ಪಾಠ 65
ತನ್ನ ಜನರನ್ನು ಕಾಪಾಡಿದ ಎಸ್ತೇರ್
ಪರ್ಶಿಯದ ಶೂಷನ್ ಎಂಬ ನಗರದಲ್ಲಿ ಎಸ್ತೇರ್ ಎಂಬ ಯೆಹೂದಿ ಹುಡುಗಿ ಇದ್ದಳು. ಅನೇಕ ವರ್ಷಗಳ ಹಿಂದೆ ಅವಳ ಕುಟುಂಬವನ್ನು ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಕೈದಿಯಾಗಿ ಹಿಡಿದುಕೊಂಡು ಬಂದಿದ್ದನು. ಅವಳನ್ನು ಅವಳ ದೊಡ್ಡಪ್ಪನ ಮಗ ಮೊರ್ದೆಕೈ ಸಾಕಿ ಸಲಹುತ್ತಿದ್ದನು. ಅವನು ಪರ್ಶಿಯದ ರಾಜ ಅಹಷ್ವೇರೋಷನ ಸೇವಕನಾಗಿದ್ದನು.
ರಾಜ ಅಹಷ್ವೇರೋಷನು ತನ್ನ ರಾಜ್ಯಕ್ಕೆ ಹೊಸ ರಾಣಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ. ಅದಕ್ಕಾಗಿ ಅವನ ಸೇವಕರು ಅವನ ರಾಜ್ಯದಲ್ಲಿರುವ ಸುಂದರ ಸ್ತ್ರೀಯರನ್ನು ಕರೆ ತಂದರು. ಅವರಲ್ಲಿ ಎಸ್ತೇರಳೂ ಒಬ್ಬಳು. ಆ ಎಲ್ಲಾ ಸ್ತ್ರೀಯರಲ್ಲಿ ರಾಜನು ಎಸ್ತೇರಳನ್ನು ರಾಣಿಯಾಗಿ ಆಯ್ಕೆ ಮಾಡಿದನು. ಆದರೆ ತಾನೊಬ್ಬ ಯೆಹೂದ್ಯಳು ಎಂದು ಹೇಳಬಾರದೆಂದು ಮೊರ್ದೆಕೈ ಎಸ್ತೇರಳಿಗೆ ಹೇಳಿದ್ದನು.
ಆ ರಾಜ್ಯದಲ್ಲಿ ಹಾಮಾನನೆಂಬ ಒಬ್ಬ ದುರಹಂಕಾರಿ ಅಧಿಕಾರಿ ಇದ್ದನು. ಇವನು ಎಲ್ಲಾ ಅಧಿಕಾರಿಗಳಿಗೆ ಮುಖ್ಯಸ್ಥನಾಗಿದ್ದನು. ಎಲ್ಲರೂ ತನಗೆ ಬಗ್ಗಿ ನಮಸ್ಕರಿಸಬೇಕು ಎನ್ನುವುದು ಅವನ ಬಯಕೆ. ಆದರೆ ಮೊರ್ದೆಕೈ ಮಾತ್ರ ಅವನಿಗೆ ನಮಸ್ಕರಿಸುತ್ತಿರಲಿಲ್ಲ. ಇದರಿಂದ ಹಾಮಾನನಿಗೆ ಮೊರ್ದೆಕೈಯನ್ನು ಸಾಯಿಸುವಷ್ಟು ಕೋಪ ಬಂತು. ಮೊರ್ದೆಕೈ ಒಬ್ಬ ಯೆಹೂದಿ ಎಂಬ ವಿಷಯ ಹಾಮಾನನಿಗೆ ಗೊತ್ತಾದಾಗ ದೇಶದಲ್ಲಿರುವ ಎಲ್ಲಾ ಯೆಹೂದ್ಯರನ್ನು ನಾಶ ಮಾಡಲು ಅವನು ಸಂಚು ಹೂಡಿದನು. ಅವನು ರಾಜನ ಹತ್ತಿರ, ‘ಯೆಹೂದ್ಯರು ತುಂಬಾ ಅಪಾಯಕಾರಿ ಜನ. ಅವರನ್ನು ಸಂಪೂರ್ಣವಾಗಿ ನಾಶ ಮಾಡಬೇಕು’ ಎಂದನು. ಅದಕ್ಕೆ ಅಹಷ್ವೇರೋಷನು ‘ನಿನಗೆ ಇಷ್ಟಬಂದ ಹಾಗೆ ಮಾಡು’ ಎಂದು ಹೇಳಿ ಒಂದು ನಿಯಮವನ್ನು ಮಾಡಲು ಅನುಮತಿ ಕೊಟ್ಟನು. ಹಾಮಾನನು ಆಡಾರ್ ತಿಂಗಳಿನ 13ನೇ ದಿನ ದೇಶದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲಬೇಕೆಂಬ ನಿಯಮವನ್ನು ಹೊರಡಿಸಿದನು. ಇದನ್ನೆಲ್ಲಾ ಯೆಹೋವನು ನೋಡುತ್ತಿದ್ದನು.
ಈ ನಿಯಮದ ಬಗ್ಗೆ ಎಸ್ತೇರಳಿಗೆ ಗೊತ್ತಿರಲಿಲ್ಲ. ಹಾಗಾಗಿ ಮೊರ್ದೆಕೈ ಆ ನಿಯಮದ ಪತ್ರದ ಪ್ರತಿಯನ್ನು ಅವಳಿಗೆ ಕಳುಹಿಸಿದನು. ‘ನೀನು ರಾಜನ ಹತ್ತಿರ ಹೋಗಿ ಇದರ ಬಗ್ಗೆ ಮಾತಾಡು’ ಎಂದನು. ಅದಕ್ಕೆ ಎಸ್ತೇರಳು ‘ರಾಜನು ಕರೆಯದೇ ಯಾರಾದರೂ ಅವನ ಬಳಿ ಹೋದರೆ ಅವರನ್ನು ಕೊಲ್ಲಲಾಗುತ್ತದೆ. 30 ದಿನದಿಂದ ರಾಜನು ನನ್ನನ್ನು ಕರೆಯಲಿಲ್ಲ. ಆದರೂ ನಾನು ಹೋಗುತ್ತೇನೆ. ಅವನು ತನ್ನ ಸುವರ್ಣ ದಂಡವನ್ನು ನನ್ನ ಕಡೆ ಚಾಚಿದರೆ ಬದುಕುತ್ತೇನೆ. ಇಲ್ಲದಿದ್ದರೆ ಸಾಯುತ್ತೇನೆ’ ಅಂದಳು.
ಎಸ್ತೇರಳು ಅರಮನೆಯ ಒಳಗಿನ ಅಂಗಳಕ್ಕೆ ಹೋದಳು. ರಾಜನು ಅವಳನ್ನು ಕಂಡಾಗ ತನ್ನ ಸುವರ್ಣ ದಂಡವನ್ನು ಅವಳ ಕಡೆಗೆ ಚಾಚಿದನು. ಅವಳು ಅವನ ಹತ್ತಿರ ಹೋದಾಗ ರಾಜನು, ‘ರಾಣಿ ಎಸ್ತೇರಳೇ, ನನ್ನಿಂದ ನಿನಗೆ ಏನು ಬೇಕು?’ ಅಂದನು. ಅದಕ್ಕೆ ಎಸ್ತೇರಳು ‘ದಯಮಾಡಿ ನೀವು ಮತ್ತು ಹಾಮಾನ ನಾನು ಏರ್ಪಡಿಸಿರುವ ಔತಣಕ್ಕೆ ಬರಬೇಕು’ ಎಂದು ವಿನಂತಿಸಿದಳು. ಆ ಔತಣಕ್ಕೆ ಬಂದಾಗ ಮತ್ತೊಂದು ಔತಣಕ್ಕೂ ಬರುವಂತೆ ಕೇಳಿಕೊಂಡಳು. ಎರಡನೇ ಔತಣದಲ್ಲಿ ರಾಜನು ಮತ್ತೊಮ್ಮೆ ಎಸ್ತೇರಳಿಗೆ ‘ನನ್ನಿಂದ ನಿನಗೆ ಏನು ಬೇಕು?’ ಎಂದು ಕೇಳಿದಾಗ ‘ಯಾರೋ ಒಬ್ಬರು ನನ್ನನ್ನು ಮತ್ತು ನನ್ನ ಜನರನ್ನು ಸಾಯಿಸಲು ಸಂಚು ಮಾಡಿದ್ದಾರೆ. ದಯಮಾಡಿ ನಮ್ಮನ್ನು ಕಾಪಾಡಿ’ ಅಂದಳು. ಅದಕ್ಕೆ ರಾಜ ‘ನಿನ್ನನ್ನು ಕೊಲ್ಲಬೇಕು ಅಂದುಕೊಂಡಿರುವವರು ಯಾರು?’ ಎಂದು ಕೇಳಿದಾಗ ಎಸ್ತೇರಳು ‘ಈ ದುಷ್ಟ ಮನುಷ್ಯ ಹಾಮಾನನೇ’ ಅಂದಳು. ಆಗ ಅಹಷ್ವೆರೋಷನ ಕೋಪ ನೆತ್ತಿಗೇರಿ ಕೂಡಲೇ ಹಾಮಾನನನ್ನು ಕೊಲ್ಲಿಸಿದನು.
ಇಸ್ರಾಯೇಲ್ಯರ ವಿರುದ್ಧ ಹಾಮಾನ ಮಾಡಿದ ನಿಯಮವನ್ನು ಸ್ವತಃ ರಾಜ ಕೂಡ ರದ್ದು ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ರಾಜನು ಮೊರ್ದೆಕೈಯನ್ನು ಅಧಿಕಾರಿಗಳ ಮುಖ್ಯಸ್ಥನಾಗಿ ನೇಮಿಸಿ ಹೊಸದೊಂದು ನಿಯಮವನ್ನು ಮಾಡುವ ಅಧಿಕಾರ ಕೊಟ್ಟನು. ಆಗ ಮೊರ್ದೆಕೈ ಒಂದು ನಿಯಮವನ್ನು ಮಾಡಿದನು. ಇದರಿಂದ ವಿರೋಧಿಗಳು ಆಕ್ರಮಣ ಮಾಡಿದಾಗ ಯೆಹೂದ್ಯರಿಗೆ ತಮ್ಮ ಪ್ರಾಣ ರಕ್ಷಣೆಗಾಗಿ ಹೋರಾಡಲು ಅನುಮತಿ ಸಿಕ್ಕಿತು. ಆಡಾರ್ ತಿಂಗಳಿನ 13ನೇ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸೋಲಿಸಿದರು. ಅಂದಿನಿಂದ ಅವರು ಪ್ರತಿವರ್ಷ ಆ ವಿಜಯವನ್ನು ಆಚರಿಸಿದರು.
“ನನ್ನಿಂದಾಗಿ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ, ಆಗ ನೀವು ಅವ್ರಿಗೂ ಬೇರೆ ಜನ್ರಿಗೂ ನನ್ನ ಬಗ್ಗೆ ಸಾಕ್ಷಿ ಕೊಡೋಕಾಗುತ್ತೆ.”—ಮತ್ತಾಯ 10:18