ದೇವರ ಮಾರ್ಗಗಳೆಲ್ಲವೂ ನ್ಯಾಯ
“ನಮ್ಮ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:4.
1. ಯೆಹೋವನ ಯಾವ ಗುಣಗಳನ್ನು ಮೋಶೆಯು ತಾನು ಸಾಯುವ ಮುಂಚಿತವಾಗಿ ತನ್ನ ಪದ್ಯದಲ್ಲಿ ಇಸ್ರಾಯೇಲ್ಯರ ಮುಂದೆ ಎತ್ತಿಹೇಳಿದನು, ಮತ್ತು ಆ ರೀತಿಯಾಗಿ ಮಾತಾಡುವದಕ್ಕೆ ಅವನೇಕೆ ಯೋಗ್ಯತೆ ಪಡೆದಿದ್ದನು?
ಸರ್ವ ಶ್ರೇಷ್ಟ ನ್ಯಾಯಾಧಿಪತಿಯೂ, ನೇಮ ವಿಧಾಯಕನೂ, ರಾಜನೂ ಆಗಿರುವ ಯೆಹೋವನು “ನೀತಿ ನ್ಯಾಯಗಳನ್ನು ಪ್ರೀತಿಸುವವ” ನಾಗಿದ್ದಾನೆ. (ಕೀರ್ತನೆ 33:5; ಯೆಶಾಯ 33:22) ನಿಯಮದೊಡಂಬಡಿಕೆಯ ಮಧ್ಯಸ್ಥನಾಗಿದ್ದ ಮತ್ತು “ಯೆಹೋವನೊಂದಿಗೆ ಮುಖಾಮುಖಿಯಾಗಿ ಬಳಿಕೆಯಾಗಿದ್ದ” ಮೋಶೆಗೆ, ಯೆಹೋವನ ನ್ಯಾಯ ಮಾರ್ಗಗಳ ಆಪ್ತ ಪರಿಚಯವಿತ್ತು. (ಧರ್ಮೋಪದೇಶಕಾಂಡ 34:10; ಯೋಹಾನ 1:12) ಯೆಹೋವನ ನ್ಯಾಯದ ಉತ್ಕೃಷ್ಟ ಗುಣಮಟ್ಟದ ಕುರಿತು ಮೋಶೆಯು ತಾನು ಸಾಯುವ ಸ್ವಲ್ಪ ಮುಂಚಿತವಾಗಿ ಬರೆದಿದ್ದನು. ಆಲೈಸುತ್ತಿದ್ದ ಸಕಲ ಇಸ್ರಾಯೇಲ್ಯ ಸಭಿಕರ ಮುಂದೆ ಆತನು ಈ ಪದ್ಯದ ಮಾತುಗಳನ್ನು ಹೇಳಿದನು: “ಆಕಾಶಮಂಡಲವೇ, ನಾನು ಹೇಳುವುದನ್ನು ಕೇಳು; ಭೂಮಂಡಲವೇ, ನನ್ನ ಮಾತುಗಳಿಗೆ ಕಿವಿಗೊಡು. . . . ಯೆಹೋವನ ನಾಮ ಮಹತ್ವವನ್ನು ಪ್ರಕಟಿಸುವೆನು. ನಮ್ಮ ದೇವರನ್ನು ಮಹಾಮಹಿಮನೆಂದು ಕೊಂಡಾಡಿರಿ. ನಮಗೆ ಶರಣನಾದ ದೇವರು ಮಾಡುವದರಲ್ಲಿ ಯಾವ ಕುಂದೂ ಇಲ್ಲ. ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:1, 3, 4.
2. ದೇವರ ಚಟುವಟಿಕೆಗಳೆಲ್ಲಾ ಯಾವಾಗಲೂ ನ್ಯಾಯವಾಗಿದ್ದದ್ದು ಹೇಗೆ, ಮತ್ತು ಇದು ಮಹತ್ವದ್ದೇಕೆ?
2 ಯೆಹೋವನ ಕಾರ್ಯಗಳೆಲ್ಲವೂ ನ್ಯಾಯ, ಮತ್ತು ಅದು ಯಾವಾಗಲೂ ಆತನ ವಿವೇಕ, ಪ್ರೀತಿ, ಮತ್ತು ಶಕ್ತಿಯೊಂದಿಗೆ ಪರಿಪೂರ್ಣ ಹೊಂದಿಕೆಯಲ್ಲಿದೆ. ಯೋಬ 37:23 ರಲ್ಲಿ, ದೇವರ ಸೇವಕ ಎಲೀಹು ಯೋಬನಿಗೆ ನೆನಪು ಕೊಟ್ಟದ್ದು: “ಇಂಥ ಸರ್ವಶಕ್ತನನ್ನು ನಾವು ಕಂಡು ಹಿಡಿಯಲಾರೆವು; ಆತನ ಪರಾಕ್ರಮವು ಬಹಳ. ಆತನು ನ್ಯಾಯವನ್ನಾಗಲಿ ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.” ಮತ್ತು ರಾಜ ದಾವೀದನು ಬರೆದದ್ದು: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ.” (ಕೀರ್ತನೆ 37:28) ಎಂತಹ ಸಾಂತ್ವನದ ಆಶ್ವಾಸನೆಯು! ದೇವರ ಮಾರ್ಗಗಳಲ್ಲೆಲ್ಲಾ ಆತನು ತನ್ನ ನಿಷ್ಟಾವಂತರನ್ನು ಒಂದು ಕ್ಷಣಕ್ಕಾದರೂ ತ್ಯಜಿಸಲಾರನು. ದೇವರ ನ್ಯಾಯವು ಇದಕ್ಕೆ ಖಾತರಿ ಕೊಡುತ್ತದೆ!
ನ್ಯಾಯದ ಕೊರತೆಯೇಕೆ?
3. ಜನರಲ್ಲಿ ಇಂದು ಯಾವುದರ ಕೊರತೆ ಇದೆ, ಮತ್ತು ಇದು ದೇವರೊಂದಿಗೆ ಮನುಷ್ಯನ ಸಂಬಂಧವನ್ನು ಹೇಗೆ ಪ್ರಭಾವಿಸಿದೆ?
