ಪಾಠ 88
ಯೇಸುವನ್ನು ಬಂಧಿಸಲಾಯಿತು
ಯೇಸು ಮತ್ತವನ ಅಪೊಸ್ತಲರು ಕಿದ್ರೋನ್ ಕಣಿವೆಯ ಮೂಲಕ ಆಲೀವ್ ಮರಗಳ ಗುಡ್ಡಕ್ಕೆ ಹೋದರು. ಈಗಾಗಲೇ ಮಧ್ಯ ರಾತ್ರಿಯಾಗಿತ್ತು. ಆಕಾಶದಲ್ಲಿ ಪೂರ್ಣ ಚಂದಿರನಿದ್ದ. ಅವರು ಗೆತ್ಸೇಮನೆ ತೋಟಕ್ಕೆ ಬಂದರು. ಆಗ ಯೇಸು ಅವರಿಗೆ “ಇಲ್ಲೇ ಇರಿ, ಎಚ್ಚರವಾಗಿರಿ” ಎಂದು ಹೇಳಿದನು. ನಂತರ ಯೇಸು ಸ್ವಲ್ಪ ದೂರ ಹೋಗಿ ಮಂಡಿಯೂರಿ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸಿದನು. ‘ನಿನ್ನ ಇಷ್ಟ ನೆರವೇರಲಿ’ ಅಂದನು. ಆಗ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿ ಅವನನ್ನು ಬಲಪಡಿಸಿದನು. ಯೇಸು ಹಿಂತಿರುಗಿ ಬಂದಾಗ ತನ್ನ ಅಪೊಸ್ತಲರು ನಿದ್ದೆ ಮಾಡುತ್ತಿದ್ದರು. ಆಗ ಯೇಸು ಅವರಿಗೆ ‘ಎದ್ದೇಳಿ! ಇದು ನಿದ್ದೆ ಮಾಡುವ ಸಮಯವಲ್ಲ! ವೈರಿಗಳು ನನ್ನನ್ನು ಹಿಡಿದುಕೊಂಡು ಹೋಗುವ ಸಮಯ ಬಂದಿದೆ’ ಅಂದನು.
ಸ್ವಲ್ಪ ಸಮಯದಲ್ಲೇ ಇಸ್ಕರಿಯೂತ ಯೂದ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಅಲ್ಲಿಗೆ ಬಂದನು. ಯೂದನಿಗೆ ಯೇಸು ಎಲ್ಲಿರುವನು ಎಂದು ಗೊತ್ತಿತ್ತು. ಏಕೆಂದರೆ ಅವನು ಈ ತೋಟಕ್ಕೆ ಅನೇಕ ಸಲ ಯೇಸುವಿನೊಂದಿಗೆ ಬಂದಿದ್ದನು. ‘ಯೇಸು ಯಾರು ಅಂತ ನಾನು ತೋರಿಸಿಕೊಡುತ್ತೇನೆ’ ಎಂದು ಯೂದ ಮೊದಲೇ ಸೈನಿಕರಿಗೆ ಹೇಳಿದ್ದನು. ಅವನು ನೇರವಾಗಿ ಯೇಸುವಿನ ಹತ್ತಿರ ಹೋಗಿ “ರಬ್ಬೀ ನಮಸ್ಕಾರ” ಎಂದು ಮುತ್ತು ಕೊಟ್ಟನು. ಆಗ ಯೇಸು ‘ಯೂದ, ನೀನು ನನಗೆ ಮುತ್ತು ಕೊಟ್ಟು ಮೋಸ ಮಾಡ್ತಿದ್ದೀಯಾ?’ ಅಂದನು.
ಆಮೇಲೆ ಯೇಸು ಮುಂದೆ ಬಂದು ಆ ಗುಂಪಿಗೆ “ಯಾರನ್ನ ಹುಡುಕ್ತಾ ಇದ್ದೀರಾ?” ಅಂದನು ಅದಕ್ಕೆ ಅವರು “ನಜರೇತಿನ ಯೇಸುವನ್ನ” ಅಂದರು. ಅದಕ್ಕೆ ಯೇಸು “ನಾನೇ ಅವನು” ಅಂದನು. ಆಗ ಅವರು ಹಿಂದೆ ಸರಿದು ನೆಲಕ್ಕೆ ಬಿದ್ದರು. ಮತ್ತೆ ಯೇಸು ಆ ಗುಂಪಿಗೆ “ನಿಮಗ್ಯಾರು ಬೇಕು?” ಅಂದನು. ಆಗ ಅವರು ಮತ್ತೆ “ನಜರೇತಿನ ಯೇಸು” ಅಂದರು. ಆಗ ಯೇಸು ‘ನಾನೇ ಯೇಸು ಅಂತ ಹೇಳಿದನಲ್ಲಾ? ಇವರನ್ನ ಹೋಗೋಕೆ, ಬಿಡಿ’ ಅಂದನು.
ಇದನ್ನು ಗಮನಿಸುತ್ತಿದ್ದ ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾ ಪುರೋಹಿತನ ಸೇವಕನಾದ ಮಲ್ಕನ ಕಿವಿಯನ್ನು ಕತ್ತರಿಸಿದನು. ಆದರೆ ಯೇಸು ಅವನ ಕಿವಿಯನ್ನು ಮುಟ್ಟಿ ವಾಸಿ ಮಾಡಿದನು. ನಂತರ ಯೇಸು ಪೇತ್ರನಿಗೆ “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು. ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ” ಅಂದನು. ಆಗ ಸೈನಿಕರು ಯೇಸುವಿನ ಕೈಗಳನ್ನು ಕಟ್ಟಿ ಅವನನ್ನು ಬಂಧಿಸಿದರು. ಇದನ್ನು ನೋಡಿದ ಅಪೊಸ್ತಲರು ಓಡಿ ಹೋದರು. ಆಮೇಲೆ ಆ ಜನರು ಯೇಸುವನ್ನು ಮಹಾ ಪುರೋಹಿತ ಅನ್ನನ ಹತ್ತಿರ ಕರೆದುಕೊಂಡು ಹೋದರು. ಅನ್ನನು ಯೇಸುವನ್ನು ವಿಚಾರಿಸಿ ಮಹಾ ಪುರೋಹಿತ ಕಾಯಫನ ಹತ್ತಿರ ಕಳುಹಿಸಿದನು. ಆದರೆ ಓಡಿ ಹೋದ ಅಪೊಸ್ತಲರಿಗೆ ಏನಾಯಿತು ಗೊತ್ತಾ?
“ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ.”—ಯೋಹಾನ 16:33