ಪಾಠ 42
ಧೈರ್ಯಶಾಲಿ ಹಾಗೂ ನಿಷ್ಠಾವಂತ ಯೋನಾತಾನ
ಯೋನಾತಾನ ಸೌಲನ ದೊಡ್ಡ ಮಗ, ಅವನೊಬ್ಬ ಯುದ್ಧಶೂರ. ಅವನು ಹದ್ದಿಗಿಂತ ವೇಗಿ ಮತ್ತು ಸಿಂಹಕ್ಕಿಂತ ಶಕ್ತಿಶಾಲಿ ಎಂದ ದಾವೀದ. ಒಂದಿನ 20 ಫಿಲಿಷ್ಟಿಯ ಸೈನಿಕರು ಬೆಟ್ಟದಲ್ಲಿ ಇರುವುದನ್ನು ಯೋನಾತಾನ ನೋಡಿದ. ಅವನು ತನ್ನ ಆಯುಧ ಹೊರುವವನಿಗೆ ‘ಯೆಹೋವನು ಒಂದು ಗುರುತು ಕೊಟ್ಟರೆ ಮಾತ್ರ ನಾವು ಯುದ್ಧ ಮಾಡೋಣ. ಆ ಗುರುತೇನೆಂದರೆ ಫಿಲಿಷ್ಟಿಯರು, ನಮ್ಮ ವಿರುದ್ಧ ಬನ್ನಿ ಎಂದು ಕರೆದರೆ ನಾವು ಅವರನ್ನು ಆಕ್ರಮಣ ಮಾಡಬೇಕು’ ಅಂದನು. ನಂತರ ಫಿಲಿಷ್ಟಿಯರು ‘ನಮ್ಮ ವಿರುದ್ಧ ಬನ್ನಿ, ನಮ್ಮ ಜೊತೆ ಹೋರಾಡಿ!’ ಎಂದು ಆರ್ಭಟಿಸಿದರು. ಆಗ ಯೋನಾತಾನ ಹಾಗೂ ಆಯುಧ ಹೊರುವ ಸೈನಿಕ ಇಬ್ಬರೂ ಬೆಟ್ಟವನ್ನು ಹತ್ತಿ ಫಿಲಿಷ್ಟಿಯರನ್ನು ಸೋಲಿಸಿದರು.
ಯೋನಾತಾನ ಸೌಲನ ದೊಡ್ಡ ಮಗನಾದ ಕಾರಣ ಸೌಲನ ನಂತರ ಅವನೇ ರಾಜನಾಗಬೇಕಿತ್ತು. ಆದರೆ ಇಸ್ರಾಯೇಲಿನ ಮುಂದಿನ ರಾಜನಾಗಿ ಯೆಹೋವನು ದಾವೀದನನ್ನು ಆರಿಸಿದ್ದಾನೆ ಎಂದು ಅವನಿಗೆ ಗೊತ್ತಿತ್ತು. ಆದರೂ ಅವನು ದಾವೀದನ ಮೇಲೆ ಸ್ವಲ್ಪವೂ ಹೊಟ್ಟೆಕಿಚ್ಚುಪಡಲಿಲ್ಲ. ಯೋನಾತಾನ ಹಾಗೂ ದಾವೀದ ಪ್ರಾಣ ಸ್ನೇಹಿತರಾದರು. ಒಬ್ಬರನ್ನೊಬ್ಬರು ಸಂರಕ್ಷಿಸುತ್ತೇವೆಂದು ಮಾತುಕೊಟ್ಟರು. ಯೋನಾತಾನ ಸ್ನೇಹದ ಸಂಕೇತವಾಗಿ ತನ್ನ ತೋಳಿಲ್ಲದ ಅಂಗಿಯನ್ನ, ಕತ್ತಿ, ಬಿಲ್ಲು ಹಾಗೂ ಸೊಂಟಪಟ್ಟಿಯನ್ನ ದಾವೀದನಿಗೆ ಕೊಟ್ಟ.
ದಾವೀದ ಸೌಲನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಆಗ ಯೋನಾತಾನ ಅವನಿದ್ದಲ್ಲಿಗೆ ಹೋಗಿ ‘ಹೆದರಬೇಡ, ಯೆಹೋವನು ನಿನ್ನನ್ನು ರಾಜನಾಗಿ ಆರಿಸಿದ್ದಾನೆ. ಅದು ನನ್ನ ತಂದೆಗೂ ಗೊತ್ತು’ ಅಂದನು. ಯೋನಾತಾನನಂಥ ಒಳ್ಳೇ ಸ್ನೇಹಿತ ನಿಮಗೂ ಬೇಕಾ?
ಒಂದಕ್ಕಿಂತ ಹೆಚ್ಚು ಸಲ ಯೋನಾತಾನ ದಾವೀದನನ್ನು ಕಾಪಾಡಲು ತನ್ನ ಜೀವವನ್ನು ಪಣಕ್ಕಿಟ್ಟನು. ತನ್ನ ತಂದೆ ದಾವೀದನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ಅವನು ತನ್ನ ತಂದೆಗೆ ‘ದಾವೀದ ಯಾವ ತಪ್ಪೂ ಮಾಡಿಲ್ಲ. ಅವನನ್ನು ಕೊಲ್ಲೋದು ಮಹಾಪಾಪ’ ಎಂದ. ಇದನ್ನು ಕೇಳಿದಾಗ ಸೌಲನಿಗೆ ಮಗನ ಮೇಲೆ ಭಯಂಕರ ಕೋಪ ಬಂತು. ಕೆಲವು ವರ್ಷಗಳ ನಂತರ ಸೌಲ ಮತ್ತು ಯೋನಾತಾನ ಇಬ್ಬರೂ ಯುದ್ಧದಲ್ಲಿ ಸತ್ತರು.
ಯೋನಾತಾನ ತೀರಿಕೊಂಡ ಮೇಲೆ ದಾವೀದ ಅವನ ಮಗನಾದ ಮೆಫೀಬೋಶೆತನನ್ನು ಹುಡುಕಿಸಿ ತನ್ನ ಅರಮನೆಗೆ ಕರೆತಂದು ‘ನಿನ್ನ ತಂದೆ ನನ್ನ ಪ್ರಾಣ ಸ್ನೇಹಿತ. ಆದ್ದರಿಂದ ನಿನ್ನ ಜೀವನವಿಡೀ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ. ನೀನು ನನ್ನ ಅರಮನೆಯಲ್ಲೇ ಇದ್ದು ನನ್ನ ಜೊತೆನೇ ಊಟ ಮಾಡು’ ಎಂದನು. ದಾವೀದ ತನ್ನ ಪ್ರಾಣ ಸ್ನೇಹಿತನನ್ನು ಯಾವತ್ತೂ ಮರೆಯಲಿಲ್ಲ.
“ನಾನು ನಿಮ್ಮನ್ನ ಪ್ರೀತಿಸಿದ ಹಾಗೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು . . . ಸ್ನೇಹಿತರಿಗೋಸ್ಕರ ಪ್ರಾಣ ಕೊಡೋದಕ್ಕಿಂತ ದೊಡ್ಡ ಪ್ರೀತಿ ಯಾವುದೂ ಇಲ್ಲ.”—ಯೋಹಾನ 15:12, 13