ಪಾಠ 40
ದಾವೀದ ಮತ್ತು ಗೊಲ್ಯಾತ
ಯೆಹೋವನು ಸಮುವೇಲನಿಗೆ ‘ಇಷಯನ ಮನೆಗೆ ಹೋಗು. ಅವನ ಮಕ್ಕಳಲ್ಲಿ ಒಬ್ಬ ಇಸ್ರಾಯೇಲಿನ ಮುಂದಿನ ರಾಜನಾಗುವನು’ ಅಂದನು. ಸಮುವೇಲ ಇಷಯನ ಮನೆಗೆ ಹೋದ. ಅವನು ಇಷಯನ ಮೊದಲನೇ ಮಗನನ್ನು ನೋಡಿ, ‘ಇವನನ್ನೇ ಯೆಹೋವ ಆರಿಸ್ಕೊಂಡಿದ್ದಾನೆ’ ಅಂದುಕೊಂಡ. ಆಗ ಯೆಹೋವನು ‘ನಾನು ಅವನನ್ನ ಆರಿಸ್ಕೊಂಡಿಲ್ಲ. ನಾನು ಮನುಷ್ಯನ ಹೊರತೋರಿಕೆಯನ್ನಲ್ಲ ಅವನ ಹೃದಯದಲ್ಲಿ ಇರೋದನ್ನ ನೋಡುತ್ತೇನೆ’ ಅಂದನು.
ಆಮೇಲೆ ಇಷಯನು ಇನ್ನೂ ಆರು ಗಂಡುಮಕ್ಕಳನ್ನು ಸಮುವೇಲನ ಹತ್ತಿರ ಕರೆದುಕೊಂಡು ಬಂದ. ಸಮುವೇಲ ‘ಇವ್ರಲ್ಲಿ ಯಾರನ್ನೂ ಯೆಹೋವ ಆರಿಸ್ಕೊಂಡಿಲ್ಲ. ನಿನಗಿರೋದು ಇಷ್ಟೇ ಗಂಡು ಮಕ್ಕಳಾ?’ ಅಂದನು. ಆಗ ಇಷಯ ‘ನನಗೆ ದಾವೀದನೆಂಬ ಇನ್ನೊಬ್ಬ ಮಗನಿದ್ದಾನೆ. ಅವನೇ ಎಲ್ರಿಗಿಂತ ಚಿಕ್ಕವನು. ಕುರಿ ಮೇಯಿಸೋಕೆ ಹೋಗಿದ್ದಾನೆ’ ಅಂದನು. ದಾವೀದನು ಮನೆಗೆ ಬಂದಾಗ ಯೆಹೋವನು ಸಮುವೇಲನಿಗೆ ‘ನಾನು ಆರಿಸ್ಕೊಂಡವನು ಇವನೇ!’ ಅಂದನು. ಆಗ ಸಮುವೇಲ ದಾವೀದನ ತಲೆಯ ಮೇಲೆ ಎಣ್ಣೆ ಸುರಿದು ಅವನನ್ನು ಇಸ್ರಾಯೇಲಿನ ಮುಂದಿನ ರಾಜನಾಗಿ ಅಭಿಷೇಕಿಸಿದನು.
ಸ್ವಲ್ಪ ಸಮಯದ ನಂತರ ಇಸ್ರಾಯೇಲ್ಯರಿಗೂ ಫಿಲಿಷ್ಟಿಯರಿಗೂ ಯುದ್ಧ ಆರಂಭವಾಯಿತು. ಗೊಲ್ಯಾತನೆಂಬ ದೈತ್ಯ ಪುರುಷ ಅವರ ಪರವಾಗಿ ಹೋರಾಡುತ್ತಿದ್ದ. ಪ್ರತಿದಿನ ಅವನು ಇಸ್ರಾಯೇಲ್ಯರನ್ನು ಗೇಲಿ ಮಾಡುತ್ತಿದ್ದ. ‘ನನ್ನ ಜೊತೆ ಯುದ್ಧ ಮಾಡಲು ಒಬ್ಬನನ್ನು ಕಳುಹಿಸಿ. ಅವನು ಗೆದ್ದರೆ ನಾವು ನಿಮ್ಮ ಸೇವಕರಾಗ್ತೀವಿ. ನಾನು ಗೆದ್ದರೆ ನೀವು ನಮ್ಮ ಸೇವಕರಾಗಬೇಕು’ ಎಂದು ಕೂಗುತ್ತಿದ್ದ.