3 ಯೆಹೋವನು ನ್ಯಾಯದ ದೇವರೂ, ನ್ಯಾಯವನ್ನು ಪ್ರೀತಿಸುವಾತನೂ, “ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ” ಆಗಿರಲಾಗಿ, ಮನುಷ್ಯರಲ್ಲಿ ಆದರೋ ಇಂದು ನ್ಯಾಯದ ಅಷ್ಟು ಕೊರತೆಯು ಏಕೆ? (ಯೆಶಾಯ 40:28) ಧರ್ಮೋಪದೇಶಕಾಂಡದಲ್ಲಿ ಮೋಶೆ ಉತ್ತರಿಸುವದು: “ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು; ಅವರು ವಕ್ರಬುದ್ಧಿಯುಳ್ಳ ಮೂರ್ಖಜಾತಿಯವರು!” ಮನುಷ್ಯನ ಧ್ವಂಸಕಾರಕ ಚಟುವಟಿಕೆಯು ಅವನನ್ನು ತನ್ನ ನಿರ್ಮಾಣಿಕನಿಂದ ಎಷ್ಟು ಅಗಲಿಸಿದೆಯೆಂದರೆ ದೇವರ ಆಲೋಚನೆಗಳು ಮತ್ತು ಮಾರ್ಗಗಳು ಮನುಷ್ಯನದ್ದಕ್ಕಿಂತ, “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ” ಅಷ್ಟು ಉನ್ನತವಾಗಿವೆ.—ಯೆಶಾಯ 55:8, 9.
4. ಯಾವ ಮಾರ್ಗವನ್ನು ತಕ್ಕೊಳ್ಳಲು ಮನುಷ್ಯನು ಆರಿಸಿದನು, ಮತ್ತು ಇದು ಅವನನ್ನು ಎಲ್ಲಿಗೆ ನಡಿಸಿದೆ?
4 ಮನುಷ್ಯನನ್ನು ದೇವರು ತನ್ನಿಂದ ಸ್ವತಂತ್ರನಾಗಿ ಕಾರ್ಯ ನಡಿಸುವಂತೆ ರಚಿಸಲಿಲ್ಲವೆಂಬದನ್ನು ಎಂದೂ ಮರೆಯದಿರ್ರಿ. ಯೆರೆಮೀಯನು ಪರಿಸ್ಥಿತಿಯನ್ನು ನಮಗೆ ಸರಿಯಾಗಿ ಬೆಲೆ ಕಟ್ಟುತ್ತಾ, ಅಂದದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ ಎಂದು ನನಗೆ ಗೊತ್ತು. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ದೇವರ ನ್ಯಾಯ ಮಾರ್ಗಗಳನ್ನು ಮತ್ತು ಆಡಳಿತವನ್ನು ಮಾನವನು ತಿರಸ್ಕರಿಸಿದರ್ದಿಂದ ಅವನು ತನ್ನನ್ನು, ಒಂದು ಪೂರಾ ಬೇರೆಯಾದ ಹಾಗೂ ಅತ್ಯಂತ ಶಕ್ತಿಯುಕ್ತವಾದ ಅದೃಶ್ಯ ಸೇನೆಗಳಾದ ಪಿಶಾಚನಾದ ಸೈತಾನ ಮತ್ತು ಅವನ ದುರಾತ್ಮಗಳ ಕೆಳಗೆ ಹಾಕಿಕೊಂಡನು. ಅಪೊಸ್ತಲ ಯೋಹಾನನು ಖಚಿತವಾಗಿ ಹೇಳಿದ್ದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದದ್ದೆ.”—1 ಯೋಹಾನ 5:19.
5. ಇಂದು ಲೋಕದಲ್ಲಿ ನ್ಯಾಯದ ಕೊರತೆಯ ಉದಾಹರಣೆಗಳನ್ನು ಕೊಡಿರಿ.
5 ಈ ವಿಷಯ ವ್ಯವಸ್ಥೆಯ ಕಡೇ ದಿನಗಳಲ್ಲಿ ನ್ಯಾಯದ ಕೊರತೆಯ ಒಂದು ಮಾದರಿಯು, 1984 ರಲ್ಲಿ, ಅಮೆರಿಕದ ಅಟೋರ್ನಿ ಜನರಲ್ ವಿಲ್ಯಂ ಫ್ರೆಂಚ್ ಸ್ಮಿಥ್ ಇವರಿಂದ ಒತ್ತಿಹೇಳಲ್ಪಟ್ಟಿತ್ತು. 1977 ಮತ್ತು 1983 ರ ನಡುವೆ 12 ಅಮೆರಿಕನ್ ರಾಜ್ಯಗಳಲ್ಲಿ ಸೆರೆಮನೆಯ ಶಿಕ್ಷೆಯ ಒಂದು ಸಮೀಕ್ಷೆಯ ಮೇಲೆ ಹೇಳಿಕೆ ನೀಡುತ್ತಾ, ಸ್ಮಿಥ್ ಅಂದದ್ದು: “ಘೋರ ಪಾತಕಿಗಳು—ಕೊಲೆಪಾತಕರು, ಹಟಸಂಭೋಗಿಗಳು, ಅಮಲೌಷಧ ಸಾಗಣೆದಾರರು—ಸಾಧಾರಣತರದ ಶಿಕ್ಷಾಪಧಿಯನ್ನು ಪಡೆಯುತ್ತಾರೆ. ಖಾತೆಯ ಅಧ್ಯಯನವು, . . . ಘೋರ ಪಾತಕಿಗಳು ಪುನಃ ಬಿಡುಗಡೆಹೊಂದಿ ಹೊರಗೆ ಹೊಸ ಪಾತಕಗಳನ್ನು ಗೈಯುವುದಕ್ಕೆ ಇದೆಷ್ಟು ಸುಲಭ ಎಂಬದನ್ನು ತೋರಿಸಿದೆ.” ವಾಷಿಂಗ್‌ಟನ್ ನ್ಯಾಯಾಂಗ ಸಂಘದ ಪೌಲ್ ಕ್ಯಾಮೆನರ್ ಅಂದದ್ದು: “ನ್ಯಾಯಾಂಗ ವ್ಯವಸ್ಥೆಯ ಬಹಳಷ್ಟು ಸಲ ಸಡಿಲಾಗಿಯೇ ಇದೆ.”
6. (ಎ) ಯೆಹೂದದ ಬಂಧಿವಾಸದ ಮೊದಲು ಅದರ ನೈತಿಕ ಸ್ಥಿತಿಗತಿಯು ಹೇಗಿತ್ತು? (ಬಿ) ಯಾವ ಪ್ರಶ್ನೆಗಳನ್ನು ಹಬಕ್ಕೂಕನು ಹಾಕಿದನು, ಮತ್ತು ಅವು ಇಂದು ಅನ್ವಯಿಸುತ್ತವೂ?
