ಪಾಠ 28
ಬಿಳಾಮನ ಕತ್ತೆ ಮಾತಾಡಿತು
ಇಸ್ರಾಯೇಲ್ಯರು ಕಾಡಿನ ಪ್ರದೇಶದಲ್ಲಿದ್ದು ಸುಮಾರು 40 ವರುಷಗಳಾಗಿವೆ. ಅವರು ಅನೇಕ ಬಲವಾದ ಪಟ್ಟಣಗಳನ್ನು ಜಯಿಸಿದ್ದರು. ಈಗ ಅವರಿಗೆ ಮಾತು ಕೊಟ್ಟ ದೇಶವನ್ನ ಪ್ರವೇಶಿಸುವ ಸಮಯ ಬಂದಿತ್ತು. ಆದ್ದರಿಂದ ಯೊರ್ದನ್ ನದಿಯ ಪೂರ್ವದಲ್ಲಿರುವ ಮೋವಾಬಿನ ಬಯಲು ಪ್ರದೇಶದಲ್ಲಿ ತಂಗಿದ್ದರು. ಅವರನ್ನು ಕಂಡು ಮೋವಾಬಿನ ರಾಜ ಬಾಲಾಕನಿಗೆ ಭಯವಾಯಿತು. ತನ್ನ ದೇಶವು ಅವರ ಪಾಲಾಗುತ್ತೋ ಅಂತ ಹೆದರಿದ. ಆದ್ದರಿಂದ ಅವನು ಬಿಳಾಮ ಎಂಬವನನ್ನು ಇಸ್ರಾಯೇಲ್ಯರನ್ನು ಶಪಿಸಲು ಮೋವಾಬಿಗೆ ಕರೆದನು.
ಆದರೆ ಯೆಹೋವನು ಬಿಳಾಮನಿಗೆ, ‘ನೀನು ಇಸ್ರಾಯೇಲ್ಯರಿಗೆ ಶಾಪ ಹಾಕಬಾರದು’ ಅಂದನು. ಹಾಗಾಗಿ ಬಿಳಾಮನು ಮೋವಾಬಿಗೆ ಹೋಗಲು ನಿರಾಕರಿಸಿದ. ಆಗ ರಾಜ ಬಿಳಾಮನನ್ನು ಎರಡನೇ ಸಾರಿ ಕರೆದು ‘ನಿನಗೆ ಬೇಕಾದದೆಲ್ಲವನ್ನು ಕೊಡುತ್ತೇನೆ’ ಎಂದು ಮಾತುಕೊಟ್ಟ. ಆದರೂ ಬಿಳಾಮನು ಒಪ್ಪಿಕೊಳ್ಳಲಿಲ್ಲ. ಬಳಿಕ ದೇವರು ಹೇಳಿದ್ದು: ‘ನೀನು ಹೋಗಬಹುದು. ಆದ್ರೆ ನಾನು ನಿನಗೆ ತಿಳಿಸೋ ಮಾತುಗಳನ್ನ ಮಾತ್ರ ನೀನು ಹೇಳಬೇಕು.’
ಬಿಳಾಮನು ತನ್ನ ಕತ್ತೆಯನ್ನೇರಿ ಮೋವಾಬಿಗೆ ಹೋದನು. ಇಸ್ರಾಯೇಲ್ಯರನ್ನು ಶಾಪ ಹಾಕಬಾರದೆಂದು ಯೆಹೋವನು ಹೇಳಿದ್ದರೂ ಅವನು ಅವರನ್ನು ಶಪಿಸಬೇಕೆಂದುಕೊಂಡನು. ದಾರಿಯಲ್ಲಿ ಯೆಹೋವನ ದೂತನು ಮೂರು ಬಾರಿ ಕಾಣಿಸಿಕೊಂಡನು. ಬಿಳಾಮನಿಗೆ ದೇವದೂತನು ಕಾಣಿಸಲಿಲ್ಲ. ಆದರೆ ಅವನ ಕತ್ತೆಗೆ ಕಾಣಿಸಿದನು. ಮೊದಲಸಲ ಕಾಣಿಸಿದಾಗ ಅದು ದಾರಿಯನ್ನು ಬಿಟ್ಟು ಬಯಲಿನ ಕಡೆ ಹೋಯಿತು. ಎರಡನೇ ಸಲ ಕಲ್ಲಿನ ಗೋಡೆಯ ಹತ್ತಿರಕ್ಕೆ ಹೋಗಿ ಬಿಳಾಮನ ಕಾಲನ್ನ ಗೋಡೆಗೆ ಒತ್ತಿತು. ಕೊನೆಗೆ ಆ ಕತ್ತೆ ದಾರಿಯ ನೆಲದ ಮೇಲೆ ಕೂತ್ಕೊಳ್ತು. ಪ್ರತಿಬಾರಿಯೂ ಬಿಳಾಮನು ಕತ್ತೆಯನ್ನು ಕೋಲಿನಿಂದ ಹೊಡೆದನು.