ಹೀಗಿರುವಾಗ ಒಂದಿನ ದಾವೀದ ಸೈನಿಕರಾದ ತನ್ನ ಅಣ್ಣಂದಿರಿಗೆ ಊಟ ಕೊಡಲು ಯುದ್ಧ ಭೂಮಿಗೆ ಬಂದ. ಆಗ ಗೊಲ್ಯಾತನ ಮಾತು ದಾವೀದನ ಕಿವಿಗೆ ಬಿತ್ತು. ‘ನಾನು ಅವನ ವಿರುದ್ಧ ಹೋರಾಡ್ತೀನಿ!’ ಅಂದ ದಾವೀದ. ಆಗ ರಾಜ ಸೌಲ ‘ನೀನಿನ್ನೂ ಚಿಕ್ಕ ಹುಡುಗ’ ಅಂದ. ಅದಕ್ಕೆ ದಾವೀದ ‘ಯೆಹೋವನು ನನಗೆ ಸಹಾಯ ಮಾಡುತ್ತಾನೆ’ ಎಂದು ಉತ್ತರಿಸಿದ.
ಸೌಲ ತನ್ನ ಯುದ್ಧದ ಬಟ್ಟೆಯನ್ನ ದಾವೀದನಿಗೆ ಹಾಕಿದಾಗ ‘ಇದನ್ನ ಹಾಕೊಂಡು ಹೋಗೋಕೆ ನನ್ನಿಂದ ಆಗಲ್ಲ’ ಅಂದನು. ಆಮೇಲೆ ದಾವೀದ ತನ್ನ ಕವಣೆಯನ್ನು ತೆಗೆದುಕೊಂಡು ಕಣಿವೆಯ ಕಡೆ ಹೆಜ್ಜೆ ಹಾಕಿದ. ಅಲ್ಲಿ ನುಣುಪಾದ ಐದು ಕಲ್ಲುಗಳನ್ನು ಆರಿಸಿ ಕೈಚೀಲದಲ್ಲಿ ಹಾಕಿಕೊಂಡು ಗೊಲ್ಯಾತನ ಕಡೆಗೆ ಓಡಿದ. ದಾವೀದನನ್ನು ಕಂಡ ಗೊಲ್ಯಾತ ‘ನನ್ನ ಹತ್ರ ಬಾ, ನಾನು ನಿನ್ನ ಮಾಂಸವನ್ನ ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ಕೊಡ್ತೀನಿ’ ಅಂದ. ದಾವೀದ ಸ್ವಲ್ಪವೂ ಭಯಪಡಲಿಲ್ಲ. ‘ನೀನು ಕತ್ತಿ, ಈಟಿ ಮತ್ತು ಭರ್ಜಿ ಜೊತೆ ಬರ್ತಾ ಇದ್ದೀಯ. ನಾನಾದರೋ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ. ನೀನು ಹೋರಾಡುತ್ತಿರುವುದು ನಮ್ಮ ವಿರುದ್ಧವಲ್ಲ ದೇವರ ವಿರುದ್ಧ. ಕತ್ತಿ ಭರ್ಜಿಗಳಿಗಿಂತ ಯೆಹೋವನು ಬಲಶಾಲಿ ಎಂದು ಇಲ್ಲಿರುವ ಎಲ್ಲರಿಗೆ ಗೊತ್ತಾಗುವುದು. ಆತನು ನಿಮ್ಮೆಲ್ರನ್ನ ನಮ್ಮ ಕೈಗೆ ಒಪ್ಪಿಸ್ತಾನೆ’ ಎಂದು ಉತ್ತರಿಸಿದ.
ದಾವೀದ ತನ್ನ ಚೀಲದಿಂದ ಕಲ್ಲೊಂದನ್ನು ತೆಗೆದು ಕವಣೆಗೆ ಸಿಕ್ಕಿಸಿದ. ಆಮೇಲೆ ಅದನ್ನು ತಿರುಗಿಸಿ ಜೋರಾಗಿ ಬೀಸಿದ. ಯೆಹೋವನ ಸಹಾಯದಿಂದ ಆ ಕಲ್ಲು ಗೊಲ್ಯಾತನ ಹಣೆ ಒಳಗೆ ಹೋಯ್ತು. ದೈತ್ಯ ಗೊಲ್ಯಾತ ದೊಪ್ಪನೇ ನೆಲಕ್ಕುರುಳಿದ. ಆಗ ಫಿಲಿಷ್ಟಿಯರು ಕಂಗೆಟ್ಟು ಜೀವ ಉಳಿಸಿಕೊಳ್ಳಲು ಓಡಿ ಹೋದರು. ದಾವೀದನಂತೆ ನೀನೂ ಯೆಹೋವ ಮೇಲೆ ಭರವಸೆ ಇಡುತ್ತೀಯಾ?
“ಮನುಷ್ಯರಿಗೆ ಇದು ಅಸಾಧ್ಯ, ಆದ್ರೆ ದೇವರಿಗಲ್ಲ. ದೇವರಿಗೆ ಎಲ್ಲಾ ಸಾಧ್ಯ.”—ಮಾರ್ಕ 10:27