕ್ತಿ ಇರೋ ದೇವರ ಕೈಕೆಳಗೆ ನಿಮ್ಮನ್ನ ತಗ್ಗಿಸ್ಕೊಳ್ಳಿ. ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನ ಮೇಲೆ ಎತ್ತುತ್ತಾನೆ.”—1 ಪೇತ್ರ 5:6