6 ಸಾ.ಶ.ಪೂ. 607 ರಲ್ಲಿ ಬಬಿಲೋನ್ಯ ಸೇನೆಯಿಂದ ಪತನಗೊಳ್ಳುವ ಮುಂಚೆ ಯೆಹೂದ ಜನಾಂಗದಲ್ಲೆಲ್ಲೂ ನ್ಯಾಯವು ಸಡಿಲಾಗಿತ್ತು. ದೇವರ ಪ್ರವಾದಿಯಾದ ಹಬಕ್ಕೂಕನು ಹೀಗನ್ನಲು ದೇವರಿಂದ ಪ್ರೇರಿತನಾದನು: “ಧರ್ಮೋಪದೇಶವು ಜಡವಾಗಿದೆ. ನ್ಯಾಯವು ಎಂದಿಗೂ ಸಾಗದು. ದುಷ್ಟನು ಶಿಷ್ಟನನ್ನು ಸುತ್ತಿಕೊಂಡಿದ್ದಾನೆ. ಆದುದರಿಂದ ಸಾಗುವ ನ್ಯಾಯವು ವಕ್ರವೇ.” (ಹಬಕ್ಕೂಕ 1:4) ಈ ಅನ್ಯಾಯದ ಪರಿಸ್ಥಿತಿಯು ಪ್ರವಾದಿಯು ಯೆಹೋವನನ್ನು ಹೀಗೆ ಕೇಳುವಂತೆ ಮಾಡಿತು: “ಕೆಡುಕನ್ನು ಕಟಾಕ್ಷಿಸಲಾರದವನೇ, ದುಷ್ಟನು ತನಗಿಂತ ಯೋಗ್ಯರನ್ನು ನುಂಗಿ ಬಿಡುವಾಗ ಏಕೆ ಸುಮ್ಮನಿದ್ದೀ?” (ಹಬಕ್ಕೂಕ 1:13) ಇಂದು ಮಾನವ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅನ್ಯಾಯದ ಕೃತ್ಯಗಳಿಂದ ಪರಿಣಾಮ ಹೊಂದಿದ ಜನರು ಸಹಾ ಇದೇ ರೀತಿ ಕೇಳಬಹುದು: “ನ್ಯಾಯನೀತಿಯುಳ್ಳ ದೇವರು ಲೋಕದಲ್ಲಿ ನಡಿಯುತ್ತಿರುವ ಅನ್ಯಾಯವನ್ನು ಏಕೆ ಕಟಾಕ್ಷಿಸುತ್ತಿದ್ದಾನೆ? ‘ನ್ಯಾಯವು ವಕ್ರವಾಗಿ’ ಹೋಗುತ್ತಿರುವುದೇಕೆ? ಆತನು ಏಕೆ “ಸುಮ್ಮನಾಗಿದ್ದಾನೆ”? ಇವು ಮಹತ್ವದ ಪ್ರಶ್ನೆಗಳು, ದೇವರ ಅಮೂಲ್ಯ ವಾಕ್ಯವಾದ ಬೈಬಲು ಮಾತ್ರವೇ ಇವಕ್ಕೆ ಸತ್ಯವೂ ತೃಪ್ತಿಕರವೂ ಆದ ಉತ್ತರವನ್ನು ಕೊಡಬಲ್ಲದು.
ದೇವರು ಅನ್ಯಾಯವನ್ನು ಅನುಮತಿಸಿರುವುದೇಕೆ
7. (ಎ)ದೇವರು ಕೊಟ್ಟ ಪ್ರಮೋದವನವನ್ನು ಮನುಷ್ಯನು ಕಳಕೊಂಡದ್ದೇಕೆ? (ಬಿ) ಏದೇನಿನಲ್ಲಿ ಯಾವ ವಾಗ್ವಾದಗಳು ಎಬ್ಬಿಸಲ್ಪಟ್ಟವು, ಮತ್ತು ಅವಕ್ಕೆ ದೇವರ ನ್ಯಾಯವು ಹೇಗೆ ಪ್ರತಿಕ್ರಿಯೆ ತೋರಿಸಿತು?
7 ದೇವರ ಕಾರ್ಯಗಳು ಪರಿಪೂರ್ಣವಾಗಿವೆ, ಮೋಶೆಯು ಅದಕ್ಕೆ ಸಾಕ್ಷಿ ನುಡಿದಿದ್ದಾನೆ. ಏದೆನ್ ಪ್ರಮೋದವನದಲ್ಲಿ ದೇವರಿಟ್ಟ ಪರಿಪೂರ್ಣ ಮಾನವ ಜತೆಯ ವಿಷಯದಲ್ಲೂ ಇದು ಸತ್ಯ. (ಆದಿಕಾಂಡ 1:26, 27; 2:7) ಆ ಇಡೀ ಏರ್ಪಾಡು ಮಾನವಕುಲದ ಸೌಖ್ಯಕ್ಕಾಗಿ ಮತ್ತು ಸಂತೋಷಕ್ಕಾಗಿ ಪರಿಪೂರ್ಣವಾಗಿತ್ತು. ದೈವಿಕ ದಾಖಲೆಯು ನಮಗನ್ನುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ಆದರೆ ಏದೇನಿನ ಪ್ರಶಾಂತಿಯು ಬಹಳ ಕಾಲ ಬಾಳಲಿಲ್ಲ. ದಂಗೆಖೋರ ಆತ್ಮಿಕ ಜೀವಿಯ ಪ್ರಭಾವದ ಕೆಳಗೆ, ಹವ್ವ ಮತ್ತು ಅವಳ ಪತಿ ಆದಾಮನು, ದೇವರು ತಮ್ಮನ್ನಾಳುವ ವಿಧಾನವು ಸರಿಯಲ್ಲವೆಂಬ ವಾಗ್ವಾದವನ್ನು ಎಬ್ಬಿಸಿದರು. ದೇವರು ಅವರಿಗೆ ಕೊಟ್ಟ ನಿಯಮಗಳ ಯುಕ್ತತೆಯ ವಿಷಯದಲ್ಲಿ ಈಗ ಸಂದೇಹವೆದ್ದಿತು. (ಆದಿಕಾಂಡ 3:1-6) ದೇವರ ಆಳಿಕೆಯ ನ್ಯಾಯತದ್ವ ಕುರಿತಾದ ಈ ಆಕ್ಷೇಪವು ಮಹತ್ವದ ನೈತಿಕ ಪ್ರಶ್ನೆಗಳನ್ನು ಎಬ್ಬಿಸಿದವು. ದೇವರ ಸೃಷ್ಟಿಜೀವಗಳೆಲ್ಲರ ಸಮಗ್ರತೆಯು ಸಹಾ ಈಗ ಸಂದೇಹಕ್ಕೆ ಒಳಗಾಯಿತೆಂದು ನಂಬಿಗಸ್ತ ಮನುಷ್ಯನಾದ ಯೋಬನ ಚಾರಿತ್ರಿಕ ದಾಖಲೆಯು ಸೂಚಿಸುತ್ತದೆ. ಸಾರ್ವತ್ರಿಕ ಮಹತ್ವದ ಈ ಪ್ರಶ್ನೆಗಳು ಇತ್ಯರ್ಥವಾಗುವಂತೆ ನ್ಯಾಯವು ಕೇಳಿಕೊಂಡಿತು.—ಯೋಬ 1:6-11; 2:1-5; ಲೂಕ 22:31ನ್ನೂ ನೋಡಿ.
