ಪಾಠ 63
ಗೋಡೆಯ ಮೇಲೆ ಕೈಬರಹ
ಸ್ವಲ್ಪ ಸಮಯದ ನಂತರ ಬೇಲ್ಶಚ್ಚರನು ಬಾಬೆಲಿನ ರಾಜನಾದನು. ಒಂದು ರಾತ್ರಿ, ಅವನು ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಅದಕ್ಕೆ ದೇಶದ ಸಾವಿರ ಜನ ಪ್ರಮುಖರನ್ನು ಆಮಂತ್ರಿಸಿದನು. ನೆಬೂಕದ್ನೆಚ್ಚರನು ಯೆಹೋವನ ಆಲಯದಿಂದ ತಂದ ಚಿನ್ನದ ಪಾತ್ರೆಗಳನ್ನು ಔತಣಕ್ಕೆ ತರುವಂತೆ ಬೇಲ್ಶಚ್ಚರ ತನ್ನ ಸೇವಕರಿಗೆ ಹೇಳಿದನು. ಅವನು ಮತ್ತು ಅವನ ಅತಿಥಿಗಳು ಆ ಪಾತ್ರೆಗಳಿಂದ ಕುಡಿದು ತಮ್ಮ ತಮ್ಮ ದೇವರುಗಳನ್ನು ಸ್ತುತಿಸಿದರು. ಆಗ ತಕ್ಷಣ ಒಂದು ಕೈ ಕಾಣಿಸಿ ಅರಮನೆಯ ಗೋಡೆಯ ಮೇಲೆ ರಹಸ್ಯವಾದ ಪದಗಳನ್ನು ಬರೆಯಿತು.
ಅದನ್ನು ಕಂಡು ಬೇಲ್ಶಚ್ಚರನಿಗೆ ತುಂಬ ಭಯವಾಯಿತು. ಅವನು ತನ್ನ ಮಾಟಗಾರರನ್ನ ಕರೆಸಿ ಅವರಿಗೆ ‘ಇಲ್ಲಿ ಬರೆದಿರೋದನ್ನ ಯಾರಾದ್ರೂ ಓದಿ ಅದ್ರ ಅರ್ಥ ಹೇಳಿದ್ರೆ ಬಾಬೆಲ್ ಸಾಮ್ರಾಜ್ಯದಲ್ಲೇ ಮೂರನೇ ಮುಖ್ಯ ವ್ಯಕ್ತಿಯಾಗಿ ಮಾಡ್ತೀನಿ’ ಅಂದನು. ಅವರು ಎಷ್ಟೇ ಪ್ರಯತ್ನಿಸಿದರೂ ಆ ಗೋಡೆಯ ಮೇಲಿನ ಬರಹದ ಅರ್ಥವನ್ನು ಯಾರ ಕೈಯಲ್ಲೂ ತಿಳಿಸಿಲಿಕ್ಕಾಗಲಿಲ್ಲ. ಆಗ ರಾಣಿ ಬಂದು ಬೇಲ್ಶಚ್ಚರನಿಗೆ, ‘ನೆಬೂಕದ್ನೆಚ್ಚರನಿಗೆ ವಿಷಯಗಳನ್ನು ವಿವರಿಸುತ್ತಿದ್ದ ದಾನಿಯೇಲನೆಂಬ ಒಬ್ಬ ವ್ಯಕ್ತಿ ಇದ್ದಾನೆ. ಇದರ ಅರ್ಥವನ್ನು ವಿವರಿಸುವ ಶಕ್ತಿ ಅವನಿಗಿದೆ’ ಅಂದಳು.
ದಾನಿಯೇಲ ರಾಜನ ಹತ್ತಿರ ಬಂದನು. ಬೇಲ್ಶಚ್ಚರನು ಅವನಿಗೆ, ‘ಈ ಬರಹ ಓದಿದ್ರೆ, ಇದ್ರ ಅರ್ಥ ಹೇಳಿದ್ರೆ ನಾನು ನಿನಗೆ ಚಿನ್ನದ ಕಂಠಹಾರ ಹಾಕ್ತೀನಿ ಮತ್ತು ನಿನಗೆ ಬಾಬೆಲ್ ಸಾಮ್ರಾಜ್ಯದಲ್ಲೇ ಮೂರನೇ ಮುಖ್ಯ ವ್ಯಕ್ತಿಯಾಗಿ ಮಾಡ್ತೀನಿ’ ಅಂದನು. ಆಗ ದಾನಿಯೇಲನು ‘ನಿನ್ನ ಉಡುಗೊರೆಗಳು ನನಗೆ ಬೇಡ, ಆದರೆ ಈ ಬರಹದ ಅರ್ಥ ಹೇಳ್ತೀನಿ. ನಿನ್ನ ತಂದೆ ನೆಬೂಕದ್ನೆಚ್ಚರನು ಅಹಂಕಾರಿಯಾಗಿದ್ದ, ಯೆಹೋವನು ಅವನಿಗೆ ದೀನತೆಯನ್ನು ಕಲಿಸಿದನು. ನಿನ್ನ ತಂದೆಗೆ ಆಗಿದ್ದ ಪ್ರತಿಯೊಂದು ವಿಷಯ ನಿನಗೆ ಗೊತ್ತಿದ್ದರೂ ನೀನು ಯೆಹೋವನ ಆಲಯದ ಚಿನ್ನದ ಪಾತ್ರೆಗಳಲ್ಲಿ ದ್ರಾಕ್ಷಾಮದ್ಯ ಕುಡಿದು ಆತನನ್ನು ಅಗೌರವಿಸಿದ್ದೀ. ಆದ್ದರಿಂದ ದೇವರು ಈ ಬರಹವನ್ನು ಬರೆದನು: ಮೆನೇ, ಮೆನೇ, ತೆಕೇಲ್, ಪರ್ಸಿನ್. ಈ ಮಾತುಗಳ ಅರ್ಥ ಮೇದ್ಯಯ ಮತ್ತು ಪರ್ಶಿಯನ್ನರು ಬಾಬೆಲನ್ನು ಆಕ್ರಮಿಸುತ್ತಾರೆ, ನೀನು ಇನ್ನು ಮುಂದೆ ರಾಜನಾಗಿ ಇರುವುದಿಲ್ಲ’ ಎಂದು ಹೇಳಿದನು.
ಬಾಬೆಲನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬಂತ್ತಿತ್ತು. ಈ ನಗರ ಭದ್ರವಾದ ಗೋಡೆಗಳಿಂದ ಮತ್ತು ಆಳವಾದ ನದಿಯಿಂದ ಸುತ್ತುವರಿದಿತ್ತು. ಆದರೆ ಅದೇ ರಾತ್ರಿ, ಮೇದ್ಯ ಮತ್ತು ಪರ್ಶಿಯನ್ನರು ಆಕ್ರಮಣ ಮಾಡಿದರು. ಪರ್ಶಿಯ ರಾಜ ಕೋರೆಷನು ನದಿಯ ನೀರು ಬೇರೆ ಕಡೆಗೆ ಹರಿಯುವಂತೆ ಮಾಡಿದನು. ಆದ್ದರಿಂದ ಸೈನಿಕರು ಆರಾಮವಾಗಿ ಪಟ್ಟಣದ ಬಾಗಿಲಿನವರೆಗೆ ಹೋಗಲು ಸಾಧ್ಯವಾಯಿತು. ಅಲ್ಲಿ ನೋಡಿದ್ರೆ, ಪಟ್ಟಣದ ಬಾಗಿಲುಗಳು ತೆರೆದಿದ್ದವು! ಸೈನ್ಯವು ಪ್ರವಾಹದಂತೆ ನಗರದೊಳಕ್ಕೆ ನುಗ್ಗಿತು. ಅವರದನ್ನು ವಶಪಡಿಸಿಕೊಂಡು, ರಾಜನನ್ನು ಕೊಂದರು. ಕೋರೆಷನು ಬಾಬೆಲಿನ ರಾಜನಾದನು.
ಇದಾಗಿ ಒಂದು ವರ್ಷದೊಳಗೆ ಕೋರೆಷನು, ‘ಯೆರೂಸಲೇಮಿನ ಆಲಯವನ್ನು ಪುನಃ ಕಟ್ಟಲು ಯೆಹೋವನು ನನಗೆ ಹೇಳಿದ್ದಾನೆ. ಆತನ ಜನರಲ್ಲಿ ಯಾರು ಆ ಕೆಲಸಕ್ಕೆ ಸಹಾಯ ಮಾಡಲು ಇಷ್ಟಪಡುತ್ತಾರೋ ಅವರು ಅಲ್ಲಿಗೆ ಹೋಗಬಹುದು’ ಅಂತ ಹೇಳಿದನು. ಯೆಹೋವನು ಹೇಳಿದಂತೆ, ಯೆರೂಸಲೇಮ್ ನಾಶವಾಗಿ 70 ವರ್ಷಗಳ ನಂತರ ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿದರು. ನೆಬೂಕದ್ನೆಚ್ಚರನು ಯೆಹೋವನ ಆಲಯದಿಂದ ತಂದ ಬಂಗಾರ, ಬೆಳ್ಳಿಯ ಪಾತ್ರೆಗಳು ಮತ್ತು ಎಲ್ಲಾ ಸಾಮಾನುಗಳನ್ನು ಕೋರೆಷನು ಹಿಂದಿರುಗಿಸಿದನು. ಯೆಹೋವನು ತನ್ನ ಜನರನ್ನು ಕಾಪಾಡಲು ಕೋರೆಷನನ್ನು ಹೇಗೆ ಬಳಸಿದನೆಂದು ಗಮನಿಸಿದಿರಾ?
“ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್ ಬಿದ್ದಿದ್ದಾಳೆ. ಕೆಟ್ಟ ದೇವದೂತರಿಗೆ . . . ಮನೆಯಾಗಿದ್ದಾಳೆ.”—ಪ್ರಕಟನೆ 18:2