ಪಾಠ 48
ವಿಧವೆಯ ಮಗ ಮತ್ತೆ ಬದುಕಿ ಬಂದ
ಬರಗಾಲದ ಸಮಯದಲ್ಲಿ ಯೆಹೋವನು ಎಲೀಯನಿಗೆ, ‘ಚಾರೆಪ್ತ ಪಟ್ಟಣಕ್ಕೆ ಹೋಗು. ಅಲ್ಲಿ ಒಬ್ಬ ವಿಧವೆ ನಿನಗೆ ಊಟ ಕೊಡುತ್ತಾಳೆ’ ಅಂದನು. ಎಲೀಯ ಪಟ್ಟಣದ ಬಾಗಿಲ ಹತ್ತಿರ ಬಂದಾಗ ಒಬ್ಬ ಬಡ ವಿಧವೆ ಸೌದೆ ಕೂಡಿಸ್ತಾ ಇರೋದನ್ನ ನೋಡಿದ. ಅವನು ಅವಳ ಹತ್ತಿರ ಕುಡಿಯಲು ಒಂದು ಲೋಟ ನೀರು ಕೇಳಿದ. ಅವಳು ನೀರು ತರಲು ಹೊರಟಾಗ ಎಲೀಯ ಅವಳನ್ನು ಕರೆದು ‘ದಯವಿಟ್ಟು, ಒಂದು ತುಂಡು ರೊಟ್ಟಿನೂ ತಗೊಂಡು ಬಾ’ ಅಂದನು. ಅದಕ್ಕೆ ಆ ವಿಧವೆ ‘ನನ್ನ ಹತ್ರ ಒಂದು ರೊಟ್ಟಿನೂ ಇಲ್ಲ. ನನ್ನ ಹತ್ತಿರ ಇರುವ ಹಿಟ್ಟು ಮತ್ತು ಎಣ್ಣೆ ಸ್ವಲ್ಪನೇ. ಅದರಿಂದ ನನಗೆ ಮತ್ತು ನನ್ನ ಮಗನಿಗೆ ಮಾತ್ರ ರೊಟ್ಟಿ ಮಾಡಿಕೊಳ್ಳೋಕೆ ಆಗುತ್ತೆ’ ಅಂದಳು. ಆಗ ಎಲೀಯ ‘ನೀನು ನನಗೆ ರೊಟ್ಟಿ ಮಾಡಿಕೊಟ್ಟರೆ ಬರಗಾಲ ಮುಗಿಯುವ ತನಕ ನಿನ್ನ ಮನೇಲಿರುವ ಹಿಟ್ಟು ಮತ್ತು ಎಣ್ಣೆ ಖಾಲಿಯಾಗಲ್ಲ ಅಂತ ಯೆಹೋವನು ಮಾತುಕೊಟ್ಟಿದ್ದಾನೆ’ ಎಂದನು.
ಆದ್ದರಿಂದ ಅವಳು ಮನೆಗೆ ಹೋಗಿ ಯೆಹೋವನ ಪ್ರವಾದಿಗಾಗಿ ರೊಟ್ಟಿ ಮಾಡಿದಳು. ಯೆಹೋವನು ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ಮತ್ತು ಎಣ್ಣೆ ಖಾಲಿ ಆಗಲೇ ಇಲ್ಲ. ಬರಗಾಲದ ಸಮಯದಲ್ಲಿ ಅವರಿಗೆ ಯಾವತ್ತೂ ಊಟ ಇಲ್ಲದ ಪರಿಸ್ಥಿತಿ ಬರಲಿಲ್ಲ.
ಒಂದಿನ, ಒಂದು ಕೆಟ್ಟ ಘಟನೆ ನಡೀತು. ಆ ವಿಧವೆಯ ಮಗನಿಗೆ ಕಾಯಿಲೆ ಬಂದು ಸತ್ತು ಹೋದ. ಆಗ ಆಕೆ ಸಹಾಯ ಮಾಡುವಂತೆ ಎಲೀಯನನ್ನು ಬೇಡಿಕೊಂಡಳು. ಎಲೀಯ ಸತ್ತ ಹುಡುಗನನ್ನು ಆಕೆಯ ಕೈಯಿಂದ ತೆಗೆದುಕೊಂಡು ಮನೆಯ ಮಾಳಿಗೆ ಮೇಲಿದ್ದ ಕೋಣೆಗೆ ಹೋದನು. ಅವನನ್ನು ಮಂಚದ ಮೇಲೆ ಮಲಗಿಸಿ ‘ಯೆಹೋವನೇ, ದಯವಿಟ್ಟು ಈ ಹುಡುಗ ಮತ್ತೆ ಬದುಕೋ ತರ ಮಾಡು’ ಎಂದು ಪ್ರಾರ್ಥಿಸಿದನು. ಎಲೀಯ ಈ ರೀತಿ ಯೆಹೋವನನ್ನು ಕೇಳಿದ್ದು ನಿಜಕ್ಕೂ ಆಶ್ಚರ್ಯ. ಯಾಕೆಂದರೆ ಇಲ್ಲಿ ತನಕ ಕಲಿತಂತೆ ಸತ್ತವರು ಯಾರು ಪುನಃ ಬದುಕಿ ಬಂದಿರಲಿಲ್ಲ. ಅದೂ ಅಲ್ಲದೇ ವಿಧವೆ ಮತ್ತು ಆಕೆಯ ಮಗ ಇಸ್ರಾಯೇಲ್ಯರೂ ಆಗಿರಲಿಲ್ಲ.
ಆದರೆ ಆ ಹುಡುಗನಿಗೆ ಜೀವ ಬಂತು, ಅವನು ಉಸಿರಾಡಲು ಶುರುಮಾಡಿದ! ಆಗ ಎಲೀಯ ಆ ವಿಧವೆಗೆ ‘ನೋಡು! ನಿನ್ನ ಮಗ ಬದುಕಿದ್ದಾನೆ’ ಅಂದನು. ಆ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಕೆ ಎಲೀಯನಿಗೆ ‘ಯೆಹೋವನು ನಿನಗೆ ತಿಳಿಸಿರುವ ವಿಷಯಗಳನ್ನೇ ಹೇಳುತ್ತೀಯ. ನನಗೀಗ ನೀನು ನಿಜವಾಗಿ ಸತ್ಯದೇವರ ಮನುಷ್ಯ ಅಂತ ಗೊತ್ತಾಯಿತು’ ಅಂದಳು.
“ಕಾಗೆಗಳನ್ನ ನೋಡಿ. ಅವು ಬೀಜ ಬಿತ್ತಲ್ಲ, ಕೊಯ್ಯಲ್ಲ. ಅವುಗಳಿಗೆ ಗೋಡೌನ್‌ಗಳೂ ಇಲ್ಲ. ಆದ್ರೂ ದೇವರು ಕಾಗೆಗಳನ್ನ ನೋಡ್ಕೊಳ್ತಾನೆ. ನೀವು ಆ ಪಕ್ಷಿಗಿಂತ ಹೆಚ್ಚು ಅಮೂಲ್ಯ ಅಲ್ವಾ?”—ಲೂಕ 12:24