8. (ಎ) ಯಾವ ವಿಪತ್ಕಾರಕ ಪರಿಸ್ಥಿತಿಯಲ್ಲಿ ಮನುಷ್ಯನು ತನ್ನನ್ನು ಕಂಡುಕೊಂಡನು? (ಬಿ) ಮೋಶೆಯ ಪದ್ಯದಲ್ಲಿ ಯಾವ ಆಶಾಕಿರಣವು ತೋರಿಬಂದಿದೆ?
8 ದೇವರ ನ್ಯಾಯ ಮಾರ್ಗಗಳನ್ನು ತ್ಯಜಿಸಿದರಿಂದಾಗಿ ಮಾನವ ಕುಲದ ಮೇಲೆ ಬಂದ ವಿಪತ್ಕಾರಕ ಪರಿಸ್ಥಿತಿಯನ್ನು ರೋಮಾಪುರ 8:22 ರಲ್ಲಿ ಪೌಲನು ಸಂಕ್ಷೇಪಿಸಿದ್ದಾನೆ. ಅಲ್ಲಿ ಅಪೊಸ್ತಲನು ಬರೆದದ್ದು: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವ ವೇದನೆಪಡುತ್ತಾ ಇರುತ್ತದೆ.” ಅಂಥ “ನರಳಾಟ” ಮತ್ತು “ವೇದನೆ” ಹೆಚ್ಚಾಗಿ ಮಾನವರ ನಡುವಣ ಅನ್ಯಾಯದ ಕಾರಣದಿಂದಲೇ ಉಂಟಾಗಿದೆ, ಯಾಕಂದರೆ ಮನುಷ್ಯನು “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನು” ತಂದಿರುತ್ತಾನೆ. (ಪ್ರಸಂಗಿ 8:9) ಆದರೆ ನ್ಯಾಯದ ಇಂತಹ ವಕ್ರತೆಯು ಸದಾ ಮುಂದರಿಯುವಂತೆ ಬಿಡಲಾರನು ಎಂಬದಕ್ಕಾಗಿ ಸರ್ವ ಶಕ್ತನಾದ ದೇವರಿಗೆ ಉಪಕಾರ ಹೇಳಬೇಕು! ಈ ವಿಷಯವಾಗಿ ಮೋಶೆಯು ಧರ್ಮೋಪದೇಶಕಾಂಡ 32:40, 41 ರ ತನ್ನ ಪದ್ಯದಲ್ಲಿ ಇನ್ನೇನು ಹೇಳಿದ್ದಾನೆ ಎಂಬದನ್ನು ಗಮನಿಸಿರಿ: “ನಾನು [ಯೆಹೋವನು] ಸದಾ ಕಾಲವೂ ಜೀವಿಸುವವನು ಎಂಬದು ಎಷ್ಟು ನಿಶ್ಚಯವೂ ಅಷ್ಟು ಖಂಡಿತವಾಗಿ ಪ್ರಮಾಣ ಮಾಡುವೆನು ಏನಂದರೆ—ಥಳಥಳಿಸುವ ನನ್ನ ಕತ್ತಿಯನ್ನು ಹದ ಮಾಡಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಮುಂಗೊಂಡಾಗ ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿ ದಂಡನೆ ಮಾಡುವೆನು.”
9. ಮನುಷ್ಯನು ದಂಗೆ ಎದ್ದಾಗ, ಯೆಹೋವನ ಹಸ್ತವು “ನ್ಯಾಯವನ್ನು ಸ್ಥಾಪಿಸಿದ್ದು” ಹೇಗೆಂದು ವಿವರಿಸಿರಿ.
9 ಯೆಹೋವನ ಹಸ್ತವು ಅಲ್ಲಿ ಪೂರ್ವದ ಏದೇನಿನಲ್ಲಿ, “ನ್ಯಾಯವನ್ನು ಸ್ಥಾಪಿಸಿತು.” ದೇವರ ಆಜ್ಞೆಯನ್ನು ಬುದ್ಧಿ ಪೂರ್ವಕವಾಗಿ ಮೀರಿದ ಆದಾಮನಿಗೆ ನ್ಯಾಯಶೀಲ ದೇವರು ತಡವಿಲ್ಲದೆ ಮರಣ ಶಿಕ್ಷೆಯನ್ನು ವಿಧಿಸಿದನು. ಆತನು ಆದಾಮನಿಗೆ ಹೇಳಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರ ತಕ್ಕವನಾಗಿದ್ದೀ.” (ಆದಿಕಾಂಡ 3:19) ಆದಾಮನ ಪಾಪ ಪೂರ್ಣ ಮಾರ್ಗದಿಂದಾಗಿ ಇಡೀ ಮಾನವ ಕುಟುಂಬದ ಮೇಲೆ ಬಂದ ಕೆಟ್ಟ ಪರಿಣಾಮಗಳನ್ನು ಶತಮಾನಗಳ ನಂತರ, ಅಪೊಸ್ತಲ ಪೌಲನು ಸಾರಾಂಶದಲ್ಲಿ ಬರೆದದ್ದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಈ ಲೋಕದೊಳಗೆ ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
10. ಆದಾಮನ ದಂಗೆಯಂದಿನಿಂದ ಯಾವ ಎರಡು ಸಂತತಿಗಳು ವಿಕಸಿಸಿವೆ, ಮತ್ತು ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನು?
