ಪಾಠ 15
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
ಯೋಸೇಫನು ಜೈಲಿನಲ್ಲಿದ್ದಾಗ ಈಜಿಪ್ಟಿನ ರಾಜನಾದ ಫರೋಹನಿಗೆ ಎರಡು ಕನಸು ಬಿತ್ತು. ಅದರ ಅರ್ಥ ಏನು ಅಂತ ಯಾರಿಗೂ ಗೊತ್ತಾಗಲಿಲ್ಲ. ಆಗ ಫರೋಹನ ಸೇವಕನೊಬ್ಬ ‘ಇದರ ಅರ್ಥವನ್ನು ಯೋಸೇಫ ಬಿಡಿಸಿ ಹೇಳುತ್ತಾನೆ’ ಎಂದ. ತಕ್ಷಣ ಫರೋಹ ಯೋಸೇಫನನ್ನು ಕರೆಸಿದ.
‘ನನ್ನ ಕನಸಿನ ಅರ್ಥವನ್ನು ಹೇಳಬಲ್ಲೆಯಾ?’ ಎಂದು ಫರೋಹ ಕೇಳಿದ. ಆಗ ಯೋಸೇಫ, ‘ಈಜಿಪ್ಟಿನಲ್ಲಿ ಮುಂದಿನ ಏಳು ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತೆ. ಆದರೆ ಅದರ ನಂತರದ ಏಳು ವರ್ಷ ಭೀಕರ ಬರಗಾಲ ಬರುತ್ತೆ. ಹಾಗಾಗಿ ಒಬ್ಬ ಬುದ್ಧಿವಂತನನ್ನು ಆರಿಸಿ ಆಹಾರವನ್ನು ಕೂಡಿಸಿಟ್ಟರೆ ಬರಗಾಲದಲ್ಲಿ ಜನರು ಹೊಟ್ಟೆಗಿಲ್ಲದೇ ಸಾಯುವಂಥ ಪರಿಸ್ಥಿತಿ ಬರುವುದಿಲ್ಲ’ ಎಂದು ಹೇಳಿದ. ಇದನ್ನು ಕೇಳಿದ ಫರೋಹ ‘ನಾನು ನಿನ್ನನ್ನೇ ಆರಿಸಿದ್ದೇನೆ! ಈಜಿಪ್ಟಿನ ಉನ್ನತ ಅಧಿಕಾರಿಗಳಲ್ಲಿ ನೀನೇ ಎರಡನೆಯವನಾಗುವಿ!’ ಎಂದು ಹೇಳಿದ. ಯೋಸೇಫನಿಗೆ ಫರೋಹನ ಕನಸಿನ ಅರ್ಥ ಹೇಗೆ ಗೊತ್ತಾಯಿತು? ಯೋಸೇಫನಿಗೆ ಯೆಹೋವನು ಸಹಾಯ ಮಾಡಿದನು.
ಮುಂದಿನ ಏಳು ವರ್ಷಗಳಲ್ಲಿ ಯೋಸೇಫ ದವಸಧಾನ್ಯಗಳನ್ನು ಕೂಡಿಸಿಟ್ಟ. ಆಮೇಲೆ ಯೋಸೇಫ ಹೇಳಿದಂತೆ ಭೂಮಿಯ ಎಲ್ಲಾ ಕಡೆ ಬರಗಾಲ ಬಂದೇ ಬಿಟ್ಟಿತು. ಎಲ್ಲಾ ಕಡೆಯಿಂದ ಜನರು ಧಾನ್ಯಗಳನ್ನು ಕೊಂಡುಕೊಳ್ಳಲು ಯೋಸೇಫನ ಹತ್ತಿರ ಹೋಗುತ್ತಿದ್ದರು. ಈಜಿಪ್ಟಿನಲ್ಲಿ ಆಹಾರ ಸಿಗುತ್ತೆ ಎಂದು ಯೋಸೇಫನ ಅಪ್ಪ ಯಾಕೋಬನಿಗೆ ಗೊತ್ತಾದಾಗ ತನ್ನ ಹತ್ತು ಮಕ್ಕಳನ್ನು ಅಲ್ಲಿಗೆ ಕಳುಹಿಸಿದ.