ನಂತರ, ಯೆಹೋವನು ಕತ್ತೆ ಮಾತಾಡುವಂತೆ ಮಾಡಿದನು. ಕತ್ತೆ ಬಿಳಾಮನಿಗೆ, ‘ನಾನೇನ್ ಮಾಡ್ದೆ ಅಂತ ನೀನು ನನ್ನ ಹೊಡ್ದೆ?’ ಎಂದು ಕೇಳಿತು. ಆಗ ಬಿಳಾಮನು ‘ನೀನು ಕಾಟ ಕೊಡ್ತಾ ಇದ್ದೀಯ. ನನ್ನ ಕೈಯಲ್ಲೇನಾದ್ರೂ ಕತ್ತಿ ಇದ್ದಿದ್ರೆ ನಿನ್ನ ಕೊಂದೇ ಹಾಕ್ತಿದ್ದೆ’ ಎಂದ. ಆಗ ಕತ್ತೆ, ‘ಇಷ್ಟು ವರ್ಷಗಳಿಂದ ನೀನು ನನ್ನ ಮೇಲೆ ಸವಾರಿ ಮಾಡಿದ್ದೀಯ, ಯಾವತ್ತಾದ್ರೂ ಈ ತರ ಮಾಡಿದ್ದೀನಾ?’ ಎಂದು ಕೇಳಿತು.
ಆಗ ಯೆಹೋವನು ಬಿಳಾಮನಿಗೆ ದೇವದೂತನು ಕಾಣಿಸುವಂತೆ ಮಾಡಿದನು. ‘ಇಸ್ರಾಯೇಲ್ಯರನ್ನು ಶಪಿಸದಿರುವಂತೆ ಯೆಹೋವನು ನಿನ್ನನ್ನು ಎಚ್ಚರಿಸಿದನಲ್ಲಾ’ ಎಂದು ದೂತನು ಬಿಳಾಮನನ್ನು ಕೇಳಿದಾಗ ಅವನು, ‘ನಾನು ಪಾಪ ಮಾಡ್ದೆ. ಈಗ ಮನೆಗೆ ವಾಪಸ್ ಹೋಗ್ತೀನಿ’ ಎಂದ. ಆಗ ದೇವದೂತನು, ‘ನೀನು ಮೋವಾಬಿಗೆ ಹೋಗಬಹುದು. ಆದರೆ ನೀನು ಯೆಹೋವನು ಹೇಳುವುದನ್ನೇ ಹೇಳಬೇಕು’ ಎಂದು ಹೇಳಿದನು.
ಬಿಳಾಮನು ಇದರಿಂದ ಪಾಠ ಕಲಿತನಾ? ಇಲ್ಲ. ಇದಾದ ಮೇಲೆ ಬಿಳಾಮ ಇಸ್ರಾಯೇಲ್ಯರನ್ನು ಮೂರು ಬಾರಿ ಶಪಿಸಲು ಪ್ರಯತ್ನಿಸಿದ. ಆದರೆ ಮೂರು ಬಾರಿಯೂ ಅವನು ಇಸ್ರಾಯೇಲ್ಯರನ್ನು ಆಶೀರ್ವದಿಸುವಂತೆ ಯೆಹೋವನು ಮಾಡಿದನು. ಕೊನೆಗೆ ಇಸ್ರಾಯೇಲ್ಯರು ಮೋವಾಬನ್ನು ಆಕ್ರಮಿಸಿದರು ಮತ್ತು ಬಿಳಾಮ ಕೊಲ್ಲಲ್ಪಟ್ಟನು. ಮೊದಲನೇ ಸಲವೇ ಬಿಳಾಮ ಯೆಹೋವನ ಮಾತು ಕೇಳಿದ್ದರೆ ಎಷ್ಟು ಒಳ್ಳೇದಿತ್ತಲ್ಲಾ?
“ಯಾವುದೇ ರೀತಿಯ ದುರಾಸೆಗೆ ಅವಕಾಶ ಕೊಡಬೇಡಿ. ಯಾಕಂದ್ರೆ ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ.”—ಲೂಕ 12:15