10 ಮನುಷ್ಯನ ದಂಗೆಯನ್ನು ಹಿಂಬಾಲಿಸಿ, ದೇವರು ಇದನ್ನೂ ನುಡಿದನು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15, 17-19) ಈ ಎರಡು ಸಂತಾನಗಳ ವಿಕಾಸವು 6000 ವರ್ಷಗಳ ತನಕ ಮುಂದರಿಯಿತು, ಮತ್ತು ಅವುಗಳ ನಡುವೆ ಯಾವಾಗಲೂ “ಹಗೆತನ” ಅಸ್ತಿತ್ವದಲ್ಲಿತ್ತು. ಆದರೆ ಲೋಕದ ಬದಲಾಗುತ್ತಿರುವ ದೃಶ್ಯವೆಲ್ಲಾದರ ನಡುವೆ, ಯೆಹೋವನ ನ್ಯಾಯದ ಮಾರ್ಗಗಳು ಮಾತ್ರ ಬದಲಾಗಿರುವದಿಲ್ಲ. ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ ಆತನಂದದ್ದು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ.” ಇದು, ಅಸಂಪೂರ್ಣ ಮತ್ತು ದಂಗೆಖೋರ ಮಾನವರೊಂದಿಗೆ ದೇವರು ವ್ಯವಹರಿಸುವ ರೀತಿಯು ಯಾವಾಗಲೂ ನ್ಯಾಯವೆಂಬದಕ್ಕೆ ಖಾತರಿಯನ್ನು ಕೊಡುತ್ತದೆ. ಒಮ್ಮೆಯಾದರೂ ಯೆಹೋವನು ತನ್ನ ಉತ್ಕೃಷ್ಟ, ನೀತಿಯ ತತ್ವಗಳನ್ನು ಬದಲಾಯಿಸಿರುವುದಿಲ್ಲ, ಅವನ್ನು ಯಾವಾಗಲೂ ತನ್ನ ಆಶ್ಚರ್ಯಕರ ಗುಣಗಳಾದ ವಿವೇಕ, ಪ್ರೀತಿ ಮತ್ತು ಶಕ್ತಿಯೊಂದಿಗೆ ಹೊಂದಿಕೆಯಾಗಿರಿಸಿದ್ದಾನೆ.
ದೇವರು ಮನುಷ್ಯನ ಉದ್ಧಾರಕ್ಕೆ ಬಂದದ್ದು
11, 12. ಮಾನವನ ಅವಸ್ಥೆಯನ್ನು ಕೀರ್ತನೆ 49 ಹೇಗೆ ಚೆನ್ನಾಗಿ ವರ್ಣಿಸುತ್ತದೆ?
11 ಒಂದು ದೊಡ್ಡ ಅಕ್ಟೊಪಾಸದ ಸ್ಪರ್ಷಾಂಗಗಳಂತೆ, ಸೈತಾನನ ದುಷ್ಟ ಪ್ರಭಾವವು, ಇಡೀ ಮಾನವ ಕುಟುಂಬವನ್ನು ಆಲಂಗಿಸಲು ಚಾಚಿಕೊಂಡಿರುತ್ತದೆ. ಆಹಾ, ಮಾನವರಿಗೆ ತಮ್ಮ ಮೇಲಿರುವ ಮರಣ ಶಿಕ್ಷೆಯಿಂದ ಮಾತ್ರವೇ ಅಲ್ಲ, ಅಸಂಪೂರ್ಣ ಮಾನವ ಅಧಿಪತಿಗಳ ನ್ಯಾಯರಹಿತ ವ್ಯವಸ್ಥೆಯಿಂದಲೂ ಮುಕ್ತರಾಗಲು ಎಷ್ಟೊಂದು ತೀವ್ರ ಅಗತ್ಯತೆಯು ಅಲ್ಲಿದೆ!
12 ಮನುಷ್ಯನ ಮೇಲೆ ಮರಣ ಶಿಕ್ಷೆಯು ವಿಧಿಸಿದಂದಿನಿಂದ ಅವನ ಮೇಲೆ ಬಂದ ಭಯಾನಕ ಪರಿಸ್ಥಿತಿಯು ಕೋರಹನ ಮಕ್ಕಳ ಈ ಕೀರ್ತನೆಯಲ್ಲಿ ಚೆನ್ನಾಗಿ ತಿಳಿಸಲ್ಪಟ್ಟಿದೆ: “ಸಕಲ ದೇಶಗಳವರೇ, ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕಿವಿಗೊಡಿರಿ. ಜನಗಳೇ, ಜನಾಧಿಪತಿಗಳೇ, ಬಡವರೇ, ಬಲ್ಲಿದರೇ, ನೀವೆಲ್ಲರೂ ಒಂದಾಗಿ ಬಂದು ಆಲೈಸಿರಿ. ಯಾವನಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು (ಅವರ ಪ್ರಾಣದ ಮುಕ್ತತೆಯ ಬೆಲೆಯನ್ನು) ಕೊಟ್ಟು ಅವರ ಪ್ರಾಣವನ್ನು ಬಿಡಿಸಲಾರನು.” (ಕೀರ್ತನೆ 49:1, 2, 7-9) ಇವೆಲ್ಲವೂ ಏರ್ಪಡಿಸಲ್ಪಟ್ಟದ್ದು ದೇವರ ನ್ಯಾಯದ ವ್ಯಕ್ತಪಡಿಸುವಿಕೆಯಿಂದಲೇ.
13, 14. (ಎ) ಯಾರು ಮಾತ್ರವೇ ಮನುಷ್ಯನನ್ನು ಉದ್ಧರಿಸಶಕ್ತನಿದ್ದನು, ಮತ್ತು ದೇವರಿಂದ ಆರಿಸಲ್ಪಟ್ಟವನು ಅಷ್ಟು ಯಥೋಚಿತನೇಕೆ? (ಬಿ) ದೇವರ ವಾಗ್ದಾನಗಳು ಯೇಸುವಿನಲ್ಲಿ “ದೃಢ”ವಾಗುವುದು ಹೇಗೆ?