ಯಾಕೋಬನ ಮಕ್ಕಳು ಯೋಸೇಫನ ಹತ್ತಿರ ಹೋದರು. ಅವರನ್ನು ನೋಡಿದ ತಕ್ಷಣ ಯೋಸೇಫ ಅವರ ಗುರುತು ಹಿಡಿದ. ಆದರೆ ಅಣ್ಣಂದಿರಿಗೆ ಅವನು ಯೋಸೇಫ ಎಂದು ಗೊತ್ತಾಗಲಿಲ್ಲ. ಅವರೆಲ್ಲರು ಯೋಸೇಫನಿಗೆ ಅಡ್ಡಬೀಳುತ್ತಾರೆ. ಆಗ ಯೋಸೇಫನಿಗೆ ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು ನೆನಪಿಗೆ ಬರುತ್ತೆ. ಆದರೆ ತನ್ನ ಅಣ್ಣಂದಿರು ಬದಲಾಗಿದ್ದಾರಾ ಎಂದು ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಅವನು ‘ನಮ್ಮ ದೇಶದ ರಹಸ್ಯಗಳನ್ನು ತಿಳಿದುಕೊಳ್ಳಲು ಬಂದಿರುವ ಗೂಢಾಚಾರರು ನೀವು’ ಎಂದು ಹೇಳುತ್ತಾನೆ. ಅದಕ್ಕೆ ಅವರು ‘ಇಲ್ಲ ಇಲ್ಲ! ನಾವು ಕಾನಾನ್ ದೇಶದಿಂದ ಬಂದಿದ್ದೇವೆ. ನಾವು 12 ಜನ ಅಣ್ಣತಮ್ಮಂದಿರು. ಅದರಲ್ಲಿ ಒಬ್ಬ ಸತ್ತು ಹೋದ. ಕೊನೆಯವನು ತಂದೆ ಜೊತೆ ಮನೆಯಲ್ಲಿದ್ದಾನೆ’ ಎಂದರು. ಆಗ ಯೋಸೇಫ ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ. ಆಗ ನಾನು ನಿಮ್ಮನ್ನು ನಂಬುತ್ತೇನೆ’ ಅಂದನು. ಅವರೆಲ್ಲರು ತಮ್ಮ ತಂದೆಯ ಬಳಿಗೆ ಹೋದರು.
ದವಸಧಾನ್ಯ ಖಾಲಿ ಆದಾಗ ಯಾಕೋಬ ತನ್ನ ಮಕ್ಕಳನ್ನು ಮತ್ತೆ ಈಜಿಪ್ಟಿಗೆ ಕಳುಹಿಸಿದ. ಈ ಬಾರಿ ಅವರು, ಕೊನೆಯ ತಮ್ಮ ಬೆನ್ಯಾಮೀನನನ್ನು ಕರೆದುಕೊಂಡು ಹೋದರು. ಯೋಸೇಫ ತನ್ನ ಅಣ್ಣಂದಿರನ್ನು ಪರೀಕ್ಷಿಸಲು ತನ್ನ ಬೆಳ್ಳಿ ಲೋಟವನ್ನು ತಾನೇ ಬೆನ್ಯಾಮೀನನ ಚೀಲದಲ್ಲಿ ಹಾಕಿ ಅವರ ಮೇಲೆ ಕಳ್ಳತನದ ಆರೋಪ ಹಾಕಿದನು. ಯೋಸೇಫನ ಸೇವಕರಿಗೆ ಆ ಲೋಟ ಬೆನ್ಯಾಮೀನನ ಚೀಲದಲ್ಲಿ ಸಿಗುತ್ತದೆ. ಆಗ ಅಣ್ಣಂದಿರಿಗೆ ಭಯದಿಂದ ದಿಕ್ಕೇ ತೋಚಲಿಲ್ಲ. ಅವರು ಯೋಸೇಫನ ಹತ್ತಿರ ಹೋಗಿ ‘ನಮಗೆ ಬೇಕಾದರೆ ಶಿಕ್ಷೆ ಕೊಡಿ. ಆದರೆ ದಯವಿಟ್ಟು ನಮ್ಮ ತಮ್ಮನನ್ನು ಬಿಟ್ಟುಬಿಡಿ’ ಎಂದು ಬೇಡಿಕೊಂಡರು.
ಆಗ ತನ್ನ ಅಣ್ಣಂದಿರು ಬದಲಾಗಿದ್ದಾರೆ ಎಂದು ಯೋಸೇಫನಿಗೆ ಗೊತ್ತಾಯಿತು. ಅವನಿಗೆ ದುಃಖ ತಡೆದುಕೊಳ್ಳಲು ಆಗದೇ ಜೋರಾಗಿ ಅಳಲು ಶುರುಮಾಡಿದನು. ಆಮೇಲೆ ‘ನಾನೇ ನಿಮ್ಮ ತಮ್ಮ ಯೋಸೇಫ. ತಂದೆ ಇನ್ನೂ ಇದ್ದಾರಾ?’ ಅಂತ ಕೇಳಿದ. ಈ ಮಾತನ್ನು ಕೇಳಿದಾಗ ಅವನ ಅಣ್ಣಂದಿರಿಗೆ ಆಶ್ಚರ್ಯವೋ ಆಶ್ಚರ್ಯ! ನಂತರ ಯೋಸೇಫ ‘ನೀವು ನನ್ನನ್ನ ಮಾರಿದ್ದಕ್ಕೆ ಬೇಜಾರು ಮಾಡ್ಕೊಬೇಡಿ. ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ಇಲ್ಲಿಗೆ ಕಳಿಸಿದ್ದಾನೆ. ಬೇಗ ಹೋಗಿ ತಂದೆಯನ್ನ ಕರ್ಕೊಂಡು ಬನ್ನಿ’ ಎಂದನು.
ಈ ಸಂತೋಷದ ಸುದ್ದಿಯನ್ನು ಅವರು ಬೇಗ ಹೋಗಿ ತಮ್ಮ ತಂದೆಗೆ ತಿಳಿಸಿ ಅವನನ್ನು ಈಜಿಪ್ಟಿಗೆ ಕರೆದುಕೊಂಡು ಬಂದರು. ವರ್ಷಾನುಗಟ್ಟಲೆ ದೂರವಿದ್ದ ತಂದೆ-ಮಗ ಕೊನೆಗೂ ಒಂದಾದರು.
“ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ.”—ಮತ್ತಾಯ 6:15