ಪಾಠ 45
ರಾಜ್ಯ ಎರಡು ಭಾಗವಾಯಿತು
ಸೊಲೊಮೋನ ಯೆಹೋವನನ್ನು ಆರಾಧಿಸುತ್ತಿದ್ದಷ್ಟು ಕಾಲ ಇಸ್ರಾಯೇಲಿನಲ್ಲಿ ಶಾಂತಿ ನೆಮ್ಮದಿ ಇತ್ತು. ಕ್ರಮೇಣ ಸೊಲೊಮೋನ ಬೇರೆ ದೇಶದ ಅನೇಕ ಸ್ತ್ರೀಯರನ್ನು ಮದುವೆಯಾದ. ಅವರು ಮೂರ್ತಿಗಳನ್ನು ಆರಾಧಿಸುತ್ತಿದ್ದರು. ಹೀಗೆ ಸಮಯ ಕಳೆದಂತೆ ಅವನು ಬದಲಾದ, ಮೂರ್ತಿಗಳನ್ನು ಆರಾಧಿಸಲೂ ಶುರು ಮಾಡಿದ. ಇದರಿಂದ ಯೆಹೋವನಿಗೆ ತುಂಬ ಕೋಪ ಬಂತು. ಆತನು ಸೊಲೊಮೋನನಿಗೆ ‘ಇಸ್ರಾಯೇಲ್ ರಾಜ್ಯವನ್ನು ನಿನ್ನ ಕುಟುಂಬದಿಂದ ಕಿತ್ತು ಎರಡು ಭಾಗವಾಗಿ ಮಾಡಲಾಗುವುದು. ದೊಡ್ಡ ಭಾಗ ನಿನ್ನ ಸೇವಕರಲ್ಲಿ ಒಬ್ಬನಿಗೆ ಕೊಡ್ತೀನಿ. ನಿನ್ನ ಕುಟುಂಬಕ್ಕೆ ಚಿಕ್ಕ ಭಾಗ ಮಾತ್ರ ಸಿಗುವುದು’ ಅಂದನು.
ತನ್ನ ಈ ನಿರ್ಧಾರವನ್ನು ಯೆಹೋವನು ಇನ್ನೊಂದು ರೀತಿಯಲ್ಲಿ ಸ್ಪಷ್ಟಪಡಿಸಿದ. ಹೇಗೆಂದರೆ ಒಮ್ಮೆ ಸೊಲೊಮೋನನ ಸೇವಕ ಯಾರೊಬ್ಬಾಮ ದಾರಿಯಲ್ಲಿ ಹೋಗುತ್ತಿದ್ದಾಗ ಪ್ರವಾದಿ ಅಹೀಯನನ್ನು ಭೇಟಿಯಾದ. ಅಹೀಯ ತಾನು ಹೊದ್ದುಕೊಂಡಿದ್ದ ಬಟ್ಟೆಯನ್ನು 12 ತುಂಡುಗಳಾಗಿ ಹರಿದು ‘ಇಸ್ರಾಯೇಲನ್ನು ಯೆಹೋವನು ಸೊಲೊಮೋನನ ಕುಟುಂಬದಿಂದ ಕಿತ್ತು ಎರಡು ಭಾಗವಾಗಿ ಮಾಡುವನು. ಈ ಹತ್ತು ತುಂಡುಗಳನ್ನ ತಗೊ. ಏಕೆಂದರೆ ಇಸ್ರಾಯೇಲಿನ ಹತ್ತು ಕುಲಗಳಿಗೆ ನೀನು ರಾಜನಾಗುವಿ’ ಅಂದನು. ಈ ವಿಷಯ ಸೊಲೊಮೋನನಿಗೆ ಗೊತ್ತಾದಾಗ ಯಾರೊಬ್ಬಾಮನನ್ನ ಕೊಲ್ಲೋಕೆ ಪ್ರಯತ್ನಿಸಿದ! ತನ್ನ ಪ್ರಾಣ ಉಳಿಸಿಕೊಳ್ಳಲು ಯಾರೊಬ್ಬಾಮ ಈಜಿಪ್ಟಿಗೆ ಓಡಿ ಹೋದ. ಸ್ವಲ್ಪ ಸಮಯದ ನಂತರ ಸೊಲೊಮೋನ ಸತ್ತನು. ಆಗ ಅವನ ಮಗ ರೆಹಬ್ಬಾಮ ರಾಜನಾದ. ತಾನು ಇಸ್ರಾಯೇಲಿಗೆ ತಿರುಗಿ ಬರಲು ಇದೇ ಸರಿಯಾದ ಸಮಯ ಎಂದು ಯಾರೊಬ್ಬಾಮನಿಗೆ ಅನಿಸಿತು.