13 ಹೀಗಿರಲಾಗಿ, ಸಹಾಯವು ಎಲ್ಲಿಂದ ಬರಬಲ್ಲದು? ಮರಣದ ಪಾಶದಿಂದ ಮನುಷ್ಯನನ್ನು ಪಾರುಗೊಳಿಸಶಕ್ತನು ಯಾರು? ಕೀರ್ತನೆ ಉತ್ತರಿಸುವುದು: “ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ (ಶಿಯೋಲ್) ತಪ್ಪಿಸುವನು.” (ಕೀರ್ತನೆ 49:15) ದೇವರ ಮಹಾ ಪ್ರೀತಿಯು ಮಾತ್ರವೇ, ಆತನ ನ್ಯಾಯದೊಂದಿಗೆ ಹೊಂದಿಕೆಯಲ್ಲಿ ಕಾರ್ಯನಡಿಸಿ, “ಮೃತ್ಯುಹಸ್ತದಿಂದ” ಮನುಷ್ಯನನ್ನು ಬಿಡಿಸಬಲ್ಲದು. ನಮ್ಮ ಪ್ರಶ್ನೆಗಳಿಗೆ ಇನ್ನಷ್ಟು ಉತ್ತರವು, ಯೇಸು ಮತ್ತು ಆ ಜಾಗರೂಕ ಫರಿಸಾಯ ನಿಕೊದೇಮನ ನಡುವಣ ರಾತ್ರಿವೇಳೆಯ ಸಂಭಾಷಣೆಯಲ್ಲಿ ನೀಡಲ್ಪಟ್ಟಿದೆ. ಯೇಸು ಅವನಿಗೆ ಅಂದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು, ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಈ ದೇವರ ಕುಮಾರನು ಭೂಮಿಗೆ ಬರುವ ಮೊದಲು ಪರಲೋಕದಲ್ಲಿ ತನ್ನ ತಂದೆಯ ಬಳಿಯಲ್ಲಿದ್ದನು. ಮನುಷ್ಯ ಪೂರ್ವದ ಈ ಅಸ್ತಿತ್ವದಲ್ಲಿ ಆತನು “ಮಾನವ ಸಂತಾನದವರಲ್ಲಿ ಹರ್ಷಿಸಿದ್ದನು” ಎಂದು ಹೇಳಲಾಗಿದೆ. (ಜ್ಞಾನೋಕ್ತಿ 8:31) ಹಾಗಾದರೆ, ಈ ವಿಶಿಷ್ಟ ಆತ್ಮಿಕ ಜೀವಿಯನ್ನು—ತನ್ನ ಏಕಜಾತ ಪುತ್ರನನ್ನು—ಮಾನವ ಕುಟುಂಬದ ಉದ್ಧಾರಕ್ಕಾಗಿ ಯೆಹೋವನು ಆರಿಸಿಕೊಂಡದ್ದು ಅದೆಷ್ಟು ಯಥೋಚಿತವು!
14 ಯೇಸುವಿನ ಕುರಿತು ಪೌಲನು ಹೇಳಿದ್ದು: “ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೀ ದೃಢವಾಗುತ್ತವೆ.” (2 ಕೊರಿಂಥ 1:20) ಪ್ರವಾದಿಯಾದ ಯೆಶಾಯನಿಂದ ದಾಖಲೆಯಾದ ಈ ವಾಗ್ದಾನಗಳಲ್ಲಿ ಒಂದು, ಮತ್ತಾಯ 12:18, 21 ರಲ್ಲಿ ನಿರ್ದೇಶಿತವಾಗಿದ್ದು, ಯೇಸುವಿನ ಕುರಿತು ನಾವಲ್ಲಿ ಓದುವುದು: “ಇಗೋ, ನನ್ನ ಸೇವಕನು; ಈತನನ್ನು ನಾನು ಆರಿಸಿಕೊಂಡೆನು. ಈತನು ನನಗೆ ಇಷ್ಟನು; ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು. ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.”—ಯೆಶಾಯ 42:1-4 ನೋಡಿ.
15, 16. ಯೇಸುವಿಗೆ ಆದಾಮನ ಸಂತತಿಯ “ನಿತ್ಯನಾದ ತಂದೆ” ಯಾಗಲು ಹೇಗೆ ಸಾಧ್ಯವಾಯಿತು?
15 ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ, ಎಲ್ಲಾ ಜನಾಂಗಗಳ ಜನರು ಕಟ್ಟಕಡೆಗೆ ತನ್ನ ನಾಮದಲ್ಲಿ ನಿರೀಕ್ಷೆ ಇಡುವರು ಮತ್ತು ಹೀಗೆ, ದೇವರ ನ್ಯಾಯವಿಧಿಯ ಪ್ರಯೋಜನದಲ್ಲಿ ಆನಂದಿಸುವರು ಎಂದು ಯೇಸು ಸ್ಪಷ್ಟ ಪಡಿಸಿದ್ದನು. “ಮನುಷ್ಯಕುಮಾರನು ಸೇವೆ ಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾಯ 20:28) ಇಸ್ರಾಯೇಲ್ಯ ಜನಾಂಗಕ್ಕೆ ದೇವರು ಕೊಟ್ಟ ಪರಿಪೂರ್ಣ ನಿಯಮವು “ಪ್ರಾಣಕ್ಕೆ ಬದಲಾಗಿ ಪ್ರಾಣವನ್ನು” ಕೇಳಿತ್ತು. (ಧರ್ಮೋಪದೇಶಕಾಂಡ 19:21) ಆದಕಾರಣ, ಯೇಸು ತನ್ನ ಪರಿಪೂರ್ಣ ಜೀವವನ್ನು ಮರಣದಲ್ಲಿ ಒಪ್ಪಿಸಿಕೊಟ್ಟ ನಂತರ ಮತ್ತು ಪರಲೋಕಕ್ಕೆ ಹಿಂದೆ ಏರಿಹೋಗಲು ದೇವರ ಶಕಿಯ್ತಿಂದ ಪುನರುತ್ಥಾನವಾದಾಗ, ತನ್ನ ಪರಿಪೂರ್ಣ ಮಾನವ ಜೀವದ ಬೆಲೆಯನ್ನು ಆದಾಮನ ಜೀವದ ಹಕ್ಕುಗಳಿಗೆ ಬದಲೀಯಾಗಿ ಯೆಹೋವನಿಗೆ ನೀಡಲು ಶಕ್ತನಾದನು. ಈ ರೀತಿಯಲ್ಲಿ, ಯೇಸುವು “ಕಡೇ (ಅಥವಾ ಎರಡನೇ) ಆದಾಮ”ನಾದನು ಮತ್ತು ಈಗ ಆದಾಮನ ನಂಬುವ ಸಂತತಿಗೆಲ್ಲಾ “ನಿತ್ಯನಾದ ತಂದೆಯಾಗಿ” ಕ್ರಿಯೆ ನಡಿಸಲು ಅಧಿಕಾರವನ್ನು ಪಡೆದನು.—1 ಕೊರಿಂಥ 15:45; ಯೆಶಾಯ 9:6.
