ಪಾಠ 77
ಬಾವಿಗೆ ಬಂದ ಸ್ತ್ರೀ
ಪಸ್ಕಹಬ್ಬದ ನಂತರ ಯೇಸು ಮತ್ತು ಅವನ ಶಿಷ್ಯರು ಸಮಾರ್ಯದ ದಾರಿಯಲ್ಲಿ ಗಲಿಲಾಯಕ್ಕೆ ವಾಪಸ್ಸು ಹೋಗುತ್ತಿದ್ದರು. ಯೇಸು ಸಿಖರ್ ಎಂಬ ಊರಿನ ಯಾಕೋಬನ ಬಾವಿಯ ಹತ್ತಿರ ವಿಶ್ರಾಂತಿ ತೆಗೆದುಕೊಳ್ಳಲು ಕೂತನು. ಅವನ ಶಿಷ್ಯರು ಊಟವನ್ನು ತೆಗೆದುಕೊಂಡು ಬರಲು ಪಟ್ಟಣಕ್ಕೆ ಹೋದರು.
ಆಗ ಒಬ್ಬ ಸ್ತ್ರೀ ನೀರನ್ನು ಸೇದಲು ಆ ಬಾವಿಯ ಹತ್ತಿರ ಬಂದಳು. ಆಗ ಯೇಸು ಅವಳಿಗೆ “ಕುಡಿಯೋಕೆ ಸ್ವಲ್ಪ ನೀರು ಕೊಡು” ಎಂದು ಕೇಳಿದನು. ಆಗ ಸ್ತ್ರೀ ‘ನೀನು ನನ್ನ ಹತ್ತಿರ ಯಾಕೆ ಮಾತಾಡುತ್ತಿದ್ದೀಯಾ? ನಾನು ಸಮಾರ್ಯದವಳು. ಯೆಹೂದ್ಯರು ಸಮಾರ್ಯದವರ ಹತ್ತಿರ ಮಾತಾಡುವುದಿಲ್ಲವಲ್ಲಾ?’ ಅಂದಳು. ಅದಕ್ಕೆ ಯೇಸು, ‘ನಾನು ಯಾರು ಅಂತ ನಿನಗೆ ಗೊತ್ತಿದ್ರೆ ನೀನೇ ನನ್ನ ಹತ್ರ ನೀರು ಕೇಳ್ತಿದ್ದೆ. ನಾನು ಜೀವ ಕೊಡೋ ನೀರನ್ನ ನಿನಗೆ ಕೊಡ್ತಿದ್ದೆ’ ಅಂದನು. ಅದಕ್ಕೆ ಅವಳು ‘ನೀನು ಹೇಳಿದ್ದು ನನಗೆ ಅರ್ಥ ಆಗಲಿಲ್ಲ. ಅಲ್ಲದೇ ನೀರು ಸೇದೋಕೆ ನಿನ್ನ ಹತ್ರ ಏನೂ ಇಲ್ಲ’ ಅಂದಳು. ಆಗ ಯೇಸು ‘ನಾನು ಕೊಡೋ ನೀರನ್ನ ಕುಡಿಯೋರಿಗೆ ಯಾವತ್ತೂ ಬಾಯಾರಿಕೆ ಆಗಲ್ಲ’ ಅಂದನು. ಅದಕ್ಕೆ ಆ ಸ್ತ್ರೀ “ಸ್ವಾಮಿ, ಆ ನೀರನ್ನ ನನಗೆ ಕೊಡು” ಅಂದಳು.