ಕೆಲವು ಹಿರೀಪುರುಷರು ರೆಹಬ್ಬಾಮನಿಗೆ ‘ನೀನು ಜನರನ್ನು ಚೆನ್ನಾಗಿ ನೋಡಿಕೊಂಡರೆ ಅವರು ನಿನಗೆ ನಿಷ್ಠರಾಗಿರುತ್ತಾರೆ’ ಎಂದರು. ಆದರೆ ರೆಹಬ್ಬಾಮನ ಯುವ ಸ್ನೇಹಿತರು ಅವನಿಗೆ ‘ನೀನು ಜನರ ಜೊತೆ ಕಟ್ಟುನಿಟ್ಟಾಗಿರು! ಅವರಿಂದ ಇನ್ನೂ ಕಠಿಣವಾಗಿ ದುಡಿಸಿಕೋ’ ಅಂದರು. ರೆಹಬ್ಬಾಮ ತನ್ನ ಸ್ನೇಹಿತರ ಮಾತನ್ನು ಕೇಳಿದ. ಜನ್ರ ಜೊತೆ ಒರಟಾಗಿ ಮಾತಾಡಿದ. ಆಗ ಜನರು ಅವನ ವಿರುದ್ಧ ತಿರುಗಿ ಬಿದ್ದು ಯಾರೊಬ್ಬಾಮನನ್ನು ಹತ್ತು ಕುಲಗಳ ರಾಜನಾಗಿ ಮಾಡಿದರು. ಈ ಹತ್ತು ಕುಲಗಳಿಗೆ ಇಸ್ರಾಯೇಲ್ ರಾಜ್ಯ ಎಂದು ಹೆಸರು ಬಂತು. ಉಳಿದ ಎರಡು ಕುಲಗಳಿಗೆ ಯೆಹೂದ ರಾಜ್ಯ ಎಂದು ಹೆಸರು ಬಂತು. ಯೆಹೂದ ರಾಜ್ಯದವರು ರೆಹಬ್ಬಾಮನಿಗೆ ಬೆಂಬಲ ನೀಡಿದರು. ಹೀಗೆ ಇಸ್ರಾಯೇಲಿನ 12 ಕುಲ ಎರಡು ಭಾಗವಾಯಿತು.
ಯಾರೊಬ್ಬಾಮನಿಗೆ ತನ್ನ ಪ್ರಜೆಗಳು ಆರಾಧನೆಗಾಗಿ ರೆಹಬ್ಬಾಮನ ರಾಜ್ಯದಲ್ಲಿದ್ದ ಯೆರೂಸಲೇಮಿಗೆ ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಯಾಕೆ ಗೊತ್ತಾ? ಅಲ್ಲಿ ಹೋದ ಜನರನ್ನು ರೆಹಬ್ಬಾಮ ತನ್ನ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎಂಬ ಆತಂಕ ಯಾರೊಬ್ಬಾಮನಿಗಿತ್ತು. ಅದಕ್ಕೆ ಅವನು ಚಿನ್ನದ ಎರಡು ಕರುಗಳ ಮೂರ್ತಿಗಳನ್ನು ಮಾಡಿ ‘ಯೆರೂಸಲೇಮ್ ತುಂಬ ದೂರ. ಹಾಗಾಗಿ ನೀವು ಇಲ್ಲೇ ಆರಾಧನೆ ಮಾಡಿ’ ಎಂದು ಜನರಿಗೆ ಹೇಳಿದ. ಜನರು ಚಿನ್ನದ ಕರುಗಳನ್ನ ಆರಾಧಿಸಲು ಶುರುಮಾಡಿ ಯೆಹೋವನನ್ನು ಪುನಃ ಮರೆತರು.
“ಕ್ರೈಸ್ತರಲ್ಲದವ್ರ ಜೊತೆ ಜೋಡಿ ಆಗಬೇಡಿ. ಯಾಕಂದ್ರೆ, ನೀತಿಗೂ ಅನೀತಿಗೂ ಸ್ನೇಹ ಇರುತ್ತಾ? . . . ಕ್ರೈಸ್ತನು ಮತ್ತು ಕ್ರೈಸ್ತನಲ್ಲದವನು ಒಂದೇನಾ?”—2 ಕೊರಿಂಥ 6:14, 15