16 ತನ್ನ ಕುಮಾರನಾದ ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ಪ್ರೀತಿಯ ಒದಗಿಸುವಿಕೆಯ ಮೂಲಕ ದೇವರ ರಕ್ಷಣಾ ಮಾರ್ಗವು ಹೀಗೆ, ‘ಅನ್ಯ ಜನಗಳಿಗೆ ಸಾರಲಾಯಿತು.’ ಮತ್ತು ಅದು ಖಂಡಿತವಾಗಿಯೂ ದೈವಿಕ ನ್ಯಾಯವಿಧಿಯಾಗಿದೆ. ‘ನಮ್ಮ ಪ್ರಾಣವನ್ನು ಮೃತ್ಯುಹಸ್ತದಿಂದ (ಶಿಯೋಲ್) ತಪ್ಪಿಸಲು’ ದೇವರು ಈ ಮಾರ್ಗವನ್ನು ಒದಗಿಸಿದ್ದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು!
ಈಡನ್ನು ಎತ್ತಿಹಿಡಿಯುವುದು
17, 18. 1870 ರ ವರ್ಷಗಳಲ್ಲಿ ಯಾವ ಪಾಲುಗಾರಿಕೆಯೊಳಗೆ ಸಿ.ಟಿ. ರಸ್ಸೆಲರು ಪ್ರವೇಶಿಸಿದರು, ಮತ್ತು 1878 ರಲ್ಲಿ ಬಾರ್ಬರ್ ಅವರನ್ನು ಅಚ್ಚರಿಗೊಳಿಸಿದ್ದು ಹೇಗೆ?
17 ಯೆಹೋವನ ಸಾಕ್ಷಿಗಳು ಆಧುನಿಕ ಕಾಲದಲ್ಲಿ ಯೇಸು ಕ್ರಿಸ್ತನ ವಿಮೋಚನಾ ಬಲಿದಾನದ ಬೋಧನೆಯನ್ನು, ಒಂದನೇ ಶತಕದ ಕ್ರೈಸ್ತರಂತೆ, ಯಾವಾಗಲೂ ಎತ್ತಿಹಿಡಿದಿದ್ದಾರೆ. ವಾಚ್‌ಟವರ್ ಸೊಸೈಟಿಯ ಮೊದಲನೆ ಅಧ್ಯಕ್ಷರಾದ ಚಾರ್ಲ್ಸ್ ಟೇಸ್ ರಸ್ಸೆಲ್‌ರು ಒಮ್ಮೆ ಹೆರಲ್ಡ್ ಆಫ್ ದ ಮಾರ್ನಿಂಗ್ ಎಂಬ ಧಾರ್ಮಿಕ ಪತ್ರಿಕೆಯ ಉಪಸಂಪಾದಕರೂ, ಆರ್ಥಿಕ ಬೆಂಬಲಿಗರೂ ಆಗಿದ್ದರೆಂಬದನ್ನು ನೆನಪಿಸುವದು ಕುತೂಹಲಕಾರಿ. ಆ ಪತ್ರಿಕೆಯ ಮೂಲ ಪ್ರಕಾಶಕರು ಎಡ್ವೆಂಟಿಸ್ಟ್ ಪಂಗಡದ, ಅಮೆರಿಕದ ನ್ಯೂಯೋರ್ಕ್-ರಾಚೆಸ್ಟರ್‌ನ ಎನ್.ಎಚ್. ಬಾರ್ಬರ್ ಆಗಿದ್ದರು. ರಸ್ಸೆಲರು ತಮ್ಮ 20 ರ ವಯಸ್ಸಲಿದ್ದರು, ಆದರೆ ಬಾರ್ಬರ್ ಹೆಚ್ಚು ವಯಸ್ಸಾಗಿದ್ದವರಾಗಿದ್ದರು.
18 ಆ ಪಾಲುಗಾರಿಕೆ 1878ರ ತನಕ ಸುಗಮವಾಗಿ ಸಾಗುವಂತೆ ಕಂಡಿತು, ಆದರೆ ಆಗ ಒಮ್ಮೆಲೇ ಬಾರ್ಬರ್, ವಿಮೋಚನೆಯ ಬೋಧನೆಯನ್ನು ಅಲ್ಲಗಳೆದ ಲೇಖನವೊಂದನ್ನು ಪ್ರಕಟಿಸಿದರು. ಸಂಭವಿಸಿದ ಸಂಗತಿಯನ್ನು ವಿವರಿಸುತ್ತಾ, ರಸ್ಸೆಲ್ ಅಂದದ್ದು: “ಶ್ರೀ ಬಾರ್ಬರ್ . . . ದ ಹೆರಾಲ್‌ಲ್ಲಿ ಪ್ರಾಯಶ್ಚಿತ್ತವನ್ನು ಅಲ್ಲಗಳೆದು—ಕ್ರಿಸ್ತನ ಮರಣವು ಆದಾಮನಿಗೆ ಮತ್ತು ಅವನ ಸಂತತಿಗೆ ವಿಮೋಚನೆಯ ಬೆಲೆಯಾಗ ಸಾಧ್ಯವಿಲ್ಲವೆನ್ನುತ್ತಾರೆ. ಹೇಗೆ ನೊಣವೊಂದಕ್ಕೆ ಸೂಜಿಯನ್ನು ಚುಚ್ಚಿ ಅದಕ್ಕೆ ಯಾತನೆ ಮತ್ತು ಮರಣವನ್ನು ಬರಮಾಡುವುದು ತನ್ನ ಮಗುವಿನ ಅಪರಾಧಕ್ಕೆ ನ್ಯಾಯಬದ್ದ ಪ್ರಾಯಶ್ಚಿತ್ತವೆಂದು ಐಹಿಕ ಹೆತ್ತವನು ನೆನಸಲಾರನೋ ಹಾಗೆಯೇ, ನಮ್ಮ ಕರ್ತನ ಮರಣವು ಮನುಷ್ಯನ ಪಾಪಗಳಿಗೆ ಪ್ರಾಯಶ್ಚಿತ್ತ ಕೊಡುವಷ್ಟು ಲಭ್ಯವಲ್ಲವೆಂದು ಅವರನ್ನುತ್ತಾರೆ.”
19. (ಎ) ವಿಮೋಚನೆಯ ಕುರಿತು ಬಾರ್ಬರ್‌ರ ನೋಟಕ್ಕೆ ರಸ್ಸೆಲರ ಪ್ರತಿವರ್ತನೆಯೇನಾಗಿತ್ತು? (ಬಿ) ಕಾವಲಿನಬುರುಜು ಸಂಬಂಧವಾದ ರಸ್ಸೆಲ್‌ರ ಇಚ್ಛೆಯು ಪೂರೈಸಿತೋ?