ಯೇಸು ಅವಳಿಗೆ “ಹೋಗಿ ನಿನ್ನ ಗಂಡನ್ನ ಕರ್ಕೊಂಡು ಬಾ” ಅಂದನು. ಅದಕ್ಕವಳು “ನನಗೆ ಗಂಡ ಇಲ್ಲ” ಅಂದಳು. ಆಗ ಯೇಸು ‘ನೀನು ಹೇಳಿದ್ದು ನಿಜಾನೇ. ನೀನು ಐದು ಸಾರಿ ಮದುವೆಯಾಗಿದ್ದೀಯ. ಆದರೆ ಈಗ ನೀನು ಮದುವೆಯಾಗದೆ ಒಬ್ಬನ ಜೊತೆ ಇದ್ದೀಯ’ ಅಂದನು. ಅದಕ್ಕೆ ಆ ಸ್ತ್ರೀ ‘ನೀವೊಬ್ಬ ಪ್ರವಾದಿ ಅಂತ ನನಗನಿಸುತ್ತೆ. ಸ್ವಾಮಿ, ನಾವು ದೇವರನ್ನು ಈ ಬೆಟ್ಟದಲ್ಲಿ ಆರಾಧಿಸಬಹುದು ಅಂತ ನನ್ನ ಜನರು ನಂಬುತ್ತಾರೆ. ಆದರೆ ಯೆಹೂದ್ಯರು, ದೇವರನ್ನು ಯೆರೂಸಲೇಮಿನಲ್ಲೇ ಆರಾಧಿಸಬೇಕು ಅಂತ ಹೇಳುತ್ತಾರೆ. ಮೆಸ್ಸೀಯನು ಬಂದಾಗ ಅವನು ದೇವರನ್ನು ಹೇಗೆ ಆರಾಧಿಸಬೇಕು ಎಂದು ನಮಗೆ ಹೇಳಿ ಕೊಡುವನು ಎಂದು ನಾನು ನಂಬಿದ್ದೇನೆ’ ಅಂದಳು. ಆಗ ಯೇಸು ಯಾರಿಗೂ ಹೇಳದ ಒಂದು ವಿಷಯವನ್ನು ಅವಳಿಗೆ ಹೇಳಿದನು. ಏನು ಹೇಳಿದನು ಗೊತ್ತಾ? ‘ನಾನೇ ಮೆಸ್ಸೀಯ’ ಅಂತ ಹೇಳಿದನು.
ತಕ್ಷಣ ಆ ಸ್ತ್ರೀ ಪಟ್ಟಣಕ್ಕೆ ಓಡಿ ಹೋಗಿ ಸಮಾರ್ಯದವರಿಗೆ ‘ನನಗೆ ಮೆಸ್ಸೀಯ ಸಿಕ್ಕಿದನು! ಅವನಿಗೆ ನನ್ನ ಬಗ್ಗೆ ಎಲ್ಲಾ ಗೊತ್ತು. ನೀವು ಕೂಡ ಬಂದು ಅವನನ್ನು ನೋಡಿ’ ಅಂದಳು. ಅನೇಕರು ಅವಳ ಜೊತೆ ಬಾವಿಯ ಹತ್ತಿರ ಬಂದು ಯೇಸು ಹೇಳಿದ್ದನ್ನು ಕೇಳಿಸಿಕೊಂಡರು.
ಸಮಾರ್ಯದವರು ಯೇಸುವನ್ನು ತಮ್ಮ ಪಟ್ಟಣಕ್ಕೆ ಬರುವಂತೆ ಕೇಳಿಕೊಂಡರು. ಯೇಸು ಎರಡು ದಿನ ಇದ್ದು ಅವರಿಗೆ ಕಲಿಸಿದನು, ಅನೇಕರು ಅವನಲ್ಲಿ ನಂಬಿಕೆ ಇಟ್ಟರು. ಆಗ ಆ ಜನರು ಸಮಾರ್ಯದ ಸ್ತ್ರೀಗೆ ‘ಇವನ ಮಾತುಗಳನ್ನು ಕೇಳಿದ ನಂತರ ಈ ವ್ಯಕ್ತಿ ನಿಜವಾಗ್ಲೂ ಲೋಕದ ರಕ್ಷಕ ಅಂತ ನಮಗೆ ಗೊತ್ತಾಗಿದೆ’ ಅಂದರು.
“ಬಾಯಾರಿಕೆ ಆದವ್ರೆಲ್ಲ ಬರಲಿ! ಇಷ್ಟ ಇರೋ ಎಲ್ರೂ ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಲಿ.”—ಪ್ರಕಟನೆ 22:17