19 ರಸ್ಸೆಲ್ ತನಗಿಂತ ವಯಸ್ಕ ಜೊತೆಗಾರನಿಂದ ಪ್ರಭಾವಿಸಲ್ಪಡ ಸಾಧ್ಯವಿತ್ತು, ಆದರೆ ಬಾಗಲಿಲ್ಲ. ಕೆಲವಾರು ತಿಂಗಳುಗಳ ತನಕ ಪತ್ರಿಕೆಯಲ್ಲಿ, ಬಾರ್ಬರ್ ವಿಮೋಚನೆಯನ್ನು ಅಲ್ಲಗಳೆದ ಮತ್ತು ರಸ್ಸೆಲ್ ಅದರ ಪರವಾಗಿ ಬರೆದ, ವಾಗ್ವಾದಗಳು ಮುಂದರಿದವು. ಕೊನೆಗೆ ರಸ್ಸೆಲ್, ಬಾರ್ಬರ್ ಜೊತೆಯ ಯಾವುದೇ ಸಹವಾಸವನ್ನು ಹಿಂತೆಗೆದರು ಮತ್ತು ಆಗ ಜಯನ್ಸ್ ವಾಚ್‌ಟವರ್ ಎಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಫ್ರೆಸೆನ್ಸ್ ಎಂಬ ಹೆಸರಿದ್ದ, ಈ ಪತ್ರಿಕೆಯನ್ನು ಆರಂಭಿಸಿದರು. ಆ ಹೊಸ ಪತ್ರಿಕೆಯ ಕುರಿತು ಸಿ.ಟಿ. ರಸ್ಸೆಲ್ ಈ ಅನಿಸಿಕೆಯನ್ನು ವ್ಯಕ್ತಪಡಿಸಿದರು: “ಮೊದಲಿನಿಂದಲೂ, ಅದು ವಿಮೋಚನೆಯನ್ನು ವಿಶೇಷವಾಗಿ ಘೋಷಿಸಿತ್ತು. ಮತ್ತು ದೇವರ ದಯೆಯಿಂದ, ಕೊನೆಯ ವರೆಗೂ ಹಾಗೆ ಮಾಡುವದೆಂದು ನಮ್ಮ ನಿರೀಕ್ಷೆ.” ಸಂಪಾದಕ ರಸ್ಸೆಲರ ಆ ನಿರೀಕ್ಷೆಯು ಪೂರೈಸಿತೋ? ಖಂಡಿತವಾಗಿಯೂ ಪೂರೈಸಿತು! ಈ ಸಂಚಿಕೆಯು ತಾನೇ, ತನ್ನ 2ನೇ ಪುಟದ ವಿವರಣೆಯಲ್ಲಿ, “ಯಾರ ಸುರಿದ ರಕ್ತವು ಮಾನವ ಕುಲಕ್ಕೆ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ತೆರೆದಿದೆಯೋ ಆ ಈಗಾಳುವ ರಾಜನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವಂತೆ ಪತ್ರಿಕೆಯು ಉತ್ತೇಜಿಸುತ್ತದೆ.”
20. ಯಾವ ಪ್ರಶ್ನೆಗಳು ಇನ್ನೂ ಉತ್ತರಿಸದೆ ಉಳಿದಿವೆ?
20 ಈ ವರೆಗೆ ನಮ್ಮ ಚರ್ಚೆಯಲ್ಲಿ, ಮಾನವ ಕುಲದ ಮೇಲೆ ನೆಲೆಸಿರುವ ಪಾಪ ಮತ್ತು ಮರಣದ ಶಾಪದಿಂದ ಮಾನವರನ್ನು ಬಿಡಿಸುವ ಸಾಧನದ ಕೇಳಿಕೆಯಲ್ಲಿ, ದೇವರ ನ್ಯಾಯದ ಮಾರ್ಗವನ್ನು ನಾವು ಚರ್ಚಿಸಿದೆವು. ಪ್ರೀತಿಯೇ ಆ ಸಾಧನವನ್ನು ಒದಗಿಸಿಕೊಟ್ಟಿತು. ಆದರೂ, ಇಂಥ ಕೆಲವು ಪ್ರಶ್ನೆಗಳು ಉತ್ತರಿಸದೆ ಉಳಿದಿವೆ: ಯೇಸುವಿನ ವಿಮೋಚನ ಯಜ್ಞದ ಪ್ರಯೋಜನಗಳು ದೊರೆಯುವದು ಹೇಗೆ? ನೀವದರಿಂದ ಹೇಗೆ ಪ್ರಯೋಜನ ಪಡೆಯಬಹುದು ಮತ್ತು ಎಷ್ಟು ಬೇಗ? ಮುಂದಿನ ಸಂಚಿಕೆಯು, ದೇವರ ಮಾರ್ಗಗಳೆಲ್ಲವೂ ನ್ಯಾಯ ಎಂಬ ನಿಮ್ಮ ಭರವಸವನ್ನು ನಿಶ್ಚಯವಾಗಿ ಹೆಚ್ಚಿಸುವ ಉತ್ತರಗಳನ್ನು ಒದಗಿಸಲಿದೆ. (w89 3/1)
ನೀವು ಹೇಗೆ ಉತ್ತರಿಸುವಿರಿ?
◻ ನ್ಯಾಯದ ಮೇಲೆ ಯಾವ ಮಹತ್ವವನ್ನು ದೇವರು ಇಟ್ಟಿದ್ದಾನೆ?
◻ ಮಾನವ ಕುಲದಲ್ಲಿ ಇಷ್ಟೊಂದು ಅನ್ಯಾಯವು ಇರುವುದೇಕೆ?
◻ ಮರಣದಿಂದ ಪಾರಾಗಲು ದೇವರು ಮನುಷ್ಯನಿಗೆ ಯಾವ ಒದಗಿಸುವಿಕೆ ಮಾಡಿದನು?
◻ ಎಷ್ಟರ ಮಟ್ಟಿಗೆ ಕಾವಲಿನಬುರುಜು ವಿಮೋಚನೆಯನ್ನು ಎತ್ತಿಹಿಡಿದದೆ?
[ಪುಟ 25 ರಲ್ಲಿರುವ ಚಿತ್ರ]
ಮೋವಾಬಿನ ಬಯಲಲ್ಲಿ ಮೋಶೆಯು ತನ್ನ ಪದ್ಯದ ಮಾತುಗಳನ್ನು ನುಡಿಯುವದು
[ಪುಟ 28 ರಲ್ಲಿರುವ ಚಿತ್ರ]
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು